Tuesday, December 30, 2014

ಮಲೆ ಮಹದೇಶ್ವರ ಬೆಟ್ಟದ ಟ್ರಿಪ್ಪು : ಭಾಗ ೧, Bike Trip-Day 1.

ಟ್ರಿಪ್ಪಿನ ಐಡಿಯಾ ಬಂದಿದ್ದಾದ್ರೂ ಹೆಂಗಪ ಅಂದ್ರಾ ?
Temple on top of Male Mahadeshwara Betta
ಗುರುವಾರ ಸಂಜೆ ಎಂದಿನಂತೆ ಯಾರ್ಯಾರು ಫ್ರೀ ಇದೀರಪ್ಪಾ ಈ ವಾರಾಂತ್ಯ ಅಂತ ಒಂದಿಷ್ಟು ಗೆಳೆಯರಿಗೆ ಮೆಸೇಜಿಸಿದ್ದೆ.ಫ್ರೀ ಇದ್ದ ಒಂದಿಷ್ಟು ಜನರ ಉತ್ತರ ಬಂದಿತ್ತು. ಅದ್ರ ಮಧ್ಯೆ ಶನಿವಾರ, ಭಾನುವಾರ ಎರಡೂ ದಿನನೂ ಫ್ರೀ ಅಂದಿದ್ದ ಆದರ್ಶಂಗೆ  ಮಲೆಮಹದೇಶ್ವರ ಬೆಟ್ಟಕ್ಕೆ ಹೋಗೋಣ್ವಾ ಅಂತ ಕೇಳಿದ್ದೆ. ಜೈ ಅಂದಿದ್ರು ಅವ್ರು. ಸರಿ, ಹೇಗೆ ಹೋಗೋದು ? ಅವತ್ತೆಂತೂ ನಯಾಪೈಸಾ ಐಡಿಯಾ ಇರ್ಲಿಲ್ಲ. ಶುಕ್ರವಾರ ಸಂಜೆ ಬಸ್ಸಲ್ಲಿ ಹೋದ್ರೆ ಹೆಂಗೆ ಅನಿಸ್ತು. ಅದಕ್ಕೊಂದಿಷ್ಟು ಹುಡುಕ್ದೆ.ಗೆಳೆಯ ಗಿರಿ,ಮುನೇಗೌಡ್ರು,ಭರತ್ ಡೈರೆಕ್ಟ್ ಬಸ್ಸಿದೆ ಅಂದಿದ್ರು . ಆದ್ರೆ ಎಷ್ಟೊತ್ತಿಗೆ ಅಂತ ಗೊತ್ತಿರ್ಲಿಲ್ಲ. ಬಾಲಣ್ಣಂಗೆ ಕೇಳ್ದೆ. ಶುಕ್ರವಾರದ ಬ್ಯುಸಿ ಸಮಯವಾದ್ದರಿಂದ ಮತ್ತೊಂದ್ಸಲ ಎಲ್ರಿಗೂ ತೊಂದ್ರೆ ಕೊಡೋದೇನು ಅಂತ ನೆಟ್ಟಲ್ಲೊಂದಿಷ್ಟು  ತಡಕಿದ ನಂತ್ರ ಆದರ್ಶಂಗೆ  ಫೋನ್ ಮಾಡಿದ್ರೆ ಏ ಬೈಕಲ್ಲಿ ಹೋಗೋಣ ಅಂದ್ಬಿಡೋದೇ ?  ಮೂರು ದಾರಿ ಇದೆ ಮಲೆಮಹದೇಶ್ವರಕ್ಕೆ ಹೋಗೋಕೆ. ಒಂದು ೨೦೮, ಮತ್ತೊಂದು ೨೧೧ ಮತ್ತೊಂದು ೨೫೦ ರೀ. ಬೈಕಲ್ಲಿ ಅಷ್ಟು ದೂರ ಹೋಗಕ್ಕಾಗತ್ತಾ ಅಂದೆ. ನಾನು ೩೫೦ ಕಿ.ಮೀ ಒಂದು ದಿನ ಡ್ರೈವ್ ಮಾಡಿದೀನಿ. ಸ್ವಲ್ಪ ಸುಸ್ತಾಗತ್ತೆ. ಆದ್ರೂ ಹೋಗ್ಬೋದು ಬಾ ಅಂದ್ರು. ಅತೀ ಹೆಚ್ಚು ಅಂದ್ರೆ ಅರವತ್ತೋ ಎಪ್ಪತ್ತೋ ಕಿ.ಮೀ ಟ್ರಿಪ್ಪು(ದಾನವಾಡಿಗೆ ಶಿಶಿರ, ಪ್ರಶಾಂತ್, ಗೌತಿ) ಬೈಕಲ್ಲಿ ಹೋಗಿದ್ದು ಬಿಟ್ರೆ ನಾನ್ಯಾವತ್ತೂ ಮೂರಂಕಿ ದೂರ ಬೈಕಲ್ಲಿ ಹೋದವ್ನಲ್ಲ ! ಅದ್ಯಾವ ಧೈರ್ಯದ ಮೇಲೆ ಹೂಂ ಅಂದ್ನೋ ಈಗ್ಲೂ ಗೊತ್ತಾಗ್ತಿಲ್ಲ :) ಮಲೆ ಮಹದೇಶ್ವರದಿಂದ ನಾಗಮಲೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗ್ಬೋದು. ಇನ್ನೂ ಟೈಂ ಉಳಿದ್ರೆ ಹತ್ರದಲ್ಲಿರೋ(?) ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗ್ಬಂದ್ರಾಯ್ತು ಅನ್ನೋದು basic ಪ್ಲಾನು. ಆದ್ರೆ ಅಲ್ಲೇ ಲೇಟಾಗ್ಬಿಟ್ರೆ ಏನ್ಮಾಡೋದು ಅಂದಾಗ ಗೆಳೆಯ ದೇವು ನೆನ್ಪಾದ. ಮೈಸೂರಿಗೆ ಬಿಳಿಗಿರಿ ಹತ್ರ ಅಂತ ಕೇಳಿದ್ದ ನೆನ್ಪು. ರಾತ್ರೆ ಮೈಸೂರಿಗೆ ಹೋಗಿ ಉಳ್ದು ಅಲ್ಲಿಂದ ಬೆಳಗ್ಗೆ ಮತ್ತೆ ಬಿಳಿಗಿರಿ ರಂಗನಬೆಟ್ಟಕ್ಕೆ ಬಂದು ಅದ್ನ ನೋಡ್ಕೊಂಡು ಬೆಂಗ್ಳೂರಿಗೆ ವಾಪಾಸ್ಸಾಗೋದು ಅಂತೊಂದು ತಕ್ಷಣದ ಪ್ಲಾನು ರೆಡಿ ಆಯ್ತು. ಇವುಗಳೆಲ್ಲ ಅಂದ್ಕೊಂಡಷ್ಟು ಹತ್ರವಲ್ಲ.ಹಂಗಾಗಿ ಎಲ್ಲಾದ್ರೂ ಮಿಸ್ ಆದ್ರೆ ಇರ್ಲಿ ಅಂತ ಇನ್ನೊಂದೆರ್ಡು ಬ್ಯಾಕಪ್ ಪ್ಲಾನುಗಳೂ ರೆಡಿ ಆದ್ವು ಗೂಗಲ್ ಮ್ಯಾಪ್ ನೋಡಿದ ಮೇಲೆ. ಎರಡು ದಿನಗಳ ಒಟ್ಟು ೭೦೩ ಕಿ.ಮೀಗಳ ಬೈಕ್ ಪಯಣದಲ್ಲಿ ಮೇಲೆ ಹೇಳಿದ ಎಲ್ಲಾ ಸ್ಥಳಗಳ ಜೊತ್ಗೆ  ತೆಪ್ಪದ ಪಯಣ, ಜೀಪ್ ದಾರಿ, ಟ್ರೆಕ್ಕಿಂಗು, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಕೊಳ್ಳೆಗಾಲಗಳೆಲ್ಲಾ ಬಂದ ಪರಿಯೇ ಒಂದು ವಿಸ್ಮಯ. ಅದೆಂಗೆ ಅಂದ್ರಾ ? ಅದ್ನ ಇಲ್ಲಿವರ್ಗೆ ಬಂದಂಗೆ ಒಂದೇ ಉಸ್ರಲ್ಲಿ ಹೇಳೋಕಾಗಲ್ಲ. ನಿಧಾನವಾಗಿ ಹೇಳ್ತಾ ಹೋಗ್ತಿನಿ. ಓದಿ ನೋಡಿ :-)

ಬೆಂಗಳೂರಿಂದ ಮಲೆಮಹದೇಶ್ವರಕ್ಕೆ ಇರೋ ದಾರಿಗಳು:
೧. ಕನಕಪುರ, ಮಲವಳ್ಳಿ, ಕೊಳ್ಳೇಗಾಲ, ಮಲೆಮಹದೇಶ್ವರ - ೨೧೧ ಕಿ.ಮೀ
೨. ರಾಮನಗರ, ಮುದ್ದೂರು ,ಕೊಳ್ಳೇಗಾಲ, ಮಲೆ ಮಹದೇಶ್ವರ - ೨೦೮ ಕಿ.ಮೀ: ಮುದ್ದೂರಿನಿಂದ ಮಲವಳ್ಳಿಯವರೆಗಿನ ರಸ್ತೆ ಅಷ್ಟು ಸರಿಯಿಲ್ಲ ಅಂತ ಕೇಳ್ಪಟ್ಟೆ
೩. ಕೃಷ್ಣಗಿರಿ ಮಾರ್ಗ : ೨೫೦ ಕಿ.ಮೀ

ಪಯಣ ಶುರುವಾದ ಪರಿ:
H.S.R ನಲ್ಲಿರೋ ಆದರ್ಶ ನಿಮ್ಮ ಏರಿಯಾ ಕಾಸ್ಮೋಸಿಗೆ ಬರ್ತೀನಿ. ಅಲ್ಲಿಂದ ಹೊರಡೋಣ ಬೆಳಗ್ಗೆ ಅಂದಿದ್ರು. ಸರಿ, ಅಂದಂತೆಯೇ ಶನಿವಾರ ಬೆಳಗ್ಗೆ ನಾಲ್ಕೂವರೆಗೆ ಪಯಣ ಶುರುವಾಯ್ತು. ಚುಮು ಚುಮು ಚಳಿಯ ಮುಂಜಾನೆಯದು. ಅದಕ್ಕೊಂದು ಸ್ವೆಟರು, ತಲೆಗೊಂದು ಟೋಪಿ ಸಾಕಾ ಅನುಸ್ತು. ಬೈಕಲ್ಲಿ ಹೋಗೋದಲ್ವಾ ಹಾಗಾಗಿ ಎಂತಕ್ಕೂ ಇಲ್ರಿ ಅಂತ ಮುಖಕ್ಕೊಂದು ಮಫ್ಲರೂ ಇಟ್ಕೊಂಡು ನಾನು ರೆಡಿಯಾಗಿದ್ದೆ. ಉಳಿಯೋ ಪರಿಸ್ಥಿತಿ ಬಂದ್ರೆ ಅಂತ ಬ್ಯಾಗಲ್ಲೊಂದು ಜೊತೆ ಬಟ್ಟೆ. ದಾರಿಲೇನೂ ಸಿಗ್ದಿದ್ರೆ ಅಂತೊಂದು ಪೌಂಡು ಬ್ರೆಡ್ಡು, ನೀರು ಮತ್ತು ಕೈಕಾಲುಳುಕಿದ್ರೆ ಇಲ್ರಿ ಅಂತ ವಾಲಿನಿ ಸ್ಪ್ರೆ. ಗಂಭೀರವಾದ ಗಾಯಗಳೇನೂ ಆಗ್ದೇ ಇರ್ಲಿ. ಎಲ್ಲಾದ್ರೂ ತರಚುಗಾಯಗಳಾದ್ರೆ ಇರ್ಲಿ ಅಂತೊಂದು ಹತ್ತಿ ರೋಲ್ ಮತ್ತು ಬ್ಯಾಂಡೇಡ್. ಟ್ರಾಫಿಕ್ಕೇನು ಇಲ್ದೇ ಇದ್ರೂ ಬನಶಂಕರಿ ದಾಟೋ ಹೊತ್ಗೆ ಐದು ಗಂಟೆ. ಸಿಗ್ನಲ್ಲೇ ಇಲ್ಲದ ಖಾಲಿ ಖಾಲಿ ಸಿಲ್ಕ್ ಬೋರ್ಡ್ ನೋಡೋಕೆ ಪುಣ್ಯ ಮಾಡಿರ್ಬೇಕು ಕಣ್ರಿ ಅನಿಸ್ಬಿಟ್ಟಿತ್ತು ಅವತ್ತು :-)
ಭಯೋತ್ಪಾದಕ ಅಲ್ಲ ಮಾರ್ರೆ. ಇದು ನಾನೇ ! ಚಳಿಯ ತಡೆಯೋ ಬಟ್ಟೆಗಳ ಪರಿಯಿದಷ್ಟೇ


ಮುಂದುವರಿದ ಪಯಣ:
ಕನಕಪುರ ಮುಟ್ಟೋ ಹೊತ್ಗೆ ಆರೂವರೆ. ಅಲ್ಲಿಂದ ಮೈಸೂರ ರಸ್ತೆಯಲ್ಲಿ(ಮಗಲೂರ ರಸ್ತೆಯಲ್ಲಲ್ಲ)ಹೋದ್ರೆ ಮತ್ತೊಂದು ವಿಭಜಕ. ಅದ್ರಲ್ಲಿ ಎಡಕ್ಕೆ ಹೋದ್ರೆ ಮೇಕೆದಾಟು ಮತ್ತು ಸಂಗಮ. ಬಲಕ್ಕೆ ಅಂದ್ರೆ ಸಂತನೂರು ಅಂತಿದ್ದ  ಮಾರ್ಗದಲ್ಲಿ ಹೋಗಬೇಕಾದ್ದು ನಾವು. ಸಾಸಲಪುರದಲ್ಲಿ ಸೂರ್ಯೋದಯ ಕಾಣೋ ಹೊತ್ತಿಗೆ 6:55.  7:30 ಗೆ ಮಳವಳ್ಳಿ ತಲುಪಿದ ನಾವು ಅಲ್ಲಿಂದ ಎಡಕ್ಕೆ ಹೊರಳಿ ೩೩ ಕಿ.ಮೀ ಹೋದ್ರೆ ಕೊಳ್ಳೇಗಾಲ(ಬಲಕ್ಕೆ ಹೋದ್ರೆ ಮೈಸೂರು). ಶಿವನಸಮುದ್ರ ಹನ್ನೊಂದು ಕಿ.ಮೀ ಅನ್ನೋ ಬೋರ್ಡುಗಳನ್ನೆಲ್ಲಾ ನೋಡುತ್ತಾ ಬಂದ ನಮಗೆ ಇನ್ನೇನು ಸ್ವಲ್ಪ ಹೊತ್ತಲ್ಲಿ(೮:೩೦ ಹೊತ್ತಿಗೆ) ಕೊಳ್ಳೇಗಾಲ ತಲುಪಿ ಬಿಡ್ತೀವಿ ಅನ್ನೋ ಖುಷಿಯಲ್ಲಿದ್ದಾಗೊಂದು ಆಘಾತ. ಇಲ್ಲಿಂದ ವಾಹನ ಸಂಚಾರ ನಿಷೇಧಿಸಲಾಗಿದೆ ಅಂತ ಬೋರ್ಡು. ಕೊಳ್ಳೇಗಾಲಕ್ಕೆ ಹೋಗೋ ಸೇತುವೆ ಮುರಿದು ಹೊಸ ಸೇತುವೆ ಮಾಡೋ ಕಾರ್ಯ ಪ್ರಗತಿಯಲ್ಲಿತ್ತು :-( ಬದಲಿ ರಸ್ತೆ ಅಂದ್ರೆ ತಲಕಾಡಿನ ಮೇಲೆ ಹೋಗುವಂತದ್ದು.

ತಲಕಾಡು ಪಂಚಲಿಂಗೇಶ್ವರ ಕ್ಷೇತ್ರ:

ತಲಕಾಡ ಪಂಚಲಿಂಗೇಶ್ವರ ಕ್ಷೇತ್ರದ ಮೇಲೆ ಹಾದು ಅಲ್ಲಿಂದ ಕೊಳ್ಳೇಗಾಲದ ಹಾದಿ ಕೇಳಿದ ನಮಗೆ ಸ್ವಲ್ಪ ದೂರ ಹೋಗೋ ಹೊತ್ತಿಗೆ ಒಂದಿಷ್ಟು ಜನ ಅಡ್ಡ ಹಾಕಿದ್ರು. ಇಲ್ಲೇ ಎಡಗಡೆ ಬನ್ನಿ ಸಾ.ಕೊಪ್ಪರಿಗೇಲಿ ನದಿ ದಾಟಿಸ್ತಾರೆ. ಕೊಳ್ಳೇಗಾಲಕ್ಕೆ ಬರೀ ೩ ಕಿ.ಮೀ ಅಂತ ಕರೀತಿದ್ರು. ಅವ್ರ ಲಾಭಿಗೆ ಒಳಗಾಗದೇ ಇನ್ನೊಂಚೂರು ಮುಂದೆ ಬರ್ತಿದ್ದ ಹಾಗೆ ಮತ್ತೊಂದಿಷ್ಟು ಜನ. ಇದೊಳ್ಳೆ ಕತೆ ಆಯ್ತಲ್ಲ. ಸರ್ಕಾರದವ್ರೆ ಬದ್ಲಿ ರಸ್ತೆ ಅಂತ ಬೋರ್ಡು ಹಾಕಿದ್ದಾರೆ. ಇವ್ರು ನೋಡಿದ್ರೆ ತೆಪ್ಪ, ಗಿಪ್ಪ ಅಂತೆಲ್ಲಾ ಹೇಳ್ತಾ ಇದಾರೆ. ತೆಪ್ಪದಲ್ಲಿ ಬಸ್ಸೆಲ್ಲಾ ದಾಟಿಸೋಕಾಗಲ್ಲ ! ಅಂದ್ರೆ ಇದೇ ರಸ್ತೇಲಿ ಹೋದ್ರೆ ಕೊಳ್ಳೇಗಾಲ ಮುಟ್ತೀವಿ ಅನ್ನೋ ಭರವಸೆ ನಮ್ಮದು. ಆದ್ರೆ ಆ ರಸ್ತೇಲಿ ಎಷ್ಟು ದೂರು ಕೊಳ್ಳೇಗಾಲ ಅನ್ನೋ ಬೋರ್ಡು ಎಲ್ಲೂ ಸಿಗ್ಲಿಲ್ಲ. ಇದೇ ರಸ್ತೇಲಿ ಹೋದ್ರೆ ಮಹದೇವಪುರ ಮೂಲಕ ಕೊಳ್ಳೇಗಾಲಕ್ಕೆ ಹೋಗ್ತೀರ. ೩೦ ಕಿ.ಮೀ ಆಗತ್ತೆ ಅಂದ್ರು !! ೩ ಕಿ.ಮಿ ಎಲ್ಲಿ, ಮೂವತ್ತೆಲ್ಲಿ. ತೆಪ್ಪದಲ್ಲೇ ಹೋಗ್ಬಿಡೋಣ ಅಂತ ಆಸೆ ಚಿಗುರ್ತು. ಅವ್ರು ತೋರಿಸಿದ ಹಳ್ಳಿ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ಹೋಗೋ ಹೊತ್ತಿಗೆ ಒಂದು ನದಿ ತಟ ಸಿಗ್ತು.

