Friday, August 3, 2018

ಜೋಗ ಜಲಪಾತ

ಬೆಂಗಳೂರಲ್ಲಿರೋ ಸುಮಾರಷ್ಟು ಗೆಳೆಯರು ಜೋಗ ಜಲಪಾತಕ್ಕೆ ಹೋಗೋದು ಹೇಗೆ ಅಂತ ಕೇಳ್ತಿದ್ರು. ಜೋಗಕ್ಕೆ ಹೋಗೋ ಹಾದಿಯ ಜೊತೆ ಜೋಗದ ಸುತ್ತಮುತ್ತಲಿರೋ ಕಲ್ಸಂಕ, ನಿಪ್ಲಿ ಜಲಪಾತ, ದಬ್ಬೆ ಜಲಪಾತ, ಭೀಮೇಶ್ವರಗಳ ಬಗ್ಗೆಯೂ ಹೇಳುತ್ತಿದ್ದೆ. ಮುಂದಿನ ಸಲ ಜೋಗಕ್ಕೆ ಹೋಗುವವರಿಗೆ ಸಹಾಯಕವಾಗಬಹುದಾದ ಈ ತರದ ಹಲವು ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸುವ ಪ್ರಯತ್ನವೇ ಈ ಲೇಖನ

ಜೋಗದಲ್ಲಿರೋ ಜಲಪಾತಗಳೆಷ್ಟು? 
ಜೋಗಕ್ಕೆ ಹೋಗೋ ಹೆಚ್ಚಿನ ಜನರಿಗೆ ಅದರಲ್ಲಿ ನಾಲ್ಕು ಜಲಪಾತಗಳಿವೆಯೆಂದು ತಿಳಿದಿದ್ದರೂ ಅದರ ಹೆಸರು ತಿಳಿದಿರೋಲ್ಲ. ಹೆಸರು ತಿಳಿದಿದ್ದರೂ ಅದರಲ್ಲಿ ಯಾವ್ಯಾವುದರ ಹೆಸರು ಯಾವ್ಯಾವುದೆಂದು ತಿಳಿದಿರೋಲ್ಲ.
4 Falls located in Joga
ಮೇಲಿನ ಚಿತ್ರದಲ್ಲಿರುವಂತೆ ಎಡದಿಂದ ಮೊದಲನೆಯ ಜಲಪಾತದ ಹೆಸರು ರಾಜ. ರಾಜಾರೋಷವಾಗಿ ೮೬೦ ಅಡಿಯ ಮೇಲಿಂದ ಬೀಳುವ ಕಾರಣಕ್ಕೆ ಅದರ ಹೆಸರು ಹಾಗಿರಬಹುದು. ನಂತರ ಸಿಗೋದು "ರೋರರ್". ಮಧ್ಯದಿಂದ ಬೀಳುತ್ತ ರಾಜನನ್ನು ಸೇರುತ್ತೆ ಇದು. ರಭಸವಾದ ಧಾರೆಯಾಗಿ ಬೀಳೋ ಮೂರನೆಯ ಜಲಪಾತ "ರಾಕೆಟ್". ಅದು ಬೀಳೋ ವೇಗ ನೋಡಿ ಹಾಗೆ ಹೆಸರಿಟ್ಟಿರಬಹುದೇನೋ. ಬೆಟ್ಟದ ಮೇಲಿಂದ ನಿಧಾನವಾಗಿ ಬೀಳುವ ಕೊನೆಯ ಜಲಪಾತದ ಹೆಸರು "ರಾಣಿ" . ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ೨೫೩ ಮೀಟರ್ ಮೇಲಿಂದ ಬೀಳೋ ಈ ಜಲಪಾತಕ್ಕೆ ಮೂರನೆಯ ಸ್ಥಾನ ಅನ್ನುತ್ತೆ ಹಲವು ಮೂಲಗಳು.

