Friday, March 8, 2013

ಕನಸುಗಳ ಲೋಕದಲ್ಲಿ-೧

ಕನಸುಗಳ ಲೋಕದಲ್ಲಿ-೧

ಬಣ್ಣ ಬಣ್ಣದ ಬಟ್ಟೆಗಳನ್ನ ನೇತುಹಾಕಿರೋ ನೇಲೆ ಅಥವಾ ಹಗ್ಗದ ತುದಿಯೊಂದು ಸುರುಳಿ ಸುತ್ತಿರೋ ಓಣಿಯೊಂದರೆಡೆ ನುಗ್ಗುತ್ತಿದೆ. ನೂರಾರು ಜನ ಜನ ಚಲಿಸುತ್ತಿರೋ ಆ ಹಗ್ಗದ ದಿಕ್ಕಿನತ್ತಲೇ ಓಡುತ್ತಿದ್ದಾರೆ.ಎಷ್ಟಾಯಿತೋ ಅಷ್ಟೆಂದು ನೇಲೆಗಳಿಂದ ಬಾಚಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರು ೩ ಜೊತೆ, ೫ ಜೊತೆ ಹೀಗೆಲ್ಲಾ ಬಾಚಿಕೊಂಡು ಕೈಯಲ್ಲಿರೋ ಬಟ್ಟೆಗಳ ವಜೆ ಓಡಲು ಬಿಡದಿದ್ದದೂ ಮುಂದೆ ಸಾಗುತ್ತಿರೋ ಬಟ್ಟೆಗಳನ್ನ ಹಿಡಿಯಲೆಂದು ಎದ್ದು ಬಿದ್ದು ಓಡುತ್ತಿದ್ದಾರೆ.ಓಡುತ್ತಿರೋ  ಆ ಜನರ ವಿರುದ್ದ ದಿಕ್ಕಿನಿಂದ, ನೂರಾರು ಸುಂದರ ಪ್ಯಾಂಟು, ಶರ್ಟುಗಳುಳ್ಳ ಬಟ್ಟೆಯ ಸಾಲಿನ ಮಧ್ಯೆ ಜಾಗ ಮಾಡಿಕೊಂಡು ಒಬ್ಬ ಹೊರಬರುತ್ತಿದ್ದಾನೆ. ಪಕ್ಕದಲ್ಲೇ ಬಟ್ಟೆಯ ಸಾಲು, ಅದಕ್ಕೆಂದೇ ಮುಗಿಬೀಳುತ್ತಿರೋ ಜನರ ಮಧ್ಯೆ ನಗುಮುಖದ ಆತ ಒಂದು ಕೈಯಲ್ಲಿ ಅಡ್ಡಸಾಗೋ ಬಟ್ಟೆಗಳನ್ನು ಸರಿಸುತ್ತಾ ಬಲಗೈ ತೋರುಬೆರಳನ್ನ ಎಡಕ್ಕೂ ಬಲಕ್ಕೂ ಬೇಡವೆಂಬಂತೆ ಆಡಿಸುತ್ತಾ ಓಣಿಯ ಹೊರಗೆ ಬರುತ್ತಿದ್ದಾನೆ.

ಹೀಗೇ ಒಳನುಗ್ಗುತ್ತಿದ್ದ ಬಟ್ಟೆಗಳ ಸಾಲಿನ ಕೊನೆಯ ಪ್ಯಾಂಟು ಓಣಿಯಲ್ಲಿ ಮರೆಯಾಗೋ ಸಮಯದಲ್ಲಿ ದಾರಿಯಲ್ಲಿ ಸಾಗುತ್ತಿದ್ದವನೊಬ್ಬ  ಬಟ್ಟೆಗಳ ಸಾಲಿನತ್ತ ಆಸೆ ಪಟ್ಟು ಅತ್ತ ನುಗ್ಗುತ್ತಾನೆ. ಸ್ವಲ್ಪ ಓಣಿಯೊಳಗೆ ನುಗ್ಗುವಷ್ಟರಲ್ಲಿ ಹೊರಬರುತ್ತಿದ್ದ ವ್ಯಕ್ತಿ ಸಿಗುತ್ತಾನೆ. ನಿರಾಕರಿಸುವಂತಿದ್ದ ಅವನ ಕೈ ತೋರುಬೆರಳ ಎಚ್ಚರಿಕೆ ನಿರಾಕರಿಸಿ ಈತ ಮುಂದೆ ಓಡುತ್ತಾನೆ."ನ್ಯಾಯ ಎಲ್ಲಿದೆ.. " ಅನ್ನೋ ಹಾಡು ಗುನುಗುತ್ತಾ ಆತ ಮರೆಯಾಗುತ್ತಾನೆ. ಸಿಕ್ಕೊಂದು ಪ್ಯಾಂಟೊಂದನ್ನು ಬಾಚಿ ಮುಂದೆ ಓಡುತ್ತಿದ್ದ ಈತನಿಗೆ ಯಾಕೋ ,ಏನೋ ಸರಿಯಿಲವೆಂಬ ಯೋಚನೆ ಮನಕ್ಕೆ ನುಗ್ಗಿತು.ಎಲ್ಲೋ ಆರನೆಯ ಇಂದ್ರಿಯ ಅಪಾಯದ ಘಂಟೆ ಬಾರಿಸಿದಂತೆ. ಮೊದಲೇ ಮುಂದೆ ಸಾಗಿದವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದರೆ, ಅವನ ಕೈ ಬೆರಳನ್ನು ಗಮನಿಸಿದ್ದರೆ ಮುಂದೆ ಜರುಗೋ ಘಟನೆಗಳು ಜರುಗುತ್ತಿರಲಿಲ್ಲ. ಈ ಕತೆ ಇರುತ್ತಿರಲಿಲ್ಲ.

