Saturday, June 27, 2015

ವೈರಸ್ಸಿಲ್ಲದ ಲೋಕದಲ್ಲಿ

ಏ ನನ್ನ ಕಂಪ್ಯೂಟರ್ ಸಿಕ್ಕಾಪಟ್ಟೆ ನಿಧಾನವಾಗ್ಬಿಟ್ಟಿದೆ, ಒಂದು ಫೋಲ್ಡರ್ ತೆರೆಯೋಕೆ ೨-೩ ನಿಮಿಷ ಬೇಕು. ಅದೆಂತದೋ ವೈರಸ್ ಬಂದು ಕೂತ್ಬಿಟ್ಟಿದೆ ಕಣೋ ಅಂತಿದ್ದ ಫ್ರೆಂಡು.ಹೂಂ, ಇವ ಯಾವುದೇ ಜಾಲತಾಣ ತೆರೆದ್ರೂ ಅದೆಂತದೋ ಜಾಹೀರಾತು ಬಂದು ಕುಣ್ಯತ್ತೆ ಮಾರಾಯ. ವೈರಸ್ಸು, ಟ್ರೋಜನ್ನು, ಮಾಲ್ವೇರು.. ಇನ್ನೆಂತೆಂತ ಹಾಳು ಮೂಳು ಬಂದು ಕೂತಿದ್ಯೋ ಇದ್ರಲ್ಲಿ ಅಂದ ಇನ್ನೊಬ್ಬ.ಈ ವಿಂಡೋಸು, ಇದ್ರ ದುಬಾರಿ ದುಡ್ಡು ಕೊಟ್ರೂ ಕೆಲಸ ಮಾಡದ . ಎಂಥದದು ? ಆಂಟಿ ವೈರಸ್ಸಾ ? ಅದ್ನ ಹಾಕೂ ಈ ಕತೆ ನಂದು. ವೈರಸ್ಸೇ ಬರದ್ದೆಂತೋ ಇದ್ಯಂತಲ್ಲ, ಎಂಥ ಎಕ್ಸೋ ಅದು, ಅದನ್ನ ಹಾಕ್ಕೊಡೋ ಎಂದ ಮೊದಲನೆಯ ಗೆಳೆಯ.

ವೈರಸ್ಸೇ ಬಾರದ ಸಾಫ್ಟವೇರೇ ?
ವೈರಸ್ಸನ್ನ ತಡೆಯುವಂತಹ ತಂತ್ರಾಂಶಗಳ್ಇದ್ರೂ ಅದ್ರಲ್ಲಿ ಎಲ್ಲಾ ವೈರಸ್ಸುಗಳಿಗೂ ಉತ್ತರವಿರಲೇಬೇಕೆಂದಿಲ್ಲ. ಹೊಸ ವೈರಸ್ಸಿನೆದ್ರು ಹಳೇ ಆಂಟೀ ವೈರಸ್ಸು ಥಂಡಾ ಹೊಡಿಬಹುದು. ಈ ತಂತ್ರಾಂಶದ ಮೂಲಕ ವೈರಸ್ಸನ್ನ ತಡೆಯೋ ಬದಲು ನಮ್ಮ ಗಣಕದ ಎಲ್ಲಾ ತಂತ್ರಾಂಶಗಳು ಕಾರ್ಯನಿರ್ವಹಿಸಲು ಅಗತ್ಯ ವೇದಿಕೆಯಾದ ಕಾರ್ಯನಿರ್ವಹಣಾ ವ್ಯವಸ್ಥೆಯೇ(operating system) ವೈರಸ್ಸುಗಳನ್ನು ಒಳಬರೋಕೆ ಬಿಡದಿದ್ರೆ ?

