ಮಂಗಳವಾರನೇ ಫ್ರೆಂಡ್ ಹೇಳಾಗಿತ್ತು. ಈ ಶನಿವಾರ ಅಥ್ವಾ ಭಾನುವಾರ ಒಂದು ಮೂವಿಗೆ ಹೋಗ್ಬೇಕಂದಿದ್ದ. ಅದ್ರಲ್ಲೇನಿದೆ ದೊಡ್ ವಿಷ್ಯ. ಪ್ರತೀವಾರ ಒಂದೊಂದು ಹೊಸ ಸಿನಿಮಾ ಬರುತ್ತಿರುತ್ತೆ. ಅದ್ರಲ್ಲೂ ಇದು ಬೆಂಗ್ಳೂರು. ಇಲ್ಲಿ ತೆಲುಗು, ತಮಿಳು, ಹಿಂದಿ, ಇಂಗ್ಲೀಷು, ಮಲೆಯಾಳಿ ಅಥ್ವಾ ಅವುಗಳದ್ದೇ ರಿಮೇಕಾದ ಯಾವ್ದ್ರಾದ್ರೂ ಚಿತ್ರ ಯಾವಾಗ್ಲೂ ಓಡ್ತಿರತ್ತೆ ! ಅದ್ರಲ್ಲೊಂದಕ್ಕೆ ಹೋಗೋದ್ರಲ್ಲೇನಿದೆ ವಿಶೇಷ ಅಂದ್ರಾ ? ಅಲ್ಲೇ ಇದ್ದಿದ್ದು ಫ್ರೆಂಡ್ ಹೇಳ್ತಾ ಇದ್ದಿದ್ದು ಈ ವಾರಕ್ಕೆ ಎರಡನೇ ವಾರ ಮುಗಿಸಿದ ಕನ್ನಡದ ಸ್ವಮೇಕ್ ಸಿನಿಮಾ ಬಹಾದ್ದೂರ್ ಬಗ್ಗೆ :-)
ಧ್ರುವ ಸರ್ಜಾ-ರಾಧಿಕಾ ಪಂಡಿತ್ರ ಜೋಡಿ ಅದ್ದೂರಿಯಾಗಿ ಮುಂದುವರಿದ ಸಿನಿಮಾ ಇದು ಅಂತ ಒಂದ್ಕಡೆ, ಅದ್ದೂರಿ ತಂಡದ್ದೇ ಸಿನಿಮಾ,ಕತೆ ಕೂಡಾ ಅದ್ದೂರಿ ಕತೆ ಇದ್ದಂಗೆ ಇದೆ ಅಂತ ತೀರ್ಪು ಕೊಟ್ಟಿದ್ದ ಗೆಳೆಯರ ಅಭಿಪ್ರಾಯ ಮತ್ತೊಂದ್ಕಡೆ. ಕನ್ನಡದ ಸ್ವಮೇಕ್ ಚಿತ್ರಗಳು ಬರ್ತಿರದೇ ಕಮ್ಮಿ. ಹಂಗಾಗಿ ಚಿತ್ರ ಎಂತ ಕರಾಬಾಗಿದ್ರೂ ನೋಡೋದೇ ಕಣ್ರೋ ಅಂತ ಹೊರಟ ನಮಗೆ ಎರಡೂವರೆ ಘಂಟೆ ನಿರಾಸೆಯಂತೂ ಆಗ್ಲಿಲ್ಲ ಅಂತ ಇಡೀ ಸಿನಿಮಾ ಬಗ್ಗೆ ಎರಡು-ಮೂರು
ವಾಕ್ಯದಲ್ಲಿ ಉತ್ತರಿಸಿ ಅಂದ್ರೆ ಹೇಳ್ಬೋದೇನೋ.
