ಹೆಣ್ಣಿದ್ದಲ್ಲೆಲ್ಲಾ ಗಂಡಿರುವಂತೆ ಬರೆದಕ್ಕೆಲ್ಲಾ ಕಾಮೆಂಟಿರುತ್ತೆ ಅನ್ನೋದು ಗುಂಡಣ್ಣನ ಸಿದ್ದಾಂತ. ಅರೆ, ಇದೊಳ್ಳೆ ಕಥೆಯಾಯ್ತಲ್ಲ. ಮದುವೆಯೇ ಆಗದ ಅದೆಷ್ಟೋ ಬ್ರಹ್ಮಚಾರಿಗಳು, ಬ್ರಹ್ಮಚಾರಿಣಿಯರು ಇಲ್ವಾ ಅಂದ್ರೆ ಅವರು ಬೀಳದಿದ್ದರೂ ಅವರ ಹಿಂದೆ ಬಿದ್ದವರು ಯಾರಾದ್ರೂ ಇದ್ದೇ ಇರುತ್ತಾರೆಂಬುದು ಗುಂಡಣ್ಣನ ವಾದ ! ಜಗದೆಲ್ಲಾ ಬ್ರಹ್ಮಚಾರಿಗಳ ಜಾಲಾಡಿ ಗುಂಡಣ್ಣನ ಸಿದ್ದಾಂತವನ್ನ ಸುಳ್ಳೆಂದು ಸಾಬೀತುಪಡಿಸೋಕೆ ಹೋಗದೆ ಸದ್ಯಕ್ಕದನ್ನು ನಿಜವೆಂದೇ ಒಪ್ಪಿಕೊಂಡು ಮುಂದೆ ಸಾಗೋಣ !
ಗುಂಡಣ್ಣಂಗೂ ಕಮೆಂಟಿಣಿಗೂ ಲವ್ವಾಗಿ ಬಹಳ ಸಮಯವಾಯ್ತು. ಬೇಕೆಂದಾಗ ಬಾರದ ಬೇಡವೆಂದರೂ ಬಳಿಬಂದು ಕಾಡೋ ಅವಳೆಂದರೆ ಗುಂಡಣ್ಣಂಗೆ ಅದೆಂತದೋ ಕುತೂಹಲ, ಕಾತುರ.ಹುಟ್ಟಾ ಕವಿಯಲ್ಲದ ಅವ ಅವಳ ನಿರೀಕ್ಷೆಯಲ್ಲೇ ಸೆಂಚುರಿ ಸಾಹಿತಿಯಾಗಿದ್ದು ! ಹುಚ್ಚುಚ್ಚಾಗಿ ಏನೇನೋ ಬರೆದಾಗ ಗೆಳತಿಯಾಗಿ ಗದರಿದವಳು ನೋವ ಅಲೆಯಲ್ಲಿ ತೇಲುವಂತೆ ಬರೆದಾಗ ತಾಯಿಯಾಗಿ ಸಾಂತ್ವನ ಹೇಳಿದ್ದೂ ಉಂಟು. ಯಾರಿಗೆ ಬರೆಯಬೇಕೆಂದು ಬೇಸತ್ತಿದ್ದ ಸಮಯದಲ್ಲಿ ಬರಗಾಲದ ಮಳೆಯಂತೆ ಪ್ರತ್ಯಕ್ಷಳಾದವಳ ಬಗ್ಗೆ ಅದೇನೋ ಪ್ರೀತಿ. ಹೇಳಲು ಪದಗಳಿಲ್ಲ, ಧ್ವನಿ ಸಿಗದ ಭಾವಗಳಷ್ಟೇ ಅವು.
ಬೇಯದ ಭಾವಗಳ ಹಾಗೇ ತೆಗೆದಿಟ್ಟವನಿಗೆ ಕುದಿಯೋ ಎಣ್ಣೆಯಲ್ಲಿ ಮುಳುಗಿಸಿದಂತೆ ಉಗಿದಿದ್ದವಳು, ವಿಯೋಗದ ಭಾವಗಳಿಗೆ ಶೀತಲತೆಯ ಸ್ಪರ್ಷವಿತ್ತದ್ದೂ ಉಂಟು. ಹೆಚ್ಚಾಗಿ ಮಡಿಸಿದ ಪ್ಯಾಂಟಿನ ಮಡಿಕೆಯನ್ನೋ, ಮಡಚಿಹೋದ ಶರ್ಟ ಕಾಲರನ್ನೋ ಗುರುತಿಸಬಲ್ಲಷ್ಟು ಆಪ್ತತೆ ತೋರೋ ಗೆಳತಿಯಾದವಳು ಇದ್ದಕ್ಕಿದ್ದಂತೆ ಅನಾಮಿಕಳಾದಂತಾಗಿ ಹೋದಾಗ ಎಲ್ಲಿಲ್ಲದ ಅಚ್ಚರಿ,ಗಾಬರಿ . ಬರೆಯೋ ಉಮೇದಲ್ಲಿ ಮಿಸ್ಸಾದ ಲಾಜಿಕ್ಕನ್ನೂ ಉತ್ತಮಪಡಿಸಬಹುದಾಗಿದ್ದ ಎಳೆಯನ್ನೂ ಸೂಕ್ಷ್ಮದರ್ಶಕ ಹಾಕಿ ಹುಡುಕೋ ಅವಳ ಮಾರ್ಗದರ್ಶನವಿಲ್ಲದಿದ್ದರೆ ತನ್ನ ಹಾದಿ ಗುರುವಿಲ್ಲದ,ಗುರಿಯಿಲ್ಲದಂತಾಗುತ್ತಿ
ಮಿಥ್ಯಾಲೋಕದ ಕಮೆಂಟಿಣಿ ವಾಸ್ತವಲೋಕದ ಮತ್ತೊಬ್ಬರ ಧ್ವನಿಯಷ್ಟೇ, ಇನ್ಯಾರದೋ ಭಾವಗಳಿಗೊಂದು ಮುಖವಷ್ಟೇ ಎಂಬುದು ಗುಂಡಣ್ಣನಿಗೂ ಗೊತ್ತು. ಆದರೂ ಅವಳೇ ವಾಸ್ತವದಲ್ಲಿ ಜೊತೆಯಿದ್ದರೆ ಹೇಗಿರುತ್ತಿತ್ತೆಂಬ ಕನಸು ! ಬೇಸರಿಸೋ ವಾಸ್ತವಕ್ಕಿಂತ ನೆರವೇರದ ಕನಸುಗಳೇ ಮೇಲಂತೆ !