ಓಟಕ್ಕೆ ಬ್ರೇಕ್ ಹಾಕಿದ ಬಟ್ಟೆಗಳ ವಿರುದ್ದ ದಿಕ್ಕಿನತ್ತ ಓಡತೊಡಗಿದ. ಬಟ್ಟೆಗಳತ್ತ ಓಡುತ್ತಿದ್ದ ಜನರು, ಬಟ್ಟೆಗಳ ಸಾಲಿನ ಕೊನೆಯ ಬಟ್ಟೆಯೂ ಆ ಓಣಿಯೊಳಗೆ ಮರೆಯಾಯಿತು.ಓಣಿಯಿಂದ ಹೊರಬರುತ್ತಿದ್ದಂತೆಯೇ ಸಮವಸ್ತ್ರ ಧರಿಸಿದ ಸೇವಕಿಯರು ಓಣಿಯತ್ತ ಸಾಗುತ್ತಿದ್ದಂತೆ ಕಂಡರು. ಹೊಸ ಪ್ಯಾಂಟಿನ ಜೀಬಿನಲ್ಲಿದ್ದ ವಜೆಯೆನಿಸೋ ದಾರದ ಉಂಡೆಯನ್ನ, ಅಲ್ಲೇ ನೆಲದ ಮೇಲೆ ಬಿದ್ದಿದ್ದ ಮತ್ತೊಂದು ಶರ್ಟನ್ನ ಅವರ ಕೈಗೆ ಇತ್ತು ಈತ ಹೊರಕ್ಕೆ ಓಡಿದ. ಅಲ್ಲಿ ನೋಡಿದರೆ ದಾರಿಯೊಂದು ಎಡ-ಬಲಕ್ಕೆ ಹೋಗುತ್ತಿತ್ತು. ಎತ್ತ ಸಾಗಬೇಕೆಂದು ತಿಳಿಯದೇ ಎರಡೂ ದಿಕ್ಕಿನತ್ತ ನೋಡಿದ. ಎಡಗಡೆ ನೋಡಿದರೆ ಅತ್ತ ಮುಂದೆ ಸ್ವಲ್ಪ ಜನ ಸಾಗುತ್ತಿದ್ದಂತೆ ಕಂಡಿತು. ಓಣಿಯಲ್ಲಿ ಸಿಕ್ಕ ಬಟ್ಟೆ ಹಾಕಿಕೊಂಡ ಜನರಿರಬೇಕು. ಅತ್ತಲೇ ಓಡತೊಡಗಿದ.