ತೆಪ್ಪದ ಪಯಣ:

 
ಬೆಳಬೆಳಗ್ಗೆ ಎಂಟೂಮುಕ್ಕಾಲರ ಹೊತ್ತಿಗೆ ಅಲ್ಲೊಂದಿಷ್ಟು ತೆಪ್ಪಗಳು ಆಗಷ್ಟೇ ಮೂಡ್ತಿರೋ ರವಿಯ ಬೆಳಕಲ್ಲಿ ಚಳಿ ಕಾಯಿಸಿಕೊಳ್ತಾ ನದೀತಟದಲ್ಲಿ  ಕೂತಿದ್ವು.ತೆಪ್ಪ ಅಂದ್ರೆ ಬೇರೆ ಕಡೆ ನೋಡುವಂತ ಬಿದಿರಿನ, ಮರದ ತೆಪ್ಪಗಳಲ್ಲ ಅವು. ನಮ್ಮ ಕಡೆ ಆಲೆಮನೆಯಲ್ಲಿ ಬೆಲ್ಲ ಕಾಯಿಸೋಕೆ ಉಪಯೋಗಿಸ್ತಾರಲ್ಲ ಕೊಪ್ಪರಿಗೆ. ಅದನ್ನೇ ತೆಪ್ಪ ಅಂತ ಉಪಯೋಗಿಸ್ತಿರೋ ಪರಿ ! ೪೫೦ ಕೇಜಿ ತೂಕದ ಕೊಪ್ಪರಿಗೆಗಳಲ್ಲಿ ೨೦ ಜನ ಅಥವಾ ೬ ಬೈಕು ಸಾಗಿಸ್ತಾರಂತೆ. ತಲಾ ಹತ್ತು ರೂ ಚಾರ್ಚು. ಬೈಕಿದ್ದ ಕಾರಣ ನಮ್ಮ ಹತ್ತಿರ ಒಟ್ನಲ್ಲಿ ೫೦ ರೂ ಕೇಳಿದ ತೆಪ್ಪದವ.


ಮುಂಚೆಯೆಲ್ಲಾ ಇಲ್ಲಿ ಮರಳುಗಾರಿಕೆ ನಡೆಯುತ್ತಿತ್ತಂತೆ. ಸರ್ಕಾರದವ್ರು ಮರಳುಗಾರಿಕೆ ನಿಷೇಧಿಸಿದ ಮೇಲೆ ಅಂದು ಪರ್ಮಿಟ್ ಪಡೆದಿದ್ದ ದೋಣಿಗಳೆಲ್ಲಾ ಹಾಗೇ ದಡದಲ್ಲಿ ನಿಲ್ಲಿಸಿರೋದನ್ನ ಕಾಣಬಹುದಿಲ್ಲಿ. ಆದ್ರೂ ಅಕ್ರಮ ಮರಳುಗಾರಿಕೆ ಅಂತ ಕರೆಯಬಹುದಾದ ಚಿಲ್ರೆ ಪಲ್ರೆ ಮರಳುಗಾರಿಕೆ ನಡೆದೇ ಇದೆ. ತಮ್ಮ ದೋಣಿ ನಡೆಸೋ ಹುಟ್ಟಲ್ಲಿ ನದೀ ಪಾತ್ರದಲ್ಲಿ ಎಲ್ಲಿ ಆಳ ಕಡಿಮೆ ಇದೆ ಅಂತ ನೋಡಿಕೊಂಡು ಅಲ್ಲಿ ತೆಪ್ಪ ನಿಲ್ಲಿಸಿ ನೀರಿಗೆ ಜಿಗಿಯೋ ಜನ ಅಗಲವಾದ ಗುದ್ದಲಿಯಲ್ಲಿ ನೀರೊಳಗಿಂದ ಮರಳ ಬಗೆದು ಕೊಪ್ಪರಿಗೆಯ ಅಂಚಿಗೆ ಹಾಕ್ತಾರೆ. ಮರಳಲ್ಲಿರೋ ನೀರೆಲ್ಲಾ ಬಸಿದು ಮಧ್ಯಕ್ಕೆ ಬಂದ್ರೆ ಮರಳು ಅಂಚಲ್ಲಿ ನಿಂತಿರುತ್ತೆ. ಹೀಗೆ ಕೊಪ್ಪರಿಗೆಯ ಎಲ್ಲಾ ಅಂಚುಗಳು ತುಂಬಿದ ಮೇಲೆ ಕೊಪ್ಪರಿಗೆಗೆ ಹತ್ತೋ ಈತ ಮಧ್ಯದಲ್ಲಿದ್ದ ನೀರನ್ನೆಲ್ಲಾ ಬಗೆದು ಹೊರಚೆಲ್ಲುತ್ತಾನೆ.ಸರ್ಕಾರ ನಿಷೇಧಿಸಿದ್ರೂ ಮರಳು ತೆಗೆದು ನದಿಯ ಒಡಲು ಬಗೀತಿರೋ ಇವ್ರನ್ನ ನೋಡೀ ಸಿಟ್ಟು ಬಂದ್ರೂ ನನ್ನ ಫೋಟೋ ತೆಗಿಬೇಡಿ ಅಣ್ಣಾ, ನಿಮ್ಮ ದಮ್ಮಯ್ಯ ಅಂತೀನಿ ಅಂದವನನ್ನು ನೋಡಿ ಮನ ಕರಗಿಹೋಯ್ತು. ದೊಡ್ಡ ದೊಡ್ಡ ಕಳ್ಳರನ್ನ ಬಿಟ್ಟು ಹೊಟ್ಟೆಪಾಡಿಗೆ ಈ ಉದ್ಯೋಗ ನಂಬಿಕೊಂಡಿರೋ ಇಂಥಾ ಚಿರ್ಲೆ ಪರ್ಲೆ ಕಳ್ರನ್ನ ದೊಡ್ಡ ವಿಷ್ಯ ಮಾಡ್ಬಾರ್ದು ಅನಿಸಿದ್ರೂ ಇಂಥಾ ವಿಷಯದ ಬಗ್ಗೆ ಬ್ಲಾಗಿಗ ಗೆಳೆಯರ ಗಮನವನ್ನಾದ್ರೂ ಸೆಳಿಲೇಬೇಕು ಅನ್ನೋ ಉದ್ದೇಶದಿಂದ ಇದ್ರ ಬಗ್ಗೆ ಕೊನೆಗೂ ಬರೆಯುತ್ತಿದ್ದೇನೆ. ಇದನ್ನು ಹೊರತುಪಡಿಸಿದ್ರೆ ಮುಂಜಾವಿನ ತಂಗಾಳಿಯಲ್ಲಿ ಈ ತೆಪ್ಪದ ಪಯಣ ನಿಜಕ್ಕೂ ಒಂದು ಮಧುರ ಅನುಭವ. ತೆಪ್ಪ ಅಂತ ತಲಾ ಇನ್ನೂರು ಸುಲಿಯೋ ಪ್ರವಾಸಿ ತಾಣಗಳಿಗೆ ಹೋಲಿಸಿದ್ರೆ ಇಲ್ಲಿನ ತಲಾ ೧೦ ರೂ ಹೆಚ್ಚೇನಲ್ಲ ಅನಿಸ್ತು !ಒಂಭತ್ತು ಗಂಟೆಯ ಸುಮಾರಿಗೆ ತೆಪ್ಪ ದಾಟಿ ಮತ್ತೊಂದರ್ಧ ಕಿ.ಮೀ ಅವರು ತೋರಿಸಿದ ಜಾಗಕ್ಕೆ ಬರೋ ಹೊತ್ತಿಗೆ ಮುಖ್ಯ ರಸ್ತೆ ಸಿಗ್ತು. ಕೊಳ್ಳೇಗಾಲಕ್ಕೆ ಐದು ಕಿ.ಮಿ ಅನ್ನೋ ಬೋರ್ಡೂ ಕಾಣ್ರು.










ಮುಂಚೆ ಮರಳು ತೆಗೆಯುತ್ತಿದ್ದ ದೋಣಿಗಳೆಲ್ಲಾ ಈಗಿನ  ನಿಷೇಧದಿಂದ ಖಾಲಿ ನಿಂತಿರುವುದು
ಕೊಳ್ಳೇಗಾಲದಿಂದ ಮುಂದೆ:
ಕೊಳ್ಳೇಗಾಲದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ೮೦ ಕಿ.ಮೀ. ಕೊಳ್ಳೇಗಾಲದ ಅಂಬೇಡ್ಕರ್ ವೃತ್ತದಲ್ಲಿ ಎಡಕ್ಕೆ ತಿರುಗಿ ಹೊರಟ ನಮಗೆ ಹೊಟ್ಟೆ ಅಷ್ಟೇನೂ ಚುರುಗುಡದಿದ್ದ ಕಾರಣ ಮುಂದೆ ಸಾಗಿದ್ವಿ. ಅಲ್ಲಿಂದ ಇಪ್ಪತ್ತು ಕಿ.ಮೀ ಸಾಗಿದ್ರೆ ಹನೂರು. ಮಧ್ಯೆ ಇನ್ನೊಂದಿಷ್ಟು ಊರುಗಳಿದ್ರೂ ಸಸ್ಯಹಾರಿ ಉಪಹಾರಗೃಹಗಳು ಕಾಣದ ಕಾರಣ ಹನೂರಲ್ಲಿ ತಿಂಡಿಯ ಭಾಗ್ಯವಾಯಿತು. ಹತ್ತಕ್ಕೆ ಹನೂರು ತಲುಪಿದ್ದ ನಾವು ತಿಂಡಿ ತಿಂದು ಹೊರಡೋ ಹೊತ್ತಿಗೆ ೧೦:೨೦. ರುಚಿಯಾಗಿದ್ದ ಎರಡು ಪ್ಲೇಟು ಇಡ್ಲಿ ವಡೆ, ಒಂದು ಪರೋಟ, ಎರಡು ಕಾಫಿಗಳಿಂದ ಆದ ಬಿಲ್ಲು ಬರೀ ೫೫ ! ಹಳ್ಳಿಗಳ ಕಡೆ ಇದು ಸಾಮಾನ್ಯವೆನಿಸಿದ್ರೂ ಬೆಂಗಳೂರಿನ ಬಿಲ್ಲು ಮತ್ತು ಪ್ರವಾಸಿ ತಾಣಗಳಲ್ಲಿದ್ದದ ನೋಡಿ ನೋಡಿ ಸಾಮಾನ್ಯವೆನಿಸಿದ್ದ ನಮಗೆ ಇದು ಅಚ್ಚರಿ ಹುಟ್ಟಿಸಿದ್ದು ಸುಳ್ಳಲ್ಲ


ಇಲ್ಲಿಂದ ಮ.ಮ. ಬೆಟ್ಟಕ್ಕೆ ೪೭ ಕಿ.ಮೀ. ಹನೂರು ಬಸ್ಟಾಂಡು ದಾಟಿ ಸುಮಾರು ಐನೂರು ಮೀಟರ್ ಸಾಗುವಷ್ಟರಲ್ಲಿ ಸಿಗೋ ವಿಭಜಕದಲ್ಲಿ ಎಡಕ್ಕೆ ಹೋದ್ರೆ ಮ.ಮ. ಬೆಟ್ಟ.( ಬಲಕ್ಕೆ ಹೊದ್ರೆ ರಾಮಪುರ). ಇದರಲ್ಲಿ ಇನ್ನೊಂದರ್ಧ ಗಂಟೆ ಸಾಗಿದ್ರೆ ತಾಳಬೆಟ್ಟದ ಸ್ವಾಗತ ಕಮಾನು ಸಿಗುತ್ತದೆ. ಅಲ್ಲಿಂದ ಹಾಗೇ ಮುಂದಕ್ಕೆ ಸಾಗಿ ಮಲೆ ಮಹದೇಶ್ವರ ಬೆಟ್ಟ ತಲುಪೋ ಹೊತ್ತಿಗೆ ೧೨ ಘಂಟೆ.

ತಾಳಬೆಟ್ಟದ ಕಮಾನು

ಸುಮ್ನೇ ಬೆಟ್ಟ ಹತ್ತಿದ್ವಿ ಅನ್ನೋ ಬದ್ಲು ಈ ಬೆಟ್ಟದ ದಾರಿಯ ಬಗ್ಗೆ ಹೇಳ್ಲೇಬೇಕು.ಇಪ್ಪತ್ತೇಳು ತೀವ್ರ ತಿರುವುಗಳಿರುವ(hairpin bends) ಈ ಬೆಟ್ಟದಲ್ಲಿ ಮಧ್ಯ ಗಾಡಿ ಕೆಟ್ಟು ನಿಂತ್ರೆ ದೇವ್ರೇ ಗತಿ ಅನ್ನಿಸಿದ್ದು ಅಲ್ಲಿ ಅಪಘಾತಕ್ಕೊಳಗಾಗಿ  ಹಾಗೇ ತುಕ್ಕುಹಿಡಿಯುತ್ತಿರೋ ಗಾಡಿ ನೋಡಿದಾಗ



ಮಾರ್ಗ ಮಧ್ಯದಲ್ಲಿ ಹಲವು ದೇವಸ್ಥಾನಗಳಿವೆ. ಅವುಗಳಲ್ಲಿ ಕೆಳಗಿರೋ ಶನಿದೇವಸ್ಥಾನವೂ ಒಂದು


ಈ ಬೆಟ್ಟದ ಮೇಲೂ ಒಂದು ಊರಿದೆ ಮತ್ತು ಅದಕ್ಕೊಂದು ಬಸ್ಟಾಪೂ ಇದೆ ಅನ್ನೋದು ಆಶ್ಚರ್ಯ ತಂತು

ಮ.ಮ ಬೆಟ್ಟದ ಸುತ್ತಮುತ್ತ ಏಳುಮಲೆಗಳಿವೆಯಂತೆ. ಮ.ಮ ಬೆಟ್ಟದ ಪ್ರವೇಶ ಶುಲ್ಕ ಪಡೆಯೋ ಚೆಕ್ ಪೋಸ್ಟಿಂದ ಐದು ಮಲೆಗಳು ಕಾಣೋದು ನಂತರದ ಚಿತ್ರದಲ್ಲಿ ನೋಡಬಹುದು. ಅವುಗಳಲ್ಲಿ ಗುಂಜುಮಲೆ, ಶಂಕಮಲೆ, ಜೇನುಮಲೆ, ಕಾರಯ್ಯನ ಬಿಲ್ಲಯ್ಯನ ಗುಹೆ, ಕೊಂಬುಡಿಕ್ಕಿ, ನವಗ್ರಹ ಮರ, ಮತ್ತೊಂದು ಶನಿ ದೇವಸ್ಥಾನಗಳಿಗೆ ಹೋಗೋ ದಾರಿ ಮ.ಮ ಬೆಟ್ಟದ ಮೂಲದೇವಸ್ಥಾನಕ್ಕಿಂತ ಮುಂಚೆಯೇ ಸಿಕ್ಕುತ್ತದೆ. ಇಲ್ಲಿ ದಾರಿ ತಪ್ಪದೇ, ಹೆಚ್ಚಾಗಿರೋ ಆನೆ ದಾಳಿಗೆ ಸಿಕ್ಕು ಸಾಯದೇ   ಇವುಗಳಿಗೆಲ್ಲಾ ಹೊಗೋಕೆ ಸ್ಥಳೀಯರ ನೆರವು ಅನಿವಾರ್ಯ ಅನ್ನುತ್ತಾರೆ.