ಜೋಗ ಜಲಪಾತದ ವೀಕ್ಷಣಾ ಸ್ಥಳಗಳು: 
೧. ಜಲಪಾತದೆದುರು:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯವರು ಜೋಗ ಜಲಪಾತದೆದುರೇ ಕೆಲವು ಶೆಡ್ಗಳನ್ನು, ವೀಕ್ಷಣಾ ತಾಣಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ ಎಂತಹ ಜೋರು ಮಳೆ ಸುರಿಯುತ್ತಿದ್ದರೂ ಅಲ್ಲಿ ನಿಂತು ಜೋಗದ ಭೋರ್ಗರೆತವನ್ನು ಆನಂದಿಸಬಹುದು. ಮಳೆಗಾಲದಲ್ಲಿ ಮಳೆ ಉಧೋ ಎಂದು ಸುರಿಯುತ್ತಿದ್ದರೆ ನಿಮಿಷಗಟ್ಟಲೇ ಜಲಪಾತದೆದುರು ಮಂಜ ಪರದೆ ಕವಿದಿರುತ್ತೆ. ಜೋರಾಗಿ ಗಾಳಿ ಬೀಸಿದಾಗ ಅಥವಾ ಮಳೆ ಹೆಚ್ಚು, ಕಮ್ಮಿಯಾದಾಗ ಮಂಜ ಪರದೆ ಸರಿಯುತ್ತೆ. ಆಗ ಸಿಗುವ ದೃಶ್ಯವೇ ಅದ್ಭುತ

೨. ಜಲಪಾತದ ಕೆಳಗಿಂದ:
ಮುಂಚೆಯೆಲ್ಲಾ ಜಲಪಾತದ ಬುಡಕ್ಕೆ ಹೋಗಬೇಕೆಂದರೆ ಬೇಸಿಗೆಯಲ್ಲಿ ಜಲಪಾತದ ನೀರು ಬತ್ತುವವರೆಗೂ ಕಾಯಬೇಕಿತ್ತು. ಅದೂ ಸರಿಯಾದ ದಾರಿಯಿಲ್ಲದೇ ಕಲ್ಲ ಮೆಟ್ಟಿಲುಗಳ, ಬಂಡೆಗಳನ್ನಿಳಿದು ತಲುಪಬೇಕಿತ್ತು.ಈಗ ಪ್ರವಾಸೋದ್ಯಮ ಇಲಾಖೆಯವರು ಕೆಳಗಿನವರೆಗೂ ಮೆಟ್ಟಿಲುಗಳ ನಿರ್ಮಿಸಿದ್ದಾರೆ. ಸುಮಾರು ಸಾವಿರದನೈರು ಮೆಟ್ಟಿಲುಗಳ ಇಳಿಯಲು ಇಪ್ಪತ್ತು ನಿಮಿಷ ಸಾಕಾದರೆ ಹತ್ತೋಕೆ ಅರ್ಧಗಂಟೆ ಬೇಕಾಗುತ್ತೆ ಅಂದುಕೊಳ್ಳಿ. ನಿಧಾನವಾಗಿ, ಅಲ್ಲಲ್ಲಿ ಸುಧಾರಿಸಿಕೊಂಡು, ಫೋಟೋ ತೆಗೆದುಕೊಂಡು ಹತ್ತಿ ಇಳಿದ್ರೂ ಸುಮಾರು ಒಂದು ಘಂಟೆ ಇಳಿಯೋಕೆ ಮತ್ತೆ ಒಂದು ಘಂಟೆ ಹತ್ತೋಕೆ ಬೇಕಾಗಬಹುದು. ಬೆಳಿಗ್ಗೆ ಒಂಭತ್ತರಿಂದ ಸಂಜೆ ನಾಲ್ಕರವರೆಗೆ ಕೆಳಗಿಳಿಯೋ ಗೇಟು ತೆಗೆದಿರುತ್ತೆ. ಜನ ಹೆಚ್ಚಿದ್ದರೆ ನಾಲ್ಕೂವರೆಯವರೆಗೂ ಬಿಡುತ್ತಾರೆ ಕೆಲ ಸಲ. ಆದರೆ ಮಳೆಗಾಲದಲ್ಲಿ ಸಂಜೆ ಬೇಗ ಕತ್ತಲಾಗೋದ್ರಿಂದ ನಾಲ್ಕರವಳಗೇ ಗೇಟಿಂದ ಕೆಳಗಿಳಿಯೋದು ಉತ್ತಮ. ಕೆಳಗಡೆಯೂ ಇಬ್ಬರು ಗಾರ್ಡುಗಳು ಇದ್ದು ಮುಂದಿರೋ ದೊಡ್ಡ ಬೇಲಿಯನ್ನೂ ದಾಟಿ ಜಲಪಾತದ ಬುಡಕ್ಕೆ ಹೋಗದಂತೆ ತಡೆಯುತ್ತಾರೆ.ಜೋಗ ಜಲಪಾತದ ಬುಡದಿಂದ ಬ್ರಿಟಿಷ್ ಬಂಗಲೋವರೆಗೆ ಹೋದ ನಮ್ಮ ಪಯಣ ಹೇಗಿತ್ತು ಅನ್ನೋದನ್ನ ಈ ವೀಡಿಯೋದಲ್ಲಿ ನೋಡಬಹುದು

