ಶಾಲಾ ದಿನಗಳಲ್ಲಿ ಆಕಾಶವಾಣಿಯಲ್ಲಿ ಶನಿವಾರ ಬರ್ತಿದ್ದ ಗಾಂಧಿ ಸ್ಮೃತಿ, ಭಾನುವಾರದ
ರೇಡಿಯೋ ಸಿನಿಮಾ(ಧ್ವನಿಯಲ್ಲೇ ಸಿನಿಮಾದ ಕಲ್ಪನೆಗಳ ಕಟ್ಟೋ ಅದ್ಬುತ ಅನುಭವ ಕೇಳೇ
ಸವಿಬೇಕು), ಪ್ರತಿದಿನ ಸಂಸ್ಕೃತ ವಾರ್ತೆಯ ಬಲದೇವಾನಂದ ಶರ್ಮ, ಏಳೂ ಮೂವತ್ತೈದರ
ವಾರ್ತೆ, ಎಂಟರ ಹಿಂದಿ, ಇಂಗ್ಲೀಷ್ ವಾರ್ತೆಗಳು, ನಂತರದ ರೇಡಿಯೋ ಡಾಕ್ಟರಗಳನ್ನು ಕೇಳೇ
ದೊಡ್ಡವರಾದ ನಮಗೆ ರಾತ್ರಿ ಎಂಟು ಘಂಟೆಗೆ ಬರೋ "ಯುವವಾಣಿ" ಅಚ್ಚುಮೆಚ್ಚಾಗಿತ್ತು.
ಅದರಲ್ಲಿ ಬರ್ತಿದ್ದ ಕಾಲೇಜು, ಶಾಲಾ ವಿದ್ಯಾರ್ಥಿಗಳು ಮತ್ತು ಅವರು ನಡೆಸಿಕೊಡುತ್ತಿದ್ದ
ಕಾರ್ಯಕ್ರಮ ಕೇಳುತ್ತಿದ್ದ ನನಗೆ ನಾನೂ ಒಮ್ಮೆ ರೇಡಿಯೋದಲ್ಲಿ ಬರಬೇಕು ಅನ್ನೋ ಆಸೆ
ಮೂಡಿಬಿಟ್ಟಿತ್ತು.
ಪ್ರಥಮ ಪಿಯುವಿನಲ್ಲಿನ ಸಂದರ್ಭ ಅದು. ಆಕಾಶವಾಣಿಯಲ್ಲಿ ಒಂದು
ಕಾರ್ಯಕ್ರಮ ಕೊಡೋಣ ಅಂತ ಇದೆ. ಬರ್ತೀರಾ ಅಂತ ಹಿಂಗೇ ಒಂದಿನ ಅನಿರೀಕ್ಷಿತವಾಗಿ ನಮ್ಮ
ಉಮೇಶ್ ಮಾಸ್ಟ್ರು ಕೇಳಿದಾಗ ರೊಟ್ಟಿಯೇ ಜಾರಿ ತುಪ್ಪಕ್ಕೆ ಬಿದ್ದ ಭಾವ ನನಗೆ. ನಮ್ಮ
ಕಾಲೇಜಿನಿಂದ ಹಾಡು, ತಬಲ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳು ಸೇರಿ ಒಟ್ಟು ಇಪ್ಪತ್ತೈದು
ನಿಮಿಷದ ಕಾರ್ಯಕ್ರಮ ಕೊಡಬೇಕಾಗಿತ್ತು. ಅದರಲ್ಲಿ "ನಮ್ಮ ಸಂಸ್ಕೃತಿಯ ಮೇಲೆ ವೈಜ್ನಾನಿಕ
ಆವಿಷ್ಕಾರಗಳ ಪ್ರಭಾವ" ಅನ್ನೋ ವಿಷಯದ ಮೇಲೆ ನನ್ನದೊಂದು ನಾಲ್ಕೈದು ನಿಮಿಷದ ಕಿರು
