ರೈಟ್ ಕ್ಲಿಕ್ ಮಾಡಲೂ ಸಾಧ್ಯವಿಲ್ಲದಂತೆ ತುಂಬಿಹೋಗಿತ್ತು ಡೆಸ್ಕಟಾಪು. ಡೆಸ್ಕಟಾಪಿನ ಮೇಲೆ, ಸಿ ಡ್ರೈವಲ್ಲಿ ಜಾಸ್ತಿ ಏನು ಇಡಬೇಡಿ, ಕಂಪ್ಯೂಟ್ರು ನಿಧಾನವಾಗತ್ತೆ ಅಂತಿದ್ದವ್ನೇ ಈ ತರ ಕಸ ತುಂಬಿಸ್ಕೊಂಡಿರೋದಾ ಅನಿಸ್ಬಿಡ್ತು ಒಮ್ಮೆ. ಕಸ ಅನ್ನೋಕೆ ಮನಸ್ಸು ಬಾರದ ಕಸ ಅದು. ಬೆಳಕ ಕಂಡು ವಾರವಾಗಬೇಕಿದ್ದ ಕನಸುಗಳು ನೋಟಪ್ಯಾಡಿನ ಗೀಚುಗಳೇ ಆಗುಳಿದು ಪರದೆಯ ತುಂಬೆಲ್ಲಾ ಮಲಗಿಬಿಟ್ಟಿದ್ವು. ದಿನದೆಂಟು ಘಂಟೆಗಳು ಹೊಟ್ಟೆಪಾಡಿಗೆ , ಅದಾದ ನಂತರ ಎಂಟು ಘಂಟೆ ನಿದ್ರೆ ಅಂದ್ರೂ ಇನ್ನೆಂಟು ಘಂಟೆ ಏನ್ಮಾಡ್ತೀಯೋ ? ಒಂದೆಂರಡು ಘಂಟೆ ನನ್ನ ಪಾಲಿಗೂ ಕೊಡೋ ಅಧಿಕಾರಿ ಅಂತಿದ್ದ ಅವಳ ಕಿಲಕಿಲ ನಗು ನೆನಪಾಗಿ ತೂಕಡಿಕೆ ಓಡಿಹೋಗಿ ಮತ್ತೆ ಎಂದಿನ ಸಂಕಟ ಶುರುವಾಗಿತ್ತು. ಹುಡುಗಾಟದ ಹುಡುಗನಾಗಿದ್ದ ನನ್ನ ಐಪಿಎಸ್ ಓದಿ ಧಕ್ಷ ಅಧಿಕಾರಿಯಾಗುವಂತೆ ಪ್ರೇರೇಪಿಸಿದ್ದು ಅವಳ ಪ್ರೀತಿ. ನೀನು ಅಧಿಕಾರಿಯಾಗೋದನ್ನ ನೋಡಿ ಖುಷಿಪಡಬೇಕು ನಾನು ಅನ್ನುತ್ತಿದ್ದ ಅವಳು ನಾನು ಅಧಿಕಾರಿಯಾದ ಕೆಲವೇ ತಿಂಗಳಲ್ಲಿ ಮಾಯವಾಗಿದ್ದಳು. ಮೂರು ದಿನದಿಂದ ಯಾಕಿವಳ ಫೋನಿಲ್ಲ, ಸುದ್ದಿಯಿಲ್ಲ ಅನ್ನೋ ಆಲೋಚನೆಯಲ್ಲಿದ್ದವನನ್ನ ಗಾಬರಿಗೆ ತಳ್ಳಿದ್ದು ಅವಳ ತಂದೆ ತಂದ ಮಗಳು ಕಾಣೆಯಾಗಿದ್ದಾಳೆ ಅನ್ನೋ ಕಂಪ್ಲೇಂಟು. ಕಾಣೆಯಾದ ಸ್ನೇಹಿತೆಯ ಹುಡುಕೋ ಹೊಣೆ ನನಗೇ ಬಿದ್ದಿತ್ತು. ಆದ್ರೆ ಸ್ನೇಹಿತನಾಗಲ್ಲ, ಒಬ್ಬ ಅಧಿಕಾರಿಯಾಗಿ. ನಂದಿ ಬೆಟ್ಟಕ್ಕೆ ಹೋಗಿ ಬರ್ತೀನಿ ಅಂತ ಹೋದ ಮಗಳು ಎರಡು ದಿನವಾದ್ರೂ ಇನ್ನೂ ಮರಳಿಲ್ಲ ಅನ್ನೋ ಅವಳ ಪೋಷಕರ ಕಂಪ್ಲೇಂಟಿನ ಹಿಂದೆ ಬಿದ್ದಿದ್ದ ನನಗೆ ಒಂದು ವಾರ ಕಳೆದರೂ ಅವಳ ಸುಳಿವು ದಕ್ಕಿರಲಿಲ್ಲ. ನಂದಿ ಬೆಟ್ಟದ ಸುತ್ತಮುತ್ತ ಹುಡುಕದ ಜಾಗವಿಲ್ಲ. ವಿಚಾರಿಸದ ಸ್ನೇಹಿತರಿಲ್ಲ. ಯಾರಿಗೆ ಕೇಳಿದ್ರೂ ಅವ್ಳು ನಮ್ಮ ಮನೆಗೆ ಬಂದಿಲ್ಲ ಅನ್ನೋ ಉತ್ತರವೇ. ಸ್ವಿಚ್ಚಾಫಾದ ಅವಳ ಫೋನಿನ ಕಂಪ್ನಿಯವರಿಂದ ಪಡೆದ ಮಾಹಿತಿಯ ಪ್ರಕಾರ ಅವಳ ಸಿಮ್ಮು ಬಳಸಲ್ಪಟ್ಟಿದ್ದು ಬನಶಂಕರಿಯ ಬಳಿ ಎರಡು ದಿನದ ಹಿಂದೆ. ಅದಾದ ಮೇಲೆ ಸ್ವಿಚ್ಚಾಫಾದ ಅದರಿಂದ ಇಲ್ಲಿಯವರೆಗೆ ಒಂದು ಸಿಗ್ನಲ್ಲೂ ದೊರಕದೇ ಮೊಬೈಲ್ ಸಿಗ್ನಲ್ ಮೂಲಕ ಅವಳ ಹುಡುಕೋ ಆಸೆಯೂ ಡೆಡ್ ಎಂಡ್ ಮುಟ್ಟಿಬಿಟ್ಟಿತ್ತು. ಎಲ್ಲಾದ್ರೂ ಒಂದು ಹೆಣ್ಣ ಶವ ಸಿಕ್ಕಿದೆಯಂದ್ರೆ ಇವಳೆದ್ದೇನಾ ಅನ್ನೋ ಭಯ . ನಿದ್ದೆಯಿಲ್ಲದ ಒಂದು ವಾರದ ನಂತರ ಮೆಚ್ಚಿನ ಡೆಸ್ಕಟಾಪಿನಲ್ಲಿ ಏನೋ ಮಾಹಿತಿ ತಾಳೆ ಹಾಕುತ್ತಾ ಕೂತವನಿಗೆ ಜೊಂಪು ಹತ್ತಿತ್ತು.
