Wednesday, August 1, 2018

ನಿಪ್ಲಿ ಜಲಪಾತ

ನಿಪ್ಲಿ ಜಲಪಾತ: 
Nipli falls
 ಕಳೆದ ವರ್ಷ ನಾ ಮೆಕ್ಸಿಕೋದಲ್ಲಿದ್ದಾಗ ಅಮ್ಮ "ನಿಪ್ಲಿ ಫಾಲ್ಸ್" ಗೆ ಹೋಗಿ ಬಂದ್ವಿ ಕಣೋ ಇವತ್ತು ಅಂದ್ರು ಒಂದಿನ. ಇಲ್ಲಿಯವರೆಗೆ ಹೆಸರೇ ಕೇಳಿರ್ಲಿಲ್ವಲ್ಲಾ. ಎಲ್ಲಿ ಬಂತಪಾ ಈ ಫಾಲ್ಸ್ ಅಂತ ಅಂದ್ಕೊಳ್ತಿದ್ದಾಗ ತಾಳಗುಪ್ಪದಿಂದ ಹದಿನೈದು ಕಿ.ಮೀ ಒಳಗೆ ಅಂತಲೂ ಅಂದ್ರು. ಅದಾದ ಮೇಲೆ ಫೇಸ್ಬುಕ್ಕಲ್ಲಿ ಯಾರ ಗೋಡೆ ಮೇಲೆ ನೋಡಿದ್ರೂ ನಿಪ್ಲಿ ಫಾಲ್ಸಿಂದೇ ಫೋಟೋ. ವಾಪಾಸ್ ಬಂದ್ಮೇಲೆ ಹೋಗ್ಲೇ ಬೇಕು ಅಂತಂದುಕೊಂಡಿದ್ದ ಮೊದಲ ಜಾಗ. ಅಂತೂ ಬಂದ ವಾರವೇ ಹೋಗಿ ಬಂದ್ವಿ ಅಲ್ಲಿಗೆ. ನಾ ಹಾಕಿದ ಫೋಟೋ ನೋಡಿ ಅಲ್ಲಿಗೆ ಹೋಗೋದೇಗೆ ಅಂತ ಕೇಳ್ತಿದ್ದ ಗೆಳೆಯರಿಗಾಗಿ ಈ ಲೇಖನ

ಹೋಗೋದು ಹೇಗೆ? 
ಸಾಗರದಿಂದ ೩೦ ಕಿ.ಮೀ ದೂರವಿರೋ ಈ ಜಲಪಾತ ಆಡುಕಟ್ಟೆ, ಹಾಲಗೇರಿ ರಸ್ತೆಯಲ್ಲಿ ಬರುತ್ತದೆ. ಸಾಗರದಿಂದ ಜೋಗಕ್ಕೆ ಹೋಗೋ ರಸ್ತೆಯಲ್ಲಿ ತಾಳಗುಪ್ಪ ದಾಟಿ ಮುಂದೆ ಹೋದರೆ ಸಿಗೋ ಚೂರಿಕಟ್ಟೆಯ ಸರ್ಕಲ್ಲಿನಲ್ಲಿ ಎಡಕ್ಕೆ ಹೋಗದೇ ಸೀದಾ ಹೋಗಬೇಕು. ಸುಮಾರು ಐದು ಕಿ.ಮೀ ಹೋಗುವಷ್ಟರಲ್ಲಿ ಜೋಗ ಏಳು ಕಿ.ಮೀ ಅಂತ ಬೋರ್ಡ್ ಕಾಣುತ್ತೆ. ಆ ಬೋರ್ಡಿನ ಪಕ್ಕದಲ್ಲೇ ಎಡಕ್ಕೆ ಹೋದರೆ ಕಲ್ಸಂಕ ಅತ ಪ್ರಪಂಚದಲ್ಲೇ ಅತ್ಯಂತ ಉದ್ದದ ಏಕಶಿಲಾ ಸೇತುವೆಗಳಲ್ಲಿ ಒಂದಾದ ಶಿಲಾ ಸೇತುವೆಯೊಂದು ಸಿಗುತ್ತೆ. (ಅದರ ಬಗ್ಗೆ ನನ್ನ ಹಿಂದಿನ ಬ್ಲಾಗ್ ಬರಹದಲ್ಲಿದೆ). ಅದನ್ನು ದಾಟಿ ಒಂದೆರಡು ಕಿ.ಮೀ ಹೋಗುವಷ್ಟರಲ್ಲಿ ಸಿದ್ದಾಪುರಕ್ಕೆ ಹೋಗಲು ಬಲಗಡೆ ಒಂದು ತಿರುವು ಸಿಗುತ್ತೆ. ಆ ತಿರುವಲ್ಲೂ ತಿರುಗದೇ ಹಾಗೇ ಸ್ವಲ್ಪ ಮುಂದೆ ಹೋದರೆ ಆಡುಕಟ್ಟೆ ಸಿಗುತ್ತೆ. ಅಲ್ಲಿ ಬಲಕ್ಕೆ ತಿರುಗಿ ಏಳು ಕಿ.ಮೀ ಹೋಗೋ ಹೊತ್ತಿಗೆ "ನಿಪ್ಲಿ" ಅಂತ ಊರು ಸಿಗುತ್ತೆ. ಆ ಊರೊಳಗೆ ಹೋಗೋ ಬದಲು ಹಾಗೇ ಅದೇ ಟಾರ್ ರಸ್ತೆಯಲ್ಲಿ ಒಂದಿನ್ನೂರು ಮೀಟರ್ ಮುಂದೆ ಹೋಗೋ ಹೊತ್ತಿಗೆ ರಸ್ತೆಯ ಎಡಭಾಗದಲ್ಲಿ ಕಾಣ ಸಿಗೋದೇ ನಿಪ್ಲಿ ಜಲಪಾತ.
Nipli or Husur dam falls

