Showing posts with label ಕವನ. Show all posts
Showing posts with label ಕವನ. Show all posts

Monday, September 16, 2019

ಪ್ರೀತಿಯೆಂಬ ಹಾಯಿದೋಣಿ

ಬೆಳದಿಂಗಳ ಇರುಳಿನಲ್ಲಿ ಶಶಿಗೆದುರಿರೋ ಮೋಡದಂತೆ
ಸುಖನಿದ್ರೆಯ ರಾತ್ರಿಯಲ್ಲಿ ಬೆವರಿಳಿಸೋ ಕನಸಿನಂತೆ
ನನ್ನೊಲುಮೆಯ ಬಾಳಿನಲ್ಲಿ ಬೇಸರಿಸೋ ಕ್ಷಣಗಳಂತೆ
ಸುಖವೆಂಬೋ ದಿಂಬಿನಲ್ಲಿ ಚುಚ್ಚೋ ನಾರು ನಿನ್ನೆಯಂತೆ
ಒಲುಮೆಯಿರುವ ಬದುಕಿನಲ್ಲಿ ಹುಳಿ ಹಿಂಡೋ ಅಹಮಿನಂತೆ
ನಮ್ಮ ನಗುವ ಇಂದಿನಲ್ಲಿ ಅಳುವಿರದಿರಲೆನ್ನೆ ಪ್ರಿಯೆ
ನಂಬುಗೆಯೇ ಜೀವನವು ಎನುತ ಬಾಳಲೆನ್ನ ಪ್ರಿಯೆ|೧

ಬಾಳ ದೋಣಿ ದಡವ ಬಿಟ್ಟು ಹಾದಿ ಹುಡುಕಿ ಸಾಗಲು
ಅನುದಿನವೂ ಹಲವು ಕಷ್ಟದಲೆಗಳಿದರ ನೂಕಲು
ಪ್ರೀತಿಯೊಲುಮೆ ಹರಿಗೋಲಲೆ ದೋಣಿ ಮುಂದೆ ಸಾಗಿದೆ
ಸಿಟ್ಟ ಸಿಡುಕು, ದುಡುಕ ಒಡಕು ಮೂಡದಂತೆ ಕಾದಿದೆ.
ಅನುಮಾನದ ಸಣ್ಣ ರಂಧ್ರ ಸಾಕು ದೋಣಿ ಮುಳುಗಲು
ನಂಬಿಕೆಗಳ ಗೋಂದೆ ಸಾಕು ದೋಣಿ ಭದ್ರ ಪಡಿಸಲು.
ನೀ ಜೊತೆಗಿರೆ ಭಯವು ಏಕೆ ಎದುರು ಬರುವ ಬಂಡೆಗೆ
ಪ್ರೀತಿ ಚಿಲುಮೆ ಜಿನುಗುತಿರಲು ಕಾಡೋ ಅಹಮ ಬೆಂಕಿಗೆ|೨

ಎಷ್ಟು ಬೇಡವೆಂದರೂನೂ ಕಾಣೋ ಚೌತಿ ಚಂದಿರ
ಮನದೆನ್ನೆಯ ಮೊಗಕೆ ನಾಚಿ ಮೋಡ ಹುಡುಕಿ ಅಡಗಿದೆ.
ಎದುರಾಗೋ ಕಠಿಣ ಹಾದಿ ಸುಲಭವೆನಿಸಿ ಬಾಳಲಿ
ಬಾಳಬೆಳಕು ಜೊತೆಯಾಗಲು ಕಾರಿರುಳೂ ಕಳೆದಿದೆ.
ಹರಿವ ನದಿಯ ಕಾಲದಾಟ ದಾಟಿ ಮುಂದೆ ಸಾಗುತ
ಸಿಡಿಲು, ಗುಡುಗು , ಮಳೆ ಕಾಟವ ಸಹಿಸಿ ಇಂದು ಕಳೆಯುತ
ಸಾಗುತಿಹುದು ಬಾಳ ದೋಣಿ ಕನಸ ಕಡಲನರೆಸುತ
ಬದುಕೆಂಬೋ ಪಯಣದಲ್ಲಿ ಹೊಸತು ಹೊಸತ ಅರಸುತ|೩

Tuesday, August 15, 2017

ಸ್ವತಂತ್ರ ಭಾರತ

ನಲವತ್ತೇಳರ ನಡುರಾತ್ರಿಯಲ್ಲಿ, ನೋವು ನಲಿವುಗಳ ಸಾಂಗತ್ಯದಲ್ಲಿ
ದೊರಕಿತ್ತೆಮಗೆ ಸ್ವಾತಂತ್ರ್ಯ, ಕೊನೆಗು ದೂರಾಯ್ತು ಪರತಂತ್ರ
ದೇಶ ಹೋಳಾದ ನೋವಿನಲ್ಲಿಯೂ, ಆಂಗ್ಲ ದಾಸ್ಯ ಕೊನೆಗೊಳ್ಳುವಂತಿರೆ
ಖುಷಿಯನಿತ್ತಿತ್ತು ಸ್ವಾತಂತ್ರ್ಯ. ನೂರು ನಿರೀಕ್ಷೆಯ ಗಣತಂತ್ರ|೧

ಎಪ್ಪತ್ತಾದರೂ ಸ್ವಾತಂತ್ರ್ಯಕ್ಕೆ ಅಂದಿನಾಸೆಗಳು ನಿಜವಾಯ್ತೆ ?
ನೀರ ಮೇಲಿನ ಗುಳ್ಳೆಗಳಂತೆ ಕನಸ ಮೂಟೆಗಳು ಒಡೆದೋಯ್ತೆ ?
ದಿನ ಬೆಳಗಾದರೆ ಹೊಸ ಹೊಸ ಗುರಿಗಳು ಸೇರ್ಪಡೆಯಾಗಿವೆ ಭಾರತಿಗೆ
ಸುನಾಮಿಯೆದ್ದರು ಶುಚಿಯಾಗದಷ್ಟು ಕಳಂಕವಂಟಿದೆ ಭಾರತಿಗೆ ! |೨

ಜಾತಿ, ಮತ, ಪಂಥ, ಭಾಷೆಗಳೆಂದು ದಿನವು ಗೋಳಿಡೋ ನಾಡು ಇದು
ನೀರು, ನೆಲಕೆಂದು ಪಕ್ಕದವನಿಗೇ ಬೆಂಕಿಯುಗುಳುವಾ ಬೀಡು ಇದು|
ನಲವತ್ತೇಳರ ನಡುರಾತ್ರಿಯಲ್ಲಿ ದಕ್ಕಿತ್ತೇನೋ ಸ್ವಾತಂತ್ರ್ಯ ?
ನಮ್ಮ ಸಂಕುಚಿತ ಭಾವಗಳಿಂದಲೆ ಇದ್ದೂ ಸತ್ತಿತೆ ಸ್ವಾತಂತ್ರ್ಯ ? |೩

ಜನರ ಜಗಳದಲಿ ವೋಟ ನೋಡುವ ರಾಜಕೀಯದ ತಂತ್ರಗಳು
ಹೊಡೆಬಡಿಯೆಂಬ ಮಾತುಗಳಿಂದಲೆ ಮನೆಯ ಕಟ್ಟುವ ಮನಸುಗಳು |
ಬೇರೆ ದೇಶದ ವಸ್ತು, ತಿಂಡಿಗೆ ದಾಸರಾಗಿರೋ ದೇಹಗಳು
ದಿನವೂ ಕುಸಿಯೋ ರುಪಾಯಿ ಕೇಳಿದೆ ದೊರಕೀತೆಂದಿಗೆ ಸ್ವಾತಂತ್ರ್ಯ }೪

ಗಂಜಿಯುಂಡುರೂ ಸಾಲ ಬೇಡೆನೆಂಬೋ ಸ್ವಾಭಿಮಾನವು ಎನಗೆ
ದೇಹಿಯೆಂದವಗೆ ನಾಸ್ತಿಯೆನ್ನದಿಹ ಸಂಪ್ರದಾಯಗಳ ನಡೆಸಿಹಗೆ
ಯಾರೇ ಬಂದರೂ ಆಶ್ರಯವೀಯೋ ತಾಕತ್ತಿತ್ತಿದೆ ಸ್ವಾತಂತ್ರ್ಯ
ದೇಶರಕ್ಷಣೆಯ ಮಾತು ಬಂದರೆ ನಮ್ಮ ಒಗ್ಗಟ್ಟೆ ಸ್ವಾತಂತ್ರ್ಯ |೫

ದುಡಿದ ಹತ್ತರಲಿ ದೇಶಕ್ಕೆಷ್ಟಾದರೂ ಕೊಟ್ಟೆನೆಂಬೋ ಬಯಕೆ
ಅವ್ಯವಸ್ಥೆಗಳ ಇಂದಿನಲ್ಲಿಯೂ, ಭವ್ಯ ನಾಳೆಗಳ ಕನವರಿಕೆ
ಮುನಿದ ಮನಸುಗಳ ಮತ್ತೆ ಬೆಸೆಯುವ ಒಂದು ದೇಶವೆಂಬೋ ಮನಕೆ
ಮುತ್ತನಿತ್ತಿದೆ ದಿವ್ಯ ಭಾರತಿಯ ಮನೋ ವೈಶಾಲ್ಯ ಸ್ವಾತಂತ್ರ್ಯ |೬

ಅಂಧಾನುಕರಣೆ ಕೊನೆಯಾಗೋ ದಿನವೆ ನಮಗೆ ದಕ್ಕಲಿದೆ ಸ್ವಾತಂತ್ರ್ಯ
ಅನ್ಯದೇಶೀಯ ವಸ್ತುಗಳ ದಾಸ್ಯ ಮುಗಿವ ದಿನವದೇ ಸ್ವಾತಂತ್ರ್ಯ|
ನೆರೆಹೊರಯವಗೆ ಬೆಂಕಿಯ ಬದಲು ಬದುಕನೀಯುವುದು ಸ್ವಾತಂತ್ರ್ಯ
ದ್ವೇಷ ತಣಿಸುವ, ದೇಶ ಕಟ್ಟುವ ಕೆಲಸ ನಡೆಸುವುದೆ ಸ್ವಾತಂತ್ಯ|೭

ಬರುವ ನಾಳೆಯಲಿ ತಾಯಿ ಭಾರತಿಯ ಋಣವ ತೀರಿಸೋ ಕನಸುಗಳು
ಸ್ವಂತ ಮನದಂತೆ ಸುತ್ತ ಪರಿಸರ, ದೇಶ ಶುಚಿಗೊಳಿಸೊ ಬಯಕೆಗಳು|
ಬುದ್ಧಿಮತ್ತೆಗೆ ಸಾಟಿಯಿಲ್ಲದ , ಸವಾಲಿಗಂಜದ ಮನಸುಗಳು
ತಮ್ಮ ಕ್ಷೇತ್ರದಲೆ ತೊಡಕಿಲ್ಲದಂತೆ ತೊಡಗಿಕೊಳ್ಳುವುದೆ ಸ್ವಾತಂತ್ರ್ಯ |೮