ಭಾಷಣವೂ ಇತ್ತು. ಆಕಾಶವಾಣಿಯಾದ್ದರಿಂದ ಅದನ್ನು ಭಾಷಣವೆನ್ನದೆ ವಿಷಯ ಮಂಡನೆಯೆಂದ್ರೆ
ತಪ್ಪಾಗಲಾರದೇನೋ. ಅಲ್ಲಿ ಮುಂಚೆಯೇ ನಮ್ಮ ಸ್ಕ್ರಿಪ್ಟ್ ಕಳಿಸಿ, ಅದನ್ನು ಅವರು ಒಪ್ಪಿ,
ಏನಾದ್ರೂ ತಿದ್ದುಪಡಿ ತಿಳಿಸಿ, ಅವರ ಮುಂದೆ ಒಮ್ಮೆ ಸೂಚನೆಗಳನ್ನು ಪಡೆದು, ರಿಹರ್ಸಲ್
ಮಾಡಿ ಆಮೇಲೆ ನಿಜವಾದ ರೆಕಾರ್ಡಿಂಗ್ ಶುರುವಾಗಬೇಕಾಗಿತ್ತು. ತುಂಬಾ ವೇಗವಾಗಿ ಅಥವಾ
ನಿಧಾನವಾಗಿ ಮಾತಾಡಬೇಡಿ. ನಿಮ್ಮ ಸಹಜ ಲಯ ಇರಲಿ. ವಾಕ್ಯಗಳಾದ ನಂತರ ಒಂದೆರಡು ಸೆಕೆಂಡ್
ಗ್ಯಾಪ್ ಕೊಡಿ. ಒಂದು ಪುಟದ ಮಾತಾದ ಮೇಲೆ ಮತ್ತೊಂದು ಪುಟಕ್ಕಾಗಿ ಅದನ್ನು ತಿರುಗಿಸುವ
ಮುನ್ನ ಮತ್ತು ತಿರುಗಿಸಿದ ನಂತರ ಒಂದೆರಡು ಸೆಕೆಂಡ್ ಗ್ಯಾಪ್ ಕೊಡಿ ಅಂತೆಲ್ಲಾ
ತಿಳಿಸಿದರು. ಆಕಾಶವಾಣಿಗೆ ಮೊದಲ ಬಾರಿ ಕಾಲಿಟ್ಟಿದ್ದ ನನಗೆ ಕೊನೆಯ ವಾಕ್ಯದ
ಹಿಂದಿರಬಹುದಾರ ಉದ್ದೇಶ ತಿಳಿದು ಅವರ ಸಮಯಪ್ರಜ್ನೆ ಅದ್ಭುತ ಅನಿಸಿಬಿಟ್ತು ಒಂದ್ಸಲ.
ಅಲ್ಲಿರೋ ಸೂಕ್ಷ್ಮ ಧ್ವನಿಗ್ರಾಹಕಗಳಲ್ಲಿ ನಾವು ಪ್ಯಾಂಟ್ ಮೇಲೆ ಕೈಯಾಡಿಸಿದ್ರೆ ಆಗೋ
ಸದ್ದು, ಪೇಪರಿನ ಪುಟ ತಿರುಗಿಸಿದ್ರೆ ಆಗೋ ಸದ್ದೂ ರೆಕಾರ್ಡಾಗುತ್ತಿತ್ತು. ಒಂದು ಪುಟದ
ನಂತರ ಗ್ಯಾಪು, ಪೇಪರು ತಿರುಗಿಸುವಿಕೆ ಮತ್ತು ಮತ್ತೆ ಗ್ಯಾಪು ಆ ಪೇಪರ್ ಸದ್ದನ್ನು
ಕತ್ತರಿಸೋಕೆ ಸುಲಭವಾಗಿಸ್ತಿತ್ತು ಅವರಿಗೆ.
