ಪೀಠಿಕೆ:
ಹಾಸನದಿಂದ ಹಳೇಬೀಡಿಗೆ ಹೋಗುವ ದಾರೀಲಿ ಕಲ್ಕೆರೆ ಗೇಟ್ ಅಂತ ಇಳದ್ರೆ ಅಲ್ಲಿಂದ ೨ ಕಿ.ಮೀ ದೂರದಲ್ಲಿ ದೊಡ್ಡಗದ್ದವಳ್ಳಿ ಅನ್ನೋ ಹೊಯ್ಸಳ ದೇವಸ್ಥಾನ ಸಿಗುತ್ತೆ ಅಂದಿದ್ದ ಗಿರಿ. ಆದ್ರೆ ಹಳೇಬೀಡಿಗೆ ಹೋಗೋ ಒಂದು ಬಸ್ಸ ಹತ್ತಿ, ಅದು ಕಲ್ಕೆರೆ ಗೇಟಿನ ಮಾರ್ಗದಲ್ಲಿ ಹೋಗೋಲ್ಲ. ಅದ್ರದ್ದೇ ಬೇರೆ ದಾರಿ ಅಂತ ಇಳಿದಿದ್ದಾಗಿತ್ತು. ಅವತ್ತು ಸೀದಾ ಹಳೇಬೀಡಿಗೆ ಹೋಗಿ ಹಾಸನದ ಅತ್ತೆ ಮನೆಗೆ ಮರಳಿದವನಿಗೆ ದೊಡ್ಡಗದ್ದವಳ್ಳಿ ನೋಡೋ ಭಾಗ್ಯ ಸಿಕ್ಕಿದ್ದು ಮಾರ್ನೇ ದಿನ. ಹಿಂದಿನ ದಿನದ ಒಂಟಿ ಪ್ರವಾಸಗಳಂತಾಗದ ಈ ಪ್ರವಾಸಕ್ಕೆ ಜೊತೆಯಾಗಿದ್ದು ಅತ್ತೆ ಮಕ್ಕಳಾದ ದಿವ್ಯ, ಕಾವ್ಯ ಮತ್ತು ಅವರಣ್ಣ ಉದಯಣ್ಣ
ಹೋಗೋದು ಹೇಗೆ? :
ಹಾಸನದಿಂದ ಹದಿನಾರು ಕಿ.ಮೀ ದೂರವಿರೋ ದೊಡ್ಡಗದ್ದವಳ್ಳಿ ದೇವಸ್ಥಾನಕ್ಕೆ ಸ್ವಂತ ವಾಹನದಲ್ಲಿ ಹೋಗಬಹುದು. ಬಸ್ಸಲ್ಲಿ ಹೋಗೋದಾದ್ರೆ ಕಲ್ಕೆರೆ ಗೇಟಲ್ಲಿ ಇಳಿದು ೨ ಕಿ.ಮೀ ನಡೆಯಬೇಕು. ಹಳೇಬೀಡಿಗೆ ಹೋಗೋ ಕೆಲ ಬಸ್ಸುಗಳು, ಬೇಲೂರಿಗೆ ಹೋಗೋ ಕೆಲ ಬಸ್ಸುಗಳು ಕಲ್ಕೆರೆ ಗೇಟಿನ ಮೇಲೆ ಹೋಗುತ್ತವೆ. ಕಲ್ಕೆರೆ ಗೇಟಿಗೆ ಹೋಗುತ್ತಾ ಅಂತ ಕೇಳೇ ಬಸ್ಸು ಹತ್ತೋದು ಕ್ಷೇಮೆ.