ದಾರಿಯಲ್ಲಿ ಒಬ್ಬ ಟೊಣಪ ಸಿಕ್ಕಿದ. ನೀಲಿ ಪ್ಯಾಂಟು, ಸೂಟು ತೊಟ್ಟಿದ್ದ ಆತನ ಕೈಯಲೇನೂ ಹೊಸ ಬಟ್ಟೆ ಇರಲಿಲ್ಲ. ಅವನನ್ನು ಹಿಂದೆ ಹಾಕಿ ಹಾಗೇ ಮುಂದೆ ಸಾಗಿದಾಗ ಮತ್ತೆ ನಾಲ್ವರು ಸಿಕ್ಕಿದರು. ಅವರದ್ದೂ ಹೊಸ ಹೊಸ ಬಟ್ಟೆಗಳು. ಯಾರ ಕೈಯಲ್ಲೂ ಬಟ್ಟೆಗಳಿರಲಿಲ್ಲ. ಬಹುಷಃ ಇವರೆಲ್ಲಾ ಆ ಓಣಿಯ ಬಟ್ಟೆಗಳನ್ನು ಹಾಕಿ ತಮ್ಮ ಹಳೆ ಬಟ್ಟೆಗಳನ್ನು ಎಲ್ಲೋ ಬಿಟ್ಟಿರಬೇಕು. ಈತ ಅವರನ್ನು ನೋಡಿದಾಗ ನಾಲ್ವರ ಮುಖದಲ್ಲೂ ಮಂದಹಾಸ. ಕೈಯಲ್ಲಿ ಪ್ಯಾಂಟೊಂದನ್ನು ಹಿಡಿದು ಕಕ್ಕಾಬಿಕ್ಕಿಯಾಗಿದ್ದ ಈತ ಅವರಿಗೆ ಕೇಳಿದ ಪ್ರಶ್ನೆಯೊಂದೇ. "ಇಲ್ಲಿಂದ ಹೊರಹೋಗೋದು ಹೇಗೆ ? " ಎಲ್ಲಾ ಮುಂದಕ್ಕೆ ಕೈ ಮಾಡಿದರು. ಹಾಗೇ ಮುಂದಕ್ಕೆ ಓಡಿದ. ಸ್ವಲ್ಪ ತಾಳ್ಮೆಯಿಂದ ಅವರ ಕೈ ನೋಡಿದ್ದರೆ ಅವರು ಮುಂದೆ ತೋರಿಸಿ ಬಲಕ್ಕೆ ತಿರುಗುವಂತೆ ಹೇಳಿದ್ದರೋ ಎಡಕ್ಕೆ ತಿರುಗುವಂತೆ ಹೇಳುತ್ತಿದ್ದರೋ ಗೊತ್ತಾಗುತ್ತಿತ್ತು.

ಹಾಗೇ ಓಡಿದ ಆತ ದಾರಿಯ ಕೊನೆ ತಲುಪಿದ. ಅಲ್ಲಿ ದಾರಿಗೆ ಅಡ್ಡ ಗೋಡೆ. ಎಡ ಬಲಕ್ಕೆ ಒಂದೊಂದು ಬಾಗಿಲು. ಮುಚ್ಚಿದ ಎರಡರಲ್ಲಿ ಯಾವುದರಲ್ಲಿ ಸಾಗಬೇಕೆಂದು ತಿಳಿಯಲಿಲ್ಲ. ಎಡಗಡೆ ಬಾಗಿಲನ್ನು ತೆರೆದು ಒಬ್ಬ ಅತ್ತಿತ್ತ ತಡಕುತ್ತಾ ಬಲಗಡೆ ಬಾಗಿಲತ್ತ ಸಾಗುತ್ತಿದ್ದ. ಆತ ತಡಕುವುದನ್ನು ನೋಡಿದರೆ ಕುರುಡನೇನೋ ಅನಿಸುತ್ತಿತ್ತು. ಇವನ ಹಿಂದಿನಿಂದ ಓಡಿಬಂದ ಒಬ್ಬ ಆ ಕುರುಡನ ಹಿಂದೆ ಬಲಭಾಗದ ಬಾಗಿಲಲ್ಲಿ ಒಳನುಗ್ಗಿದ. ಒಳಗೆ ಇಣುಕಿದ ಈತನಿಗೆ ಕನ್ನಡಿಯೊಂದು ಕಂಡಿತು. ಆ ಕನ್ನಡಿಯತ್ತ ಮುಖ ಮಾಡಿದ್ದ ಕುರುಡ ! ಬಲಬಾಗಿಲು ನಿಧಾನವಾಗಿ ತಾನಾಗೇ ಮುಚ್ಚುತ್ತಲಿತ್ತು. ಅಷ್ಟರಲ್ಲಿ ಹೊರಹೋಗೋ ದಾರಿ ಎಡಬಾಗಿಲಿನಲ್ಲಿ ಎಂಬ ದನಿ ಕೇಳಿಸಿತು. ಎಡಬಾಗಿಲೂ ತೆರೆಯಿತು. ಹಾಗೆಯೇ ಎಡಬಾಗಿಲಿನಲ್ಲಿ ಸಾಗಿದ.

