ವಿದ್ಯಾರ್ಥಿಜೀವನದಲ್ಲಿ ಪಿಯುಸಿ ಒಂದು ಮಹತ್ವದ ಘಟ್ಟ. ವಿಜ್ನಾನ ವಿಭಾಗದವರು ಮೂಲವಿಜ್ನಾನಕ್ಕೋ ಅಥವಾ ಡಾಕ್ಟರೋ ಇಂಜಿನಿಯರೋ ಎಂಬ ಆಯ್ಕೆಯ ಕವಲು ದಾರಿಯಲ್ಲಿ ಬಂದು ನಿಂತ ದಿನಗಳು. ಕೆಲವರದು ಇದೇ ಆಗಬೇಕೆಂಬ ದೃಢ ನಿರ್ಧಾರವಿದ್ದರೆ, ಬಹುತೇಕರಿಗೆ ಎತ್ತ ಹೋಗಲೆಂಬ ಗೊಂದಲ. ಮನೆಯವರು, ನೆರೆಯವರ ನೂರೆಂಟು ಮಾತುಗಳ ಮಧ್ಯೆ ಯಾತಕ್ಕೂ ಇರಲಿ ಎಂದು ಸಿಇಟಿಯನ್ನು ಬರೆವವರೂ ಹಲವು ಮಂದಿ. ಪಿಯುಸಿ ಪರೀಕ್ಷೆಯ ಮತ್ತು ಸಿಇಟಿಯ ಫಲಿತಾಂಶ ಬರೋವರಿಗೆ ಯಾಕೋ ಸಿಕ್ಕಾಪಟ್ಟೆ ಟೆನ್ಶನ್ನು. ಬಂದ ಮೇಲೂ ತಮ್ಮ ರ್ಯಾಂಕಿಗೆ ಯಾವ ಕಾಲೇಜು ಸಿಗಬಹುದೆಂಬ, ಯಾವ ಕಾಲೇಜಿನ ಯಾವ ಬ್ರಾಂಚ್ ಚೆನ್ನಾಗಿದೆ ಎಂಬ ಹುಡುಕಾಟ. ಸಿಇಟಿ ಕೌನ್ಸಿಲಿಂಗಿನ ಸೀಟು ಪಡೆಯೋ ಕ್ಷಣದವರೆಗೂ ಈ ಹುಡುಕಾಟ, ಚಿಂತೆಗಳು ಇದ್ದಿದ್ದೇ. ತಮಗೆ ಒಳ್ಳೆ ಕಾಲೇಜು ಸಿಗತ್ತೆ ಬಿಡು ಎಂಬ ಭರವಸೆಯಿದ್ದರೂ ಸಿಗೋವರೆಗೆ ಏನೋ ಅಳುಕು. ಯಾವುದೋ ಒಂದು ಕಾಲೇಜು ಪಡೆದ ಮೇಲೆ ಸ್ವಲ್ಪ ನಿರಾಳ. ಇಷ್ಟಪಟ್ಟದ್ದು ಸಿಗದವರಿಗೆ ಕ್ಯಾಷುವಲ್ ವೆಕೆನ್ಸಿ ಸುತ್ತಿಗಾಗಿ ಕಾದು ಅಲ್ಲಿ ಮತ್ತೆ ಪ್ರಯತ್ನಿಸೋ ಆಸೆ. ಇವೆರಡರಲ್ಲೂ ತಮಗೆ ಬೇಕಾದ ಕಾಲೇಜಿನ ಬೇಕಾದ ಬ್ರಾಂಚ್ ಸಿಗದೆಂಬ ಲೆಕ್ಕಾಚಾರದ ಸ್ವಲ್ಪ ಸ್ಥಿತಿವಂತರ ಮಕ್ಕಳಾದರೆ ಕಾಮೆಡ್ ಕೆ ಅಥವಾ ಮ್ಯಾನೇಜ್ ಮೆಂಟ್ ಕೋಟಾದಿಂದ ಪ್ರವೇಶ. ಅಂತೂ ಹೇಗೂ ಕಾಲೇಜು ಪ್ರವೇಶ ಗಿಟ್ಟಿಸೋ ಹೊತ್ತಿಗೆ ಹಳ್ಳಿ ಕಡೆ ಹುಡುಗ/ಹುಡುಗಿರಿಗಲ್ಲದೇ ಅವರ ಪೋಷಕರಿಗೂ ಬೆಂಗಳೂರು ಯಾತ್ರೆ ಉಸ್ಸಪ್ಪಾ ಎನಿಸಿಬಿಡುತ್ತದೆ. ಸರಿ ಹೇಗೋ ಕಾಲೇಜಿಗೆ ಪ್ರವೇಶ ಗಿಟ್ಟಿಸಾಯ್ತು. ಮುಂದೆ ? ಅದೇ ನಮ್ಮ ಇಂದಿನ ಲೇಖನದ ವಿಷಯ.
