Ramanagara Betta Trekking |
ಕರ್ನಾಟಕದಲ್ಲಿ ಅದೆಷ್ಟು ಊರುಗಳಿಗೆ ಒಂದೇ ಹೆಸರಿರತ್ತಪ್ಪಾ ? ಎಲ್ಲಾ ಊರುಗಳಲ್ಲೂ ಎಂ.ಜಿ ರೋಡು ಇರೋ ತರ "ರಾಮದೇವರ ಬೆಟ್ಟ" ಮುಂತಾದ ಹೆಸರುಗಳೂ ಕಾಮನ್ನು ಅನ್ನೋದು ಹಿಂದಿನ ವಾರದ ತನಕ ಗೊತ್ತಿರಲಿಲ್ಲ. ಮೊದಲೆಲ್ಲಾ ನನಗೆ ರಾಮನಗರ ಅಂದರೆ "ಶೋಲೆ" ಚಿತ್ರದ ಚಿತ್ರೀಕರಣ ನಡೆದ ಜಾಗ ಮಾತ್ರವಾಗಿತ್ತು. ಅಲ್ಲಿರೋ ರಾಮದೇವರ ಬೆಟ್ಟಕ್ಕೆ ಚಾರಣ ಹೋಗಬೇಕು ಅಂತ ಹುಡುಕಹೊರಟಾಗಲೇ ಆ ಹೆಸರಿನ ಎರಡು ಬೆಟ್ಟಗಳಿವೆ ಅಂತ ಗೊತ್ತಾಗಿದ್ದು ! ಒಂದು ಬೆಟ್ಟ ರಾಮನಗರದ ಬಳಿಯಿದ್ದರೆ ಮತ್ತೊಂದು ತುಮಕೂರಿನ ಬಳಿಯಿದೆ. ರಾಮನಗರ ಬೆಟ್ಟದ ಬಳಿ ಒಂದು ರಣಹದ್ದು ವನ್ಯಜೀವಿ ಧಾಮ ಇದೆ ಅಂತ ಒಂದು ಬ್ಲಾಗಲ್ಲಿ ಓದಿದ್ದಕ್ಕೆ ಆ ಹೆಸರಿಂದ ಹುಡುಕಬಹುದೇನೋ ಅಂತ ಹುಡುಕಿದರೆ ಆ ವನ್ಯಜೀವಿಧಾಮವನ್ನು ತುಮಕೂರಿನ ಹತ್ರವಿರೋ ರಾಮನಗರ ಬೆಟ್ಟದಲ್ಲಿ ತೋರಿಸಿತ್ತು ಗೂಗಲ್ಲು ! ಹಂಗಾಗಿ ನಾವು ಹೋಗಬೇಕಾದ ಜಾಗ ಕರೆಕ್ಟಾಗೆಲ್ಲಿದೆ ಅನ್ನೋ ಗೊಂದಲದಲ್ಲೇ ಶ್ರೀಕೃಷ್ಣನ ಜೊತೆ ಹೋಗಬೇಕೆಂದುಕೊಂಡಿದ್ದ ಒಂದು ಭಾನುವಾರದ ಪ್ಲಾನು ಫ್ಲಾಪಾಗಿತ್ತು. ಶನಿವಾರ ಪೂರ್ತಿ ಸುತ್ತಿದ ಸುಸ್ತಿನಲ್ಲಿ ಭಾನುವಾರಕ್ಕೆ ಅಲಾರಂ ಇಡುವಾಗ ಎ.ಎಂ ಬದಲು ಪಿ.ಎಂ ಅಂತಿಟ್ಟು ಅದು ಹೊಡೆಯದೇ ಇದ್ದಿದ್ದು ಮತ್ತೊಂದು ಕಾರಣ ಬಿಡಿ!