ವೈರಸ್ ಬಾರದ ಕಾರ್ಯನಿರ್ವಹಣಾ ವ್ಯವಸ್ಥೆ ಇದೆಯೇ ?
ಸಾವಿಲ್ಲದ ಮನೆಯಿಂದ ಸಾಸಿವೆ ತಾ ಎಂಬ ಬುದ್ಧನ ಮಾತನ್ನು ಪಾಲಿಸಲಾಗದ ತಾಯ ಗತಿಯೇ ವೈರಸ್ಸಿಲ್ಲದ ಕಾರ್ಯನಿರ್ವಹಣಾ ವ್ಯವಸ್ಥೆ ಹುಡುಕಹೊರಟವನದೂ ! ದುಡ್ಡು ಕೊಟ್ಟು ಕೊಳ್ಳಬೇಕಾದ(ಪೈರೇಟೆಡ್ ಕಾಪಿಗಳ ಬಗ್ಗೆ ಹೇಳುತ್ತಿಲ್ಲವಿಲ್ಲಿ) ವಿಂಡೋಸಿನಲ್ಲಿ ಮಾತ್ರ ವೈರಸ್ಸುಗಳಿರುತ್ವೆ, ಮುಕ್ತ ತಂತ್ರಾಂಶವಾದ ಲಿನಕ್ಸಿನಲ್ಲಿ ಯಾವುದೇ ವೈರಸ್ಸಿರೋಲ್ಲ ಎಂಬ ಮಾತಿತ್ತು ಮುಂಚೆ. ಆದ್ರೆ ಈಗಿನ ಲಿನಕ್ಸಿನಲ್ಲಿ ವೈರಸ್ ಬರೋ ಸಾಧ್ಯತೆ ವಿಂಡೋಸಿಗಿಂತ ತುಂಬಾನೇ ಕಮ್ಮಿ ,ಆದ್ರೆ ಬರಲೇಬಾರದೆಂದಿಲ್ಲ ಅಂತಾರೆ ತಜ್ಞರು.

ಅಂತಾದ್ದೇನಿದೆ ಲಿನಕ್ಸಿನಲ್ಲಿ ?
ಅ.ಲಿನಕ್ಸೆಂಬೋ ಕಾರ್ಯನಿರ್ವಹಣಾ ವ್ಯವಸ್ಥೆ ಮುಕ್ತವಾದರೂ ಅದನ್ನ ಬಳಸೋರ ಸಂಖ್ಯೆ ತುಂಬಾ ಕಮ್ಮಿ. ಎಲ್ಲೋ ಒಬ್ಬಿಬ್ಬರು ಬಳಸೋ ವ್ಯವಸ್ಥೆಗೆ ಯಾರಪ್ಪಾ ವೈರಸ್ ಬರೀತಾರೆ ಅನ್ನೋದು ಒಂದು ಗುಂಪಿನ ಮಾತು. ಆದ್ರೆ ಅದು ಪೂರ್ಣ ಸತ್ಯವಲ್ಲ. ಉಂಬುಂಟು, ಕುಬುಂಟು, ಎಡುಬುಂಟು ಲಿನಕ್ಸುಗಳ ಜೊತೆಗೆ ಸೂಸೆ(ಸೊಸೆ ಅಲ್ಲ ಮತ್ತೆ), ರೆಡ್ ಹ್ಯಾಟ್, ಮಿಂಟ್ ಅಂತ ಹತ್ತಾರು ವೆರೈಟಿಗಳಿವೆ ಲಿನಕ್ಸಿನದು. ಅವೆಲ್ಲದರ ಒಟ್ಟು ಬಳಕೆದಾರದ ಸಂಖ್ಯೆ ಕಮ್ಮಿಯೇನಲ್ಲ. ಆದ್ರೆ ಪ್ರತಿಯೊಂದರ ಕಾರ್ಯನಿರ್ವಹಣಾ ವಿಧಾನದಲ್ಲೂ ಭಿನ್ನತೆಯಿರೋದ್ರಿಂದ ಒಂದ್ರಲ್ಲಿ ಕೆಲಸ ಮಾಡಿದ(ಕೆಲಸ ಹಾಳು ಹಾಡಿದ) ವೈರಸ್ಸು ಮತ್ತೊಂದೆಡೆ ಕೆಲಸ ಮಾಡದೇ ಇರಬಹುದು.ಹಾಗಾಗಿ ಯದ್ವಾ ತದ್ವಾ ತೊಂದರೆ ಕೊಡುವಂತಹ ವೈರಸ್ಸುಗಳು ಲಿನಕ್ಸಿಗೆ ಕಮ್ಮಿಯೆಂದೇ ಹೇಳಬಹುದು.