|
ಕಲ್ಕೆರೆ ಗೇಟಲ್ಲಿ ಕಾಣುವ ದೊಡ್ಡಗದ್ದವಳ್ಳಿಯ ಬಗೆಗಿನ ಮಾಹಿತಿ ಫಲಕ |
ಇತಿಹಾಸ: ಹೊಯ್ಸಳರು ಕಟ್ಟಿಸಿದ ದೇವಸ್ಥಾನಗಳೆಲ್ಲಾ ವಿಷ್ಣುವಿನದೋ, ಈಶ್ವರನದೋ ಆಗಿದ್ದ ನೋಡಿದ್ವಿ ಇಲ್ಲಿಯವರೆಗೆ. ಇದೇನು ಲಕ್ಷ್ಮೀ ದೇವಸ್ಥಾನ ಅಂತ ಆಶ್ಚರ್ಯ ಪಡ್ತಾ ಇದ್ದೀರ ? ಇದನ್ನು ಕಟ್ಟಿದ್ದು ಕ್ರಿ.ಶ ೧೧೧೪ ರಲ್ಲೇ ಆಗಿದ್ರೂ ಇದನ್ನು ಕಟ್ಟಿಸಿದ್ದು ಆಗಿನ ಹೊಯ್ಸಳರಸ ವಿಷ್ಣುವರ್ಧನನಲ್ಲ ! ಬದಲಿಗೆ ಮಹಾರಾಷ್ಟ್ರದ ವಜ್ರದ ವ್ಯಾಪಾರಿ ಕುಲ್ಹಣ ರಾವತ್ ! ಮಹಾರಾಜರ ಅಪ್ಪಣೆ ಮೇರೆಗೆ ಕಟ್ಟಿದ್ದೇ ಆಗಿದ್ರೂ ಪ್ರಧಾನಶಿಲ್ಪಿಗಳು ಬೇರೆಯಾಗಿದ್ದರಿಂದ ಇದರಲ್ಲಿನ ವಾಸ್ತುಶಿಲ್ಪ ಉಳಿದ ಹೊಯ್ಸಳ ದೇಗುಲಗಳಿಗಿಂತ ಕೊಂಚ ಭಿನ್ನವಾಗಿದೆ. ಉದಾಹರಣೆಗೆ ಚತುಷ್ಕೂಟ (ನಾಲ್ಕು ಶಿಖರ)ವಿರುವ ಈ ದೇಗುಲದ ಸ್ವಾಗತದ್ವಾರದ ಮೇಲ್ಛಾವಣಿಯಲ್ಲೇ ತಮ್ಮ ವಾಹನ, ಪತ್ನಿಯರೊಡಗೂಡಿದ ಸಪತ್ನೀಕರಾದ ಅಷ್ಟದಿಕ್ಪಾಲಕರು ಇದ್ದಾರೆ. (ಇಲ್ಲಿಯವರೆಗೆ ನೋಡಿದ ದೇಗುಲಗಳಲ್ಲಿ ಬೇಲೂರು: ಏಕಕೂಟ, ಹಳೇಬೀಡು: ದ್ವಿಕೂಟ, ಬೆಳವಾಡಿ:ತ್ರಿಕೂಟ ದೇವಾಲಯಗಳನ್ನು ಕಂಡಿದ್ವಿ. ಮೊದಲ ಬಾರಿಗೆ ಚತುಷ್ಕೂಟ). ಸ್ವಾಗತದಲ್ಲಿರುವ ಆನೆಯ ಅಲಂಕಾರ ಭಿನ್ನವಾಗಿದೆ.