ಬೆಟ್ಟದ ಪ್ಲಾನಿಗೇ ಜೋತು ಬಿದ್ದು:
ಛಲಬಿಡದ ತ್ರಿವಿಕ್ರಮನಂತೆ ಮತ್ತದೇ ರಾಮನಗರಕ್ಕೆ ಮತ್ತೆರಡು ವಾರಗಳ ನಂತರ ಪ್ಲಾನು ಹಾಕಿದ್ದಾಯ್ತು. ಪ್ಲಾನೇನೋ ಹಾಕಿದ್ದಾಯ್ತು. ಆದ್ರೆ ಪಕ್ಕಾ ಬರೋರ್ಯಾರು ಅಂತನೂ ಖಾತ್ರಿ ಆಗಬೇಡ್ವೇ ? ನಮ್ಮ "ವಾರಾಂತ್ಯದ ಟ್ರಿಪ್ಪು" ಗುಂಪಿನ ಹಳೇ ಗೆಳೆಯರೆಲ್ಲ ಈ ವಾರ ಬ್ಯುಸಿಯಿದ್ದ ಕಾರಣ ಹೊಸಬರನ್ನು ಕೇಳೋ ಅಗತ್ಯ ಬಿತ್ತೀಸಲ. ನಂಜೊತೆ ಟ್ರಿಪ್ ಬರ್ತೀನಿ ಅಂತ ಒಂದ್ಸಲ, ಈ ವಾರ ತನ್ನ ಗೆಳೆಯರ ಜೊತೆಗೆ ಹೊರಗೆಡೆ ಹೋಗೋ ಪ್ಲಾನಿದೆ ಅಂತ ಒಂದ್ಸಲ ಹೇಳ್ತಿದ್ದ ನಮ್ಮಾಫೀಸಿನ ರಾಜಣ್ಣನ್ನ ನಂಬ್ಕೊಳೋ ಹಾಗಿರ್ಲಿಲ್ಲ. ಖಾಯಂ ಟ್ರಿಪ್ ಪಾರ್ಟನರ್ ಶ್ರೀಕೃಷ್ಣನೂ ಈ ಬಗ್ಗೆ ಖಾತ್ರಿ ಮಾಡದೇ ಶುಕ್ರವಾರ ಹೇಳ್ತೀನಿ ಅಂದಿದ್ರಿಂದ ಅವನ ಗ್ಯಾರಂಟಿಯೂ ಇರಲಿಲ್ಲ. ರಾಮನಗರಕ್ಕೆ ಹತ್ತಿರದಲ್ಲೇ ಇರೋ ಪ್ರತೀ ವಾರ ಹೊಸ ಜಾಗಗಳಿಗೆ ಚಾರಣ ಹೋಗೋ ಪ್ರವೀಣನನ್ನು ಈ ಜಾಗದ ಬಗ್ಗೆ ಕೇಳಿದಾಗ ನಾ ಖಂಡಿತ ಬರ್ತೀನಿ ಅಂತ ಒಪ್ಕೊಂಡ. ಹಾಗೇ ಮೈಸೂರಿನ ಸಹೋದ್ಯೋಗಿ ಶ್ರೀನಂದನ್ನಿಗೂ ಈ ಜಾಗ ಇಷ್ಟವಾಗಿ ತಾನೂ ಬರ್ತೀನಿ ಅಂತಂದ. ನಮ್ಮ ಹಳೇ ಬೈಕ್ ಟ್ರಿಪ್ಪಿನ ಸಾಥಿ ಅಮಿತ್ ಕೂಡ ಆಸಕ್ತಿ ತೋರ್ಸಿದ್ರಿಂದ ಪ್ಲಾನು ಫಿಕ್ಸಾಯ್ತು.
ಅಂದುಕೊಂಡಿದ್ದೊಂದು ಆಗಿದ್ದೊಂದು:
ತುಮಕೂರಿನ ಹತ್ರದ ರಾಮನಗರ ಬೆಟ್ಟ ನೋಡಿದೀನಿ. ಅದಾದ್ರೆ ಬರಲ್ಲ ಅಂತ ರಾಜಣ್ಣ ಹೇಳ್ತಿದ್ರು. ಮತ್ತೊಂದು ರಾಮನಗರಕ್ಕೆ ಬರ್ತಾರಾ ಇಲ್ವಾ ಅಂತ ಖಾತ್ರಿ ಮಾಡದೇ ಹೋದ್ರೂ :-) ಅವರು ಬರಲಿ ಬರದಿರ್ಲಿ, ಯಾವ ರಾಮನಗರಕ್ಕೆ ಹೋಗ್ಬೇಕು ಅಂತ ನಮಗೆ ಪಕ್ಕಾ ಆಗಿದ್ರಿಂದ