ಆ.ರಿಪೋಸ್:
ಲಿನಕ್ಸ್ ಹೆಚ್ಚು ಸುರಕ್ಷಿತವೆಂದು ನಂಬೋಕೆ ಮತ್ತೊಂದು ಕಾರಣ ರಿಪೋಸ್(repo).ವಿಂಡೋಸಿನಲ್ಲಿ ಯಾವ ಜಾಲತಾಣದಿಂದ ಇಳಿಸಿಕೊಂಡ ತಂತ್ರಾಂಶವನ್ನಾದರೂ ಸ್ಥಾಪಿಸ(install)ಬಹುದು. ಆ ತರಹ ಇಳಿಸಿಕೊಂಡ ತಂತ್ರಾಂಶಗಳ ಜೊತೆಗೇ ಎಷ್ಟೋ ವೈರಸ್ಸುಗಳು, ಮಾಲ್ವೇರುಗಳು ಉಚಿತವಾಗಿ ನಮ್ಮ ಗಣಕವನ್ನು ಪ್ರವೇಶಿಸಿರುತ್ತವೆ ! ಹಾಗಾಗಿ ಆ ತಂತ್ರಾಂಶವನ್ನು ಸ್ಥಾಪಿಸುವಾಗ ಅಥವಾ ಆ ತಂತ್ರಾಂಶದ ಕಾರ್ಯನಿರ್ವಹಣಾ ವೇಳೆ ಯಾವ ಅನಾಹುತವಾದರೂ ಆಗಬಹುದು ! ಆದರೆ ಲಿನಕ್ಸಲ್ಲಿ ಹಾಗಲ್ಲ.ಅದ್ರದ್ದೇ ಆದ ರಿಪೋಸಿಟರಿಗಳಿಂದ ಮಾತ್ರ ಸಂಬಂಧಪಟ್ಟ ತಂತ್ರಾಂಶಗಳು ಅಪ್ ಗ್ರೇಡ್ ಅಥವಾ ಸ್ಥಾಪನೆ ಆಗುತ್ವೆ. ಆ ರಿಪಾಸಿಟರಿಗಳ ಪ್ರತೀ ತಂತ್ರಾಂಶಕ್ಕೂ ತನ್ನದೇ ಆದ ಗಣಕೀಕೃತ ಸಹಿ(digital signature) ಇರುತ್ತೆ.ಹಾಗಾಗಿ ಅದ್ರಲ್ಲೇನಾದ್ರೂ ಹೆಚ್ಚು ಕಮ್ಮಿ ಮಾಡಿ ಗಣಕದ ಒಳಗೆ ತುರುಕೋಕೆ ಹೋದ್ರೆ ಅದ್ರ ಸಹಿಯಲ್ಲಿನ ವ್ಯತ್ಯಾಸವನ್ನು ಸುಲಭವಾಗಿ ಕಂಡುಹಿಡಿಯೋ ಕಾರ್ಯನಿರ್ವಹಣಾ ವ್ಯವಸ್ಥೆ ಮುಂದುವರಿಯಲೇ ಬಿಡೋಲ್ಲ. ನಂಬಿಕೆಗೆ ಅರ್ಹವಲ್ಲದ ಯಾವುದೇ ತಾಣದಿಂದ ಇಳಿಸಿದ ಅಥವಾ ಸ್ವತಃ ಕಿತಾಪತಿ ಮಾಡಿದ ಏನನ್ನೂ ಗಣಕಕ್ಕೆ ತುರುಕಲು ಸಾಧ್ಯವಿಲ್ಲ ಅಂದ ಮೇಲೆ ವೈರಸ್ಸೆಲ್ಲಿಂದ ಬರಬೇಕು ? ರಿಪೋಗಳ ಮುಖಾಂತರವೇ ತಂತ್ರಾಂಶದ ಅಪ್ ಗ್ರೇಡ್ ಆಗುವುದನ್ನು ಚಿತ್ರ ೧-೨ ರಲ್ಲಿ ನೋಡಬಹುದು.


