Sunday, March 31, 2013

ವಂಡರ್ ನಸೀಮನ ಜೊತೆಗೊಂದಿನ

ಇವತ್ಯಾಕೋ ಒಂತರಾ ಅವಳಿ ಭಾವ. ಫೇಸ್ಬುಕ್ ಜೊತೆಜೊತೆಗೇ ಪರಿಚಯವಾಗಿ ಇಲ್ಲಿ, ಬ್ಲಾಗು ಅಂತ ಶುರು ಮಾಡಿ ಬರೆಯೋದಕ್ಕೆ ಕಾರಣರಾದವರಲ್ಲಿ ಕನ್ನಡ ಬ್ಲಾಗಿನ ರವಿ ಮೂರ್ನಾಡರೂ ಒಬ್ಬರು. ನಿನ್ನೆ ಸಂಜೆ ಅವರು ನಮ್ಮನ್ನಗಲಿದ ಸುದ್ದಿ ತಿಳಿದಕ್ಕಾಗಿ ಬೇಸರ ಒಂದೆಡೆಯಾದರೆ ,ನಟರಾಜು ಸೀಗೆಕೋಟೆ ಮರಿಯಪ್ಪ(ನಸೀಮ) ಅವರ ಎರಡು ಪುಸ್ತಕಗಳ ಬಿಡುಗಡೆಯ ಸಂತೋಷ ಇನ್ನೊಂದೆಡೆ. ಯಾವಾಗ್ಲೂ ಪ್ರ್ಹೀಯಾಗಿದ್ರೂ ಈ  ಪುಸ್ತಕ ಬಿಡುಗಡೆ ಸಮಾರಂಭಗಳ ಸಮಯದಲ್ಲೇ ಏನಾದ್ರೂ ಕೆಲಸಗಳು!! ಈ ಸಲ ನನ್ನ ನಸೀಬು ಚೆನ್ನಾಗಿತ್ತು. ನಸೀಮರ ಕಾರ್ಯಕ್ರಮ ಕಾಯ್ತಾ ಇತ್ತು :-)

ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ೧೦;೩೦ ಕ್ಕೆ ಕಾರ್ಯಕ್ರಮ ಅಂತ ಕರೆದಿದ್ರು. ನಮ್ಮ ಮಾರತ್ತಳ್ಳಿ ಮೂಲೆಯಿಂದ ಬನಶಂಕರಿಗೆ ಅದೂ ಭಾನುವಾರ ಒಂದೂವರೆ ಘಂಟೆಯಾದರೂ ಬೇಕು, ಅಲ್ಲಿಂದ ಸೊಸೈಟಿ ಹುಡುಕಬೇಕೆಂಬ ಲೆಕ್ಕಾಚಾರದಲ್ಲಿದ್ದವ ನಾನು. ಬನಶಂಕರಿಯಿಂದ ಮತ್ತೆ ಸೊಸೈಟಿಗೆ ಸೀದಾ ಬಸ್ಸು ಸಿಕ್ಕಿ ಬಿಡಬೇಕೇ ? ಸೊಸೈಟಿಯಲ್ಲಿಳಿದಾಗ ಬರೀ ೯:೪೦. ಆಗಲೇ ಹರ್ಷವರ್ಧನ್(ಹರ್ಷ) ನಸೀಮ ಅಲ್ಲಿದ್ದರು. ಬ್ಯಾನರ್ ಕಟ್ಟೋ ಹೊತ್ತಿಗೆ ನಮ್ಮ ಪಂಜು ಪ್ರಸನ್ನ ಬಂದರು. ನಂತರ ಸಿ.ಎಸ್ ಮಠಪತಿ ಅಲಿಯಾಸ್ ಚಿನ್ಮಯ , ವಿ ಜಯಪ್ರಕಾಶ್, ವಿ.ಆರ್ ಕಾರ್ಪೆಂಟರ್ ಹೀಗೆ ಒಬ್ಬೊಬರೇ ಆಗಮಿಸತೊಡಗಿದರು. ಹತ್ತೂವರೆ ಆಗೋ ಹೊತ್ತಿಗೆ ಬ್ಲಾಗ್ ಲೋಕದ , ಫೇಸ್ಬುಕ್ಕಿನ ಅನೇಕ ಹಿರಿ-ಕಿರಿ ತಲೆಗಳು ಅಲ್ಲಿ ಬಂದಿದ್ದರು,