ಕಾಲಚಕ್ರ ಹಿಂದೆ ತಿರುಗುತ್ತಿದೆಯೋ ಅನ್ನಿಸುವಂತೆ ನೆನಪುಗಳ ಸುರುಳಿಯಲ್ಲಿ ಹಿಂದೆ ಹಿಂದೆ ಸಾಗುತ್ತಿದ್ದ ನನಗೆ ಪರಿಚಯವಿದ್ದ ಮುಖವೊಂದು ಕಂಡಂತಾಯಿತು. ಹಾ. ಅದು ಅವಳೇ. ನನ್ನನ್ನೇನೋ ಸಮಾಧಾನ ಮಾಡುತ್ತಿದ್ದಾಳೆ. ನೆನಪಾಗುತ್ತಿದೆ. ಅವಳ ನೆನಪಲ್ಲಿ ಬರೆದ ಕವನಗಳನ್ನೊಂದು ಬುಕ್ಕು ಮಾಡಬೇಕಂತ ಹೊರಟಿದ್ದ ನಾನು ಹಿರಿಯರೊಬ್ಬರ ಮಾರ್ಗದರ್ಶನಕ್ಕೆ ಹೋಗಿ ಬಂದ ದಿನ. ನೀ ಇಲ್ಲಿಯವರೆಗೆ ಬರೆದದ್ದು ಕವನವೇ ಅಲ್ಲ. ಅದನ್ನೋದು, ಇದನ್ನೋದು ಅಂತ ಒಂದಿಷ್ಟು ಬುಕ್ಕುಗಳ ಲಿಸ್ಟು ಕೊಟ್ಟು ಕಳಿಸಿದ ದಿನವದು. ಮಾರ್ಗದರ್ಶನಕ್ಕೆ ಅಂತ, ನನ್ನದೊಂದು ಪುಸ್ತಕ ಮಾಡ್ಬೇಕು ಅಂತಿದ್ದೀನಿ ಸಹಾಯ ಮಾಡ್ತೀರಾ ಅಂತ ಅನೇಕರ ಕಾಲು ಹಿಡಿದು ಅವರೆಲ್ಲಾ ಪರಿಚಯವಾದಷ್ಟೇ ಚುರುಕಾಗಿ ಮಾಯವಾದ ನಂತರ ಈ ಹಿರಿಯರು ಸಿಕ್ಕಿದ್ರು. ಅವರೂ ಹೀಗಂದ ಬೇಸರಲ್ಲಿ ಕೂತಿದ್ದ ದಿನವದು. ಅಂದು ನಾನು ಬಾಯ್ಬಿಟ್ಟು ಹೇಳದಿದ್ರೂ ಅವಳೇ ನಿಧಾನವಾಗಿ ಕಾರಣ ಅರಿತು ಸಮಾಧಾನ ಮಾಡಿದ್ಲು. ದೇವರಿಚ್ಛೆಯೇ ಬೇರೆಯಿದ್ರೆ ನೀನೇನು ಮಾಡೋಕೂ ಆಗಲ್ಲ ಅಂದ್ಕೊ. ನೀನು ನನ್ನ ಮೆಚ್ಚಿನ ಅಧಿಕಾರಿಯಾಗ್ಬೇಕು ಅನ್ನೋದೇ ಆ ದೇವರಿಚ್ಚೆ ಆಗಿರ್ಬೋದು ಕಣೋ. ಬೇಜಾರ್ಮಾಡ್ಕೋಬೇಡ. ಓದೋದ್ರ ಕಡೆ ಗಮನ ಕೊಡು. ಬೇಜಾರಾದಾಗ್ಲೆಲ್ಲ ಬರೀತಾ ಇರು. ನಿನ್ನ ಭಾವಗಳ್ನ, ನಿನ್ನ ನೋವುಗಳ್ನ. ನಿನ್ನೊಳಗಿನ ಕವಿ ಮಾಗಿದ ಸಮಯದಲ್ಲಿ ಅದನ್ನ ಪ್ರಕಟಿಸೊ ಪ್ರಕಾಶಕ ಒಬ್ಬ ಸಿಕ್ಕೇ ಸಿಗ್ತಾನೆ ಅಂತ ಸಮಾಧಾನಿಸಿದ್ಲು. ಅದಾಗಿ ತಿಂಗಳುರುಳಿತ್ತು. ನಾ ಚೆನ್ನಾಗಿ ಓದಿ ಅವಳಿಚ್ಛೆಯ ಅಧಿಕಾರಿಯಾಗಿಯೂ ಆಗಿತ್ತು. ಅವಳಂದಂತೆ ಹೊಸ ಪ್ರಕಾಶಕರೊಬ್ಬರು ಪರಿಚಯವಾಗಿ ನನ್ನ ಕವನಗಳ ಪ್ರಕಟಿಸೊ ಉತ್ಸುಕತೆಯನ್ನೂ ತೋರಿದ್ರು. ಆದ್ರೆ ಇವಳಿಗೆ ಹೇಳೇ ಪ್ರಕಾಶನಕ್ಕೆ ಕಳುಹಿಸಬೇಕು ಅಂತಿದ್ದ ನನಗೆ ಎರಡು ಮೂರು ದಿನದಿಂದ ಸರಿ ಮಾತಿಗೆ ಸಿಕ್ಕಿರಲಿಲ್ಲ. ಪ್ರತಿ ಸಲ ಫೋನ್ ಮಾಡಿದಾಗ್ಲೂ ಏನೋ ಗಡಿಬಿಡಿಯಲ್ಲಿದ್ದಂತೆ ಇರ್ತಿದ್ಲು. ಚಾಮರಾಜನಗರದ ಸುತ್ತಮುತ್ತ ಯಾವ್ಯಾವ ಪ್ರೇಕ್ಷಣೀಯ ಸ್ಥಳಗಳಿವೆ ಅಂತ ವಿಚಾರಿಸಿದ್ದೇ ಕೊನೆ. ಅದಾದ ಮೇಲೆ ಮೂರು ದಿನದಿಂದ ಫೋನೇ ಇರ್ಲಿಲ್ಲ. ಒಂದೋ ಸ್ವಿಚ್ ಆಫ್ ಅಂತ್ಲೋ ಇಲ್ಲ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಅಂತ್ಲೋ ಬರ್ತಿತ್ತು. ಎಲ್ಲಿ ಹೋದ್ಲು ಇವ್ಳು ? ಅನ್ನೋ ಆಲೋಚನೆಗಳು ಕಾಡ್ತಿರುವಾಗ್ಲೇ ಏನೋ ಮಿಂಚು ಹೊಳೆದಂತಾಯ್ತು.