ಚಂದ್ರನಾಯಿತು, ಮಂಗಳನಾಯ್ತು, ಲಕ್ಷ ರೂಪಾಯಿಗೆ ಕಾರಾಯ್ತು
ಭಾರತೀಯರಿಗೆ ಅಸಾಧ್ಯವೆನ್ನೋ ಮಾತೇ ಎಂದೋ ದೂರಾಯ್ತು|
ಕುಂಟುತ್ತಾದರು ಮುಂದೆ ಸಾಗಿತು ತೊಂಭತ್ತರಲ್ಲಿ ಆರ್ಥಿಕತೆ,
ಧೃಡ ನಿರ್ಧಾರದ ಸ್ವಾತಂತ್ರ್ಯಕ್ಕೆ ದಿವಾಳಿಯಂಚಲಿ ಪಾರಾಯ್ತು |೯

ಆಪಾಯವಿರುವುದು ಪಾಕಿಗಳಿಂದ, ಕುತಂತ್ರಿ ಚೀನಾದಿಂದಲ್ಲ
ನಮ್ಮೊಳಗಿರುವ ಶಕುನಿಗಳಿಂದ, ಲೂಟಿಕೋರರ ಮನಸಿಂದ.
ಉದ್ದಾರವಾಗೋ ಮನಸಿದ್ದವಗೆ ಹಲವು ದಾರಿಗಳು ಉಂಟಿಲ್ಲಿ
ಸ್ವಾತಂತ್ರ್ಯವೆಂಬೋ ಶಬ್ದವೆ ಸಾಕು , ಅದರ ಲಾಭಗಳು ಹಲವಿಲ್ಲಿ |೧೦

ತಮ್ಮೆಲ್ಲವನ್ನು ನಮ್ಮಿಂದಿಗೆಂದು ತ್ಯಾಗವಿತ್ತವರ ನೆನೆಯೋಣ
ಸಿಕ್ಕ ಸ್ವಾತಂತ್ರ್ಯ ಹಾಳು ಮಾಡದೇ ದೇಶದುನ್ನತಿಗೆ ಶ್ರಮಿಸೋಣ|
ಹೆಣ್ಣು ಗಂಡೆಂಬ ಬೇಧವಿಲ್ಲದೆ ಎಲ್ಲರು ಸಮಾನರೆನ್ನೋಣ
ಬಡತನ, ಮೌಢ್ಯಗಳೆಂಬೋ ಸಮಸ್ಯೆ ಹುಡುಕುತ ಅದ ಬಗೆಹರಿಸೋಣ|೧೧


ಅನುದಿನವುದಯಿಸೊ ಸೂರ್ಯನು ನಮಗೆ ನಮ್ಮ ಗುರಿಗಳ ನೆನಪಿಸಲಿ
ತಾಯಿ ಭಾರತಿಯ ಮುಖದಲಿ ಎಂದೂ ಸ್ವಾತಂತ್ರ್ಯದ ನಗು, ಕಳೆಯಿರಲಿ |
ನಾವು ನಮ್ಮತನ ಉಳಿಸಿಕೊಳ್ಳುವುದೆ ನಮಗೆ ದಕ್ಕಿದ ಸ್ವಾತಂತ್ರ್ಯ
ಭಾರತವಾಸಿಯ ಮೊಗದಲಿ ಮಿನುಗೋ ನಗುವೇ ನಮ್ಮಯ ಸ್ವಾತಂತ್ರ್ಯ|೧೨

Wednesday, November 30, 2016

ಸಲಿಲಕ್ಕೊಂದು ಸಾಲು

ಕಪಿಲ ಮುನಿಯ ಶಾಪದಿಂದ ದಹಿಸಿದಂತ ಸಗರರನ್ನು
ಉದ್ದರಿಸಲು ಬೇಕಾದಳು ದೇವನದಿ ಮಂದಾಕಿನಿ
ಭಗೀರಥನ ಛಲಕೆ ಮೆಚ್ಚಿ ಧರೆಗೆ ಧುಮುಕೊ ಗಂಗೆಯನ್ನು
ಕೊಚ್ಚದಂತೆ ತಡೆಯಲಂದು ಮುಂದೆ ಬಂದ ಫಾಲಾಕ್ಷನೆ|1
 
ತ್ರಿನೇತ್ರನ ಜಟೆಗಳಿಂದ ಧುಮ್ಮಿಕ್ಕಿದ ತಾಯೆ
ಜಹ್ನು ಮುನಿಯ ಕಿವಿಗಳಿಂದ ಹೊರಹೊಮ್ಮಿದ ಮಾಯೆ
ಯಮುನೆ, ಕೋಸಿ, ಗೋಮ್ತಿಯಾಗಿ
ಗಂಡಕಿ, ಗಂಗಾರೆಯಾಗಿ
ಮೋಕ್ಷವೀಯೋ ಕಾಶಿಯಾಗಿ
ಧಾಮ ವಾರಣಾಸಿಯಾಗಿ
ಹರಪ್ಪಾ-ಮೊಹೆಂಜೊದಾರೋ ಬೆಳೆಸಿ ನಿಂತ ತಾಯೆ
ಭರತಖಂಡ ಬೆಳೆಯಲೆಂದು ಹರಸುತ್ತಿಹ ತಾಯೆ|2

ಹರಸೆಲೆಮ್ಮ ವರದೆಯಾದೆ
ಕುಡಿಯಲೆಂದೆ ತುಂಗೆಯಾದೆ
ಬೆಳಕೀಯಲು ಶರಾವತಿ, ಭತ್ತಕೆಂದು ಗಂಗಾವತಿ
ಅರ್ಕಾವತಿ,ನೇತ್ರಾವತಿ,ವೇದಾವತಿ, ಹೇಮಾವತಿ,
ಭದ್ರೆ,ಕೃಷ್ಣೆ, ಕಾವೇರಿಯು
ಮಲಪ್ರಭಾ, ಕಾಳಿ ನೀನು
ಮಹದಾಯಿಯ ಮಡಿಲಿನಲ್ಲಿ, ಮಲಪ್ರಭೆಯ ನೆನಪಿನಲ್ಲಿ
ಅಸಂಖ್ಯಾತ ಕೊಳ್ಳದಲ್ಲಿ, ಹೆಸರಿಲ್ಲದ ಹಳ್ಳದಲ್ಲಿ
ಹರಿಯುತಿರುವ ಜೀವ ತೊರೆಯೆ, ಜೀವಸೆಲೆಯೆ ತಾಯೆ|3

ಬರ ಬಂದಿದೆ ನಾಡಿಗಿಂದು, ನಿನಗೆಂದೇ ಜಗಳವಿಂದು
ಒಣಗುತ್ತಿವೆ ನೀರಿಲ್ಲದೆ ಎಲ್ಲೆಡೆಯೂ ಫಸಲು
ಬತ್ತುತಿರುವ ಹೊಳೆಗಳೆಲ್ಲ, ಒಣಗುತಿರುವ ಕೆರೆಗಳೆಲ್ಲ
ತುಂಬಿ ಉಕ್ಕಿ ಹರಿದರೇನೆ ನಮಗೆ ಹರಷದೊನಲು|4


ಕೊರಗುತಿಹುದು ಬಾಗೀನವು ಒಣಗಿದೆಲ್ಲ ನದಿಯ ಕಂಡು
ಮೀನಿಲ್ಲದೆ, ನೀರಿಲ್ಲದೆ ಸಾಯುತಿಹುದು ಖಗದ ಹಿಂಡು
ಜಲಾಶಯವೆ ನೀರಿಲ್ಲದೆ ಬತ್ತಾಗಿದೆ ಕ್ರೀಡಾಂಗಣ
ನೀರಿಲ್ಲದೆ ಸತ್ತು ಪ್ರಾಣಿ, ಕಾಡೆಲ್ಲವೂ ಬಣ ಬಣ|5

ಬರವೆಂಬುವ ಕೊಡಲಿಯಿಂದ ಕೊಲ್ಲದಿರೇ ತಾಯೇ
ನಮ್ಮಿಂದಲೇ ಜಗವು ಎಂಬ ಭ್ರಾಂತಿ ಪೊರೆಯ ಹರಿಯೆ
ಕೋಪ ಮರೆತು, ಕರುಣೆ ತೋರೆ, ಜೀವವೀಯೊ ತಾಯೆ
ನೀನೇ ನಮಗೆಲ್ಲಾ ಇಂದು. ತುಂಬಿ ಹರಿಯೆ ತೊರೆಯೇ|6
ತುಂಬಿ ಹರಿವ ಕೊಳ್ಳಕಿಂದು ಬಾಗೀನದ ಸ್ಪರ್ಷ
ಒಳ್ಳೆ ಬೆಳೆಯು ಕೈಗೆ ಬಂದು ಬೆಳೆದವನಿಗೆ ಹರ್ಷ
ಹೀಗೇ ಇರಲಿ ಎಂದೆದಿಗೂ ತಾಯೆ ನಿನ್ನ ಕರುಣೆ
ನಮ್ಮಿಂದಿಗೆ, ನಾಳೆಗಳಿಗೆ ಬಾರದಿರಲಿ ಬವಣೆ |7


ಈ ಕವನವನ್ನು ನವೆಂಬರ್ ೨೬ರಂದು ನಡೆದ 3k ರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟಿದ್ದು, ಅಭಿನಂದನಾ ಪತ್ರವನ್ನು ಪಡೆದಿದೆ

Sunday, March 20, 2016

ಧಗೆ

ಬದಲಾಗದ ಬಿಸಿಗಾಳಿ, ಫ್ಯಾನ ಕಿವಿ ಹಿಂಡಿದ್ದಷ್ಟೇ ಬಂತು
ಬಳಿಬಾರದ ತಂಪ ನಗು,ಘಳಿಗೆಗಳ ಗಣಿತ ಮರೆತದ್ದೊಂದೇ ಬಂತು
ತಾತ್ಕಾಲಿಕ ಸಾಂತ್ವನಕ್ಕೂ ಬಾರದ ಪ್ರೀತಿ ಮಳೆಗೆ ಹಾಕಿದ್ದೆಷ್ಟೋ ಶಾಪ
ನೀರೆರೆಯದೇ ಹೋದ ಮೋಡಕ್ಕೆ ಮರುಗಿದ್ದೊಂದೇ ಬಂತು |೧