ಅಲ್ಲೇ ಬಾಗಿಲಿನ ಪಕ್ಕ ಸುಷ್ಮಾ ಮೂಡಬಿದ್ರೆ ಕಂಡರು. ಅವರನ್ನು ಮಾತಾಡಿಸೋ ಹೊತ್ತಿಗೆ ಪರಿಚಯವಾದವರು ಶಮಿ ಸಂಜಯ್, ನಂದೀಶ್ ತೀರ್ಥಹಳ್ಳಿ, ಮನಸು ಮನಸುಗಳ ಲೋಕದ ಬೆಳೆಯೂರ್ ಗೆಳೆಯ , ರಘು ತೆಕ್ಕಾರ್ . ಹಾಗೇ ಹೊರಗಡೆ ಬಂದು ನೋಡಿದ್ರೆ ಅತ್ರಾಡಿ ಹೆಗ್ದೇರು, ಪ್ರಕಾಶ್ ಹೆಗ್ಡೇರು, ಬದ್ರಿನಾಥ್ ಪಲವಳ್ಳಿ ಹೀಗೆ ಹಲವಾರು ಹಿರಿ ತಲೆಗಳು ನಿಂತಿದ್ದರು. ಎಲ್ಲರ ಮಾತಲ್ಲೂ ಮೂರ್ನಾಡರಿಗೆ ದುಃಖತರ್ಪಣ. ಹಾಗೆಯೇ ಸುಮತಿ ದೀಪಾ ಹೆಗ್ಡೆ ಅವರು, ನಸೀಮರ ಪುಸ್ತಕಗಳನ್ನು ತಿದ್ದಿಕೊಟ್ಟ ಶ್ರೀಮತಿ ಮಾಲತಿ ಶೆಣೈ ಅವರು ಜೊತೆಗೇ ನಿಂತಿದ್ರು. ಸುನೀತಾ ಮಂಜುನಾಥ್ ಅವ್ರು ಎಲ್ರನ್ನೂ ಒಳಗೆ ಸ್ವಾಗತಿಸ್ತಾ ಇದ್ರು.  ಗುರುತಿರದ ಮುಖಗಳ ನಡುವೆ ಕೆಲವರನ್ನಾದ್ರೂ ಪರಿಚಯ ಮಾಡ್ಕೊಟ್ಟಿದ್ದು ಪ್ರಸನ್ನ ಅವರೇ ;-)

ನಮಸ್ಕಾರ ಅಣ್ಣಾ, ಅಡ್ಡ ಬಿದ್ದ್ರೆ ಅನ್ನೋ ನಮಸ್ಕಾರದ ಪೋಸಲ್ಲಿ ಎಂಟ್ರಿ ಕೊಟ್ರು ಪರೇಶ್ ಭಾಯ್. ಹಾಗೇ ಪ್ರಸಾದ್ರೂ ಕಂಡ್ರು.
ಸಮಯ ಹತ್ತೂಮುಕ್ಕಾಲು. ಕಾರ್ಯಕ್ರಮ ಹನ್ನೊಂದಕ್ಕೆ ಅಂತ ನೋಡಿದ ಹಂಗಿತ್ತು ಕಣ್ರಿ ಅಂತ ನಿಧಾನವಾಗಿ ಬಾಯಿ ಬಿಟ್ರು ಪ್ರಸನ್ನ ! ಸರಿ ಇನ್ನೇನ್ ಮಾಡೋದು. ನಮಗೆ ಅಂತ ಉಪ್ಪಿಟ್ಟು, ಟೀ ಕಾಯ್ತಾ ಇತ್ತು. ಅಷ್ಟರಲ್ಲಿ ನಾಗಮಂಡಲ ಚಿತ್ರದ "ಹಸಿರಿ ಸಿರಿಯಲಿ" ಅಂತ ಖ್ಯಾತ ಹಾಡುಗಳನ್ನು ಕೊಟ್ಟ ಗೋಪಾಲ ವಾಜಪೇಯಿಯವರು ಕಂಡ್ರು. ಬರ್ತೀನಿ ಬರ್ತೀನಿ ಅಂತನೇ ಲೇಟಾದ ಫಾಸ್ಟ್ ಕವಿ ಓಶೋನ ತಮ್ಮ ಈಶೋ ಈಶ್ವರ್ ಕಿರಣ್ ಭಟ್ಟರು, ಪ್ರವರ ಕೊಟ್ಟೂರ್ ಕಂಡ್ರು. ಹಾಗೇ ಚೇತನಾ ತೀರ್ಥಹಳ್ಳಿ ಅವರು, ಮನು ಬಳಿಗಾರ್ ಅವ್ರೂ ಆಗಮಿಸಿದ್ರು.

