Temple on top of Male Mahadeshwara Betta |
ಬೆಂಗಳೂರಿಂದ ಮಲೆಮಹದೇಶ್ವರಕ್ಕೆ ಇರೋ ದಾರಿಗಳು:
೧. ಕನಕಪುರ, ಮಲವಳ್ಳಿ, ಕೊಳ್ಳೇಗಾಲ, ಮಲೆಮಹದೇಶ್ವರ - ೨೧೧ ಕಿ.ಮೀ
೨. ರಾಮನಗರ, ಮುದ್ದೂರು ,ಕೊಳ್ಳೇಗಾಲ, ಮಲೆ ಮಹದೇಶ್ವರ - ೨೦೮ ಕಿ.ಮೀ: ಮುದ್ದೂರಿನಿಂದ ಮಲವಳ್ಳಿಯವರೆಗಿನ ರಸ್ತೆ ಅಷ್ಟು ಸರಿಯಿಲ್ಲ ಅಂತ ಕೇಳ್ಪಟ್ಟೆ
೩. ಕೃಷ್ಣಗಿರಿ ಮಾರ್ಗ : ೨೫೦ ಕಿ.ಮೀ
ಪಯಣ ಶುರುವಾದ ಪರಿ:
H.S.R ನಲ್ಲಿರೋ ಆದರ್ಶ ನಿಮ್ಮ ಏರಿಯಾ ಕಾಸ್ಮೋಸಿಗೆ ಬರ್ತೀನಿ. ಅಲ್ಲಿಂದ ಹೊರಡೋಣ ಬೆಳಗ್ಗೆ ಅಂದಿದ್ರು. ಸರಿ, ಅಂದಂತೆಯೇ ಶನಿವಾರ ಬೆಳಗ್ಗೆ ನಾಲ್ಕೂವರೆಗೆ ಪಯಣ ಶುರುವಾಯ್ತು. ಚುಮು ಚುಮು ಚಳಿಯ ಮುಂಜಾನೆಯದು. ಅದಕ್ಕೊಂದು ಸ್ವೆಟರು, ತಲೆಗೊಂದು ಟೋಪಿ ಸಾಕಾ ಅನುಸ್ತು. ಬೈಕಲ್ಲಿ ಹೋಗೋದಲ್ವಾ ಹಾಗಾಗಿ ಎಂತಕ್ಕೂ ಇಲ್ರಿ ಅಂತ ಮುಖಕ್ಕೊಂದು ಮಫ್ಲರೂ ಇಟ್ಕೊಂಡು ನಾನು ರೆಡಿಯಾಗಿದ್ದೆ. ಉಳಿಯೋ ಪರಿಸ್ಥಿತಿ ಬಂದ್ರೆ ಅಂತ ಬ್ಯಾಗಲ್ಲೊಂದು ಜೊತೆ ಬಟ್ಟೆ. ದಾರಿಲೇನೂ ಸಿಗ್ದಿದ್ರೆ ಅಂತೊಂದು ಪೌಂಡು ಬ್ರೆಡ್ಡು, ನೀರು ಮತ್ತು ಕೈಕಾಲುಳುಕಿದ್ರೆ ಇಲ್ರಿ ಅಂತ ವಾಲಿನಿ ಸ್ಪ್ರೆ. ಗಂಭೀರವಾದ ಗಾಯಗಳೇನೂ ಆಗ್ದೇ ಇರ್ಲಿ. ಎಲ್ಲಾದ್ರೂ ತರಚುಗಾಯಗಳಾದ್ರೆ ಇರ್ಲಿ ಅಂತೊಂದು ಹತ್ತಿ ರೋಲ್ ಮತ್ತು ಬ್ಯಾಂಡೇಡ್. ಟ್ರಾಫಿಕ್ಕೇನು ಇಲ್ದೇ ಇದ್ರೂ ಬನಶಂಕರಿ ದಾಟೋ ಹೊತ್ಗೆ ಐದು ಗಂಟೆ. ಸಿಗ್ನಲ್ಲೇ ಇಲ್ಲದ ಖಾಲಿ ಖಾಲಿ ಸಿಲ್ಕ್ ಬೋರ್ಡ್ ನೋಡೋಕೆ ಪುಣ್ಯ ಮಾಡಿರ್ಬೇಕು ಕಣ್ರಿ ಅನಿಸ್ಬಿಟ್ಟಿತ್ತು ಅವತ್ತು :-)
