Sunday, December 21, 2014

ನಾ ನೋಡಿದ ಸಿನಿಮಾ : ಪಿ.ಕೆ !

 ಇದೊಂತರ ಪಕ್ಕಾ ಕಾಮಿಡಿ ಫಿಲ್ಮು, ಅಮೀರರ ಸೂಪರ್ ಅಭಿನಯ ಅಂತ ವೈಭವೀಕರಿಸಿ ಅಥವಾ ಇಲ್ಲಿ ವಿಡಂಬನೆಯಿದೆ, ಧರ್ಮಗಳ ಲೇವಡಿಯಿದೆ ಅಂತ ವಸ್ತುನಿಷ್ಟವಾಗಿ .. ಹೀಗೆ ನೂರಾರು ತರದಲ್ಲಿ ಗುಣಾವಗುಣಗಳ ಪಟ್ಟಿ ಮಾಡಬಹುದು. ಆದ್ರೆ ಅನೇಕ ಕಡೆ ಇವೆಲ್ಲವನ್ನೂ ಮೀರಿದ ಹಲವು ಗಂಭೀರ ಪ್ರಶ್ನೆಗಳಿವೆ.ಸುಮ್ನೇ ಒಂದು ಉದಾಹರಣೆ ಅನ್ನೋದಾದ್ರೆ..ಮನುಷ್ಯನೊಬ್ಬ ನಂಬಿಕೆಯನ್ನೇ ಕಳೆದುಕೊಂಡ್ರೆ ನೇಣು ಹಾಕಿಕೊಳ್ತಾನೆ.ನಾಡಿ ಕಡಿದುಕೊಂಡು ರಕ್ತ ಸೋರಿ ಸಾಯ್ತಾನೆ ಇಲ್ಲ ಇನ್ನೇನು ಮಾಡ್ಕೊಂಡು ಜೀವ ಕಳೆದುಕೊಳ್ತಾನೆ. ಒಂದು ತಿಲಕದಿಂದ, ಒಂದು ನಮಸ್ಕಾರದಿಂದ ಅವನಿಗೊಂದು ಭರವಸೆ ಸಿಗುತ್ತೆ ಅಂದ್ರೆ ಅದನ್ನು ತಪ್ಪಿಸೋಕೆ ನೀನ್ಯಾರು ? ಈಗ ಇರೋ ದೇವರನ್ನೆಲ್ಲಾ ಅಳಿಸಿಯೇ ಬಿಟ್ಟೆ ಅಂದ್ರೆ ಅದ್ರ ಬದ್ಲು ಏನು ಕೊಡ್ತೀಯ ನೀನು ? ಅಂತಾನೊಬ್ಬ ಸ್ವಾಮೀಜಿ. ಸ್ವಾಭಾವಿಕವಾಗೇ ನಾಸ್ತಿಕವಾದಿಗೆ ಆಸ್ತಿಕನೊಬ್ಬ ಕೇಳುವ ಪ್ರಶ್ನೆಯೇ ಇದು. ದೇವರನ್ನು ನಂಬುತ್ತೀನಿ. ನಮ್ಮೆಲ್ಲರನ್ನು ನಿರ್ಮಿಸಿರುವ ಆ ಒಬ್ಬ ದೇವರನ್ನು ನಂಬುತ್ತೀನಿ. ನೀವು ಸೃಷ್ಟಿಸಿರುವ ನೂರಾರು ಡೂಪ್ಲಿಕೇಟ್ ದೇವರುಗಳನ್ನಲ್ಲ. ಜನರಿಗೆ ಮೋಸ ಮಾಡುತ್ತಿರೋ ರಾಂಗ್ ನಂಬರ್ಗಳನ್ನಲ್ಲ ಅಂತಾನೆ- ಪಿ.ಕೆ ! ಡೈರೆಕ್ಟರ್ ಆಸ್ತಿಕನಾಗಿದ್ರೆ ಚಿತ್ರವನ್ನು ಮೊದಲ ಪ್ರಶ್ನೆಯಲ್ಲೇ ಮುಗಿಸಬಹುದಿತ್ತು. ಪಕ್ಕಾ ನಾಸ್ತಿಕನಾಗಿದ್ರೆ ಎರಡನೇ ಉತ್ತರದಲ್ಲೂ ಮುಗಿಸಬಹುದಿತ್ತು. ಆದ್ರೆ ಅಲ್ಲೆಲ್ಲೂ ನಿಲ್ಲದೇ ಚಿತ್ರ ಮುಂದುವರಿಯುತ್ತೆ :-)