ದೇಗುಲದಲ್ಲಿ ದುರ್ಗಿ, ಲಕ್ಷ್ಮಿ ಇರುವುದ ಬೇರೆಡೆ ಕಂಡರೂ ಇಲ್ಲಿಯ ದುರ್ಗಿಯ ಪ್ರವೇಶದ್ವಾರಕ್ಕೆ ಕಾವಲುಗಾರನಾಗಿರುವುದು ಬೇತಾಳ ! ಇಲ್ಲಿಯವರೆಗಿನ ದೇಗುಲಗಳಲ್ಲಿ ಬೇತಾಳ, ಸ್ಮಶಾನಭೈರವಿಯಂತಹ ರಚನೆಗಳು ದೇಗುಲದ ಹೊರಗೆ ಕಂಡಿದ್ದವೇ ಹೊರತು ಗರ್ಭಗುಡಿಯ ಬಳಿಯಲ್ಲ. ಹೊಯ್ಸಳರ ಕಾಲದಲ್ಲಿ ಕಟ್ಟಿದ ಮಾತ್ರಕ್ಕೆ ಇದಕ್ಕೆ ಹೊಯ್ಸಳರ ದೇಗುಲ ಅಂತ ಕರೆಯಲಾದೀತೇ ಅಂತ ಯೋಚ್ನೆ ಮಾಡೋಕೆ ಶುರು ಮಾಡಿದ್ರಾ ? ಸ್ವಲ್ಪ ತಡೀರಿ. ಇಲ್ಲಿ ಇಷ್ಟೇ ಅಲ್ಲ. ಸಮಕಾಲೀನ ದೇಗುಲಗಳಾದ ಮೊಸಳೆ (ಬೇಲೂರು,ಹಳೇಬೀಡು ಇದನ್ನು ಶುರು ಮಾಡುವಾಗ ಇರಲಿಲ್ಲ. ಅವನ್ನು ಕಟ್ಟಲು ಪ್ರಾರಂಭಿಸಿದ್ದು ಕ್ರಮವಾಗಿ ೧೧೧೭,೧೧೨೧ ರಲ್ಲಿ) ದೇಗುಲದಲ್ಲಿರುವಂತೆ ಇಲ್ಲಿಯೂ ದೇಗುಲದ ಶಿಖರದ ಬಳಿ ಹೊಯ್ಸಳರ ಲಾಂಛನವಿದೆ. ನಾಲ್ಕು ದಿಕ್ಕಿಗೆ ನಾಲ್ಕು ಎಂಬಂತಿರುವ ನಾಲ್ಕು ಹೊಯ್ಸಳ ಲಾಂಛನಗಳು ಇದು ಹೊಯ್ಸಳ ದೇಗುಲವೇ ಎಂಬುದನ್ನ ಸಾರುತ್ತವೆ. ಹಳಗನ್ನಡ ಬಲ್ಲವರಿದ್ದರೆ ಇಲ್ಲಿ ಸುಸ್ಪಷ್ಟವಾಗಿರುವ ಹಳಗನ್ನಡ ಶಾಸನಗಳಿಂದ ಇತಿಹಾಸದ ಹಳೆಯ ಪುಟಗಳ ಮೆಲುಕು ಹಾಕಬಹುದು. ಅಂದ ಹಾಗೆ ಇದನ್ನು ಕಟ್ಟಿದ ಶಿಲ್ಪಿಗಳು ಮಲ್ಲಯೋಜ ಮತ್ತು ಮಣಿಯೋಜ. ಇಷ್ಟೆಲ್ಲಾ ಕೇಳಿದ ಮೇಲೆ ದೇವಸ್ಥಾನವನ್ನೊಮ್ಮೆ ನೋಡೋ ಆಸಕ್ತಿ ಕೆರಳಿರಬೇಕಲ್ವಾ ? ಬನ್ನಿ , ಒಮ್ಮೆ ಸುತ್ತಿ ಬರೋಣ ದೇಗುಲವನ್ನ
|
ಲಕ್ಷ್ಮೀದೇಗುಲದ ಮುಂಭಾಗದಲ್ಲಿ |
|
At the entrance |
ಪ್ರವೇಶದ್ವಾರದಲ್ಲಿರುವ ನವಗ್ರಹಗಳು:
|
ತಲೆಬಾಗಿ ಒಳಗೆ ಬಾ ಯಾತ್ರಿಕನೆ.. |
|
ಲಕ್ಷ್ಮೀ ದೇಗುಲದ ಮುಂಪಾರ್ಶ್ವದ ನೋಟ |
|