ಅವ್ಳತ್ರ ಇದ್ದಿದ್ದು ಎರಡು ಸಿಮ್ಮು ! ಆಪ್ತ ಸ್ನೇಹಿತರಿಗೆ ಬಿಟ್ರೆ ಅವಳ ಎರಡನೆಯ ಸಿಮ್ಮಿನ ವಿಚಾರ ಉಳಿದವರಿಗೆ ಗೊತ್ತಿದ್ದುದು ಡೌಟೇ ! ಸಿಟಿಯಲ್ಲಿ ನೆಟ್ವರ್ಕೇ ಇರದ ಈ ಸಿಮ್ಮಿಟ್ಕಂಡು ಏನ್ಮಾಡ್ತೀಯ, ಬಿಸಾಡು ಅಂದವರಿಗೆಲ್ಲಾ ಏ ಇದು ಹಳ್ಳಿ ಕಡೆ ಉಪಯೋಗಕ್ಕೆ ಬರತ್ತೆ. ಅಲ್ಲಿ ಯಾವ ನೆಟ್ವರ್ಕು ಇರದಿದ್ರೂ ಎಲ್ಲಾದ್ರೂ ಗುಡ್ಡ ಹತ್ತಿದ್ರೆ ಇದ್ರ ನೆಟ್ವರ್ಕು ಸಿಗತ್ತೆ ಅಂತಿದ್ದ ಅವಳ ಮಾತು ನೆನಪಾಗಿ ಒಂದು ಆಶಾಕಿರಣ ಮೂಡಿತು. ಅವಳ ಮೊದಲ ಸಿಮ್ಮು ನಿಜವಾಗ್ಲೂ ಕಳೆದು ಹೋಗಿ ಆಮೇಲೆ ಎರಡನೆಯ ಸಿಮ್ಮನ್ನೇನಾದ್ರೂ ಬಳಸಿರಬಹುದಾ ಅಂತ . ನನ್ನ ಕಾಲಿಗೆ ಸಿಗದಿದ್ರೂ ಅವಳು ಆ ತರ ಏನಾದ್ರೂ ಬಳಸಿದ್ದೇ ಆಗಿದ್ರೆ ಅವಳ ಆ ಮೂಲಕ ಹುಡುಕಬಹುದು ಎಂಬ ಆಸೆ. ಆದ್ರೆ ಇಲ್ಲೂ ಒಂದು ಅಂಶ ಮಿಸ್ಸಿಂಗು. ನಾನು ಫೋನ್ ಮಾಡ್ತಿದ್ದಿದ್ದು ಎರಡನೆಯ ಸಿಮ್ಮಿಗೆ. ಅದರಲ್ಲಿ ನನಗೆ ಫೋನಿಗೆ ಸಿಗದೆ ಮೂರು ದಿನಗಳಾಗಿತ್ತು ಅವಳು ಕಳೆದು ಹೋಗಿದ್ದಾಳೆ ಅಂತ ಕಂಪ್ಲೇಟ್ ಬಂದಾಗ. ಆದ್ರೆ ಇವ್ರಪ್ಪ ನೋಡಿದ್ರೆ ಮಿಸ್ಸಾಗಿ ಎರಡು ದಿನವಾಗಿದೆ ಅಂತ ಕಂಪ್ಲೇಂಟ್ ಕೊಟ್ಟಿದ್ರು. ಟೆಲಿಫೋನ್ ಕಂಪ್ನಿಯವ್ರು ಎರಡು ದಿನದ ಹಿಂದೆ ಬನಶಂಕ್ರಿಯ ಹತ್ರ ಸಿಗ್ನಲ್ ಇತ್ತು ಅಂದಿದ್ದು ಅವಳ ಮೊದಲ ಸಿಮ್ಮಿಗೆ . ಆದ್ರೆ ಅದು ಮೊದಲ ಸಿಮ್ಮು. ಎರಡನೆಯದು ? ಏನಾದ್ರಾಗಲಿ ಅಂತ ಎರಡನೇ ಸಿಮ್ಮಿನ ಕಂಪೆನಿಯವ್ರನ್ನ ಸಂಪರ್ಕಿಸಿದಾಗ ವಿಚಾರಣೆ ದಿಕ್ಕೇ ಬದಲಾಯ್ತು.
ಅವಳು ಮಿಸ್ಸಾಗಿ ಒಂದು ದಿನ ಆದ ಮೇಲೆ ಅಂದ್ರೆ ನನ್ನ ಫೋನಿಗೆ ಸಿಕ್ಕದ ಎರಡನೆಯ ದಿನ ಅವಳ ಎರಡನೆಯ ಸಿಮ್ಮು ಕೊಳ್ಳೆಗಾಲದಲ್ಲಿ ಬಳಸಲ್ಪಟ್ಟಿತ್ತು. ಈ ನಂದಿ ಬೆಟ್ಟ ಎಲ್ಲಿ ? ಕೊಳ್ಳೆಗಾಲ ಎಲ್ಲಿ ? ಅಂದ್ರೆ ಏನೋ ಮಿಸ್ಸಿಂಗು. ಚಾಮರಾಜನಗರದ ಬಗ್ಗೆ ಕೇಳ್ತಿದ್ದ ಅವಳು ಅಲ್ಲಿಗೇನಾದ್ರೂ ಹೋಗಿರ್ಬೋದಾ ? ಆದ್ರೆ ಅಲ್ಲಿ ಅವಳಿಷ್ಟ ಆಗಬಹುದಾದ ಸುಮಾರಷ್ಟು ಜಾಗಗಳಿವೆ. ಎಲ್ಲಿ ಅಂತ ಹುಡುಕೋದು ? ಮಲೆ ಮಹದೇಶ್ವರ ಬೆಟ್ಟ ಇದೆ. ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ನೂರು ಕಿ.ಮಿ ಆಸು ಪಾಸಲ್ಲಿದೆ. ಹೊಯ್ಸಳ ದೇವಸ್ಥಾನ ಅಂತ ನೋಡಿದ್ರೆ ಅದೂ ಇದೆ. ಬೆಳಬೆಳಗ್ಗೆ ಮನೆಯಿಂದ ಹೊರಟಿದ್ದಾಳೆ, ಅವಳ ಕೊನೆಯ ಸಿಗ್ನಲ್ಲು ಬನಶಂಕರಿ ಹತ್ರ ಇದೆ ಅಂದ್ರೆ ಅವ್ಳು ಈ ಕಡೆಯೇ ಹೊರಟಿರ್ಬೇಕು ಅನ್ನೋ ಸಂಶಯ ಬಲವಾಯ್ತು.