ಮೂರ್ನಾಡರಿಗೆ ಶೋಕ ತರ್ಪಣದೊಂದಿಗೆ ಕಾರ್ಯಕ್ರಮ ಶುರು ಆಯ್ತು.ನಿರೂಪಕ ವಿನಯ್ ಕುಮಾರ್ ಅವರ ಮಾತಲ್ಲೇ ಹೇಳೋದಾದ್ರೆ ಈ ಮ್ಯಾಚಲ್ಲಿ ನಾಲ್ಕನೇ ಅಂಪಾಯರ್ ಇಲ್ಲ. ಡೈರೆಕ್ಟ್ ಬ್ಯಾಟಿಂಗ್. ಸೀದಾ ಪುಸ್ತಕ ಬಿಡುಗಡೆ. ನಂತರ ಪತ್ರಕರ್ತರಾದ ಚೇತನಾ ತೀರ್ಥಹಳ್ಳಿಯವರಿಂದ ಪುಸ್ತಕ ಪರಿಚಯ. ವಂಡರ್ ಲ್ಯಾಂಡ್ ಪುಸ್ತಕದ ಬಗ್ಗೆ ಪರಿಚಯಿಸಿ, ಓದೋ ಆಸಕ್ತಿ ಕೆರಳಿಸಿದ ಅವರ ಮಾತುಗಳು ಎಲೆಮರೆಯ ಕಾಯಿಯ ಹೊತ್ತಿಗೆ ಬ್ಲಾಗ್ ಲೋಕದತ್ತ ಹೊರಳಿತು. ೨೦೦೭ರಲ್ಲೇ ಬ್ಲಾಗ್ ಲೋಕಕ್ಕೆ ಕಾಲಿಟ್ಟ ಅವರು ಅಂದಿನಿಂದ ಇಂದಿನವರೆಗೆ ಬ್ಲಾಗ್ ಲೋಕದಲ್ಲಿ ಕಾಣುತ್ತಿರುವ, ಜೊಳ್ಳು ಎಂದು ಕೆಲವರಿಂದ ಅಸಡ್ಡೆಗೊಂಡರೂ ಲೆಕ್ಕಿಸದೇ ಮೂಡುತ್ತಿರುವ ಗಟ್ಟಿಕಾಳುಗಳ ಬಗ್ಗೆ ಗಮನ ಸೆಳೆದರು. ಸ್ವಲ್ಪ ಸಮಯ ಆದ ಕೂಡಲೇ ಬ್ಲಾಗುಗಳನ್ನ ಬಿಡಬೇಡಿರೆಂದು ಯುವ ಬ್ಲಾಗರ್ ಗಳಿಗೆ ಕಿವಿಮಾತನ್ನೂ ಹೇಳಿದರು. ನಂತರ   ಜನಪದ ಕಲಾ ಪರಿಷತ್ತಿನ ಅಧ್ಯಕ್ಷರಾದ ಕೆಂಪಯ್ಯನವರಿಂದ ಬಿದಿರಿನ ಬಗೆಗಿನ ಒಂದು ಜನಪದ ಗೀತೆ. ನಂತರ ಪಂಜು ಅಂತರ್ಜಾಲ ತಾಣದ ಮೊಬೈಲ್ ಮೂಲಕ ಲೋಕಾರ್ಪಣ. ಮೊಬೈಲಲ್ಲಿ ಬಿಡುಗಡೆ ಅಂತ ಮಾಡ್ಸಿದ್ರಲ್ಲಪ್ಪಾ, ಅದು ನಿಮಗೆಲ್ಲಾ ಸಿಕ್ತೇರ್ನಪ್ಪ, ಅದನ್ನ ಹೇಗೆ ಓದ್ತಿರಪ್ಪ ಅಂತ ಮುಗ್ದವಾಗೇ ಕೇಳಿದ ಕೆಂಪಯ್ಯ ಅವರ ಮಾತುಗಳಲ್ಲಿ ಬ್ಲಾಗು, ಇಂಟರ್ನೆಟ್ಟು, ಫೇಸ್ಬುಕ್ಕು ಅಂದರೇನೆಂದರೆ ತಿಳಿಯದ, ಸಾಹಿತ್ಯ ಅಂದರೆ ಪುಟ್ಟಪ್ಪ, ಬೇಂದ್ರೆ ಅವರ ಪುಸ್ತಕಗಳಷ್ಟೇ ಎಂಬೋ ಹಳ್ಳಿಯ ಮತ್ತು ಬ್ಲಾಗು ಸಾಹಿತ್ಯಕ್ಕೆ ಮನ್ನಣೆಯೇ ಇಲ್ಲವೆಂದು ಬೇಸರಿಸುತ್ತಿರೋ ಪೀಳಿಗೆಯ ನಡುವಿನ ಗೊಂದಲ ಕಂಡಂತಾಯಿತು.    