ಇ.. Discretionary Access Control(DAC).
ಈ DAC ಅನ್ನೋದು ಲಿನಕ್ಸ್ ಸುಭದ್ರ ಅನ್ನೋಕೆ ಮತ್ತೊಂದು ಕಾರಣ. ಯಾವುದೇ ಬಳಕೆದಾರ ಒಂದು ಫೈಲನ್ನ ಅಥವಾ ಡೈರೆಕ್ಟರಿಯನ್ನ ಸೃಷ್ಟಿಸುವಾಗ ಅದನ್ನು ಯಾರ್ಯಾರು ಉಪಯೋಗಿಸಬಹುದು ಎಂಬುದನ್ನ ನಿರ್ಧರಿಸಬಹುದು. ಲಿನಕ್ಸಿನಲ್ಲಿ ಯಾವುದೇ ಕಡತಕ್ಕಿರುವ ಭದ್ರತೆಯನ್ನು ಅದರ ಬಗೆಗಿನ ಮಾಹಿತಿಹ ಹತ್ತು ಅಕ್ಷರಗಳಿಂದ ಗುರುತಿಸಬಹುದು. ಉದಾಹರಣೆಗೆ ಒಂದು ಕಡತದ ಭದ್ರತಾ ಮಟ್ಟ drwr--r-- ಅಂತ ಇರಬಹುದು(ಚಿತ್ರ ೩). ಇದರಲ್ಲಿ ಮೊದಲನೆಯ ಅಕ್ಷರ D ಅಂತಿದ್ದರೆ ಅದು ಡೈರೆಕ್ಟರಿ(ಹಲವು ಕಡತ ಅಥವಾ ಇನ್ನುಳಿದ ಡೈರೆಕ್ಟರಿಗಳ ಸಂಗ್ರಹ)ವೆಂತಲೂ ಅದಿಲ್ಲದಿದ್ದರೆ ಅದೊಂದು ಕಡತವೆಂದಲೂ ಅರ್ಥ. ನಂತರದ ಮೂರು ಅಕ್ಷರಗಳು ಕಡತವನ್ನು ಸೃಷ್ಠಿಸಿದವ ಏನು ಮಾಡಬಹುದು ಅಂತ. R--read(ಓದು), w--write(ಬರೆ), x--execute(ಆ ಕಡತವನ್ನು ಚಲಾಯಿಸುವ ಅನುಮತಿ). . ನಂತರದ ಮೂರು ಅಕ್ಷರಗಳು ಬಳಕೆದಾರನ ಗುಂಪಿಗೆ ಯಾವ ಅನುಮತಿ ಇರುತ್ತೆ ಎಂದು. ಕೊನೆಯ ಮೂರು ಅಕ್ಷರಗಳು ಉಳಿದವರಿಗೆ ಯಾವ ಅನುಮತಿ ಇರುತ್ತೆ ಅಂತ. ಮೇಲಿನ ಉದಾಹರಣೆಯಲ್ಲಿ(ಚಿತ್ರದಲ್ಲಿರುವಂತೆ) ಬಳಕೆದಾರ ತಾನು ಸೃಷ್ಠಿಸಿದ ಕಡತವನ್ನು ಓದಬಹುದು ಮತ್ತು ಅದಕ್ಕೆ ಬರೆಯಬಹುದು.ಬಳಕೆದಾರ ಇರುವ ಗುಂಪಿಗೆ ಸೇರಿದ ಉಳಿದ ಬಳಕೆದಾರರು ಆ ಕಡತಕ್ಕೆ ಬರೆಯಬಹುದು ಅಥವಾ ಅದನ್ನೋದಬಹುದು. ಹೊರಗಿನವರು ಅದನ್ನು ಓದಲಷ್ಟೇ ಸಾಧ್ಯ ಎಂಬುದು ಅದರರ್ಥ. ಹಾಗಾಗಿ ಮತ್ತೊಬ್ಬ ಬಳಕೆದಾರ ತನ್ನ ಕಡತಗಳನ್ನು ಬಳಸಿಕೊಳ್ಳಲು ಅನುಮತಿ ನೀಡದ ಹೊರತು ಒಂದು ಬಳಕೆದಾರನ ಮೂಲಕ ಹೇಗೋ ಒಳನುಗ್ಗಿದ ವೈರಸ್ಸು ಆ ಬಳಕೆದಾರನಿಗೆ ಸಂಬಂಧಪಟ್ಟ ಕೆಲ ಕಡತಗಳನ್ನು ಮಾತ್ರ ಸ್ಪರ್ಷಿಸಲು ಅಥವಾ ಹಾಳು ಮಾಡಲು ಸಾಧ್ಯ.

ಈ.root ಬಳಕೆದಾರ ಮತ್ತು ಭದ್ರತಾ ಕವಚಗಳು.

