ಯಾಕೋ ಬೇಸರ. ಯಾಕೆ ? ಗೊತ್ತಿಲ್ಲ.
ಗೆಳೆಯರೆಲ್ಲಾ ಊರು ಸೇರಿ ನಾನೊಬ್ಬ ಇಲ್ಲುಳಿದಿದ್ದಕ್ಕಾ ? ಗೊತ್ತಿಲ್ಲ
ಗೊತ್ತು ಗುರಿಯಿಲ್ಲದ ಕುರಿಮಂದೆಯಂತಹ ಬಾಳಿಗಾ? ಗೊತ್ತಿಲ್ಲ
ಏನೋ ಸಾಧಿಸಬೇಕೆಂಬ ಹಟ. ಏನು ? ಗೊತ್ತಿಲ್ಲ
ಏನಾದರೂ ದೊಡ್ಡದು, ಯಾರೂ ಮಾಡಿರದಂತದು
ಆದರೆ ಮಾನವ ಮಾಡಬಹುದಾದದ್ದೆಲ್ಲವನ್ನೂ ಮಾಡಾಗಿದೆಯಲ್ಲಾ
ಏನಿಹುದು ಹೊಸದು, ಯಾರೂ ಮಾಡದಂತಹುದು ?
ನೂರಾರು ಕನಸುಗಳ ಮಧ್ಯೆ ನಿತ್ಯ ತಾಕಲಾಟ
ಅದೋ ಇದೋ, ಮತ್ಯಾವುದೋ ಎಂಬ ಹುಡುಕಾಟ
ನಾನಲ್ಲದು ನಾನಾಗಲು ಪ್ರಯತ್ನಿಸೋ ಬದಲು ನಾನೇ ನಾನಾಗಲು ಕಾದಾಟ
ನಾನ್ಯಾರು ? ನಾನೆಂಬುದು ಇಹುದೇ ?
ನಾನೆಂಬುದು ನನ್ನ ಅಪ್ಪ-ಅಮ್ಮಂದಿರ ಪಡಿಯಚ್ಚೇ ಅಲ್ಲವೇ ?
ಹುಟ್ಟಿನಿಂದ ಇಂದಿನವರೆಗೆ ಛಾಯೆಯಲ್ಲೇ ಬೆಳೆದಿದ್ದು
ಯಾವುದೋ ಮಿನುಗು ತಾರೆಯಿಂದ ಚಿಮ್ಮಿದ ಬೆಳಕೇ ನಮ್ಮ ಬಿಳುಪು
ಸ್ವಂತದ್ದೇನಿದೆ ಇಲ್ಲಿ ? ಬೀಗಲು ನಾನೆಂಬ ಹಮ್ಮು?
ಯಾಕೋ ಗೊತ್ತಿಲ್ಲ. ಕಂಡ ನೂರಾರು ಕನಸುಗಳು ಹೊತ್ತಿ ಉರಿದಂತೆ ಧಗೆ
ಜೀವನ ಪಯಣದಲ್ಲಿ ಕಳೆದ ನೂರಾರು ಗೆಳೆತನಗಳ ಬೇಗೆ
ಎಲ್ಲಾ ನಮ್ಮ ಜೊತೆಯೇ ಇರಲೆಂಬ ಬಯಕೆ ಸರಿಯೇ ? ಗೊತ್ತಿಲ್ಲ
ದೂರಾದರೂ ನೆನಪಾದರೂ ಉಳಿಯಲೆಂಬ ಭಾವವೂ ತಪ್ಪೇ ? ಗೊತ್ತಿಲ್ಲ
ನಾನು ನೆನಪಿಡುವ ಎಲ್ಲರಿಗೂ ನಾ ನೆನಪಿರಲೆಂಬ ಭಾವವೇ ಎಲ್ಲಕ್ಕೂ ಮೂಲವೇ ? ಗೊತ್ತಿಲ್ಲ
ಯಾಕೋ ಕಾಣೆ. ಮತ್ತೆ ಬೇಸರ
ಎಲ್ಲಾ ಊರು ಸೇರಲು ನಾನೊಬ್ಬ ಇಲ್ಲುಳಿಯಲೋ, ಗೊತ್ತಿಲ್ಲ
ಅಲ್ಪ ಓದಿನ ನಂತರ ಪರ ಊರ ಹುಡುಕಿ ಹೊಟ್ಟೆಪಾಡು
ಯಾಕೋ ಎಲ್ಲಾ ಇದ್ದೂ ಅನಾಥನಾದ ಭಾವ
ನಮ್ಮದಲ್ಲದ ನಾಡಿನಲ್ಲಿ ಮನಸ್ಸಿಲ್ಲದಿದ್ದರೂ ಬಿಡದ ಹೊಟ್ಟೆ
ಊರಲ್ಲಿ ನಮ್ಮನ್ನೇ ನಂಬಿರೋ ಜೀವಗಳು.
ಯಾರಾದರೂ ನಮ್ಮನ್ನೇ ನಂಬಿ ಇದ್ದಾರಾ ? ಗೊತ್ತಿಲ್ಲ
ಇಷ್ಟು ವರ್ಷ ಹೊರೆದ ಜನ್ಮದಾತರು ಈಗ ಇದ್ದಕ್ಕಿದ್ದಂತೆ ನಿತ್ರಾಣರಾದರಾ ?