ಕೌನ್ಸಿಲಿಂಗ್ ಮುಗಿದು ಕಾಲೇಜು ಶುರುವಾಗೋ ನಡುವೆ ಸುಮಾರು ಎರಡು ತಿಂಗಳ ಅಂತರ. ಸೀಟು ಸಿಕ್ಕಾಗ ಇದ್ದ ಟೆನ್ನನ್ನುಗಳೆಲ್ಲಾ ಮಾಯವಾಗಿ ಅದೇನೋ ಆನಂದ. ನೆಂಟರ ಮನೆಗಳಿಗೆ ಹೋಗೋದೋ, ಚೆನ್ನಾಗಿ ತಿಂದುಂಡು ಆಟ ಆಡೋದೋ, ಟ್ರಿಪ್ ಹೋಗೋದೋ.. ಹೀಗೆ ಸ್ವಲ್ಪ ಆರಾಮಾಗಿರಲು ಬಯಸುತ್ತಾರೆ ಸುಮಾರು ಜನ. ಪಿಯುಸಿಯಲ್ಲಿ ಓದಿನಲ್ಲೇ ಮುಳುಗಿದವರಿಗೆ ಇಂಜಿನಿಯರಿಂಗ್ ಶುರುವಾಗ್ತಿದ್ದಂಗೆ ಓದೋದು ಇದ್ದಿದ್ದೇ . ಹಾಗಾಗಿ ಈಗ ಆರಾಮಿದ್ದಷ್ಟು ಇದ್ದುಬಿಡೋಣ ಎಂಬೋದು ಅವರ ನಿಲುವು. ಒಂದು ಲೆಕ್ಕದಲ್ಲಿ ಅದು ಸರಿಯೂ ಹೌದು. ಇನ್ನು ಕೆಲವರಿಗೆ ಮೊದಲು ಒಂದೆರಡು ದಿನ ಏನೂ ಅನಿಸದಿದ್ದರೂ ಇಂಜಿನಿಯರಿಂಗ ಕ್ಲಾಸುಗಳು ಶುರುವಾಗೋ ನಡುವಿನ ಈ ಅಂತರದಲ್ಲಿ ಏನು ಮಾಡಬೇಕು , ಮಾಡಬಾರದೆಂಬ ಯೋಚನೆ ನಿಧಾನವಾಗಿ ಕಾಡೋಕೆ ಶುರು ಆಗತ್ತೆ. ಇಂಜಿನಿಯರಿಂಗಿನಲ್ಲಿ ಯಾವ ಬ್ರಾಂಚ್ ತಗೊಂಡರೂ ಮೊದಲೆರಡು ಸೆಮಿಸ್ಟರ್ ಎಲ್ಲರಿಗೂ ಒಂದೇ. ಫಿಸಿಕ್ಸ್ ಸೈಕಲ್, ಕೆಮಿಸ್ಟ್ರಿ ಸೈಕಲ್ ಎಂದು ಎರಡು ಭಾಗ. ಕೆಲವರಿಗೆ ಮೊದಲ ಸೆಮ್ಮಿನಲ್ಲಿ ಫಿಸಿಕ್ಸ್ ಸೈಕಲ್ ಶುರುವಾದ್ರೆ ಕೆಲವರಿಗೆ ಕೆಮೆಸ್ಟ್ರಿ ಸೈಕಲ್. ಮೊದಲ ಸೆಮ್ಮಾದ ನಂತರ ಮುಂಚೆ ಓದದ ಮತ್ತೊಂದು ಸೈಕಲ್ಲಿನ್ನೊಂದಿಗೆ ಬದಲಾವಣೆ. ಮತ್ತೆ ಮೊದಲ ನಾಲ್ಕು ಸೆಮಿಸ್ಟರ್ರಿನ್ನಲ್ಲೂ ಗಣಿತವೂ ಎಲ್ಲಾ ಬ್ರಾಂಚುಗಳಿಗೂ ಕಾಮನ್ನಾಗಿರೋ ವಿಷಯ. ಈಗ ಕೆಲವು ಕಾಲೆಜುಗಳಲ್ಲಿ ಫಸ್ಟು ಶಿಪ್ಟು, ಸೆಕೆಂಡ್ ಶಿಫ್ಟ ಅಂತ ತರಗತಿಗಳು ನಡೆಯುತ್ತಂತೆ.... ಹೀಗೆ ಕೆಲವಷ್ಟು ವಿಷಯಗಳನ್ನು ತಮ್ಮ ಸೀನಿಯರ್ಗಳಿಂದಲೋ , ನೆಂಟರಿಂದಲೋ ಕಲೆ ಹಾಕಿದ ಈ ಹುಡುಗರು ಆಗಲೇ ಅದರ ಕನಸು ಕಾಣತೊಡಗುತ್ತಾರೆ. ಪಿಯುಸಿ ವಿಜ್ನಾನ ವಿಭಾಗದಲ್ಲಿ ಕಂಪ್ಯೂಟರ್ ಬದಲು ಜೀವಶಾಸ್ತ್ರ, ಅರ್ಥಶಾಸ್ತ್ರವನ್ನು ಓದಿದ ವಿದ್ಯಾರ್ಥಿಗಳಿಗೆ "ಏ, ಇಂಜಿನಿಯರಿಂಗಲ್ಲಿ ಕಂಪ್ಯೂಟರ್ ಸಬ್ಜೆಕ್ಟುಗಳಿರುತ್ತೆ ಕಣೋ. ಹಾಗಾಗಿ ಪಿಯುಸಿಯಲ್ಲೆಂತೂ ಅದನ್ನೋದದ ನಿನಗೆ ಅದು ಕಷ್ಟವಾಗಿಬಿಡಬಹುದು " ಅಂತ ಹೆದರಿಸೋರೂ ಸಿಕ್ಕಬಹುದು. ಈ ಕಷ್ಟ ತಪ್ಪಿಸಿಕೊಳ್ಳೋ ಮುಂಜಾಗ್ರತೆ ಕ್ರಮವಾಗಿ ಬೇಸಿಕ್, ಸಿ ಪ್ರೋಗ್ರಾಮಿಂಗ್ ಹೀಗೆ ಕಂಪ್ಯೂಟರ್ ಕ್ಲಾಸಿಗೆ ಸೇರಿ ರಜೆಯ ಸದುಪಯೋಗ ಮಾಡ್ಕೊಳ್ಳೋಣ ಎನ್ನೋ ವಿದ್ಯಾರ್ಥಿಗಳಿದ್ದಂತೆಯೇ ಇಂಗ್ಲೀಷೆಂದರೆ ಸ್ವಲ್ಪ ಅಳುಕಿನ ಹಳ್ಳಿ ಭಾಗದ ವಿದ್ಯಾರ್ಥಿಗಳು ಸ್ಪೋಕನ್ ಇಂಗ್ಲೀಷ್ ಕ್ಲಾಸಿಗೆ ಸೇರೋದೂ ಉಂಟು.ಈ ಎಲ್ಲಾ ಕ್ಲಾಸುಗಳು ಇಂಜಿನರಿಂಗಿಗೆ ಎಷ್ಟರಮಟ್ಟಿಗೆ ಸಹಕಾರಿ ಎಂಬುದು ಬೇರೆ ಮಾತು ಬಿಡಿ.