ರವಿಶಂಕರ್, ದತ್ತಣ್ಣ, ಜೈ ಜಗದೀಶ್, ಶ್ರೀನಿವಾಸ ಪ್ರಭು, ಪ್ರಮುಖ ಪಾತ್ರಗಳಲ್ಲಿದ್ರೂ ಅವಿನಾಶ್, ಪವಿತ್ರಾ ಲೋಕೇಶ್, ಸುಧಾರಾಣಿ, "ಮನಸಾರೆ" ಮಾತಿನ ಶೈಲಿ ನೆನಪಿಸಿದ ಧಾರವಾಡದ ಹಾಸ್ಯ, ಧ್ವನಿಯಾಗಿ ಪುನೀತ್, ನಗಿಸೋಕಂತ್ಲೆ ತಬಲಾ ನಾಣಿ, ಜಹಾಂಗೀರ್ ಅಲ್ಲಲ್ಲಿ ಬರ್ತಾರೆ. bleech bypass ಅನ್ನೋ ತಂತ್ರವನ್ನು ಇಡೀ ಸಿನಿಮಾದಲ್ಲಿ ಅಲ್ಲ ಇಲ್ಲೋ ಬಳಸ್ತಿದ್ದ ಸಂದರ್ಭದಲ್ಲಿ ಇಡೀ ಸಿನಿಮಾವನ್ನೇ ಅದನ್ನುಪಯೋಗಿ ತೆಗೆದ ಅದ್ದೂರ ಅನೇಕರ ಹುಬ್ಬೇರಿಸಿತ್ತು. ಅದೇ ತರ ಕಡು ನೀಲಿ, ಹಳದಿಯಂತಹ ವರ್ಣ ಸಂಯೋಜನೆ, ಹರಿಕಥೆ ಹೇಳೋಕೆ ಹೋದಾಗ ಬರೋ ಮಾಸ್ ಸಾಂಗು, ಮೇಲುಕೋಟೆಯನ್ನ ಎಲ್ಲರೂ ತೆಗೆಯುವಂತೆ ತೆಗೆದೆ. ರಾತ್ರೆಯ ದೀಪಗಳ ಬೆಳಕಲ್ಲಿ ತೆಗೆದಿದ್ದು, ಮೈಸೂರು, ಮಂಡ್ಯ, ಮಡಿಕೇರಿ, ಬೆಂಗಳೂರು, ಹುಬ್ಬಳ್ಳಿ ಹೀಗೆ ರಾಜ್ಯಾದ್ಯಂತ ಸುತ್ತೋ ಕಥೆ, ಸಿಂಗಾಪುರದಲ್ಲಿ ಕನ್ನಡಿಯಷ್ಟು ಶುಭ್ರ ಕೊಳ ಮತ್ತಿತರ ಜಾಗಗಳ ಪಕ್ಕದ ಹಾಡು ಹೀಗೆ ಒಂದಿಷ್ಟು ಹೊಸತನ ಮತ್ತೊಮ್ಮೆ.
ಆದ್ರೆ ಸಿಕ್ಕ ರೇಟಿಂಗ್ ನೋಡಿ. ಡೆಕ್ಕನ್ ಹೆರಾಲ್ಡಲ್ಲಿ ೫ರಲ್ಲಿ ೧ ಕೊಟ್ಟಿದ್ರೆ ಬೆಂಗಳೂರು ಮಿರರ್ ಅವ್ರು ಐರ್ದಲ್ಲಿ ನಾಲ್ಕು ಕೊಟ್ಟಿದ್ದು. ಕನ್ನಡ ಪತ್ರಿಕೆಗಳದ್ದೂ ಈ ತರ ವೈರುಧ್ಯದ ರೇಟಿಂಗುಗಳೇ. "ಉಳಿದವರು ಕಂಡಂತೆ"ಯಂತಹ ಒಂದು ಹೊಸ ಪ್ರಯತ್ನಕ್ಕೆ ಹಿಗ್ಗಾಮುಗ್ಗಾ ತೆಗಳಿ ರೇಟಿಂಗ್ ಕೊಟ್ಟ ಪತ್ರಿಕೆಗಳ ಮಾತು ಮೊದ್ಲು ಹೌದೆಂದೇ ನಂಬಿದ್ದ ನಾನು ಆ ಪತ್ರಿಕೆಗಳಿಗೆ ಒಂದು ನಮಸ್ಕಾರ ಹಾಕಿದ್ದು ಆ ಚಿತ್ರ ಕೊನೆಗೂ ನೋಡಿದ ಮೇಲೆಯೇ..ಅದ್ಯಾವ ಪೂರ್ವಾಪರಗಳನ್ನಿಟ್ಕೊಂಡು ಒಂದು ಚಿತ್ರನ ವಿಮರ್ಷಿಸ್ತಾರಪ್ಪಾ, ಒಂದು ಚಿತ್ರನಾ ಬರೀ ಚಿತ್ರವಾಗಿ , ಅದು ನೀಡಿದ ಮನೋರಂಜನೆಯ ದೃಷ್ಟಿಯಿಂದ ನೊಡೋಕಾಗಲ್ವಾ ಅನ್ಸಿಬಿಟ್ಟಿತ್ತು ಅವಾಗ. ಈಗನ್ಸಿದ್ದೂ ಅದೇ.