ಅದರಲ್ಲಿ ನೋಡಿದರೆ ಕೊಟ್ಟಿಗೆ. ಅತ್ತಿತ್ತ ಕಟ್ಟಿದ್ದ ದನಗಳು. ಅಷ್ಟೆಲ್ಲಾ ದನಗಳಿದ್ದರೂ ಅದನ್ನು ನೋಡಿಕೊಳ್ಳೋ ಸೇವಕರ್ಯಾರೂ ಕಾಣಲಿಲ್ಲ. ಕೊಟ್ಟಿಗೆಯ ಮಧ್ಯವೇ ಸಾಗಿದಾಗ ಎದುರೆರಡು ಬಾಗಿಲು ಕಂಡವು. ಇವನ ಎದುರಿಗೆ ಇದ್ದ ಬಾಗಿಲು ತೆರೆದಿತ್ತು.ಅದರ ಸ್ವಲ್ಪ ಪಕ್ಕ ಇದ್ದ ಬಾಗಿಲು ಮುಚ್ಚಿತ್ತು. ಅತ್ತಲೇ ಓಡಿದ. ಈತ ಬರುವುದಕ್ಕೂ ಆ ಬಾಗಿಲು ಹಾಕಿ ಮುಖಕ್ಕೆ ಹೊಡೆಯುವುದಕ್ಕೂ ಸರಿ ಆಯಿತು. ಇದರಲ್ಲಿ ಹೊರಗೆ ಹೋಗೋ ಬಾಗಿಲು ಯಾವುದಪ್ಪಾ ಅಂತ ಕೇಳಿದ. ಆಶ್ಚರ್ಯ ಎನ್ನುವಂತೆ ಈತನ ಎದುರಿಗಿದ್ದ ಬಾಗಿಲು ತೆರೆಯಿತು. ಅದರೊಳಗೇ ಸಾಗಿದ. ಹೊರಹೋದರೆ ಸಾಕೆನ್ನೋ ಗಡಿಬಿಡಿಯಲ್ಲಿದ್ದ ಈತ ಪಕ್ಕದಲ್ಲಿ ಅಷ್ಟರಲ್ಲಾಗಲೇ ಅರ್ಧ ತೆರೆದಿದ್ದ ಬಾಗಿಲು ಮುಚ್ಚುತ್ತಿರೋದನ್ನು ಗಮನಿಸಲಿಲ್ಲ.

ಆ ಬಾಗಿಲಿನಿಂದ ಹೊರಬಂದಾಗ ಒಂದು ಸ್ನಾನ ಗೃಹವನ್ನು ಹೊಕ್ಕ. ಅದರಲ್ಲಿ ಮುಲ್ತಾನಿ ಮಿಟ್ಟಿಯಂತೆ ಮೈಗೆಲ್ಲಾ ಮಣ್ಣು ಬಳಿದುಕೊಂಡು ಒಂದಷ್ಟು ಜನ ಮಲಗಿದ್ದರು. ಅದರಲ್ಲಿ ಒಬ್ಬನಿಗೆ ಮಣ್ಣಿನ ಲೇಪ ಬಳಿಯುತ್ತಿದ್ದ ಸೇವಕ ಕಂಡ. ಅವನಲ್ಲಿ ಕೇಳಿದ ಒಂದೇ ಪ್ರಶ್ನೆ " ಹೊರಗೆ ಹೋಗೋದು ಹೇಗೆ ? " ಈ ಪ್ರಶ್ನೆ ಕೇಳುತ್ತಿದ್ದಂತೆ ಎದುರಿಗಿದ್ದ ಹಂಡೆಯ ಪಕ್ಕದಲ್ಲಿದ್ದ ಬಾಗಿಲೊಂದು ತೆರೆಯಿತು. ಆದರೆ ಹಂಡೆ ನೆಲದ ಎತ್ತರದಲ್ಲಿರದಲ್ಲಿರಲಿಲ್ಲ. ಮೂರು ಮೆಟ್ಟಿಲು ಹತ್ತಿದರೆ ಸಿಗುವಂತ ಮತ್ತೊಂದು ಕೋಣೆಯಂತ ಜಾಗ. ಹಂಡೆಯ ಪಕ್ಕದಲ್ಲೇ ಹೊರಗಡೆ ಈಗ ತಾನೇ ತೆಗೆದಂತಿದ್ದ ಬಿಸಿ ಬೂದಿಯ ರಾಶಿ. ಈ ಬೂದಿಯ ಪಕ್ಕದಲ್ಲೇ ಸಾಗಬೇಕಲ್ವೇ ಹೊರಹೋಗಲು ಅಂತ ಈತ ಕೇಳಿದರೆ ಆತ ಅತ್ತಿತ್ತ ತಲೆಯಾಡಿಸುತ್ತಾ ಆ ಬಾಗಿಲಿನ ದಿಕ್ಕಿನತ್ತ ತೋರು ಬೆರಳನ್ನು ತೋರಿಸಿದ. ಈತ ಆ ಮೂರು ಮೆಟ್ಟಿಲು ಹತ್ತಿ ಆ ಬಾಗಿಲು ಮುಚ್ಚೋದರೊಳಗೆ ಒಳಸೇರಿದ. ಆ ಬಾಗಿಲು ಮುಚ್ಚುತ್ತಿದ್ದಂತೆಯೇ ಪಕ್ಕದಲ್ಲಿದ್ದ ಇನ್ನೊಂದು ಬಾಗಿಲು ತೆರೆಯಿತು.

