Thursday, March 7, 2013

ವರದಹಳ್ಳಿ ಅಂದರೆ..

ನಮ್ಮೂರ ಅಂದರೆ ಸಾಗರದ ಸುತ್ತಮುತ್ತಲಿರೋ ಗೆಳೆಯರಿಗೆಲ್ಲಾ ವರದಳ್ಳಿ/ವದ್ದಳ್ಳಿ/ವರದಹಳ್ಳಿ ಅಂದರೆ ಗೊತ್ತೇ ಇರುತ್ತೆ. ಸಾಗರಕ್ಕೆ ಬಂದವರೆಲ್ಲಾ ಇಲ್ಲಿಗೆ ಬಂದೇ ಬಂದಿರುತ್ತಾರೆ. ಇಲ್ಲಿಗೇ ಅಂತಲೇ ಮಹಾರಾಷ್ಟ್ರದ ಭಕ್ತರೂ ಬರುತ್ತಾರೆ. ಅಂತಹದರಲ್ಲಿ ಇಂತಹ ಕ್ಷೇತ್ರದ ಬಗ್ಗೆ ಬರೆಯುವುದಕ್ಕೆ ಏನು ಉಳಿದಿದೆ ಅಂತ ಸುಮಾರು ಬಾರಿ ಅನಿಸಿತ್ತು. ಆದರೆ ಇಲ್ಲಿಗೆ ಬರದ ಹಲವು ಗೆಳೆಯರು ಇದರ ಬಗ್ಗೆ ಕೇಳುತ್ತಿದ್ದರು.ಅವರಿಗಾಗಿ..

ವರದಹಳ್ಳಿಗೆ ಸಾಗರದಿಂದ ೭ ಕಿ.ಮೀ ದೂರ. ಈಗ ತುಂಬಾ ಬಸ್ಸುಗಳಾಗಿವೆ. ಗಂಟೆಗೊಂದರಂತಾದರೂ ಬಸ್ಸುಗಳು ಸಿಕ್ಕೇ ಸಿಗುತ್ತವೆ. ಸ್ವಂತ ವಾಹನ, ಆಟೋ,ಮಾರುತಿಗಳಲ್ಲೂ ಹೋಗಬಹುದು. ವರದಹಳ್ಳಿಯಲ್ಲಿ ಮುಖ್ಯವಾಗಿ ಇರುವುದು ದೇವಿ ದೇವಸ್ಥಾನ ಮತ್ತು ಶ್ರೀ ಶ್ರೀಧರ ಆಶ್ರಮ.ಸಾಗರದಿಂದ ಹೋಗುವಾಗ ಮೊದಲು ಸಿಗುವುದು ಶ್ರೀಧರ ಆಶ್ರಮ. ಹಾಗಾಗಿ ಅಲ್ಲಿಗೇ ಹೋಗೋಣ.