ಬರೆಯೋಕಿಂತ ಹೆಚ್ಚು ಬರಹಕ್ಕೆ ಬರಬಹುದಾದ ಕಮೆಂಟುಗಳ ಚಿಂತೆಯೇ ರಾತ್ರಿಯಿಡೀ ನಿದ್ದೆಗೆಡಿಸಿ ಕಾಡಿಸಿದ್ದುಂಟು. ಬರಹದ ಸಂದರ್ಭದಲ್ಲಿನ ಸಿಟ್ಟು ಕಡಿಮೆಯಾದರೂ ಅದಕ್ಕೆ ಬಂದ ಸಾಲು ಸಾಲು ಕಾಮೆಂಟು ಭಾವ ತೀರ್ವತೆಯನ್ನು ವಾರವಿಡೀ ಕಾಪಿಟ್ಟಿದ್ದುಂಟು. ಗುಂಡಣ್ಣ ಚೆಂದವಿದೆ ಎಂದುಕೊಂಡ, ತಿದ್ದು ತೀಡಿ ರೂಪಗೊಟ್ಟ ಬರಹಗಳಿಗೆ ಯಾವ ಪ್ರತಿಕ್ರಿಯೆಯೂ ಮೂಡದಿದ್ದಾಗ ಇನ್ನೆಂದೂ ಬರೆಯೋದೇ ಇಲ್ಲವೆಂಬ ಶಸ್ತ್ರತ್ಯಾಗಕ್ಕೆ ಮುಂದಾದ್ದೂ ಉಂಟು. ಆಗೆಲ್ಲಾ ಗುಂಡಣ್ಣನಿಗನಿಸಿದ್ದೊಂದೇ. ನಾ ಬರೆಯೋದು ಕಾಮೆಂಟಿಣಿಯ ನಿರೀಕ್ಷೆಗಾ ? ಅವಳು ಬರಲಿಲ್ಲವೆಂದ ಮಾತ್ರಕ್ಕೆ ಬರೆದದ್ದು ಚೆಂದವಿಲ್ಲವೆಂದೇ ? ಲೈಕಿಣಿಯದೊಂದು ಸ್ಮೈಲು ಸಿಕ್ಕಲಿಲ್ಲವೆಂದ ಮಾತ್ರಕ್ಕೆ ನಾ ಬೇಸರವಾದೆನೆಂದೇ ? ಮುಂಚಿನಂತೆಯೇ ಇದ್ದವ ನಾನು ಇನ್ನು ಮುಂದೂ ಹಾಗೇ ಇರಲಾಗದೆಂದೇ ಎಂದು. ಹಾಗೇ ಮುಂದುವರೆದ ಪಯಣದಲ್ಲಿ ಮತ್ತೆಂದೋ ಲೈಕಿಣಿ, ಕಮೆಂಟಿಣಿಯರು ಜೊತೆಯಾದಾಗ ಹಿಂದಿನದೆಲ್ಲಾ ಮರೆತಂತೆ ಮುಖದಲ್ಲೊಂದು ಮಂದಹಾಸ. ಮತ್ತದೇ ಹಿಂಬಾಲಿಕೆಯ ಕನಸುಗಳ ಜಾತ್ರೆ.
ಕೊನೇ ಕೊಯ್ಲು:
ಕ್ರಿಯೆಯನ್ನು ಪುರುಷನೆಂದು,ಪ್ರತಿಕ್ರಿಯೆಯನ್ನು ಪ್ರಕೃತಿಯೆಂದೂ ಚಿತ್ರಿಸಲಾದ ಕಲ್ಪನೆಯಲ್ಲಿ ಗುಂಡಣ್ಣ ಪುರುಷನಾದರೆ,ಕಮೆಂಟಿಣಿ ಸ್ತ್ರೀಯಾಗಿದ್ದಾಳೆ. ಇಲ್ಲಿ ಮೂಡಿದ ಪಾತ್ರಗಳ ಭಾವಗಳು ಯಾರೂ ಆಗಿರಬಹುದು. ಯಾರದಾಗಿಲ್ಲದೆಯೂ ಇರಬಹುದು !
No comments:
Post a Comment