ಎದುರ ದೇಗುಲದಲ್ಲಿ ಕಂಡಂತೆ ಹೆತ್ತಾಕೆ
ಅತಿಮಧುರ ನೆನಪುಗಳ, ಸಂತೋಷ ಕೊಟ್ಟಾಕೆ
ದೂರದೆಲ್ಲೋ ನನ್ನ ನೆನೆಯುವಂತೆ
ಕಾಡೋ ಕಣ್ಣೀರೆಲ್ಲ ಫೋನಾಚೆ ಮರೆತಾಕೆ
ನೋವ ದೀಪದ ಬುಡದ ಕತ್ತಲಂತೆ |೨

ಹುಟ್ಟೂರ ಕರೆಘಂಟೆ ಹುಡುಕೆನ್ನ ಬಂದಿಹುದೆ
ದೇಗುಲದ ಚಾವಣಿಯ ಘಂಟೆಯಂತೆ ?
ಅರ್ಚನೆಯು ನೆಮ್ಮದಿಯ ತಂದಿಲ್ಲವಿಂದೆನಗೆ
ಕಾಡುತಿರೆ ಹೆತ್ತಾಕೆ ಬಗೆಯ ಚಿಂತೆ |೩

ದೂರವಾಗಿಹುದಿಲ್ಲಿ ನಾಡಲ್ಲ ಮನಸುಗಳು
ಹೊಟ್ಟೆಪಾಡಿನ ನೆವದಿ ಬೆಳೆದು ಸ್ವಾರ್ಥ
ಬೇರೆಯಾಗಲು ಹೊರಟ ಮಕ್ಕಳಿಗೆ ಮನೆಯಲ್ಲ
ಬೇಡವಾಗಿದ್ದಿಲ್ಲಿ ಸಲಹೊ ತರ್ಕ |೪

ನನ್ನ ಓದಿಸಲೆಂದೆ ಹೊತ್ತೂಟ ಬಿಟ್ಟವರ
ನೆನಪು ಮರುಕಳಿಸುತಿದೆ ಅನ್ನದಗುಳೂ
ತಂದೆ ತಾಯಿಯ ನಿದ್ದೆ ಕಸಿದ ದಿನಗಳು ಎಷ್ಟೊ
ಎಂಬ ಕೊರಗೇ ಇಂದು ಸುಡುವ ಬಿಸಿಲು|೫

ಹೆತ್ತ ತಾಯಿಯ ಬಳಿಯ ಬೀಸಣಿಕೆ ಸಾಕೆನಗೆ
ದೂರದೂರಿನ ಕೊಲ್ಲೊ ಏಸಿಗಿಂತ
ಅನಿಸಿದೊಡನೇ ಹೊರಟ ಕೆಲಸಕ್ಕೆ ರಜೆ ಜಡಿದು
ವೃದ್ಧ ತಂದೆಯ ನೆರವು ವಾಸಿಯಂತ|೬

Thursday, February 25, 2016

ಕನ್ನಡಿ ಕೆರೆಯ ಕರೆ

ಕನ್ನಡಿಯ ಕೆರೆಯಲ್ಲಿ ತನ್ನ ಕಾಣುವ ಬಯಕೆ
ಚಂದಿರನ ಪ್ರತಿರಾತ್ರಿ ಸೆಳೆಯತಿತ್ತು
ತಾನೆ ಸುಂದರನೆಂಬ ಶಶಿಯ ಹಮ್ಮನುದಿನವು
ಹೆಚ್ಚಿಸೋ ಪ್ರತಿಫಲಕ ಹೊಳೆಯುತಿತ್ತು|೧

ಕೆರೆಯ ಬಿಂಬದಿ ತನ್ನ ತಲೆಯ ಬಾಚುವ ಸೂರ್ಯ
ಮನೆಯ ಕರೆಗೋಗೊಡುವ ಕೆರೆಯ ದಡದಿ
ಹಕ್ಕಿಗಳಿಗಾಹಾರವಾಗೋ ಮೀನಿನ ತವರು
ಇಲ್ಲಿ ಒಸರೋ ನೀರೆ ಊರಿನುಸಿರು|೨

ಕಾಲ ಕಳೆದಂತಿಂದು ಶಶಿಯು ಬೇಸತ್ತಿಹನು
ಒರೆಸೊರೆಸಿ ಕೊಳೆಯಾದ ತನ್ನ ಮೊಗವ
ಕೊಳೆಯಾದ್ದು ಕೆರೆಯೆಂದು ತಿಳಿದೀತು ಹೇಗವಗೆ
ಹಗಲೆಲ್ಲ ವಿಷವುಣಿಸೊ ಜನರ ಬಗೆಗೆ|೩

ಬರಿಯ ನೊರೆಯಿಹುದಿಲ್ಲಿ, ಉಪಯೋಗವಿಲ್ಲ ಕೆರೆ
ಎಂದು ಜರಿಯೋ ಜನರೇ ಸುತ್ತಲೆಲ್ಲ
ಬುರುಗ ಹಿಂದಿನ ವಿಷವ ಸರಿಮಾಡಲೊಂದು ದಿನ
ತೆಗೆದಿಡಲು ಇವರ್ಯಾರು ಸಿದ್ದರಿಲ್ಲ|೪

ಜೀವಸೆಲೆಯಾದ ಕೆರೆಯಲ್ಲಿಂದು ತೇಲುತಿವೆ
ಪೇಪರ್ರು, ಪ್ಲಾಸ್ಟಿಕ್ಕು, ಸತ್ತ ಮೀನು
ನೀರಿಂದ ಮೇಲೆಳೋ ಪ್ರತಿ ಹಕ್ಕಿಯೂ ಕಪ್ಪು
ಕಾಗೆ, ಕೊಕ್ಕರೆ ಒಂದೆ ಬಣ್ಣವೇನು ? |೫

ನೀರಿಲ್ಲವಿಂದಲ್ಲಿ ಇಹುದೊಂದು ಕಂದು ದ್ರವ
ನಮ್ಮೆಲ್ಲ ಸ್ವಾರ್ಥಕ್ಕೆ ಸಾಕ್ಷಿಯಾಗಿ
ರವಿಶಶಿಯ ಹೊರತಾಗಿ ಯಾರಿಲ್ಲ ಕೇಳುಗರು
ಕೆರೆಯ ಕರೆಗೋಗುಡುವ ಶ್ರೋತೃವಾಗಿ|೬

ಕೆರೆಯ ಕೊನೆಯಲ್ಲವಿದು ಸಾಯುತಿದೆ ನಮ್ಮಾತ್ಮ
ಕೊಳೆಯಾಗೊ ಕೆರೆಯ ಪ್ರತಿ ಹನಿಯ ಜೊತೆಗೆ
ಒಟ್ಟುಗೂಡಲಿ ಮನಸು, ಮೀಸಲಾಗಲಿ ಸಮಯ
ಕೆರೆಯುಳಿಸೊ ಒಂದಿಷ್ಟು ಜನರ ಜೊತೆಗೆ
ಜೀವಜಲವಿಲ್ಲದೆಯೆ ಜೀವ ಉಳಿದೀತೇಗೆ
ಕಾಲಮಿಂಚುವ ಮುನ್ನ ಏಳಿರಣ್ಣ
ಮುಚ್ಚಿಹಾಕದಿರೆನ್ನ ಮಣ್ಣ ಗೋರಿಯ ಕೆಳಗೆ
ಎಂಬ ಕುಂದ್ಲಳ್ಳಿ ಕೆರೆ ಉಳಿಸಿರಣ್ಣ !|೭

Monday, June 8, 2015

ಕಲೆಯಾದ ಕತ್ತಲು

ಹಿನ್ನೆಲೆಯು ಚೆನ್ನಿರಲು ಹೊಳೆಯುವುದು ಹುಳು ಕೂಡ
ರವಿ ಮುಳುಗೊ ಕಾರ್ಗಲ್ಲ ಗುಡ್ಡದಂತೆ
ಹಾದಿ ತಪ್ಪಿಸೊ ಗೆಳೆಯ ತೇವಾಂಶ,ತುಕ್ಕಂತೆ
ಸಾಕು ಹಾಳಾಗಿಸಲು ಅದಿರ ಸಂತೆ |೧

ನಾಳೆ ಭರವಸೆಯನ್ನೇ ಕೊಲ್ಲೊ ಪರಿ ಕಷ್ಟಗಳು
ರವಿಯ ನುಂಗಲು ಹೊರಟ ರಾಹುವಂತೆ
ಕಾಡಿರಲು ಧೃತಿಗೆಡದೆ ಮುನ್ನಡೆಯೆ ನಲಿವಿಹುದು
ಗ್ರಹಣ ಕಳೆದೊಡೆ ಬರುವ ಬೆಳಕಿನಂತೆ |೨

ಅವನ ಬೆಳಕನು ತಡೆಯೆ ಇವನು ತಮವಾಗಿಹನು
ಲತೆಯಾಗಿ, ಮರವಾಗಿ ಅಡ್ಡ ನಿಂತು
ತನ್ನ ಪ್ರಭೆಯನೆ ಮರೆತ ಮರೆಯಾಗಹೊರಟವನು
ಅಹಮಲ್ಲೆ ಸಾಯುತಿಹ ಜೀವ ತಂತು |೩

ನೆರೆಯವನ ಸಾಧನೆಯ ಮುಚ್ಚಹೊರಟಿಹ ಕಿಚ್ಚು
ತಣಿವವರೆಗೂ ಇಹುದು ಭ್ರಾಂತಿಲೋಕ
ಅವನ ಬೆಳಕೆದುರಲ್ಲಿ ತನ್ನ ತಿದ್ದುವ ಆಸೆ
ಮೂಡಿದಾ ಕ್ಷಣ ತೆರೆದು ಬೆಳಕ ಲೋಕ |೪|

ಬಾರೋ ಭಾಸ್ಕರ ನೀನು, ಕಣ್ತೆರೆವ ಬೆಳಕಾಗಿ
ಬರೆಯಲಿಚ್ಚಿಸುವನ ಭಾವವಾಗಿ
ಸ್ಪೂರ್ತಿ ನೀರಿನ ಸೆಲೆಯ ಹುಡುಕಿ ಬಾಯಾರಿರುವ
ದಣಿದ ಚೇತನಕಷ್ಟು ತೇವವಾಗಿ |೫|

ದಿನದ ಕಷ್ಟವ ಕಂಡ ಆವಿಯಾಗಿಹ ಬೆವರು
ಸಂಜೆಯಲಿ ಮೈತಣಿವ ಗಾಳಿಯಾಗಿ
ಬದುಕ ಪುಸ್ತಕವಿತ್ತ ನೂರೆಂಟು ಪಾಠಗಳ 
ಅಧ್ಯಯನ ಅರಿವಿರದೆ ಕಾಂತಿಯಾಗಿ
ಹಿನ್ನೆಲೆಯ ಬೆಳಕಾಗಿ ಚೆಂದಗಾಣಿಸುತಿಹುದು
ಗರ್ವವಿಲ್ಲದೆ ಬಳುಕೊ ಮುಪ್ಪ ಮರಕೆ
ಅದರ ಹಲವಾಕಾರ ಹೇಳ ಹೊರಟಿವ ಮಾತು
ಸಿಗಲೆಂಬ ಹಾರೈಕೆ ಬೆಳೆವ ತೆನೆಗೆ |೬|


Tuesday, May 5, 2015

ಬುಡ್ಡಿದೀಪ:

Buddi Deepa
ಎಲ್ಲ ಕೊನೆಯಾಯ್ತೆಂಬ ಬೇಸರದ ಕತ್ತಲಲಿ
ಕರಗಿ ಹೋಯಿತೆ ನಮ್ಮ ಕನಸ ರೂಪ ?
ತಲುಪದಿದ್ದರೂ ಇಲ್ಲಿ ಸೂರ್ಯ ಚಂದ್ರನ ಬೆಳಕು
ದೊರಕೀತೆ ಮಬ್ಬೆಳಕ ಬುಡ್ಡಿ ದೀಪ ?