ನಂತರ ಗೋಪಾಲ ವಾಜಪೇಯಿಯವರ ಸರಳತೆಯ ಪರಿಚಯವಾಯಿತು. ಹಿರಿಯ ಸಾಹಿತಿಯೆಂಬ ಯಾವ ಹಮ್ಮು ಬಿಮ್ಮಿಲ್ಲದ ಅವರು ತಮಗೆ ಕಬೀರನ ದೋಹಾಗಳು ಇಷ್ಟವಾಗುತ್ತಿರೋ ಪರಿ ಬಗ್ಗೆ ಅದನ್ನು ತಾವು ಅನುವಾದಿಸಿರುವುದರ ಬಗ್ಗೆ ತಿಳಿಸಿದರು.
ತೇಜೋಮಯನದೋ ತೇಜವೋ ತೇಜ
..ಸ್ಪರ್ಷದಿಂದ ನಾನು ತೇಜವಾಗಿದ್ದು ಸಹಜ
ನಿಂದಕರಿರಲಿ ನಿನಗೆ, ಅವರಾಗಿರಲಿ ನಿನ್ನ ನೆರಳು
ಮನದ ಕೊಳೆಗೆ ಅವರೇ ಸೋಪು, ನೀರು, ಬೆರಳು
ಮುಂತಾದ ಅನುವಾದಗಳು ಅನುವಾದ ಅಂದ್ರೆ ಹಿಂಗಿರ್ಬೇಕು ಅಂತೊಮ್ಮೆ ಅಂದ್ಕೊಳೋ ಹಾಗೆ ಮಾಡಿದ್ವು. ನಾನು ನನಗೆ ತಿಳಿದಂತೆ ಅನುವಾದಿಸಿದ್ದೇನೆ. ತಾವು ಕೇಳುವಿರೆಂದು ಭಾವಿಸಿದ್ದೇನೆಂದೇ ಮಾತು ಶುರು ಮಾಡಿದ ವಾಜಪೇಯಿಯವರ ವಿನಯ ಬಹಳ ಇಷ್ಟ ಆಯ್ತು.