ಅದೇ ವರ್ಷ ಮತ್ತೊಂದು ತಂಡದೊಂದಿಗೆ ಭದ್ರಾವತಿಗೆ ಹೋಗೋ ಭಾಗ್ಯ ಸಿಕ್ತು ನಂಗೆ. ಎರಡನೇ
ಬಾರಿ "ನಮ್ಮ ಮಕ್ಕಳು ಡಾಕ್ಟರ್ ಇಂಜಿನಿಯರುಗಳೇ ಆಗಬೇಕೇ" ಅನ್ನೋ ವಿಷಯದ ಬಗ್ಗೆ
ಚರ್ಚೆಯಲ್ಲಿ ಭಾಗವಹಿಸಲು ಹೋಗಿದ್ದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ ಇದ್ದಿದ್ದರಿಂದ ,
ಏನೇನು ಮಾತಾಡಬೇಕೆಂಬ ಸ್ಕ್ರಿಪ್ಟನ್ನು ಮಾಡಿ ಅದರಲ್ಲಿನ ಭಾಗಗಳನ್ನು ಮುಂಚೆಯೇ
ಹಂಚಿಕೊಂಡಿದ್ದರಿಂದ ಅಲ್ಲಿ ಚರ್ಚಾಸ್ಪರ್ಧೆಯಂತಹ ಮೇಜು ಕುಟ್ಟುವ ವಾತಾವರಣವಿಲ್ಲದಿದ್ದರೂ
ಒಂದು ಆರೋಗ್ಯದಾಯಕ ಚರ್ಚೆಯಾಗಬಹುದಾದ ಎಲ್ಲಾ ಲವಲವಿಕೆಯೂ ಇತ್ತು. ಹಿಂದಿನ ಸಲದ
ರೆಕಾರ್ಡಿಂಗ್ ಅನುಭವ ಏನ್ಮಾಡಬೇಕು, ಏನ್ಮಾಡಬಾರದು ಎಂದು ಹೊಸ ಸ್ನೇಹಿತರಿಗೆ ಹೇಳುವಷ್ಟರ
ಮಟ್ಟಿಗೆ ಸಹಾಯ ಮಾಡಿತ್ತು ! ಹೇಳಿದ್ದು ಏನ್ಮಹ ಇಲ್ಲ. ಮಾತಾಡುವಾಗ ಪ್ಯಾಂಟಿನ ಮೇಲೆ
ಕೈಯುಜ್ಜಬೇಡ, ಪೇಪರುಗಳನ್ನ ಆಡಿಸಬೇಡ, ಪೇಪರ್ರನ್ನ ತಿರುಗಿಸೋ ಪ್ರಸಂಗ ಬಂದರೆ ಎರಡು
ಮೂರು ಸೆಕೆಂಡು ಸಮಯ ಕೊಡು, ಪೇಪರು ತಿರುಗಿಸಾದ ಮೇಲೆ ಮತ್ತೆ ಸಮಯ ಕೊಡು ಅನ್ನೋ ಹಿಂದಿನ
ಬಾರಿ ನಾ ಪಡೆದ ಕಿವಿಮಾತುಗಳೇ . ಅಂತೂ ನಮ್ಮ ರೆಕಾರ್ಡಿಂಗುಗಳು ಓಕೆಯಾಗಿ ನಿಮ್ಮ
ಕಾರ್ಯಕ್ರಮ ರೇಡಿಯೋದಲ್ಲಿ ಬರುತ್ತೆ ಅಂದಾಗ ಸ್ವರ್ಗವೇ ಕೈಗೆಟುಕಿದಷ್ಟು ಖುಷಿ. ಯಾವತ್ತು
ಬರುತ್ತೆ ? ಗ್ಯಾರಂಟಿ ಬರುತ್ತಲ್ವಾ ಅಂತ ಕೇಳಿದ್ದೇ ಕೇಳಿದ್ದು. ಈ ಎರಡು
ರೆಕಾರ್ಡಿಂಗುಗಳಲ್ಲಿ ನನ್ನ ಸ್ವಂತದ ಕಾರ್ಯಕ್ರಮಗಳಿದ್ರೂ ಕಾಲೇಜಿಂದ ಹೊರಡುವಾಗ
ನಿರ್ಧಾರಿತವಾಗಿರದ ಕಾರ್ಯಕ್ರಮವೂ ಒಂದು ಮೂಡಿಬಂದಿದ್ದು ವಿಶೇಷ.
ನಮ್ಮ ಗೆಳೆಯನೊಬ್ಬ ಚೆಸ್ಸಿನಲ್ಲಿ ಪ್ರತಿಭಾನ್ವಿತನಿದ್ದ. ಮಾತು ಮಾತಿನಲ್ಲಿ ಅವನ
ಸಂದರ್ಶನ ಮಾಡುವ ತರದ ಕಾರ್ಯಕ್ರಮ. ಮಾತು ಮಾತಿನಲ್ಲೇ ಆ ದಿನದ ಉಳಿದ ವಿಷಯಗಳು ಬರುವ
ಹಾಗೆ ಪ್ಲಾನ್ ಮಾಡಿದ್ದಾಗಿತ್ತು ಅನ್ನೋದು ಬೇರೆ ವಿಷಯ. ರೆಕಾರ್ಡಿಂಗಿಗಿಂತ ಮುಂಚೆ
ಅವನನ್ನು ರೇಡಿಯೋ ನಿರೂಪಕಿಯವ್ರು ಮಾತಾಡಿಸ್ತಾ ಇದ್ದಾಗ ಚೆಸ್ಸಿನ ವಿಷಯ ಬಂತು. ನೀನು
ಎಷ್ಟು ವರ್ಷದಿಂದ ಆಡ್ತಾ ಇದೀಯ ? ಆಸಕ್ತಿ ಮೂಡಿದ್ದು ಹೇಗೆ ಅಂತೆಲ್ಲಾ. ಮಾತಿನ ನಡುವೆ
ಇದು ಎಲ್ಲಿಯದು ಅನ್ನೋ ವಿಷಯ ಬಂದಾಗ ನಾನು ಇದು ಭಾರತದ್ದೇ ಆಟ , ರಾಜರ ಕಾಲದಲ್ಲೇ
ಚದುರಂಗ ಅನ್ನೋ ಹೆಸರಿನಲ್ಲಿತ್ತು ಅಂತ ಹೇಳಿದೆ. ತಟ್ಟನೆ ನನ್ನತ್ತ ತಿರುಗಿದ ನಿರೂಪಕಿ
ನಿನಗೆ ಚೆಸ್ಸಿನ ಬಗ್ಗೆ ಏನೇನು ಗೊತ್ತು ಅಂತ ಕೇಳಿದ್ರು. ಹೈಸ್ಕೂಲು ದಿನಗಳಲ್ಲಿ ಚೆಸ್
ಪ್ರಿಯನಾಗಿದ್ದ ನಾನು ಸಹಜವಾಗೇ ಓದಿಕೊಂಡಿದ್ದ ಅಂದಿನ ವಿಶ್ವಚಾಂಪಿಯನ್ ವಿಶ್ವನಾಥನ್
ಆನಂದ್ ಬಗ್ಗೆ, ರಷ್ಯಾದ ಆಟಗಾರರ ಬಗ್ಗೆ ಹೇಳಿದ ನೆನಪು. ಸುಮ್ಮನೇ ಕುತೂಹಲಕ್ಕೆ
ಇದ್ನೆಲ್ಲಾ ಕೇಳ್ತಿದ್ದಾರೆ ಅಂದ್ಕೊಂಡ ನನಗೆ ಅವ್ರು ಇದನ್ನು ರೆಕಾರ್ಡಿಂಗಿನಲ್ಲಿ
ಹೇಳ್ತೀಯ ? ವಿಷಯಕ್ಕೆ ಪೂರಕ ಮಾಹಿತಿ ಚೆನ್ನಾಗಿದೆ ಅಂದಾಗ ಆಶ್ಚರ್ಯ. ಮಾವಿನ ಹಣ್ಣು