ಲಕ್ಷ್ಮೀ ದೇವಸ್ಥಾನವಾದ್ದರಿಂದ ಸಹಜವಾಗೇ ಪ್ರವೇಶದ್ವಾರದಲ್ಲಿ ಜಯ ವಿಜಯರು |
|
ಶಂಖ, ಪದ್ಮಗಳನ್ನು ಹಿಡಿದ ಜಯವಿಜಯರ ಮತ್ತು ಶಿವನ ದ್ವಾರಪಾಲಕರಾದ ನಂದೀಶ್ವರ, ಭೃಂಗೀಶ್ವರರ ಮಧ್ಯೆ ಯಾರು ಯಾರೆಂದು ಗೊಂದಲವಾಗಬಹುದು ಕೆಲವರಿಗೆ ಮೊದಲು. ಯಾವ ದೇವಸ್ಥಾನ ಅನ್ನೋದು ಒಂದು ಸುಳಿವಾದರೆ ಅವರ ಕೈಯಲ್ಲಿರುವ ಆಯುಧಗಳು ಅವರು ಯಾರೆಂದು ಕಂಡು ಹಿಡಿಯೋದಕ್ಕೆ ಎರಡನೆಯ ಸುಳಿವು. ಉದಾಃ ನಂದೀಶ್ವರ, ಭೃಂಗೀಶ್ವರರ ಕೈಯಲ್ಲಿ ಶಂಖ-ಪದ್ಮಗಳು ಬರುವುದಿಲ್ಲ |
|
ಮೊದಲು ಸಿಗೋ ಕಾಳಿಯ ದೇಗುಲಕ್ಕೆ ದ್ವಾರಪಾಲಕನಾಗಿರುವ ಪಿಶಾಚಿ | |
ಒಳಗಿರುವ ದೇವತೆಗಳು:
ಎಡಭಾಗದಲ್ಲಿ ಕಾಳಿಯ ಗರ್ಭಗೃಹವಿದೆ. ಅದಕ್ಕೆ ಅಭಿಮುಖವಾಗಿ ಮತ್ತೊಂದು ದಿಕ್ಕಿನಲ್ಲಿ ಸೌಮ್ಯ ಮೂರ್ತಿಯಾದ ಯೋಗನರಸಿಂಹನಿದ್ದಾನೆ. ವಿಷ್ಣುವಿನ ಪಕ್ಕದಲ್ಲಿ ರುದ್ರನಿದ್ದಾನೆ. ಅವನಿಗೆ ಅಭಿಮುಖವಾಗಿ ಲಕ್ಷ್ಮೀದೇವಿಯ ಗುಡಿಯಿದೆ. ಕಾಳಿಯ ಎದುರಿಗೆ ಈಗ ವಿಭೂತಿ ಹುಂಡಿಯಿಟ್ಟಿರೋ ನವರಂಗದ ಮೇಲ್ಭಾಗದಲ್ಲಿನ ಛಾವಣಿಯಲ್ಲಿ ರುದ್ರವೀಣೆಯನ್ನು ನುಡಿಸುತ್ತಿರೋ ಶಿವನಿದ್ದಾನೆ. ಅದನ್ನು ದಾಟಿ ವಿಷ್ಣುವಿನ ಗರ್ಭಗುಡಿಯತ್ತ ಬಂದರೆ ಮೇಲ್ಛಾವಣಿಯಲ್ಲಿ ಸಪತ್ನೀಕರಾದ ಅಷ್ಟದಿಕ್ಪಾಲಕರು ಕಾಣುತ್ತಾರೆ.
|
ಪಿಶಾಚಿಗಳ ಹೆಬ್ಬಾಗಿಲಿನ ಕಾಳಿ |
ಕಾಳಿಯ ಎದುರಿಗೆ ಈಗ ವಿಭೂತಿಯ ಪೆಟ್ಟಿಗೆಯಿಟ್ಟಿರುವ ನವರಂಗದ ಮೇಲ್ಛಾವಣಿಯಲ್ಲಿ ನರ್ತಿಸುತ್ತಿರುವ ವಿಗ್ರಹವಿದೆ.