ಈ ಜಲಪಾತ ಆಗಿದ್ದು ಹೇಗೆ? 
ಆಡುಕಟ್ಟೆಯಿಂದ ಸಿದ್ದಾಪುರದ ಹಲಗೇರಿಗೆ ಹೋಗಬಹುದಾದ ರಸ್ತೆಯೊಂದಿದೆ. ಆ ರಸ್ತೆಯಲ್ಲಿ ಹಲಗೇರಿಗಿಂತ ಎರಡು ಕಿ.ಮೀ ಮುಂಚೆ ಹುಸೂರು ಅಂತೊಂದು ಊರು ಸಿಗುತ್ತೆ. ಅಲ್ಲೊಂದು ಸಸ್ಯಪಾಲನಾ ಕ್ಷೇತ್ರವಿದೆ.
Forest Nursery at Husur
ಅದರ ಬಲಗಡೆಗೇ ಒಂದು ಡ್ಯಾಂ ಇದೆ. ಮಳೆಗಾಲದಲ್ಲಿ ಅದನ್ನು ತುಂಬುವ ಶರಾವತಿ "ನಿಪ್ಲಿ" ಜಲಪಾತವಾಗಿ ಧುಮುಕುತ್ತಾಳೆ. ಹಾಗಾಗಿ ಇದಕ್ಕೆ "ಹುಸೂರು ಡ್ಯಾಂ ಜಲಪಾತ" ಎಂದೂ ಕೆಲವರು ಕರೆಯುತ್ತಾರೆ. ಅಂದ ಹಾಗೆ ಈ ಜಲಪಾತ ಮಳೆಗಾಲ ಮುಗಿಯೋವರೆಗೆ ಮಾತ್ರವಿರುತ್ತೆ.
Husur Reservoir
Steps to Get down to Husur Reservoir

ಈ ಜಲಪಾತ ನೋಡೋಕೆ ಹೋಗೋದು ಎಷ್ಟು ಸುರಕ್ಷಿತ? : 
ಮಳೆ ಜೋರಿದ್ದಾಗ ನೀರಿನ ರಭಸ ಸ್ವಲ್ಪ ಜಾಸ್ತಿ ಇದ್ದರೂ ಜಲಪಾತದ ತಲೆಯವರೆಗೂ ನಡೆದುಕೊಂಡು ಬರಬಹುದು. ನೀರು ಕಮ್ಮಿಯಿದ್ದಾಗ ಹಿನ್ನೀರಿನಲ್ಲೂ ಸ್ವಲ್ಪ ದೂರ ಓಡಾಡಬಹುದು. ಜಲಪಾತದ ತಲೆಯ ಮೇಲೆ ಸರ್ಕಸ್ ಮಾಡೋಕೆ ಅಥವಾ ಜಲಪಾತ ಧುಮ್ಮುಕ್ಕುವಲ್ಲಿ ಹೆಚ್ಚು ನೀರಿದ್ದಾಗ ಈಜಲು ಹೋಗದೇ ಹೋದರೆ ಹೆಚ್ಚಿನ ಎತ್ತರದಿಂದ ಬೀಳದ ಈ ಜಲಪಾತ ಪ್ರವಾಸಿಗರ ಮಟ್ಟಿಗೆ ಸುರಕ್ಷಿತವೇ.
on the top of Nipli falls
ಸುತ್ತಲಿರೋ ಸೌಲಭ್ಯಗಳು: 
ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಕಾಣಸಿಗೋದ್ರಿಂದ ಇದರ ಸುತ್ತ  ಒಂದು ಮಂಡಕ್ಕಿ, ಎಳನೀರು ಮುಂತಾದವು ಸಿಗೋ ಸಣ್ಣ ಅಂಗಡಿ ಬಿಟ್ಟರೆ ಹೆಚ್ಚೇನೂ ಸೌಲಭ್ಯಗಳಿಲ್ಲ. ಪಕ್ಕದಲ್ಲೇ ದೊಡ್ಡ ಬಯಲಿರೋದ್ರಿಂದ ವಾಹನಗಳ ನಿಲುಗಡೆಗೆ ತೊಂದರೆಯೇನಿಲ್ಲ. ಪೇಪರ್ರು, ಕವರ್ರುಗಳನ್ನು ಅಲ್ಲಲ್ಲಿ ಎಸೆಯೋ ಜನರ ದುರ್ಬುದ್ದಿ ನೋಡಿ ಬೇಜಾರಾಗುತ್ತೆ ಬಿಟ್ಟರೆ ಹಿರಿಯರು, ಮಕ್ಕಳಿರೋ ಕುಟುಂಬದೊಂದಿಗೆ, ಗೆಳೆಯರೊಂದಿಗೆ ಬಂದು ಒಂದಿಷ್ಟು ಹೊತ್ತು ಕಳೆಯಲು ಪ್ರಶಸ್ತವಾದ ಜಾಗವಿದು. ಜೋಗ ಜಲಪಾತ ಇಲ್ಲಿಂದ ಸುಮಾರು ಹನ್ನೆರಡು ಕಿ.ಮೀ ಅಷ್ಟೇ ಆಗಿರೋದ್ರಿಂದ ಜೋಗ ಜಲಪಾತಕ್ಕೆ ಬಂದವರು ಆರಾಮವಾಗಿ ಬಂದು ಹೋಗಬಹುದಾದ ಮತ್ತೊಂದು ಜಲಪಾತ ಇದು.

No comments:

Post a Comment