ತಗೊಳ್ಳೋಕೆ ಹೋದವನಿಗೆ ಮಾವಿನಹಣ್ಣಿನ ಜೊತೆಗೆ ಹಲಸಿನಹಣ್ಣು ಫ್ರೀ ಕೊಟ್ಟಂಗಾಗಿತ್ತು
ಅವತ್ತು. ಒಂದು ಕಾರ್ಯಕ್ರಮಕ್ಕೆ ಅಂತ ಬಂದವನಿಗೆ ಎರಡೆರಡು ಸಲ ಮಾತಾಡೋ ಸೌಭಾಗ್ಯ. ಅದಾದ
ಮೇಲಂತೂ ನಮ್ಮ ಧ್ವನಿ ಯಾವಾಗ ಬರುತ್ತೋ ಆಕಾಶವಾಣಿಲಿ ಅಂತ ಕಾದಿದ್ದೇ ಕಾದಿದ್ದು.
ನೆಂಟರಿಷ್ಟರಿಗೆಲ್ಲಾ ನಮ್ಮ ಕಾರ್ಯಕ್ರಮ ಬರುತ್ತೆ ಕೇಳಿ ಅಂತ ಹೇಳಿಕೊಂಡು ಸಾಗಿದ್ದ
ನನಗೆ ಮೊತ್ತಮೊದಲ ಬಾರಿಗೆ ನನ್ನ ಧ್ವನಿಯನ್ನು ರೇಡಿಯೋದಲ್ಲಿ ಕೇಳಿದಾಗ ಸಂತೋಷದ ಬದ್ಲು
ಗಾಬ್ರಿಯಾಗಿತ್ತು. ಎಲ್ಲರ ಧ್ವನಿಯೂ ಸರಿ ಬಂದಿದೆ. ಆದ್ರೆ ನನ್ನ ಧ್ವನಿ ಮಾತ್ರ
ಯಾಕಿಷ್ಟು ಕರ್ಕಶವಾಗಿ ಬಂದಿದೆ ಅಂತ !! ಎರಡನೇ ಸಲ ನನ್ನ ಧ್ವನಿ ಯಾಕೋ
ರೆಕಾರ್ಡಿಂಗಿನಲ್ಲಿ ಸರಿ ಬರಲ್ಲ. ಇದ್ದ ಧ್ವನಿ ಇದ್ದಾಗೆ ಬರೋಕೆ(ಫೋಟೋಜೆನಿಕ್ ಮುಖ ಅಂತ
ಇರೋ ಹಾಗೆ) ಪುಣ್ಯ ಮಾಡಿರ್ಬೇಕು ಅಂತ ಸಮಾಧಾನ ಮಾಡಿಕೊಂಡಿದ್ದೆ. ಅದಾಗಿ ಎಷ್ಟೊ
ವರ್ಷಗಳಾಯ್ತು . ನನ್ನ ಕಾಲೇಜು ಕಾರ್ಯಕ್ರಮದ ವಿಡಿಯೊ ನೋಡಿದ್ದೆ, ನಿರೂಪಕನಾಗಿದ್ದ ಫೋಟೋ
ನೊಡಿದ್ದೆ. ಎಲ್ಲೂ ನಾನಿದ್ದ ಹಾಗೆ ಬಂದಿಲ್ಲ ಅನಿಸಿರಲಿಲ್ಲವಾದ್ದರಿಂದ ಧ್ವನಿಗೂ,
ರೆಕಾರ್ಡಿಂಗಿನ ಧ್ವನಿಯ ವ್ಯತ್ಯಾಸದ ವಿಷಯವೇ ಮರೆತುಹೋಗಿತ್ತು. ಅದು ಮತ್ತೆ ಧುತ್ತೆಂದು
ನೆನಪಾಗಿದ್ದು ವಾಟ್ಸಾಪಿನಿಂದ. ಯಾವುದೋ ಗುಂಗಿನಲ್ಲಿ ಗುಂಪೊಂದರಲ್ಲಿ ನನ್ನ ಧ್ವನಿಯಲ್ಲೇ