ಸರಿ, ಅಂತೂ ರಜೆಯ ನಂತರ ಕಾಲೇಜಿನ ಆರಂಭ. ಇಂಜಿನಿಯರಿಂಗ್ ಜೀವನದ ಮೊದಲ ದಿನ.ಕಾಲೇಜಲ್ಲೊಂದು ಸಮಾರಂಭ. ಪೋಷಕರನ್ನೂ, ವಿದ್ಯಾರ್ಥಿಗಳನ್ನೂ ಒಂದು ಕಡೆ ಕುಳ್ಳಿರಿಸಿ ಕಾಲೇಜಿನ ಪ್ರಾಂಶುಪಾಲರಿಂದ , ಕಾಲೇಜುಸಮಿತಿಯವರ ತನಕ ಎಲ್ಲರ ಭಾಷಣ. ತಮ್ಮ ಕಾಲೇಜಲ್ಲಿ ಓದಿದವರಿಗೆ ಇಂತಿಂತ ವರ್ಷ ಇಂತಿಷ್ಟು ಕೆಲಸ(ಕ್ಯಾಂಪಸ್ ಇಂಟರ್ವ್ಯೂ) ಆಯಿತು, ತಮ್ಮ ಕಾಲೇಜವರು ಇಂತಿಂತ ರಾಜ್ಯ, ರಾಷ್ಟ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.. ಹಾಗೆ ಹೀಗೆ ಎಂಬ ವಿವರಣೆ. ಅಲ್ಲೇ ಪಕ್ಕದಲ್ಲಿ ಶಿಕ್ಷಣ ಸಾಲ ಕೊಡಲು ಬಂದು ಸ್ಟಾಲು ಹಾಕಿರೋ ಬ್ಯಾಂಕುಗಳು, ಝಗಮಗಿಸೋ ಬಸ್ಸುಗಳು , ಸುಸಜ್ಜಿತ ಲೈಬ್ರರಿ.. ಹೀಗೆ ಎಲ್ಲಾ ಫಳಫಳ. ಕೊನೆಗೆ ಆಯಾ ಬ್ರಾಂಚಿಗೆ ಸೇರಿದವರನ್ನು ಬ್ರಾಂಚನ್ನು ತೋರಿಸಲು, ಕಾಲೇಜಿನ ಸುತ್ತೊಂದು ರೌಂಡು ಎಂದು ಕರೆದೊಯ್ಯಲಾಗುತ್ತದೆ. ಇಂಜಿನಿಯರಿಂಗ್ ಕಾಲೇಜಿನ ದೊಡ್ಡ ದೊಡ್ಡ ಬಿಲ್ಡಿಂಗುಗಳನ್ನು, ಲ್ಯಾಬುಗಳನ್ನೂ, ಗ್ರಂಥಾಲಯ, ಕ್ಲಾಸ್ ರೂಂ, ಜಿಮ್, ಮೈದಾನಗಳನ್ನು ಮೊದಲ ಸಲ ನೊಡಿದಾಗ.. ವಾ,, ಕಾಲೇಜೆಂದರೆ ಹೀಗಿರಬೇಕು ಅನಿಸಿಬಿಡತ್ತೆ. ಮಕ್ಕಳೊಂದಿಗೆ ಕಾಲೇಜಿಗೆ ಬಂದ ಪೋಷಕರಲ್ಲನೇಕರಿಗೆ ಕಣ್ಣಂಚಿನಲ್ಲಿ ನೀರು. ತಮ್ಮ ಮಗ/ಮಗಳು ಜೀವನದಲ್ಲಿ ಒಂದು ದಾರಿಗೆ ಬರುತ್ತಾರೆಂಬ ಭರವಸೆ ಕೆಲವರಿಗಾದರೆ ತಮಗಾಗದ್ದನ್ನು ,ಕೆಲವರಿಗೆ ತಮ್ಮಿಂದಾಗದ ತಮ್ಮ ಕನಸನ್ನು ತಮ್ಮ ಮಕ್ಕಳಾದರೂ ಈಡೇರಿಸೋ ಹಂತಕ್ಕೆ ಬಂದರೆಂಬ ಆನಂದ ಭಾಷ್ಪ.
ಮೊದಲ ದಿನದಲ್ಲಿ ಕಾಲೇಜು ದರ್ಶನ ಆಯ್ತು. ಯಾವ ಬ್ರಾಂಚಿಗೆ, ಯಾವ ಕ್ಲಾಸು ರೂಮೆಂದು ತಿಳಿದೂ ಆಯ್ತು. ಸರಿ, ಮಾರನೇ ದಿನದಿಂದ ಕಾಲೇಜು ಶುರು. ಕಾಲೇಜು ಅಥವಾ ಅಲ್ಲೇ ಸಮೀಪದ ಇನ್ಯಾವದೋ ಹಾಸ್ಟೆಲ್ಲಿಗೆ ಸೇರಿದವರಾದರೆ ಅಲ್ಲಿ ಲಗೇಜು ಬಿಚ್ಚೋದ್ರಲ್ಲಿ ನೆಂಟರ ಮನೆಯಲ್ಲಿ ಇದ್ದು ಓದೋ ಪ್ಲಾನಿರೋರಿಗೆ ಅಲ್ಲಿನ ಕುಶಲ ಸಮಾಲೋಚನೆಯಲ್ಲಿ ದಿನ ಕಳೆದೇ ಹೋಗುತ್ತೆ. ಸರಿ. ಮಾರನೇ ದಿನ ಬೆಳಗಾಯ್ತು. ಕಾಲೇಜಿಗೆ ಹೋಗೋದು ಹೇಗೆ ? ಸುಮಾರಷ್ಟು ಕಾಲೇಜುಗಳಲ್ಲಿ ಕಾಲೇಜು ಬಸ್ಸಿನ ಫೀಜನ್ನೂ ಸೇರಿಸಿ ಫೀಜು ಕಟ್ಟಿಸಿಕೊಳ್ಳುತ್ತಾರೆ. ಹಾಗಾಗಿ ಯಾವ್ಯಾವ ಏರಿಯಾಗಳಿಗೆ ಯಾವ ಹೆಸರಿನ /ನಂಬರಿನ ಬಸ್ಸು ಎಷ್ಟೆಟ್ಟು ಹೊತ್ತಿಗೆ ಬರುತ್ತೆ? ಎಲ್ಲೆಲ್ಲಿ ಸ್ಟಾಪು ಎಂಬ ಮಾಹಿತಿಯನ್ನೂ ಮೊದಲ ದಿನವೇ ಕೊಟ್ಟಿರುತ್ತಾರೆ. ಅದರ ಪ್ರಕಾರ ಬಸ್ಸು ಹತ್ತಿ ಕಾಲೇಜಿನಲ್ಲಿ ತಮ್ಮ ಕ್ಲಾಸು ರೂಂ ಹುಡುಕಿ ಅಲ್ಲೊಂದು ಬೆಂಚು ಹಿಡಿಯೋದ್ರಲ್ಲೇ ಕೆಲವರು ಪರಿಚಯವಾಗಿರ್ತಾರೆ. ನಿಧಾನವಾಗಿ ಪರಿಚಯ ಸ್ನೇಹವಾಗಿ ಬದಲಾಗುತ್ತೆ.
ಎರಡನೇ ದಿನವೇ ಎಲ್ಲ ತರಗತಿಗಳು ಇಲ್ಲದಿದ್ದರೂ ನಿಧಾನವಾಗಿ ಎಲ್ಲಾ ಕ್ಲಾಸುಗಳು, ಲ್ಯಾಬುಗಳು ಶುರುವಾಗುತ್ತೆ. ಕೆಮೆಸ್ಟಿ/ ಫಿಸಿಕ್ಸ್ ಲ್ಯಾಬುಗಳಿಗೆ ಮೆಕಾನಿಕಲ್ ವರ್ಕ ಶಾಫಿಗೆ ಪ್ರತ್ಯೇಕ ಯೂನಿಫಾರಂ. ಆ ಲ್ಯಾಬುಗಳಲ್ಲಿ ಏನಾದ್ರೂ ಕೆಮಿಕಲ್ ಚೆಲ್ಲಿಕೊಂಡರೆ , ಲೈಟಾಗಿ ಶಾಕ್ ಹೊಡೆಸಿಕೊಂಡರೂ ಏನೂ ಆಗದಂತೆ ಕಾಲಿಗೆ ಶೂಗಳು. ಕಾಲೇಜಿನ ಬ್ಯಾಗು, ಐಡಿ, ಈ ಬಟ್ಟೆಗಳನ್ನು ಪಡೆದು ಅದನ್ನು ಹೊಲೆಸೋದೇ ಒಂದು ಸಂಭ್ರಮ. ಬೇರೆ ದಿನ ಎಲ್ಲಾ ಹೇಗೇ ಬಂದರೂ ಲ್ಯಾಬುಗಳಿದ್ದ ದಿನ ಮಾತ್ರ ಕ್ಲಾಸಲ್ಲಿ ಏನೂ ಒಂದು ಸಮಾನತೆಯ ಭಾವ. ಎಲ್ಲೆಲ್ಲೂ ಒಂದೇ ಬಣ್ಣ. ಕಾಲೇಜು ಕ್ಯಾಂಟೀನು, ಲೈಬ್ರರಿಯಲ್ಲಿ ಪುಸ್ತಕ ಪಡೆಯೋದು.. ಯಾವ ಮೂಲೆಯಲ್ಲಿ ಏನಿದೆ ಅಂತ ತಿಳಿಯೋದ್ರಲ್ಲಿ ತಮ್ಮೂರಿನ ಗೆಳೆಯರು ಯಾರಾದ್ರೂ ಇದಾರಾ ಈ ಕಾಲೇಜಲ್ಲಿ ಅಂತ ತಿಳಿಯೋದ್ರಲ್ಲಿ.. ತಮ್ಮ ಜೊತೆಯೇ ಬಸ್ಸಿಗೆ ಬರೋ ಬೇರೆ ಬೇರೆ ಬ್ರಾಂಚಿನ ಹುಡುಗ/ಹುಡುಗಿಯರ ಹೆಸರು ತಿಳಿಯೋದ್ರಲ್ಲಿ.. ಹಾಸ್ಟೆಲ್ಲಲ್ಲಿರೋರಿಗೆ ತಮ್ಮ ಸುತ್ತಮುತ್ತಲ ರೂಂಗಳವರ ಪರಿಚಯವಾಗೋದ್ರಲ್ಲೇ ಒಂದು ವಾರ ಕಳೆದುಹೋಗತ್ತೆ. ಹಾಸ್ಟೆಲ್ಲಲ್ಲಿದ್ದೋರಿಗೆ ಕಾಲೇಜ್ ಹಾಸ್ಟೆಲ್ ಹೇಗಿರುತ್ತೋ, ಇಂಜಿನಿಯರ್ ಸೀನಿಯರ್ಸ್ ಹೇಗೇಗೆ ರ್ಯಾಗ್ ಮಾಡ್ತಾರೋ ಎಂಬ ಸಣ್ಣ ಭಯವೂ ಇರ್ಬೋದು ಶುರುವಿನಲ್ಲಿ. ಆದರೆ ಸುಮಾರಷ್ಟು ಕಾಲೇಜುಗಳಲ್ಲಿ ಮೊದಲ ವರ್ಷದವರಿಗೇ ಬೇರೆ ಹಾಸ್ಟೆಲ್ ಕೊಡೋದು, ಆಂಟಿ ರ್ಯಾಗಿಂಗ್ ದಳ ರಚಿಸೋದು.. ಇನ್ನಿತರ ಕ್ರಮ ಕೈಗೊಂಡಿರೋದ್ರಿಂದ ರ್ಯಾಗಿಂಗ್ ಭಯ ಕಮ್ಮಿ ಆಗಿದೆ. ಆದರೂ ತಮ್ಮ ಮನಸ್ಥಿತಿಯಿಂದ ಹೊರಬಂದು ಸೀನಿಯರ್ಗಳು ವೈರಿಗಳಲ್ಲ, ತಮ್ಮ ಸ್ನೇಹಿತರೇ ಎಂಬಷ್ಟು ಪರಿಚಯವಾಗೋದ್ರಲ್ಲಿ ವಾರಗಳು ಕಳೆಯುತ್ತೆ.
ಹಿಂಗೇ ನಿಧಾನವಾಗಿ ಕ್ಲಾಸುಗಳು ಶುರುವಾಗ್ತಿದ್ದಂಗೆ.. ಅಸೈನುಮೆಂಟುಗಳು, ಲ್ಯಾಬ್ ರೆಕಾರ್ಡುಗಳೂ ಶುರುವಾಗತ್ತೆ. ಓದಿ ಓದಿ ಬೇಜಾರಾಗಿದ್ದಕ್ಕೋ ಏನೋ ಕೆಲವರಿಗೆ ನಿಧಾನವಾಗಿ ಆಲಸ್ಯ ಶುರುವಾಗತ್ತೆ. ಏ, ಆ ಬ್ರಾಂಚಾ, ಆರಾಮಾಗಿ ಆಟ ಆಡಿಕೊಂಡು ಪಾಸು ಮಾಡ್ಬೋದು ಬಿಡು ಎಂಬ ನೆಂಟರ, ಇನ್ಯಾರದೋ ಮಾತುಗಳು ಇವರ ತಲೆ ಹೊಕ್ಕೋಕೆ ಶುರು ಆಗತ್ತೆ. ಇಂಜಿನಿಯರಿಂಗಿನ ಮೊದಲ ವಾರದ ಆರಾಮಿನಂತೆಯೇ ಇಡೀ ಇಂಜಿನಿಯರಿಂಗ್ ಇರುತ್ತೆ ಅನ್ನೋ ಭ್ರಮೆ ಆವರಿಸಿಬಿಡುತ್ತೆ. ಹೀಗೇ ಆರಾಮದಲ್ಲಿ ದಿನ ಕಳೆಯುತ್ತಿರುವಾಗಲೇ ಅಸೈನ್ಮೆಂಟು ಸಬ್ಮಿಟ್ ಮಾಡೋಕೆ ಕೊನೆ ದಿನ ಬಂದು ಬಿಟ್ಟಿರುತ್ತೆ. ಆ ರಾತ್ರೆ , ಮಾರನೇ ದಿನ ಬೆಳಗ್ಗೆಯೂ ಎದ್ದೂ ಬಿದ್ದು, ಯಾರು ಅಸೈನ್ ಮೆಂಟು ಮಾಡಿದ್ದಾರೆ ಎಂದು ಪತ್ತೆ ಮಾಡಿ ಅವರದ್ದನ್ನು ಕಾಪಿ ಮಾಡಿ ಸಬ್ಮಿಟ್ಟು ಮಾಡಿ ಉಸ್ಸಪ್ಪಾ ಅನ್ನೋ ಹೊತ್ತಿಗೆ ಮತ್ಯಾವುದೋ ಸಬ್ಜೆಕ್ಟಿನ ಅಸೈನ್ಮೆಂಟು ! ಕೆಲವರು ವಿಧೇಯ ವಿದ್ಯಾರ್ಥಿಗಳಂತೆ ಎಲ್ಲವನ್ನೂ ಅಂದಂದೇ ಮಾಡಿ ಮುಗಿಸಿದರೆ ಕೆಲವರು ಡೆಡ್ ಲೈನ್ ವೀರರಾಗೋಕೆ ಶುರು ಮಾಡ್ತಾರೆ. ಎದ್ದೂ ಬಿದ್ದೂ ಅಂತೂ ಅಸೈನ್ ಮೆಂಟ್ ಸಬ್ಮಿಟ್ ಮಾಡೋದೆ ಇವರ ಕೆಲಸ. ಈ ಅಸೈನ್ಮೆಂಟುಗಳನ್ನ ಒದ್ದಾಡಿ ಮಾಡೋದಕ್ಕೂ ಒಂದು ಕಾರಣ ಇದೆ. ನೀಟಾಗಿ ಅಸೈನ್ ಮೆಂಟ್ ಮಾಡಿದ್ರೆ ಮುಂದೆ ಬರೋ ಕಿರುಪರೀಕ್ಷೆ(ಇಂಟರ್ನಲ್ಲುಗಳಲ್ಲಿ) ಒಳ್ಳೇ ಅಂಕ ಸಿಗಬಹುದು. ಸಿಗದಿದ್ದರೂ ಚೂರೋ ಪಾರೋ ಅಂಕಕ್ಕಾಗಿ ಲೆಕ್ಚರತ್ರ ಕೇಳೋ ಮುಖ ಉಳಿದಿರುತ್ತೆ ಅನ್ನೋದು ತೀರಾ ಓಪನ್ ಸೀಕ್ರೆಟ್. ಮತ್ತೆ ಮೊದಲ ಸೆಮ್ಮಿನಲ್ಲೇ ಲೆಕ್ಚರ್ಗಳನ್ನ ಎದುರು ಹಾಕಿಕೊಳ್ಳೋದು ಯಾಕೆ, ಎಲ್ಲರ ದೃಷ್ಟೀಲೂ ಸ್ವಲ್ಪ ಒಳ್ಳೆಯವರಾಗಿರೋಣ ಅನ್ನೋ ಭಾವವೂ ಇರುತ್ತೆ.
ಹಿಂಗೇ ಒಂದೂವರೆ ತಿಂಗ್ಳಾಗ್ತಿದ್ದಂಗೆ ಮೊದಲ ಇಂಟರ್ನಲ್ಲು. ಮೊದಲ ಇಂಟರ್ನಲ್ಲಿಗೆ ತಯಾರಿಯೋ ತಯಾರಿ. ಒಂದು ವಾರದ ಮುಂಚೆಯೇ ಇಂತಿಂಥ ಯೂನಿಟ್ಗಳು ಇಂಟರ್ನಲ್ಲಿಗೆ ಇವೆ ಎಂದು ಹೇಳೋ ಲೆಕ್ಚರರ್ರು ಕೆಲವರಾದರೆ ಕೆಲವರು ಕೊನೆಯ ದಿನದ ತನಕ ಹೇಳೊಲ್ಲ ! ತಮ್ಮ ಕೊನೆಯ ತರಗತಿಯ ತನಕ ಏನು ಮಾಡ್ತೀನೋ ಅದನ್ನೆಲ್ಲಾ ಕೊಡ್ತೀನಿ ಅಂತ ಅವರು. ಯಾರು ಏನಂದ್ರೂ ಬದಲಾಗೋಲ್ಲ ಅವರು. ವಿದ್ಯಾರ್ಥಿಗಳು ಇಂಟರ್ನಲ್ಲಿಗೆ ಈ ಯೂನಿಟ್ಗಳು ಅಂತ ಗೊತ್ತಾದ್ರೆ ಇಂಟರ್ನಲ್ಲಿಗೆ ಮೂರ್ನಾಲ್ಕು ದಿನ ಮುಂಚಿಂದಲೇ ಓದೋಕೆ ಅಂತ ಬಂಕ್ ಹಾಕ್ತಾರೆ. ಸರಿಯಾಗಿ ಕಾಲೇಜಿಗೆ ಬರೋಲ್ಲ. ಹೇಗಿದ್ರೂ ಕೊನೆಗೆ ಬಂಕ್ ಹಾಕಿ ಓದ್ಬೋದು ಅಂತ ಕಾಲೇಜಿಗೆ ಬಂದಾಗ್ಲೂ ನೆಟ್ಟಗೆ ಪಾಟ ಕೇಳೋಲ್ಲ ಅಂತ ಅವರ ನಿಲುವು. ಕೆಲವೊಂದು ಸಲ ಇದು ಸ್ವಲ್ಪ ಅತಿ ಅನ್ಸಿದ್ರೂ ಅವರವರ ದೃಷ್ಟಿಯಲ್ಲಿ ಅವರು ಸರಿಯೆ. ಕೆಲವೊಂದು ಕಾಲೇಜುಗಳಲ್ಲಿ ಇಂಟರ್ನಲ್ಲಿಗೆ ಬದಲು ಸರ್ ಪ್ರೈಸ್ ಟೆಸ್ಟುಗಳು! ಕ್ಲಾಸಿಗೆ ಇದ್ದಕ್ಕಿದ್ದಂಗೆ ಬಂದು ಇವತ್ತು ಈ ವಿಷಯದ ಟೆಸ್ಟು. ಬರೀರಿ ಅಂತ ಪ್ರಶ್ನೆಗಳ್ನ ಕೊಟ್ಟುಬಿಡೋದು!! ಯಾವತ್ತು ಯಾವ ವಿಷಯದ ಟೆಸ್ಟು ಕೊಡ್ತಾರೋ ಯಾರಿಗೂ ಗೊತ್ತಾಗಲ್ಲ. ವಿದ್ಯಾರ್ಥಿಗಳು ಅಂದಂದಿನ ಪಾಠ ಅಂದೇ ಓದ್ಲಿ ಅನ್ನೋ ಆಸೆಯಂತೆ ಅದು !! ವಿ.ಟಿ.ಯು ವಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇದು ಅಷ್ಟಾಗಿ ಇಲ್ಲದಿದ್ದರೂ ಅಟಾನಮಸ್ ಕಾಲೇಜುಗಳಲ್ಲಿ ಕೆಲವೆಡೆ ಇದೆ.
ಇನ್ನು ಇಂಟರ್ನಲ್ ಬಂತಂದ್ರೆ ಆ ಸಮಯದಲ್ಲಿ ನೊಡ್ಬೇಕು. ಗಡ್ಡ ಮಾಡ್ಕೊಳೋಕೂ ಸಮಯವಿಲ್ಲದಷ್ಟು ಓದಿನಲ್ಲಿ ತಲ್ಲೀನರಾದ ಎಲ್ಲೆಲ್ಲೂ ಕಾಣಬರೋ ದೇವದಾಸರು, ರಾತ್ರಿಯೆಲ್ಲಾ ನೈಟ್ ಔಟ್ ಮಾಡಿದ್ದಾನೆ ಅನ್ನೋದ್ನ ಯಾರಿಂದಲೂ ಮುಚ್ಚಿಡದ ಕಣ್ಣುಗಳು, ಬಸ್ಸಲ್ಲಾದರೂ ಓಕೆ, ನಿಂತಲ್ಲಾದರೂ ಓಕೆ ಅಂತ ಓದುತ್ತಾ ಕ್ಯಾಂಟೀನಿಗೆ ಹೋಗುತ್ತಲೂ ಪುಸ್ತಕ ಹಿಡಿದುಕೊಂಡು ಓದುತ್ತಾ ಹೋಗೋರು, ಅಲ್ಲಿ ತಿನ್ನುತ್ತಲೂ ಪುಸ್ತಕ ಹಿಡಿದೇ ತಿನ್ನೋರು.. ಹೀಗೆ ಭಯಂಕರ ದೃಶ್ಯಾವಳಿಗಳು ಕಾಣುತ್ತೆ..ಇಂಟರ್ನಲ್ಲಿನ ಬೆಲ್ಲು ಹೊಡಿಯೋವರೆಗೋ ಓದಿದ್ದೇ ಓದಿದ್ದು. ಈ ಪರಿ ಓದ್ತಾರಾ ಹುಡುಗ್ರು ಅಂತನಿಸಿಬಿಡ್ಬೇಕು ಮೊದಲ ಸಲ ನೋಡೋರಿಗೆ !! ಸ್ವಲ್ಪ ತಾಳಿ. ಇವೆಲ್ಲಾ ಬರಿ ಇಂಟರ್ನಲ್ಲು ಎಕ್ಸಾಮುಗಳಲ್ಲಿ ಮಾತ್ರ. ಬೇರೆ ಟೈಮಲ್ಲಿ ಅದೇ ಬೈಕಲ್ಲಿ ಸುತ್ತೋರು, ಕಾಲೇಜು ಲಾನಲ್ಲಿ , ಕ್ಲಾಸಲ್ಲಿ , ಬಸ್ ಷೆಲ್ಟರಲ್ಲಿ ಹರಟೋರು, ಕ್ಯಾಂಟೀನು, ಬ್ರೌಸಿಂಗ್ ಸೆಂಟರಿನ ಕಾಯಂ ಅತಿಥಿಗಳು, ಹಾಸ್ಟೆಲ್ ಬೆಡ್ಡಿರೋದೇ ಹಗಲು ಮಲಗೋಕೆ ಅಂತಾ ದಿನಾ ಲೇಟಾಗೆದ್ದು ಬರೋ ಲೇಟ್ ಲತೀಫರು.. ಹೀಗೆ ಮತ್ತೆ ಹಳೆ ದೃಶ್ಯಗಳೇ ವಾಪಾಸ್...
ಮೊದಲ ಇಂಟರ್ನಲ್ಲ್ ಮುಗಿಯೋ ಹೊತ್ತಿಗೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಧಾನವಾಗಿ ಶುರುವಾಗತ್ತೆ. ಸಾಂಸ್ಕೃತಿಕ ಸಂಘ, ಮ್ಯೂಸಿಕ್ ಕ್ಲಬ್, ಎನ್ ಎಸ್ಸೆಸ್ಸು, ಇಂಜಿನಿಯರ್ಗಳ ಸಂಘ, ಬ್ರಾಂಚಿನ ಫಂಕ್ಷನ್ಗಳು ಹೀಗೆ ಕಾರ್ಯಕ್ರಮಗಳು ನಡೀತಿರುತ್ತೆ. ನಿಧಾನವಾಗಿ ಅಂತರ ಕಾಲೇಜು ಕಾರ್ಯಕ್ರಮಗಳೂ ಶುರುವಾಗುತ್ತೆ. ಅಲ್ಲಿ, ಇಲ್ಲಿ ಅಂತ ಬ್ಯಾಲೆನ್ಸ್ ಮಾಡೋದೇ ಇಂಜಿನಿಯರಿಂಗಿನ ಮಜ. ವಿ.ಟಿ.ಯು.ವಿನ ಪರೀಕ್ಷೆಗಳ ಬಗ್ಗೆ ಬರೀತಾ ಹೋದ್ರೆ ಅದೇ ಒಂದು ದೊಡ್ಡ ಕತೆಯಾಗುತ್ತೆ. ಆ ಕತೆ ಸದ್ಯಕ್ಕೆ ಬೇಡ ಬಿಡಿ.. ಇಂಜಿನಿಯರಿಂಗಿನ ಮೋಜು, ಮಸ್ತಿಗಳು, ಖುಷಿ ಇರೋದೆ ಆ ನಾಲ್ಕು ವರ್ಷಗಳ ಸ್ನೇಹದಲ್ಲಿ. ಹೈಸ್ಕೂಲು, ಪಿಯುಸಿ .. ಹೀಗೆ ಎಲ್ಲೂ ನಾಲ್ಕು ವರ್ಷಕಾಲ ಒಟ್ಟಿಗಿರಲ್ಲ. ಹಾಗಾಗಿ ನಾಲ್ಕು ವರ್ಷ ನೈಟೌಟೂ, ಕ್ಲಾಸ್ ಟ್ರಿಪ್ಪು, ಬ್ರಾಂಚ್ ಫಂಕ್ಷನ್ನು, ಕಂಬೈನ್ಡ್ ಸ್ಟಡಿ, ಇನ್ಯಾವುದೋ ಫಂಕ್ಷನ್ನು, ಚಾಟಿಂಗು... ಹೀಗೆ ಹುಟ್ಟಿ, ಗಟ್ಟಿಗೊಳ್ಳೋ ಆ ಸ್ನೇಹದ ಬಂಧ ಇದ್ಯಲ್ಲ.. ಅದರ ನೆನಪುಗಳೇ ಮಧುರ. ಒಳ್ಳೆಯ ಗೆಳೆಯರ ಗುಂಪು ಕಟ್ಟಿಕೋಬೇಕು ಅಷ್ಟೇ..ಸಹವಾಸದೋಷದಿಂದ ಇಂಜಿನಿಯರಿಂಗ್ ಮುಗಿಸೋ ಹೊತ್ತಿಗೆ ಇಲ್ಲದ ಎಲ್ಲಾ ಹವ್ಯಾಸಗಳನ್ನು ಹಚ್ಚಿಕೊಂಡು ಇಂಜಿನಿಯರಿಂಗ್ ಓದೋ ಹುಡುಗ್ರು ಅಂದ್ರೆ ಸಮಾಜದಲ್ಲಿ ಅಸಹ್ಯದ ಭಾವನೆ ಮೂಡಿಸುವಂತಾಗಬಾರದು. ಸಮಾಜಕ್ಕೆ ಏನಾದ್ರೂ ಕೊಡುಗೆ ನೀಡೋ ಮಟ್ಟಿಗೆ ನಾಲ್ಕು ವರ್ಷದಲ್ಲಿ ತಯಾರಾಗೋ ವಿದ್ಯಾರ್ಥಿಗಳಿದ್ದಂತೆಯೇ ನಮ್ಮ ಜೀವನ ನಮ್ಮ ಕೈಯಲ್ಲೇ ಇದೆ ಅಂತ ತೀರಾ ನಿರ್ಲಕ್ಷ್ಯ ಮಾಡಿ ವಿ,ಟಿಯು ಪರೀಕ್ಷೆಗಳಲ್ಲಿ ದಯನೀಯವಾಗಿ ವೈಫಲ್ಯ ಕಾಣುವವರೂ ಇದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಸಿಗೋ ಅವಕಾಶಗಳನ್ನು ಬಾಚಿಕೊಳ್ಳತ್ತಾ ಎಲ್ಲ ಕ್ಷೇತ್ರಗಳಲ್ಲೂ ಮಿಂಚುವಂತಹ ಆತ್ಮವಿಶ್ವಾಸದ ಆಲ್ ರೌಂಡರೂ ಆಗಬಹುದು, ಎಲ್ಲೂ ಸಲ್ಲದ ಬೆಪ್ಪನೂ ಆಗಬಹುದು. ಏನಾಗಬೇಕೆಂಬ ವಿದ್ಯಾರ್ಥಿಯ ನಿರ್ಧಾರ, ಪ್ರಯತ್ನಗಳ ಮೇಲೆ , ಅವನ ಗೆಳೆಯರ ಬಳಗದ ಮೇಲೆ ಇಂಜಿನಿಯರಿಂಗ್ ಎಂಬ ಜೀವನದ ಘಟ್ಟದ ಕೊನೆ ನಿರ್ಧರಿತವಾಗುತ್ತದಷ್ಟೆ.
ಕಾಲೇಜು ದಿನಗಳೇ ನೆನಪಾದವು.
ReplyDeleteಜೊತೆಗೆ ನಿಮ್ಮ ಮಾಹಿತಿ ಯುವಕರಿಗೆ ಸಹಾಯವಾಗಲಿದೆ.
ಎಂದಿನಂತೆ ನಿಮ್ಮ ಮುಂದುವರೆದ ಪ್ರೋತ್ಸಾಹಕ್ಕೆ ಮತ್ತೊಮ್ಮೆ ವಂದನೆಗಳು ಭದ್ರಿ ಭಾಯ್ :-)
Deleteanubhavada mahitigalannu vivaravaagi
ReplyDeleteteredittiddira.dhanyavadagalu.
ಧನ್ಯವಾದಗಳು ಕಲರವ :-)
Deleteಪ್ರಶಸ್ತಿ,
ReplyDeleteಸಿಕ್ಕಾಪಟ್ಟೆ ನಾರ್ಮಲ್ ಸಂಗತಿಗಳನ್ನು ಚೆನ್ನಾಗಿ ಮತ್ತು ಮಾಹಿತಿಪೂರ್ಣವಾಗಿ ವಿವರಿಸುವ ಕಲೆ ನಿಮಗಿದೆ, ವಾರಕ್ಕೆರಡು ಪೋಸ್ಟ್ ಬರೆಯುವ ತಾಕತ್ತೂ ಸಹ . ಚಂದದ ಬರಹ. :)
ವಾರಕ್ಕೆರೆಡು ಎಲ್ಲೋ ಮಾರಾಯ ? !!
Deleteನಾರ್ಮಲ್ಲಾಗಿದ್ದು ಅಂತ ಬಯ್ತಾ ಇದ್ಯಾ ಅಲ್ಲಾ ಚೆನ್ನಾಗಿದ್ದು ಅಂತ ಹೊಗಳ್ತಾ ಇದ್ಯಾ ? :-)