ನಂತರದ ಸರದಿ ಚುಟುಕು ಸ್ಪರ್ಧೆಯ ಬಹುಮಾನ ವಿತರಣೆಗೆಂದು ಬಂದ ಖ್ಯಾತ ಕವಿ ಜರಗನಹಳ್ಳಿ ಶಿವಶಂಕರ್ ಅವರದ್ದು. ಅವರು ತಮ್ಮ ತಾಯಿ , ಮಣ್ಣು, ಅರಸ ಕವಿತೆಗಳ ಮೂಲಕ ಮನಸೆಳೆದರು.
ಆಮೇಲೆ ಕಾರ್ಯಕ್ರಮದ ಹೀರೋ ನಟರಾಜರ ಮಾತುಕತೆ. ತಮ್ಮ ಪುಸ್ತಕ ಮೂಡಿಬಂದ ಬಗೆಯ ಜೊತೆಗೆ ಬ್ಲಾಗರ್ಗಳಿಗೆ ಸಾಹಿತ್ಯ ಸಮ್ಮೇಳನಗಳಲ್ಲಿ ಮನ್ನಣೆ ದೊರಕಿಸಿ ಎಂದು ಮನು ಬಳಿಗಾರ್ ಬಳಿ  ವಿನಂತಿಯೂ ಅವರ ಮಾತುಗಳಲ್ಲಿ ವ್ಯಕ್ತವಾಯಿತು. ನಂತರ ಮನು ಬಳಿಗಾರರ ಮಾತುಗಳು ಸಮಯದ ಪರಿಪಾಲನೆ, ಫೇಸ್ಬುಕ್ ಮೂಲಕ ಬೆಳೆಯುತ್ತಿರೋ ಬಂಧುತ್ವ, ಮುಂಚೆ ಇದ್ದ ಪತ್ರಸಂಸ್ಕೃತಿ.. ಹೀಗೆ ಹಲವಾರು ಇಂದು-ನಿನ್ನೆಯ ವಿಷಯಗಳಲ್ಲಿ ಹೊರಳಿತು. ಕೊನೆಗೆ ಅದು ಬಂದು ನಿಂತದ್ದು ಮನ್ನಣೆ ಕೇಳೋ ಬ್ಲಾಗರ್ಗಳಿಗಿರೋ ಹೊಣೆಗಾರಿಕೆಗಳ ಬಗ್ಗೆ. ೨೦೦೭ರಲ್ಲೇ ರಚನೆಯಾದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸೂಚನೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರೆಂದು ಅಂದು ಎಲ್ಲಾ ಪತ್ರಿಕೆಗಳಲ್ಲೂ, ಟೀವಿಗಳಲ್ಲೂ ಹೇಳಲಾಗಿತ್ತು. ನಿಮ್ಮಲ್ಲಿ ಒಬ್ಬರಾದರೂ  ಈ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸಿದ್ದೀರಾ ಎಂದು ಗಂಭೀರ ಸವಾಲನ್ನೇ ಹಾಕಿದರು. ಇತ್ತೀಚಿಗಷ್ಟೇ ಫೇಸ್ಬುಕ್ಕಿಗೆ ಬಂದ, ಬ್ಲಾಗೆಂದು ಒಂದನ್ನು ಶುರು ಮಾಡಿ ಅದರಲ್ಲಿ ಕನ್ನಡದ ಹಲ ತಂತ್ರಾಂಶ ಉಪಯೋಗಿಸುತ್ತಿರೋ , ಯಾವ ಪುರಸ್ಕಾರ ತಿರಸ್ಕಾರಗಳನ್ನೂ ಬಯಸದೇ ತಮ್ಮ ಪಾಲಿಗೆ ಬರೆದುಕೊಂಡಿರೋ ಯುವ ಬರಹಗಾರರು ಇದಕ್ಕೆ ಏನೆಂದು ಉತ್ತರಿಸಿಯಾರು ?
ಫೇಸ್ಬುಕ್ಕಿನ ಕನ್ನಡ ಅವತರಣಿಕೆ , ಗೂಗಲ್ ಕನ್ನಡ, ಕನ್ನಡ ಸ್ಲೇಟ್, ವಿಕಿ ಕನ್ನಡ, ಲಿನಕ್ಸಲ್ಲಿ ಕನ್ನಡ, ನವಿಲು, ಗುಬ್ಬಿಯಂತ ಇತ್ತೀಚೆಗೆ ಬಂದ ೨ ಕನ್ನಡ ಫಾಂಟ್ಗಳು ಹೀಗೆ ಹಲವೆಡೆ ಕನ್ನಡ ತಂತ್ರಾಂಶಗಳ ಬಗೆಗಿನ ಸಂಶೋಧನೆಗಳು, ಪ್ರಯತ್ನಗಳು ನಡೆಯುತ್ತಿದೆಯಾದರೂ  ಬಳಿಗಾರರ ಪ್ರಶ್ನೆಗೆ ಸ್ವಲ್ಪ ಹೊತ್ತು ಎಲ್ಲೆಡೆ ಮೌನ.