ಸೋಲ ಧೂಳಿನ ಪರದೆ ಹೊದ್ದು ಮಲಗಿದ ದೀಪ
ಎಣ್ಣೆ ಕಂಡೆಷ್ಟಾಯ್ತೊ ತಿಂಗಳಿಲ್ಲಿ?
ನಿರ್ಲಕ್ಷ್ಯದಾ ಒದೆತ ನಗ್ಗಿಸಿದ ಅಂಗಗಳು
ಅಡಗಿಹವು ಜೇಡನಾ ಬಲೆಗಳಲ್ಲಿ

ಎದ್ದೇಳೊ ದೀಪವೇ , ಬೇಸರವು ಕತ್ತಲೆಯು
ಜಾಢ್ಯ ಹೊದ್ದಿದೆ ಜಗವು ನೀನಿಲ್ಲದೆ
ಬೆಳಕಿಲ್ಲದಾ ಬಾಳು ನೂರು ಗೋಳಿನ ಹೋಳು
ಮೌಢ್ಯ ತೊರೆ,ಬೆಳಕ ತೆರೆ ಬಾ ಜ್ಯೋತಿಯೇ

ಸೋಲ ತಿಮಿರವ ತೊಡೆಯೆ ಛಲದ ಜ್ವಾಲೆಯು ಬರಲಿ
ಶ್ರಮದಿ ತನ್ನನೆ ಸುಡುವ ಎಣ್ಣೆಯೊಡನೆ
ಬದುಕ ಬಿಸಿ ಲೆಕ್ಕಿಸದೆ ಬೆಳಕ ಗುರಿ ಸಾಧಿಸುವ
ದೀಪಲೋಹದ ಪರಿಯ ಧೃಢತೆಯೊಡನೆ
ಎದರಾಗೋ ಅಪಜಯದಿ ಧೈರ್ಯವಡಗುವ ನೋಟ
ಜೀವ ತೆಗೆಯದೆ ಇರಲಿ ಗೋರಿಯಾಗಿ
ಸೋಲ ಧೂಳೆಮ್ಮನ್ನು ಕಾಡೋ ಸ್ಥಿತಿಯಾ ಪಾಟ
ಕಾಪಿಡಲಿ ನಾಳೆಗಳ ದಾರಿಯಾಗಿ

Wednesday, April 8, 2015

ಸಾಲದ ತುತ್ತು

ತುಂಬಿ ನಿಂತಿಹ ಕಣ್ಣು, ಖಾಲಿ ಜೇಬಿನ ಪಯಣ
ಹಸಿದ ಹೊಟ್ಟೆಯ ಕೆಣಕಿ ನಿಂತ ನಿದ್ರೆ
ಕ್ಷೀಣವಾಯಿತು ದೇಹ , ಕಟ್ಟಿದಂತೆಯೆ ಉಸಿರು
ಸಾಲದಾ ಕಲ್ಪನೆಗೆ ಬೆಚ್ಚಿ ನಿಂತು

ದೊರೆಯುತಿತ್ತೇನೋ ಕೇಳಿದೊಡೆ ಆಹಾರ
ಆದರಲ್ಲಿದೆಯಲ್ಲ ಅಹಮ ಸಾವು
ದುಡಿವ ಬಿಲ್ಲೆಯು ಒಂದೆ ಆದರೂ ಅಭಿಮಾನ
ಬೇಡಿ ತಿನ್ನೆನು ಎಂಬ ಭಾವ ಮರಣ

ಜೊತೆಗಿದ್ದ ಸ್ನೇಹವೇ ಎದುರಿಟ್ಟ ಆಹಾರ
ನುಂಗೆನೆಂದಿತು ಬಾಯಿ ಜೇಬ ನೆನೆದು
ನೀರಿನಲೆ ಸಂತೈಸಿ ಕಣ್ಣೊರಿಸಿದಾ ಮನಸು
ಖಾಲಿ ಹೊಟ್ಟೆಯೆ ಪಾಠ ನಾಳೆಗೆಂತು

ಭಾರ ಜೇಬಿನ ಕನಸು ಬೇಡೆನಗೆ ನಾಳೆಯೇ
ಬೇಡುವಂತಹ ಸ್ಥಿತಿಗೆ ದೂಡಬೇಡ
ಎಣಿಸಿ ಮುಗಿಯದ ನೋಟು ಇಷ್ಟವಿಲ್ಲವೊ ಎನಗೆ
ಜೊತೆಗಿರುವ ನೋಟದಲೆ ಕೊಲ್ಲಬೇಡ

Monday, September 15, 2014

ಹುಡುಕಾಟ


ಭಾನುವಾರದ ಬಿಡುವು ಬೇಸರಿಸಿ ಎಳೆಮನಕೆ
ಆಫೀಸ ರಸ್ತೆಯೆಡೆ ಎಳೆಯಿತೊಮ್ಮೆ
ದಿನದ ಹೊಗೆ, ಹಾರನ್ನು,ಟ್ರಾಫಿಕ್ಕು, ತಡೆದಿಣ್ಣೆ
ಕಾಣದೇ ಬೇಸತ್ತ ಜೀವಮೊಮ್ಮೆ

ಆದರೇನಚ್ಚರಿಯು , ಶಬ್ದ ಸತ್ತಿಹ ಪರಿಯು
ಸ್ವಚ್ಛ ಕಪ್ಪನೆ ರಸ್ತೆ ಎಷ್ಟು ಚಂದ
ದಿನದ ಕಸ, ಕೊಳೆಯೆಲ್ಲಿ? ಮುಖಸುಡುವ ಬಿಸಿಲೆಲ್ಲಿ
ಎಲ್ಲ ಹುಟ್ಟಿದ ಭ್ರಮೆಯೆ ಚಿಂತೆಯಲ್ಲಿ ?

ಬೆಲೆಯಿಲ್ಲವೇ ಇಲ್ಲಿ ಭಾವಗಳ ತೋರಿಕೆಗೆ
ಮುಖವಾಡವಿಲ್ಲದೆಯೆ ಬದುಕಲುಂಟೆ ?
ಕಾಡುತಿರು ಜೀವಗಳ ಕುಂಟು ನೆಪಗಳ ಹುಡುಕಿ
ರಕ್ತ ಹೀರದೆ ಸೊಳ್ಳೆ ಬದುಕಲುಂಟೆ? !

ಮನಮುರಿದ ಸ್ನೇಹಗಳು ಸತ್ತ ಗೋರಿಗೆ ಒಂದು
ಹೂವ ಹಾರವನಿಕ್ಕಿ ನಮನವೆನಲೆ
ಕಳೆದ ಕಾಲದ ನೆನಪು, ಕೆದಕಿ ನೋವನೆ ಆಯ್ದು
ಕಣ್ಣೀರ ಮಡುವಾಗೆ ಮಿಂದು ಬರಲೆ

ದಿನಕಳೆದು ಇರುಳಾಯ್ತು . ರವಿವಾರ ಕರಗೋಯ್ತು
ನಾನು ನಾನಾಗಿರಲು ಸಮಯವಾಯ್ತೆ ?
ಕಾಲದಲೆ ನೆನಪಾಗಿ, ಕರಗಿರುವ ನನ್ನನ್ನು
ಹುಡುಕೊ ಎಂದಿನ ಹಠವು ವಿಫಲವಾಯ್ತೆ ?
ಓಡುತಿಹ ಕಾಲದಲಿ, ಕ್ಷಣಕಾಲ ಸಿಕ್ಕನಗೆ
ಒಂದು ಉತ್ತಮ ಓದ ತೃಪ್ತಿ ನಾನು.
ಸಿಕ್ಕ ನಿದ್ದೆಯ ಜೇನು, ಹಸಿರ ಸಿರಿ, ಬಿಳಿ ಬಾನು
ಸೌಂದರ್ಯ ದಾಖಲಿಸೊ ಧರೆಯು ನಾನು
ಅಸ್ಮಿತೆಯ ಅರಸುತ್ತ ನಾಳೆಗಳ ನಾಡಿನಲಿ
ಹೊರಟು ದಾರಿಯ ಮರೆತ ಪಯಣ ನಾನು
ಜೀವನದ ನೀರಿನಲಿ ದ್ವೇಷ, ಸ್ವಾರ್ಥದ ಕೊಳೆಯ
ಅಳಿಸೊ ಮಾಂತ್ರಿಕನರಸಿ ಕಳೆದ ಮೀನು

Tuesday, July 15, 2014

ಕಾಡೋ ಸಾಲುಗಳು..

ಎನ್ನ ಜೀವವ ಕಾಡಲೆಂದೇ
ನಿನ್ನ ಭಾವಗಳ ಕೊಂಡಿಯೇ ?
ಕಾಲಮಾರುತಕೆ ನೆನಪ ಬೂದಿಯೊಳು
ಜೀವ ತಳೆದಿಂದು ನಿಂತವೇ ?

ಮಸುಕು ನೆನಪುಗಳು ನಿನ್ನೆ ಮುಸುಕಿಂದ
ಎದ್ದು ಬರಲೇನು ಕಾರಣ ?
ಕಳೆದ ಕಂದರದಿ ಹೊಳೆವ ರವಿ ಹುಡುಕಿ
ಏಕೆ ಶುರುವಾಯ್ತೊ ಚಾರಣ ?

