ಹ್ಯಾಪಿ ಹೋಲಿ,ಹ್ಯಾಪಿ ಹೋಳಿ ಅಂತ ಕೂಗಾಡ್ತಿದ್ದ ಹುಡುಗ್ರು
ಕೇರಿಲೆಲ್ಲಾ ಓಡಾಡ್ತಿದ್ರೆ ಅಂಗಳಗಳಲ್ಲಿನ ರಂಗೋಲಿಗಳು ಬಣ್ಣ ತುಂಬಿಕೊಳ್ತಿದ್ದವು. ಹೋಳಿ
ಅಂದ್ಕೊಂಡು ಯಾರ್ಯಾರು ಬಂದು ನನ್ನ ಬಿಳಿಸೀರಿಗೆ ಬಣ್ಣ ಹಾಕ್ತಾರೋ ಅಂತ ಹೆದರ್ಕೊಂಡು
ಮನೆಯೊಳಗೇ ಕೂತ ರಂಗಜ್ಜಿ, ಮಕ್ಕಳ ಜೊತೆಗೆ ತಾವೂ ಮಕ್ಕಳಾಗಿ ಮೈಯೆಲ್ಲಾ ಬಣ್ಣವಾಗಿದ್ದ
ಸಾಕಜ್ಜ, ಹೋಳಿಯ ಬಣ್ಣಗಳಿಗಿಂತ ತನ್ನೊಂದಿಗೆ ಆಡೋಕೆ ಬರ್ತಿದ್ದ ಮಕ್ಕಳನ್ನು ಖುಷಿಯಿಂದ
ನೋಡ್ತಿದ್ದ ಬೀದಿನಾಯಿ ಗುಂಡಣ್ಣ, ಬೀದಿಯ ಹುಡುಗರೆಲ್ಲಾ ಹೋಳಿ ಆಡ್ತಾ ಇದ್ರೆ ತಾನೂ ಅವರ
ಜೊತೆ ಸೇರಿಕೊಳ್ಳಲಾ ಬೇಡವ ಎಂಬ ಗೊಂದಲದಲ್ಲೇ ತಮ್ಮ ಅಪಾರ್ಟ್ ಮೆಂಟಿನ ಕಿಟಕಿಯಿಂದ
ನೋಡ್ತಿದ್ದ ರಾಹುಲ್..ಹೀಗೆ ಬೀದಿಯಲ್ಲೊಂದು ಬಣ್ಣಗಳ, ಭಾವಗಳ ಹೋಳಿ
ಹ್ಯಾಪಿ
ಹೋಳಿ,ಹ್ಯಾಪಿ ಹೋಳಿ ಅಂತ ದಾರೀಲಿ ಬರ್ತಿದ್ದ ಮಕ್ಕಳಿಗೆಲ್ಲಾ ಅವಳು ಬಣ್ಣ ಎರಚ್ತಾ ಇದ್ರೆ
ಹಾಕಿಸಿಕೊಂಡ ಮಕ್ಕಳೂ ಹೋಳಿ ಹೋಳಿ ಅಂದ್ಕೊಂಡು ಅವ್ಳ ಕೈಯಲ್ಲಿದ್ದ ಬಣ್ಣ ತಗೊಂಡು
ಅವ್ಳಿಗೇ ಒರಸ್ತಿದ್ರು. ಹಾಕಿಸಿಕೊಳ್ಳೋಕೆ ಒಪ್ಪದ ಮಕ್ಕಳನ್ನ ಒಂದಿಷ್ಟು ದೂರ
ಅಟ್ಟಿಸಿಕೊಂಡಾದ್ರೂ ಹೋಗೋಳು. ಅವಳಿಗೆ ಹಾಕೋಕೆ ಆಗ್ದೇ ಇದ್ರು ಓಡ್ತಿದ್ದ ಮಕ್ಕಳ
ಎದುರಿಗೆ ಬರೋ ಇನ್ಯಾರಾದ್ರೂ ಬಣ್ಣ ಹಾಕಿ ಬಿಡೋರು. ಹೆ ಹೆ, ಹೋ ಎಂಬ ಕೂಗಾಟವಲ್ಲಿ.
ಭಾರತದ ಕ್ರಿಕೆಟ್ ಮ್ಯಾಚಲ್ಲಿ ಫೋರೋ, ಸಿಕ್ಸೋ ಹೊಡೆದಾಗ ಅಥವಾ ನಮ್ಮ ಬೌಲರ್ಗಳಿಗೆ
ವಿಕೆಟ್ ಸಿಕ್ಕಾಗ ಜನ ಚೀರೋ ತರ. ಯಾರಾದ್ರೂ ಬಣ್ಣ ಹಾಕ್ಲಿ ಅಂತ್ಲೇ ಬಿಳಿ ಬಟ್ಟೆ
ಹಾಕ್ಕೊಂಡು ಆ ರಸ್ತೆಯಲ್ಲಿ ಓಡಾಡ್ತಿದ್ದ ಜನರಿಗೂ ಅವಳ ಬಣ್ಣದ ರೇಚನವಾಗಿತ್ತು.