ವಜ್ರದ ವ್ಯಾಪಾರಿ ಮತ್ತವನ ಪತ್ನಿ ಸಹಜಾದೇವಿ ಕಟ್ಟಿಸಿದ ದೇಗುಲವಾದ್ದರಿಂದ ಇದು ಲಕ್ಷ್ಮೀ ದೇಗುಲವಾಗಿಯೂ, ನವರಂಗ ಎಂಬುದನ್ನು ಸೂಚಿಸಲು ಅಲ್ಲಿ ನರ್ತನದ ಶಿಲ್ಪ.. ಹೀಗೆ ಪ್ರತಿಮೆಗಳಲ್ಲೇ ಅದೆಷ್ಟು ಪ್ರತಿಮೆಗಳು, ರೂಪಕಗಳು ಅಡಗಿವೆಯೂ ಇಲ್ಲಿ!
|
ಈ ಶಿಲ್ಪವನ್ನು ಇಲ್ಲಿನ ಭದ್ರತೆಯವರು ಮತ್ತು ಮುಖ್ಯ ಅರ್ಚಕರು ರುದ್ರವೀಣೆಯನ್ನು ನುಡಿಸುತ್ತಿರುವ ಶಿವ ಅಂತ ತಿಳಿಸಿದ್ರು. ಆದ್ರೆ ಮುಂಚಿನ ದೇಗುಲಗಳಲ್ಲಿ ಇದನ್ನು ನರ್ತಿಸುತ್ತಿರುವ ಪಾರ್ವತಿ ಎಂದು ತಿಳಿದಿದ್ದೆವು ! ಈ ರುದ್ರವೀಣೆಯ ಬಗ್ಗೆ ಮತ್ತು ಈ ಮೂರ್ತಿಯ ಬಗ್ಗೆ ಇನ್ನೊಂದಿಷ್ಟು ಸಂಶೋಧನೆ ನಡೆಯಬೇಕಿದೆ |
ನವಗ್ರಹಗಳು:
|
ಪೂರ್ವದ ಅಧಿಪತಿ ಇಂದ್ರ ತನ್ನ ಆನೆ ಐರಾವತದ ಮೇಲೆ, ಪತ್ನಿ ಶಚೀದೇವಿಯೊಂದಿಗೆ |
|
ಆಗ್ನೇಯ ದಿಕ್ಕಿನ ಅಧಿಪತಿ ಮೇಷವಾಹನ(ಟಗರು) ಅಗ್ನಿ, ಪತ್ನಿ ಸ್ವಾಹಾಳೊಂದಿಗೆ |
|
ಅಷ್ಟದಿಕ್ಪಾಲಕರ ಮದ್ಯವಿರೋ ಹಾಳಾದ ಶಿಲ್ಪ. ಇಲ್ಲಿ ಹೂವಿನ ಗೊಂಚಲೋ, ಇನ್ನೊಂದು ಶಿಲ್ಪವೋ ಇದ್ದ ಕುರುಹಿದೆ |
|
ದಕ್ಷಿಣಾಧಿಪತಿ ಮಹಿಷವಾಹನ ಯಮ |
|
ನೈರುತ್ಯಾಧಿಪತಿ ನರವಾಹನ ನಿರುತಿ ಪತ್ನಿ ಖಡ್ಗಿಯೊಂದಿಗೆ |
|
ಪಶ್ಚಿಮಾಧಿಪತಿ ಮಖರವಾಹನ ವರುಣ |
ವಾಯುವ್ಯಾಧಿಪತಿ ಜಿಂಕೆವಾಹನ ವಾಯು.