ನನ್ನ ನೋವುಗಳ ಕಸಿದು ನಿಂತೆ ನೀ
ನಿನ್ನ ನಗೆ ಮರೆತು ತ್ವರಿತದಿ
ದಿನದ ಪೆಟ್ಟುಗಳ , ನೋವ ಮುಚ್ಚಿಟ್ಟೆ
ನನ್ನ ಕ್ಷಣ ನಗೆಯ ತುಡಿತದಿ

ಇಂದು ನಿನ್ನೆಗಳ ನೆನಪು, ವಾಸ್ತವವು
ನಾಳೆ ಕನಸೊಂದ ಕಟ್ಟಿರೆ
ಭಾವತೀರ್ವತೆಯ ಪಾಯವಿಟ್ಟವಿಗೆ
ಸುಖದ ಸೌಧವನೆ ಕಟ್ಟಿರೆ

ಕಾಲದೊಂದಿಗೇ ಕರಗಿಹೋಯಿತೆ ನಿನ್ನ ಜೀವ, ಛಾಯೆ
ಕುರುಹನುಳಿಸದೇ ಕಳೆದುಹೋಯಿತೇ ನಿನ್ನ ನೆನಪ ನಾವೆ
ನೆನೆದ ಪ್ರತಿಕ್ಷಣ ಸ್ಪೂರ್ತಿಯಂಕುರ ನಿನ್ನ  ಬದುಕು, ನಿಲುವು
ಜೊತೆಗೆ ಇಲ್ಲದಿಹ ನಿಜವು ಹೊಳೆದೊಡೆ ಕಣ್ಣೆ ನೀರ ಮಡುವು
ಅಲೆವ ಗಾಳಿಯೊಡೆ ತೇಲಿಬಂದಂತೆ ಮತ್ತೆ ನಿನ್ನ ನೆನಪು
ಉಳಿಸಿದಾ ಕನಸಾ ನಿಜವಗಯ್ಯಲೇ ಮತ್ತೆ ಹೆಚ್ಚಿ ಹುರುಪು

ದಿನವು ತಲೆಯೆತ್ತೆ ಹೊಳೆದು ಕಾಣಲು ನೀನು ತಾರೆಯಲ್ಲ
ಆದರುದಯಿಸಿಹ ಜ್ಞಾನಜ್ಯೋತಿಗಳ ಬೆಳಕು ಕಮ್ಮಿಯಲ್ಲ
ನೋವ ಜೊತೆಗೊಂದು ಸ್ಪೂರ್ತಿ ಸಿಂಚನ ಕನಸ ಬೆಳೆಸಲೆಂದು
ನೋವ ಕಂದಕದಿ ಕಳೆದು ಕೂರದಿರು ಬರುವ ನಲಿವೆಗೆಂದು

Sunday, May 11, 2014

ಬ್ಲಾಗಿಲಿನ ಬಾಗಿಲು ತೆರೆಯದೇ ತಿಂಗಳಾಗಿ

ಬ್ಲಾಗೆಂಬ ಗೆಳತಿಗೆ ಮೊಗ ತೋರದೇ
ತಿಂಗಳಾದ ಮುನಿಸಿಗೆ ಆಕೆ ಮಾತು ಬಿಟ್ಟಿದ್ದಾಳೆ.
ಒಂದೆರಡು ಪ್ರೀತಿಯ ಸಾಲು ಗೀಚಿ, ತೋಳ ಚಾಚಿ
ರಮಿಸಬೇಕೆಂಬ ಬಯಕೆಯಿಟ್ಟಿದ್ದಾಳೆ

ಸಮಯವಿಲ್ಲದೇ ಕಳೆದೆನಾ ನನಗೂ ದಕ್ಕದಂತೆ ?
ಬಿಸಿಲಿಗೆ ಆವಿಯಾಗಿ ಹನಿ ನೆನಪೂ ಉಳಿಸದಂತೆ.
ಬಾಳೆಂಬ ಬಂಡಿಯ ಕೀಲಿಗೆ ರಂಜನೆಯೆ ಎಣ್ಣೆ
ಬೇಡಿ ಬೇಸತ್ತು ಕೀರೆಂದು ಕೂಗಿದರೂ ಚಕ್ರಗಳು
ಅತ್ತ ತಿರುಗಿಲ್ಲ ಚಿತ್ತ, ಮನ ಬರೀ ಓಡುವಿಕೆಯತ್ತ

ಒಂದು ನುಡಿಗಾಗೇ ಕಾದು ಬೇಸತ್ತವು ಮನಗಳು
ಕ್ಷಣಗಳು ಯುಗಗಳಾಗೋವರೆಗೆ ಕಾದರೂ ಸೋತವು
ಸಿಗದೇ ಹನಿ ಮಾತು, ತೋರಿಕೆಗೂ ಪ್ರೀತಿ
ಕಾಲ ಚಕ್ರದ ಕೆಳಗೆ ಧೂಳಾಗೋ ಮೊದಲೇಳು
ಇನ್ನೆತ್ತ ? ನನ್ನವರಿರುವತ್ತ

ಕೋಟಿ ಕೋಟಿ ಜನರೀ ಜಗದಲ್ಲಿ ಸಿಕ್ಕಾರೆ ನನ್ನವರೆಂಬ ಕಳೆದವರು ?
ಮನೆಯೊಳಗಲ್ಲ ಹುಡುಕಬೇಕವನರನ್ನು ಮನದೊಳಗೆ
ಕಾಡಿಸಿದ, ತಿರಸ್ಕರಿಸಿದ ಹಿಂದಿನಾ ಕ್ಷಣಗೊಳಗೆ
ಬೇಸರದ ಮುಸುಕು ಹೊದ್ದು
ಮಲಗಿರಬಹುದೆಲ್ಲೋ ಮೂಲೆಯಲ್ಲಿ 
ಮುಸುಕಲ್ಲೇ ಮರೆಯಾಗೋ ಮೊದಲು
ಹುಡುಕಬೇಕವರನ್ನ , ಕಳೆದು ಹೋದ ನನ್ನವರನ್ನ
ಮೊಗ ತೋರದೇ ಮುನಿಸಿ ಹೋದ ಬ್ಲಾಗಿತಿಯ ರಮಿಸಬೇಕು
ಪ್ರೀತಿಯ ನಾಲ್ಕು ಸಾಲು ಗೀಚಬೇಕು..

Wednesday, January 29, 2014

ಗಣತಂತ್ರ ದಿನ

ನೂರು ಚೂರನು ಹೊಲಿದು ಒಂದು ಭಾರತವೆಂದೆ
ರಾಜ್ಯ, ಭಾಷೆಯ, ಮತದ ಜಗಳಕೆಂದೆ ?
ಅವ ಮೆಂದ, ಇವ ತಿಂದ, ಮತ್ತೊಬ್ಬ ಮಾಡದಿಹ
ಸತ್ಕಾರ್ಯ ಬೇಡುವುದೆ ಉಳಿದ ಮಂತ್ರ ?

ಸುತ್ತಲಿಹ ಜೀವಗಳ ಶತ್ರುಗಳ ಪರಿ ನೀನು
ದೂರತಳ್ಳುವ ,ಬಡಿವ ಪರಿಯು ಸರಿಯೆ ?
ನಿನ್ನ ನಾಡಿಯ ಮಿಡಿತ, ನೆರಳೇ ನೆರಹೊರೆಯವರು
ನೀರ ಹೊರಗಣ ಮೀನು ಅವರು ತೊರೆಯೆ

ಅನುಕ್ಷಣವೂ ಜನ್ಮದಾತೆಯ ಕರುಳ ಹಿಂಡುತಿಹ
ಕಾಡುವಿಕೆ, ಕಲಹಗಳ ಕ್ರೂರ ಶಿಶುವೆ
ಗಣತಂತ್ರ ರಜೆಯಲ್ಲ ಹೊದ್ದ ನಿದ್ದೆಯನೊದೆಯೊ
ದೇಶ ಕಾದಿದೆ ನಿನಗೆ ಮೂಢ ಮನವೇ

ನಮ್ಮೊಳಗೆ ನಾರುತಿಹ ನೂರು ಹಳೆ ದೂರುಗಳು
ನಲ್ಮೆ ಮಾತುಗಳರುಹೆ ಬೇಕೆ ಕೇಸು ?
ಹಣವೆಂದು, ಗಣಿಯೆಂದು ಹಗೆಯ ಕಾದಿಹ ಜನರು
ತಾಯ ನಗುವನೆ ಸುಟ್ಟು ತಿಂದರೆಂದೋ

ಬೇಕಿಲ್ಲ ಭಾರತಿಗೆ ಮಣ ಹೊನ್ನು, ಮಕರಂದ
ಮಕ್ಕಳೆಲ್ಲರು ಕೂಡೆ ಅದುವೆ ಚೆಂದ
ಶಿಶುವಾಗು ತಪ್ಪುಗಳ ಶಿಶುಪಾಲನಾಗದಿರು
ಕ್ಷಮಿಸುವವಳೇ ತಾಯಿ ನಿನ್ನ ಕಂದ
ಮುಡುಪೆನ್ನು ಒಂದು ಕ್ಷಣ ದಿನದಲ್ಲಿ ದೇಶಕ್ಕೆ
ಇಲ್ಲಿರುವ ಜನರೆಲ್ಲ ಬಂಧುವೆನ್ನು
ಈ ನಾಡೇ ಸಕಲ ಸುಖ ಸಿಂಧುವೆನ್ನು


ಗೆಳೆಯನೊಬ್ಬನ ಕೋರಿಕೆಯ ಮೇರೆಗೆ ಕವನದ ಭಾವಾರ್ಥ( ನಾ ಬರೆಯುವಾಗ ಅಂದುಕೊಂಡಂತೆ)
೧)ರಾಜರ ಸಂಸ್ಥಾನಗಳು ಅಂತ ಹರಿದು ಹಂಚಿ ಹೋಗಿದ್ದನ್ನ ಸರ್ದಾರರು ಅಖಂಡ ಭಾರತ ಅಂತ ಒಂದು ಮಾಡಿದ್ರು. ಆದ್ರೆ ನಾವು ಆ ರಾಜ್ಯ, ಈ ರಾಜ್ಯ ಅಂತ ೬೫ ವರ್ಷಗಳಿಂದಲೂ ಒಡಿತಾನೇ ಇದೀವಿ..ಜೊತೆಗೆ ಆ ಭಾಷೆಯವನು, ಈ ಮತದವನು, ಅವನು ನಮ್ಮವನಲ್ಲವೆಂಬ ಭಿನ್ನಮತಗಳು ಬೇರೆ. ಬರೀ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಬೈದಿದ್ದೇ ಆಯ್ತು. ರಾಜಕಾರಣಿಗಳು ಮಾಡದ ಕೆಲಸಗಳ ಬಯಸಿದ್ದೇ ಆಯ್ತು. ಈ ಬಯಸುವಿಕೆ, ಬೇಡುವಿಕೆಗಳೇ ನಮಗೆ ಉಳಿದಿರುವ ಕೊನೆಯ ಉಪಾಯವೇ ?