ಲಿನಕ್ಸನ್ನು ಸ್ಥಾಪಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ root ಎಂಬ ಬಳಕೆದಾರನನ್ನು ಮತ್ತು ಐಚ್ಚಿಕವಾಗಿ ನಮ್ಮ ಹೆಸರಿನ ಅಥವಾ ಹಲವು ಬಳಕೆದಾರರನ್ನು ಸೃಷ್ಠಿಸಲಾಗುತ್ತದೆ. ಮತ್ತು ಸೃಷ್ಠಿಸಿದ ಪ್ರತೀ ಬಳಕೆದಾರನಿಗೂ  ಅವನಿಗೆ ಸಂಬಂಧಪಟ್ಟ ಒಂದು ಕವಚ(shell) ವಿದ್ದು ಆ ಕವಚದೊಳಗಡೆ ಅನುಮತಿಸಿದಂತಹ ಕೆಲಸಗಳನ್ನು ಮಾತ್ರ ಅವನು ಮಾಡಬಹುದು. . ಉದಾಹರಣೆಗೆ ಎರಡು ಬಳಕೆದಾರರಿದ್ದರೆ ಇಬ್ಬರನ್ನೂ ಹಲವು ರೀತಿಯ ಭದ್ರತಾ ಕ್ರಮಗಳಿಂದ ಪ್ರತ್ಯೇಕಿಸಲಾಗಿರುತ್ತದೆ. ಉದಾಹರಣೆಗೆ ram ಅನ್ನೋ ಬಳಕೆದಾರ ಲಾಗಿನ್ ಆದಾಗ ಅವನ ಕೆಲಸಗಳು /usr/../ram/home ಎನ್ನುವ ಜಾಗಕ್ಕೆ ಅಥವಾ /home/ram ಅನ್ನುವ ಜಾಗಕ್ಕೆ ಹೋಗುತ್ತಾನೆ. ಅವನು ಮಾಡುವ ಕೆಲಸಗಳೆಲ್ಲಾ ಅಲ್ಲೇ ಕೇಂದ್ರಿತ.ಅವನು ಎಲ್ಲಿ ಹೋಗಬೇಕು ಎಂಬುದನ್ನ /etc/passwd ಅನ್ನೋ ಕಡತದಲ್ಲಿ ದಾಖಲಿಸಲಾಗಿರುತ್ತದೆ.ಅದೇ ತರಹ bheem ಅನ್ನುವವನ ಲಾಗಿನ್ ಆದಾಗ ಬರುವ ಜಾಗ /usr/.../bheem/home ಆಗಿರಬಹುದು . ಮುಂಚೆಯೇ ತಿಳಿಸಿದ ಭದ್ರತಾ ಕ್ರಮಗಳ ಜೊತೆಗೆ ಒಬ್ಬ ಮತ್ತೊಬ್ಬನ ಕಡತಗಳನ್ನು ಗೊತ್ತಿಲ್ಲದೇ ಡಿಲಿಟ್ ಮಾಡುವುದಾಗಲಿ, ಎಗರಿಸುವುದಾಗಲಿ ಮಾಡದಂತೆ ಈ ಕವಚಗಳಿಂದ ತಡೆಯಬಹುದು. ವಿಂಡೋಸಲ್ಲೂ ಈ ಕ್ರಮವಿದ್ದರೂ ಲಿನಕ್ಸಿನ ಭದ್ರತಾ ಕ್ರಮಗಳು ಅದಕ್ಕಿಂತ ಎಷ್ಟೋ ಹೆಚ್ಚಿವೆ ಅಂತಾರೆ.  ತನಗೆ ಸಂಬಂಧಿಸಿದ ಕೆಲಸಗಳನ್ನು ಬಿಟ್ಟು ಕಾರ್ಯನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಯಾವ ಜಾಗಕ್ಕೆ ಹೋಗಲು, ಅಲ್ಲಿ ಯಾವ ಕೆಲಸವನ್ನೂ ಮಾಡಲು ಬಳಕೆದಾರನ ಕವಚ ಬಿಡೋದಿಲ್ಲ. ಆ ಎಲ್ಲಾ ಕೆಲಸ ಈ ಎಲ್ಲಾ ಬಳಕೆದಾರರ ದೊಡ್ಡಣ್ಣ root ನದು. ಇವರಿಗ್ಯಾರಿಗೂ ಇಲ್ಲದಷ್ಟು ಶಕ್ತಿ ಹೊಂದಿರೋ ಅವನು ಗಣಕದಲ್ಲಿ ಏನು ಬೇಕಾದ್ರೂ ಮಾಡಬಹುದು ! ಉದಾಹರಣೆಗೆ ಯಾವುದೇ ಬಳಕೆದಾರನಿಗೆ ಕೆಲಸವೊಂದಕ್ಕಾಗಿ ಹೆಚ್ಚಿನ ಅನುಮತಿಗಳನ್ನು ಕೊಡುವುದು, ಕಿತ್ತುಕೊಳ್ಳುವುದು, ಕಾರ್ಯನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಕೆಲಸಗಳನ್ನು root ಬಳಕೆದಾರನ ಮೂಲಕ ಮಾಡಬಹುದು. ಈ root ನ ಪಾಸವರ್ಡ್  ಅದನ್ನು ಸ್ಥಾಪಿಸಿದ ನಿಮಗೆ ಮಾತ್ರ ತಿಳಿದಿರುತ್ತೆ. ಹಾಗಾಗಿ ಯಾವುದೇ ಬಳಕೆದಾರನ ಮೂಲಕ ಗಣಕವ ಹೊಕ್ಕ ವೈರಸ್ಸಿಗೆ root ನ ಶಕ್ತಿ ಸಿಗುವ ತನಕ, ಅದು ಸಿಗದ ಕಾರಣ ಏನೂ ಮಾಡಲಾಗದೇ ಸುಮ್ಮನೇ ಕೂರಬೇಕಾಗುತ್ತದೆ.
ಉದಾಹರಣೆಗೆ ಚಿತ್ರ-೪ ರಲ್ಲಿರುವಂತೆ ಬಳಕೆದಾರ ತನಗೆ ಸಂಬಂಧವಿಲ್ಲದ ಕೆಲಸವನ್ನು ಮಾಡಲು ಹೊರಟಾಗ ಕಾರ್ಯನಿರ್ವಹಣಾ ವ್ಯವಸ್ಥೆ ಅದನ್ನು ಅನುಮತಿಸುವುದಿಲ್ಲ.