|
ಉತ್ತರಾಧಿಪತಿ ಅಶ್ವ(ಕುದುರೆ)ವಾಹನ ಕುಬೇರ |
|
ಈಶಾನ್ಯಾಧಿಪತಿ ವೃಷಭವಾಹನ(ನಂದಿ) ಈಶ್ವರ ಪತ್ನಿ ಪಾರ್ವತಿಯೊಂದಿಗೆ |
|
ಯೋಗನರಸಿಂಹನ ದ್ವಾರದಲ್ಲಿರುವ ದುರ್ಗೆ. ಇದೇ ರೀತಿ ಶಿವನ ದ್ವಾರದಲ್ಲಿ ಲಕ್ಷ್ಮಿಯನ್ನು ಕಾಣಬಹುದು ! |
|
ಯೋಗನರಸಿಂಹ |
|
ಶಿವನ ದ್ವಾರದಲ್ಲಿರುವ ದ್ವಾರ ಲಕ್ಷ್ಮಿ |
|
ಈ ಶಿಲ್ಪದ ಬಗ್ಗೆ ಮತ್ತು ನಂತರ ಸಿಗುವ ಇಬ್ಬರು ಶಿಲಾಬಾಲಿಕೆಯರ ಹಿನ್ನೆಲೆಯ ಬಗ್ಗೆ ಅಷ್ಟು ಮಾಹಿತಿ ಸಿಗಲಿಲ್ಲ. ಮತ್ತೊಮ್ಮೆ ಸಾಧ್ಯವಾದರೆ ಪ್ರಯತ್ನಿಸಬೇಕು |
|
ಹೊರಭಾಗದಲ್ಲಿರುವ ಹೊಯ್ಸಳ ಶಿಲ್ಪ |
|
ದುರ್ಗೆ |
|
ಆನೆಗಳ ವಿನ್ಯಾಸ, ಮುಖ್ಯವಾಗಿ ಸೊಂಡಿಲು ಮತ್ತು ಕಾಲುಗಳನ್ನು ಗಮನಿಸಿ. ಇವುಗಳಲ್ಲಿ ಉಳಿದ ಹೊಯ್ಸಳ ದೇಗುಲಗಳಿಗಿಂತ ಭಿನ್ನ ರಚನೆ ಕಾಣಬಹುದು. ಎಲ್ಲೆಡೆ ಓಡುತ್ತಿರುವ ಆನೆಗಳಿದ್ದರೆ ಇಲ್ಲಿರುವ ಆನೆಗಳು ಕೂತ ಭಂಗಿಯಲ್ಲಿವೆ ! |
|
ಇಲ್ಲಿರುವ ಮೊದಲ ಶಾಸನ. ಇಲ್ಲಿ ಇದೇ ತರಹದ ಇನ್ನೂ ನಾಲ್ಕೈದು ಶಿಲಾಶಾಸನಗಳನ್ನು ಕಾಣಬಹುದು |
|
ಏಳು ಪ್ರಾಣಿಗಳ ಅಂಗಗಳನ್ನು ಹೊಂದಿರುವ ಮಖರ ಎಂಬ ಕಾಲ್ಪನಿಕ ಪ್ರಾಣಿ. ಇದನ್ನು ಹೊಯ್ಸಳರ ಎಲ್ಲಾ ದೇಗುಲಗಳಲ್ಲೂ ಸಾಮಾನ್ಯವಾಗಿ ಕಂಡಿರುತ್ತೀರಿ. ಮೊಸಳೆಯ ಬಾಯಿ, ಆನೆಯ ಸೊಂಡಿಲು, ಸಿಂಹದ ಹೆಜ್ಜೆ, ಮಂಗನ ಕಣ್ಣು, ನವಿಲಿನ ಪುಕ್ಕ, ಗೋವಿನ ಮುಖ, ಕುದುರೆಯ ದೇಹ.. ಹೀಗೆ ಏಳು ಅನ್ನುತ್ತಾರೆ ! |
|
ದೇಗುಲದ ಎಡಗೋಡೆಯಲ್ಲಿರುವ ಎರಡನೆಯ ಶಾಸನ |
|
ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಪಾಲರ ಗುಡಿಗಳು |