ನಾನು ಶ್ರೀಧರ ಸ್ವಾಮಿಗಳನ್ನು ನೋಡಿಲ್ಲದಿದ್ದರೂ ನನ್ನ ತಂದೆಯವರಿಂದ, ಅನೇಕ ಹಿರಿಯರಿಂದ ಅವರ ಬಗ್ಗೆ ಕೇಳಿದ್ದೇನೆ. ೬೦ ರ ದಶಕದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ಶ್ರೀಧರರು ವರದಳ್ಳಿಯಲ್ಲಿ ತಮ್ಮ ಆಶ್ರಮವನ್ನು ಸ್ಥಾಪಿಸಿ ತಮ್ಮ ತಪಸ್ಸನ್ನು ಆಚರಿಸುತ್ತಿದ್ದರಂತೆ. ಸರಳ ಜೀವಿಗಳಾದ ಅವರ ಜೀವನಕ್ರಮದಿಂದ, ಉಪದೇಶಗಳಿಂದ ಈ ಭಾಗದ ಜನ ತುಂಬಾ ಪ್ರಭಾವಿತರಾಗಿದ್ದರಂತೆ. ಎಪ್ಪತ್ತರ ದಶಕದಲ್ಲಿ ಅವರ ದೇಹಾಂತ್ಯವಾದ ನಂತರ ಹಂತ ಹಂತವಾಗಿ ಈಗಿರೋ ಆಶ್ರಮ ನಿರ್ಮಾಣವಾಗಿದೆ. ಅಲ್ಲಿನ ಪರಿಸರ ಹೇಗಿದೆ ಅಂತ ಹೇಳೋದಕ್ಕಿಂತ ಕೆಲ ಚಿತ್ರಗಳ ಮೂಲಕವೇ ನಿಮ್ಮನ್ನು ಅಲ್ಲಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ.
Gomukha teertha
ವರದಹಳ್ಳಿಗೆ ಬಂದಾಗ ಮೊದಲು ಸಿಗೋದೇ ಒಂದು ಕೊಳ. ಅದರ ಪಕ್ಕದಲ್ಲಿ ಇರೋ ಗೋಮುಖ ತೀರ್ಥ. ವರ್ಷವಿಡೀ ಬೀಳೋತ್ತಿರೋ ಈ ತೀರ್ಥದಲ್ಲಿ ಅನೇಕ ಔಷಧೀಯ ಗುಣಗಳಿವೆ ಎಂದು ಭಕ್ತರು ನಂಬುತ್ತಾರೆ. ಆಧ್ಯಾತ್ಮದ, ನಂಬಿಕೆಯ ಪ್ರಶ್ನೆ ಏನೇ ಇದ್ದರೂ ಮಲೆನಾಡ ವನಮೂಲಿಕೆಗಳ ನಡುವೆ ಹರಿದು ಬರೋ ಈ ತೀರ್ಥ ಬಿಸಿಲಲ್ಲಿ ದಣಿದು ಬಂದವರ ಕೈ ಕಾಲು/ತಲೆಯ ಮೇಲೆ ಬಿದ್ದಾಗ ಬಂದ ಸುಸ್ತು ಮರೆಸಿ ಮತ್ತೆ ನವೋಲ್ಲಾಸಮೂಡಿಸುವುದಂತೂ  ನಿಜ.

ಹಾಗೇ ತೀರ್ಥದ ಪಕ್ಕದಲ್ಲಿನ ಮೆಟ್ಟಿಲುಗಳಲ್ಲಿ ಮೇಲಕ್ಕೆ ಹತ್ತಿ ಬಂದರೆ ಶ್ರೀಧರ ಸ್ವಾಮಿಗಳು ಕೂತು ತಪಸ್ಸು ಮಾಡುತ್ತಿದ್ದರು ಎನ್ನೋ ಸ್ಥಳ ಸಿಗುತ್ತದೆ.  
Place where shridhara swamiji used to meditate

ಅಲ್ಲಿ ಶ್ರೀಧರ ತೀರ್ಥ ಬೆಟ್ಟದ ತಪ್ಪಲಿಂದ, ಬಂಡೆಯ ಸಂದಿಯಿಂದ ಬಂದು ಬೀಳುವುದು ಕಾಣುತ್ತದೆ.
ಹಾಗೇ ಬಲಕ್ಕೆ ತಿರುಗಿದರೆ ಗುರುಕುಲ ಕಾಣಿಸುತ್ತದೆ. ಗುರುಕುಲದ ಎದುರಿಗಿರೋ ಮೆಟ್ಟಿಲುಗಳಲ್ಲಿ ಮೇಲಕ್ಕೆ ಸಾಗೋಣಹಾಗೆಯೇ ಸುಮಾರು ನೂರು ಮೆಟ್ಟಿಲು ಹತ್ತಿದಾಗ ಬಲಗಡೆ ಸಾಮವೇದ ಗುರುಕುಲ , ಎದುರಿಗೆ ಶ್ರೀಧರರ ಸಮಾಧಿಯಿರೋ ಗುಡಿಯೂ ಸಿಗುತ್ತದೆ. ಅಲ್ಲಿ ಎಷ್ಟು ಹೊತ್ತಾದರೂ ಕೂತು ಮೌನವಾಗಿ ಧ್ಯಾನ ಮಾಡಬಹುದು. ಮಧ್ಯಾಹ್ನ ೧೨:೩೦ ರ ಸುಮಾರಿಗೆ ಅಲ್ಲಿ ಮಹಾಮಂಗಳಾರತಿ ಆಗುತ್ತದೆ. ಆ ಸಮಯದಲ್ಲೇ ಅಲ್ಲಿಗೆ ತಲುಪಿದರೆ ದರ್ಶನ ಭಾಗ್ಯದ ಜೊತೆ, ತೀರ್ಥ ಪ್ರಸಾದವನ್ನೂ ಪಡೆಯಬಹುದು. ಮಧ್ಯಾಹ್ನ ಊಟದ ಸಮಯ ಮತ್ತು ರಾತ್ರೆ ಸಮಯ ಬಿಟ್ಟರೆ ಮತ್ತೆ ಮಧ್ಯಾಹ್ನ ಮೂರು ಘಂಟೆಯಿಂದ ಗರ್ಭಗೃಹದ ಬಾಗಿಲು ತೆಗೆದೇ ಇರುವುದರಿಂದ ಬೆಳಿಗ್ಗೆ ಬಂದವರು ಮತ್ತು ಸಂಜೆ ಹೊತ್ತಿಗೆ ತಲುಪಿದವರೂ ದರ್ಶನ ಪಡೆಯಬಹುದು.  