೩. ಹೋಟೆಲ್ ಯಾತ್ರಿ ನಿವಾಸ್:
ಜಲಪಾತದ ಬುಡದಿಂದ ನೋಡುವವರಿಗೆ ಮೇಲ್ಗಡೆ ಬಲಕ್ಕೊಂದು ಹೋಟೆಲ್ ಕಾಣುತ್ತೆ. ಸುಮಾರು ಜನ ಅದೇ ಬ್ರಿಟಿಷ್ ಬಂಗಲೋ ಅಂದುಕೊಂಡಿರುತ್ತಾರೆ. ಆದರೆ ಬ್ರಿಟಿಷ್ ಬಂಗಲೋ ಅದಲ್ಲ್. ಎಡಕ್ಕೆ ಕಾಣೋ ಮತ್ತೊಂದು ಜಾಗ ಬ್ರಿಟಿಷ್ ಬಂಗಲೋ. ಜಲಪಾತದಿಂದ ಹೊರಬಂದು ಎಡಕ್ಕೆ ಸಿಗೋ ರಸ್ತೆಯಲ್ಲಿ ಬ್ರಿಟಿಷ್ ಬಂಗಲೋ ಕಡೆಗೆ ಹೊರಟಾಗ ಸಿಗೋ ಮೊದಲ ತಾಣ ಹೋಟೆಲ್ ಯಾತ್ರಿ ನಿವಾಸ್. ಅಲ್ಲಿ ನಿಂತಾಗ ಜಲಪಾತದ ತಲೆಯ ಮೇಲಿಂದ ಅದು ಹೇಗೆ ಬೀಳುತ್ತೆ ಅಂತ ಕಾಣಬಹುದು


೪. ಬ್ರಿಟಿಷ್ ಬಂಗಲೋ
ಅಲ್ಲಿಂದ ಹಾಗೇ ಮುಂದೆ ಸಾಗಿದರೆ ಸಿಗೋ ಸೇತುವೆಯನ್ನು ದಾಟಿ ಮುಂದೆ ಬಂದರೆ ಭಟ್ಕಳ ರಸ್ತೆ ಸಿಗುತ್ತೆ. ಆ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಮತ್ತೆ ಎಡಕ್ಕೆ ಮೇಲೆ ಹತ್ತೋ ಸಿಮೆಂಟ್ ರಸ್ತೆ ಸಿಗುತ್ತೆ.ಅದರಲ್ಲಿ ಸುಮಾರು ಇನ್ನೂರು ಮೀಟರ್ ಸಾಗುವಷ್ಟರಲ್ಲಿ ಸಿಗೋದೇ ಬ್ರಿಟಿಷ್ ಬಂಗಲೋ. ಇದರ ಮೇಲಿಂದ ಜೋಗ ಜಲಪಾತವನ್ನು ಮತ್ತೊಂದು ಬದಿಯಿಂದ ನೋಡಬಹುದು. ಇಲ್ಲಿಂದ ನೋಡಿದರೆ ರಾಜ ಮತ್ತು ರೋರರ್ ಜಲಪಾತ ಮಾತ್ರ ಕಾಣುತ್ತದೆ. ರಾಕೆಟ್, ರಾಣಿ ಕಾಣದಿದ್ದರೂ ಆ ಜಾಗದಿಂದ ಕಾಣದೇ ಇದ್ದ ಮತ್ತೊಂದು ಹೊಸ ಧಾರೆ ಇಲ್ಲಿಂದ ಕಾಣುತ್ತದೆ.