ಮಲೆಮಹದೇಶ್ವರಕ್ಕೆ ಬೆಂಗ್ಳೂರಿಂದ ೨೧೦ ಕಿ.ಮಿ. ಮದ್ದೂರು ಅಥವಾ ಕೊಳ್ಳೇಗಾಲದ ಮೇಲೆ ಹೋಗೋ ಬದ್ಲು ಕೃಷ್ಣಗಿರಿಯ ಮೇಲೆ ಹೋದ್ರೂ ಇನ್ನೂರೈವತ್ತರ ಹಾದಿ. ಬೆಳಗ್ಗೆ ಮುಂಚೆ ಮನೆಯಿಂದ ಹೊರಟವ್ರು ಮಲೆ ಮಹದೇಶ್ವರ ತಲುಪೋ ಹೊತ್ತಿಗೆ ಮಧ್ಯಾಹ್ನ ಆಗಿರುತ್ತೆ. ಅಲ್ಲಿಂದ ನಾಗಮಲೆಗೆ ಹೋದ್ರೆ ಬರೋದೇ ಸಂಜೆ ಆಗುತ್ತೆ. ಅದಲ್ದೇ ಅಲ್ಲಿ ಗುಂಜುಮಲೆ, ಶಂಕಮಲೆ, ಕೊಂಬುಡಿಕ್ಕಿ, ಜೇನು ಮಲೆ ಅಂತ ಏನೇನೋ ಸ್ಥಳಗಳಿವೆ. ಅದನ್ನೆಲ್ಲಾ ನೋಡ್ತಾ ಹೋದ್ರೆ ಮಲೆ ಮಹದೇಶ್ವರದಲ್ಲೇ ಮೂರು ದಿನ ಆಗತ್ತೆ ಅಂತ ಪ್ಲಾಷಾಯ್ತು. ಶಾಂತಿ, ಪ್ರಕೃತಿ ಅಂತ ಆಸೆ ಪಡೋ ಇವ್ಳು ಎಲ್ಲಾದ್ರೂ ಒಂದು ವಾರ ತಣ್ಣಗಿದ್ದುಬಿಡೋಣ ಅಂತ ನೆಟ್ವರ್ಕಿಲ್ಲದ ಜಾಗದಲ್ಲಿ ಕೂತಿರಬಹುದಾ ಅನ್ನಿಸ್ತೊಮ್ಮೆ. ಏನಾದ್ರಾಗ್ಲಿ ಒಮ್ಮೆ ಅಲ್ಲೂ ಹುಡುಕೇ ಬಿಡೋಣ ಅಂತ ಗಾಡಿ ತಿರುಗ್ಸಿದೆ ಮಲೆ ಮಹದೇಶ್ವರದತ್ತ. ನಾನು ಅಲ್ಲಿಯ ಪೋಲಿಸರಿಗೆ ಮಾಹಿತಿ ಕೊಟ್ಟು ಅವರು ಹುಡುಕೋದು ಪ್ರಾರಂಭಿಸೋದ್ರೊಳಗೆ ನಾಳೆ ಬೆಳಗ್ಗೆಯೇ ಆಗಿರುತ್ತೆ. ಅದ್ರ ಬದ್ಲು ನಾನೇ ಹೊರಟ್ರೆ ನಾಳೆ ಬೆಳಗಾಗೋದ್ರಲ್ಲಿ ಮಲೆ ಮಹದೇಶ್ವರ ತಲುಪಬಹುದು ಅನ್ನೋ ಆಸೆಯಲ್ಲಿ ಮಧ್ಯರಾತ್ರಿ ಹನ್ನೆರಡಾಗಿರೋದನ್ನೂ ಲೆಕ್ಕಿಸದೇ ಹೊರಟುಬಿಟ್ಟಿದ್ದೆ.
ಮಲೆ ಮಹದೇಶ್ವರದ ಜೀಪಿನವರನ್ನು ಅವಳ ಫೋಟೋ ತೋರಿಸಿ ವಿಚಾರಿಸಿದಾಗ ಒಬ್ಬ ಜೀಪಿನವನ ಹತ್ರ ಮಹತ್ವದ ಸುಳಿವು ಸಿಕ್ಕಿತ್ತು. ಓ ಈ ಮೇಡಮ್ಮಾ ನಾಲ್ಕು ದಿನದ ಹಿಂದೆ ಇದ್ರು ಇಲ್ಲಿ ಅಂದ ಅವ. ಅದೇಗೆ ಹೇಳ್ತೀಯಪ್ಪ ಇದು ಇವ್ರೇ ಅಂತ ಅಂದಾಗ. ಅದೆಂಗೆ ಮರೆಯಕ್ಕಾಗ್ತದೆ ಬುದ್ದಿ, ನಾಗಮಲೆಗೆ ನಮ್ಮ ಜೀಪಲ್ಲೇ ಬಂದ ಇವ್ರು ಎರಡು ದಿನ ಇಲ್ಲೇ ಉಳಿದು ಕೊಂಬು ಡಿಕ್ಕಿ, ಒಂಭತ್ತು ಮರ, ಗುಂಜು ಮಲೆ, ಶಂಕ ಮಲೆ ಎಲ್ಲಾ ನೋಡಿದ್ರು. ಇವ್ರ ತರ ಇನ್ನೂ ನಾಲ್ಕು ಜನರಿದ್ರು . ಫಾರಿನ್ನರ ತರ ಇದ್ದ ಅವ್ರಿಗೆಲ್ಲಾ ಕಾಡು ತಿರುಗ್ಸಿದ್ದು ನಾನೇ ಅಂದ ಅವ. ಜೊತೆಗೆ ನಾಲ್ಕು ಜನ ಇದ್ರು ಅನ್ನೋದು ಮಹತ್ವದ ಸುಳಿವು ಅನಿಸಿದ್ರೂ ಅವರ್ಯಾರು ಅನ್ನೋದು ಗೊತ್ತಿಲ್ಲವಲ್ಲ. ಅವಳ ಗೆಳೆಯರ ಮನೆಯಲ್ಲಿ ವಿಚಾರಿಸೋಕೆ ಹೋದಾಗ ಅವರೆಲ್ಲಾ ಅಲ್ಲೇ ಇದ್ರಲ್ಲ. ಇಲ್ಲೇ ಸಿಕ್ಕ ಬೇರೆ ಯಾರಾದ್ರೂ ಆಗಿರಬಹುದಾ ಅನಿಸ್ತೊಮ್ಮೆ. ಅವ್ರ ಜೊತೆಗಿದ್ದೋರು ಮೇಡಮ್ಮಿನ ಫ್ರೆಂಡ್ಸೇನಾ ? ಅವ್ರ ಹೆಸ್ರೇನಾದ್ರೂ ಮಾತಾಡಿಕೊಂಡಿದ್ದು ಕೇಳಿದ್ದು ನೆನಪಿದ್ಯಾ ಅಂದೆ. ಹೆಸ್ರು ಅಂತೇನು ಗೊತ್ತಿಲ್ಲ. ಮೇಡಮ್ಮಿನ ಜೊತೆಗೆ ಈ ಜೀಪಲ್ಲಿ ಬಂದ್ರೂ ಅವ್ರಿಗೆ ಮೇಡಮ್ಮಿನ ಪರಿಚಯ ಇತ್ತೋ ಇಲ್ವೋ ಗೊತ್ತಿಲ್ಲ. ಇವ್ರ ತರವೇ ಅವ್ರೂ ಜಾಗ ಜಾಗ ತಿರುಗ್ತಿದ್ದಿದ್ರಿಂದ ಫ್ರೆಂಡ್ಸಿರಬಹುದು ಅಂದ್ಕೊಂಡೆ ಅಷ್ಟೆ ಸಾ. ಹೆಸ್ರು ಗೊತ್ತಿಲ್ಲ. ಆದ್ರೆ ಅವರೆಲ್ಲಾ ಇಂಗ್ಲೀಷಿನಲ್ಲಿ ಮಾತಾಡ್ಕೋತಾ ಇದ್ರು. ಮೇಡಮ್ಮೊಬ್ರೇ ನನ್ನತ್ರ ಕನ್ನಡದಲ್ಲಿ ಮಾತಾಡ್ತಾ ಇದ್ರು ಅಂದ ಅವ. ಸಮಸ್ಯೆ ಬಗೆಹರಿಯಿತು ಅನ್ನೋ ಸಮಯಕ್ಕೆ ಮತ್ತೆ ಗೋಜಲಾಗ್ತಾ ಇದ್ಯಲ್ಲ ಅನ್ನೋ ಬೇಸರ ಕಾಡೋಕೆ ಶುರುವಾಯ್ತು. ಇಲ್ಲಿಂದ ಎಲ್ಲಿಗೆ ಹೋಗ್ತೀನಿ ಅಂತೇನಾದ್ರೂ ಹೇಳಿದ್ರಾ ಅಂದೆ. ಸರಿ ನೆನ್ಪಿಲ್ಲ ಬುದ್ದಿ. ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಹೆಂಗಿದೆ ಅಂತ ಕೇಳ್ತಾ ಇದ್ರು ಅಮ್ಮ. ಎಲ್ಲಿಗೆ ಅಂತ ಸರಿಯಾಗಿ ಹೇಳ್ಲಿಲ್ಲ ಅಂದ ಅವ. ಬಿಳಿಗಿರಿ ರಂಗನ ಬೆಟ್ಟ ಅಂದ್ರೆ ಅಲ್ಲಿ ಗುಂಜಳ್ಳಿ ಚೆಕ್ ಪೋಸ್ಟಿದೆ. ಒಳಹೋಗೋ ಮೊದ್ಲು ಅಲ್ಲಿ ಹೆಸ್ರು , ಫೋನ್ ನಂಬರ್ರು, ಅಡ್ರೆಸ್ ಫ್ರೂಪ್ ಕೊಡ್ಲೇ ಬೇಕು. ಅಲ್ಲೇನಾದ್ರೂ ಮಾಹಿತಿ ಸಿಗಬಹುದು ಅನ್ನೋ ಆಸೆಯಿಂದ ಅತ್ತ ತೆರಳೋ ಮನಸ್ಸಾಯ್ತು. ಅವಳ ಜೊತೆಗಿದ್ದರೆಂದು ಹೇಳಲಾದ ನಾಲ್ಕು ಜನರ ರೇಖಾ ಚಿತ್ರ ಸಂಗ್ರಹಿಸಲು ಜೊತೆಗಿದ್ದ ಸಿಬ್ಬಂದಿಗೆ ಹೇಳಿ ಬಿಳಿಗಿರಿ ರಂಗನಬೆಟ್ಟದತ್ತ ತೆರಳಿದೆ.
ಚೆಕ್ ಪೋಸ್ಟ್ ಸಿಬ್ಬಂದಿಯ ಬಳಿ ಮೂರು ಫಾರಿನ್ನರು ಮತ್ತು ಒಬ್ಬ ಭಾರತೀಯ ಮಹಿಳೆ ಈ ಕಡೆ ಒಂದು ವಾರದಲ್ಲಿ ಬಂದಿರಬಹುದಾ ಅಂತ ಕೇಳಿ ಸ್ನೇಹಿತೆ ಮಿಸ್ಸಾಗಿರೋ ಸಂಬಂಧದ ಪ್ರಕರಣದ ವಿಚಾರಣೆಗೆ ಸಹಕಾರ ಕೋರಿದೆ. ಅವ್ರು ಫಾರಿನ್ನರ್ರು ಅಂದ್ರೆ ಇಲ್ಲಿಯವರ ಅಡ್ರೆಸ್ಸು ಅಂದ್ರೆ ಈಗ ನೀವು ಹುಡುಕುತ್ತಿರುವವರ ಅಡ್ರೆಸ್ಸೇ ಕೊಟ್ಟಿರಬಹುದು ನೋಡೋಣ ಅಂತ ಒಂದು ವಾರದ ದಾಖಲೆ ನೋಡಿದಾಗ ಆಶ್ಚರ್ಯ ಕಾದಿತ್ತು. ಮೂರು ದಿನಗಳ ಹಿಂದಿನ ದಾಖಲೆಯದು. ಅಡ್ರೆಸ್ಸು, ಫೋನ್ ನಂಬರ್ರು ಅಷ್ಟೇ ಅಲ್ಲ. ಕೈಬರಹವೂ ಅವಳದೇ. ಬೆಳಗ್ಗೆ ಒಂಭತ್ತಕ್ಕೆ ಹೋದ ದಾಖಲೆಯಿದೆ. ಆದ್ರೆ ಬಂದ ದಾಖಲೆಯೆಲ್ಲಿ ಅಂದೆ ? ಇಲ್ಲಿಗೆ ಬಂದವ್ರ ದಾಖಲೆ ಮಾತ್ರ ಇಡ್ತೀವಿ ಸಾರ್. ಸಂಜೆ ನಾಲ್ಕರ ನಂತರ ಯಾರಿಗೂ ಒಳಬಿಡಲ್ಲ. ಸಂಜೆ ಐದೂವರೆ ಒಳಗೆ ವಾಪಾಸ್ ಬರಬೇಕು ಅಂತ್ಲೂ ಹೇಳಿರ್ತೀವಿ. ಸಾಮಾನ್ಯವಾಗಿ ಎಲ್ರೂ ಬಂದು ಬಿಡ್ತಾರೆ. ಅವ್ರೂ ಬಂದುಬಿಟ್ಟಿರ್ಬೇಕು ಅಂದ್ರು. ಇಲ್ಲಿ ಇದು ಬಿಟ್ರೆ ಇನ್ನೇನು ಇದೆ ಅಂದೆ. ಚಾ.ಗುಡಿ ಅಂತ ರೆಸಾರ್ಟು ಇದೆ ಬಿಳಿಗಿರಿ ರಂಗನ ಬೆಟ್ಟದಿಂದ ಸುಮಾರು ಮೂವತ್ತು ಕಿ.