ಹಾಗೇ ದೇಗುಲದ ಪ್ರದಕ್ಷಿಣೆ ಹಾಕುವಾಗ ಶ್ರೀಧರರ ಸಮಾಧಿ ಕಾಣುತ್ತದೆ.ನೋಡಲನುವಾಗುವಂತೆ ಅದಕ್ಕೊಂದು ಕಿಟಕಿಯಿಟ್ಟಿದ್ದಾರೆ. ಅಲ್ಲಿಗೆ ಬಂದ ಭಕ್ತರು ಆ ಕಿಟಕಿಯಲ್ಲಿ ನಾಣ್ಯಗಳನ್ನು ಹಾಕುವುದು ಒಂದು ಪದ್ದತಿ. ಸಣ್ಣವನಿದ್ದಾಗಿನಿಂದಲೂ ವರದಳ್ಳಿಗೆ ಆಗಾಗ ಹೋಗೋ ನನಗೆ ಆ ದೃಶ್ಯ ಬಾಲ್ಯದ ನೆನಪುಗಳನ್ನು ಮರುಕಳಿಸುತ್ತದೆ. ಅಪ್ಪನಿಂದ ರೂಪಾಯಿ ನಾಣ್ಯವನ್ನು ಪಡೆದು ಅದನ್ನು ಆ ಕಿಟಕಿಯಲ್ಲಿ ಹಾಕುತ್ತಿದ್ದೆವು. ಆ ಕಿಟಕಿಂದ  ಸ್ವಾಮಿಯ ಪಾದದವರೆಗೂ ಇಳಿಜಾರಿನಲ್ಲಿ ಆ ನಾಣ್ಯ ಹೋಗಿ ಬೀಳುವುದನ್ನು ನೋಡುವುದೇ ಒಂದು ಖುಷಿಯಾಗಿತ್ತು. ಅಲ್ಲೇ ಪಕ್ಕದಲ್ಲಿ ಶ್ರೀಧರರ ಜೀವನವನ್ನು ಬಿಂಬಿಸುವ ಅಪರೂಪದ ಕಪ್ಪು ಬಿಳುಪು ಛಾಯಾಚಿತ್ರಗಳ ಸಂಗ್ರಹವಿದೆ.

Samaveda gurukula varadalli


ಅಲ್ಲೊಮ್ಮೆ ನಮಸ್ಕಾರ ಹಾಕಿದ ನಂತರ ಹಾಗೇ ಹೊರಬಂದಾಗ ಕಾಣುವುದು ಸಾಮವೇದ ಗುರುಕುಲ. ನವರಾತ್ರಿಯ ಸಮಯದಲ್ಲಿ ಬಂದರೆ ಇಲ್ಲಿ ಶಾರದಾದೇವಿಯ ಮೂರ್ತಿಯನ್ನಿಟ್ಟು ಅಲಂಕರಿಸಿರುತ್ತಾರೆ. (ಗಣಪತಿ ಹಬ್ಬದಲ್ಲಿ ಗಣಪತಿಯನ್ನು ಇಟ್ಟಂತೆ). 


ಅಲ್ಲೇ ಮರವೊಂದರಲ್ಲಿ ಧರ್ಮ ಧ್ವಜಕ್ಕೆ ದಾರಿ ಎಂಬ ಬೋರ್ಡು ಕಾಣುತ್ತದೆ. ವರದಳ್ಳಿಗೆ ಬಂದವರು, ಕೈ ಕಾಲು ಗಟ್ಟಿ ಇದ್ದವರು ಸಾಮಾನ್ಯವಾಗಿ ಧರ್ಮಧ್ವಜ ನೋಡೇ  ಇರುತ್ತಾರೆ. ಹಾಗೇ ಅತ್ತ ಸಾಗೋಣ.
ಧರ್ಮಧ್ವಜ್ಜಕ್ಕೆ ಸಾಗೋ ದಾರಿಯಿಂದ ಕೆಳಗಿನ ಗುಡಿಯ , ಸುತ್ತಣ ಪರಿಸರದ ವಿಹಂಗಮ ನೋಟವನ್ನು ಸವಿಯಬಹುದು. 

 
Varadalli during one of the celebrations

ಅಂದಹಾಗೆ ಆಶ್ರಮಕ್ಕೆ ಬರೋ ಮೆಟ್ಟಿಲುಗಳ ಬಳಿಯೇ ಚಪ್ಪಲಿಗಳನ್ನು ಬಿಟ್ಟು ಬಂದಿರುತ್ತೇವೆ. ಹಾಗಾಗಿ ಪೇಟೆಯವರಿಗೆ ಧರ್ಮಧ್ವಜದವರೆಗೆ ನಡೆಯುವುದು ಹರಸಾಹಸವೇ ಅನಿಸಬಹುದು ! ಬರಿಗಾಲಲ್ಲಿ ನಡೆಯೋದು ಅಪರೂಪವಾದಾಗ ಸಣ್ಣ ಸಣ್ಣ ಕಲ್ಲುಗಳೂ ಅಕ್ಯುಪಂಕ್ಚರ್ ಚಿಕಿತ್ಸೆಯಂತೆಯೇ ಅನಿಸಬಹುದು! ಹಾಗೆಯೇ ಸುಮಾರು ಒಂದೂವರೆ ಕಿ.ಮೀ ನಡೆಯುತ್ತಿದ್ದಂತೆಯೇ ಅಗೋ ನೋಡಿ ಧರ್ಮಧ್ವಜ ಬಂದೇ ಬಿಟ್ಟಿತು

 ಅಲ್ಲೇ ಪಕ್ಕದಲ್ಲಿ ಶ್ರೀಧರರು ತಪಸ್ಸಿಗೆ ಕೂರುತ್ತಿದ್ದ ಜಾಗ, ಅವರ ಮೂಲ ಆಶ್ರಮಗಳನ್ನೂ ಕಾಣಬಹುದು.
ಇಲ್ಲಿಂದ ಶರಾವತಿ ಹಿನ್ನೀರಿನ, ಮುಳುಗಡೆಯ ದೃಶ್ಯಗಳನ್ನೂ ನೋಡಬಹುದು. ನೀವು "ಅಮೃತ ಘಳಿಗೆ" ಚಿತ್ರದ ಹಾಡುಗಳನ್ನು ನೋಡಿದ್ದರೆ ಈ ಧರ್ಮಧ್ವಜ ನೆನಪಾಗುತ್ತದೆ. ಆ ಚಿತ್ರವನ್ನು ಇಲ್ಲೇ ವರದಳ್ಳಿ ಸುತ್ತಮುತ್ತ ತೆಗೆಯಲಾಗಿದೆ. ಆ ಚಿತ್ರದ ಒಂದು ಪಾತ್ರವಾದ ಆದಿತ್ಯ ಅವರ ಬ್ಲಾಗಿನಲ್ಲಿ ಈಗಾಗಲೇ ತಮ್ಮ ಆ ಮಧುರ ನೆನಪುಗಳ ಬಗ್ಗೆ ಬರೆದಿದ್ದಾರೆ.
Dharma dhwaja


