Monday, September 15, 2014

ಹುಡುಕಾಟ


ಭಾನುವಾರದ ಬಿಡುವು ಬೇಸರಿಸಿ ಎಳೆಮನಕೆ
ಆಫೀಸ ರಸ್ತೆಯೆಡೆ ಎಳೆಯಿತೊಮ್ಮೆ
ದಿನದ ಹೊಗೆ, ಹಾರನ್ನು,ಟ್ರಾಫಿಕ್ಕು, ತಡೆದಿಣ್ಣೆ
ಕಾಣದೇ ಬೇಸತ್ತ ಜೀವಮೊಮ್ಮೆ

ಆದರೇನಚ್ಚರಿಯು , ಶಬ್ದ ಸತ್ತಿಹ ಪರಿಯು
ಸ್ವಚ್ಛ ಕಪ್ಪನೆ ರಸ್ತೆ ಎಷ್ಟು ಚಂದ
ದಿನದ ಕಸ, ಕೊಳೆಯೆಲ್ಲಿ? ಮುಖಸುಡುವ ಬಿಸಿಲೆಲ್ಲಿ
ಎಲ್ಲ ಹುಟ್ಟಿದ ಭ್ರಮೆಯೆ ಚಿಂತೆಯಲ್ಲಿ ?

ಬೆಲೆಯಿಲ್ಲವೇ ಇಲ್ಲಿ ಭಾವಗಳ ತೋರಿಕೆಗೆ
ಮುಖವಾಡವಿಲ್ಲದೆಯೆ ಬದುಕಲುಂಟೆ ?
ಕಾಡುತಿರು ಜೀವಗಳ ಕುಂಟು ನೆಪಗಳ ಹುಡುಕಿ
ರಕ್ತ ಹೀರದೆ ಸೊಳ್ಳೆ ಬದುಕಲುಂಟೆ? !

ಮನಮುರಿದ ಸ್ನೇಹಗಳು ಸತ್ತ ಗೋರಿಗೆ ಒಂದು
ಹೂವ ಹಾರವನಿಕ್ಕಿ ನಮನವೆನಲೆ
ಕಳೆದ ಕಾಲದ ನೆನಪು, ಕೆದಕಿ ನೋವನೆ ಆಯ್ದು
ಕಣ್ಣೀರ ಮಡುವಾಗೆ ಮಿಂದು ಬರಲೆ

ದಿನಕಳೆದು ಇರುಳಾಯ್ತು . ರವಿವಾರ ಕರಗೋಯ್ತು
ನಾನು ನಾನಾಗಿರಲು ಸಮಯವಾಯ್ತೆ ?
ಕಾಲದಲೆ ನೆನಪಾಗಿ, ಕರಗಿರುವ ನನ್ನನ್ನು
ಹುಡುಕೊ ಎಂದಿನ ಹಠವು ವಿಫಲವಾಯ್ತೆ ?
ಓಡುತಿಹ ಕಾಲದಲಿ, ಕ್ಷಣಕಾಲ ಸಿಕ್ಕನಗೆ
ಒಂದು ಉತ್ತಮ ಓದ ತೃಪ್ತಿ ನಾನು.
ಸಿಕ್ಕ ನಿದ್ದೆಯ ಜೇನು, ಹಸಿರ ಸಿರಿ, ಬಿಳಿ ಬಾನು
ಸೌಂದರ್ಯ ದಾಖಲಿಸೊ ಧರೆಯು ನಾನು
ಅಸ್ಮಿತೆಯ ಅರಸುತ್ತ ನಾಳೆಗಳ ನಾಡಿನಲಿ
ಹೊರಟು ದಾರಿಯ ಮರೆತ ಪಯಣ ನಾನು
ಜೀವನದ ನೀರಿನಲಿ ದ್ವೇಷ, ಸ್ವಾರ್ಥದ ಕೊಳೆಯ
ಅಳಿಸೊ ಮಾಂತ್ರಿಕನರಸಿ ಕಳೆದ ಮೀನು

1 comment:

  1. exactly ನಾನೂ ಸಹ 'ಹೊರಟು ದಾರಿಯ ಮರೆತ ಪಯಣ ನಾನು'
    ನನ್ನ ಕರ್ಮವೂ ಇದೇ: ಕಳೆದ ಕಾಲದ ನೆನಪು, ಕೆದಕಿ ನೋವನೆ ಆಯ್ದು ! :(

    ReplyDelete