ಮೀ ಮುಂದೆ ಅಂದ. ಅಲ್ಲಿಗೇನಾದ್ರೂ ಹೋಗಿರ್ಬೋದಾ ಅನಿಸ್ತು. ತಗೋ. ಬಿಳಿಗಿರಿ ರಂಗನ ಬೆಟ್ಟದಲ್ಲಿ ವಿಚಾರಣೆ ಮುಂದುವರೆಯಿತು. ಇಲ್ಲಿ ಮೂರು ಫಾರಿನ್ನರು ಮತ್ತು ಒಂದು ಹುಡುಗಿಯನ್ನು ನೋಡಿದ್ದೀರಾ ಅಂತ ಸುಮಾರು ಅಂಗಡಿಯವರನ್ನ , ಅಲ್ಲಿನ ವೀಕ್ಷಣಾ ಸ್ಥಳದಲ್ಲಿ ಒಂದು ನಿಮಿಷಕ್ಕೆ ಪ್ರಿಂಟ್ ಕೊಡೋ ಫೋಟೋ ತೆಗೆಯುತ್ತಿದ್ದವರನ್ನ ವಿಚಾರಿಸಿದಾಗ ಮತ್ತೊಂದು ಮಹತ್ವದ ಸುಳಿವು ಸಿಕ್ಕಿತ್ತು. ಇವ್ರು ಮೂರು ದಿನದ ಹಿಂದೆ ಇಲ್ಲಿಗೆ ಬಂದಿದ್ರು ಸಾರ್ ಅಂದ ಒಬ್ಬ ಫೋಟೋಗ್ರಾಫರ್ರು. ಅದೆಂಗೆ ಹೇಳ್ತೀಯಪ್ಪ ಅಂದಾಗ ಇಲ್ಲಿ ಬರೋ ಜನರೆಲ್ಲಾ ನಮ್ಮತ್ರ ಫೋಟೋ ತೆಗೆಸಿಕೊಳ್ತಾರೆ ಆದ್ರೆ ಅವ್ರು ತಮ್ಮದೇ ಕ್ಯಾಮೆರಾ ಕೊಟ್ಟು ಇದ್ರಲ್ಲಿ ತೆಗಿ ಅಂದಿದ್ರು. ಏನೋ ಕೇಳ್ತಿದಾರಲ್ಲ ಅಂತ ಫೋಟೋ ಪುಕ್ಕಟೆಯಾಗೇ ತೆಗೆದುಕೊಡೋಕೆ ಹೋಗಿದ್ದ ನನ್ನನ್ನೊಪ್ಪದೇ ಅವ್ರು ಐವತ್ತು ರೂ ಕೊಟ್ಟು ಹೋಗಿದ್ರು ಸಾ. ಇಂತಾ ಕಾಲದಲ್ಲಿ ಅಷ್ಟು ಒಳ್ಳೆಯವರೆಲ್ಲಿ ಸಾ ಅಂದಿದ್ದ ಅವ. ಇಲ್ಲಿಗೆ ಬಂದಿದ್ದು ಹೌದಾದ್ರೂ ಮುಂದೆಲ್ಲಿ ಹೋದ್ರು ಅನ್ನೋದು ಕಗ್ಗಂಟಾಗೇ ಉಳಿಯಿತು. ಯಾವುದಕ್ಕೂ ಇರ್ಲಿ ಅಂತ ಚಾ.ಗುಡಿಗೆ ಹೋಗೋ ಮನಸ್ಸಾಯ್ತು. ಅಲ್ಲಿಗೆ ಹೋದ್ರೆ ಅಲ್ಲಿ ಮತ್ತೊಂದು ಸುಳಿವು ಕಾಯ್ತಾ ಇತ್ತು. ಅಲ್ಲಿಗೆ ಮೂರು ದಿನಗಳ ಹಿಂದೆ ಬಂದು ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ತಂಡದಲ್ಲಿ ಇವಳೂ ಇದ್ದಳು !
ಇಲ್ಲಿ ಒಂದು ದಿನದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಅವರು ಎರಡು ದಿನಗಳ ಹಿಂದಷ್ಟೇ ಹೊರಟ್ರು ಅನ್ನೋ ಮಾಹಿತಿ ಸಿಕ್ತು. ಇಲ್ಲಿಗೆ ಒಂದಿಷ್ಟು ಕೊಂಡಿಗಳು ಜೋಡಿಯಾಗ್ತಾ ಬಂದ್ವು. ಮಲೆಮಹದೇಶ್ವರಕ್ಕೆ ಬಂದು ಎರಡು ದಿನ ಇದ್ದವ್ಳು ಮೂರನೇ ದಿನ ಹೊರಟಿದ್ದಾಳೆ ಅಲ್ಲಿಂದ. ಕೊಳ್ಳೇಗಾಲದ ಮೂಲಕ ಬಿಳಿಗಿರಿರಂಗನಬೆಟ್ಟಕ್ಕೆ ಬಂದಿರಬಹುದು. ಆಗ ಎಲ್ಲೋ ನೆಟ್ವರ್ಕು ಸಿಕ್ಕಿದೆ ಎರಡನೆಯ ಸಿಮ್ಮಿಗೆ. ಅಲ್ಲಿಂದ ಬೆಟ್ಟ ಮತ್ತೆ ಚಾ,ಗುಡಿಯಲ್ಲಿ ಒಂದು ದಿನ. ಎರಡು ದಿನದ ಹಿಂದಿನ ಸಂಜೆ ಅಂದ್ರೆ ಮೊನ್ನೆ ಸಂಜೆ ಇಲ್ಲಿಂದ ಹೊರಟವಳು ಎಲ್ಲಿಗೆ ಹೋಗಿರ್ಬೋದು ಅನ್ನೋ ಪ್ರಶ್ನೆಗೆ ನೆನಪಾಗಿದ್ದು ಮೊಬೈಲ್ ಕಂಪೆನಿಯವ್ರು ಕೊಟ್ಟ ಮಾಹಿತಿ. ಕಾಣೆಯಾದ ಎರಡು ದಿನಗಳ ನಂತರ ಕೊಳ್ಳೆಗಾಲದಲ್ಲಿ ಸಿಗ್ನಲ್ ಪತ್ತೆ. ಅದಾಗಿ ಒಂದು ದಿನ ಮತ್ತೆ ಇಲ್ಲ. ಅದಾದ ಮೇಲೆ ಎರಡನೆಯ ದಿನದ ರಾತ್ರೆ ಮತ್ತೆ ಕೊಳ್ಳೇಗಾಲದ ಸುತ್ತಮುತ್ತ ಸಿಗ್ನಲ್ಲು . ಅದಾದ ಮೇಲೆ ಮತ್ತೆ ಮಿಸ್ಸು ಅನ್ನೋ ಮಾಹಿತಿ ನೆನಪಾಯ್ತು. ಅಂದ್ರೆ ಮೊನ್ನೆ ರಾತ್ರೆ ಚಾ.ಗುಡಿಯಿಂದ ಕೊಳ್ಳೆಗಾಲಕ್ಕೆ ಬಂದಿರಬಹುದು ಅನ್ನೋವಲ್ಲಿಗೆ ಸಿಕ್ಕ ವಿಚಾರಣೆಯ ಮಾಹಿತಿಗೂ ಮೊಬೈಲ್ ಸಿಗ್ನಲ್ ಮಾಹಿತಿಗೂ ತಾಳೆಯಾಯ್ತು. ಇನ್ನು ಮುಂದಿನ ವಿಚಾರಣೆಗೆ ಕೊಳ್ಳೆಗಾಲದಲ್ಲೇನಾದ್ರೂ ಮಾಹಿತಿ ಸಿಗಬಹುದು ಅಂತ ಆರನೆಯ ಇಂದ್ರಿಯ ಹೇಳತೊಡಗಿತು. ಆದ್ರೆ ಅಲ್ಲಿ ಏನು ಎತ್ತ ಅಂತೇನೂ ಗೊತ್ತಿಲ್ಲ. ಏನಾದ್ರಾಗಲಿ ಅಂತ ಕೊಳ್ಳೆಗಾಲಕ್ಕೆ ಹೊರಟುಬಿಟ್ಟೆ.