|
ನರಬಲಿಯನ್ನು ಸೂಚಿಸುವ ಶಿಲ್ಪಗಳು! |
|
ಮತ್ತೆರಡು ಶಾಸನಗಳು |
|
ಮತ್ತೊಂದು ಶಾಸನ |
|
ದೇಗುಲದ ಪಾರ್ಶ್ವದಲ್ಲಿ ನಾವು.. |
|
ಗೋಪುರದಲ್ಲಿ ಹೊಯ್ಸಳಶಿಲ್ಪ |
|
ಕ್ಷೇತ್ರಪಾಲ |
|
ಮತ್ತೊಂದು ಕ್ಷೇತ್ರಪಾಲನ ಗುಡಿಯ ಮೇಲ್ಗಣ ಶಿಖರದ ನರ್ತಕಿ |
|
ಇದಕ್ಕಿಂತ ಸ್ಪಷ್ಟ ಶಾಸನ ಬೇಕಾ ? ! |
|
ಕ್ಷೇತ್ರಪಾಲರ ಗುಡಿಯ ಶಿಖರ |
|
ಮೋಡಗಳ ಸೀಳಿ ಬೆಳೆಯುವಂತೆ ಕಾಣುವ ಶಿಖರ ! |
|
ಪ್ರತೀ ಶಿಖರದ ಮೇಲೂ ಇರುವ ಹೊಯ್ಸಳ ಲಾಂಛನವನ್ನು ನೋಡಬಹುದು |
|
ಒಂದಿಷ್ಟು ಅಮೂಲ್ಯ ಮಾಹಿತಿಗಳಿತ್ತ ಭದ್ರತಾ ಸಿಬ್ಬಂದಿ ಶಿವಣ್ಣ |
ಮುಂದೆ:
ತುರುವೇಕೆರೆಯಿಂದ ಹೊಯ್ಸಳ ದೇಗುಲಗಳ ಸುತ್ತಾಟ ಇದರ ಮೂಲಕ ಒಂದು ಕಡೆ ಬಂದು ತಲುಪಿದೆ. ಆಗೆಲ್ಲಾ ಮುಂದೇನು ಅಂದ್ರೆ ಸುಮಾರಷ್ಟು ಆಯ್ಕೆಗಳಿದ್ದವು. ಹದಿಮೂರು ಅಂಕಣ ಬರೆದ ಮೇಲೆ ಮುಂದೇನು ಎಂಬ ಪ್ರಶ್ನೆಗೆ ಅನಿಶ್ಚತೆಯೇ ಉತ್ತರವಾಗಿದೆ ಸದ್ಯಕ್ಕೆಂತೂ. ಅರಸೀಕೆರೆ, ಭದ್ರಾವತಿ,ಅಮೃತಾಪುರದಲ್ಲಿ ಮುಂಚೆ ನೋಡಿದ್ದ ದೇಗುಲ, ಚೆನ್ನರಾಯಪಟ್ಟಣ, ಹಾಸನದಲ್ಲೇ ಇರುವ ನೋಡದಿಹ ಹಲವು ದೇಗುಲಗಳು.. ಹೀಗೆ ಸುಮಾರಷ್ಟು ಆಯ್ಕೆಗಳಿವೆ. ಆದ್ರೆ ಮುಂದಿನ ಪಯಣ ಎಲ್ಲೆಂದು ಗೊತ್ತಿಲ್ಲ. ಮತ್ತೆ ಹೊಸ ಹೊಯ್ಸಳ ದೇಗುಲ ದರ್ಶಿಸಿದರೆ ಅದರೊಂದಿಗೆ ಅಂಕಣವ ಮತ್ತೆ ಮುಂದುವರೆಸುತ್ತೇನೆ.. ಅಲ್ಲಿಯವರೆಗೊಂದು ವಿರಾಮ
This comment has been removed by the author.
ReplyDeleteಧಾರಾವಾಹಿ ಮಾಹಿತಿಪೂರ್ಣವಾಗಿದೆ ಪ್ರಶಸ್ತಿ.