ಎಂದೂ ಇಲ್ಲದ ಜವಾಬ್ದಾರಿಯ ಹೊರೆ ಈಗ ಇದ್ದಕ್ಕಿದ್ದಂತೆ ಹೆಗಲ ಮೇಲೆ ಕೂತದ್ದಾದರೂ ಹೇಗೆ ?
ಮಾಡಲಾಗದ ಕೆಲಸಗಳಿಗೆ, ನನಸಾಗದ ಕನಸುಗಳಿಗೆ ಈ ಹೊರೆಯ ನೆನಪ ನೆಪವೇ ? ಗೊತ್ತಿಲ್ಲ
ಹಾರೋ ಚಿಟ್ಟೆಯಾಗಿದ್ದ ಭಾವಗಳ ಕಟ್ಟಿಹಾಕಿದ್ದು ಯಾರು ? ಗೊತ್ತಿಲ್ಲ
ಮರೆಯಾದ ಗೆಳೆಯರೇ, ಬೆನ್ನುಬಿದ್ದ(?) ಜವಾಬ್ದಾರಿಗಳೇ, ಅಥವಾ ನಾವೇ ?
ಏನಿಲ್ಲವೆಂದುಕೊಂಡರೆ ಏನೂ ಇಲ್ಲದ ಸುಖೀ ಬಾಳು
ನೂರಾರು ಆಸೆಗಳ ಆಶಾಗೋಪುರ ಕಟ್ಟಿದರೆ ನಿತ್ಯ ಗೋಳು
ಪ್ರತಿದಿನವೂ ಕುಸಿಯೋ ಗೋಪುರದ ಕಲ್ಲುಗಳಿಗೆ ಕಾರಣ ?
ಸತ್ಯದ ಬುನಾದಿಯ ಬದಲು ಅತಿ ಬಲದ ಹಮ್ಮಿನ ಮೇಲೆ ಕಟ್ಟಿದ್ದೇ ? ಗೊತ್ತಿಲ್ಲ
ಕಾಣದ ನೂರು ಪ್ರಶ್ನೆಗಳಿಗೆ ಉತ್ತರ ಹುಡುಕೋ ಬದಲು
ಕಂಡ ಇಂದಿನ ಸತ್ಯಕ್ಕೆ ತಲೆಬಾಗುವುದೇ ಜೀವನವೇ ?
ಇಂದೊಂದೇ ಸತ್ಯವಾದರೇ ನಾಳೆಯ ಕನಸುಗಳ ಗತಿ ?
ಕನಸುಗಳೇ ಇಲ್ಲದ ಜೀವನವೊಂದು ಜೀವನವೇ ?
ಕನಸುಗಳು, ಭಾವಗಳು , ನಿರೀಕ್ಷೆಗಳು ತಪ್ಪಲ್ಲ
ಅವುಗಳಿಗಾಗಿ ಪಟ್ಟ ಶ್ರಮವೂ ತಪ್ಪಲ್ಲ
ಆದರವು ಈಡೇರದ ನೋವಿಗೆ ನಿತ್ಯ ಕೊರಗಾಟ ತಪ್ಪು
ನಾನೆಂಬ ಅಸ್ಮಿತೆಯ ಹುಡುಕಾಟದಲ್ಲಿ,
ನಾಳೆಯೆಂಬ ನಿರೀಕ್ಷೆಯಲ್ಲಿ ಇಂದೆಂಬ ವಾಸ್ತವದ ನಿರಾಕರಣೆ ತಪ್ಪು
ಉತ್ತರದ ಹುಡುಕಾಟವೇ ತಪ್ಪೇ? ಗೊತ್ತಿಲ್ಲ. ಸದ್ಯಕ್ಕಂತೂ ಶಾಂತಿ..
ನಾಳೆಯ ಕನಸುಗಳ ಗತಿ - ಯಾವುದೋ ಮಿನುಗು ತಾರೆಯಿಂದ ಚಿಮ್ಮಿದ ಬೆಳಕು.
ReplyDeleteಎಲ್ಲಾ ಊರು ಸೇರಲು ನಾನೊಬ್ಬ ಇಲ್ಲುಳಿಯಲೋ, ಗೊತ್ತಿಲ್ಲ, ಅದೇ ತಾಕಲಾಟ!
ತುಂಬಾ ಧನ್ಯವಾದಗಳು ಬದ್ರಿ ಭಾಯ್.. ಬ್ಲಾಗ್ ಬರಹಕ್ಕೆ ಯಾವ ಪ್ರತಿಕ್ರಿಯೆಯೂ ಸಿಗಲಿಲ್ಲವಲ್ಲಾ ಈ ಬಾರಿ ಎಂಬ ನಿರೀಕ್ಷೆಯಲ್ಲಿದ್ದೆ.. ಭರ್ಜರಿ ಪುರಸ್ಕಾರವನ್ನೇ ಹೊಚ್ಚಿದ್ದೀರಿ. ಮತ್ತೊಮ್ಮೆ ಧ.ವಾ :-)
Delete