ಉ. ಮುಕ್ತತೆ:

The cathedral and the bazaar ಎಂಬ ಪುಸ್ತಕದಲ್ಲಿ ಎರಿಕ್ ಎಸ್.ರೈಮಂಡ್ ಎಂಬ ಲೇಖನ ಒಂದು ಮಾತು  ಹೇಳುತ್ತಾನೆ. ನೋಡೋ ನೂರು ಕಣ್ಣಿದ್ರೆ ಚುಕ್ಕಿಯಂತಹ ತಪ್ಪೂ ಪರ್ವತದಂತೆ ಗುರುತಿಸಲ್ಪಡುತ್ತೆ ಅಂತ. ಈ ಮಾತು ಲಿನಕ್ಸಿನ ಜನಕನೆಂದೇ ಖ್ಯಾತನಾದ ಲಿನಸ್ ಟೊವಾರ್ಡಸ್ಸಿನ ನೆನಪಿನಲ್ಲಿ "ಲಿನಸ್ ನಿಯಮ" ಅಂತಲೇ ಖ್ಯಾತಿ ಹೊಂದಿದೆ. ಇಲ್ಲಿ ಹೇಳೋಕೆ ಹೊರಟಿರುವುದೇನೆಂದರೆ  ಲಿನಕ್ಸಿನ ತಂತ್ರಾಂಶಗಳ ಕೋಡುಗಳು(code) ಅಂತರ್ಜಾಲದೆಲ್ಲೆಡೆ ಮುಕ್ತವಾಗಿ ಲಭ್ಯವಿರುತ್ತದೆ. ಹಾಗಾಗಿ ಅನೇಕ ತಂತ್ರಜ್ಞರು ಅದನ್ನ ತಮ್ಮ ಅದನ್ನ ಗಣಕಕ್ಕೆ ಹಾಕಿ ಬಳಸೋಕೆ ಪ್ರಯತ್ನಿಸ್ತಾರೆ. ಅದ್ರಲ್ಲಿರೋ ಹಲವು ಸೌಲಭ್ಯಗಳನ್ನ ಬಳಸುವಾಗ ಕಂಡುಬಂದ ನ್ಯೂನತೆಗಳನ್ನ ಸರಿಪಡಿಸೋಕೂ ಪ್ರಯತ್ನಿಸ್ತಾರೆ. ಜನ ಮುಕ್ತವಾಗಿ ಸಿಗೋ ತಂತ್ರಾಂಶದ ತಪ್ಪುಗಳ ಸರಿಪಡಿಸೋಕೆ ಪ್ರಯತ್ನಿಸ್ತಾರೇ ಹೊರತು ಅದಕ್ಕೆ ಹೊಸ ವೈರಸ್ಯಾಕೆ ಬರೀತಾರೆ ಅನ್ನೋದು ಮತ್ತೊಂದು ಗುಂಪಿನ ಪ್ರಶ್ನೆ. ಆದ್ರೆ ಅದೇ ಕೋಡಿನ ನ್ಯೂನತೆಗಳನ್ನ ತಿಳಿದುಕೊಂಡು ಅದಕ್ಕೊಂದು ಹೊಸ ವೈರಸ್ ಬರೀಬಾರದು ಅಂತೇನಿಲ್ಲ !