ಮ.ಮ ಬೆಟ್ಟದ ಸುತ್ತಮುತ್ತಲಿನ ಬೆಟ್ಟಗಳು--> ಚೆಕ್ ಪೋಸ್ಟಿನ ಬಳಿಯ ದೃಶ್ಯ

ದೂರದಿಂದ ಮ.ಮ ಬೆಟ್ಟದ ದೇವಸ್ಥಾನದ ದೃಶ್ಯ. ಈ ಬೆಟ್ಟದ ಮೇಲೆ ಪೆಟ್ರೋಲ್ ಬಂಕು, ಅತಿಥಿ ಗೃಹಗಳು ಎಲ್ಲಾ ಇರುವುದರಿಂದ ಇಲ್ಲಿ ಉಳಿಯೋಕೆ ಯಾವ ತೊಂದ್ರೆಗಳೂ ಇಲ್ಲ. ಆದ್ರೆ ಸ್ವಲ್ಪ ಮುಂಚಿತವಾಗಿ ಅಥವಾ ರಾತ್ರೆ ಉಳಿಯೋದಿದ್ರೆ ಬೆಳಗ್ಗೆಯೇ ಅತಿಥಿಗೃಹ/ಲಾಡ್ಜುಗಳನ್ನು ಬುಕ್ ಮಾಡಿಕೊಳ್ಳುವುದು ಕ್ಷೇಮ


ಮಲೆ ಮಹದೇಶ್ವರನ ದೇಗುಲ

ಇಲ್ಲಿ ದೇಗುಲದ ಪ್ರಾಂಗಣಕ್ಕೆ ಕಾಲಿಡೋ ಮೊದಲೇ ನಿಮ್ಮ ಚಪ್ಲಿ, ಶೂಗಳನ್ನು ನಾವು ನೋಡ್ಕೋತೀವಿ , ಹಣ್ಣು ಕಾಯಿ ಪೂಜೆ ಸಾಮಾನು ತಗೋಳಿ ಅಂತ ಅಂಗಡಿಯವ್ರು ಮೇಲೆ ಬೀಳ್ತಾರೆ ! ಪೂಜೆ ಮಾಡಿಸೋ ಉದ್ದೇಶವಿದ್ದರೆ ಓಕೆ. ಬರೀ ದರ್ಶನ ಮಾಡೋ ಇರಾದೆಯಿದ್ರೆ ಹಾಗೇ ಮುಂದೆ ಬನ್ನಿ. ದೇಗುಲದ ಬಲಭಾಗದಲ್ಲಿ(ಬರೋ ನಿಮ್ಮ ಎಡಭಾಗದಲ್ಲಿ) ಚಪ್ಪಲಿ ಸ್ಟಾಂಡಿದೆ. ಅಲ್ಲಿ ತಲಾ ೫ ರೂಗೆ ಚಪ್ಪಲಿ, ಬ್ಯಾಗುಗಳನ್ನ ಇಡಬಹುದು. ೧೫ ರೂಗೆ ನಮ್ಮ ಶೂ, ಬ್ಯಾಗುಗಳನ್ನ ಅಲ್ಲಿಟ್ಟ ನಾವು ದೇಗುಲ ದರ್ಶನಕ್ಕೆ ತೆರಳಿದ್ವಿ


ಮಲೆ ಮಹದೇಶ್ವರನ ರಥೋತ್ಸವ


ಇದು ದಿನದ ಸೇವೆಗೆ ಬಳಸೋ ಸಣ್ಣರಥ. ದೇಗುಲದಲ್ಲಿರುವ ಜಾತ್ರೆಗೆ ಬಳಸೋ ದೊಡ್ಡರಥವನ್ನು  ಮುಂದೆ ಬರೋ ರಾತ್ರೆಯ ಚಿತ್ರಗಳಲ್ಲಿ ಕಾಣಬಹುದು


ಮಲೆ ಮಹದೇಶ್ವರನ ದರ್ಶನ ಪಡೆದ ನಂತರ ಅಲ್ಲಿನ ಪ್ರಸಾದ ಭೋಜನಗೃಹದ ಕೆಳಗಿರೋ ಮುಡಿ ಕೌಂಟರ್ ಬಳಿ ತೆರಳಿದೆವು. ೧೨:೩೦ ರಿಂದ ೨:೩೦ ಮತ್ತು ಸಂಜೆ ೭:೩೦ರಿಂದ ೯ ಇಲ್ಲಿ ಊಟದ ಸಮಯ. ಆದ್ರೆ ನಾಗಮಲೆಗೆ ಅಂದೇ ಹೋಗೋ ಪ್ಲಾನಿನಲ್ಲಿದ್ರಿಂದ ಇಲ್ಲಿ ಪ್ರಸಾದ ಭೋಜನ ಸವಿಯದೇ ಮುಂದೆ ತೆರಳಿದ್ವಿ.
 
 
 
ಮಲೆ ಮಹದೇಶ್ವರನ ದರ್ಶನ ಪಡೆದ ನಂತರ ಅಲ್ಲಿನ ಪ್ರಸಾದ ಭೋಜನಗೃಹದ ಕೆಳಗಿರೋ ಮುಡಿ ಕೌಂಟರ್ ಬಳಿ ತೆರಳಿದೆವು. ೧೨:೩೦ ರಿಂದ ೨:೩೦ ಮತ್ತು ಸಂಜೆ ೭:೩೦ರಿಂದ ೯ ಇಲ್ಲಿ ಊಟದ ಸಮಯ. ಆದ್ರೆ ನಾಗಮಲೆಗೆ ಅಂದೇ ಹೋಗೋ ಪ್ಲಾನಿನಲ್ಲಿದ್ರಿಂದ ಇಲ್ಲಿ ಪ್ರಸಾದ ಭೋಜನ ಸವಿಯದೇ ಮುಂದೆ ತೆರಳಿದ್ವಿ.
 
 
ಮುಂದಿನ ಭಾಗದಲ್ಲಿ: ನಾಗಮಲೆಯ ಟ್ರೆಕ್ಕಿಂಗು ಮತ್ತು ಮ.ಮ ಬೆಟ್ಟದ ಸಂಜೆಯ ದೃಶ್ಯಾವಳಿಗಳು

Thursday, December 25, 2014

ಒಂದು ಕಾಗದದ ಕತೆ

ನಮಸ್ಕಾರ. ನಾನ್ಯಾರು ಅಂದ್ರಾ ? ಚಿಗುರಾಗಿ, ಮರವಾಗಿ , ಬೊಡ್ಡೆಯಾಗಿ, ಕಾರ್ಖಾನೆಯ ಅಸಂಖ್ಯ ರಾಸಾಯನಿಕಗಳ ಸಾಗರದಿ ಈಜಾಡಿ ಕೊನೆಗೂ ಪೇಪರ್ರೆಂಬ ಹೆಸರು ಪಡೆದ ಜೀವ ನಾನು. ಹೊರಜಗತ್ತ ಕಾಣೋ ನನ್ನ ಕನಸ ದಿನ ಕೊನೆಗೂ ನನಸಾಗಲಿದೆ. ನನ್ನಂತೇ ಇರೋ ಅದೆಷ್ಟೋ ಜನರನ್ನು ಒಂದು ಕಟ್ಟು ಹಾಕಿ ಚೆಂದದ ಹೊದಿಕೆ ಹೊದಿಸಿ ಇಟ್ಟಿದ್ದಾರೆ. ಹೊರಜಗತ್ತಿನ ಕತೆ ಕೇಳುತ್ತಲೇ ಬದುಕ ಹಲಹಂತ ದಾಟಿದ ನಮ್ಮ ಮುಂದಿನ  ಗಮ್ಯವೆಲ್ಲಿಗೋ ಗೊತ್ತಿಲ್ಲ. ಕಾಗದವೆಂದ್ರೆ ಸರಸ್ವತಿಯ ರೂಪವೆಂದು ಪೂಜಿಸುತ್ತಿದ್ದ ದಿನಗಳಿದ್ದವಂತೆ. ಬರಹವೆಂದರೆ ಪಾಠಿ-ಬಳಪ, ಕಾಗದವೆಂದರೆ ಶಾಲಾ ಪುಸ್ತಕದ ಸರಸ್ವತಿಯೆಂದು ನಂಬುತ್ತಿದ್ದ ಕಾಲವದು. ಇನ್ನೂ ಹಿಂದೆ ಮರಳ ಮೇಲೆ ವಿದ್ಯಾಭ್ಯಾಸ ಮಾಡಿಸುತ್ತಿದ್ದ ಕಾಲದಲ್ಲಿ ಕಾಗದ ಕಂಡವ ಅಂದ್ರೆ , ಅದರಲ್ಲಿದ್ದುದ ಓದಲು ಕಲಿತವ ಅಂದ್ರೆ ದೊಡ್ಡ ವಿದ್ಯಾವಂತನೆಂದೇ ಭಾವಿಸುತ್ತಿದ್ದ ಕಾಲವೂ ಇತ್ತಂತೆ. ತಿರುಗೋ ಚಕ್ರದಂತೆ ಕಳೆಯೋ ಕಾಲದಲ್ಲಿ ಅದೆಲ್ಲಾ ಮರೆಯಾಗಿ ಮಕ್ಕಳ ಗೀಚೋಣಕ್ಕೂ, ಪೆನ್ಸಿಲ ಅಕ್ಷರಕ್ಕೂ ಸಾಥಿಯಾಗಿರೋದು ಯಾರ್ಗೊತ್ತಾ ? ನಾವು ಪೇಪರ್ರೇ ಅಂತ ಅಣ್ಣಂದಿರು ಹೇಳೋ ಕಾಲವೂ ಬಂದಿತ್ತು.ಇನ್ನೂ ಹೊರಜಗತ್ತ ಕಾಣದ ನನಗೆ ಈ ಜಗದ ಸುದ್ದಿಯೆಲ್ಲಾ ತಿಳಿದಿದ್ದಾದ್ರೂ ಹೇಗೆ ಅಂದ್ರಾ ? ಕೂತಲ್ಲೇ ಇದ್ದರೂ ನಮ್ಮ ಜಾಗಕ್ಕೆ ಬರುತ್ತಿದ್ದ ಅದೇನೋ ಮರುಬಳಕೆ ಅಂತ ಹೊಸ ರೂಪಪಡೆಯುತ್ತಿದ್ದ ಅಣ್ಣಂದಿರ ಬಾಯೇ ನಮ್ಮ ಕಿವಿಯಾದಾಗ ಕೇಳಿದ ಮಾತುಗಳಿವು. ಕಾಗದಕ್ಕೂ ಮನಸುಂಟಾ ಅನ್ನುವವರಿಗೆ ಅಚ್ಚರಿಪಡಿಸೋ ದನಿಗಳಿವು.

ಕಟ್ಟುಗಳ ನಡುವೆ ಬಂಧಿಯಾದವನಿಗೆ ಹೊರಜಗತ್ತೇ ಕಾಣದಂತೆ ಕಟ್ಟುಗಳ ರಾಶಿಯಲ್ಲಿ ಮುಚ್ಚಿಬಿಟ್ಟಿದ್ದಾರೆ. ಆಗಾಗ ಕೇಳಿಸ್ತಿರೋ ಜನರ ಮಾತುಗಳಿಂದ ಅದೊಂದು ಪುಸ್ತಕದ ಅಂಗಡಿಯಿರಬೇಕು ಅಂತ ಅನಿಸ್ತಾ ಇದೆ. ಆದ್ರೆ ಪುಸ್ತಕದ ಅಂಗಡಿಯೆಂದ್ರೆ ಅದೊಂದು ಸಾಹಿತ್ಯ ಭಂಡಾರ, ಕಳೆದುಹೋಗೋ ಕಾಲವ ತಮ್ಮ ಪದಗಳಿಂದ ಕಟ್ಟಿಹಾಕೋ ಮಾಂತ್ರಿಕರ ಆಸ್ಥಾನ ಅಂತೆಲ್ಲಾ ಕೇಳಿದ್ದ ಮಾತುಗಳು ಸುಳ್ಳೇ ? ನಾ ಕೇಳಿದ ಭೈರಪ್ಪ, ಗಣೇಶಯ್ಯ, ಜೋಗಿ, ಅನಂತಮೂರ್ತಿ, ಲಂಕೇಶ್, ಗೋಪಾಲ ಕೃಷ್ಣ ಅಡಿಗ.. ಹೀಗೆ ನಾ ಕೇಳಿದ ಯಾವ ಹೆಸ್ರುಗಳೂ ಕೇಳ್ತಿಲ್ಲ. ಮಾತುಗಳೇನೋ ಕನ್ನಡಿಗರ ಹಾಗೆ ಕೇಳ್ತಾ ಇವೆ. ಆದ್ರೆ ಇವ್ರೆಲ್ಲಾ ಇಂಗ್ಲೀಷ್ ಕೃತಿಗಳ ಓದುಗರಾಗಿರಬಹುದಾ ? ಆದ್ರೆ ಚೇತನ ಭಗತ್, ಸಲ್ಮಾನ್ ರಷ್ದಿ, ಡ್ಯಾನ್ ಬ್ರೌನ್, ಅರವಿಂದ ಅಡಿಗರ ಹೆಸ್ರುಗಳೂ ಕೇಳ್ತಿಲ್ಲ.  ಆದ್ರೆ ಶಾಲೆ ಬುಕ್ಕು, ಸಿಂಗಲ್ ಲೈನ್ ಕಾಪಿ, ಡಬಲ್ ಲೈನ್ ಕಾಪಿ, ನಾಲ್ಕು ಸಾಲಿಂದು, ರೂಲ್ಡು, ಅನರೂಲ್ಡು ಅಂತೇನೋ ಹೊಸ ಹೊಸ ಮಾತುಗಳು..ಅರೆ ಮರೆತೇ ಹೋಗಿದ್ದೆ. ಮೈತುಂಬಾ ಹುಲಿಪಟ್ಟೆಯಂತೆ ಲೈನು ಬರೆಸಿಕೊಂಡ ಕಾಗದ ನಾನು. ಮಕ್ಕಳ ಬರಹಕ್ಕೋ , ದೊಡ್ಡವರ ಬರಹಕ್ಕೋ ವೇದಿಕೆಯಾಗಬಹುದಾದ ಪುಸ್ತಕಗಳು, ಪೆನ್ನು, ಪೆನ್ಸಿಲ್ಲು ಮತ್ತಿನ್ನೇನೇನೋ ಸಿಗುತ್ತಂತಲ್ಲ ಅಂಗಡಿ,ಅದೆ  ಅದೇನೋ ಹೇಳ್ತಿದ್ರಲ ಡಿಪಾರ್ಟುಮೆಂಟಲ್ ಸ್ಟೋರು ಅಂತ ಅದಾ ಇದು ? ಇರಬಹುದೇನೋ ಅಂತ ಆಲೋಚಿಸೋ ಹೊತ್ತಿಗೆ ನನ್ನ ಪಕ್ಕದಲ್ಲಿದ್ದ ಕಟ್ಟನ್ನು ಯಾರೋ ಎತ್ತಿಕೊಂಡ್ರು. ಯಾರಾಗಿರಬಹುದು ಅನ್ನೋ ಕುತೂಹಲದಲ್ಲಿದ್ದಾಗಲೇ ನನ್ನನ್ನೂ ಯಾರೋ ಎತ್ತಿಕೊಂಡ್ರು. ಕಟ್ಟುಗಳ ನಡುವಿಂದ ಕಷ್ಟಪಟ್ಟು ಕಣ್ಣುಹಾಯಿಸಿದ್ರೆ ಯಾವುದೋ ಮಗುವಿನ ಮುಖ ಕಾಣ್ತಾ ಇತ್ತು. ಅಮ್ಮ ಅಮ್ಮ. ಈ ಕಾಪಿ ತಗಳ್ಳನ್ವಾ ಇದ್ರ ಬೈಂಡಿಗಲ್ಲಿರೋ ಹೂವು ಚೆನ್ನಾಗಿದೆ ಅಂತಾ ಇದ್ದ ಪುಟ್ಟ ಬಾಲನೊಬ್ಬ. ಮೊದಲು ತಗಂಡಿದ್ದ ಕಟ್ಟನ್ನೂ.. ಅಲ್ಲಲ್ಲ ಕಾಪಿಯನ್ನು ಮತ್ತು ನನ್ನನ್ನು ಅಲ್ಲಲ್ಲ ಹೂವ ಬೈಂಡಿಗಿನ ಕಾಪಿಯನ್ನು ತಗೊಂಡ ನನ್ನ ಮೊದಲ ಒಡೆಯನ ಜೊತೆ ಹೊಸ ಪಯಣಕ್ಕೆ ಸಿದ್ದನಾದೆ.