ಇಷ್ಟೆಂದ ಮಾತ್ರಕ್ಕೆ ಅಮೀರರ ಕಟ್ಟಾ ಅಭಿಮಾನಿಯಲ್ಲ ನಾನು. ಮಾಡಿದ್ದೆಲ್ಲಾ ಸರಿಯೆನ್ನುವವನೂ ಅಲ್ಲ. ಕೆಲವರಿಗೆ ಪಾತ್ರವೊಂದರ ಮಾತುಗಳ ಅದನ್ನು ಮಾಡಿದವನ ನಿಜಜೀವನಕ್ಕೆ ತುಲನೆ ಮಾಡಿ ನೋಡುವುದು ಕಷ್ಟವಾಗ್ತಿದ್ರೆ ಅವನ ಜಾಗದಲ್ಲಿ ಓ ಮೈಗಾಡ್ ಚಿತ್ರದಲ್ಲಿ ಅಕ್ಷಯ್ ಮಾಡಿದಂತಹ ಜಾಗೃತಿ ಮೂಡಿಸೋ ಪಾತ್ರ ಇದು ಅಂತ ಕಲ್ಪಿಸಿ. ನಿನ್ನ ಕಷ್ಟಗಳ ಪರಿಹರಿಸೋದು ದೇವರಿಂದ ಮಾತ್ರ ಸಾಧ್ಯ ಅಂತ ಹೇಳಿದ್ದನ್ನು ನಂಬುವ ಮನುಷ್ಯ ಅಂತ ಅಷ್ಟೇ ಕಲ್ಪಿಸಿ. ಅಥವಾ ಏನೂ ಕಲ್ಪಿಸಿಕೊಳ್ಳದೆಯೇ ನೋಡಿದ್ರೆ ಮನಸ್ಸಿಗೊಂದು ಮುದ ಕೊಡುವ ಸಿನಿಮಾ ಅಂತಷ್ಟೇ ಹೇಳಬಯಸ್ತೀನಿ. ದೇವರಿಗೆ ಸರಿಯಾದ ನಂಬರ್ ಕನೆಕ್ಟ್ ಆಗಿದ್ರೆ ಏನು ಹೇಳ್ತಿದ್ದ ಅಂತನ್ನೋ ಪ್ರಶ್ನೆಗೆ ನನಗೆ ಹಾಲೆರೆಯೋ ಬದಲು ಹೊಟ್ಟೆಗೆ ಹಿಟ್ಟಿಲ್ಲದೇ ಮಲಗಿರೋ ನನ್ನ ಕೋಟ್ಯಾಂತರ ಮಕ್ಕಳಿಗೆ ಈ ಹಾಲು ಕುಡಿಸೋ ಅಂತಿದ್ದನೇನೋ ಅನ್ನುವಂತಹ ಉತ್ತರಗಳು ಪೂರ್ವಾಗ್ರಹಪೀಡಿತರಾಗಿಲ್ಲದ ಯಾರಾದರೂ ಒಪ್ಪುವುದೇ. ಮಂದಿರಕ್ಕೆ ಹೋಗಿ ಪೂಜೆ ಮಾಡುವವನಿಗೆ ಸಿಕ್ಕ ಸಲಹೆಯಂತೆ ಆರತಿ ತಗೊಂಡು ಚರ್ಚಿಗೆ ಹೋಗುತ್ತಾನೆ. ಮದ್ಯ ತಗೊಂಡು ಮಸೀದಿಗೂ ಹೋಗೋ ಪ್ರಯತ್ನ ಮಾಡುತ್ತಾನೆ. ಎಲ್ಲೆಡೆ ಹೊಡೆತ ತಿನ್ನೋ ಪ್ರಸಂಗಗಳು ಕೆಲವರಿಗೆ ಹಾಸ್ಯ ಅನಿಸಿದ್ರೆ ಕೆಲವರಿಗೆ ಅವಮಾನ ಅನಿಸಿದ್ರೆ ಇನ್ನುಳಿದವರಿಗೆ ಯಾರನ್ನೂ ಬಿಡದೆ ಎಲ್ಲವನ್ನೂ ವಿಡಂಬಿಸುವ ಭಾವ ಅನಿಸಲೂಬಹುದು. 