ಹಾಡಿನ ಟ್ಯೂನೊಂದ ರೆಕಾರ್ಡ್ ಮಾಡಿ ಕಳಿಸಿದ್ದಿ. ಅದು ಹೇಗೆ ಬಂದಿರಬಹುದು ಅಂತ ನಾನೇ
ಕೇಳಿಕೊಂಡ್ರೆ ಮತ್ತೆ ಮೊದಲು ಕಾಡಿದಂತದೇ ಗಾಬರಿ ! ಏನಾಗಿದೆ ನನ್ನ ದನಿಗೆ ಅಂತ. ನನ್ನದು
ಕೋಗಿಲೆ ಕಂಠವೆಂಬ ಭ್ರಮೆಯಿರದಿದ್ದರೂ ಇಷ್ಟು ಕರ್ಕಶವಾಗಿದೆಯಾ ನನ್ನ ದನಿ
ಅನಿಸಿಬಿಟ್ಟಿತ್ತು. ಕೊನೆಗೆ ಇದು ಸರಿಯಾಗಿ ರೆಕಾರ್ಡು ಮಾಡೋಕೆ ಬಾರದ ನನ್ನ ಮೊಬೈಲ್
ಸಮಸ್ಯೆಯಾ ಅನಿಸಿಬಿಟ್ಟಿತ್ತು. ಆದ್ರೆ ಇದು ರೆಕಾರ್ಡಿಂಗ್ ಸಮಸ್ಯೆಯಲ್ಲದಿರಬಹುದು. ಇದರ
ಹಿಂದೆ ಬೇರೇನೂ ವಿಜ್ನಾನವಿರಬಹುದು ಅನ್ನೋ ಜಿಜ್ನಾಸೆ ಕಾಡತೊಡಗಿತು. ಒಂದಿಷ್ಟು
ತಡಕಾಡಿದಾಗ ದಕ್ಕಿದ ಮಾಹಿತಿಗಳು ನನಗಲ್ಲ ನಿಮಗೂ ಅಚ್ಚರಿ ಮೂಡಿಸಬಹುದೇನೋ ಎಂಬ
ಉದ್ದೇಶದಿಂದ ಅವನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ನಾವು ಮಾತಾಡಿದಾಗ ನಮ್ಮ ಧ್ವನಿಪೆಟ್ಟಿಗೆಯಿಂದ ಹೊರಡೋ ಧ್ವನಿತರಂಗಗಳು ಗಾಳಿಯ ಮೂಲಕ
ಪ್ರಸರಿತವಾಗಿ ಕೇಳುಗನ ಹೊರಕಿವಿಗೆ ಅಪ್ಪಳಿಸುತ್ತವೆ. ಕಿವಿ ತಮಟೆ, ನಡುಗಿವಿಯನ್ನು
ದಾಟಿದ ಇವು ಕಾಕ್ಲಿಯ ಅನ್ನೋ ಭಾಗವನ್ನು ತಾಕುತ್ತವೆ. ಇಲ್ಲಿ ಇದು ಧ್ವನಿತರಂಗಗಳನ್ನು
ವಿದ್ಯುತ್ ಸಂದೇಶಗಳನ್ನಾಗಿ ಮಾರ್ಪಡಿಸಿದಾಗ ಕೇಳಿದವನಿಗೆ ಶಬ್ದದ ಅನುಭೂತಿಯಾಗುತ್ತದೆ.