ಇನ್ನು ಬೆಂಗಳೂರು ಅರಮನೆ, ಮೈಸೂರಿನ ರಾಜಬೀದಿಗಳು, ಮೇಲುಕೋಟೆಯ ಕೊಳ ಹೀಗೆ ನಾವು ಅಲೆದ ಜಾಗಗಳೆಲ್ಲಾ ಒಂದು ಚಿತ್ರವಾಗಿ ಹೊಸ ದೃಷ್ಠಿಕೋನದಲ್ಲಿ ಕಾಣಿಸಿಕೊಂಡಾಗ ಯಾರಿಗೆ ತಾನೇ ಖುಷಿಯಾಗೋಲ್ಲ ಹೇಳಿ. ಹೀರೋ ಹೆಸ್ರೇ ಫೈಟಿಂಗ್ ಪ್ರಿನ್ಸ್ ಧ್ರುವ ಸರ್ಜಾ ಅಂತ :-) . ಅಂದ್ಮೇಲೆ ಕೇಳ್ಬೇಕಾ ? ಹುಬ್ಳಿ ಕೇಡಿಗಳಿಂದ ಕರಾಟೆ ಕಲಿಗಳವರ್ಗೆ ಎಲ್ರೂ ಇವ್ನ ಕೈಲಿ ಪೆಟ್ಟು ತಿನ್ನೋರೇ. ಚಿತ್ರದ ಸನ್ನೀವೇಶಗಳಿಗಾಗಿ ೨೨ ಕೇಜಿ ತೂಕ ಹೆಚ್ಚಿಸ್ಕೊಂಡು ಹಾಡಿನ ಸನ್ನಿವೇಶಗಳಿಗೆ ೧೮ ಕೇಜಿ ಕಮ್ಮಿಯಾದ ನಾಯಕನ ಸಿನಿಮಾ ಪ್ರೀತಿಯೂ ನೋಡುವಾಗೊಂದು ಖುಷಿ ಕೊಡುತ್ತೆ. ತಂಡ ಸಿನಿಮಾ ಮೂಲಕ ಕೊಡೋಕೆ ಹೊರಟಿರೋ ಸಂದೇಶ, ಪಾತ್ರಕ್ಕೆ ಹೇಳಬೇಕಾದ್ದನ್ನು ಒಂದು ಕತೆ ಸೃಷ್ಟಿಸಿ ಅದ್ರ ಮೂಲಕ ಹೇಳೋ ಕ್ರಮ.. ಹಿಂಗೆ ಅಲ್ಲಲ್ಲಿ ಒಂದೊಂದಿಷ್ಟು ಖುಷಿ.
ಹಂಗಂತಾ ಸಿನಿಮಾದಲ್ಲೇನೂ ನ್ಯೂನತೆಗಳೇ ಇಲ್ಲ ಅಂತೇನಿಲ್ಲ. ಮಧ್ಯ ಹೀರೋ ಹಸಿರಂಗಿ ಹಾಕಿಕೊಂಡು ನರ್ತಿಸೋ ಒಂದು ಹಾಡು ಬರುತ್ತೆ. ಅದು ನೀನೇ ನೀನೇಯೋ ಅಥವಾ ಹುಟ್ಟೋ ಸೂರ್ಯ ಅಂತೇನೋ ಬರ್ತಿದ್ದಿದ್ದಾ ಅಂತ ಈಗ್ಲೇ ಮರೆತೋಗಿದೆ ! ಹಾಡುಗಳೆಲ್ಲಾ ಪಕ್ಕಾ ಜಾತ್ರೆ(ಲೋಕಲ್ ಭಾಷೇಲಿ ಹೇಳ್ಬೇಕಂದ್ರೆ). ಆ ಹಸಿರಂಗಿ ಹಾಡಿಗೆ ಬರೋದಿದ್ರೆ, ಅಲ್ಲಿ ಹೀರೋನ ಶರ್ಟು ವಿಪರೀತ ಬೆವರಿರತ್ತೆ ಮೊದಲ ಸ್ಟೆಪ್ಪಿನಲ್ಲಿ, ನಂತರ ಬರೋ ಸ್ಟೆಪ್ಪಿನಲ್ಲಿ ಬೆವರು ಕಮ್ಮಿ ಕಾಣುತ್ತೆ. ನಂತರ ಮತ್ತೆ ವಿಪರೀತ ಬೆವರಿನ ದೃಶ್ಯ. ತಗೋ ಮತ್ತೆ ಕಮ್ಮಿ ಬೆವರು.. ಚಿತ್ರೀಕರಣ ಅಂದಾಗ ಬೇರೆ ಬೇರೆ ಚಿತ್ರೀಕರಿಸಿ ಆಮೇಲೆ ಸಂಕಲನ ಮಾಡೋದು ಹೌದಾದ್ರೂ ಈ ತರದ ತಪ್ಪುಗಳು ಕಂಡು ಬರೋದ್ಯಾಕೋ ವಿಚಿತ್ರ ಅನಿಸುತ್ತೆ.