Shridhara Moola ashrama
ಅಲ್ಲಿಂದ ಹಾಗೇ ವರದಳ್ಳಿಯ ಮತ್ತೊಂದು ಆಕರ್ಷಣೆ ದೇವಿ ದೇವಸ್ಥಾನಕ್ಕೆ ಇಳಿದು ಹೋಗಬಹುದು.ಆದರೆ ಈಗ ಅಲ್ಲಲ್ಲಿ ಬೇಲಿ ಹಾಕಿದ್ದಾರಂತೆ. ಹಾಗಾಗಿ ಸ್ಥಳೀಯರ್ಯಾರೂ ಜೊತೆಗಿರದಿದ್ದರೆ ವಾಪಾಸು ಕೆಳಗಿಳಿದು ಬಂದು ರಸ್ತೆಯಲ್ಲಿ ಹೋಗುವುದೇ ಕ್ಷೇಮ.

ದೇವಿಯು ಮೂಕಾಸುರನನ್ನು ಒದ್ದಾಗ ಅವನು ಇಲ್ಲಿ ಬಂದು ಬಿದ್ದನಂತೆ. ಹಾಗಾಗಿ ದೇವಿ ಒದೆದ ಹಳ್ಳಿ "ವದ್ದಳ್ಳಿ" ಅಂತ ನಾಮಕರಣವಾಯಿತೆಂದು ಜನರು ಹೇಳುತ್ತಾರೆ. ಇಲ್ಲಿನ ದರ್ಶನದ ಸಮಯ ಮೂರು ಘಂಟೆ. ಹಾಗಾಗಿ ಇಲ್ಲಿಗೆ ಬರುವವರೆಲ್ಲಾ ಮೊದಲು ಶ್ರೀಧರ ಆಶ್ರಮದ ದರ್ಶನ ಮುಗಿಸಿ ಇಲ್ಲಿಗೆ ಬರುತ್ತಾರೆ. ಇಲ್ಲೇ ಪಕ್ಕದಲ್ಲಿ ರಾಮನ, ಹನುಮನ ಸಣ್ಣ ಗುಡಿಗಳೂ ಇವೆ. ಪಕ್ಕದಲ್ಲಿ ಶ್ರೀಧರ ಸ್ವಾಮಿಗಳ ಬೃಂದಾವನವನ್ನೂ ನೋಡಬಹುದು. ಇದನ್ನು ಗಮನಿಸಿ ನೋಡದಿದ್ದರೆ ದಾರಿಯಲ್ಲಿ ಮರೆತೇ ಹೋಗುತ್ತದೆ ! ಇಲ್ಲಿ ಸಮಾಧಿಗಳು, ಮತ್ತು ಪ್ರತಿಯೊಂದರ ಬಳಿಯೂ ಶಿವಲಿಂಗಗಳಿವೆ.


 
Shridhara swami brundavana

ಅಂದ ಹಾಗೇ ಇಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆಯಿರುತ್ತದೆ. ನವರಾತ್ರಿ, ದತ್ತ ಜಯಂತಿಗಳು ತುಂಬಾ ವಿಜೃಂಭಣೆಯಿಂದ ಜರುಗುತ್ತವೆ. ನವರಾತ್ರಿ ಸಮಯದ ಶ್ರೀಧರ ಪಾದುಕೆಯ ಪಲ್ಲಕ್ಕಿ, ದತ್ತ ಜಯಂತಿ ಆಚರಣೆಯ ವೇದಿಕೆ ಚಿತ್ರಗಳನ್ನು ಕೆಳಗೆ ಹಾಕಿದ್ದೇನೆ