ಪ್ರವೀಣ ಮತ್ತು ಶ್ರೀನಂದನ್ನರ ಜೊತೆ ಕೇಳಿ ಕರೆಕ್ಟಾದ ಜಾಗ ಎಲ್ಲಿದೆ ಅಂತ ಖಾತ್ರಿ ಮಾಡಿಕೊಂಡು ಅದರ ಜಿ.ಪಿ.ಎಸ್ ಲೊಕೇಶನ್ನನ್ನೇ ವಾಟ್ಸಾಪಿನಲ್ಲಿ ಶೇರ್ ಮಾಡಾಯ್ತು ! ಪ್ರವೀಣನ ಗೆಳೆಯನ್ಯಾರೋ ಈ ಬೆಟ್ಟ ಹತ್ತೋಕೆ ೨ ಘಂಟೆ ಬೇಕು ಅಂದಿದ್ರಿಂದ ಮತ್ತು ಈ ಬೆಟ್ಟದ ಬಗ್ಗೆಯಿದ್ದ ಗೂಗಲ್ಲಿನ ಚಿತ್ರಗಳನ್ನ ನೋಡಿ ಇಡೀ ಬೆಟ್ಟ ಇದೇ ತರ ಇರ್ಬೇಕು ಅಂದ್ಕೊಂಡು ಅಮಿತ್ ಟ್ರಿಪ್ಪಿಂದ ಹೊರಬಿದ್ದ! ಬ್ಲಾಗಲ್ಲಿ ಬರೆದೋರು ಇಲ್ಲಿನ ರಣಹದ್ದು ನೋಡ್ಬೇಕು ಅಂದ್ರೆ ೬ ಘಂಟೆಗೆ ಬರ್ಬೇಕು ಅಂತಿದ್ರು. ಹಾಗಾಗಿ ನಾಲ್ಕು ಘಂಟೆಗೆ ಬೆಂಗಳೂರು ಬಿಡೋದು. ಈ ಪ್ಲಾನು ಇಷ್ಟವಾದ ಶ್ರೀ ಕೃಷ್ಣ ಅವತ್ತಿನ ಟ್ರಿಪ್ಪಿಗೆ ಒಪ್ಕೊಂಡಾಗ ಅಲ್ಲಿಗೆ ಹೋಗೋರ ಸಂಖ್ಯೆ ಮತ್ತೆ ನಾಲ್ಕಕ್ಕೆ ಬಂತು. ರಣಹದ್ದುಗಳನ್ನ ನೋಡ್ಜೊಂಡು ಆಮೇಲೆ ದೇವಸ್ಥಾನ ನೋಡೋದು ಅಂತ ಮೊದ್ಲು ಪ್ಲಾನ್ ಹಾಕಿದ್ವಿ. ಅಷ್ಟರಲ್ಲಿ ಪ್ರವೀಣ್ ತಡೀರಿ ನನ್ನ ಫ್ರೆಂಡೊಬ್ಬ ಅಲ್ಲೇ ಕೆಲ್ಸ ಮಾಡ್ತಿದ್ದಾನೆ. ಒಮ್ಮೆ ಅವನನ್ನ ವಿಚಾರ್ಸೋಣ ಅಂತ ಅವನ್ನನ್ನ ಕೇಳೋತನಕ ದೇವಸ್ಥಾನ ಇರೋದೇ ರಣಹದ್ದು ವನ್ಯಜೀವಿ ಧಾಮದಲ್ಲಿ . ಆ ಧಾಮ ತೆಗೆಯೋದು ೯ ಘಂಟೆಗೆ ಅಂತ ಗೊತ್ತಾಯ್ತು ! ಯಾವ್ದೋ ಬ್ಲಾಗ್ ನಂಬ್ಕೊಂಡು ನಾವು ಆರು ಘಂಟೆಗೆ ಅಲ್ಲಿದ್ದಿದ್ರೆ ನಮ್ಮ ಕತೆಯೇ ಬೇರೆ ಆಗಿರ್ತಿತ್ತು ! ಗೂಗಲ್ಲಿನಲ್ಲಿ ರಣಹದ್ದು ವನ್ಯಧಾಮ ಅಂತ ತೋರಿಸ್ತಿದ್ದ ಜಾಗ ನಂಬ್ಕೊಂಡಿದ್ರೂ ತಪ್ಪು ಜಾಗಕ್ಕೆ ಹೋಗ್ತಿದ್ವಿ ! ಪ್ರವೀಣ ಇಷ್ಟು ಮಾಹಿತಿ ಕಲೆಹಾಕೋ ಹೊತ್ತಿಗೆ ನಾನು ಶ್ರೀನಂದನ್ ಆ ಜಾಗದ ಬಗೆಗಿನ ಗೂಗಲ್ ಮ್ಯಾಪಿನ ಬೇರೆ ಮಾಹಿತಿ ಹುಡುಕುತ್ತಾ ಅದು ತೆಗೆಯೋ ಸಮಯ ಹುಡುಕಿದ್ವಿ. ಅದೂ ಪ್ರವೀಣ ಕೊಟ್ಟಿದ್ದ ಮಾಹಿತಿಗೆ ತಾಳೆಯಾಗುತ್ತಿತ್ತು ! ಇಷ್ಟೆಲ್ಲಾ ಹುಡುಕೋ ಹೊತ್ತಿಗೆ ಆ ಜಾಗ ತೆಗೆಯೋದೇ ಒಂಭತ್ತಕ್ಕೆ ಮತ್ತೆ ಹತ್ತೋಕೆ ೨ ಘಂಟೆ ಬೇಕು ಅಂದ್ರೆ ತನಗಾಗೋಲ್ಲ ಅಂತ ಶನಿವಾರ ಆಫೀಸಿನ ಕೆಲಸವಿದ್ದ ಶ್ರೀನಂದನ್ ಪ್ಲಾನಿಂದ ಡ್ರಾಪಾದ್ರು. ಇದೊಳ್ಳೇ ಕತೆಯಾಯ್ತಲ್ಲ . ಕೊನೆಗೆ ಮುಂಚಿನ ವಾರ ಪ್ಲಾನ್ ಮಾಡಿದಂಗೆ ಈ ಸಲವೂ ನಾನು ಕೃಷ್ಣನೇ ಹೋಗಬೇಕಾಗುತ್ತಾ ಅಂತ ಅಂದ್ಕೊಳ್ಳೋ ಹೊತ್ತಿಗೆ ರಾಜಣ್ಣ ತಮ್ಮ ಪ್ಲಾನು ಕ್ಯಾನ್ಸಲ್ ಆಯ್ತು. ನಾ ಬರ್ತೀನಿ ನಿಮ್ಮ ಜೊತೆಗೆ ಅಂತ ಫಿಲ್ಮ್ ಹೀರೋ ರೇಂಜಿಗೆ ಸಸ್ಪೆಂಸ್ ಕೊಟ್ರು . ಅಲ್ಲಿಗೆ ಕೊನೆಗೂ ಟ್ರಿಪ್ಪಿಗೆ ನಿಕ್ಕಿಯಾದ ಜನರ ಸಂಖ್ಯೆ ನಾಲ್ಕಾಯ್ತು!
ನಾಲ್ಕು ದಿಕ್ಕಿಂದ ನಾಲ್ಕು ಜನ:
ಮಾರತ್ತಳ್ಳಿ ಕಡೆಯಿಂದ ಬರೋ ನಾನು, ಕೆ.ಆರ್ ಪುರಂ ಕಡೆಯಿಂದ ಬರೋ ಶ್ರೀಕೃಷ್ಣ ಕಾರ್ಪೋರೇಷನ್ ಸರ್ಕಲ್ಲಿನತ್ರ ಸಿಗೋದು ಅಂತ ಮಾತಾಡ್ಕೊಂಡ್ವಿ. ಯಲಹಂಕಾದಿಂದ ಬರೋ ರಾಜಣ್ಣ ಕೆಂಗೇರಿ ಹತ್ರ ಸಿಗೋದು ಅಂತ ಮಾತಾಗಿದ್ರೂ ಬೆಳಗ್ಗೆ ಎಷ್ಟು ಫೋನ್ ಮಾಡಿದ್ರೂ ಅವ್ರು ಎತ್ತುತ್ತಿರಲಿಲ್ಲ ! ಹೀರೋ ರೇಂಜಿಗೆ ಅವರು ಬ್ಯುಸಿಯಾದ್ರೆ ಹೀರೋ ಕಾಲ್ ಶೀಟ್ ಬುಕ್ ಮಾಡಿ ಬೇರೆಲ್ಲಾ ವ್ಯವಸ್ಥೆ ಮಾಡಿಕೊಂಡ್ರೂ ಪತ್ತೆಯಿಲ್ಲದ ಹೀರೋಗೋಸ್ಕರ ಕಾಯ್ತಿರೋ ಡೈರೆಕ್ಟರಿನಂತೆ ನಾನು ! ಕೊನೆಗೂ ನಾನೂ ಹೊರಟಿದ್ದೇನೆ ಅನ್ನೋ ಮೆಸೇಜು ನಾ ಕಾರ್ಪೋರೇಷನ್ನಿನ ಬಳಿಯಿದ್ದಾಗ ಸಿಕ್ಕಿದ್ರಿಂದ ಚಿತ್ರಕ್ಕೆ ದುಡ್ಡು ಹಾಕಿದ ನಿರ್ಮಾಪಕನಂತೆ ನನ್ನ ಮುಖ ಅರಳಿತ್ತು :-)
ಪ್ರವೀಣ ತಮ್ಮೂರಿಗೆ ಹದಿನೈದೇ ಕಿ.ಮೀ ಇದು. ಬಿಡದಿಗೆ ಬಂದ ನಂತರ ತನಗೆ ಫೋನ್ ಮಾಡಿ ತಾ ಬರ್ತೀನಿ ಅಂದಿದ್ರಿಂದ ಅವನ ಬಗ್ಗೆ ತಲೆಬಿಲಿಯಿರ್ಲಿಲ್ಲ. ನಾಲ್ಕು ಮೂಲೆಯಿಂದ ಹೊರಟಿದ್ದ ನಾಲ್ಕು ಜನ ರಾಮನಗರದಲ್ಲಿ ಸೇರೋ ಘಳಿಗೆಯ ನಿರೀಕ್ಷೆ ನಮ್ಮ ಪಯಣವನ್ನು ಮುಂದುವರೆಸುತ್ತಿತ್ತು.