ಕೊಳ್ಳೆಗಾಲಕ್ಕೆ ಬರೋ ಹೊತ್ತಿಗೆ ಹೊಟ್ಟೆ ಚುರುಗುಟ್ಟತೊಡಗಿತ್ತು. ಬೆಳಗಿಂದ ವಿಚಾರಣೆಯ ಗುಂಗಲ್ಲಿ ಏನನ್ನೂ ಸರಿಯಾಗಿ ತಿನ್ನದ ಪ್ರಭಾವ ಮತ್ತು ಹಿಂದಿನ ದಿನದಿಂದ ಗಾಡಿಯೋಡಿಸಿದ್ರ ಪ್ರಭಾವದ ನಿದ್ದೆ ಎರಡೂ ಒಟ್ಟೊಟ್ಟಿಗೆ ಆವರಿಸತೊಡಗಿತ್ತು. ಎಲ್ಲಾದ್ರೂ ಒಂದು ಹೋಟೇಲ್ ಹಿಡ್ದು ಮಲ್ಗಿ ನಾಳೆ ಮುಂದುವರಿಸೋಣ ಅಂತನಿಸ್ತು. ಪೋಲೀಸ್ ಅತಿಥಿಗೃಹ ಅಂತ ಹೋಗೋ ಬದ್ಲು ಸಿವಿಲ್ ಡ್ರೆಸ್ಸಲ್ಲಿ ಇವರ್ಗಳ ಬಗ್ಗೆ ಹೋಟೇಲ್ಗಳಲ್ಲಿ ವಿಚಾರಿಸಿದ್ರೆ ಮಾಹಿತಿ ಸಿಗಬಹುದಾ ಅಂತೊಂದು ಐಡಿಯಾ ಹೊಳೆಯಿತು. ಫಾರಿನ್ನರುಗಳು ಯಾರು ಅಂತ ಗೊತ್ತಿಲ್ದೇ ಇದ್ರೂ, ಅವರ ಜೊತೆ ಇವಳು ಇರೋದೊಂತೂ ಹೌದು ಅನ್ನೋದೊಂದು ಅಂಶ ಇಲ್ಲಿ ಸಹಾಯಕವಾಗ್ಬೋದು. ಫಾರಿನ್ನರು ಅಂದ್ರೆ ತೀರಾ ಸಾಮಾನ್ಯ ಹೋಟೇಲಲ್ಲೇನು ಇರೋಲ್ಲ . ಇಲ್ಲಿ ಚೆನ್ನಾಗಿರೋ ಹೋಟೆಲ್ಗಳು ಯಾವುದು ಅಂತ ಕೇಳಿದಾಗ ಪ್ರಮುಖ ಮೂರು ಹೋಟೇಲ್ಗಳ ಹೆಸ್ರು ಕೇಳಿಬಂತು ಅಲ್ಲಿನ ಜನರ ಬಾಯಲ್ಲಿ. ತಗೋ ನೊಡೇಬಿಡೋಣ ಅಂತ ಅವುಗಳಲ್ಲಿ ಅವಳ ಫೋಟೋ ತೋರ್ಸಿ ವಿಚಾರಿಸಲಾಗಿ ಅವ್ರು ಎರಡು ದಿನದ ಹಿಂದೆ ಅಲ್ಲಿ ಉಳಿದಿದ್ದು ಹೌದೆಂಬ ಮಾಹಿತಿ ಸಿಕ್ತು. ಮುಂದೆ ಎಲ್ಲಿ ಹೋಗ್ಬೇಕಂತ ಹೇಳ್ತಿದ್ರಾ ಅಂದಿದ್ದಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮತ್ತು ಅದರ ಸುತ್ತ ಮುತ್ತ ಇರೋ ಪ್ರದೇಶಗಳಿಗೆ ದಾರಿ ಕೇಳ್ತಾ ಇದ್ರು ಅನ್ನೋ ಮಾಹಿತಿ ಸಿಕ್ತು. ಆದ್ರೇನು ಮಾಡೋದು. ಬೆಟ್ಟಕ್ಕೆ ಬೆಳಗಿನವರೆಗೂ ಪ್ರವೇಶವಿಲ್ಲ. ಫುಲ್ ಟೆನ್ಷನ್ನಿನಲ್ಲಿರಬಹುದಾದ ರೇಖಾಳ ಮನೆಯವ್ರಿಗೆ, ಆಫೀಸಿಗೆ ಇಷ್ಟು ತಿಳ್ಸಿ ಅವಳು ಇನ್ನೇನು ಸ್ವಲ್ಪ ಹೊತ್ತಿಗೆ ಮನೆಗೆ ಮರಳಬಹುದೆನ್ನುವ ಆಶಾಕಿರಣವನ್ನಾದ್ರೂ ಬೆಳಗೋಣ ಅನ್ನಿಸಿ ಇಲ್ಲಿಯವರೆಗಿನ ಮಾಹಿತಿಯನ್ನು ಅವರಿಗೆ ಹೇಳಿದಾಗ ಅವರ ಖುಷಿ ಹೇಳತೀರದು. ನಿಮ್ಮ ಮಗಳೇನಾದ್ರೂ ಮನೆಗೆ ಮರಳಿದ್ರೆ ನಂಗೆ ಫೋನ್ ಮಾಡಿ. ಇಲ್ಲಾ ಅಂದ್ರೆ ನನ್ನ ಹುಡುಕಾಟವನ್ನು ಮುಂದುವರೆಸುತ್ತೇನೆ. ಇಲ್ಲೇ ಎಲ್ಲೋ ಇದ್ದಾಳೆ ಅಂತ ನನ್ನ ಮನಸ್ಸು ಹೇಳ್ತಾ ಇದೆ ಅಂತ ಭರವಸೆ ತುಂಬಿ ಫೋನಿಟ್ಟೆ. ಕೈಕಾಲುಗಳು ಬರಪೂರ ಮಾತಾಡ್ತಾ ಇದ್ವು. ಕೊಳ್ಳೇಗಾಲದಲ್ಲೇ ಅಂದು ರಾತ್ರಿ ಮಲಗಿ ಬಿಟ್ಟೆ. ಬೆಳಗ್ಗಿನ ಜಾವ ಫೋನ್ ಫುಲ್ ಹೊಡ್ಕೊಳ್ಳೋಕೆ ಹಿಡಿದ ಮೇಲೇ ಎಚ್ರಾಗಿದ್ದು. ನೋಡಿದ್ರೆ ಹತ್ತು ಹದಿನೈದು ಮಿಸ್ ಕಾಲು. ನಾಲ್ಕೈದು ಆಫೀಸಿಂದಾದ್ರೆ ಉಳಿದಿದ್ದೆಲ್ಲಾ ರೇಖಾಳ ಮನೆಯಿಂದ ! ಎರಡು ಕಾಲು ರೇಖಾಳ ಎರಡನೆಯ ಸಿಮ್ಮಿಂದ. ಮನೆಯಲ್ಲಿ ಹೇಳದೇ ಒಂದು ವಾರ ಟ್ರಿಪ್ಪು ಹೊಡೆಯೋಕೆ ಬಂದು ನಿನ್ನೆ ರಾತ್ರೆಯೇನಾದ್ರೂ ವಾಪಾಸ್ಸಾಗಿರ್ಬಹುದಾ ಅನ್ನೋ ಸಣ್ಣ ಅನುಮಾನ ಕಾಡಿ ವಾಪಾಸ್ ಫೋನ್ ಮಾಡಿದ್ರೆ ಫೋನೆತ್ತಿದ್ದು ರೇಖಾ !! ಮಲೆ ಮಹದೇಶ್ವರ, ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಟ್ರಿಪ್ಪು ಹೆಂಗಿತ್ತು ಅಂದೆ ? ಅದ್ರು ಜೊತೆಗೆ ಚಾಮರಾಜನಗರದ ಸರಸ್ವತಿ ದೇವಸ್ಥಾನ, ತೆರಕಾಣಂಬಿ ವಿಷ್ಣು ದೇವಸ್ಥಾನ, ನುಗ್ಗೇಹಳ್ಳಿ ವೈಷ್ಣವ ದೇವಸ್ಥಾನನೂ ನೋಡಿದ್ವಿ. ಆದ್ರೆ ಅದೆಲ್ಲಾ ನಿಂಗೆ ಹೇಗೆ ಗೊತ್ತಾಯ್ತು ಅಂದ್ಲು ಆಶ್ಚರ್ಯದಿಂದ. ಕೊನೆಯ ಮೂರು ನಂಗೆ ಗೊತ್ತಿರದಿದ್ರೂ ಅದೊಂದು ದೊಡ್ಡ ಕತೆ , ನಾನು ಊರಿಗೆ ಬಂದ ಮೇಲೆ ಹೇಳ್ತಿನಿ, ನಿಮ್ಮಪ್ಪಂಗೆ ಫೋನ್ ಕೊಡು ಅಂದೆ. ಇವ್ಳು ಅದ್ಯಾವ್ದೋ ಎನ್ಜೀವೋ ಜೊತೆ ಒಂದು ವಾರದಿಂದ ಬೆಟ್ಟ ಗುಡ್ಡ ತಿರುಗ್ತಿದ್ದಿದ್ಲಂತೆ. ನಿನ್ನೆ ಮಧ್ಯರಾತ್ರೆ ಮನೆಗೆ ಬಂದಿದಾಳೆ ನೋಡಪ್ಪ. ಅದನ್ನ ಹೇಳೋಕೆ ಅಂತ ಇವತ್ತು ಬೆಳಗ್ಗಿನಿಂದ ಫೋನ್ ಮಾಡ್ತಿದ್ವಿ. ಈಗ ಸಿಗ್ತು ನೋಡಪ್ಪ ಅಂದ್ರು . ಒಂದು ವಾರದಿಂದ ತುಂಬಾ ತೊಂದ್ರೆ ಕೊಟ್ಟಂಗಾಯ್ತು ಇವ್ಳಿಂದ ಸಾರಿ ಅಂದ್ರು. ಹೇ, ಹಾಗೇನಿಲ್ಲ ಅಂಕಲ್. ಪರ್ವಾಗಿಲ್ಲ ಬಿಡಿ. ಮುಂಚೆ ನೋಡಿದ್ದ ಕ್ಷೇತ್ರಗಳ ಮತ್ತೆ ನೋಡೋ ಪುಣ್ಯ ಸಿಕ್ತು ನಂಗೆ. ಆಗೋದೆಲ್ಲಾ ಒಳ್ಳೇದಕ್ಕೆ ಬಿಡಿ. ವಾಪಾಸ್ಸಾಗ್ತಿದೀನಿ ಊರಿಗೆ. ಬಂದ ಮೇಲೆ ಆರಾಮಾಗಿ ಮಾತಾಡೋಣ ಬಿಡಿ ಅಂದೆ. ಅವ್ರು ಹೂಂ ಅನ್ನೋದ್ರೊಂದಿಗೆ ಕಳೆದು ಹೋದ ಅಧ್ಯಾಯಕ್ಕೊಂದು ತೆರೆ ಬಿತ್ತು. ಬೈಂಡಾಗೋ ಕನಸುಗಳಿಗೆ ಮತ್ತೆ ರೆಕ್ಕೆ ಬಂತು.
ಈ ಕತೆ "ಪಂಜು"ವಿನಲ್ಲಿ ಪ್ರಕಟವಾಗಿದೆ
http://www.panjumagazine.com/?p=9906
ಕೆಲ ಹುಡುಗಿಯರೇ ಹೀಗೆ ಗೆಳೆಯ!
ReplyDeleteಹಾ ಹಾ ಹಾ ... ಒಳ್ಳೆ ಹುಡುಗಿ.... Anyhow, ಕುತೂಹಲದಿಂದ ಶುರುವಾದ ಕಥೆ ಸುಖಾಂತ್ಯವಾಯ್ತಲ್ಲ.... :)
ReplyDelete