2)ನಿನ್ನ ಸುತ್ತಮುತ್ತಲಿರುವವರು ನಿನ್ನ ಮಿತ್ರರೇ ಕಣೋ. ಶತ್ರುಗಳಲ್ಲ. ಅವರನ್ಯಾಕೆ ಆ ಪರಿ ದ್ವೇಷಿಸುತ್ತೀ ? ದೂರ ತಳ್ಳುತ್ತೀ ? ನಿನ್ನಂತರಂಗಕ್ಕೊಂದು ಕನ್ನಡಿಯಷ್ಟೇ ಅವರು. ನೀನು ಒಳ್ಳೆಯವನಾದರೆ ನಿನ್ನ ನೆರೆಯವರೂ ಒಳ್ಳೆಯವರು. ನಿನ್ನಷ್ಟೇ ರಕ್ಕಸರವರು.ನಿನ್ನ ನೆರಳಂತೇ ಕಷ್ಟದು:ಖಗಳಲ್ಲಿ ಜೊತೆಗಿರೋ ಸಾಥಿಗಳವರು. ಅವರಿಲ್ಲದೇ ನೀನುಂಟೇ ? ಅವರಿಲ್ಲದ ನೀನು ನೀರಿನಿಂದ ಬೇರ್ಪಟ್ಟ ಮೀನಿನಂತೆ..

3)ತಾಯಿ ಭಾರತಿಯ ಮಕ್ಕಳೇ ಆದ ನಮ್ಮ ನಮ್ಮೊಳಗೆ ನೂರೆಂಟು ವ್ಯಾಜ್ಯ. ನೀರು, ಗಡಿ, ಗಣಿಯೆಂದು ಹಲ ಹೆಸರಷ್ಟೇ ಅದಕ್ಕೆ. ನಮ್ಮಂತರಾಳದ ಮುನಿಸುಗಳನ್ನು, ಕೊಳೆತು ನಾರುತ್ತಿರುವ ಸಂಬಂಧಗಳನ್ನ ನಾವೇ ಸರಿಪಡಿಸಿಕೊಳ್ಳುವ ಬದಲು ಅದನ್ನು ಜಗಕೇ ಸಾರು ನೂರು ಕೇಸುಗಳು ಬೇಕೇ ? ಹೆತ್ತ ಕುಡಿಗಳು ಈ ರೀತಿ ಕಚ್ಚಾಡುತ್ತಿರುವ ವ್ಯಥೆಗೆ ಹೆತ್ತ ತಾಯ ನಗು ಎಂದೋ ಸುಟ್ಟು ಕರಕಲೆದ್ದು ಹೋಗಿದೆ  

4)ತಾಯಿ ಭಾರತಿಗೆ ಮಕ್ಕಳಿಂದ ಹೆಚ್ಚಿನ ನಿರೀಕ್ಷೆಯಿಲ್ಲ. ಹೊರೆ ಬಂಗಾರವೋ, ಜೇನಿನ ಹೊಳೆಯೋ ಬೇಕಿಲ್ಲ ಆಕೆಗೆ.ಬೇಕಿರುವುದು ಮಕ್ಕಳ ಕೂಡು ಬಾಳ್ವೆಯಷ್ಟೇ. ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ತಪ್ಪು ಮಾಡುತಲಿರುವುದೇ ಜೀವನವೆಂಬಂತೆ ಕ್ಷಮೆ, ಸಹನೆಯನ್ನು ಅಶಕ್ತತೆಯೆಂದು ತಪ್ಪು ತಿಳಿದು ಜೀವ ಕಳೆದುಕೊಳ್ಳುವ ಶಿಶುಪಾಲನಾಗದೇ ತಪ್ಪುಗಳಲೆಡವಿದಾಗ ಪಾಠ ಕಲಿತು ಮುಂದಿನ ಹೆಜ್ಜೆಯ ಸರಿಯಾಗಿ ಇಡುವ ಮಗುವಾಗು ಮನವೇ.ಕ್ಷಮೆಯೇ ತಾಯಲ್ಲವೇ ? ನಾಳೆಯ ನಿನ್ನ ಒಳ್ಳೆಯ ಹೆಜ್ಜೆಗಳ ಮುಂದೆ ನಿನ್ನೆಯ ಕೆಡುಕುಗಳ ಮುನಿಸ ಮರೆತುಬಿಡುತ್ತಾಳೆ ಭಾರತೀ. ಇನ್ನಾದರೂ ಬದಲಾಗೋ ಮನವೇ.ಇಷ್ಟು ದಿನ ಕಚ್ಚಾಡಿದ್ದು ಆಯಿತು. ಇಂದಾದರೂ ನಾವೆಲ್ಲಾ ಒಂದೇ ಎಂದು, ದಿನದಲ್ಲಿ ಕೊಂಚ ವೇಳೆಯನಾದರೂ ದೇಶಕ್ಕಾಗಿ ಆಲೋಚಿಸುವ, ನಾಡ ಏಳಿಗೆಗೆಂದು ಬದುಕಬಯಸುವಂತವನಾಗು ಮನವೇ. . 

Tuesday, August 20, 2013

ತಾರೆಯ ಪ್ರೀತಿ..

ಸ್ತ್ರೀ ಅಂದರೆ ಅಷ್ಟೇ ಸಾಕೆ .. ಹಾಡಿನ ಧಾಟಿಯಲ್ಲಿ ಹೊಳೆದ ಕೆಲವು ಸಾಲುಗಳು

ತಾರೆಯ ಪ್ರೀತಿ..
**********************
ಭಾವನೆಗಳ ಭೂಮಿಯಲ್ಲಿ,
ತಾನೇ ತಾನೆಂಬ ರೀತಿಯಲ್ಲಿ
ಮೂಡಿರುವ ಮೊಗ್ಗಿಗೆ ಹೆಸರು ಬೇಕೆ ?
ಪ್ರೀತಿ ಎಂದರೆ ಅಷ್ಟೆ ಸಾಕೆ ?

ಬಾಳಂತ ಕಾರಿರುಳ ಕಪ್ಪಿನಲ್ಲಿ
ಮಿನುಗೋ ತಾರೆಯ ಬೆಳಕೇ ನಿಶೆಗಾಭರಣ
ಹೊತ್ತು ಮುಳುಗೋ ಹೊತ್ತು ಬೆಳಗೋ ಮುತ್ತು
ಮಿನುಗಿದ ಬೆಳಕ ಸವಿಯು ನಂದೇ ಸ್ವತ್ತು !

ತಾರೆಗಳ ತೋಟದ ಕೂಲಿ ನಾನು
ನಿನ್ನೊಂದು ಕಣ್ಣೋಟಕೆ ಸೋತೆ
ನಿನ್ನ ನಸುನಗುವಲಿ ನನ್ನೇ ಮರೆತೆ
ಮಿಂಚೋ ಕಲೆಯನ್ನ ಅರಿಯೆ ನಾನು
ಒಳಸಂಚು,ದ್ವೇಷಗಳ ಅರಿಯದವನು
ನನ್ನ ಮನ ಕದ್ದಿರುವ ಚೆಲುವೆ
ಮಿನುಮಿನುಗಿ ಕನಸಲ್ಲೂ ಬರುವೆ

ಹಾಲ ಬಿಳುಪಿನ ನಡುವೆ ಕಪ್ಪ ಹುಡುಕಿ
ಹೊಳೆವ ಶಶಿಯ ಮೊಗದಿ ಮಸಿಯ ಕೆದಕಿ
ಪ್ರೀತಿ ಹಣಿಯಲೆಂದೇ ಹುಡುಕಬೇಕೆ ?
ನೀನ್ಯಾರೋ ತಿಳಿದಿಲ್ಲ ಎನ್ನೇ ಕೂಸೇ
ಭಿಕ್ಷೆಯೆಂದೇ ನೀಡಿದನ,ಕೊನೆಯ ಆಸೆ
ಪ್ರೀತಿಗೆ ಸಿರಿತನದ ಹೊನಲೇ ಬೇಕೇ?
ಬಡತನದ ಕೋಪ ನಮ್ಮ ಪ್ರೀತಿಗೇಕೆ ?

Saturday, August 17, 2013

ನೂರು ಕನಸುಗಳ ನಡುವೆ

ಯಾಕೋ ಬೇಸರ. ಯಾಕೆ ? ಗೊತ್ತಿಲ್ಲ.
ಗೆಳೆಯರೆಲ್ಲಾ ಊರು ಸೇರಿ ನಾನೊಬ್ಬ ಇಲ್ಲುಳಿದಿದ್ದಕ್ಕಾ ? ಗೊತ್ತಿಲ್ಲ
ಗೊತ್ತು ಗುರಿಯಿಲ್ಲದ ಕುರಿಮಂದೆಯಂತಹ ಬಾಳಿಗಾ? ಗೊತ್ತಿಲ್ಲ
ಏನೋ ಸಾಧಿಸಬೇಕೆಂಬ ಹಟ. ಏನು ? ಗೊತ್ತಿಲ್ಲ
ಏನಾದರೂ ದೊಡ್ಡದು, ಯಾರೂ ಮಾಡಿರದಂತದು
ಆದರೆ ಮಾನವ ಮಾಡಬಹುದಾದದ್ದೆಲ್ಲವನ್ನೂ ಮಾಡಾಗಿದೆಯಲ್ಲಾ
ಏನಿಹುದು ಹೊಸದು, ಯಾರೂ ಮಾಡದಂತಹುದು ?

ನೂರಾರು ಕನಸುಗಳ ಮಧ್ಯೆ ನಿತ್ಯ ತಾಕಲಾಟ
ಅದೋ ಇದೋ, ಮತ್ಯಾವುದೋ ಎಂಬ ಹುಡುಕಾಟ
ನಾನಲ್ಲದು ನಾನಾಗಲು ಪ್ರಯತ್ನಿಸೋ ಬದಲು ನಾನೇ ನಾನಾಗಲು ಕಾದಾಟ
ನಾನ್ಯಾರು ? ನಾನೆಂಬುದು ಇಹುದೇ ?
ನಾನೆಂಬುದು ನನ್ನ ಅಪ್ಪ-ಅಮ್ಮಂದಿರ ಪಡಿಯಚ್ಚೇ ಅಲ್ಲವೇ ?
ಹುಟ್ಟಿನಿಂದ ಇಂದಿನವರೆಗೆ ಛಾಯೆಯಲ್ಲೇ ಬೆಳೆದಿದ್ದು
ಯಾವುದೋ ಮಿನುಗು ತಾರೆಯಿಂದ ಚಿಮ್ಮಿದ ಬೆಳಕೇ ನಮ್ಮ ಬಿಳುಪು
ಸ್ವಂತದ್ದೇನಿದೆ ಇಲ್ಲಿ ? ಬೀಗಲು ನಾನೆಂಬ ಹಮ್ಮು?