ಬಿಡದಿ ತಟ್ಟೆಯಿಡ್ಲಿ ಮತ್ತು ಪ್ಲಾಸ್ಟಿಕ್ಕು:
ಬಿಡದಿಯಲ್ಲಿ ಮಾಡೋ ತಟ್ಟೆಯಿಡ್ಲಿಗಳನ್ನ ಪ್ಲಾಸ್ಟಿಕ್ ಶೀಟುಗಳಲ್ಲಿ ಮಾಡ್ತಾರೆ. ಅದನ್ನ ತಿನ್ನೋರ ಹೊಟ್ಟೆಗೆ ಹೋಗೋ ಆ ಇಡ್ಲಿಗಳಿಂದ ಕ್ಯಾನ್ಸರ್ ಬರುತ್ತೆ ಅಂತ ಯಾವುದೋ ಇಂಗ್ಲೀಷ್ ಪತ್ರಿಕೆಯಲ್ಲಿ ಯಾರೋ ಬರೆದಿದ್ರು. ಅದನ್ನೋದಿದ್ದ ಶ್ರೀಕೃಷ್ಣ ಬಿಡದಿಯಲ್ಲಿ ಇಡ್ಲಿ ಮಾತ್ರ ತಿನ್ನೋದು ಬ್ಯಾಡ. ಬೇಕಾದ್ರೆ ದೋಸೆ ತಿನ್ನೋಣ ಅಂತ. ಈ ಪೇಪರಿನ ವರದಿಗಳು ಬಿಡದಿಯ ಸಾಮಾನ್ಯ ಹೋಟೇಲ್ಲುಗಳ ಮೇಲೆ ಹೊಡೆಯೋ ದೊಡ್ಡ ಹೋಟೇಲುಗಳ ಹುನ್ನಾರ ಅಂತ ಪ್ರವೀಣನ ವಾದ.ಏನಾದ್ರಾಗಲಿ ನೋಡೇ ಬಿಡೋಣ ಅಂತ ಬಿಡದಿಯಲ್ಲಿ ಒಂದು ಹೋಟೇಲಿನಲ್ಲಿ ತಿಂಡಿಗೆ ನಿಲ್ಲಿಸಿದ್ವಿ.
One of the Tatte Idli hotels in Bidadi |
ಅಲ್ಲಿ ಸುಮಾರಷ್ಟು ಜನ ತಟ್ಟೆಯಿಡ್ಲಿ ತಿಂತಾ ಇದ್ರು. ಯಾವುದೇ ತಲೆಬಿಸಿಯಿಲ್ದೆ. ಅದರಲ್ಲಿ ಸುಮಾರಷ್ಟು ಬೈಕರ್ರುಗಳು, ಕಾರಿನವ್ರು, ಮುದುಕರು, ಮಕ್ಕಳು ಎಲ್ಲಾ ಇದ್ರು. ಇಲ್ಲಿನ ತಟ್ಟೆಯಿಡ್ಲಿಯ ಬಗ್ಗೆ ಓದಿದವರೂ ಅಲ್ಲಿ ಇದ್ದಿರಬಹುದೇನೋ. ನೀ ಬೇಕಾದ್ರೆ ದೋಸೆ ತಗೋ, ನಾ ಇಡ್ಲಿ ತಗೋತೀನಿ ಅಂತ ಮನಸ್ಸಲ್ಲೇ ಅಂದುಕೊಂಡ ನಾನು ಕೃಷ್ಣನ ಜೊತೆ ಬಿಲ್ಲಿಂಗ್ ಕೌಂಟರಿನತ್ರ ಹೋದೆ. ಪಕ್ಕದಲ್ಲೇಿ ಇಡ್ಲಿ ಎರೆಯುತ್ತಿದ್ದ ಅಡಿಗೆ ಮನೆಯಿತ್ತು. ಅಲ್ಲಿದ್ದ ಅಡಿಗೆಯವರು ನಮ್ಮ ಕಣ್ಣೆದುರೇ ಸ್ಟೈನ್ ಲೆಸ್ ಸ್ಟೀಲಿನ ಇಡ್ಲಿ ಪಾತ್ರೆಗಳಲ್ಲಿ ಇಡ್ಲಿಯ ಹಿಟ್ಟು ಸುರಿದು ಬೇಯೋಕೆ ಇಡ್ತಿದ್ರು. ಬೆಂದ ಇಡ್ಲಿಗಳನ್ನ ನಮ್ಮ ಕಣ್ಣೆದುರೇ ತೆಗೆದು ತಟ್ಟೆಗೆ ಬಾಳೆಲೆಯ ಮೇಲೆ ಹಾಕಿ ಕೊಡ್ತಿದ್ರು. ಪ್ಲಾಸ್ಟಿಕ್ ಹಾಳೆಯೂ ಇಲ್ಲ. ಎಂತದೂ ಇಲ್ಲ !