ಅಂದು ರಾತ್ರಿಯೇ ನನ್ನ ಕಟ್ಟಿಗೊಂದು ಹೊದಿಕೆ ಸಿಗ್ತು. ಮಾರನೇ ದಿನ ಅ ಹುಡುಗನ ಬ್ಯಾಗಲ್ಲಿ ಭದ್ರವಾಗಿ ಅವನೊಂದಿಗೆ ಹೊರಡಲು ಸಿದ್ದನಾದೆ. ಅದೆಷ್ಟು ಬುಕ್ಕುಗಳಪ್ಪ ಆ ಪುಟ್ಟ ಪೋರನ ಬ್ಯಾಗಲ್ಲಿ. ಒಂದನೇ ಕ್ಲಾಸು ಅಲ್ಲಲ್ಲ ಫಸ್ಟ್ ಸ್ಟಾಂಡರ್ಡಿನ ಆ ಹುಡುಗನ ಬ್ಯಾಗಲ್ಲಿ ಒಂದೋ ಎರಡೋ ಪುಸ್ತಕ ಇರಬಹುದೇನೋ ಅಂತೆಣಿಸಿದ್ದ ನನಗೆ ರಾಶಿ ರಾಶಿ ಪುಸ್ತಕ ಕಂಡು ದಿಗಿಲು ! ಆ ಎಳೆಯನ ತೂಕಕ್ಕಿಂತಲೂ ಹೆಚ್ಚು ಭಾರದ ಪುಸ್ತಕ ಹೇರೋ ಈ ಖೂಳರಿಂದ ಅವನ ಬೆನ್ನೆಲ್ಲಿ ಬಾಗಿಬಿಟ್ಟೀತೋ ಎಂಬ ಅಳುಕು. ಆದರೆ ಅದೆಲ್ಲಾ ಸಾಮಾನ್ಯವೆಂಬಂತೆ ಬ್ಯಾಗೆಂಬ ಮೂಟೆಯ ಹೊತ್ತ ಆ ಪೋರ ಬೆಳಬೆಳಗ್ಗೆ ಶಾಲೆಗೆ ಹೊರಟ. ಬ್ಯಾಗಲ್ಲಿ ಭದ್ರವಾಗಿದ್ರೂ ನನ್ನೊಡೆಯನ ಮಾತುಗಳಿಂದ ನಾನೆಲ್ಲಿ ಸಾಗುತ್ತಿದ್ದೇನೆಂಬ ಅರಿವಾಗುತ್ತಿತ್ತು. ಕೆಲ ಹೊತ್ತಿನಲ್ಲೇ ಎಲ್ಲೋ ನಿಂತ ಭಾವ. ಅವನ, ಅವನಮ್ಮನ ದನಿಯ ಜೊತೆಗೆ ಇನ್ನೊಂದಿಷ್ಟು ಮಹಿಳೆಯರ, ಅವರ ಮಕ್ಕಳ ದನಿಗಳು ಕೇಳತೊಡಗಿದ್ವು. ಯಾರಪ್ಪ ಅವ್ರು ಅಂದ್ರಾ ? ಅವ್ರೆಲ್ಲ ತಮ್ಮ ಮಕ್ಕಳ ಶಾಲೆ ಬಸ್ಸಿಗೆ ಹತ್ತಿಸೋಕೆ ಅಲ್ಲಿಗೆ ಬರ್ತಿದ್ದ ಜನಗಳು ಅಂತ ಸ್ವಲ್ಪ ದಿನಗಳ ನಂತರ ತಿಳಿಯಿತು ಬಿಡಿ. ಅ ವಿಷ್ಯ ಒತ್ತಟ್ಟಿಗಿರ್ಲಿ. ಏನಪ್ಪ ರಾಹುಲ್ ಫುಲ್ ಸ್ಮಾರ್ಟಾಗಿದೀಯ ? ಏನು ಮಿಸೆಸ್ ಶೇಖರ್ ಪ್ರಿಯಾಂಕ ಒಬ್ಳೇ ಬಂದಿದಾಳೆ ಇವತ್ತು, ಪ್ರಮೋದ್ ಎಲ್ಲಿ ಕಾಣ್ತಾ ಇಲ್ಲ ಇತ್ಯಾದಿ ಇಂಗ್ಲೀಷ್ ಮಾತುಗಳಲ್ಲಿ ಅಮ್ಮಂದಿರಿದ್ರೆ ಹುಡುಗರ ದನಿ ಕೊಂಚ ಕಮ್ಮಿಯಾಗಿತ್ತು. ಸಡನ್ನಾಗಿ ನಾನಿದ್ದ ಬ್ಯಾಗು ಎಲ್ಲೋ ಬಿದ್ದ ಹಾಗೆ ಭಾಸವಾಯ್ತು. ಓ, ಬಿದ್ಬುಟ್ಯಾ ನನ್ನೊಡೆಯ ಅಂತ ಕೇಳೋ ಮನಸ್ಸಾಯ್ತು. ಆದ್ರೆ ನನ್ನ ಮಾತು ಅವನಿಗೆ ಅರ್ಥವಾಗೋದಾದ್ರೂ ಹೇಗೆ ? ಛೇ. ಮರ್ತೇ ಹೋಗ್ಬುಡತ್ತಪ ಇದು ಅಂತ್ಕೊಳೋ ಹೊತ್ತಿಗೆ ಅವನಮ್ಮನ ದನಿ ಕೇಳ್ತು. ಈ ಬ್ಯಾಗ್ ಹಾಕ್ಕೊಂಡು ಓಡ್ಬೇಡ ಅಂತ ಎಷ್ಟು ಸಲ ಹೇಳೋದು ನಿಂಗೆ ರಾಹುಲ್ ? ಆಡೋದಿದ್ರೆ ಬ್ಯಾಗ್ ತೆಗ್ದಿಟ್ಟು ಆಡು. ಇಲ್ಲೇ ಆಡ್ಬೇಕ ನಿಂಗೆ ? ಶಾಲೇಲಿ ಗ್ರೌಂಡಿರಲ್ವಾ ಅಂತ ಬಯ್ಯೋಕೆ ಶುರು ಮಾಡಿದ್ರು ರಾಹುಲನಮ್ಮ. ಅಯ್ಯೋ ಆಡ್ಕೊಳ್ಲಿ ಬಿಡಿ ಮಿಸೆಸ್ ಶರ್ಮ. ಶಾಲೇಲಿ ಪೀಟಿ ಸರ್ ರಜಾ ಅಂತ ಪೀಟಿ ಪೀರಿಯಡ್ಡಿಗೆ ಬಿಡ್ತಿಲ್ವಂತೆ ಕಳೆದ ಮೂರು ದಿನದಿಂದ. ಸಂಜೆ ಮನೆಗೆ ಬರ್ತಿದ್ದಂಗೆ ಟ್ಯೂಷನ್ನು ಅಂತ ಹೋಗ್ತಾವೆ. ಅಲ್ಲಿಂದ ಬರೋ ಹೊತ್ತಿಗೆ ಸುಸ್ತಾಗಿ ಮಲಗೋ ಹಾಗೆ ಆಗಿರ್ತಾವೆ. ಶಾಲೆ ಬಸ್ಸು ಬರೋವರೆಗಿನ ಒಂದೈದು ನಿಮಿಷನೇ ಫುಲ್ ಖುಷಿ ಖುಷಿಯಾಗಿ ಕಳಕಳಿಯಿಂದ ಇರೋದು ಇವು. ಆಡ್ಕೊಳ್ಳಿ ಬಿಡ್ಲಿ ಅಂದ್ರು ಮತ್ತೊಬ್ಬ ಮಹಿಳೆ. ನೀವು ಯಾವಾಗ್ಲೂ ಇವನ ಬೆಂಬಲಕ್ಕೆ ನಿಲ್ತೀರ ಅಂತ್ಲೇ ಇವ ಇಲ್ಲಿ ಇಷ್ಟು ಹಾರಾಡೋದು ಮಿಸೆಸ್ ಶರ್ಮ . ನೋಡಿ ಎಷ್ಟು ಆರಾಮಾಗಿ ಆ ಬ್ಯಾಗು ಇಟ್ಟು ಮತ್ತೆ ಆ ಮಕ್ಳ ಜೊತೆ ರೈಲಿನ ತರ ಸುತ್ತುತಾ ಇದಾನೆ. ದಿನಾ ಹಿಂಗೆ ಬಿದ್ದು ಇವನ ಸೂಟು , ಶೂಸು ಕೊಳೆ ಮಾಡ್ಕೊಂಡ್ರೆ ಮಾರ್ನೇ ದಿನಕ್ಕೆ ಹೆಂಗೆ ತಯಾರು ಮಾಡೋದು ? ಐದು ಜೊತೆ ಸೂಟಿಡ್ಬೇಕು ಅಷ್ಟೆ ನಾನು ಅಂತಿದ್ರು ರಾಹುಲನಮ್ಮ. ಅರೆ, ಇದು ಬಿರು ಬೇಸಿಗೆಯಲ್ವಾ ? ಈಗ್ಯಾಕೆ ಮಕ್ಕಳಿಗೆ ಸೂಟು ? ಈ ಸೂಟು ಬೂಟುಗಳೆಲ್ಲಾ ಚಳಿ ಭಯಂಕರ ಇರೋ ವಿದೇಶಗಳ ಹವೆಗೆ  ಹೊಂದೋದೇ ಹೊರತು ನಮ್ಮ ದೇಶಕ್ಕಲ್ಲವಂತ ಎಲ್ಲೋ ಕೇಳಿದ ಹಾಗಿತ್ತಲ್ಲ. ಒಂದನೇ ಕ್ಲಾಸ ಮಕ್ಕಳಿಗೆ ಬೇಸಿಗೆಯಲ್ಲೂ ಯಾಕಪ್ಪಾ ಈ ಹಿಂಸೆ ಅಂತ ಯೋಚ್ನೆ ಮಾಡ್ತಾ ಇರೋ ಹೊತ್ತಿಗೆ ರಾಹುಲನ ಶಾಲೆಯ ಬಸ್ಸು ಬಂದ ಶಬ್ದವಾಯ್ತು.

ಅಮ್ಮಂದಿರ, ಅಪ್ಪಂದಿರ ಟಾಟಾ ಬಾಯ್ಗಳ ಸದ್ದು ನಿಲ್ಲುತ್ತಿದ್ದಂತೆಯೇ ಬಸ್ಸು ಮುಂಚೆ ಹೊರಟ ಸದ್ದಾಯ್ತು. ಮುಂಚೆ ಇದ್ದದ್ದಕ್ಕಿಂತಲೂ ಹೆಚ್ಚಿನ ಮಕ್ಕಳ ಕಲರವ, ಮದ್ಯೆ ಮದ್ಯೆ ಅವರನ್ನು ಸುಮ್ಮನಾಗಿಸುತ್ತಿದ್ದ ಒಂದು ಹೆಣ್ಣುಮಗಳ ದನಿ ಕೇಳ್ತಾ ಇತ್ತು. ಹೇ, ನಿನ್ನೆ ಮಿಸ್ ಹೊಸ ಎರಡು ಲೈನಿನ ಕಾಪಿ ತರೋಕೆ ಹೇಳಿದ್ರಲ. ಅದಕ್ಕೆ ಒಂದು ಹೊಸ ಹೂವಿನ ಬೈಂಡಿಗಿನ ಬುಕ್ ತಗೊಂಡೆ ಕಣೋ ಅಂತ ನನ್ನೇ ಹೊರತೆಗೆಯಬೇಕೇ ? ಹೊರಗಿನ ಹೊದಿಕೆ ಬಿಚ್ಚಿ ಅದರ ಒಳಗಿದ್ದ ಹೂವ ಬಗ್ಗೆ ಮೆಚ್ಚುಗೆಯ ಮಾತುಗಳಾಡೋ ಹೊತ್ತಿಗೆ ಪಕ್ಕದಲ್ಲಿದ್ದವ ಅದ್ಯಾವುದೋ ಕಾರಿನ ಹೊದಿಕೆಯಿದ್ದುದ ತೆಗೆದಿದ್ದ. ಏ. ಮಿಸ್ಸು ಬೈತಾರೆ ಅಂತ ಮತ್ತೆ ಬೈಂಡನ್ನು ಯಥಾಪ್ರಕಾರ ಹಾಕಿದ ಕೈಗಳು ನನ್ನ ಮತ್ತೆ ಒಳಗಿಟ್ಟು ಬಿಟ್ವು. ಏ ತಡೀರೋ. ನಿಮ್ಮ ಬಸ್ಸು ಹೆಂಗಿದೆ. ನಿಮ್ಮನ್ನೆಲ್ಲ ಹತ್ತಿಸಿಕೊಂಡ ಮಹಿಳೆ ಹೆಂಗಿದಾಳೆ ? ಮಕ್ಕಳ ಜಗತ್ತು ಹೆಂಗಿದೆ ಅಂತ ಇನ್ನೂ ಸ್ವಲ್ಪ ಹೊತ್ತು ನೋಡಬೇಕು ಅಂತ ಕೂಗೋಣವೆನ್ನಿಸಿತು. ಊಹೂಂ. ನನ್ನ ದನಿ ಅರ್ಥವಾಗದ ಅವರನ್ನೇನು ಕೇಳಿ ಏನು ಪ್ರಯೋಜನ ? ಕಿಟಕಿ ಪಕ್ಕದಲ್ಲಿ ನಿಂತು ಪಕ್ಕದಲ್ಲಿ ಬರ್ತಿರೋ ಮತ್ತೊಂದು ಬಸ್ಸಲ್ಲಿದ್ದವರನ್ನು ನೋಡ್ತಿದ್ದವರು, ಹೊರಗೆ ಬರ್ತಿದ್ದ ಕಾರು, ಬಸ್ಸು, ಬೈಕುಗಳನ್ನೇ ತಮ್ಮ ಹೊರಪ್ರಪಂಚವೆಂಬಂತೆ ಬೆರಗುಗಣ್ಣಿಂದ ನೋಡ್ತಿದ್ದವರು, ತನ್ನ ಹುಟ್ಟಿದಬ್ಬ ಅಂತ ಬಸ್ಸಲ್ಲಿದ್ದ ಎಲ್ಲರಿಗೂ ಸಿಹಿ ಹಂಚುತ್ತಿದ್ದ ಮತ್ತೊಬ್ಬ ಹುಡುಗಿ, ಇದೇನು ಟ್ರಾಫಿಕಪ್ಪಾ ಇಲ್ಲಿ. ಬೆಳಬೆಳಗ್ಗೆ ಈ ಶಾಲೆ ಮಕ್ಕಳನ್ನು ಶಾಲೆ ತಲುಪಿಸೋ ಹೊತ್ತಿಗೆ ಸಾಕಾಗಿ ಹೋಗುತ್ತೆ . ಥೋ ಅಂತ ಶಾಪ ಹಾಕುತ್ತಿದ್ದ ಡ್ರೈವರಪ್ಪ..ಇವಿಷ್ಟೇ ಆ ಕ್ಷಣಗಳಲ್ಲಿ ನನಗೆ ದಕ್ಕಿದ ಹೊರಪ್ರಪಂಚ.

ಶಾಲೆಯ ಪ್ರವೇಶವಾಯ್ತು ಕೊಂಚ ಹೊತ್ತಿನಲ್ಲಿ. ನನ್ನ ಒಂದೆಡೆ ಇರಿಸಿ ಎಲ್ಲೋ ತೆರಳಿದ ನನ್ನೊಡೆಯ. ಅದ್ಯಾವ್ದೋ ಗಂಟೆಯ ಶಬ್ದ ಕೇಳ್ತಾ ಇತ್ತು. ಕೊಂಚ ಹೊತ್ತು ನಿಶ್ಯಬ್ದ. ಮತ್ತೆ ಮಕ್ಕಳ ಮಧುರ ಸಾಮೂಹಿಕ ದ್ವನಿ ಕೇಳಿ ಪುಲಕಿತಗೊಂಡೆ ನಾನು.ಅದರಲ್ಲಿ ನನ್ನೊಡೆಯನ ದನಿಯೂ ಕೇಳಬಹುದೇ ಅಂತ ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ. ಅದೆಷ್ಟೋ ಸಂಖ್ಯೆಯ ಮಕ್ಕಳು ದಿನಾ ಒಂದಾಗಿ ಹೇಳೋ ಅದಕ್ಕೆ ಬೆಳಗಿನ ಪ್ರಾರ್ಥನೆ ಅನ್ನುತ್ತಾರಂತ ಆಮೇಲೆ ತಿಳಿಯಿತು ಬಿಡಿ. ಕೊಂಚ ಹೊತ್ತಲ್ಲೇ ನನ್ನೊಡೆಯನ ತರಗತಿ ಶುರುವಾಯ್ತು ಅಂತ ನನ್ನನ್ನು ಹೊರತೆಗೆದಾಗ ಗೊತ್ತಾಯ್ತು. ನಾನು ಬರೆದ ಹಾಗೆ ಬರೆಯಿರಿ ಅಂತ ಇಂಗ್ಲೀಷಿನಲ್ಲಿ ಹೇಳುತ್ತಿದ್ದರು ಅವನ ಮೇಡಂ. ಸರಿ ಅಂತ ನನ್ನ ತೆಗೆದು ಬರೆಯಲು ಶುರು ಮಾಡಿದ. ಏನಾಶ್ಚರ್ಯ ? ಒಂದನೇ ತರಗತಿ ಹುಡುಗನ ಕೈಯಲ್ಲಿ ಇಂಗ್ಲೀಷ್ ಪದಗಳ ಬರೆಸುತ್ತಿದ್ದಾರೆ ! ಅದಾದ ಮೇಲೆ ಮತ್ತೆ ಮತ್ತೆ ಪಿರಡುಗಳು. ನನ್ನ ಒಳಗಿಟ್ಟು ಉಳಿದ ಕಟ್ಟುಗಳನ್ನೆತ್ತಿಕೊಳ್ಳುತ್ತಿದ್ದ ಅವನ ಕೈಯಲ್ಲಿ ಇದೇ ತರಹ ಪುನರಾವರ್ತನೆಯಾಗುತ್ತಿರಬಹುದಲ್ವಾ ಅನಿಸಿತು. ಒಂದನೇ ತರಗತಿ ಅಂದಾಗ ಪಾಠಿ-ಬಳಪ, ಅಆಇಈ ಅಂತಿದ್ದ ಕಾಲ ಹೋಗಿ ಬುಕ್ಕು, ಪೆನ್ಸಿಲ್ಲು , ಪೆನ್ನುಗಳು ಬಂದುಬಿಟ್ಟಿದೆ ! ಆಟವಾಡಿಕೊಂಡು ನಲಿಯೋ ಮನಸ್ಸುಗಳಿಗೆ, ಎಳೆ ಕೈಗಳಿಗೆ ಅದೆಷ್ಟು ಹಿಂಸೆಯಾಗುತ್ತಿರಬಹುದು ಅಂತ ನೆನೆದು ನನ್ನ ಕಣ್ಣುಗಳಲ್ಲೊಮ್ಮೆ ನೀರು ಜಿನುಗಿತು. ಓ. ನಾನು ನಿಮ್ಮ ಹಾಗೆ ಮನುಷ್ಯನಲ್ಲವಲ್ಲ. ನನ್ನ ದನಿಯೇ ಕೇಳದ ನಿಮಗೆ ನಾನತ್ತಿದ್ದು ಎಲ್ಲಿ ಗೊತ್ತಾಗಬೇಕು ? !