ಯಾಕೋ ಗೊತ್ತಿಲ್ಲ. ಕಂಡ ನೂರಾರು ಕನಸುಗಳು ಹೊತ್ತಿ ಉರಿದಂತೆ ಧಗೆ
ಜೀವನ ಪಯಣದಲ್ಲಿ ಕಳೆದ ನೂರಾರು ಗೆಳೆತನಗಳ ಬೇಗೆ
ಎಲ್ಲಾ ನಮ್ಮ ಜೊತೆಯೇ ಇರಲೆಂಬ ಬಯಕೆ ಸರಿಯೇ ? ಗೊತ್ತಿಲ್ಲ
ದೂರಾದರೂ ನೆನಪಾದರೂ ಉಳಿಯಲೆಂಬ ಭಾವವೂ ತಪ್ಪೇ ? ಗೊತ್ತಿಲ್ಲ
ನಾನು ನೆನಪಿಡುವ ಎಲ್ಲರಿಗೂ ನಾ ನೆನಪಿರಲೆಂಬ ಭಾವವೇ ಎಲ್ಲಕ್ಕೂ ಮೂಲವೇ ? ಗೊತ್ತಿಲ್ಲ
ಯಾಕೋ ಕಾಣೆ. ಮತ್ತೆ ಬೇಸರ
ಎಲ್ಲಾ ಊರು ಸೇರಲು ನಾನೊಬ್ಬ ಇಲ್ಲುಳಿಯಲೋ, ಗೊತ್ತಿಲ್ಲ

ಅಲ್ಪ ಓದಿನ ನಂತರ ಪರ ಊರ ಹುಡುಕಿ ಹೊಟ್ಟೆಪಾಡು
ಯಾಕೋ ಎಲ್ಲಾ ಇದ್ದೂ ಅನಾಥನಾದ ಭಾವ
ನಮ್ಮದಲ್ಲದ ನಾಡಿನಲ್ಲಿ ಮನಸ್ಸಿಲ್ಲದಿದ್ದರೂ ಬಿಡದ ಹೊಟ್ಟೆ
ಊರಲ್ಲಿ ನಮ್ಮನ್ನೇ ನಂಬಿರೋ ಜೀವಗಳು.
ಯಾರಾದರೂ ನಮ್ಮನ್ನೇ ನಂಬಿ ಇದ್ದಾರಾ ? ಗೊತ್ತಿಲ್ಲ
ಇಷ್ಟು ವರ್ಷ ಹೊರೆದ ಜನ್ಮದಾತರು ಈಗ ಇದ್ದಕ್ಕಿದ್ದಂತೆ ನಿತ್ರಾಣರಾದರಾ ?
ಎಂದೂ ಇಲ್ಲದ ಜವಾಬ್ದಾರಿಯ ಹೊರೆ ಈಗ ಇದ್ದಕ್ಕಿದ್ದಂತೆ ಹೆಗಲ ಮೇಲೆ ಕೂತದ್ದಾದರೂ ಹೇಗೆ ?
ಮಾಡಲಾಗದ ಕೆಲಸಗಳಿಗೆ, ನನಸಾಗದ ಕನಸುಗಳಿಗೆ ಈ ಹೊರೆಯ ನೆನಪ ನೆಪವೇ ? ಗೊತ್ತಿಲ್ಲ

ಹಾರೋ ಚಿಟ್ಟೆಯಾಗಿದ್ದ ಭಾವಗಳ ಕಟ್ಟಿಹಾಕಿದ್ದು ಯಾರು ? ಗೊತ್ತಿಲ್ಲ
ಮರೆಯಾದ ಗೆಳೆಯರೇ, ಬೆನ್ನುಬಿದ್ದ(?) ಜವಾಬ್ದಾರಿಗಳೇ, ಅಥವಾ ನಾವೇ ?
ಏನಿಲ್ಲವೆಂದುಕೊಂಡರೆ ಏನೂ ಇಲ್ಲದ ಸುಖೀ ಬಾಳು
ನೂರಾರು ಆಸೆಗಳ ಆಶಾಗೋಪುರ ಕಟ್ಟಿದರೆ ನಿತ್ಯ ಗೋಳು
ಪ್ರತಿದಿನವೂ ಕುಸಿಯೋ ಗೋಪುರದ ಕಲ್ಲುಗಳಿಗೆ ಕಾರಣ ?
ಸತ್ಯದ ಬುನಾದಿಯ ಬದಲು ಅತಿ ಬಲದ ಹಮ್ಮಿನ ಮೇಲೆ ಕಟ್ಟಿದ್ದೇ ? ಗೊತ್ತಿಲ್ಲ

ಕಾಣದ ನೂರು ಪ್ರಶ್ನೆಗಳಿಗೆ ಉತ್ತರ ಹುಡುಕೋ ಬದಲು
ಕಂಡ ಇಂದಿನ ಸತ್ಯಕ್ಕೆ ತಲೆಬಾಗುವುದೇ ಜೀವನವೇ ?
ಇಂದೊಂದೇ ಸತ್ಯವಾದರೇ ನಾಳೆಯ ಕನಸುಗಳ ಗತಿ ?
ಕನಸುಗಳೇ ಇಲ್ಲದ ಜೀವನವೊಂದು ಜೀವನವೇ ?
ಕನಸುಗಳು, ಭಾವಗಳು , ನಿರೀಕ್ಷೆಗಳು ತಪ್ಪಲ್ಲ
ಅವುಗಳಿಗಾಗಿ ಪಟ್ಟ ಶ್ರಮವೂ ತಪ್ಪಲ್ಲ
ಆದರವು ಈಡೇರದ ನೋವಿಗೆ ನಿತ್ಯ ಕೊರಗಾಟ ತಪ್ಪು
ನಾನೆಂಬ ಅಸ್ಮಿತೆಯ ಹುಡುಕಾಟದಲ್ಲಿ,
ನಾಳೆಯೆಂಬ ನಿರೀಕ್ಷೆಯಲ್ಲಿ ಇಂದೆಂಬ ವಾಸ್ತವದ ನಿರಾಕರಣೆ ತಪ್ಪು
ಉತ್ತರದ ಹುಡುಕಾಟವೇ ತಪ್ಪೇ? ಗೊತ್ತಿಲ್ಲ. ಸದ್ಯಕ್ಕಂತೂ ಶಾಂತಿ..


Monday, August 5, 2013

ಸ್ನೇಹ



ಜೀವನದಿ ಎಲ್ಲೋ ಇದ್ದ
ನಾನು, ನೀನೆಂಬ ಬಿಂದು
ಸಂಧಿಸಿದ ರೇಖೆ ಹೆಸರು ಚೆಲುವ ಈ ಸ್ನೇಹ
ನಾನು ನೀನೆಂಬ ನಿನ್ನೆ
ನಾವೆಂಬ ಇಂದಿನಲ್ಲಿ
ಬೆಸೆದಂತ ಗೋಂದು, ಒಲವು ಮಧುರ ಈ ಸ್ನೇಹ


 

ಜಾತಿ, ಲಿಂಗ ಭಾಷೆಗಳೆಂಬ
ಬೇಲಿಯಿಲ್ಲ , ಮಾತೇ ಎಲ್ಲ
ನೋವಿನಲೂ ನಲಿವಿನಲ್ಲೂ
ಸಾಥಿ ಈ ಸ್ನೇಹ
ಸೋಲಿನಲೂ ಸೊರಗದಂತ
ಪ್ರೀತಿ ಈ ಸ್ನೇಹ


 

ಮೌನದಲೂ ಕಾಡೋ ನೀನು
ಸಕಲ ಸುಖದ ಕಾಮಧೇನು
ಎಲ್ಲವನೂ ದೂರ ತಳ್ಳೋ
ಬೇಸರ ಬಂತೇನು
ಅಹಮಿಕೆಯ ಕಿಡಿ ಬೆನ್ನಲ್ಲೇ
ಅಗಲಿಕೆ ಇತ್ತೇನು ?

ಬಾಳೆ ಒಂದು ಭಾವಗೀತೆ
ನಾನೆ ರಾಮ ನೀನೆ ಸೀತೆ
ನೀನು ಸಿಗಲು ಮಾಯ ಚಿಂತೆ
ಬೇರೆ ನಾನರಿಯೆ
ಹಕ್ಕಿ ಹಾರಿ ಹಾಗೇ ಉಳಿದ
ಮರದ ಒಣ ಪೊದರೆ

Monday, June 10, 2013

ಬೋಳು ಮರದ ಕೆಳಗೆ

ಮೊನ್ನೆ ಒಂದು ಮೆಸೇಜು.."ಹೂ ಈಸ್ ದಿಸ್".. ಹೆಸರಿರದ ಆ ನಂಬರಿನಿಂದ ಬಂದ ಮೊದಲ ಮೆಸೇಜು. ಅದೇ "ಹೂ ಈಸ್ ದಿಸ್ ಇಂದ ಪರಿಚಯವಾದ ನಿನ್ನ ನೆನಪನ್ನದು ಕೆಣಕಿದ್ದಂತೂ ನಿಜ ಗೆಳತಿ..ನೀನಿಲ್ಲದ ಬಾಳಿಂದು ಮಳೆಯಿಲ್ಲದೇ ಬರಗೆಟ್ಟ ನಾಡಂತೆ. ನೆಟ್ಟ ಸಸಿಗಳು ಕಣ್ಣೆದುರೇ ಒಣಗಿ ಸಾಯುತ್ತಿರೋ ಬಾಳೆಯ ತೋಟದಂತೆ. ನೀನಿತ್ತ ಪ್ರೀತಿಯ ಬಿಂದುಗಳಿಲ್ಲದೇ ಬಾಳಸಸಿಗಳು ಒಣಗುತ್ತಿವೆ ಗೆಳತಿ. ಮರೆಯಾದ ನಿನ್ನ ನೆನಪಲ್ಲೇ ಕೆಲವು ಸಾಲುಗಳು


ಮುಂಜಾನೆಯ ಮಂಜಿನಂತಾ
ಶೀತಲತೆ ನಿನ್ನ ಸ್ಪರ್ಶ
ಮಳೆಕಾಡ ಮುಂಗಾರಂತೆ
ಹನಿಬಿಡದ ನಿನ್ನ ಮಾತು
ನೀರವತೆಯ ರಾತ್ರಿಯನೇಕೆ ನುಂಗಿಹಾಕಿತು ?
ಹಗಲೆಂಬ ಹಾಳೆಯ ತುಂಬಾ ಮಸಿಯ ಚೆಲ್ಲಿತೊ

ನೋವುಗಳ ರಾತ್ರಿಯೆದುರು
ಬಾಹುಗಳ ಕೆಣಕೊ ನೆನಪು
ಬರಸೆಳೆಯೋ ಬೇಸರದೆದುರು
ಕಂಡಂತೆ ರಮಿಸೊ ಮುನಿಸು
ಓರೆ ನೋಟ, ಸಂಜ್ನೆಗಳಲ್ಲೂ ಮೌನ ಕಾಡಿತು.