ಆದ್ರೆ ನಮ್ಮ ದನಿ ನಮಗೇ ಕೇಳುವ ಪರಿ ಇಷ್ಟೇ ಅಲ್ಲ. ನಮ್ಮ ಮಾತು ನಮ್ಮ ಕಿವಿಯ ಮೂಲಕ
ಕಾಕ್ಲಿಯ ತಲುಪೋ ಜೊತೆಗೆ ಅದಕ್ಕೆ ಮತ್ತೊಂದು ದಾರಿಯೂ ಇದೆ. ನಮ್ಮ ತಲೆಯಲ್ಲಿರುವ ಮಜ್ಜೆ,
ಮಾಂಸಗಳು ಧ್ವನಿತರಂಗಗಳನ್ನು ನೇರವಾಗಿ ಕಾಕ್ಲಿಯಕ್ಕೆ ತಲುಪಿಸುತ್ತವೆ. ಇವುಗಳ ಸಂವಹನ
ಗಾಳಿಯಲ್ಲಿನ ಸಂವಹನಕ್ಕಿಂತ ಎಷ್ಟೋ ಪಟ್ಟು ಉತ್ತಮವಿರೋದ್ರಿಂದ ನಮ್ಮ ಧ್ವನಿ ಬೇರೆಯವರಿಗೆ
ಕೇಳಿಸುವಕ್ಕಿಂತ ನಮಗೆ ಚೆನ್ನಾಗಿ ಕೇಳುತ್ತೆ ! ಕಿವಿಯ ಮೂಲಕ ಮತ್ತು ನೇರವಾಗಿ .. ಅಂತ
ಢಬಲ್ ಧಮಾಕ ಬೇರೆ ಆಗೋದ್ರಿಂದ ಇನ್ನೂ ಹೆಚ್ಚು ಎಫೆಕ್ಟು ! ಆದ್ರೆ ರೆಕಾರ್ಡಿಂಗಿನಲ್ಲಿ
ಎರಡನೆಯ ಆವೃತ್ತಿ ಇರಲ್ಲ. ಹಾಗಾಗಿ ನಮ್ಮ ಧ್ವನಿ ಬೇರೆಯವರಿಗೆ ಹೇಗೆ ಕೇಳುತ್ತೋ ಅದೇ ತರ
ನಮಗೂ ಕೇಳುತ್ತೆ ಅಷ್ಟೆ. ಅದೇ ಕಾರಣ ನಮ್ಮ ಧ್ವನಿಯನ್ನು ದಿನಾ ಕೇಳೋ ಬೇರೆಯವರಿಗೆ
ರೆಕಾರ್ಡಾದ ನಮ್ಮ ಧ್ವನಿಯ ಕೇಳಿದ್ರೆ ಏನೂ ವ್ಯತ್ಯಾಸವೆನಿಸದಿದ್ರೂ ನಮಗೆ ವ್ಯತ್ಯಾಸ
ಅನಿಸೋದಕ್ಕೆ. ಅಂತೂ ನನ್ನ ಮನಸ್ಸಲ್ಲಿ ಎಷ್ಟೊ ಕಾಲದಿಂದ ಕೊರೆಯುತ್ತಿದ್ದ
ಪ್ರಶ್ನೆಗೊಂದು ಉತ್ತರ ಸಿಕ್ಕಿದ ಖುಷಿಯೊಂದಿಗೆ ವಿರಮಿಸುತ್ತಿದ್ದೇನೆ. ಧ್ವನಿ
ಭಿನ್ನವಾಗಿ ಧ್ವನಿಸೋದೇಗೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಕೆಲವರಿಗಾದ್ರೂ ಕಾಡಿದ್ರೆ
ಅದಕ್ಕೊಂದಿಷ್ಟು ಸಮಾಧಾನ ದೊರೆತೀತೆಂಬ ನಿರೀಕ್ಷೆಯಲ್ಲಿ..
No comments:
Post a Comment