Tatte Idli being made in Bidadi without using Plastic sheet. Idli made directly on stainless sheet plates |
ಕೃಷ್ಣನ ಮುಖ ನೋಡಿದೆ. ಖುಷಿಯಾಗಿದ್ದ ಅವ. ತಗೋ ಅಂತ ಎರಡು ಪ್ಲೇಟು ತಟ್ಟೆಯಿಡ್ಲಿ, ವಡೆ ತಗೊಂಡ್ವಿ :-) ಹಂಗಾದ್ರೆ ಪೇಪರಿನಲ್ಲಿ ಬಂದ ಮಾಹಿತಿ ಪೂರ್ಣ ಸುಳ್ಳೇ ? ಅದು ಹೋಟೇಲಿನವರ ಹೊಟ್ಟೆಯ ಮೇಲೆ ಹೊಡೆಯೋಕೆ ಮಾಡಿದ ಹುನ್ನಾರವೇ ? ಗೊತ್ತಿಲ್ಲ. ಬರೆದವರಿಗೆ ಯಾವುದೋ ಹೋಟೇಲ್ಲಿನಲ್ಲಿ ಆ ತರ ಕಂಡಿರಲೂ ಬಹುದು. ಪ್ಲಾಸ್ಟಿಕ್ಕಿನಿಂದ ಕ್ಯಾನ್ಸರ್ ಬರುತ್ತೆ ಎಂಬ ಮಾಹಿತಿಯನ್ನಾದರಿಸಿ ಆ ಪುಣ್ಯಾತ್ಯ ಬಿಡದಿಯಲ್ಲಿ ಎಲ್ಲೇ ಇಡ್ಲಿ ತಿಂದರೂ ಕ್ಯಾನ್ಸರ್ ಬರುತ್ತೆ ಅಂತ ಬರೆದಿರಲೂ ಬಹುದು ! ಆದರೆ ಸ್ವತಃ ಕಣ್ಣೆದುರೇ ಕಾಣದೇ ಯಾವುದನ್ನೂ ನಂಬಬೇಡ ಅನ್ನೋ ಮಾತು ಮತ್ತೊಮ್ಮೆ ಸತ್ಯವಾಗೋಯ್ತು. ಬಿಡದಿಯ ಇಡ್ಲಿಗಳಿಂದ ಏನೂ ಆಗೋಲ್ಲವೆನ್ನೋದೂ ಖಾತ್ರಿಯಾಗೋಯ್ತು.
ರಾಮನಗರದ ಹನುಮಂತ:
Iconic Hanuman statue where we have to deviate from main highway to reach Ramadevarabetta |
ಬಿಡದಿಗೆ ಬರೋಕೆ ಮುಂಚೆ ಸುಮಾರು ಕಡೆ ಫೋನ್ ಮಾಡಿದ್ರೂ ರಾಜಣ್ಣ ತೆಗೀತಿರ್ಲಿಲ್ಲ. ಹಂಗಾಗಿ ಪ್ರವೀಣಂಗೆ ಫೋನ್ ಮಾಡಿ ನಾವು ಬಿಡದಿಗೆ ಬಂದಿದೀವಿ. ತಿಂಡಿ ತಿಂದ್ಕೊಂಡು ಹೊರಡ್ವೀವಿ. ನೀನು ಹೊರಡು ಅಂತ ಹೇಳಾಯ್ತು. ತಿಂಡಿ ಆರ್ಡರ್ ಮಾಡಿ ರಾಜಣ್ಣಂಗೆ ಮತ್ತೆ ಫೋನ್ ಮಾಡಿದ್ರೆ ನಾನು ಬಿಡದಿ ದಾಟಿ ಹೋಗಾಯ್ತು ಆಗ್ಲೇ ಅನ್ಬೇಕಾ ? ಸರಿ. ಅಲ್ಲೇ ಎಲ್ಲಾದ್ರೂ ತಿಂಡಿ ತಿನ್ನಿ. ರಾಮನಗರದಲ್ಲಿ ಸಿಗೋಣ ಅಂತ ಇಟ್ಟಾಯ್ತು ಸಸ್ಪೆಂಸ್ ರಾಜಣ್ಣನ ಫೋನನ್ನ. ರಾಮನಗರ ಬೆಟ್ಟಕ್ಕೆ ಹೋಗೋದಾದ್ರೆ ರಾಮನಗರ ನಗರಕ್ಕೆ ಹೋಗೋದು