ಮಳೆಗಾಲದ ಹೊಸ ಜಲಪಾತಗಳು:
ಜೋಗದಲ್ಲಿ ಮೇಲೆ ಹೇಳಿದ ನಾಲ್ಕಲ್ಲದೇ ಮಳೆಗಾಲದಲ್ಲಿ ಇನ್ನೂ ಹಲವು ಧಾರೆಗಳು ಕಾಣಸಿಗುತ್ತೆ. ಈ ಸಲ ಕಂಡ ಹಲವು ಧಾರೆಗಳ ಫೋಟೋಗಳು ಕೆಳಗಿವೆ. 

ಜೋಗದತ್ರ ಇನ್ನೇನಿದೆ: 
ಕಲ್ಸಂಕ-೮ ಕಿ.ಮೀ
ನಿಪ್ಲಿ ಜಲಪಾತ-೧೨ ಕಿ.ಮೀ
ಭೀಮೇಶ್ವರ ದೇವಸ್ಥಾನ ಮತ್ತು ಜಲಪಾತ-೩೦ ಕಿ.ಮೀ(ಸಾಗರ-ಭಟ್ಕಳ ಹೈವೇ). ಮುಖ್ಯ ರಸ್ತೆಯಿಂದ ೨.೫ ಕಿ.ಮೀ ಒಳಗೆ.
ದಬ್ಬೆ ಜಲಪಾತ-೧೮ ಕಿ.ಮೀ. ಮುಖ್ಯ ರಸ್ತೆಯಿಂದ ೪.೫ ಕಿ.ಮೀ ಒಳಗೆ/ಚಾರಣ
ಹೊನ್ನೆಮರಡು-೨೦ ಕಿ.ಮೀ
ಮುಪ್ಪಾನೆ ಪ್ರಕೃತಿ ಶಿಬಿರ-೧೨ ಕಿ.ಮೀ
ಕಾನೂರು ಕೋಟೆ-೩೫ ಕಿ.ಮೀ . ಮುಖ್ಯ ರಸ್ತೆಯಿಂದ ೧೪ ಕಿ.ಮೀ ಮತ್ತು ೭ ಕಿ.ಮೀ ಚಾರಣ. ಅರಣ್ಯ ಇಲಾಖೆಯ ಪರ್ಮಿಷನ್ ಬೇಕು.

ಇದರಲ್ಲಿ ಹೊನ್ನೆಮರಡು ಅಥವಾ ಮುಪ್ಪಾನೆಯಲ್ಲಿ ಉಳಿಯೋ ಪ್ಲಾನಿದ್ದರೆ ಅಲ್ಲಿನವರಿಗೆ ಫೋನ್ ಮಾಡಿ ಬುಕ್ ಮಾಡಿಕೊಳ್ಳೋದು ಉತ್ತಮ ಅನಿಸುತ್ತೆ. ರಸ್ತೆಯಿಂದ ಹೊನ್ನೆಮರಡುವಿಗೆ ೭ ಕಿ.ಮೀ ಒಳಗೆ ಮತ್ತು ಮುಪ್ಪಾನೆಗೆ ಮೂರು ಕಿ.ಮೀ ಒಳಗೆ ಹೋಗಬೇಕು. ಇದರಲ್ಲಿ ಮುಪ್ಪಾನೆ, ಕಾನೂರು, ದಬ್ಬೆ, ಭೀಮೇಶ್ವರಗಳಿಗೆ ಹೋಗಿ ಬಂದಿದ್ದರೂ ಅಲ್ಲಿ ತೆಗೆದಿದ್ದ ಹಿಂದಿನ ರೀಲ್ ಕ್ಯಾಮೆರಾದಲ್ಲಿದ್ದ ಚಿತ್ರಗಳು ಹಾಳಾಗಿ ಬ್ಲಾಗಿಗೆ ದಕ್ಕದೇ ಹೋಗಿದ್ದು ಬೇಸರದ ಸಂಗತಿ. ಮತ್ತೊಮ್ಮೆ ಅಲ್ಲಿ ಹೋಗಿ ಬಂದು ಬ್ಲಾಗಿಸೋ ಉಮ್ಮೇದಿನೊಂದಿಗೆ ಸದ್ಯಕ್ಕೊಂದು ವಿರಾಮ

2 comments: