ಹಿನ್ನೆಲೆಯು ಚೆನ್ನಿರಲು ಹೊಳೆಯುವುದು ಹುಳು ಕೂಡ
ರವಿ ಮುಳುಗೊ ಕಾರ್ಗಲ್ಲ ಗುಡ್ಡದಂತೆ
ಹಾದಿ ತಪ್ಪಿಸೊ ಗೆಳೆಯ ತೇವಾಂಶ,ತುಕ್ಕಂತೆ
ಸಾಕು ಹಾಳಾಗಿಸಲು ಅದಿರ ಸಂತೆ |೧
ನಾಳೆ ಭರವಸೆಯನ್ನೇ ಕೊಲ್ಲೊ ಪರಿ ಕಷ್ಟಗಳು
ರವಿಯ ನುಂಗಲು ಹೊರಟ ರಾಹುವಂತೆ
ಕಾಡಿರಲು ಧೃತಿಗೆಡದೆ ಮುನ್ನಡೆಯೆ ನಲಿವಿಹುದು
ಗ್ರಹಣ ಕಳೆದೊಡೆ ಬರುವ ಬೆಳಕಿನಂತೆ |೨
ಅವನ ಬೆಳಕನು ತಡೆಯೆ ಇವನು ತಮವಾಗಿಹನು
ಲತೆಯಾಗಿ, ಮರವಾಗಿ ಅಡ್ಡ ನಿಂತು
ತನ್ನ ಪ್ರಭೆಯನೆ ಮರೆತ ಮರೆಯಾಗಹೊರಟವನು
ಅಹಮಲ್ಲೆ ಸಾಯುತಿಹ ಜೀವ ತಂತು |೩
ನೆರೆಯವನ ಸಾಧನೆಯ ಮುಚ್ಚಹೊರಟಿಹ ಕಿಚ್ಚು
ತಣಿವವರೆಗೂ ಇಹುದು ಭ್ರಾಂತಿಲೋಕ
ಅವನ ಬೆಳಕೆದುರಲ್ಲಿ ತನ್ನ ತಿದ್ದುವ ಆಸೆ
ಮೂಡಿದಾ ಕ್ಷಣ ತೆರೆದು ಬೆಳಕ ಲೋಕ |೪|
ಬಾರೋ ಭಾಸ್ಕರ ನೀನು, ಕಣ್ತೆರೆವ ಬೆಳಕಾಗಿ
ಬರೆಯಲಿಚ್ಚಿಸುವನ ಭಾವವಾಗಿ
ಸ್ಪೂರ್ತಿ ನೀರಿನ ಸೆಲೆಯ ಹುಡುಕಿ ಬಾಯಾರಿರುವ
ದಣಿದ ಚೇತನಕಷ್ಟು ತೇವವಾಗಿ |೫|
ದಿನದ ಕಷ್ಟವ ಕಂಡ ಆವಿಯಾಗಿಹ ಬೆವರು
ಸಂಜೆಯಲಿ ಮೈತಣಿವ ಗಾಳಿಯಾಗಿ
ಬದುಕ ಪುಸ್ತಕವಿತ್ತ ನೂರೆಂಟು ಪಾಠಗಳ
ಅಧ್ಯಯನ ಅರಿವಿರದೆ ಕಾಂತಿಯಾಗಿ
ಹಿನ್ನೆಲೆಯ ಬೆಳಕಾಗಿ ಚೆಂದಗಾಣಿಸುತಿಹುದು
ಗರ್ವವಿಲ್ಲದೆ ಬಳುಕೊ ಮುಪ್ಪ ಮರಕೆ
ಅದರ ಹಲವಾಕಾರ ಹೇಳ ಹೊರಟಿವ ಮಾತು
ಸಿಗಲೆಂಬ ಹಾರೈಕೆ ಬೆಳೆವ ತೆನೆಗೆ |೬|
No comments:
Post a Comment