ತಮ್ಮ ಮಾತು ಮುಂದುವರಿಸಿದ ಬಳಿಗಾರರು ಸಭೆಯ ಪರವಾಗಿ ವಿನಂತಿಸಿದ ನಟರಾಜರಿಗೇ ಪ್ರಶ್ನೆಯನ್ನು ಕೊಟ್ಟು ವಿಶ್ರಮಿಸಿದರು. ಇತ್ತೀಚೆಗಷ್ಟೇ ಮೊಬೈಲು, ಕಂಪ್ಯೂಟರ್ ಗಳಲ್ಲಿ ಕನ್ನಡ ಬಳಸುತ್ತಿರುವ ಬಗ್ಗೆ ತಿಳಿಸಿ , ಕನ್ನಡ ಬ್ಲಾಗಲ್ಲಿ ಕನ್ನಡ ತಂತ್ರಾಂಶಗಳ ಬಗೆಗಿನ ಮಾಹಿತಿಯ ಬಗ್ಗೆ , ಕನ್ನಡದ ಬಗ್ಗೆ ನಿಧಾನವಾಗಾದರೂ ಜನರಲ್ಲಿ ಮೂಡುತ್ತಿರುವ ಕಾಳಜಿಯ ಬಗ್ಗೆ, ಹತ್ತು ಸಾವಿರ ಸದಸ್ಯರನ್ನು ಹೊಂದಿದ ಕನ್ನಡ ಬ್ಲಾಗಿನ ಬಗ್ಗೆ ತಿಳಿಸಿ ಕನ್ನಡದ ಬಗೆಗಿನ ಕಾಳಜಿಯಲ್ಲಿ ಬ್ಲಾಗಿಗರು , ಫೇಸ್ಬುಕಿಗರು ಯಾವ ನಿಟ್ಟಿನಲ್ಲೂ ಕಮ್ಮಿ ಇಲ್ಲ ಎಂದು ಸಮರ್ಥಿಸಿಕೊಂಡರು. ಅವರ ಮಾತುಗಳು ಮುಗಿಯೋ ಹೊತ್ತಿಗೆ ಈಗಷ್ಟೇ ಇತ್ತ ಕಾಲಿಡುತ್ತಿರೋ ಯುವ ಪೀಳಿಗೆಯೆಯಿಂದ ಇನ್ನೂ ಹೆಚ್ಚಿನ ಕಾಣಿಕೆ ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದೆಂಬ ಸಮಾಧಾನ ಬಳಿಗಾರರ ಮುಖದಲ್ಲಿನ ನಗುವಲ್ಲಿ ಕಂಡತಾಯ್ತು. ನಂತರ ಪುಸ್ತಕಕ್ಕೆ ಬೆನ್ನುಡಿ ಬರೆದು ಕೊಟ್ಟಂತ ಉಷಾ ಕಟ್ಟೀಮನಿ ಅವರನ್ನೂ ಅಭಿನಂದಿಸಲಾಯಿತು.

ಕಾರ್ಯಕ್ರಮದ ನಂತರ ಈಶಾನ್ಯ ರಾಜ್ಯಗಳ ನೃತ್ಯಗಳ ಪರಿಚಯದ ಒಂದು ವೀಡಿಯೋ. ಹಾಗೇ ಹೊರಬರುವಾಗ ಕಂಡದ್ದು ದೂರ ತೀರದ ಲೊಕದ ಗೆಳೆಯ ಸತೀಶ್ ನಾಯಕ್. ಪುಸ್ತಕ ತಗೊಳ್ಳುವಾಗ ಕಂಡದ್ದು ಮತ್ತೊಬ್ಬ ಬ್ಲಾಗಿಗ ಗೆಳೆಯ ಸುಬ್ರಮಣ್ಯ ಹೆಗಡೆ. ಬ್ಲಾಗಲ್ಲಿರೋ ಅವರ ಯಾವದೋ ಕಾಲದ ಫೋಟೋಗಳಿಗೂ, ಹೆಸರು ಮಾತ್ರ ತಿಳಿದ ಫೋಟೋಗಳೇ ಇಲ್ಲದ ಅಗೋಚರ ಮಿತ್ರರನ್ನೂ  ಒಮ್ಮೆ ಎದುರಿಗೆ ಕಂಡರೆ ಒಂತರಾ ಖುಷಿ. ಆದರೆ ಪರಸ್ಪರ ಪರಿಚಯಿಸಿಕೊಳ್ಳುವವರೆಗೂ ಇವರು ಇಂತವರೇ ಅಂತ ಗೊತ್ತಾಗೋ ಚಾನ್ಸೇ ಇಲ್ಲ. ನನ್ನ ಪಕ್ಕನೇ ಕೂತಿದ್ರೂ ನಾನು ಅನೇಕರ ಹೆಸರನ್ನು ಇಲ್ಲಿ ಬರೀದೆ ಇರ್ಬೋದು !! ಆದ್ರೆ ಇಲ್ಲಿ ಬರೆದಷ್ಟು ಹೆಸರನ್ನಾದರೂ ನಾನು ನೆನಪಿಟ್ಟಿದ್ದೀನಿ ಅಂದರೆ ಅದಕ್ಕೆ ಫೇಸ್ಬುಕ್ಕು ಮತ್ತು ಅದರಲ್ಲೇ ಮೊದಲು ಪರಿಚಯವಾದ ಪ್ರಸನ್ನ ಅಡುವಳ್ಳಿ ಅವರೇ ಕಾರಣ:-) ಬರೀ ಫೋಟೋದಲ್ಲಿ ಮಾತ್ರ ಕಂಡಿದ್ದ ಸುಮಾರಷ್ಟು ಜನರನ್ನ ಮುಃಖತಃ ಕಂಡು ಮಾತನಾಡಿಸಿದ್ದು , ಒಂದೊಳ್ಳೆ ಕಾರ್ಯಕ್ರಮ ಸವಿದಿದ್ದು ನನ್ನ ನಸೀಬೇ ಸರಿ. ಅದಕ್ಕೆಲ್ಲಾ ಕಾರಣರಾದ ನಸೀಮರಿಗೆ ಒಂದು ಜೈ ಹೋ :-)