ಭಯೋತ್ಪಾದಕ ಅಲ್ಲ ಮಾರ್ರೆ. ಇದು ನಾನೇ ! ಚಳಿಯ ತಡೆಯೋ ಬಟ್ಟೆಗಳ ಪರಿಯಿದಷ್ಟೇ |
ಮುಂದುವರಿದ ಪಯಣ:
ಕನಕಪುರ ಮುಟ್ಟೋ ಹೊತ್ಗೆ ಆರೂವರೆ. ಅಲ್ಲಿಂದ ಮೈಸೂರ ರಸ್ತೆಯಲ್ಲಿ(ಮಗಲೂರ ರಸ್ತೆಯಲ್ಲಲ್ಲ)ಹೋದ್ರೆ ಮತ್ತೊಂದು ವಿಭಜಕ. ಅದ್ರಲ್ಲಿ ಎಡಕ್ಕೆ ಹೋದ್ರೆ ಮೇಕೆದಾಟು ಮತ್ತು ಸಂಗಮ. ಬಲಕ್ಕೆ ಅಂದ್ರೆ ಸಂತನೂರು ಅಂತಿದ್ದ ಮಾರ್ಗದಲ್ಲಿ ಹೋಗಬೇಕಾದ್ದು ನಾವು. ಸಾಸಲಪುರದಲ್ಲಿ ಸೂರ್ಯೋದಯ ಕಾಣೋ ಹೊತ್ತಿಗೆ 6:55. 7:30 ಗೆ ಮಳವಳ್ಳಿ ತಲುಪಿದ ನಾವು ಅಲ್ಲಿಂದ ಎಡಕ್ಕೆ ಹೊರಳಿ ೩೩ ಕಿ.ಮೀ ಹೋದ್ರೆ ಕೊಳ್ಳೇಗಾಲ(ಬಲಕ್ಕೆ ಹೋದ್ರೆ ಮೈಸೂರು). ಶಿವನಸಮುದ್ರ ಹನ್ನೊಂದು ಕಿ.ಮೀ ಅನ್ನೋ ಬೋರ್ಡುಗಳನ್ನೆಲ್ಲಾ ನೋಡುತ್ತಾ ಬಂದ ನಮಗೆ ಇನ್ನೇನು ಸ್ವಲ್ಪ ಹೊತ್ತಲ್ಲಿ(೮:೩೦ ಹೊತ್ತಿಗೆ) ಕೊಳ್ಳೇಗಾಲ ತಲುಪಿ ಬಿಡ್ತೀವಿ ಅನ್ನೋ ಖುಷಿಯಲ್ಲಿದ್ದಾಗೊಂದು ಆಘಾತ. ಇಲ್ಲಿಂದ ವಾಹನ ಸಂಚಾರ ನಿಷೇಧಿಸಲಾಗಿದೆ ಅಂತ ಬೋರ್ಡು. ಕೊಳ್ಳೇಗಾಲಕ್ಕೆ ಹೋಗೋ ಸೇತುವೆ ಮುರಿದು ಹೊಸ ಸೇತುವೆ ಮಾಡೋ ಕಾರ್ಯ ಪ್ರಗತಿಯಲ್ಲಿತ್ತು :-( ಬದಲಿ ರಸ್ತೆ ಅಂದ್ರೆ ತಲಕಾಡಿನ ಮೇಲೆ ಹೋಗುವಂತದ್ದು.