ಹಿಂಗೇ ದಿನಗಳುರುತ್ತಿದ್ದಂತೆ ಈ ಬ್ಯಾಗ ಹೊತ್ತು ಸ್ಕೂಲು, ಟ್ಯೂಷನ್ನುಗಳಿಗಾಗಿ ಓಡೋ ರಾಹುಲನ ಬಗ್ಗೆ ಮರುಕ ಮೂಡಲಾರಂಭಿಸಿತು. ಯಾವತ್ತು ಈ ಬ್ಯಾಗ ಬಂಧನದಿಂದ ಬಿಡುಗಡೆ ಸಿಕ್ಕಿ, ಬೈಂಡಿನ ಕೋಳದಿಂದ ಮುಕ್ತಿ ಸಿಗುತ್ತೋ ಅಂತ ಕಾಯತೊಡಗಿದೆ. ಕೊನೆಗೂ ಎಣಿಸುತ್ತಿದ್ದ ಆ ಸುದಿನ ಬಂತು. ರಾಹುಲ ಮೊದಲನೇ ತರಗತಿ ಪಾಸಾಗಿ ಎರಡನೇ ತರಗತಿಗೆ ತೇರ್ಗಡೆಯಾಗಿದ್ದ ಸುದಿನ.   ನನ್ನೊಡೆಯ ಪಾಸಾಗಿರೋದಂದ್ರೆ ಅದು ಕಮ್ಮಿ ಖುಷಿಯಾ ? ಹಕ್ಕಿಗಳಂತೆ ರೆಕ್ಕೆಯಿದ್ದಿದ್ರೆ ಒಮ್ಮೆ ಸುತ್ತೆಲ್ಲಾ ಹಾರಿ ಚೀಂ ಚೀಂ ಅಂದು ಗಂಟಲು ನೋಯುವವರೆಗೂ ಕೂಗಿ ಬಂದುಬಿಡುತ್ತಿದ್ದೆನೇನೋ. ಆದ್ರೆ ಹಕ್ಕಿಯಲ್ಲವಲ್ಲ. ಹಾಕಿದ್ದ ಬೈಂಡು ಅರ್ಧರ್ಧ ಹರಿದಿದೆಯಾದ್ರೂ , ಕಟ್ಟಿದ ಕಟ್ಟ ಬಂಧನ ಹಾಗೇ ಇದೆಯಲ್ಲ. ಆದ್ರೆ ನನ್ನಾ ಸಂತಸದ ಕ್ಷಣಗಳು ಕೊನೆಯಾಗೋಕೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ನನ್ನ, ಮತ್ತು ಮೊದಲನೇ ತರಗತಿಯ ಬುಕ್ಕುಗಳನ್ನೆಲ್ಲಾ ಒಂದೆಡೆ ರಾಶಿ ಮಾಡಿದ ರಾಹುಲನಮ್ಮ , ರೀ ಈ ಬುಕ್ಕುಗಳನ್ನೆಲ್ಲಾ ರದ್ದಿಯಂಗಡಿಗೆ ಹಾಕ್ಬೇಕು. ಮನೇಲಿ ಜಾಗ ಇಲ್ಲ. ಮತ್ತೆ, ಸಂಜೆ ಹೊಸ ಬುಕ್ಕು ತರೋಕೆ ಶ್ರೀರಾಮ ಪ್ರಾವಿಷನ್ ಸ್ಟೋರಿಗೆ ಹೋಗ್ಬೇಕು ಗೊತ್ತಾಯ್ತಾ ? ಅಂದ್ರು. ಏ, ಇನ್ನು ಮುಂದಿನ ವರ್ಷಕ್ಕೆ ತಾನೇ ಬುಕ್ಕುಗಳು ? ನಿಧಾನ ತಂದ್ರಾಯ್ತು ಬಿಡು ಅಂತ ರಾಹುಲನಪ್ಪ ಹೇಳ್ತಾ ಇದ್ರೆ.. ಆ ಮಾತ ಅರ್ಧಕ್ಕೇ ತುಂಡರಿಸಿದ ರಾಹುಲನಮ್ಮ , ಏ ಮರ್ತೋಯ್ತಾ ? ಆ ಸಮ್ಮರ್ ಕ್ಯಾಂಪು ಅಂತ ಇಪ್ಪತ್ತು ದಿನ ಕಳಿಸಿ ಬಿಟ್ರೆ ಅವನ ಜೊತೆಗೆ ನಿಮಗೂ ಶಾಲೆ ಅಂತ ಒಂದಿದೆ ಅಂತ್ಲೇ ಮರೆತುಹೋಗುತ್ತೆ! ಮುಂದಿನ ವರ್ಷದ ಮೊದಲ ದಿನ ಮತ್ತೆ ಪುಸ್ತಕ ಅಂತ ಓಡಬೇಕು. ಅದೆಲ್ಲಾ ಬೇಡ. ಇವತ್ತೇ ಹೋಗೋಣ ಅಂದ್ರು. ಅಬ್ಬಾ ಅಂದ್ಕೊಂಡೆ. ಉಳಿದ ಕಟ್ಟುಗಳ ಜೊತೆಗೆ ರದ್ದಿಯಂಗಡಿ ಸೇರಿದೆ. ಅಲ್ಲಿಂದ ಒಬ್ಬನ ಕೈಸೇರಿ ಕಡ್ಲೆಪುರಿಯಂಗಡಿಯ ಖುಷಿ ಖುಷಿಯಲ್ಲೇ ಸೇರಿದೆ, ಹೊಸ ಕನಸ ಹೊತ್ತು. ಆದ್ರೆ ಕೆಲ ದಿನಗಳಲ್ಲೇ ಸತ್ಯದರ್ಶನ. ಯಾವುದು ಸತ್ಯ ಅನ್ನೋ ವಾದವ ಆಮೇಲೆ ಮಾಡೋಣವಾಗಲಿ, ನನ್ನ ಮಾತುಗಳ ಮುಂದುವರಿಕೆಯಾಗಲಿ.ಅಲ್ಲಿ ಜನ ನನ್ನಂತವರನ್ನು ಕೈಯೊರೆಸಿ ಬಿಸಾಕೋದನ್ನ ನೋಡಿದಾಗ ಕಾಪಿಯಾಗಿದ್ದ ಬದುಕೇ ಎಷ್ಟು ಚೆನ್ನಾಗಿತ್ತಲ್ವಾ ? ಎಷ್ಟು ಗೌರವಯುತವಲ್ವಾ ಅನಿಸ್ತಿದೆ. ಆಗ ಸ್ವಚ್ಛಂದವಾಗಿ ಬದುಕಬೇಕು ಹಾರಬೇಕು ಅಂತೆಲ್ಲಾ ಕನಸ ಕಂಡಿದ್ದವ ನಾನೀಗ ಬೀದಿಯಲ್ಲಿ ಗಾಳಿ ಬಂದಾಗೆಲ್ಲಾ ಹಾರುತ್ತಿದ್ದೇನೆ. ಎಷ್ಟೋ ದಿನಗಳ ಕಾಲ ಬಿಸಿಲು, ಗಾಳಿ ತಿನ್ನುತ್ತಾ ಕುಳಿತಿದ್ದ ನನಗೆ ಕೊನೆಗೂ ಮತ್ತೊಮ್ಮೆ ಮಕ್ಕಳ ದನಿ ಕೇಳಿ ಖುಷಿಯಾಯ್ತು . ಆದರೇನು ಅವರ ಮೈಯಲ್ಲಿ ಸೂಟಿಲ್ಲ. ಸಾಮಾನ್ಯ ಶಾಲಾ ಹುಡುಗರಂತೆ ಅಂಗಿ ಚಡ್ಡಿಗಳೂ ಇಲ್ಲ. ಮಾಸಿದ, ಅದೆಷ್ಟೋ ತೇಪೆ ಕಂಡ ಅಂಗಿ, ಆ ದೊಗಲೆ ಅಂಗಿಯ ಕೆಳಗೆ ಮುಚ್ಚೇ ಹೋಗಿರುವ ಹೇಳಿಕೊಂಡರೆ ಮಾತ್ರ ಹೌದೆನ್ನಬಹುದಾದ ಒಂದು ಹರಕು ಚಡ್ಡಿ. ನನ್ನಂತಹ ಬಿದ್ದ ಪೇಪರ್ರು, ಪ್ಲಾಸ್ಟಿಕ್ಕುಗಳ ಚಿಂದಿಯಾಯುವ ಹುಡುಗರವರು. ಬೇಸಿಗೆಯಲ್ಲೂ ಸೂಟು ಹೊದ್ದು ಶಾಲೆಗೆ ಬೆವರುತ್ತಾ ಹೋಗೋ ಹುಡುಗರ ಭಾರತವೊಂದೆಡೆ. ಚಳಿಗಾಲದಲ್ಲೂ ಬೆಚ್ಚನೆಯ ಹೊದಿಕೆ ಸಿಗದ ತಮ್ಮ ನಸೀಬನ್ನೇ ಹಾಸಿ ಹೊದೆದು ಮಲಗಬೇಕಾದ ಪರಿಸ್ಥಿತಿಯ ಬೀದಿ ಮಕ್ಕಳ ಭಾರತವೊಂದೆಡೆ. ಅರೆ. ಎತ್ತ ಸಾಗುತ್ತಿದೆ ನನ್ನ ವಿಚಾರಧಾರೆ ? ಕಾಲದೊಂದಿಗೆ ಪಕ್ವವಾಗುತ್ತಿದೆಯಾ ? ಕೇಳಿದ ಮಾತುಗಳಿಂದ, ಕಂಡ ಸತ್ಯಗಳಿಂದ ರೋಸತ್ತು ಕ್ರಾಂತಿಯಾಗಬೇಕೆಂಬ ರೊಚ್ಚಿಗೇಳುತ್ತಿದೆಯಾ ? ಗೊತ್ತಿಲ್ಲ. ಸತ್ಯವೆಂಬುದೇನೆಂಬ ಮಾತು ಒತ್ತಟ್ಟಿರಿರಲಿ ಮತ್ತೊಮ್ಮೆ. ಆ ಮಕ್ಕಳಿಂದ ಅದೆಷ್ಟೋ ಕೈ ಬದಲಾಗಿ ಮತ್ತೆ ನನ್ನ ಗಮ್ಯವಾದ ಪುನರ್ಬಳಕೆ ಕೇಂದ್ರವ ಸೇರಿದ್ದೇನೆ. ಆದರೆ ನಾ ಹುಟ್ಟಿಬಂದ ಜಾಗವಲ್ಲವಿದು. ಯಾವುದೋ ಹೊಸ ಜಾಗ. ಹೊಸ ಮುಖಗಳು. ಮತ್ತಿನ್ಯಾವುದೋ ರೂಪ ಪಡೆದು ಹೊಸ ಜನ್ಮ ಪಡೆಯಲು ಸಿದ್ದನಾಗುತ್ತಿದ್ದೇನೆ. ನನ್ನನುಭವಗಳ ನನ್ನಂತೇ ಕಾದು ಕುಳಿತ ಎಳೆಜೀವಗಳೊಡನೆ ಹಂಚಿ, ಜೊತೆಯಾದ ಹಿರಿಜೀವಗಳಿಗೆ ಕಿವಿಯಾಗಿ ಹೊಸತೊಂದು ಬಾಳಲಿ ಮತ್ತಷ್ಟು ಮಾಗಲು ಬದ್ದನಾಗುತ್ತಿದ್ದೇನೆ.

Monday, December 22, 2014

ನಾನೋಡಿದ ಸಿನಿಮಾ "ಲಿಂಗ"

ರಾಜನಾದೋನು ಎಲ್ಲಿದ್ರೂ ರಾಜನೇ. ನಾನು ಈಗ್ಲೂ ರಾಜ. ಇವಳೇ ನನ್ನ ರಾಣಿ ಅಂತಾನೆ ರಾಜ ಲಿಂಗೇಶ್ವರನ್.
ಸ್ವಾತಂತ್ರ್ಯ ಹೋರಾಟ ಅಂತೀರಾ ಇದಕ್ಕೆ ? ಸ್ವಾಂತತ್ರ್ಯ ಹೋರಾಟಕ್ಕೆ ಶಾಂತಿಯುತ ಮಾರ್ಗ ಅಂದ್ರೆ ಗಾಂಧೀನ ಸೇರಿ, ಹಿಂಸೆ ಅಂದ್ರೆ ಜಗದೀಶ್ ಚಂದ್ರ ಬೋಸನ್ನ ಸೇರಿ, ನಿಮ್ಮ ನಾಯಕನ್ನ ಬಿಡಿಸೋಕೆ ಅಂತ ನನ್ನ ಬಂಧಿಸಿದ್ರೆ ಸಮಸ್ಯೆ ಪರಿಹಾರ ಆಗತ್ತಾ ? ನಾಳೆ ಮತ್ತೆ ಬಂಧಿಸ್ತಾರೆ. ಆಗ ಇನ್ನೊಬ್ಬ ಡಿ.ಸಿಯನ್ನು ಬಂಧಿಸ್ತೀರಾ ಅಂತಾರೆ ಡಿ.ಸಿ. ತಮಿಳು ಅರ್ಥವಾಗದ ನನ್ನಂತವನಿಗೂ ಸುಲಭವಾಗಿ ಹೀಗೇ ಹೇಳಿರಬೇಕು ಅನಿಸಿಬಿಡುವಂತಹ ಕಥೆ ಮತ್ತು ನಿರೂಪಣೆ.ಒಂದು ಕೋಟಿಯ ಆಭರಣ ಕದಿಯೋ ಕಳ್ಳನಿಂದ ಒಂದು ಕೋಟಿಯ ಹಾರ ಕದ...ಿಯೋ ಪ್ರಯತ್ನ , ಕೇಂಬ್ರಿಡ್ಜಿನಿಂದ ಸಿವಿಲ್ ಇಂಜಿನಿಯರಿಂಗ್ ಓದಿದವನೊಬ್ಬ ,ಮೈಸೂರಿನ ಮಹಾರಾಜನೊಬ್ಬ, ಡಿ.ಸಿ ಯೊಬ್ಬ, ರೈತನಾಗಿ ಗಡ್ಡ ಬೆಳೆಸಿಕೊಂಡು ಹಳ್ಳಿ ಮೂಲೆಯಲ್ಲಿ ಇರುವನೊಬ್ಬ. ಇವರೆಲ್ಲಾ ಯಾರು ಅಂದ್ರಾ ? ಸೂಪರ್ ಸ್ಟಾರ್ ರಜನೀಕಾಂತರ "ಲಿಂಗ" ಚಿತ್ರದ ಕೆಲಪಾತ್ರಗಳು ಅವರ್ಯಾರು ಅಂತ ಈಗಾಗ್ಲೇ ಚಿತ್ರ ನೋಡಿರೋರಿಗೆ ಗೊತ್ತಿರತ್ತೆ. ಗೊತ್ತಿಲ್ಲದವರು ಯಾರು ಅಂತ ಕೇಳಿ ಅದ್ರ ಸವಿ ಮಿಸ್ ಮಾಡ್ಕೊಳ್ಳೋ ಬದ್ಲು ಚಿತ್ರ ನೋಡೋದೇ ಮೇಲು ಅನಿಸುತ್ತೆ.

ನಮ್ಮೂರ ಹತ್ತಿರದ ಜೋಗ ಜಲಪಾತ, ಅದು ಇಳಿಯುವಲ್ಲಿ ಸಿಗೋ ತಂಗುದಾಣ, ಲಿಂಗನಮಕ್ಕಿ ಡ್ಯಾಮು, ಅದರ ಹತ್ತಿರ ನಿರ್ಮಿಸಿದ ದೇವಾಲಯ, ಮೈಸೂರು ಅರಮನೆಯ ಕಣ್ಣು ಕೋರೈಸುವಂತಹ ಚಿತ್ರಣ, ಸಹಜವಾಗೇ ಬ್ರಿಟಿಷರು ಅಂದರೆ , ಅವರ ನಯವಂಚಕತನಕ್ಕೆ, ಅವರ ಬಾಲಂಗೋಚಿಗಳ ತರ ಬೆನ್ನಿಗೇ ಚೂರಿ ಹಾಕೋ ಭಾರತೀಯರನ್ನ ಕಂಡಾಗ ಉಕ್ಕೋ ಸಿಟ್ಟು, ಭಾರತೀಯತೆ ಅಂದ್ರೆ ಮೂಡೋ ಪ್ರೇಮ, ದರಿದ್ರ ಭ್ರಷ್ಟಾಚಾರವೆಂದ್ರೆ ಮೂಡೋ ತಿರಸ್ಕಾರವೆಲ್ಲಾ ಚಿತ್ರವನ್ನು ಒಂದಿಚು ಜಾಸ್ತಿಯೇ ಇಷ್ಟಪಡುವಂತೆ ಮಾಡಿರಲೂ ಬಹುದು. ಬ್ರಹ್ಮಾನಂದಂ, ಜಗಪತಿ ಬಾಬು, ಸೋನಾಕ್ಷಿ ಸಿನ್ಹ, ಅನುಷ್ಕಾ ಶೆಟ್ಟಿ, ರಜನಿಯ ನಾಲ್ಕು ಸ್ನೇಹಿತರ ಪಾತ್ರಗಳು, ಎ.ಆರ್, ರೆಹಮಾನ್ರ ಸಂಗೀತ ಮುಂತಾದವೂ ಚಿತ್ರಕ್ಕೊಂದು ಮೆರುಗು ಕೊಟ್ಟಿದೆ.ಹುಡುಕ ಹತ್ತಿದರೆ ಹತ್ತೆಂಟು ಲೋಪಗಳು ಕಾಣಬಹುದೇನೋ. ಆದ್ರೆ ಯಾವ ನಿರೀಕ್ಷೆಗಳೂ ಇಟ್ಟುಕೊಳ್ಳದೇ ನೋಡೋ ರಜನಿ ಅಭಿಮಾನಿಗಳಿಗೊಂದು ಹುಟ್ಟುಹಬ್ಬದ ಕೊಡುಗೆ ಅಂತಲೂ ಹೇಳ್ಬೋದೇನೋ "ಲಿಂಗ".

Sunday, December 21, 2014

ನಾ ನೋಡಿದ ಸಿನಿಮಾ : ಪಿ.ಕೆ !

 ಇದೊಂತರ ಪಕ್ಕಾ ಕಾಮಿಡಿ ಫಿಲ್ಮು, ಅಮೀರರ ಸೂಪರ್ ಅಭಿನಯ ಅಂತ ವೈಭವೀಕರಿಸಿ ಅಥವಾ ಇಲ್ಲಿ ವಿಡಂಬನೆಯಿದೆ, ಧರ್ಮಗಳ ಲೇವಡಿಯಿದೆ ಅಂತ ವಸ್ತುನಿಷ್ಟವಾಗಿ .. ಹೀಗೆ ನೂರಾರು ತರದಲ್ಲಿ ಗುಣಾವಗುಣಗಳ ಪಟ್ಟಿ ಮಾಡಬಹುದು. ಆದ್ರೆ ಅನೇಕ ಕಡೆ ಇವೆಲ್ಲವನ್ನೂ ಮೀರಿದ ಹಲವು ಗಂಭೀರ ಪ್ರಶ್ನೆಗಳಿವೆ.ಸುಮ್ನೇ ಒಂದು ಉದಾಹರಣೆ ಅನ್ನೋದಾದ್ರೆ..ಮನುಷ್ಯನೊಬ್ಬ ನಂಬಿಕೆಯನ್ನೇ ಕಳೆದುಕೊಂಡ್ರೆ ನೇಣು ಹಾಕಿಕೊಳ್ತಾನೆ.ನಾಡಿ ಕಡಿದುಕೊಂಡು ರಕ್ತ ಸೋರಿ ಸಾಯ್ತಾನೆ ಇಲ್ಲ ಇನ್ನೇನು ಮಾಡ್ಕೊಂಡು ಜೀವ ಕಳೆದುಕೊಳ್ತಾನೆ. ಒಂದು ತಿಲಕದಿಂದ, ಒಂದು ನಮಸ್ಕಾರದಿಂದ ಅವನಿಗೊಂದು ಭರವಸೆ ಸಿಗುತ್ತೆ ಅಂದ್ರೆ ಅದನ್ನು ತಪ್ಪಿಸೋಕೆ ನೀನ್ಯಾರು ? ಈಗ ಇರೋ ದೇವರನ್ನೆಲ್ಲಾ ಅಳಿಸಿಯೇ ಬಿಟ್ಟೆ ಅಂದ್ರೆ ಅದ್ರ ಬದ್ಲು ಏನು ಕೊಡ್ತೀಯ ನೀನು ? ಅಂತಾನೊಬ್ಬ ಸ್ವಾಮೀಜಿ. ಸ್ವಾಭಾವಿಕವಾಗೇ ನಾಸ್ತಿಕವಾದಿಗೆ ಆಸ್ತಿಕನೊಬ್ಬ ಕೇಳುವ ಪ್ರಶ್ನೆಯೇ ಇದು. ದೇವರನ್ನು ನಂಬುತ್ತೀನಿ. ನಮ್ಮೆಲ್ಲರನ್ನು ನಿರ್ಮಿಸಿರುವ ಆ ಒಬ್ಬ ದೇವರನ್ನು ನಂಬುತ್ತೀನಿ. ನೀವು ಸೃಷ್ಟಿಸಿರುವ ನೂರಾರು ಡೂಪ್ಲಿಕೇಟ್ ದೇವರುಗಳನ್ನಲ್ಲ. ಜನರಿಗೆ ಮೋಸ ಮಾಡುತ್ತಿರೋ ರಾಂಗ್ ನಂಬರ್ಗಳನ್ನಲ್ಲ ಅಂತಾನೆ- ಪಿ.ಕೆ ! ಡೈರೆಕ್ಟರ್ ಆಸ್ತಿಕನಾಗಿದ್ರೆ ಚಿತ್ರವನ್ನು ಮೊದಲ ಪ್ರಶ್ನೆಯಲ್ಲೇ ಮುಗಿಸಬಹುದಿತ್ತು. ಪಕ್ಕಾ ನಾಸ್ತಿಕನಾಗಿದ್ರೆ ಎರಡನೇ ಉತ್ತರದಲ್ಲೂ ಮುಗಿಸಬಹುದಿತ್ತು. ಆದ್ರೆ ಅಲ್ಲೆಲ್ಲೂ ನಿಲ್ಲದೇ ಚಿತ್ರ ಮುಂದುವರಿಯುತ್ತೆ :-)