ಯಾರಾದ್ರೇನು ಖುಷಿ ಹಂಚ್ಕೊಳ್ಳೋಕೆ ? ಹೋಳಿಗೆ ಬಣ್ಣ ಹಾಕೋಕೆ ?! ಹೋಗ್ತಿದ್ದ
ಬಸ್ಸುಗಳಿಗೇ ಬಣ್ಣ ಎರಚ್ತಾರಂತೆ , ಇನ್ನು ತಮ್ಮದೇ ಬೀದೀಲಿ ನಡ್ಕೊಂಡು ಹೋಗೋರ್ನ
ಬಿಡ್ತಾರಾ ? ಬಣ್ಣಗಳಲ್ಲಿ ಮಿಂದೆದ್ದ ಖುಷಿಯ ಬಗ್ಗೆ ವಿಧಿಗೂ ಅಸೂಯೆಯಾಗಿತ್ತು
ಅನ್ಸತ್ತೆ. ಯಾರ್ರೋ ಅದು ಆ ಹುಚ್ಚಿ ಜತೆ ಬಣ್ಣ ಆಡೋರು ಎಂಬ ದನಿಯಾಗಿ ಹೊರಬಿದ್ದಿತ್ತದು.
ಹುಡುಗರ ಮುಗ್ದತೆಯಲ್ಲಿನ ಖುಷಿ ಅಪರಾಧಿ ಪ್ರಜ್ಞೆಯೊಂದಿಗೆ ಸ್ಥಬ್ದವಾಗಿತ್ತು !
ಶಾಲೆಗೆ ಹೋಗೋ ಸಮಯದಲ್ಲಿ ತನ್ನದೇ ವಯಸ್ಸಿನ ಮಕ್ಕಳು ಗೋಲಿ, ಬುಗುರಿ ಆಡೋದನ್ನ ಕಂಡ್ರೆ
ರಾಹುಲ್ಲಿನ ಮನಸ್ಸಲ್ಲೂ ಆಸೆ. ತಾನೂ ಅವರ ಜೊತೆ ಸೇರ್ಕೋಬೇಕು ಅಂತ. ಆದ್ರೆ ಮನೇಲಿ
ಬಿಟ್ರೆ ತಾನೆ. ಇವನಿಗೂ ಅವರಿಗೂ ಇವನ ಅಪಾರ್ಟ್ಮೆಂಟಿಗೂ ಗ್ರೌಂಡ್ ಫ್ಲೋರಿಗೂ ಇದ್ದಷ್ಟೇ
ಅಂತರ ಇರಬೇಕು ಅನ್ನೋದು ಅವನ ಅಪ್ಪ-ಅಮ್ಮನ ನಿಲುವು. ಆದ್ರೂ ಒಮ್ಮೆ ಮನಸ್ಸು ತಡೀದೆ ಅವ್ರ
ಜೊತೆಗೆ ಕ್ರಿಕೆಟ್ ಆಡೋಕೆ ಹೋಗಿ ಬಿದ್ದು ಗಾಯ ಮಾಡ್ಕೊಂಡ ದಿನ ಮನೆಯಲ್ಲೂ ಚೆನ್ನಾಗಿ
ಏಟು ಬಿದ್ದಿತ್ತವನಿಗೆ. ನಾವೆಷ್ಟು ಕಷ್ಟ ಪಟ್ಟು ಸಾವಿರ ಸಾವಿರ ಕಟ್ಟಿ ನಿನ್ನನೊಂದು
ಒಳ್ಳೆ ಸ್ಕೂಲಿಗೆ ಸೇರಿಸಿದ್ದು ಆ ಬೀದಿಮಕ್ಕಳ ಜೊತೆಗೆಲ್ಲಾ ಸೇರಿ ಹಾಳಾಗ್ಲಿ ಅಂತಾನಾ ?