ಇನ್ನು ಜಾಸ್ತಿ ಹೇಳೋಕೆ ಹೋದ್ರೆ ಚಿತ್ರದ ಕತೆಯನ್ನೇ ಹೇಳಿಮುಗಿಸಿಬಿಟ್ಟೇನೇನೋ. ಅದು ಚಿತ್ರಕ್ಕೆ ಹೋಗಬಯಸುವ ಅನೇಕರ ಉತ್ಸಾಹಕ್ಕೆ ತಣ್ನೀರೆರಚೋ ಕೆಲಸವಾದ್ದರಿಂದ ಅದ ಮಾಡದೇ ಚಿತ್ರದ ಬಗ್ಗೆ ಒಂದಿಷ್ಟು ಕುತೂಹಲ ಕೆರಳಿಸೋ ಕೆಲಸವನ್ನಷ್ಟೇ ಮಾಡಿ ಸುಮ್ಮನಾಗುತ್ತೀನಿ.ಇನ್ನೊಂದು ಮಾತು. ಚಿತ್ರದ ಕೆಲವು ಸ್ಟಿಲ್ಗಳನ್ನು ನೋಡಿ ಚಿತ್ರದಲ್ಲಿ ಒಬ್ಬ ಸಂಗೀತಗಾರ, ಅನ್ಯಗ್ರಹವಾಸಿ, ಬಟ್ಟೆಯಿಲ್ಲದೇ ಓಡಾಡುವವ, ರಾಜಸ್ತಾನಿ, ಪೋಲೀಸ್, ಧರ್ಮದ್ವೇಷಿ ಹೀಗೆ ಹಲವು ಪಾತ್ರಗಳಲ್ಲಿ ಒಂದೆಂದು ಕಲ್ಪಿಸಿಕೊಳ್ಳಬಹುದು. ಆದ್ರೆ ನಾಯಕನ ನಿಜವಾದ ಉದ್ದೇಶ ಏನಾಗಿತ್ತು, ಏನಾಯ್ತು ಅನ್ನುವುದನ್ನ ಅರ್ಥ ಮಾಡಿಕೊಳ್ಳೋಕೆ, ಪದೇ ಪದೇ ಬರೋ ರಾಂಗ್ ನಂಬರ್ ಅನ್ನೋದ್ರ ನಿಜವಾದ ಅರ್ಥ ಅರಿಯೋಕೆ ಚಿತ್ರವನ್ನೇ ನೋಡ್ಬೇಕು. ಅಂದಾಗೆ ಅನುಷ್ಕ ಶರ್ಮಾ, ಸುಷಾಂತ್ ಸಿಂಗ್ ರಜಪೂತ್, ಬೊಮಾನ್ ಇರಾನಿ,ಸಂಜಯ ದತ್ ಸೌರಭ್ ಶುಕ್ಲ, ಕೊನೆಯಲ್ಲಿ ಬರೋ ರಣಬೀರ್ ಕಪೂರರ ಅಭಿನಯ ಸವಿಯೋದ ಮರಿಬೇಡಿ.

6 comments:

  1. ಕುತೂಹಲದ ಬಟ್ಟೆಯನ್ನು ತೊಡಿಸಿಯೇ ಚಿತ್ರದ ತುಸು ಪುಟ್ಟ ಪುಟ್ಟ ವಿಚಾರಗಳನ್ನು ಹರಡಿದ್ದೀರಾ.. ಚಿತ್ರವನ್ನು ನೋಡಲು ಪ್ರೇರೇಪಿಸುವ ವಿವರಣೆ..
    ಸೊಗಸಾಗಿದೆ ನಿಮ್ಮ ಹೆಸರನ್ನೇ ಇದಕ್ಕೆ ಕೊಡಬಹುದು

    ReplyDelete
  2. ನಾನು ನೋಡಲೇ ಬೇಕಾದ ಚಿತ್ರದ ರಿವ್ಯೂ ಚೆನ್ನಾಗಿ ಬರೆದಿದ್ದೀರ.

    ReplyDelete
  3. ಪಿ.ಕೆ. ಬಗ್ಗೆ ಚಿಕ್ಕದಾಗಿ, ಚೊಕ್ಕವಾಗಿ ನೋಡಲು ಪ್ರೇರೇಪಿಸುವ೦ತೆ ಬರೆದಿದ್ದೀರಿ! ಈ ದಿನ ನೋಡಲು ಹೊರಟಿದ್ದೇವೆ.

    ReplyDelete
  4. ಧನ್ಯವಾದಗಳು ಬದ್ರಿ ಬಾಯ್, ಶ್ರೀಕಾಂತಣ್ಣ.
    ಧನ್ಯವಾದಗಳು ಪ್ರಭಾಮಣಿ ಅವ್ರೆ. ಬಂದ ಮೇಲೆ ಹೇಗಿತ್ತು ಅಂತ ತಿಳಿಸಿ :-)

    ReplyDelete
  5. ಹಿಂದೂ ವಿರೋಧಿ ಸಿನಿಮಾ ಅಂತ ಕೇಳಿದ್ದೆ. ಅಲ್ಲ!! ನಿಜವಾಗಲು ಅರ್ಥಪೂರ್ಣ ಚಿತ್ರ. ಹುಟ್ಟುವ ಪ್ರಶ್ನೆಗೆ ಉತ್ತರ ಹುಡುಕೋಣ ಆಕ್ರೋಶವಲ್ಲ.
    godman ಗಳು ಜಾಸ್ತಿ ಆಗಿರೋ ಈ ಕಾಲಕ್ಕೆ ಒಳ್ಳೆ ಉತ್ತರ. "ಒಹ್ ಮೈ ಗಾಡ್" ಸಿನಿಮಾದ ಅನುಕರಣೆ ಅನ್ನಿಸೋತೆ ಕೆಲುವೊಮ್ಮೆ.
    The person who claims he saw god or he is a godman, just run away from him.

    ReplyDelete