ತಲಕಾಡು ಪಂಚಲಿಂಗೇಶ್ವರ ಕ್ಷೇತ್ರ:
ತಲಕಾಡ ಪಂಚಲಿಂಗೇಶ್ವರ ಕ್ಷೇತ್ರದ ಮೇಲೆ ಹಾದು ಅಲ್ಲಿಂದ ಕೊಳ್ಳೇಗಾಲದ ಹಾದಿ ಕೇಳಿದ ನಮಗೆ ಸ್ವಲ್ಪ ದೂರ ಹೋಗೋ ಹೊತ್ತಿಗೆ ಒಂದಿಷ್ಟು ಜನ ಅಡ್ಡ ಹಾಕಿದ್ರು. ಇಲ್ಲೇ ಎಡಗಡೆ ಬನ್ನಿ ಸಾ.ಕೊಪ್ಪರಿಗೇಲಿ ನದಿ ದಾಟಿಸ್ತಾರೆ. ಕೊಳ್ಳೇಗಾಲಕ್ಕೆ ಬರೀ ೩ ಕಿ.ಮೀ ಅಂತ ಕರೀತಿದ್ರು. ಅವ್ರ ಲಾಭಿಗೆ ಒಳಗಾಗದೇ ಇನ್ನೊಂಚೂರು ಮುಂದೆ ಬರ್ತಿದ್ದ ಹಾಗೆ ಮತ್ತೊಂದಿಷ್ಟು ಜನ. ಇದೊಳ್ಳೆ ಕತೆ ಆಯ್ತಲ್ಲ. ಸರ್ಕಾರದವ್ರೆ ಬದ್ಲಿ ರಸ್ತೆ ಅಂತ ಬೋರ್ಡು ಹಾಕಿದ್ದಾರೆ. ಇವ್ರು ನೋಡಿದ್ರೆ ತೆಪ್ಪ, ಗಿಪ್ಪ ಅಂತೆಲ್ಲಾ ಹೇಳ್ತಾ ಇದಾರೆ. ತೆಪ್ಪದಲ್ಲಿ ಬಸ್ಸೆಲ್ಲಾ ದಾಟಿಸೋಕಾಗಲ್ಲ ! ಅಂದ್ರೆ ಇದೇ ರಸ್ತೇಲಿ ಹೋದ್ರೆ ಕೊಳ್ಳೇಗಾಲ ಮುಟ್ತೀವಿ ಅನ್ನೋ ಭರವಸೆ ನಮ್ಮದು. ಆದ್ರೆ ಆ ರಸ್ತೇಲಿ ಎಷ್ಟು ದೂರು ಕೊಳ್ಳೇಗಾಲ ಅನ್ನೋ ಬೋರ್ಡು ಎಲ್ಲೂ ಸಿಗ್ಲಿಲ್ಲ. ಇದೇ ರಸ್ತೇಲಿ ಹೋದ್ರೆ ಮಹದೇವಪುರ ಮೂಲಕ ಕೊಳ್ಳೇಗಾಲಕ್ಕೆ ಹೋಗ್ತೀರ. ೩೦ ಕಿ.ಮೀ ಆಗತ್ತೆ ಅಂದ್ರು !! ೩ ಕಿ.ಮಿ ಎಲ್ಲಿ, ಮೂವತ್ತೆಲ್ಲಿ. ತೆಪ್ಪದಲ್ಲೇ ಹೋಗ್ಬಿಡೋಣ ಅಂತ ಆಸೆ ಚಿಗುರ್ತು. ಅವ್ರು ತೋರಿಸಿದ ಹಳ್ಳಿ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ಹೋಗೋ ಹೊತ್ತಿಗೆ ಒಂದು ನದಿ ತಟ ಸಿಗ್ತು.
ತೆಪ್ಪದ ಪಯಣ:
ಬೆಳಬೆಳಗ್ಗೆ ಎಂಟೂಮುಕ್ಕಾಲರ ಹೊತ್ತಿಗೆ ಅಲ್ಲೊಂದಿಷ್ಟು ತೆಪ್ಪಗಳು ಆಗಷ್ಟೇ ಮೂಡ್ತಿರೋ ರವಿಯ ಬೆಳಕಲ್ಲಿ ಚಳಿ ಕಾಯಿಸಿಕೊಳ್ತಾ ನದೀತಟದಲ್ಲಿ ಕೂತಿದ್ವು.ತೆಪ್ಪ ಅಂದ್ರೆ ಬೇರೆ ಕಡೆ ನೋಡುವಂತ ಬಿದಿರಿನ, ಮರದ ತೆಪ್ಪಗಳಲ್ಲ ಅವು. ನಮ್ಮ ಕಡೆ ಆಲೆಮನೆಯಲ್ಲಿ ಬೆಲ್ಲ ಕಾಯಿಸೋಕೆ ಉಪಯೋಗಿಸ್ತಾರಲ್ಲ ಕೊಪ್ಪರಿಗೆ. ಅದನ್ನೇ ತೆಪ್ಪ ಅಂತ ಉಪಯೋಗಿಸ್ತಿರೋ ಪರಿ ! ೪೫೦ ಕೇಜಿ ತೂಕದ ಕೊಪ್ಪರಿಗೆಗಳಲ್ಲಿ ೨೦ ಜನ ಅಥವಾ ೬ ಬೈಕು ಸಾಗಿಸ್ತಾರಂತೆ. ತಲಾ ಹತ್ತು ರೂ ಚಾರ್ಚು. ಬೈಕಿದ್ದ ಕಾರಣ ನಮ್ಮ ಹತ್ತಿರ ಒಟ್ನಲ್ಲಿ ೫೦ ರೂ ಕೇಳಿದ ತೆಪ್ಪದವ.