Sri Shridhara Paduka pallakki

 ಎಷ್ಟೆಲ್ಲಾ ಬರೆದರೂ ಕೆಲವಾದರೂ ಮರೆತೇ , ಬಿಟ್ಟೇ ಹೋಗುತ್ತವೆ. ವಿದ್ಯೆಯನ್ನೇ ಇತ್ತ ಗುರುವಿನ ಬಗ್ಗೆ ಸಮಗ್ರವಾಗಿ ಕೆಲ ಪದಗಳಲ್ಲಿ ಬರೆಯುವುದು, ಚಿತ್ರಗಳಲ್ಲಿ ಸೆರೆ ಹಿಡಿಯುವುದೂ ಸಾಧ್ಯವಿಲ್ಲ. ಅವುಗಳನ್ನೆಲ್ಲಾ ನೀವು ಮುಂದಿನ ಬಾರಿ ಹೋದಾಗ ಸ್ವತಃ ಆನಂದಿಸಿ..

ಮತ್ತೊಮ್ಮೆ ಗುರುವಿನ ಚರಣಗಳಲ್ಲಿ ನಮಸ್ಕರಿಸುತ್ತಾ ವಿರಮಿಸುತ್ತೇನೆ. 


6 comments:

 1. :-)

  ಚೆನ್ನಾಗಿ ಬರದ್ದೆ

  ReplyDelete
  Replies
  1. ಧನ್ಯವಾದಗಳು ಹರೀಶಣ್ಣ :-)

   Delete
 2. ಹಿಂದುಸ್ತಾನವು ಎಂದೂ ಮರೆಯದ ಸುಂದರವಾದ ಸ್ಥಳ ಇದು. ಶಿವಮೊಗ್ಗೆಗೆ ಬಂದಾಗಲೆಲ್ಲ ತಪ್ಪದೆ ಈ ಸುಂದರ ತಾಣವನ್ನು ನೋಡಿ ಬರುತ್ತೇನೆ. ಗೋಮುಖ ತೀರ್ಥ, ೨೨೫ ಮೆಟ್ಟಿಲುಗಳು, ಶ್ರೀಧರ ತೀರ್ಥರ ಸಮಾಧಿ, ಧ್ಯಾನಸ್ಥಳ, ಧರ್ಮದ್ವಾಜದ ದಾರಿ ಎಲ್ಲವನ್ನು ಸೊಗಸಾಗಿ ವಿವರಿಸಿದ್ದೀರ. ಹೃದಯಕ್ಕೆ ತಂಪನ್ನು ಕೊಡುವ ಸ್ಥಳ ಇದು. ಸುಂದರ ತಾಣವನ್ನು ಇಷ್ಟ ಪಡುವ ಎಲ್ಲರೂ ನೋಡಲೇಬೇಕು ಎನ್ನುವಷ್ಟು ಸುಂದರವಾಗಿ ಬರೆದ ನಿಮ್ಮ ಲೇಖನ ಮನಸೆಳೆಯುತ್ತದೆ

  ReplyDelete
  Replies

  1. ಹೌದು ಶ್ರೀಕಾಂತ್ ಜೀ.. ಶಿವಮೊಗ್ಗೆಗೆ ಬಂದವರೆಲ್ಲಾ ಒಮ್ಮೆ ಬರಲೇಬೇಕಾದ ಸ್ಥಳ ಇದು. ಮೆಚ್ಚುಗೆಗೆ ಮತ್ತೊಮ್ಮೆ ವಂದನೆಗಳು :-)

   Delete
 3. ಬಹಳ ಹಿಂದೆ ಒಮ್ಮೆ ವರದಳ್ಳಿಗೆ ಹೋಗಿದ್ದೆ. ಮತ್ತೊಮ್ಮೆ ಹೋಗಬೇಕು ಅನ್ಕತ್ತಾ ಇದ್ದೀನಿ. ಇನ್ನೂ ಆಗ್ತಾ ಇಲ್ಲ. ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು.

  ReplyDelete
  Replies
  1. ಶುಭಸ್ಯ ಶೀಘ್ರಂ ವಿರಾಹೆ ಅವ್ರೆ :-) ಹೋಗ್ಬನ್ನಿ :-)
   ಮೆಚ್ಚುಗೆಗೆ ಮತ್ತೊಮ್ಮೆ ಧನ್ಯವಾದಗಳು :-)

   Delete