ಹೇಳಲಾರದ ಮಾತು ಗೀತೆಯಾಯಿತು
ನಿನ್ನ, ಕೇಳಲಾಗದ ಮಾತು ಮೂಕವಾಯಿತು
ನೀನಿಲ್ಲದ ಬಾಳಿಂದು ಹೋಳಾಗಿ ಗೋಳಿಂದ
ಭಾವನೆಗಳ ಮರದೆಲೆಯುದುರಿ ಬೋಳಾಯಿತು.

ನಿನ್ನ ಬರವ ಬಾಳಿನಲ್ಲಿ
ಕಾದು ಕೂತ ಭೂಪ ನಾನು
ಹಗಲು ಇರುಳು ಕೆಲಸದಲ್ಲೂ
ಕನಸಿನಲ್ಲೂ ನೀನು ನಾನು
ಎಂಬ ಆಸೆ, ಭಾವಕ್ಕೆಲ್ಲಾ  ವಿಧಿಯು ಕಾಡಿತು
ಭಾರ್ಯೆಯಾಗೆ ಕಾದ ನಿನಗೆ ಸಾವು ನೀಡಿತು




Wednesday, April 24, 2013

ಕಳೆದುಹೋದ ಕವಿತೆ

ಎಲ್ಲಿ ಹೋಯಿತೋ ಕವಿತೆ,ಸಿಕ್ಕದಂತೆ
ಹೂವಿನಲ್ಲೆ, ನೋವಿನಲ್ಲೆ, ಸಾವಿನಲ್ಲೆ ?
ಜೀವ ಬೇಡೋ ಹೊತ್ತಾ ತುತ್ತಿನಲ್ಲೆ ?
ಕಳೆದುಹೋಯಿತೇ ಕವಿತೆ, ದಕ್ಕದಂತೆ..

ಒಲವಿರದ ಸಾಲುಗಳಿಂತ
ಬರವಿರದ ಅಕ್ಷರ ಲೇಸು
ಮನಸಿರದ ಮಾತುಗಳಿಂತ
ಇಂಕಿಲ್ಲದ ಲೇಖನಿ ಲೇಸು
ಶೂನ್ಯವನೇ ಮಾನ್ಯ ಮಾಡುತಾ
ಮೌನದಲ್ಲಿ ಸಾಥಿ ಹುಡುಕುತ
ತಾತ್ಸಾರದ ಸವಾರಿಯಲ್ಲಿ
ಗುರಿಯು ಎಲ್ಲಿ, ನೋವೇ ಇಲ್ಲಿ

ಮನವೇ, ಬರಸಿಡಿಲೇ ಇದು ?
ಕುಗ್ಗದಿರು.
ಉದುರೋ ಎಲೆ, ಹೊಸತನಕೆಂದೇ
ಬಿಕ್ಕದಿರು.
ಬರಲಿದೆ ವಸಂತ , ಶಿಶಿರವಲ್ಲವೋ
ಶಾಶ್ವತ
ಸಾಗಲಿ ನಿನ್ನಯ ಪಯಣವು ಹೀಗೇ
ಅನವರತ

Saturday, March 30, 2013

ಅಪ್ಪ

ಜಾತ್ರೆ ಮಧ್ಯೆ ಒಂಟಿ ಭಾವ
ನಿನ್ನ ನೆನದೇ ಕಾಡತಾವ
ಭಾರವಾಗಿ ನೀರ ಕಣ್ಣು
ನಡೆದು ಹಿಂದಿಂದೆ

ತೆನೆದೂಗೋ ಹೊಲದಲ್ಲಿ
ನಳನಳಿಸೋ ಸಸಿ ನಾನು
ಅಳಿಸಿಹೆಯಾ ಮರೆಯಾಗಿ
ಹೊಲವ ತಂದೆ

ಮಾತ ಕಾದೇ ಮೂಕನಾದೆ
ನೀನು ಲೋಕ ದಾಟಿ ಹೋಗೆ
ಬಯ್ಯಲಿದ್ದ ಎಲ್ಲಾ ಒಬ್ಬ
ವಿಧಿಗೆ ಬಲಿಯಾಗೆ

ಏನ ಅರ್ಪಿಸಲೋ ತಂದೆ
ಬಹಳ ಕಾಡುತಿವೆ, ನೆನಪು
ಅನು ದಿನ ನಿಂದೆ..,ಪ್ರತಿ
ಕಂಪನಾ ನಿಂದೆ

Monday, November 12, 2012

ದೀಪಾವಳಿಯ ಹಾರ್ದಿಕ ಶುಭಾಶಯಗಳು




ಹೆಚ್ಚೊ ಹರುಷದ ದ್ಯೋತಕವು
ಹಚ್ಚೊ ಹಲದೀಪ
ಬತ್ತಿಯಲಿ ಸುಡಲಿ
ದ್ವೇಷ, ಕೋಪ
ಸುಖ,ಶಾಂತಿ ಪಸರಿಸಲಿ
ಹೂ ಕುಂಡ, ಚಕ್ರಗಳು
ಪಟಾಕಿಗಳು ಮರೆಸಿ
ನೋವು, ಮರುಕ


ಕಟ್ಟ ಬನ್ನಿರಣ್ಣ,
ಆಗಸ ಹೂವ ಬುಟ್ಟಿಯನ್ನ
ಹಬ್ಬ ಬಂದಿಹುದು, ಸದ್ದೆ ಇಲ್ಲದೆ
ಎದ್ದು ಬನ್ನಿರಣ್ಣ,
ದೀಪವ ಹಚ್ಚ ಬನ್ನಿರಣ್ಣ
ತೋರಣ ಕಟ್ಟ ಬನ್ನಿರಣ್ಣ |೧|

ಗೋಗಳು ಕಾದಿವೆ ಪೂಜೆಯ ದಿನಕೆ
ಬಲೀಂದ್ರ ಬರಲೇ ಎಂದಿಹನು
ನರಕಾಸುರನನು ರಾಮ ಕೊಂದಿಹ

ಹಬ್ಬ ಬಂದಿಹುದು ಬಾಗಿಲಿಗೆ
ಎದ್ದು ಬನ್ನಿರಣ್ಣ, ತೋರಣ ಕಟ್ಟ ಬನ್ನಿರಣ್ಣ|೨|

ಏರಿದರೆಷ್ಟು ರೇಟು ಪಟಾಕಿ
ಕೊಂಡೇ ಕೊಳ್ಳುವ ಬಿಡದೆ ಗಿರಾಕಿ
ವಿಷ್ಣು ಚಕ್ರವೋ, ಹನುಮ ಬಾಲವೋ
ಸುರುಸುರು ಬತ್ತಿಯ ಸರಮಾಲೆ,
ಹೊಸ ಬಟ್ಟೆಯ ಗರಿ ಆರುವ ಮೊದಲೇ
ಆನಂದಿಸು ಬೆಳಕಿನ ಲೀಲೆ
ಆಗಸದಲ್ಲೇ ರಂಗವಲ್ಲಿಯ
ಬಿಡಿಸೋ ರಾಕೆಟ್ ಸುಡು ಮೊದಲೇ |೩



ಹಚ್ಚೋ ಪ್ರತೀದೀಪವೂ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆಲ್ಲಾ, ಹರ್ಷೋಲ್ಲಾಸ, ಆಯುಷ್ಯ, ಆರೋಗ್ಯವನ್ನು ತರಲಿ.
ಈ ದೀಪಾವಳಿಯು ಎಲ್ಲರ ನೋವು, ದುಃಖಗಳನ್ನು ಮರೆಸಿ ಹೊಸ ಜೀವನೋಲ್ಲಾಸವನ್ನು ತರಲೆಂಬ ಹಾರೈಕೆ

Saturday, November 3, 2012

ನೀರ ಮಾರಿ ನೀಲಮ

ಸಾವಿರಾರು ಜನರ ನಿದ್ರೆ/ಬದುಕು ನುಂಗಿದ ನೀಲಮನ ಕುರಿತೊಂದು ಪದ್ಯ..
ನೀರಲೇ ಜೀವನ, ನೀರಲೇ ಸಾವಿದು
ಬೀಸಿ ಬಂದ ಮೃತ್ಯು ನೀನು ನೀಲಮ
ಕಾಲನ ಕರೆಯಿದು, ಉಳಿಯದು ಜೀವವು
ಏರಿ ಬಂದ ಸಾವು ನೀನು ನೀಲಮ |೧

ರಚ್ಚೆ ಹಿಡಿದ ಮಗುವಿನಳುವೆ
ಬಿಡದೆ ಸುರಿವ ಮಳೆಯು
ತಂದು ರಸ್ತೆ ಮೇಲೆಲ್ಲಾ
ಮೋರಿ ಗಬ್ಬು ಕೊಳೆಯು |೨

ಕೆರೆಯಲ್ಲಿಹ ಬಡಾವಣೆ, ಹಾಹಾಕಾರ
ನುಂಗಿ ನಕ್ಕವರಿಂದಳು ಧಾರಾಕಾರ
ಫಸಲು ಭೂಮಿ ಸೈಟು ಎಂದ ನೀರಿಂಗುವ ಜಾಗವ
ಆಪೋಶನಕ್ಕೆಂದೆ ನೀಲಮನ ಅವತಾರ |೩

ಕಾಡೆಲ್ಲವ ಕಡಿದ ಮನೆಗೆ
ಮರಮುಟ್ಟುವ ಸುಟ್ಟು ಮಾರು
ಜಗವೆಲ್ಲವು ನಿಂದೆ ಎಂದು
ಬಿಡುವಿಲ್ಲದೆ ಸೊಕ್ಕಿ ಹಾರು
ತಿರುಗುತಿರುವ ಕಾಲ ಚಕ್ರ
ಬಂದಿಹಳು ನೀಲಮ,
ಬುದ್ದಿ ಕಲಿಸೆ ಮಾನವ |೪

ಧರೆಯ ಶೋಕ ನೋಡಲಾರ ,ಬೆಂಕಿಯುಗುಳಿ ಗಗನ
ಸಿಡಿಲು, ಗುಡುಗು ಸಾಲದೆಂದು ಇವಳ ತಂದ ಪವನ
ಇನ್ನಾದರು ಬುದ್ದಿ ಕಲಿ, ಇಲ್ಲ ಪ್ರಾಣ ಹರಣ
ಕಾಯುತಿಹಳು ಕೊಲ್ಲಲೆಂದು ನೀರ ಮಾರಿ ನೀಲಮ |೫