ಹಳೆ ಕಹಿಗಳ ಗೋರಿಯಾಚೆ ಹೊಸ ಕನಸಿನ ಬೆಳಕಿದೆ
ಉದಯರವಿಯ ಕಿರಣಗಳಲಿ ನೋವ ಮಂಜು ಕರಗಿದೆ
ಜೀವದಾಸರೆಯೇ ಕೊಚ್ಚಿ ಉಕ್ಕಿ ಹರಿದ ಕಾಲವು
ಇಳಿಯೆ ಮತ್ತೆ ದಂಡೆಗಳಲಿ ಬದುಕಿನಾಸೆ ಚಿಗುರಿದೆ
ಪಾತಾಳದ ನೋವ ನರಕ ಸಾಕಾಗಿದೆ ಏಳಿರಿ
ನಿನ್ನೆ ನೆನಪ ನೀರಾಗಿಸಿ, ಬೇರಾಗಿಸಿ ಬೆಳೆಯಿರಿ
ಜಗಳಕಲ್ಲ ಗಗನಕಿರಲಿ ಬೆಳೆವ ದೃಷ್ಟಿ ನಮ್ಮದು
ನಗುವಳುವಿನ ಮಳೆಬಿಸಿಲಿಗೆ ಜೀವವೃಕ್ಷ ಬೆಳೆಯಲಿ
ಮಲಗಿದಲ್ಲೆ ನಮ್ಮ ನಿದ್ದೆ ಎಚ್ಚರಿಸುವ ಗೋರಿಯು
ಕಚ್ಚಾಡಲು ಸಮಯವಿಲ್ಲ ಚುರುಕು ಎಂಬ ಕಾಲವು
ಕೂಡಿ ನಡೆಯೆ ಸೊಬಗು ನೋಡ ಎಂದ ನಗುವ ಕಂಬಕೆ
ದೂರ ದೇಹಗಳನು ಬೆಸೆವ ಭಾವ ತಂತಿ ಸಾಥಿಯು
ಹಳೆ ಅಹಮಿಕೆ, ಸ್ವಾರ್ಥ, ಕ್ರೋಧ, ದ್ವೇಷದಮಲು ಇಳಿಯಲಿ
ಗುರಿಯ ಹಕ್ಕಿ ರೆಕ್ಕೆ ಪಡೆದು ಗಮ್ಯದತ್ತ ಹಾರಲಿ
ಅಜ್ಞಾನದ ಬಲೆಯ ಕಿತ್ತು ವಿಷದ ಕೊಳೆಯ ತೊಳೆಯುವ
ನವನವೀನ ವಿಷಯಕೆಮ್ಮ ಗೂಡ ತೆರೆದುಕೊಳ್ಳುವ
ಗೆಳೆಯರಿಗೆಲ್ಲಾ ಕ್ಯಾಲೆಂಡರ್ ಹೊಸವರ್ಷದ ಶುಭಾಶಯಗಳು :-)

ಉತ್ತಮ ಆಶಯದ ಸು೦ದರ ಕವನ. ನಿಮಗೂ ಹೊಸ ವರ್ಷ೨೦೧೫ರ ಶುಭಾಶಯಗಳು :)
ReplyDeleteನಿಮಗೂ ಕ್ಯಾಲೆಂಡರ್ ಹೊಸವರ್ಷದ ಶುಭಾಶಯಗಳು ಪ್ರಭಾಮಣಿ ಅವ್ರೆ. ಮೆಚ್ಚುಗೆಗೆ ಧನ್ಯವಾದಗಳು :-)
Delete