ಆ ಬಾಗಿಲಿನಿಂದ ಹೊರ ಹೊಕ್ಕಾಗ ಸುತ್ತೆಲ್ಲಾ ಬಯಲು. ಹಾಗೇ ಮುಂದೆ ಸಾಗಿದಾಗ ಆ ಬಯಲಿಗೂ ಒಂದು ಬೇಲಿಯಿರೋದು ಕಂಡಿತು. ಆ ಬೇಲಿಗೆ ಮತ್ತೆ ಯಥಾಪ್ರಕಾರ ದೂರದಲ್ಲಿ ಎರಡು ಗೇಟು. ಮುಂದಿದ್ದ ಗೇಟು ತೆರೆದಿತ್ತು. ಈತ ಹೆಜ್ಜೆ ಹಾಕಿದಂತೆಲ್ಲಾ ಆ ಗೇಟು ಮುಚ್ಚುತ್ತಾ ಬರುತ್ತಿತ್ತು.ಬೇಗ ಓಡಿದಷ್ಟೂ ಆ ಗೇಟು ಬೇಗ ಬಂದಾಗುತ್ತಿತ್ತು. ಮನದಲ್ಲಿ ಮತ್ಯಾಕೋ ಅನುಮಾನ. ಒಮ್ಮೆ ಹೆಜ್ಜೆ ಮುಂದಿಡೋ ಬದಲು ಹಿಂದಿಟ್ಟ. ಗೇಟು ಬಂದಾಗುವುದು ನಿಂತಿತು. ಮತ್ತೆರಡು ಹೆಜ್ಜೆ ಹಿಂದಿಟ್ಟ. ಆಶ್ಚರ್ಯ ! ಗೇಟು ಮತ್ತೆ ತೆರೆಯತೊಡಗಿತು..

ಈ ಗೇಟು ತೆರೆದಂತೆ ಮುಚ್ಚುತ್ತಿದ್ದ ಪಕ್ಕದ ಗೇಟನ್ನೂ ಕಂಡನು. ಈ ಗೇಟಿನ ಬಳಿ ಬಂದಾಗ ಅದರ ಮೇಲೆ ಬರದಿದ್ದ ಹೊರಗೆ ಎಂಬ ಬೋರ್ಡೂ ಮತ್ತೊಂದರ ಮೇಲೆ ಬರೆದಿದ್ದ ಒಳಗೆ ಎಂಬ ಬೋರ್ಡೂ ಕಂಡಿತು. ಹೊರ ಹೋಗೋಕೆ ಇದೇ ಗೇಟಲ್ವಾ ಎಂದು ಮನದಲ್ಲಿ ಅಂದುಕೊಳ್ಳುತ್ತಿರುವಾಗಲೇ ಎದುರಿಗಿದ್ದ ಗೇಟು ತೆರೆಯಿತು. ಅದರಲ್ಲಿ ಸಾಗುತ್ತಿದ್ದಂತೆಯೇ ಕೆಳಗಿಳಿಯುತ್ತಿದ್ದ ಮೆಟ್ಟಿಲುಗಳು ಸಿಕ್ಕಿದವು. ಅದರಲ್ಲಿ ಇಳಿಯುತ್ತಿದ್ದಂತೆಯೇ ಬೆನ್ನ ಮೇಲೆ ನೀರು ಬಿದ್ದಂತಹ ಅನುಭವ. ಬಲಗಡೆ ನೋಡಿದರೆ ಒಂದು ನಲ್ಲಿ ಒಡೆದು ಸೋರುತ್ತಿತ್ತು. ಅದನ್ನು ನಿಲ್ಲಿಸಲು ಹೋದಾಗ ಮೈಯೆಲ್ಲಾ ಒದ್ದೆಯಾಯಿತು.