ಮನೆಯೊಳಗೇ ಇದ್ದು ಏನಾದ್ರೂ ಮಾಡ್ಕೊ. ಹೊರಗೇನಾದ್ರೂ ಕಾಲಿಟ್ಯೋ ? ನೋಡು ಅಂತ
ಅವನಪ್ಪ-ಅಮ್ಮ ಬಯ್ತಾ ಇದ್ರೆ ಶಾಲೆಯಲ್ಲಿ ದಿನಾ ಪಾಟ ಪಾಟ ಅಂತನ್ನೋದು ಬಿಟ್ರೆ ಆಟ
ಅನ್ನೋದು ಸಿಲೆಬಸ್ಸಲ್ಲಿ ಮಾತ್ರ ಇದೆ ಅಂತ, ಶಾಲೆಯ ಸುತ್ತ ಇರೋ ಗ್ರೌಂಡು ಶಾಲಾ ವಾಹನಗಳ
ಪಾರ್ಕಿಂಗಿಗೆ ಮಾತ್ರ ಅಂತ ಹೇಗಾದ್ರೂ ಹೇಳ್ತಾನವ.
ಗುಂಡಣ್ಣಂಗವತ್ತು ಸಖತ್
ಖುಷಿ. ತನ್ನ ಪಾಡಿಗೆ ಮಲಗಿದವನನ್ನ ಯಾರಪ್ಪಾ ನೀರಾಕಿ ಎಬ್ಬಿಸಿದವರು ಅಂತ ಬೈಯ್ಕೊಳ್ತಾ
ಕಣ್ಣು ಬಿಟ್ರೆ ಕಣ್ಣೆದುರು ಒಂದಿಷ್ಟು ಮಕ್ಕಳು. ಅವ್ರ ಕೈಯಲ್ಲೆಲ್ಲಾ ಬಣ್ಣ. ಎಲ್ಲಾ
ತನ್ನ ತಲೆಗೆ, ಮುಖಕ್ಕೆ ಮೆತ್ತೋಕೆ ಬರ್ತಾ ಇದ್ರೆ ಒಮ್ಮೆ ಬೌ ಬೌ ಅಂದು ಅವ್ರನ್ನೆಲ್ಲಾ
ಹೆದರಿಸಿಬಿಡ್ಲಾ ಅನ್ನಿಸ್ತು. ಆದ್ರೂ ಆ ಮಕ್ಕಳ ಖುಷಿಯ ಮುಖದಲ್ಲಿ ಗಾಬರಿ ತರೋಕೆ ಇಷ್ಟ
ಆಗದೇ ಸುಮ್ಮನಿದ್ದ ಅವ. ಕಣ್ಣಿಗೊಂದು ಬಿಟ್ಟು ಎಲ್ಲಾದ್ರೂ ಬಣ್ಣ ಹಾಕ್ಕೊಳ್ರಪ್ಪ ಅಂತ
ಮುಖ ಒಡ್ಡಿ. ನಾಯಿ ಮುದ್ದುಮಾಡಿಸ್ಕೊಳ್ತಿದೆ ಅಂದ್ಕೊಂಡು ಅದ್ರ ಮುಖಕ್ಕೂ ಹಚ್ಚಿದ್ರೂ,
ಬಾಲಕ್ಕೂ ಮೆತ್ತಿದ್ರು. ಏ ಆ ನಾಯಿ ಬಿಡ್ರೋ ಅಂತ ಬಿಡಿಸೋಕೆ ಬಂದ ಸಾಕಜ್ಜನಿಗೂ
ಮೆತ್ತಿದ್ರು. ಎಲಾ ಮಕ್ಕಳ್ರಾ ನನ್ನ ಬಟ್ಟೆ ಎಲ್ಲಾ ಹಾಳು ಮಾಡಿದ್ರಲ್ರೋ ಅಂತ ಹುಸಿ ಕೋಪ
ತೋರ್ಸಿದ ಅಜ್ಜ ಸುಮ್ಮನೇ ಅವ್ರನ್ನ ಓಡಿಸಿಕೊಂಡು ಹೋದ ಹಾಗೆ ಮಾಡಿ ಕೊನೆಗೆ ಅವ್ರ
ಗುಂಪಲ್ಲೇ ಒಂದಾದ್ರು, ಎದುರಿಗೆ ಸಿಕ್ಕ ಮತ್ತೊಂದು ನಾಯಿಗೆ ಬಣ್ಣ ಹಚ್ಚೋಕೆ !