ಇಷ್ಟೆಂದ ಮಾತ್ರಕ್ಕೆ ಅಮೀರರ ಕಟ್ಟಾ ಅಭಿಮಾನಿಯಲ್ಲ ನಾನು. ಮಾಡಿದ್ದೆಲ್ಲಾ ಸರಿಯೆನ್ನುವವನೂ ಅಲ್ಲ. ಕೆಲವರಿಗೆ ಪಾತ್ರವೊಂದರ ಮಾತುಗಳ ಅದನ್ನು ಮಾಡಿದವನ ನಿಜಜೀವನಕ್ಕೆ ತುಲನೆ ಮಾಡಿ ನೋಡುವುದು ಕಷ್ಟವಾಗ್ತಿದ್ರೆ ಅವನ ಜಾಗದಲ್ಲಿ ಓ ಮೈಗಾಡ್ ಚಿತ್ರದಲ್ಲಿ ಅಕ್ಷಯ್ ಮಾಡಿದಂತಹ ಜಾಗೃತಿ ಮೂಡಿಸೋ ಪಾತ್ರ ಇದು ಅಂತ ಕಲ್ಪಿಸಿ. ನಿನ್ನ ಕಷ್ಟಗಳ ಪರಿಹರಿಸೋದು ದೇವರಿಂದ ಮಾತ್ರ ಸಾಧ್ಯ ಅಂತ ಹೇಳಿದ್ದನ್ನು ನಂಬುವ ಮನುಷ್ಯ ಅಂತ ಅಷ್ಟೇ ಕಲ್ಪಿಸಿ. ಅಥವಾ ಏನೂ ಕಲ್ಪಿಸಿಕೊಳ್ಳದೆಯೇ ನೋಡಿದ್ರೆ ಮನಸ್ಸಿಗೊಂದು ಮುದ ಕೊಡುವ ಸಿನಿಮಾ ಅಂತಷ್ಟೇ ಹೇಳಬಯಸ್ತೀನಿ. ದೇವರಿಗೆ ಸರಿಯಾದ ನಂಬರ್ ಕನೆಕ್ಟ್ ಆಗಿದ್ರೆ ಏನು ಹೇಳ್ತಿದ್ದ ಅಂತನ್ನೋ ಪ್ರಶ್ನೆಗೆ ನನಗೆ ಹಾಲೆರೆಯೋ ಬದಲು ಹೊಟ್ಟೆಗೆ ಹಿಟ್ಟಿಲ್ಲದೇ ಮಲಗಿರೋ ನನ್ನ ಕೋಟ್ಯಾಂತರ ಮಕ್ಕಳಿಗೆ ಈ ಹಾಲು ಕುಡಿಸೋ ಅಂತಿದ್ದನೇನೋ ಅನ್ನುವಂತಹ ಉತ್ತರಗಳು ಪೂರ್ವಾಗ್ರಹಪೀಡಿತರಾಗಿಲ್ಲದ ಯಾರಾದರೂ ಒಪ್ಪುವುದೇ. ಮಂದಿರಕ್ಕೆ ಹೋಗಿ ಪೂಜೆ ಮಾಡುವವನಿಗೆ ಸಿಕ್ಕ ಸಲಹೆಯಂತೆ ಆರತಿ ತಗೊಂಡು ಚರ್ಚಿಗೆ ಹೋಗುತ್ತಾನೆ. ಮದ್ಯ ತಗೊಂಡು ಮಸೀದಿಗೂ ಹೋಗೋ ಪ್ರಯತ್ನ ಮಾಡುತ್ತಾನೆ. ಎಲ್ಲೆಡೆ ಹೊಡೆತ ತಿನ್ನೋ ಪ್ರಸಂಗಗಳು ಕೆಲವರಿಗೆ ಹಾಸ್ಯ ಅನಿಸಿದ್ರೆ ಕೆಲವರಿಗೆ ಅವಮಾನ ಅನಿಸಿದ್ರೆ ಇನ್ನುಳಿದವರಿಗೆ ಯಾರನ್ನೂ ಬಿಡದೆ ಎಲ್ಲವನ್ನೂ ವಿಡಂಬಿಸುವ ಭಾವ ಅನಿಸಲೂಬಹುದು. 

ಇನ್ನು ಜಾಸ್ತಿ ಹೇಳೋಕೆ ಹೋದ್ರೆ ಚಿತ್ರದ ಕತೆಯನ್ನೇ ಹೇಳಿಮುಗಿಸಿಬಿಟ್ಟೇನೇನೋ. ಅದು ಚಿತ್ರಕ್ಕೆ ಹೋಗಬಯಸುವ ಅನೇಕರ ಉತ್ಸಾಹಕ್ಕೆ ತಣ್ನೀರೆರಚೋ ಕೆಲಸವಾದ್ದರಿಂದ ಅದ ಮಾಡದೇ ಚಿತ್ರದ ಬಗ್ಗೆ ಒಂದಿಷ್ಟು ಕುತೂಹಲ ಕೆರಳಿಸೋ ಕೆಲಸವನ್ನಷ್ಟೇ ಮಾಡಿ ಸುಮ್ಮನಾಗುತ್ತೀನಿ.ಇನ್ನೊಂದು ಮಾತು. ಚಿತ್ರದ ಕೆಲವು ಸ್ಟಿಲ್ಗಳನ್ನು ನೋಡಿ ಚಿತ್ರದಲ್ಲಿ ಒಬ್ಬ ಸಂಗೀತಗಾರ, ಅನ್ಯಗ್ರಹವಾಸಿ, ಬಟ್ಟೆಯಿಲ್ಲದೇ ಓಡಾಡುವವ, ರಾಜಸ್ತಾನಿ, ಪೋಲೀಸ್, ಧರ್ಮದ್ವೇಷಿ ಹೀಗೆ ಹಲವು ಪಾತ್ರಗಳಲ್ಲಿ ಒಂದೆಂದು ಕಲ್ಪಿಸಿಕೊಳ್ಳಬಹುದು. ಆದ್ರೆ ನಾಯಕನ ನಿಜವಾದ ಉದ್ದೇಶ ಏನಾಗಿತ್ತು, ಏನಾಯ್ತು ಅನ್ನುವುದನ್ನ ಅರ್ಥ ಮಾಡಿಕೊಳ್ಳೋಕೆ, ಪದೇ ಪದೇ ಬರೋ ರಾಂಗ್ ನಂಬರ್ ಅನ್ನೋದ್ರ ನಿಜವಾದ ಅರ್ಥ ಅರಿಯೋಕೆ ಚಿತ್ರವನ್ನೇ ನೋಡ್ಬೇಕು. ಅಂದಾಗೆ ಅನುಷ್ಕ ಶರ್ಮಾ, ಸುಷಾಂತ್ ಸಿಂಗ್ ರಜಪೂತ್, ಬೊಮಾನ್ ಇರಾನಿ,ಸಂಜಯ ದತ್ ಸೌರಭ್ ಶುಕ್ಲ, ಕೊನೆಯಲ್ಲಿ ಬರೋ ರಣಬೀರ್ ಕಪೂರರ ಅಭಿನಯ ಸವಿಯೋದ ಮರಿಬೇಡಿ.

Sunday, December 14, 2014

ನಾನೋದಿದ ಹೊತ್ತುಗೆ :ರವಿ ಬೆಳಗೆರೆಯವರಿಂದ ಅನುವಾದಿತ ಬ್ರಿಗೇಡಿಯರ್ ಜಾನ್ .ಪಿ.ದಳವಿಯವರ "ಹಿಮಾಲಯನ್ ಬ್ಲಂಡರ್" !

ಈ ಪುಸ್ತಕದ ಪುಟಪುಟಗಳ ಓದ್ತಾ ಹೋದಂಗೆ ಮೈಯೆಲ್ಲಾ ಉರಿದೋಗತ್ತೆ ಕೆಲೋ ಜನಗಳ ಬಗ್ಗೆ :-( ಆ ಮುಖ್ಯವಾದ ನಾಲ್ಕು  ಜನ ಮತ್ತು ಪ್ರತ್ಯಕ್ಷ, ಪರೋಕ್ಷವಾಗಿ ಸಾಥಿಯಾದ ಉಳಿದವ್ರು ಯಾರಂತ ಹೇಳೋ ಅವಶ್ಯಕತೆ ಈ ಪುಸ್ತಕವನ್ನು ಈಗಾಗಲೇ ಓದಿದೋರಿಗೆ ಖಂಡಿತಾ ಇಲ್ಲ ಅಂದ್ಕೋತೀನಿ. ಇನ್ನೂ ಓದದೇ ಇದ್ದ ಗೆಳೆಯರ್ಯಾರಾದ್ರೂ ಇದ್ದರೆ ಅವರಿಗೆ ಅದ್ರ ಬಗ್ಗೆ ಪುಸ್ತಕವನ್ನೋದದೇ ಹೇಳೋದು ಲೇಖಕನ ಕರಾವುವಾಕ್ ಮಾಹಿತಿಗಳಿಗೆ, ಕಣ್ಣಿಗೆ ಕಟ್ಟುವಂತಹ ವಿವರಣೆಗಳಿಗೆ ಅವಮಾನ ಮಾಡಿದಂತೇ ಅಂತ ಭಾವಿಸಬಹುದೇನೋ. ೧೯೬೨ರ ಚೀನಾ ಯುದ್ದ ಆಕಸ್ಮಿಕವಲ್ಲದಿದ್ದರೂ ಅದರ ನೈಜ ಚಿತ್ರಣ ನಮ್ಮ ಜನಕ್ಕೆ ಸಿಕ್ಕಿದ್ದು ತೀರಾ ಆಕಸ್ಮಿಕವೆನ್ನೋ ಪರಿಸ್ಥಿತಿ ನಿರ್ಮಾಣವಾಗಿ ಹೋಗಿತ್ತಂತೆ. ಪೀಯುವಿನಲ್ಲೇ ಗೆಳೆಯ ಶ್ರೀಧರ ಈ ಪುಸ್ತಕದ ಬಗ್ಗೆ ಹೇಳಿದ್ರೂ ಹುಡುಕಿದ ಅನೇಕ ಗ್ರಂಥಾಲಯಗಳಲ್ಲಿ ಸಿಕ್ಕದ ಈ ಪುಸ್ತಕ ಇತ್ತೀಚೆಗೆ ಕೊಂಡು ಓದಿದ ನನ್ನಂತವರು, ಇನ್ನೂ ಓದದೇ ಇರುವಂತಹವರೂ ಅನೇಕರಿರಬಹುದಾದ ಸಾಧ್ಯತೆಯ ಊಹಿಸುತ್ತಾ ಆ ಹೊತ್ತಿಗೆಯ ಬಗ್ಗೆ ಒಂದಿಷ್ಟು ಸಾಲುಗಳು.

ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಚೈನಾ ಯೋಧರು ಹತ್ತು ವರ್ಷಗಳಿಂದ್ಲೂ ನಮ್ಮ ಗಡಿಯುದ್ದಕ್ಕೂ ಭದ್ರ ರಸ್ತೆಗಳನ್ನು ನಿರ್ಮಿಸಿ, ಯುದ್ದಕ್ಕೆ ಸನ್ನದ್ದರಾಗಿ ನಿಂತಿದ್ರೂ ಅವರೇನು ಯುದ್ದ ಮಾಡಲಿಕ್ಕಿಲ್ಲ ಬಿಡಿ ಅಂತ ಕೊನೆಯವರೆಗೂ ತಳ್ಳಿ ಹಾಕಿ ಕೊನೆಗೆ ಫಾರ್ವರ್ಡ್ ಪಾಲಿಸಿ ಅಂತ ಬರೀ ಸಾವಿರ ಚಿಲ್ಲರೆ ಸೈನಿಕರನ್ನು ಏಕಾಏಕಿ ಹಿಮಾಲಯಕ್ಕಟ್ಟಿ ಮಾರಣ ಹೋಮಗೈದುದರ ಬಗ್ಗೆ ಆ ಯುದ್ದದ ಸಂದರ್ಭದಲ್ಲಿ ಶತ್ರುಗಳ ಸೆರೆ ಸಿಕ್ಕಿ ನಂತರ ಬಿಡುಗಡೆಯಾದ ಆರು ವರ್ಷಗಳ ನಂತರ ಬ್ರಿಗೇಡಿಯರ್ ದಳವಿಯವರು ಬರೆಯುತ್ತಾರೆ. ಹೋರಾಟ ಮಾಡಲು ತಕ್ಕಷ್ಟು ಸಂಖ್ಯೆಯ ಬುಲೆಟ್ಟುಗಳಿಲ್ಲದೆ, ಊಟವಿಲ್ಲದೆ, ಹೊದೆಯಲೊಂದು ಬೆಚ್ಚನೆ ವಸ್ತ್ರವಿಲ್ಲದೆ , ಹಿಮದಲ್ಲಿ ನಡೆಯೋ ಬೂಟಿಲ್ಲದೆ ನಮ್ಮ ಸೈನಿಕನ ಕಾಲುಗಳು ಕೊಳೆತು ಹೋಗುತ್ತಿದ್ದರೆ, ಫ್ರಾಸ್ಟ್ ಬರ್ನ್ನಂತಹ ತೊಂದರೆಗಳು,ಹಿಮಾಲಯಲದ ಪರಿಸ್ಥಿತಿಗೆ ಹೊಂದಿಕೊಳ್ಳಲು ಬೇಕಾದಂತಹ ಅಕ್ಲಮಟೈಜ್(ಹಿಮಪರ್ವತಗಳ ಚಾರಣದ ಸಂದರ್ಭ ಏರುಪೇರಾಗೋ ಒತ್ತಡ, ಶೈತ್ಯಕ್ಕೆ ರಕ್ತಕಾರಿಯೋ ಉಸಿರುಗಟ್ಟದೆಯೋ ಸಾಯದಂತೆ ಅಲ್ಲಿನ ವಾತಾವರಣಕ್ಕೆ ನಮ್ಮ ದೇಹವನ್ನು ಒಗ್ಗಿಸಿಕೊಳ್ಳುವುದು), ಪರ್ವತ ಯುದ್ದ ತರಬೇತಿ ಯಾವುದೂ ಇಲ್ಲದೇ, ಕೊನೆ ಪಕ್ಷ ಹಿಮಗಡ್ಡೆಗಳ ಮೇಲೆ ಪ್ರತಿಫಲಿಸೋ ಸೂರ್ಯಕಿರಣಗಳಿಂದ ಹೋಗುತ್ತಿರೋ ತಮ್ಮ ಕಣ್ಣುಗಳನ್ನು ಉಳಿಸೋ ಕನ್ನಡಕವೂ ಇರದ ಪರಿಸ್ಥಿತಿಯಲ್ಲಿ ನಮ್ಮ ಸೈನಿಕ ಒದ್ದಾಡುತ್ತಿದ್ದರೆ ನಾಯಕರೆನಿಸಿಕೊಂಡವರು ವಿದೇಶಿ ಪ್ರವಾಸ ಮಾಡುತ್ತಿರುತ್ತಾರೆ. ಅಲ್ಲೇನಿದೆ, ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ,ಸೈನ್ಯಕ್ಕೆ ಆದಷ್ಟು ಕಡಿಮೆ ಖರ್ಚು ಮಾಡಿ ಆಯ್ತಾ ಅನ್ನುವಂತಹ ಬೇಜವಬ್ದಾರಿ ಹೇಳಿಕಗಳ ನೀಡುತ್ತಿರುತ್ತಾರೆ.