ಮುಂಚೆಯೆಲ್ಲಾ ಇಲ್ಲಿ ಮರಳುಗಾರಿಕೆ ನಡೆಯುತ್ತಿತ್ತಂತೆ. ಸರ್ಕಾರದವ್ರು ಮರಳುಗಾರಿಕೆ ನಿಷೇಧಿಸಿದ ಮೇಲೆ ಅಂದು ಪರ್ಮಿಟ್ ಪಡೆದಿದ್ದ ದೋಣಿಗಳೆಲ್ಲಾ ಹಾಗೇ ದಡದಲ್ಲಿ ನಿಲ್ಲಿಸಿರೋದನ್ನ ಕಾಣಬಹುದಿಲ್ಲಿ. ಆದ್ರೂ ಅಕ್ರಮ ಮರಳುಗಾರಿಕೆ ಅಂತ ಕರೆಯಬಹುದಾದ ಚಿಲ್ರೆ ಪಲ್ರೆ ಮರಳುಗಾರಿಕೆ ನಡೆದೇ ಇದೆ. ತಮ್ಮ ದೋಣಿ ನಡೆಸೋ ಹುಟ್ಟಲ್ಲಿ ನದೀ ಪಾತ್ರದಲ್ಲಿ ಎಲ್ಲಿ ಆಳ ಕಡಿಮೆ ಇದೆ ಅಂತ ನೋಡಿಕೊಂಡು ಅಲ್ಲಿ ತೆಪ್ಪ ನಿಲ್ಲಿಸಿ ನೀರಿಗೆ ಜಿಗಿಯೋ ಜನ ಅಗಲವಾದ ಗುದ್ದಲಿಯಲ್ಲಿ ನೀರೊಳಗಿಂದ ಮರಳ ಬಗೆದು ಕೊಪ್ಪರಿಗೆಯ ಅಂಚಿಗೆ ಹಾಕ್ತಾರೆ. ಮರಳಲ್ಲಿರೋ ನೀರೆಲ್ಲಾ ಬಸಿದು ಮಧ್ಯಕ್ಕೆ ಬಂದ್ರೆ ಮರಳು ಅಂಚಲ್ಲಿ ನಿಂತಿರುತ್ತೆ. ಹೀಗೆ ಕೊಪ್ಪರಿಗೆಯ ಎಲ್ಲಾ ಅಂಚುಗಳು ತುಂಬಿದ ಮೇಲೆ ಕೊಪ್ಪರಿಗೆಗೆ ಹತ್ತೋ ಈತ ಮಧ್ಯದಲ್ಲಿದ್ದ ನೀರನ್ನೆಲ್ಲಾ ಬಗೆದು ಹೊರಚೆಲ್ಲುತ್ತಾನೆ.ಸರ್ಕಾರ ನಿಷೇಧಿಸಿದ್ರೂ ಮರಳು ತೆಗೆದು ನದಿಯ ಒಡಲು ಬಗೀತಿರೋ ಇವ್ರನ್ನ ನೋಡೀ ಸಿಟ್ಟು ಬಂದ್ರೂ ನನ್ನ ಫೋಟೋ ತೆಗಿಬೇಡಿ ಅಣ್ಣಾ, ನಿಮ್ಮ ದಮ್ಮಯ್ಯ ಅಂತೀನಿ ಅಂದವನನ್ನು ನೋಡಿ ಮನ ಕರಗಿಹೋಯ್ತು. ದೊಡ್ಡ ದೊಡ್ಡ ಕಳ್ಳರನ್ನ ಬಿಟ್ಟು ಹೊಟ್ಟೆಪಾಡಿಗೆ ಈ ಉದ್ಯೋಗ ನಂಬಿಕೊಂಡಿರೋ ಇಂಥಾ ಚಿರ್ಲೆ ಪರ್ಲೆ ಕಳ್ರನ್ನ ದೊಡ್ಡ ವಿಷ್ಯ ಮಾಡ್ಬಾರ್ದು ಅನಿಸಿದ್ರೂ ಇಂಥಾ ವಿಷಯದ ಬಗ್ಗೆ ಬ್ಲಾಗಿಗ ಗೆಳೆಯರ ಗಮನವನ್ನಾದ್ರೂ ಸೆಳಿಲೇಬೇಕು ಅನ್ನೋ ಉದ್ದೇಶದಿಂದ ಇದ್ರ ಬಗ್ಗೆ ಕೊನೆಗೂ ಬರೆಯುತ್ತಿದ್ದೇನೆ. ಇದನ್ನು ಹೊರತುಪಡಿಸಿದ್ರೆ ಮುಂಜಾವಿನ ತಂಗಾಳಿಯಲ್ಲಿ ಈ ತೆಪ್ಪದ ಪಯಣ ನಿಜಕ್ಕೂ ಒಂದು ಮಧುರ ಅನುಭವ. ತೆಪ್ಪ ಅಂತ ತಲಾ ಇನ್ನೂರು ಸುಲಿಯೋ ಪ್ರವಾಸಿ ತಾಣಗಳಿಗೆ ಹೋಲಿಸಿದ್ರೆ ಇಲ್ಲಿನ ತಲಾ ೧೦ ರೂ ಹೆಚ್ಚೇನಲ್ಲ ಅನಿಸ್ತು !ಒಂಭತ್ತು ಗಂಟೆಯ ಸುಮಾರಿಗೆ ತೆಪ್ಪ ದಾಟಿ ಮತ್ತೊಂದರ್ಧ ಕಿ.ಮೀ ಅವರು ತೋರಿಸಿದ ಜಾಗಕ್ಕೆ ಬರೋ ಹೊತ್ತಿಗೆ ಮುಖ್ಯ ರಸ್ತೆ ಸಿಗ್ತು. ಕೊಳ್ಳೇಗಾಲಕ್ಕೆ ಐದು ಕಿ.ಮಿ ಅನ್ನೋ ಬೋರ್ಡೂ ಕಾಣ್ರು.
ಮುಂಚೆ ಮರಳು ತೆಗೆಯುತ್ತಿದ್ದ ದೋಣಿಗಳೆಲ್ಲಾ ಈಗಿನ ನಿಷೇಧದಿಂದ ಖಾಲಿ ನಿಂತಿರುವುದು |
ಕೊಳ್ಳೇಗಾಲದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ೮೦ ಕಿ.ಮೀ. ಕೊಳ್ಳೇಗಾಲದ ಅಂಬೇಡ್ಕರ್ ವೃತ್ತದಲ್ಲಿ ಎಡಕ್ಕೆ ತಿರುಗಿ ಹೊರಟ ನಮಗೆ ಹೊಟ್ಟೆ ಅಷ್ಟೇನೂ ಚುರುಗುಡದಿದ್ದ ಕಾರಣ ಮುಂದೆ ಸಾಗಿದ್ವಿ. ಅಲ್ಲಿಂದ ಇಪ್ಪತ್ತು ಕಿ.ಮೀ ಸಾಗಿದ್ರೆ ಹನೂರು. ಮಧ್ಯೆ ಇನ್ನೊಂದಿಷ್ಟು ಊರುಗಳಿದ್ರೂ ಸಸ್ಯಹಾರಿ ಉಪಹಾರಗೃಹಗಳು ಕಾಣದ ಕಾರಣ ಹನೂರಲ್ಲಿ ತಿಂಡಿಯ ಭಾಗ್ಯವಾಯಿತು. ಹತ್ತಕ್ಕೆ ಹನೂರು ತಲುಪಿದ್ದ ನಾವು ತಿಂಡಿ ತಿಂದು ಹೊರಡೋ ಹೊತ್ತಿಗೆ ೧೦:೨೦. ರುಚಿಯಾಗಿದ್ದ ಎರಡು ಪ್ಲೇಟು ಇಡ್ಲಿ ವಡೆ, ಒಂದು ಪರೋಟ, ಎರಡು ಕಾಫಿಗಳಿಂದ ಆದ ಬಿಲ್ಲು ಬರೀ ೫೫ ! ಹಳ್ಳಿಗಳ ಕಡೆ ಇದು ಸಾಮಾನ್ಯವೆನಿಸಿದ್ರೂ ಬೆಂಗಳೂರಿನ ಬಿಲ್ಲು ಮತ್ತು ಪ್ರವಾಸಿ ತಾಣಗಳಲ್ಲಿದ್ದದ ನೋಡಿ ನೋಡಿ ಸಾಮಾನ್ಯವೆನಿಸಿದ್ದ ನಮಗೆ ಇದು ಅಚ್ಚರಿ ಹುಟ್ಟಿಸಿದ್ದು ಸುಳ್ಳಲ್ಲ