ಯಾಕೋ ಚಳಿ ಆದಂತಾಯ್ತು. ತನ್ನೇ ನೋಡಿಕೊಂಡಾಗ ಒಮ್ಮೆ ಗಾಭರಿ ಆಯ್ತು. ನೋಡಿದರೆ ಇವನ ಕೈಲಿದ್ದ ಹೊಸ ಪ್ಯಾಂಟು, ಇವನು ಹಾಕಿದ್ದ ಹಳೆ ಶರ್ಟು ಎರಡೂ ಮಾಯ ! ಪಕ್ಕನೆ ಯಾರೋ ಹಿಂದಿನಿಂದ ಬಂದು ತಮ್ಮ ಕಬಂದ ಬಾಹುಗಳಲ್ಲಿ ಈತನನ್ನು ಬಂದಿಸಿದ ಅನುಭವ. ನಿನ್ನ ಮೈ ಒದ್ದೆ ಆಯ್ತು. ನಿಯಮ ಮೀರಿ ಓಡಿ ಹೋಗ್ತೀಯಾ ಹಹಹ್ಹಾ ಅಂತ ಇವನನ್ನು ಮತ್ತದೇ ಗೇಟಿನ ಕಡೆ ಹೊತ್ತೊಯ್ಯತೊಡಗಿದ ಇವನನ್ನು ಹಿಡಿದಿದ್ದ ಒಂದು ದೈತ್ಯ ದೇಹಿ. ತಪ್ಪಿಸಿಕೊಳ್ಳಲು ನಡೆಸುತ್ತಿದ್ದ ಇವನ ಕೊಸರಾಟಗಳ್ಯಾವುದೂ ಆ ದೈತ್ಯ ಬಲದೆದುರು ಸಾಗುತ್ತಿರಲಿಲ್ಲ. ಹಾಗೇ ಗೇಟು ದಾಟಿ ಮುಂದೆ ಸಾಗಿ ಎದುರಿಗಿದ್ದ ಸರಳುಗಳೆದುರು ಬಂದು ನಿಂತರು. "ಅತಿ ಆಸೆ ಗತಿ ಕೇಡು" ಎನ್ನೋ ಮಾತು ಪದೇ ಪದೇ ಇವನ ಮನದಲ್ಲಿ ಕಾಡಿ ಕಿವಿಯಲ್ಲೆಲ್ಲಾ "ನೀ ಸೋತೆ, ನಿಯಮ ಮೀರಿ ಓಡೋಗ್ತೀಯ" ಅನ್ನೋ ಅಪಹಾಸ್ಯದ ನಗುವೇ ತುಂಬಿಹೋಯ್ತು..


2 comments:

  1. ಕನಸುಗಳು ಎಚ್ಚರಿಸುವ ಸಂಕೇತಗಳು. ಬದುಕಿನ ಯಾವುದೋ ತೀರದ ಆಸೆಯನ್ನು ಕನಸು ಅದು ತಪ್ಪು ಎಂದು ಮನಸಿಗೆ ಮನದಟ್ಟು ಮಾಡಲು ಇಂತಹ ಕನಸನ್ನು ಹೆಣೆಯುತ್ತದೆ.

    ಭಾಷಾ ಬಳಕೆ ಮತ್ತು ಅದರ ನಿರೂಪಣಾ ಶೈಲಿ ಎರಡಕ್ಕೂ ಫುಲ್ ಮಾರ್ಕ್ಸ್.

    ReplyDelete
  2. ಹಾ ಭದ್ರೀಜಿ.. ಕನಸುಗಳಲ್ಲಿ ಅದೇನೇನಡಗಿರುತ್ತೋ.. ಮೊದಲು ಸಿಗೋ ದನ, ಆಮೇಲಿನ ಜನ.. ಹಂಡೆ, ಅದಕ್ಕೆ ಮೂರು ಮೆಟ್ಟಿಲು, ಆಮೇಲೆ ಬೂದಿ.. ಹೀಗೆ ಪ್ರತಿಯೊಂದೂ ಹಲ ಸಾಧ್ಯತೆಗಳನ್ನ ಕಲ್ಪಿಸುತ್ತಾ ಸಾಗುತ್ತದೆ :-)

    ReplyDelete