ಬೇಡ. ಸ್ವಲ್ಪ ಮುಂಚೆಯೇ ಬಲಕ್ಕೆ ತಿರುಗಬೇಕು ಅಂತ ಶ್ರೀಕೃಷ್ಣ ಹೇಳ್ತಾ ಇದ್ದ. ಹಾಗೇ ಹೋಗ್ತಿದ್ದಾಗ ಬಲಗಡೆ ಒಂದು ಹನುಮಂತನ ದೊಡ್ಡ ವಿಗ್ರಹ ಕಾಣಿಸ್ತು. ಅದರ ಪಕ್ಕದಲ್ಲೇ ಒಂದು ಯೂ ಟರ್ನಿತ್ತು. ಆದರೆ ಗೂಗಲ್ಲಿನಲ್ಲಿ ಇನ್ನೂ ಇನ್ನೂರು ಮೀಟರ್ ಮುಂದೆ ತೋರಿಸ್ತಾ ಇದೆಯಲ್ಲ ಯೂ ಟರ್ನು ಅಂತ ಮುಂದೆ ಹೋದ್ವಿ. ಅಲ್ಲಿ ಟರ್ನೇನೋ ಇತ್ತು. ಆದ್ರೆ ಅದು ಯೂ ಟರ್ನಾಗಿರಲಿಲ್ಲ ! ಅಲ್ಲೇ ಕೆಲವರು ತಿರುಗಿಸುತ್ತಿದ್ದಿದ್ದ ನೋಡಿ, ಗೂಗಲ್ಲಿಗೆ ಶಾಪ ಹಾಕುತ್ತಾ ಹನುಮನ ಗುಡಿಗೆ ಬಂದ್ವಿ. ಅಲ್ಲಿಂದ ಮತ್ತೆ ಪ್ರವೀಣಿಗೆ ಫೋನ್ ಮಾಡಿದ್ರೆ ಆತ ಹೊರಟಿರಲಿಲ್ಲ. ರಾಜಣ್ಣಂಗೆ ಫೋನ್ ಮಾಡಿದ್ರೆ ಈಗಷ್ಟೇ ತಿಂಡಿ ತಿಂದು ಹೊರಡ್ತಾ ಇದೀನಿ ಅನ್ನಬೇಕೇ ? ! ತಗಳ್ಳಪ್ಪ. ಸಸ್ಪೆಂಸಿನ ಮೇಲೆ ಸಸ್ಪೆಂಸು. ಸರಿ, ಇಲ್ಲೊಂದು ಹನುಮಂತನ ವಿಗ್ರಹ ಕಾಣುತ್ತೆ. ಅಲ್ಲೇ ನಿಂತಿರ್ತೀವಿ ಬನ್ನಿ ಅಂದೆ. ಹೂಂ ಅಂದ್ರು. ಬೆಳಗ್ಗಿನಿಂದ ಟೀ ಸಿಕ್ಕದೇ ಟೀಗಾಗಿ ಪರಿತಪಿಸುತ್ತಿದ್ದ ಶ್ರೀಕೃಷ್ಣನಿಗೆ ಟೀ ಹುಡುಕುತ್ತಾ ಅಲ್ಲಿಂದ ಮುಂದೆ ಬಂದೆವು. ಬೈಕಲ್ಲಿದ್ದ ಅವ ಸುಮಾರು ದೂರದವರೆಗೂ ಹೋಗಿ ಒಂದೂ ಟೀ ಅಂಗಡಿಯಿಲ್ಲ ಈ ಊರಲ್ಲಿ ಅಂತ ಆಶ್ಚರ್ಯಪಡುತ್ತಾ ವಾಪಾಸ್ ಬರುತ್ತಿದ್ದ. ನಡ್ಕೊಂಡು ಬರ್ತಿದ್ದ ನನಗೆ ಒಂದು ಬೇಕರಿಯಲ್ಲಿ ಟೀ ಕ್ಯಾನು ಹೊರಗಿಟ್ಟಿದ್ದು ಕಂಡಿತ್ತು. ಅಲ್ಲಿಗೆ ಹೋಗಿ ಟೀ ಇದ್ಯಾ ಅಂದ್ರೆ ಅವ್ರೂ ಇಲ್ಲಾ ಅನ್ನಬೇಕೇ ? ಟೀ , ಕಾಫಿ ಏನೂ ಇಲ್ಲದಿದ್ರೂ ಖಾಲಿ ಕ್ಯಾನು ಹೊರಗೇಕೆ ಇಟ್ಟಿದ್ದೀರಾ ಅಂದ್ರೆ ಅದು ಹಂಗೇ ಅಂತೆ ! ನಾವು ಆ ಹನುಮಂತನ ವಿಗ್ರಹದ ಕೆಳಗಿದ್ದ ಸಣ್ಣ ಗುಡಿಗೆ ಹೊಕ್ಕು, ಈ ಟೀ ಹುಡುಕಾಟ ನಡೆಸಿದ್ರೂ ರಾಜಣ್ಣನ ಸುದ್ದಿಯಿಲ್ಲ. ಇನ್ನು ಇಲ್ಲಿ ಕಾದು ಉಪಯೋಗವಿಲ್ಲ. ಇಲ್ಲಿಂದ ೨.