ಅಂತಹ ಕೆಲ ಸ್ಯಾಂಪಲ್ಗಳು ನೋಡಿ:
**ಪಂಜಾಬ್ ಮತ್ತು ಗೂರ್ಖಾಗಳ ಒಂದು ತಂಡ ಬೀಡುಬಿಟ್ಟಿರುವಲ್ಲಿ ದಳವಿಯವರು ಬರುತ್ತಾರೆ. ಚಪಾತಿ ಇಷ್ಟ ಪಡೋ, ಅನ್ನ ತಿನ್ನುವುದನ್ನೇ ಹಿಂಸೆಯೆಂದು ಭಾವಿಸೋ ಅವರು ಅನ್ನ ಬೇಯಿಸುತ್ತಾ ಇರುತ್ತಾರೆ ಆ ಹೊತ್ತಲ್ಲಿ. ಏನಪ್ಪಾ ಹೀಗೆ ಅಂತ ಕೇಳಿದ್ರೆ.
ತೊಲೆಗಳನ್ನ ಹೊತ್ತುಕೊಂಡು ಬರಲು ಎಂಟು ಜನ ಬೇಕು ಸಾರ್. ಅದ್ರ ಬದ್ಲು ಎಂಟು ಜನವೂ ಮದ್ದುಗುಂಡುಗಳನ್ನು ತಂದಿದ್ದೀವಿ ಅನ್ನುತ್ತಾರೆ ಆ ಧೀರೋದಾತ್ತ ಯೋಧರು
**ಗುಂಡೇಟಿಗೆ ತನ್ನೆರಡು ಕಾಲುಗಳನ್ನು ಕಳೆದುಕೊಂಡರೂ ಧೃತಿಗೆಡದೆ ತನ್ನ ಸಿಬ್ಬಂದಿಗಳನ್ನು ಪ್ರೇರೇಪಿಸೋ ಮೇಜರ್ ಬಿ.ಕೆ ಅನ್ನುವ ಅಧಿಕಾರಿಯ ದೇಹದೊಳಕ್ಕೆ ೧೧೪ ಬುಲೆಟ್ ಹೊಕ್ಕಿರುತ್ತದೆ !
**ಬ್ರಿಗೇಡಿಯರ್ ದಳವಿಯವರ ಬಳಿ ಬಂದು ಒಬ್ಬ ಸೈನಿಕ ಹೇಳುತ್ತಾನೆ. ಆ ನದಿಯಾಚೆ ಕೂತ ಚೈನಾ ಸೈನಿಕರು ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಸಾರ್ ಅಂತ. ಚಳಿಯೇ ಸಾಯಿಸಿಬಿಡಬಹುದಾಗಿದ್ದ ಇವರಿಗೆ ಬೇಸರವಾಗೋದು ಅದಕ್ಕಲ್ಲ. ಶತ್ರು ಸೈನ್ಯ ತಮ್ಮೆದುರೇ ಕೂತು ಬೆಂಕಿ ಹಾಕಿ ತನ್ನ ಇರುವಿಕೆಯನ್ನು ತೋರಿಸಿಕೊಂಡ್ರೂ ಏನೂ ಮಾಡಲಾಗದ ಅಸಹಾಯಕತೆಗೆ ತಳ್ಳಿದ ಶಸ್ತ್ರಾಸ್ತ್ರಗಳ , ಮೂಲ ಸೌಕರ್ಯಗಳ, ತಕ್ಕಷ್ಟು ಸೈನಿಕರ ಬೆಂಬಲವಿಲ್ಲದಂತೆ ಮಾಡಿದ ಜನಗಳ ಬಗ್ಗೆ.
** ಒಬ್ಬ ಅಧಿಕಾರಿ ರೊಟ್ಟಿಯ ಮೇಲೆ ವರದಿ ಬರೆದು ಕಳಿಸುತ್ತಾನೆ. ಸೇನಾ ಶಿಸ್ತು ಉಲ್ಲಂಘಿಸಿದ ನಿನ್ನ ಮೇಲೇಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಅಂತ ಅವನಿಗೆ ಉತ್ತರ ಹೋಗುತ್ತದೆ. ಕಾಗದ ಅಂತಿದ್ದರೆ ತಾನೆ ಬರೆಯೋದು. ಇಲ್ಲಿ ದಕ್ಕುತ್ತಿರೋದು ಕೊಂಚ ರೊಟ್ಟಿಯ ಹಿಟ್ಟು ನತ್ತು ಈ ಮುರುಕು ರೊಟ್ಟಿಯಷ್ಟೇ ಅನ್ನೋ ಕರುಣಾಜನಕ ಉತ್ತರ ಬರುತ್ತೆ.
**ಎರಡು ದಿನ ನಡೆದುಹೋಗುವ ದಾರಿಗೆ ಎರಡು ಕಿ.ಮೀ ಅಂತ ಕಾಣೋ ತರ ಬರೆದಿರುತ್ತಾನೆ. ಮ್ಯಾಪ್ ಬರೆದಿರೋನು. ಏನಪ್ಪಾ ಹೀಗೆ ಅಂದ್ರೆ .. ಸಾರ್ ನನ್ನತ್ರ ಇದ್ದಿದ್ದೇ ಒಂದು ಫುಲ್ ಸ್ಕೇಪ್ ಹಾಳೆ. ಇಲ್ಲಿಯವರೆಗಿನ ಮ್ಯಾಪ್ ಬರೀತಾ ಬರೀತಾ ಅದು ಖಾಲಿಯಾಗ್ತಾ ಬಂತು. ಹೊಸ ಹಾಳೆಯಿಲ್ಲ. ಹಾಗಾಗಿ ಆ ಎರಡು ಸ್ಥಳಗಳನ್ನ ಅಲ್ಲೇ ಮೂಲೆಯಲ್ಲಿ ತೋರಿಸಿದೆ ಅನ್ನುತ್ತಾನೆ.!!
** ಸುದ್ದಿಯೇ ಆಗದ ಅನಿಮಲ್ ಟ್ರಾನ್ಸಪೋರ್ಟ್ ಮೆನ್ ಅಂತ ಕರೆಸಿಕೊಳ್ಳೋ ಸೈನಿಕರಿಗೆ ಅವರ ಕುಟುಂಬದ , ಇನ್ನಿತರ ಸಂದೇಶ ತಲುಪಿಸೋ ಹೇಸರಗತ್ತೆಯ ಸಹಾಯದಿಂದ ಹೊರಡೋ ಕರುಣಾಜನಕ ಸ್ಥಿತಿಯಲ್ಲಿರೋ ಅಂಚೆಯಣ್ಣನ ಬಗ್ಗೆ, ಕೆಲ ಕಡೆ ಸಿಕ್ಕ ವೈದ್ಯರ ಬಗ್ಗೆ, ಮೆಸೆಂಜರ್ಗಳು, ಆಹಾರ ತಲುಪಿಸಲು ಹೋಗಿ ಪ್ರಾಣ ಕಳೆದುಕೊಂಡ ಹೆಲಿಕ್ಯಾಪ್ಟರುಗಳು.. ಹೀಗೆ ಯುದ್ದಭೂಮಿಯಲ್ಲಿ ತಮ್ಮ ಪ್ರಧಾನಭೂಮಿಕೆಯಲ್ಲಿದ್ದದಿದ್ದಊ ಸಾವಿಗಾಹುತಿಯಾದ ಅನೇಕ ಜನರ ಬಗ್ಗೆ ಬರೆಯುತ್ತಾ ಹೋಗುತ್ತಾರೆ ಬ್ರಿಗೇಡಿಯರ್.
** ಬರೀ ಇಷ್ಟೇ ಆಗಿದ್ದರೆ ಏನೂ ಅನಿಸುತ್ತಿರಲಿಲ್ಲವೇನೋ. ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ೧೯೪೭ ರಿಂದ ೧೯೬೨ರವರೆಗೂ ಸೇನೆ ಅನ್ನೋದನ್ನು ಕಡೆಗಣಿಸುತ್ತಲೇ ಬಂದ ನಾಯಕರ ಬಗ್ಗೆ, ಅಧಿಕಾರಿವರ್ಗದ ಬಗ್ಗೆ ತೆಗೆದುಕೊಳ್ಳಬೇಕಿದ್ದ ನಿರ್ಧಾರಗಳು ಬಾರದ ಬಗ್ಗೆ, ಬೇಕಿಲ್ಲದ ನಿರ್ಧಾರಗಳಿಂದಾದ ರಕ್ತಪಾತದ ಬಗ್ಗೆಯೂ ವಿಶ್ಲೇಷಿಸುತ್ತಾ ಹೋಗುತ್ತಾರೆ.
** ಮೇಜರ್ ಚೌಧರಿ, ಕ್ಯಾಪ್ಟನ್ ಮಂಗತ್, ಲೆಫ್ಟಿನೆಂಟ್ ಕರ್ನಲ್ ರೀಖ್.. ಹೀಗೆ ಹತ್ತು ಹಲವು ಜನ ದೇಶಕ್ಕಾಗಿ ತಮ್ಮ ಜೀವ ತೆತ್ತ ಪ್ರಸಂಗಗಳು ಮನ ಕಲಕಿಸಿದರೆ, ಜನರಲ್ ತಿಮ್ಮಯ್ಯನವರನ್ನೇ ನಿರ್ಣಯಗಳ ಕೈಗೊಳ್ಳಲು ಬಿಡದ ಸಚಿವಾಲಯ, ಗಡಿ ಹೊತ್ತಿ ಉರಿಯುತ್ತಿದ್ದರೆ ಅದನ್ನು ಅಲ್ಲೇ ಅತಂತ್ರವಾಗಿಸಿ ಕಾಶ್ಮೀರ ಕಣಿವೆಯಲ್ಲಿ ಕುಟುಂಬದೊಂದಿಗೆ ಮೋಜು ಮಾಡಲು ತೆರಳೋ ಅಧಿಕಾರಿ.. ಇನ್ನಿತರ ಪ್ರಸಂಗಗಳು ಮೈಯೆಲ್ಲಾ ಉರಿಯುವಂತೆ ಮಾಡುತ್ತವೆ.


ರಾಷ್ಟ್ರದ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಅಂತ ಅಂದು ನಿಷೇಧಿಸಲ್ಪಟ್ಟ ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿದ್ದು ಕಾರ್ಗಿಲ್ ಕದನದ ಹೊತ್ತಿಗೆ.ಆಗ ವೀರಾವೇಷವಾಗಿದ್ದ ನಮ್ಮ ದೇಶಪ್ರೇಮ ಮತ್ತೆ ಹೊದ್ದು ಮಲಗಿ ಬರೀ ಜೂಮ್ಗೇಟು, ಕಲ್ಲಿದ್ದಲು, ಜೀಜೀ ಹಗರಣಗಳಲ್ಲಿ ಆಸಕ್ತಿ ತೋರುವಂತಾಗಿರೋದು ಬೇಸರದ ಸಂಗತಿ.ಯಾವ ತಂಟೆಯೂ ಇಲ್ಲದೆ ಆರಾಮಾಗಿ ಮನೆಯಲ್ಲಿ ಹೊದ್ದು ಕುಳಿತು, ದೇಶ ನಂಗೇನು ಕೊಟ್ಟಿದೆ, ಇಲ್ಲಿರುವುದು ಬರೀ ಅದು ಇದು ಅಂತ ಭಾಷಣ ಬಿಗಿಯೋ ಮೊದಲು ಇಂತಹ ನೆತ್ತರಗಾಥೆಗಳನ್ನು ಓದಿಕೊಳ್ಳದ ಶ್ರೀಸಾಮಾನ್ಯರಲ್ಲಿ ನಾನೂ ಒಬ್ಬನಾಗಿದ್ದ ಬಗ್ಗೆ ನಾಚಿಕೆಯಾಗುತ್ತಿದೆ :-( ಎಲ್ಲೋ ಉಗ್ರಗಾಮಿಗಳಿಗೆ ಬೆಂಬಲಿಸುತ್ತಿದ್ದವ ಇಂದು ಸೆರೆಸಿಕ್ಕದ್ದು ದೊಡ್ಡ ಸಾಧನೆಯಂದು ಮತ್ತೆಲ್ಲೋ ಒಂದು ಪಂದ್ಯವನ್ನು ಸೋತದ್ದು ಇಡೀ ದೇಶಕ್ಕೆ ಅವಮಾನವೆಂದು ಬಿಂಬಿಸೋ ವರ್ಗಕ್ಕೆ ಗಡಿಯಲ್ಲಿ ಹಗಲಿರುಳೂ ನಮ್ಮ ಕಾಯೋ ಯೋಧ ಒಮ್ಮೆಯಾದರೂ ನೆನಪಾಗುತ್ತಾನಾ ? ಕೆಲಕ್ಷಣವಾದರೂ ಅಂತ ಧೀರರ ನೆನೆಯುವಂತಾದರೆ, ದೇಶಕ್ಕೆ ಪ್ರಾಣವನ್ನೇ ತೆರೋ ಯೋಧನಿಗೆ, ಅವನ ಕುಟುಂಬದವರಿಗೆ ಇನ್ನಾದರೂ ಸೂಕ್ತ ಸೌಲಭ್ಯಗಳು ದಕ್ಕವಂತಾದರೆ ಈ ಪುಸ್ತಕದ, (ಹೀಗೇ ಬಂದಿರಬಹುದಾದ ಇನ್ನೂ ಅಸಂಖ್ಯಗಾಥೆಗಳ) ಆಶಯ ಸಾರ್ಥಕವಾಗಬಹುದೇನೋ.. 

Tuesday, December 2, 2014

ಕರ್ನಾಟಕದ ಹೊಯ್ಸಳ ದೇಗುಲಗಳು-೧೩: ದೊಡ್ಡಗದ್ದವಳ್ಳಿ ಲಕ್ಷ್ಮೀ ದೇವಸ್ಥಾನ ,ಹಾಸನ

ಪೀಠಿಕೆ:
ಹಾಸನದಿಂದ ಹಳೇಬೀಡಿಗೆ ಹೋಗುವ ದಾರೀಲಿ ಕಲ್ಕೆರೆ ಗೇಟ್ ಅಂತ ಇಳದ್ರೆ ಅಲ್ಲಿಂದ ೨ ಕಿ.ಮೀ ದೂರದಲ್ಲಿ ದೊಡ್ಡಗದ್ದವಳ್ಳಿ ಅನ್ನೋ ಹೊಯ್ಸಳ ದೇವಸ್ಥಾನ ಸಿಗುತ್ತೆ ಅಂದಿದ್ದ ಗಿರಿ. ಆದ್ರೆ ಹಳೇಬೀಡಿಗೆ ಹೋಗೋ ಒಂದು ಬಸ್ಸ ಹತ್ತಿ, ಅದು ಕಲ್ಕೆರೆ ಗೇಟಿನ ಮಾರ್ಗದಲ್ಲಿ ಹೋಗೋಲ್ಲ. ಅದ್ರದ್ದೇ ಬೇರೆ ದಾರಿ ಅಂತ ಇಳಿದಿದ್ದಾಗಿತ್ತು. ಅವತ್ತು ಸೀದಾ ಹಳೇಬೀಡಿಗೆ ಹೋಗಿ ಹಾಸನದ ಅತ್ತೆ ಮನೆಗೆ ಮರಳಿದವನಿಗೆ ದೊಡ್ಡಗದ್ದವಳ್ಳಿ ನೋಡೋ ಭಾಗ್ಯ ಸಿಕ್ಕಿದ್ದು ಮಾರ್ನೇ ದಿನ. ಹಿಂದಿನ ದಿನದ ಒಂಟಿ ಪ್ರವಾಸಗಳಂತಾಗದ ಈ ಪ್ರವಾಸಕ್ಕೆ ಜೊತೆಯಾಗಿದ್ದು ಅತ್ತೆ ಮಕ್ಕಳಾದ ದಿವ್ಯ, ಕಾವ್ಯ ಮತ್ತು ಅವರಣ್ಣ ಉದಯಣ್ಣ

ಹೋಗೋದು ಹೇಗೆ? :
ಹಾಸನದಿಂದ ಹದಿನಾರು ಕಿ.ಮೀ ದೂರವಿರೋ ದೊಡ್ಡಗದ್ದವಳ್ಳಿ ದೇವಸ್ಥಾನಕ್ಕೆ ಸ್ವಂತ ವಾಹನದಲ್ಲಿ ಹೋಗಬಹುದು. ಬಸ್ಸಲ್ಲಿ ಹೋಗೋದಾದ್ರೆ ಕಲ್ಕೆರೆ ಗೇಟಲ್ಲಿ ಇಳಿದು ೨ ಕಿ.ಮೀ ನಡೆಯಬೇಕು. ಹಳೇಬೀಡಿಗೆ ಹೋಗೋ ಕೆಲ ಬಸ್ಸುಗಳು, ಬೇಲೂರಿಗೆ ಹೋಗೋ ಕೆಲ ಬಸ್ಸುಗಳು ಕಲ್ಕೆರೆ ಗೇಟಿನ ಮೇಲೆ ಹೋಗುತ್ತವೆ. ಕಲ್ಕೆರೆ ಗೇಟಿಗೆ ಹೋಗುತ್ತಾ ಅಂತ ಕೇಳೇ ಬಸ್ಸು ಹತ್ತೋದು ಕ್ಷೇಮೆ.


ಕಲ್ಕೆರೆ ಗೇಟಲ್ಲಿ ಕಾಣುವ ದೊಡ್ಡಗದ್ದವಳ್ಳಿಯ ಬಗೆಗಿನ ಮಾಹಿತಿ ಫಲಕ
ಇತಿಹಾಸ: ಹೊಯ್ಸಳರು ಕಟ್ಟಿಸಿದ ದೇವಸ್ಥಾನಗಳೆಲ್ಲಾ ವಿಷ್ಣುವಿನದೋ, ಈಶ್ವರನದೋ ಆಗಿದ್ದ ನೋಡಿದ್ವಿ ಇಲ್ಲಿಯವರೆಗೆ. ಇದೇನು ಲಕ್ಷ್ಮೀ ದೇವಸ್ಥಾನ ಅಂತ ಆಶ್ಚರ್ಯ ಪಡ್ತಾ ಇದ್ದೀರ ? ಇದನ್ನು ಕಟ್ಟಿದ್ದು ಕ್ರಿ.ಶ ೧೧೧೪ ರಲ್ಲೇ ಆಗಿದ್ರೂ ಇದನ್ನು ಕಟ್ಟಿಸಿದ್ದು ಆಗಿನ ಹೊಯ್ಸಳರಸ ವಿಷ್ಣುವರ್ಧನನಲ್ಲ ! ಬದಲಿಗೆ ಮಹಾರಾಷ್ಟ್ರದ ವಜ್ರದ ವ್ಯಾಪಾರಿ ಕುಲ್ಹಣ ರಾವತ್ ! ಮಹಾರಾಜರ ಅಪ್ಪಣೆ ಮೇರೆಗೆ ಕಟ್ಟಿದ್ದೇ ಆಗಿದ್ರೂ  ಪ್ರಧಾನಶಿಲ್ಪಿಗಳು ಬೇರೆಯಾಗಿದ್ದರಿಂದ ಇದರಲ್ಲಿನ ವಾಸ್ತುಶಿಲ್ಪ ಉಳಿದ ಹೊಯ್ಸಳ ದೇಗುಲಗಳಿಗಿಂತ ಕೊಂಚ ಭಿನ್ನವಾಗಿದೆ. ಉದಾಹರಣೆಗೆ ಚತುಷ್ಕೂಟ (ನಾಲ್ಕು ಶಿಖರ)ವಿರುವ ಈ ದೇಗುಲದ ಸ್ವಾಗತದ್ವಾರದ ಮೇಲ್ಛಾವಣಿಯಲ್ಲೇ ತಮ್ಮ ವಾಹನ, ಪತ್ನಿಯರೊಡಗೂಡಿದ ಸಪತ್ನೀಕರಾದ ಅಷ್ಟದಿಕ್ಪಾಲಕರು ಇದ್ದಾರೆ. (ಇಲ್ಲಿಯವರೆಗೆ ನೋಡಿದ ದೇಗುಲಗಳಲ್ಲಿ ಬೇಲೂರು: ಏಕಕೂಟ, ಹಳೇಬೀಡು: ದ್ವಿಕೂಟ, ಬೆಳವಾಡಿ:ತ್ರಿಕೂಟ ದೇವಾಲಯಗಳನ್ನು ಕಂಡಿದ್ವಿ. ಮೊದಲ ಬಾರಿಗೆ ಚತುಷ್ಕೂಟ). ಸ್ವಾಗತದಲ್ಲಿರುವ ಆನೆಯ ಅಲಂಕಾರ ಭಿನ್ನವಾಗಿದೆ.ದೇಗುಲದಲ್ಲಿ ದುರ್ಗಿ, ಲಕ್ಷ್ಮಿ ಇರುವುದ ಬೇರೆಡೆ ಕಂಡರೂ ಇಲ್ಲಿಯ ದುರ್ಗಿಯ ಪ್ರವೇಶದ್ವಾರಕ್ಕೆ ಕಾವಲುಗಾರನಾಗಿರುವುದು ಬೇತಾಳ ! ಇಲ್ಲಿಯವರೆಗಿನ ದೇಗುಲಗಳಲ್ಲಿ ಬೇತಾಳ, ಸ್ಮಶಾನಭೈರವಿಯಂತಹ ರಚನೆಗಳು ದೇಗುಲದ ಹೊರಗೆ ಕಂಡಿದ್ದವೇ ಹೊರತು ಗರ್ಭಗುಡಿಯ ಬಳಿಯಲ್ಲ. ಹೊಯ್ಸಳರ ಕಾಲದಲ್ಲಿ ಕಟ್ಟಿದ ಮಾತ್ರಕ್ಕೆ ಇದಕ್ಕೆ ಹೊಯ್ಸಳರ ದೇಗುಲ ಅಂತ ಕರೆಯಲಾದೀತೇ ಅಂತ ಯೋಚ್ನೆ ಮಾಡೋಕೆ ಶುರು ಮಾಡಿದ್ರಾ ? ಸ್ವಲ್ಪ ತಡೀರಿ. ಇಲ್ಲಿ ಇಷ್ಟೇ ಅಲ್ಲ. ಸಮಕಾಲೀನ ದೇಗುಲಗಳಾದ ಮೊಸಳೆ (ಬೇಲೂರು,ಹಳೇಬೀಡು ಇದನ್ನು ಶುರು ಮಾಡುವಾಗ ಇರಲಿಲ್ಲ. ಅವನ್ನು ಕಟ್ಟಲು ಪ್ರಾರಂಭಿಸಿದ್ದು ಕ್ರಮವಾಗಿ ೧೧೧೭,೧೧೨೧ ರಲ್ಲಿ) ದೇಗುಲದಲ್ಲಿರುವಂತೆ ಇಲ್ಲಿಯೂ ದೇಗುಲದ ಶಿಖರದ ಬಳಿ ಹೊಯ್ಸಳರ ಲಾಂಛನವಿದೆ. ನಾಲ್ಕು ದಿಕ್ಕಿಗೆ ನಾಲ್ಕು ಎಂಬಂತಿರುವ ನಾಲ್ಕು ಹೊಯ್ಸಳ ಲಾಂಛನಗಳು ಇದು ಹೊಯ್ಸಳ ದೇಗುಲವೇ ಎಂಬುದನ್ನ ಸಾರುತ್ತವೆ. ಹಳಗನ್ನಡ ಬಲ್ಲವರಿದ್ದರೆ ಇಲ್ಲಿ ಸುಸ್ಪಷ್ಟವಾಗಿರುವ ಹಳಗನ್ನಡ ಶಾಸನಗಳಿಂದ ಇತಿಹಾಸದ ಹಳೆಯ ಪುಟಗಳ ಮೆಲುಕು ಹಾಕಬಹುದು. ಅಂದ ಹಾಗೆ ಇದನ್ನು ಕಟ್ಟಿದ ಶಿಲ್ಪಿಗಳು ಮಲ್ಲಯೋಜ ಮತ್ತು ಮಣಿಯೋಜ. ಇಷ್ಟೆಲ್ಲಾ ಕೇಳಿದ ಮೇಲೆ ದೇವಸ್ಥಾನವನ್ನೊಮ್ಮೆ ನೋಡೋ ಆಸಕ್ತಿ ಕೆರಳಿರಬೇಕಲ್ವಾ ? ಬನ್ನಿ , ಒಮ್ಮೆ ಸುತ್ತಿ ಬರೋಣ ದೇಗುಲವನ್ನ