ಮೊದಲ ದೃಶ್ಯದಲ್ಲಿ ಬೆವರಿರದ ನಾಯಕ ಹಾಡು ಮುಗಿಸೋ ಹೊತ್ತಿಗೆ ಬೆವರಲ್ಲಿ ತೊಯ್ದು ಹೋಗಿರ್ತಾನೆ ಅಂದ್ರೆ ಅದು ಪ್ರಕೃತಿ ನಿಯಮದ ಪ್ರಕಾರವೂ ಸರಿ ಅಲ್ವೇ ? :-) ಹುಡುಕ್ಬೇಕಂತನೇ ಹುಡುಕ್ಕಂಡೋದ್ರೆ ಇಂತಾ ವಿಚಿತ್ರದ ತಪ್ಪುಗಳು ಕಾಣ್ಬೋದೇನೋ ತಪ್ಪಪ್ಪರಿಗೆ.
ಇಡೀ ಕಥೇನೆ ಹೇಳ್ದೆ ನಾನು. ಇನ್ನೇನಿದೆ ಸಿನಿಮಾ ಅಂದ್ರಾ ? ಅಯ್ಯೋ ಸಿನಿಮಾದ ಹತ್ತು ಪ್ರತಿಶತವೂ ನಾನು ಹೇಳಿಲ್ಲ. ಬ್ರೇಕಿಗೆ ಸರಿಯಾಗಿ ಬರೋ ಅನಿರೀಕ್ಷಿತ ತಿರುವು, ಹೀರೋಯಿನ್ನಿಗೂ-ಮಳೆಗೂ ಇರೋ ಸಂಬಂಧ, ಬಹಾದ್ದೂರಿಗೂ ಅವಿನಾಶಿಗೂ ಇರೋ ಸಂಬಂಧ ಹೀಗೆ ಹಲವಷ್ಟು ಸಂಗತಿಗಳು ಕಾಯ್ತಾ ಇರುತ್ವೆ ನಿಮಗಾಗಿ ಚಿತ್ರಮಂದಿರದಲ್ಲಿ. ತಲೆ ಖಾಲಿ ಇಟ್ಕೊಂಡು ಹೋಗ್ತೀನಿ. ಒಂದೊಳ್ಳೆ ಕನ್ನಡ ಚಿತ್ರ ನೋಡಿ ಬರ್ತೀನಿ ಅಂತಿದೀರೋ ? ಕೊಟ್ಟ ದುಡ್ಡಿಗೆ, ಎರಡೂವರೆ ತಾಸಿಗೆ ಮೋಸವಿಲ್ಲದ, ಒಮ್ಮೆ ಧಾರಾಳವಾಗಿ ನೋಡಬಹುದಾದ ಚಿತ್ರ ಬಹಾದ್ದೂರ್..ಇನ್ನೇನೆಚ್ಗೆ ಹೇಳೋದು. ಚಿತ್ರದ ಬಗ್ಗೆ ಯಾರೋ ಹೇಳಿದ್ದು ಕೇಳಿ, ಇನ್ಯಾರೋ ರೇಟಿಂಗಿನ ಫರ್ಮಾನು ಹೊರಡಿಸಿದ್ದು ನೋಡಿ ಮಾತಾಡೋ ಬದ್ಲು ನಾವೇ ಸ್ವಂತ ನೋಡಿ ಅಭಿಪ್ರಾಯ ಹಂಚಿಕೊಳ್ಳೋಣ. ಏನಂತೀರಿ ?
ಇದು "ಪಂಜು"ವಿನಲ್ಲಿ ಪ್ರಕಟವಾಗಿದೆ
ಹಿಂದಿನ ಪೋಸ್ಟಿನಲ್ಲಿ ಫೋಟೋಗಳಿರಲಿಲ್ಲ. ಹಾಕಬಹುದಿತ್ತು ಅಂತ ಸಲಹೆ ನೀಡಿದ ಗೆಳೆಯರಲ್ಲೆಲ್ಲಾ ಒಂದು ಕ್ಷಮಾಪಣೆ.. ನಿಧಾನಗತಿಯ ಅಂತರ್ಜಾಲ ಸಂಪರ್ಕದ ಕಾರಣ ಚಿತ್ರಗಳ ಹಾಕುವಿಕೆ ಸಾಧ್ಯವಾಗಿಲ್ಲ. ಸದ್ಯದಲ್ಲೇ ಹಾಕುತ್ತೇನೆ..ಎಂದಿನಂತಿನ ಮೆಚ್ಚುಗೆಗೆ ವಂದನೆ
No comments:
Post a Comment