ReplyDeleteಹೊಯ್ಸಳ ಮೂರ್ತಿಗಳಲ್ಲಿ ಅತ್ಯಂತ ಸುಂದರವಾದದ್ದು ಹಾಸನದ ಕೊಂಡಜ್ಜಿಕೆರೆಯ ಅಲ್ಲಾಳನಾಥ. ಚೆನ್ನಕೇಶವನಿಗಿಂತಲೂ ಕೂಡ. ವಿಷ್ಣುವರ್ಧನ ಬೇಲೂರಿನ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಲು ೧೮ ಅಡಿ ಎತ್ತರದ ಭವ್ಯವಾದ ವಿಷ್ಣು ವಿಗ್ರಹವನ್ನು ಮಾಡಿಸಿ ಬೇಲೂರಿಗೆ ತರಿಸಿದನಂತೆ. ಆದರೆ ವಿಗ್ರಹ ಬರುವುದರೊಳಗೆ ದೇವಾಲಯದ ಮುಖ್ಯದ್ವಾರದ ನಿರ್ಮಾಣವಾಗಿಹೋಗಿತ್ತು. ಅಷ್ಟೆತ್ತರದ ಮೂರ್ತಿಯನ್ನು ದೇವಾಲಯದ ಒಳಗೆ ತರಲು ಸಾಧ್ಯವಾಗದೇ ಈಗಿರುವ ಚನ್ನಕೇಶವನ ಮೂರ್ತಿಯನ್ನು ಹೊಸದಾಗಿ ಕೆತ್ತಿಸಿ ಪ್ರತಿಷ್ಟಾಪಿಸಿದರಂತೆ. ಹೀಗೆ ಪ್ರತಿಷ್ಠಾಪನೆ ಆಗದೆ ಪ್ರಾಕಾರದಲ್ಲೇ ಉಳಿದ ವಿಗ್ರಹವನ್ನು ಒಬ್ಬ ಅಜ್ಜಿ ಕೊಂಡು ತಂದು, ತನ್ನೂರಿನಲ್ಲಿ ಪ್ರತಿಷ್ಠಾಪಿಸಿ, ಪುಟ್ಟ ಗುಡಿ ಕಟ್ಟಿಸಿದಳಂತೆ. ಹೀಗಾಗೇ ವಿಗ್ರಹ ಕೊಂಡ ಅಜ್ಜಿಯ ಊರು ಕೊಂಡಜ್ಜಿ ಎಂದೇ ಖ್ಯಾತವಾಯಿತು. ಮುಂದಿನ ಸರ್ತಿ ಹೋದಾಗ ಮಿಸ್ ಮಾಡದೇ ನೋಡು.
ನನ್ನ ಪ್ರಕಾರ ಇದು ಪಕ್ಕಾ ಹೊಯ್ಸಳ ಶೈಲಿಯ ದೇವಸ್ಥಾನವಲ್ಲ. ಅದಕ್ಕಿಂತ ಚಾಲುಕ್ಯ ಶೈಲಿಯೇ ಜಾಸ್ತಿಯಿದೆ. ಶಿಖರಗಳೂ ಕೂಡ ಕದಂಬ, ಚಾಲುಕ್ಯ ಮತ್ತು ಪೂರ್ವ ಹೊಯ್ಸಳರ ಸಮ್ಮಿಶ್ರಣದಂತಿದೆ.
ReplyDeleteಒಳ್ಳೆಯ ಮಾಹಿತಿಗೆ ವಂದನೆಗಳು ಸಚಿನಣ್ಣ :-) .. ಕೊಂಡಜ್ಜಿ ಬಗ್ಗೆ ಕೇಳಿದ್ದಿ. ಮುಂದಿನ ಸಲ ಹೋದಾಗ ಹೋಗಕ್ಕು ಹೇಳಿ ಪ್ಲಾನ್ ಕೂಡ ಹಾಕಾಯ್ದು :-) ನುಗ್ಗೇಹಳ್ಳಿ, ಕೊಂಡಜ್ಜಿ, ಅರಸೀಕೆರೆ, ಅಮೃತಾಪುರ, ಭದ್ರಾವತಿ..ಸದ್ಯಕ್ಕೆ ಹೋಗಕ್ಕು ಅಂತ ಅಂದ್ಕೊಂಡಿರೋ ದೇವಸ್ಥಾನಗಳು. ಅಲ್ಲಿಗೆ ಹೋದಾಗ ಇನ್ನೂ ಎಷ್ಟು ಹೊಯ್ಸಳ ದೇವಸ್ಥಾನಗಳ ಬಗ್ಗೆ ಗೊತ್ತಾಗ್ತೋ ಗೊತ್ತಿಲ್ಲೆ.
ReplyDeleteಬ್ಲಾಗ್ ಭೇಟಿಗಾಗಿ ವಂದನೆ..