ಲಕ್ಷ್ಮೀದೇಗುಲದ ಮುಂಭಾಗದಲ್ಲಿ

At the entrance

ಪ್ರವೇಶದ್ವಾರದಲ್ಲಿರುವ ನವಗ್ರಹಗಳು:






ತಲೆಬಾಗಿ ಒಳಗೆ ಬಾ ಯಾತ್ರಿಕನೆ..

ಲಕ್ಷ್ಮೀ ದೇಗುಲದ ಮುಂಪಾರ್ಶ್ವದ ನೋಟ

ಲಕ್ಷ್ಮೀ ದೇವಸ್ಥಾನವಾದ್ದರಿಂದ ಸಹಜವಾಗೇ ಪ್ರವೇಶದ್ವಾರದಲ್ಲಿ ಜಯ ವಿಜಯರು

ಶಂಖ, ಪದ್ಮಗಳನ್ನು ಹಿಡಿದ ಜಯವಿಜಯರ ಮತ್ತು ಶಿವನ ದ್ವಾರಪಾಲಕರಾದ ನಂದೀಶ್ವರ, ಭೃಂಗೀಶ್ವರರ ಮಧ್ಯೆ ಯಾರು ಯಾರೆಂದು ಗೊಂದಲವಾಗಬಹುದು ಕೆಲವರಿಗೆ ಮೊದಲು. ಯಾವ ದೇವಸ್ಥಾನ ಅನ್ನೋದು ಒಂದು ಸುಳಿವಾದರೆ ಅವರ ಕೈಯಲ್ಲಿರುವ ಆಯುಧಗಳು ಅವರು ಯಾರೆಂದು ಕಂಡು ಹಿಡಿಯೋದಕ್ಕೆ ಎರಡನೆಯ ಸುಳಿವು. ಉದಾಃ ನಂದೀಶ್ವರ, ಭೃಂಗೀಶ್ವರರ ಕೈಯಲ್ಲಿ ಶಂಖ-ಪದ್ಮಗಳು ಬರುವುದಿಲ್ಲ

ಮೊದಲು ಸಿಗೋ ಕಾಳಿಯ ದೇಗುಲಕ್ಕೆ ದ್ವಾರಪಾಲಕನಾಗಿರುವ ಪಿಶಾಚಿ
ಒಳಗಿರುವ ದೇವತೆಗಳು:
ಎಡಭಾಗದಲ್ಲಿ ಕಾಳಿಯ ಗರ್ಭಗೃಹವಿದೆ. ಅದಕ್ಕೆ ಅಭಿಮುಖವಾಗಿ ಮತ್ತೊಂದು ದಿಕ್ಕಿನಲ್ಲಿ ಸೌಮ್ಯ ಮೂರ್ತಿಯಾದ ಯೋಗನರಸಿಂಹನಿದ್ದಾನೆ. ವಿಷ್ಣುವಿನ ಪಕ್ಕದಲ್ಲಿ ರುದ್ರನಿದ್ದಾನೆ. ಅವನಿಗೆ ಅಭಿಮುಖವಾಗಿ ಲಕ್ಷ್ಮೀದೇವಿಯ ಗುಡಿಯಿದೆ. ಕಾಳಿಯ ಎದುರಿಗೆ ಈಗ ವಿಭೂತಿ ಹುಂಡಿಯಿಟ್ಟಿರೋ ನವರಂಗದ ಮೇಲ್ಭಾಗದಲ್ಲಿನ ಛಾವಣಿಯಲ್ಲಿ ರುದ್ರವೀಣೆಯನ್ನು ನುಡಿಸುತ್ತಿರೋ ಶಿವನಿದ್ದಾನೆ. ಅದನ್ನು ದಾಟಿ ವಿಷ್ಣುವಿನ ಗರ್ಭಗುಡಿಯತ್ತ ಬಂದರೆ ಮೇಲ್ಛಾವಣಿಯಲ್ಲಿ ಸಪತ್ನೀಕರಾದ ಅಷ್ಟದಿಕ್ಪಾಲಕರು ಕಾಣುತ್ತಾರೆ.
ಪಿಶಾಚಿಗಳ ಹೆಬ್ಬಾಗಿಲಿನ ಕಾಳಿ
ಕಾಳಿಯ ಎದುರಿಗೆ ಈಗ ವಿಭೂತಿಯ ಪೆಟ್ಟಿಗೆಯಿಟ್ಟಿರುವ ನವರಂಗದ ಮೇಲ್ಛಾವಣಿಯಲ್ಲಿ ನರ್ತಿಸುತ್ತಿರುವ ವಿಗ್ರಹವಿದೆ.
ವಜ್ರದ ವ್ಯಾಪಾರಿ ಮತ್ತವನ ಪತ್ನಿ ಸಹಜಾದೇವಿ ಕಟ್ಟಿಸಿದ ದೇಗುಲವಾದ್ದರಿಂದ ಇದು ಲಕ್ಷ್ಮೀ ದೇಗುಲವಾಗಿಯೂ, ನವರಂಗ ಎಂಬುದನ್ನು ಸೂಚಿಸಲು ಅಲ್ಲಿ ನರ್ತನದ ಶಿಲ್ಪ.. ಹೀಗೆ ಪ್ರತಿಮೆಗಳಲ್ಲೇ ಅದೆಷ್ಟು ಪ್ರತಿಮೆಗಳು, ರೂಪಕಗಳು ಅಡಗಿವೆಯೂ ಇಲ್ಲಿ! 

ಈ ಶಿಲ್ಪವನ್ನು ಇಲ್ಲಿನ ಭದ್ರತೆಯವರು ಮತ್ತು ಮುಖ್ಯ ಅರ್ಚಕರು ರುದ್ರವೀಣೆಯನ್ನು ನುಡಿಸುತ್ತಿರುವ ಶಿವ ಅಂತ ತಿಳಿಸಿದ್ರು. ಆದ್ರೆ ಮುಂಚಿನ ದೇಗುಲಗಳಲ್ಲಿ ಇದನ್ನು ನರ್ತಿಸುತ್ತಿರುವ ಪಾರ್ವತಿ ಎಂದು ತಿಳಿದಿದ್ದೆವು ! ಈ ರುದ್ರವೀಣೆಯ ಬಗ್ಗೆ ಮತ್ತು ಈ ಮೂರ್ತಿಯ ಬಗ್ಗೆ ಇನ್ನೊಂದಿಷ್ಟು ಸಂಶೋಧನೆ ನಡೆಯಬೇಕಿದೆ

ನವಗ್ರಹಗಳು:

ಪೂರ್ವದ ಅಧಿಪತಿ ಇಂದ್ರ ತನ್ನ ಆನೆ ಐರಾವತದ ಮೇಲೆ, ಪತ್ನಿ ಶಚೀದೇವಿಯೊಂದಿಗೆ

ಆಗ್ನೇಯ ದಿಕ್ಕಿನ ಅಧಿಪತಿ ಮೇಷವಾಹನ(ಟಗರು) ಅಗ್ನಿ, ಪತ್ನಿ ಸ್ವಾಹಾಳೊಂದಿಗೆ

ಅಷ್ಟದಿಕ್ಪಾಲಕರ ಮದ್ಯವಿರೋ ಹಾಳಾದ ಶಿಲ್ಪ. ಇಲ್ಲಿ ಹೂವಿನ ಗೊಂಚಲೋ, ಇನ್ನೊಂದು ಶಿಲ್ಪವೋ ಇದ್ದ ಕುರುಹಿದೆ
ದಕ್ಷಿಣಾಧಿಪತಿ ಮಹಿಷವಾಹನ ಯಮ

ನೈರುತ್ಯಾಧಿಪತಿ ನರವಾಹನ ನಿರುತಿ ಪತ್ನಿ ಖಡ್ಗಿಯೊಂದಿಗೆ

ಪಶ್ಚಿಮಾಧಿಪತಿ ಮಖರವಾಹನ ವರುಣ
ವಾಯುವ್ಯಾಧಿಪತಿ ಜಿಂಕೆವಾಹನ ವಾಯು.
ಉತ್ತರಾಧಿಪತಿ ಅಶ್ವ(ಕುದುರೆ)ವಾಹನ ಕುಬೇರ

ಈಶಾನ್ಯಾಧಿಪತಿ ವೃಷಭವಾಹನ(ನಂದಿ) ಈಶ್ವರ ಪತ್ನಿ ಪಾರ್ವತಿಯೊಂದಿಗೆ

ಯೋಗನರಸಿಂಹನ ದ್ವಾರದಲ್ಲಿರುವ ದುರ್ಗೆ. ಇದೇ ರೀತಿ ಶಿವನ ದ್ವಾರದಲ್ಲಿ ಲಕ್ಷ್ಮಿಯನ್ನು ಕಾಣಬಹುದು !


ಯೋಗನರಸಿಂಹ

ಶಿವನ ದ್ವಾರದಲ್ಲಿರುವ ದ್ವಾರ  ಲಕ್ಷ್ಮಿ

ಈ ಶಿಲ್ಪದ ಬಗ್ಗೆ ಮತ್ತು ನಂತರ ಸಿಗುವ ಇಬ್ಬರು ಶಿಲಾಬಾಲಿಕೆಯರ ಹಿನ್ನೆಲೆಯ  ಬಗ್ಗೆ ಅಷ್ಟು ಮಾಹಿತಿ ಸಿಗಲಿಲ್ಲ. ಮತ್ತೊಮ್ಮೆ ಸಾಧ್ಯವಾದರೆ ಪ್ರಯತ್ನಿಸಬೇಕು



ಹೊರಭಾಗದಲ್ಲಿರುವ ಹೊಯ್ಸಳ ಶಿಲ್ಪ

ದುರ್ಗೆ

ಆನೆಗಳ ವಿನ್ಯಾಸ, ಮುಖ್ಯವಾಗಿ ಸೊಂಡಿಲು ಮತ್ತು ಕಾಲುಗಳನ್ನು ಗಮನಿಸಿ. ಇವುಗಳಲ್ಲಿ ಉಳಿದ ಹೊಯ್ಸಳ ದೇಗುಲಗಳಿಗಿಂತ ಭಿನ್ನ ರ‍ಚನೆ ಕಾಣಬಹುದು. ಎಲ್ಲೆಡೆ ಓಡುತ್ತಿರುವ ಆನೆಗಳಿದ್ದರೆ ಇಲ್ಲಿರುವ ಆನೆಗಳು ಕೂತ ಭಂಗಿಯಲ್ಲಿವೆ !


ಇಲ್ಲಿರುವ ಮೊದಲ ಶಾಸನ. ಇಲ್ಲಿ ಇದೇ ತರಹದ ಇನ್ನೂ ನಾಲ್ಕೈದು ಶಿಲಾಶಾಸನಗಳನ್ನು ಕಾಣಬಹುದು

ಏಳು ಪ್ರಾಣಿಗಳ ಅಂಗಗಳನ್ನು ಹೊಂದಿರುವ ಮಖರ ಎಂಬ ಕಾಲ್ಪನಿಕ ಪ್ರಾಣಿ. ಇದನ್ನು ಹೊಯ್ಸಳರ ಎಲ್ಲಾ ದೇಗುಲಗಳಲ್ಲೂ ಸಾಮಾನ್ಯವಾಗಿ ಕಂಡಿರುತ್ತೀರಿ. ಮೊಸಳೆಯ ಬಾಯಿ, ಆನೆಯ ಸೊಂಡಿಲು, ಸಿಂಹದ ಹೆಜ್ಜೆ, ಮಂಗನ ಕಣ್ಣು, ನವಿಲಿನ ಪುಕ್ಕ, ಗೋವಿನ ಮುಖ, ಕುದುರೆಯ ದೇಹ.. ಹೀಗೆ ಏಳು ಅನ್ನುತ್ತಾರೆ !

ದೇಗುಲದ ಎಡಗೋಡೆಯಲ್ಲಿರುವ ಎರಡನೆಯ ಶಾಸನ


ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಪಾಲರ ಗುಡಿಗಳು


ನರಬಲಿಯನ್ನು ಸೂಚಿಸುವ ಶಿಲ್ಪಗಳು!



ಮತ್ತೆರಡು ಶಾಸನಗಳು




ಮತ್ತೊಂದು ಶಾಸನ



ದೇಗುಲದ ಪಾರ್ಶ್ವದಲ್ಲಿ ನಾವು..


ಗೋಪುರದಲ್ಲಿ ಹೊಯ್ಸಳಶಿಲ್ಪ

ಕ್ಷೇತ್ರಪಾಲ
ಮತ್ತೊಂದು ಕ್ಷೇತ್ರಪಾಲನ ಗುಡಿಯ ಮೇಲ್ಗಣ ಶಿಖರದ ನರ್ತಕಿ

ಇದಕ್ಕಿಂತ ಸ್ಪಷ್ಟ ಶಾಸನ ಬೇಕಾ ? !
ಕ್ಷೇತ್ರಪಾಲರ ಗುಡಿಯ ಶಿಖರ
ಮೋಡಗಳ ಸೀಳಿ ಬೆಳೆಯುವಂತೆ ಕಾಣುವ ಶಿಖರ !
ಪ್ರತೀ ಶಿಖರದ ಮೇಲೂ ಇರುವ ಹೊಯ್ಸಳ ಲಾಂಛನವನ್ನು ನೋಡಬಹುದು
ಒಂದಿಷ್ಟು ಅಮೂಲ್ಯ ಮಾಹಿತಿಗಳಿತ್ತ ಭದ್ರತಾ ಸಿಬ್ಬಂದಿ ಶಿವಣ್ಣ
ಮುಂದೆ:
ತುರುವೇಕೆರೆಯಿಂದ ಹೊಯ್ಸಳ ದೇಗುಲಗಳ ಸುತ್ತಾಟ ಇದರ ಮೂಲಕ ಒಂದು ಕಡೆ ಬಂದು ತಲುಪಿದೆ. ಆಗೆಲ್ಲಾ ಮುಂದೇನು ಅಂದ್ರೆ ಸುಮಾರಷ್ಟು ಆಯ್ಕೆಗಳಿದ್ದವು. ಹದಿಮೂರು ಅಂಕಣ ಬರೆದ ಮೇಲೆ ಮುಂದೇನು ಎಂಬ ಪ್ರಶ್ನೆಗೆ ಅನಿಶ್ಚತೆಯೇ ಉತ್ತರವಾಗಿದೆ ಸದ್ಯಕ್ಕೆಂತೂ. ಅರಸೀಕೆರೆ, ಭದ್ರಾವತಿ,ಅಮೃತಾಪುರದಲ್ಲಿ ಮುಂಚೆ ನೋಡಿದ್ದ ದೇಗುಲ, ಚೆನ್ನರಾಯಪಟ್ಟಣ, ಹಾಸನದಲ್ಲೇ ಇರುವ ನೋಡದಿಹ ಹಲವು ದೇಗುಲಗಳು.. ಹೀಗೆ ಸುಮಾರಷ್ಟು ಆಯ್ಕೆಗಳಿವೆ. ಆದ್ರೆ ಮುಂದಿನ ಪಯಣ ಎಲ್ಲೆಂದು ಗೊತ್ತಿಲ್ಲ. ಮತ್ತೆ ಹೊಸ ಹೊಯ್ಸಳ ದೇಗುಲ ದರ್ಶಿಸಿದರೆ ಅದರೊಂದಿಗೆ ಅಂಕಣವ ಮತ್ತೆ ಮುಂದುವರೆಸುತ್ತೇನೆ.. ಅಲ್ಲಿಯವರೆಗೊಂದು ವಿರಾಮ