ಇಲ್ಲಿಂದ ಮ.ಮ. ಬೆಟ್ಟಕ್ಕೆ ೪೭ ಕಿ.ಮೀ. ಹನೂರು ಬಸ್ಟಾಂಡು ದಾಟಿ ಸುಮಾರು ಐನೂರು ಮೀಟರ್ ಸಾಗುವಷ್ಟರಲ್ಲಿ ಸಿಗೋ ವಿಭಜಕದಲ್ಲಿ ಎಡಕ್ಕೆ ಹೋದ್ರೆ ಮ.ಮ. ಬೆಟ್ಟ.( ಬಲಕ್ಕೆ ಹೊದ್ರೆ ರಾಮಪುರ). ಇದರಲ್ಲಿ ಇನ್ನೊಂದರ್ಧ ಗಂಟೆ ಸಾಗಿದ್ರೆ ತಾಳಬೆಟ್ಟದ ಸ್ವಾಗತ ಕಮಾನು ಸಿಗುತ್ತದೆ. ಅಲ್ಲಿಂದ ಹಾಗೇ ಮುಂದಕ್ಕೆ ಸಾಗಿ ಮಲೆ ಮಹದೇಶ್ವರ ಬೆಟ್ಟ ತಲುಪೋ ಹೊತ್ತಿಗೆ ೧೨ ಘಂಟೆ.
ತಾಳಬೆಟ್ಟದ ಕಮಾನು |
ಸುಮ್ನೇ ಬೆಟ್ಟ ಹತ್ತಿದ್ವಿ ಅನ್ನೋ ಬದ್ಲು ಈ ಬೆಟ್ಟದ ದಾರಿಯ ಬಗ್ಗೆ ಹೇಳ್ಲೇಬೇಕು.ಇಪ್ಪತ್ತೇಳು ತೀವ್ರ ತಿರುವುಗಳಿರುವ(hairpin bends) ಈ ಬೆಟ್ಟದಲ್ಲಿ ಮಧ್ಯ ಗಾಡಿ ಕೆಟ್ಟು ನಿಂತ್ರೆ ದೇವ್ರೇ ಗತಿ ಅನ್ನಿಸಿದ್ದು ಅಲ್ಲಿ ಅಪಘಾತಕ್ಕೊಳಗಾಗಿ ಹಾಗೇ ತುಕ್ಕುಹಿಡಿಯುತ್ತಿರೋ ಗಾಡಿ ನೋಡಿದಾಗ
ಮಾರ್ಗ ಮಧ್ಯದಲ್ಲಿ ಹಲವು ದೇವಸ್ಥಾನಗಳಿವೆ. ಅವುಗಳಲ್ಲಿ ಕೆಳಗಿರೋ ಶನಿದೇವಸ್ಥಾನವೂ ಒಂದು
ಈ ಬೆಟ್ಟದ ಮೇಲೂ ಒಂದು ಊರಿದೆ ಮತ್ತು ಅದಕ್ಕೊಂದು ಬಸ್ಟಾಪೂ ಇದೆ ಅನ್ನೋದು ಆಶ್ಚರ್ಯ ತಂತು |
ಮ.ಮ ಬೆಟ್ಟದ ಸುತ್ತಮುತ್ತಲಿನ ಬೆಟ್ಟಗಳು--> ಚೆಕ್ ಪೋಸ್ಟಿನ ಬಳಿಯ ದೃಶ್ಯ |
ಮಲೆ ಮಹದೇಶ್ವರನ ದೇಗುಲ |
ಇಲ್ಲಿ ದೇಗುಲದ ಪ್ರಾಂಗಣಕ್ಕೆ ಕಾಲಿಡೋ ಮೊದಲೇ ನಿಮ್ಮ ಚಪ್ಲಿ, ಶೂಗಳನ್ನು ನಾವು ನೋಡ್ಕೋತೀವಿ , ಹಣ್ಣು ಕಾಯಿ ಪೂಜೆ ಸಾಮಾನು ತಗೋಳಿ ಅಂತ ಅಂಗಡಿಯವ್ರು ಮೇಲೆ ಬೀಳ್ತಾರೆ ! ಪೂಜೆ ಮಾಡಿಸೋ ಉದ್ದೇಶವಿದ್ದರೆ ಓಕೆ. ಬರೀ ದರ್ಶನ ಮಾಡೋ ಇರಾದೆಯಿದ್ರೆ ಹಾಗೇ ಮುಂದೆ ಬನ್ನಿ. ದೇಗುಲದ ಬಲಭಾಗದಲ್ಲಿ(ಬರೋ ನಿಮ್ಮ ಎಡಭಾಗದಲ್ಲಿ) ಚಪ್ಪಲಿ ಸ್ಟಾಂಡಿದೆ. ಅಲ್ಲಿ ತಲಾ ೫ ರೂಗೆ ಚಪ್ಪಲಿ, ಬ್ಯಾಗುಗಳನ್ನ ಇಡಬಹುದು. ೧೫ ರೂಗೆ ನಮ್ಮ ಶೂ, ಬ್ಯಾಗುಗಳನ್ನ ಅಲ್ಲಿಟ್ಟ ನಾವು ದೇಗುಲ ದರ್ಶನಕ್ಕೆ ತೆರಳಿದ್ವಿ
ಮಲೆ ಮಹದೇಶ್ವರನ ರಥೋತ್ಸವ |
ಇದು ದಿನದ ಸೇವೆಗೆ ಬಳಸೋ ಸಣ್ಣರಥ. ದೇಗುಲದಲ್ಲಿರುವ ಜಾತ್ರೆಗೆ ಬಳಸೋ ದೊಡ್ಡರಥವನ್ನು ಮುಂದೆ ಬರೋ ರಾತ್ರೆಯ ಚಿತ್ರಗಳಲ್ಲಿ ಕಾಣಬಹುದು |
ಮಲೆ ಮಹದೇಶ್ವರನ ದರ್ಶನ ಪಡೆದ ನಂತರ ಅಲ್ಲಿನ ಪ್ರಸಾದ ಭೋಜನಗೃಹದ ಕೆಳಗಿರೋ ಮುಡಿ ಕೌಂಟರ್ ಬಳಿ ತೆರಳಿದೆವು. ೧೨:೩೦ ರಿಂದ ೨:೩೦ ಮತ್ತು ಸಂಜೆ ೭:೩೦ರಿಂದ ೯ ಇಲ್ಲಿ ಊಟದ ಸಮಯ. ಆದ್ರೆ ನಾಗಮಲೆಗೆ ಅಂದೇ ಹೋಗೋ ಪ್ಲಾನಿನಲ್ಲಿದ್ರಿಂದ ಇಲ್ಲಿ ಪ್ರಸಾದ ಭೋಜನ ಸವಿಯದೇ ಮುಂದೆ ತೆರಳಿದ್ವಿ.
ಮಲೆ ಮಹದೇಶ್ವರನ ದರ್ಶನ ಪಡೆದ ನಂತರ ಅಲ್ಲಿನ ಪ್ರಸಾದ ಭೋಜನಗೃಹದ ಕೆಳಗಿರೋ ಮುಡಿ ಕೌಂಟರ್ ಬಳಿ ತೆರಳಿದೆವು. ೧೨:೩೦ ರಿಂದ ೨:೩೦ ಮತ್ತು ಸಂಜೆ ೭:೩೦ರಿಂದ ೯ ಇಲ್ಲಿ ಊಟದ ಸಮಯ. ಆದ್ರೆ ನಾಗಮಲೆಗೆ ಅಂದೇ ಹೋಗೋ ಪ್ಲಾನಿನಲ್ಲಿದ್ರಿಂದ ಇಲ್ಲಿ ಪ್ರಸಾದ ಭೋಜನ ಸವಿಯದೇ ಮುಂದೆ ತೆರಳಿದ್ವಿ.