7 comments:

 1. ಧನ್ಯವಾದಗಳು ಪ್ರಶಸ್ತಿಯವರೇ.. ಸಮಾರಂಭಕ್ಕೆ ಬಂದು ವಿಷಯ ತಿಳಿದ ಅನುಭವ ನನಗಾಯಿತು. ನೆನ್ನೆ ನಡೆದ ಸಮಾರಂಭದ ಬಗ್ಗೆ ಇಷ್ಟು ಬೇಗನೆ ಬರಹ ರೂಪದಲ್ಲಿ ಇಳಿಸಿದ್ದೀರಾ ಎಂದರೆ ನೆನ್ನೆ ನಿಮಗಾದ ಸಂತಸ ಎಷ್ಟೆಂದು ತೋರ್ಪದಿಸುತ್ತಿದೆ.. ಧನ್ಯಾವದಗಳು ಸರ್

  ReplyDelete
  Replies
  1. ಧನ್ಯವಾದಗಳು ರುಕ್ಮಿಣಿ ಅವರೇ :-) ನಿನ್ನೆ ತುಂಬಾ ಸಂತೋಷವಾಗಿದ್ದು ನಿಜ :-)
   ಪ್ರಶಾಂತವನಕ್ಕೆ ಸ್ವಾಗತ :-)

   Delete
 2. ತುಂಬಾ ವಿಭಿನ್ನ ಮತ್ತು ಆತ್ಮೀಯ ಸಮಾರಂಭ. ನಿಮ್ಮನ್ನೆಲ್ಲ ಭೇಟಿಯಾದ ಖುಷಿ ನನಗಿದೆ.

  ReplyDelete
  Replies
  1. ಹೌದು ಬದ್ರಿ ಸರ್. ನಿಮ್ಮನ್ನೂ ಭೇಟಿಯಾದ ಖುಷಿ ನನಗೆ :-)

   Delete
 3. ಒಂದು ಸುಂದರ ಕಾರ್ಯಕ್ರಮದ ಬಗ್ಗೆ ನೇರಾ ನೇರಾ ವರದಿ. ಯಾವುದನ್ನೂ ನೀವು ಬಿಟ್ಟಿಲ್ಲ ಎನ್ನುವುದಕ್ಕೆ ಸಾಕ್ಷಿ ಪ್ರತಿಯೊಂದನ್ನು ನೀಟಾಗಿ ಬರೆದಿರುವ ಶೈಲಿ. ಇಷ್ಟವಾಯಿತು

  ReplyDelete
  Replies
  1. ಧನ್ಯವಾದಗಳು ಶ್ರೀಕಾಂತ್ ಜೀ :-)
   ನೀವು ಬಂದಿಲ್ಲ ಅಂದರೆ ಬೇರೆ ಯಾರಾದ್ರೂ ವರದಿ ಮಾಡ್ಲೇ ಬೇಕಲ್ವಾ ? ಈ ಸಲ ಆ ಸರದಿ ನನ್ನದು :-)

   Delete
 4. ನಮ್ಮನ್ನೂ ಒಮ್ಮೆ ಸುಚಿತ್ರಾ ಫ಼ಿಲ್ಮ್ ಸೊಸೈಟಿ ಗೆ ಕರೆದುಕೊಂಡು ಹೋದ್ರಿ :)
  ಚೆನಾಗಿ ತೋರಿಸಿದ್ದೀರಾ ಕಾರ್ಯಕ್ರಮವನ್ನು

  ReplyDelete