ಕನ್ನಡಿಯ ಕೆರೆಯಲ್ಲಿ ತನ್ನ ಕಾಣುವ ಬಯಕೆ
ಚಂದಿರನ ಪ್ರತಿರಾತ್ರಿ ಸೆಳೆಯತಿತ್ತು
ತಾನೆ ಸುಂದರನೆಂಬ ಶಶಿಯ ಹಮ್ಮನುದಿನವು
ಹೆಚ್ಚಿಸೋ ಪ್ರತಿಫಲಕ ಹೊಳೆಯುತಿತ್ತು|೧
ಕೆರೆಯ ಬಿಂಬದಿ ತನ್ನ ತಲೆಯ ಬಾಚುವ ಸೂರ್ಯ
ಮನೆಯ ಕರೆಗೋಗೊಡುವ ಕೆರೆಯ ದಡದಿ
ಹಕ್ಕಿಗಳಿಗಾಹಾರವಾಗೋ ಮೀನಿನ ತವರು
ಇಲ್ಲಿ ಒಸರೋ ನೀರೆ ಊರಿನುಸಿರು|೨
ಕಾಲ ಕಳೆದಂತಿಂದು ಶಶಿಯು ಬೇಸತ್ತಿಹನು
ಒರೆಸೊರೆಸಿ ಕೊಳೆಯಾದ ತನ್ನ ಮೊಗವ
ಕೊಳೆಯಾದ್ದು ಕೆರೆಯೆಂದು ತಿಳಿದೀತು ಹೇಗವಗೆ
ಹಗಲೆಲ್ಲ ವಿಷವುಣಿಸೊ ಜನರ ಬಗೆಗೆ|೩
ಬರಿಯ ನೊರೆಯಿಹುದಿಲ್ಲಿ, ಉಪಯೋಗವಿಲ್ಲ ಕೆರೆ
ಎಂದು ಜರಿಯೋ ಜನರೇ ಸುತ್ತಲೆಲ್ಲ
ಬುರುಗ ಹಿಂದಿನ ವಿಷವ ಸರಿಮಾಡಲೊಂದು ದಿನ
ತೆಗೆದಿಡಲು ಇವರ್ಯಾರು ಸಿದ್ದರಿಲ್ಲ|೪
ಜೀವಸೆಲೆಯಾದ ಕೆರೆಯಲ್ಲಿಂದು ತೇಲುತಿವೆ
ಪೇಪರ್ರು, ಪ್ಲಾಸ್ಟಿಕ್ಕು, ಸತ್ತ ಮೀನು
ನೀರಿಂದ ಮೇಲೆಳೋ ಪ್ರತಿ ಹಕ್ಕಿಯೂ ಕಪ್ಪು
ಕಾಗೆ, ಕೊಕ್ಕರೆ ಒಂದೆ ಬಣ್ಣವೇನು ? |೫
ನೀರಿಲ್ಲವಿಂದಲ್ಲಿ ಇಹುದೊಂದು ಕಂದು ದ್ರವ
ನಮ್ಮೆಲ್ಲ ಸ್ವಾರ್ಥಕ್ಕೆ ಸಾಕ್ಷಿಯಾಗಿ
ರವಿಶಶಿಯ ಹೊರತಾಗಿ ಯಾರಿಲ್ಲ ಕೇಳುಗರು
ಕೆರೆಯ ಕರೆಗೋಗುಡುವ ಶ್ರೋತೃವಾಗಿ|೬
ಕೆರೆಯ ಕೊನೆಯಲ್ಲವಿದು ಸಾಯುತಿದೆ ನಮ್ಮಾತ್ಮ
ಕೊಳೆಯಾಗೊ ಕೆರೆಯ ಪ್ರತಿ ಹನಿಯ ಜೊತೆಗೆ
ಒಟ್ಟುಗೂಡಲಿ ಮನಸು, ಮೀಸಲಾಗಲಿ ಸಮಯ
ಕೆರೆಯುಳಿಸೊ ಒಂದಿಷ್ಟು ಜನರ ಜೊತೆಗೆ
ಜೀವಜಲವಿಲ್ಲದೆಯೆ ಜೀವ ಉಳಿದೀತೇಗೆ
ಕಾಲಮಿಂಚುವ ಮುನ್ನ ಏಳಿರಣ್ಣ
ಮುಚ್ಚಿಹಾಕದಿರೆನ್ನ ಮಣ್ಣ ಗೋರಿಯ ಕೆಳಗೆ
ಎಂಬ ಕುಂದ್ಲಳ್ಳಿ ಕೆರೆ ಉಳಿಸಿರಣ್ಣ !|೭
No comments:
Post a Comment