ಕೊನೇ ಗುಟುಕು:

ನೀವು, ನಿಮ್ಮ ಗಣಕ ಮತ್ತು ಅದರ ರೋಗಗಳು ನೀವದನ್ನ ಹೇಗೆ ಬಳಸ್ತೀರ ಅನ್ನೋದರ ಮೇಲೆ ನಿರ್ಧಾರಿತವಾಗಿರುತ್ತೆ.ನೆಟ್ಟಿಗೆ ಕನೆಕ್ಟೇ ಆಗದ , ಪೆನ್ ಡ್ರೈವೇ ಹಾಕದ ಗಣಕಕ್ಕೆ ಯಾವ ವೈರಸ್ಸೂ ಬರೋಲ್ಲ ಅನ್ನೋದು ಸಾರ್ವಕಾಲಿಕ ಸತ್ಯ ! ನೀವೆಲ್ಲಿಗೆ ಹೋಗ್ತೀರ, ಏನು ಮಾಡ್ತೀರ ಅನ್ನೋದ್ರ ಮೇಲೆ ನಿಮ್ಮ ಆರೋಗ್ಯ ಹೇಗಿರುತ್ತೋ ಅದೇ ತರಹ ನಿಮ್ಮ ಗಣಕ ಅನ್ನೋದು ಅದರ ಆರೋಗ್ಯದ ಗುಟ್ಟು.



ಈ ಲೇಖನ , ೨೬/೬/೨೦೧೫ ರ, ವಿಜಯ ನೆಕ್ಟ್ ಪತ್ರಿಕೆಯ, ಪುಟ ೧೬ರಲ್ಲಿ ಪ್ರಕಟವಾಗಿದೆ

2 comments:

  1. ವರಿಸುವ ತನಕ ವೈರಸ್ ಇದ್ದೆ ಇರುತ್ತದೆ ಎನ್ನುವ ಮಾತಿನಂತೆ ವೈರಸ್ ಬಗ್ಗೆ ಮತ್ತು ಅದನ್ನು ಅಲ್ಪ ಸ್ವಲ್ಪ ತಡೆಗಟ್ಟುವ ವಿಧಾನ ಮತ್ತು ಏನು ಮಾಡದಿದ್ದರೆ ಅದು ಬರೋಲ್ಲ ಎನ್ನುವ ಒಂದು ಸರಳ ಮಾಹಿತಿ ಬ್ಲಾಗಿನಲ್ಲಿ ಸಿಕ್ಕಿದೆ.
    ಈ ಲೇಖನಕ್ಕೆ ನಿಮಗೆ ಏನಾದರೂ ಕೊಡೋದಿದ್ದರೆ ಅದು ನಿಮ್ಮ ಹೆಸರೇ ಬಹುಮಾನವಾಗಿ ಕೊಡಬೇಕು

    ಸೂಪರ್

    ReplyDelete
    Replies
    1. ಮೆಚ್ಚುಗೆಗೆ ಧನ್ಯವಾದಗಳು ಶ್ರೀಕಾಂತಣ್ಣ :-)

      Delete