೯ ಕಿ.ಮೀ ಮುಂದೆ ಇರೋ ರಣಹದ್ದು ವನ್ಯಜೀವಿ ವಿಭಾಗದ ಗೇಟತ್ರನಾದ್ರೂ ಹೋಗೋಣ. ಅದೃಷ್ಟವಿದ್ರೆ ಅಲ್ಲೇನಾದ್ರೂ ಕಾಣಬಹುದೇನೋ ಅಂದೆ. ಸರಿ ಅಂತ ಬೈಕ್ ಸ್ಟಾರ್ಟ್ ಮಾಡಿ ಹೊರಡೋ ಹೊತ್ತಿಗೆ ರಾಜಣ್ಣನ ಫೋನು. ನೀವೆಲ್ಲಿದೀರಾ ? ನಾನು ವನ್ಯಜೀವಿ ವಿಭಾಗದ ಗೇಟ್ ಹತ್ರ ಕಾಯ್ತಾ ಇದ್ದೀನಿ ಅನ್ಬೇಕೆ ? ಇದೊಳ್ಳೆ ಕತೆಯಾಯ್ತಲ್ಲ. ಬರ್ತೀವಿ ತಡೀರಿ. ಅಲ್ಲೇ ಇರಿ ಅಂತಂದು ಅತ್ತ ಸಾಗಿದ್ವಿ. ಹಿಂದಿನ ದಿನದಿಂದ ಹೊಸ ಹೊಸ ಸಸ್ಪೆಂಸ್ ಕೊಡ್ತಿದ್ದ ರಾಜಣ್ಣನ ಸಸ್ಪೆಂಸ್ ಸರಣಿ ಮತ್ತು ರಾಮನಗರ ಬೆಟ್ಟ ಚಾರಣದ ಮುಂದಿನ ಅನುಭವಗಳು ಮುಂದಿನ ಭಾಗದಲ್ಲಿ ಮುಂದುವರಿಯುತ್ತೆ
Note:
1. ramadevarabetta vulture sanctuary(incorrect) ==> suggested correction in google maps already and waiting for the correction to be approved by next level admins.2. Ramadevara Betta Viewpoint(correct) ==> Place to be bookmarked if you want to visit there next time as would be explained in next blogpost
ಕ್ರಾಸ್ ಕಂಟ್ರಿ ರೇಸ್ ತರಹ.. ಬೆಟ್ಟ ಗುಡ್ಡ ಕಾಡು ಮೇಡು ಅಲೆದು ಬರುವ ವಾಹನಗಳ ಹಾಗೆ.. ನಿಮ್ಮ ಆರಂಭಿಕ ಟ್ವಿಸ್ಟ್ ಸಕತ್ ಇದೆ.. ಹೌದು ಕೆಲವೊಮ್ಮೆ ಈ ರೀತಿಯ ಯಡವಟ್ಟು ಆರಂಭವೇ ಒಳ್ಳೆಯ ಪ್ರವಾಸಕ್ಕೆ ನಾಂದಿಯಾಗುವುದು.. ಸೊಗಸಾದ ವಿವರ.. ಒಂದೂ ಸೂಜಿ ಮೊನೆಯನ್ನು ಬಿಡದ ಹಾಗೆ ಎಲ್ಲವನ್ನು ವಿವರಿಸುತ್ತಾ ಬಂದಿರುವ ನಿಮ್ಮ ಬರಹ ಗಬ್ಬರ್ ಸಿಂಗ್ ಘರ್ಜನೆಗೆ ಕಾಯುತ್ತಿದೆ..
ReplyDeleteಸೂಪರ್ ಬರಹ ಪ್ರಶಸ್ತಿ
Thanks a lot Sreekanth anna ������
ReplyDelete