ನಾಯಿಯ ಬಾಲಕ್ಕೆ ಪಟಾಕಿ ಸರ ಹಚ್ಚಿ ತಮಾಷೆ ನೋಡಿದ ಮಕ್ಕಳಿಗೆ ಅದೇ ನಾಯಿಯ ಮೇಲೆ
ಪ್ರೀತಿಯುಕ್ಕಿದೆ ಹೋಳಿಯ ಬಣ್ಣಗಳೊಂದಿಗೆ. ಹುಚ್ಚಿ ಹುಚ್ಚಿ ಅಂತ ಜನರಿಂದೆಲ್ಲಾ
ತಾತ್ಸಾರಗೊಂಡು ಎಲ್ಲೋ ಮೂಲೆಯಲ್ಲಿ ಕೂತಿರುತ್ತಿದ್ದ ಅವಳಲ್ಲೊಂದಿಷ್ಟು ಚೈತನ್ಯ ಬಂದಿದೆ
ಯಾರೋ ಎರಚಿದ ಬಣ್ಣದಿಂದ. ಏನೋ ಮಾಡಲು ಹೋಗಿ ಅನಿರೀಕ್ಷಿತವಾಗಿ ಬಿದ್ದ ಬಣ್ಣದಿಂದ
ಸಾಕಜ್ಜನ ಬಾಲ್ಯ ಮರಳಿದೆ. ಮಗನ ಕಿಟಕಿಯಾಚೆಗಿನ ದೃಷ್ಠಿಯನ್ನು ಅರ್ಥ ಮಾಡ್ಕೊಂಡು
ಅವನನ್ನೂ ಕರ್ಕೊಂಡು ಚಡ್ಡಿಯಲ್ಲಿ ಹೊರಬಂದ ಅಪ್ಪ ಬೀದಿಯ ಜನರೊಂದಿಗೆ ಒಂದಾಗಿ ಹೋಳಿ
ಆಡ್ತಾ ಇದ್ರೆ ರಾಹುಲನಿಗೆ ಅನಿರೀಕ್ಷಿತ ಆಶ್ಚರ್ಯ. ಹೋಳಿಯೆನ್ನೋದು ಬರಿ ಬಣ್ಣಗಳ
ಭಾವವಲ್ಲ. ಭಾವಗಳ ಬಣ್ಣ ಮೇಳವಿಸೋ, ಮನಸ್ಸುಗಳ ಬಣ್ಣ ಬಯಲಾಗೋ ಹಬ್ಬ. ಇಲ್ಲಿನ ಹುಚ್ಚಿ,
ರಾಹುಲ್, ಗುಂಡಣ್ಣ, ಸಾಕಜ್ಜಿ, ರಂಗಮ್ಮ ಬೇರ್ಯಾರೂ ಅಲ್ಲ. ನಮ್ಮೊಳಗಿನ, ಸುತ್ತಲೂ ಇರೋ
ಭಾವಗಳೇ ಇವು. ಮೇಲುಕೀಳು, ಸಂಪತ್ತು, ಅಂತಸ್ತು, ಜಾತಿ, ಬೀದಿಗಳೆಂದು ನಾವೇ
ಸೃಷ್ಠಿಸಿಕೊಂಡ ಮೇಲರಿಮೆ, ಕೀಳರಿಮೆಗಳಲ್ಲೇ ಮಕ್ಕಳ ಬಾಲ್ಯ , ಯುವಕರ ಯೌವನ, ವಯಸ್ಕರ
ಮುಪ್ಪೂ ಕೊಚ್ಚಿಹೋಗಿ ಸಂತೋಷ ಮರೆಯಾಗೋ ಸಮಯದಲ್ಲಿ ನಮ್ಮತನ ನೆನಪಿಸೋಕೆ ಬರೋ
ಹಬ್ಬಗಳಲ್ಲೊಂದು ಹೋಳಿ. ಬಣ್ಣಗಳ ಖುಷಿಯಾಗೋ ನೀರಿಗ್ಯಾವ ಅಂತಸ್ತು, ಜಾತಿ ? ಹಿಡಿದವನ
ಭಾವ, ನೀಡಿದ ಬಣ್ಣವಷ್ಟೇ ಅದಕ್ಕೆ. ವರ್ಷಕ್ಕೊಂದು ದಿನ ಹಣೆಗೆ ಬಣ್ಣ ಮೆತ್ತಿ, ಉಳಿದ
ದಿನವೆಲ್ಲಾ ಅಸಲಿಯತ್ತನ್ನು ಮರೆ ಮಾಚೋ ಆತ್ಮವಂಚನೆಗಿಂತ ನಮ್ಮಲ್ಲಿನ ಅಹಮಿಕೆಗಳ ಕೊಳೆ
ಕೊಚ್ಚಿ, ಮುಗ್ದತೆಗೊಂದು ಮೆರಗು ಸಿಕ್ಕ ದಿನವೇ ನಿಜವಾದ ಹೋಳಿ
Excellent one. ನಿಮ್ಮ ಕಲ್ಪನೆಗೆ ಹಾಗೂ ಅದನ್ನು ವಾಸ್ತವದೊಂದಿಗೆ ಸಮೀಕರಿಸಿದ ಬಗೆಗೊಂದು ಸೆಲ್ಯೂಟ್!
ReplyDeleteThanks a lot :-)
Delete