ಮುಂದಿನ ಭಾಗದಲ್ಲಿ: ನಾಗಮಲೆಯ ಟ್ರೆಕ್ಕಿಂಗು ಮತ್ತು ಮ.ಮ ಬೆಟ್ಟದ ಸಂಜೆಯ ದೃಶ್ಯಾವಳಿಗಳು
ಧಿಡೀರ್ ಉಪ್ಪಿನಕಾಯಿ, ಮೆಣಸಿನ ಪುಡಿ ಇವೆಲ್ಲಾ ಬಲು ರುಚಿ.. ಕಾಯುತ್ತಾ ಕುಳಿತಾಗ ಬರುವ ಯೋಜನೆಗಳು ಬರಿ ಯೋಚನೆಗಳಾಗಿಯೇ ಉಳಿದುಬಿಡುತ್ತದೆ. ಇಂಥಹ ಜಟ್ ಪಟ್ ಪ್ರವಾಸಗಳು ಮನಸ್ಸಲ್ಲಿ ಕೂತು ಬಿಡುತ್ತವೆ.
ReplyDeleteಸುಂದರ ಮಾಹಿತಿ, ಉಪಯುಕ್ತ ಸಲಹೆ ಜೊತೆಯಲ್ಲಿ ಸುಂದರ ಚಿತ್ರಗಳು.. ಅದರಲ್ಲೂ ಬಾಣಲೆ ತೆಪ್ಪದ ಯಾನ... ಹಾತೊರೆಯುತ್ತಿದೆ ಮನಸ್ಸು ಅದರಲ್ಲಿ ತೇಲಬೇಕೆಂದು
ಸೂಪರ್ ಚಿತ್ರಗಳು ಸೂಪರ್ ಬರಹ...
ಈ ಬರಹ ಓದಿ, ವೀರಪ್ಪನ್ ಅಟ್ಟಹಾಸದ ಸಮಯದಲ್ಲಿ ನಾನು ಭೇಟಿಕೊಟ್ಟ ಮಲೆ ನೆನಪಾಯಿತು.
ReplyDeletebest photograph: 'ಚಳಿಯ ತಡೆಯೋ ಬಟ್ಟೆಗಳ ಪರಿ'ಯದ್ದು! :-D
ಕೆಲ ದಿನಗಳ ನಂತರ ಮತ್ತೆ ನಿಮ್ಮೊಡನೆ...
ReplyDeleteವಾರ: 37, 31/12/2014
ಈ ವಾರ ನಾನು ಓದಿದ "ವಾರದ ಅತ್ಯುತ್ತಮ ಬ್ಲಾಗ್ ಪೋಸ್ಟ್":
ಶ್ರೀಯುತ. Naveen Kumar ಅವರ ಈ ಚಿಂತನಶೀಲ ಕವನ,
http://mugdasinchana.wordpress.com/2014/12/30/ಉಳಿ-ಬೇಕು/
ಈ ವಾರ ನನ್ನ ಗಮನಕ್ಕೆ ಬಂದ "ವಾರದ ಅತ್ಯುತ್ತಮ ಕಮೆಂಟು",
ಶ್ರೀಯುತ. Prashasti Prabhakar ಅವರ ಬ್ಲಾಗ್ ಪೋಸ್ಟ್ ಓದಿ,
ಶ್ರೀಯುತ. Srikanth Manjunath ಅವರು ಬರೆದ ಕಮೆಂಟು,
ಮೂಲ ಪೋಸ್ಟ್:
http://prashasti-prashantavanam.blogspot.in/2014/12/bike-trip-day-1.html
Fanofyou
ಚಿತ್ರ ಸಹಿತ ಸಮಗ್ರ ಮಾಹಿತಿ, ಓದಿ ತುಂಬಾ ಖುಷಿಯಾಯಿತು :-)
ReplyDelete