ಇಲ್ಲಿಯವರೆಗೆ ಬಂದ ಯಾವ ಚಿತ್ರವನ್ನೂ ನಾನು ಮೊದಲ ದಿನವೇ ನೋಡಿರಲಿಲ್ಲ. ಆ ದಾಖಲೆ ಮುರಿಯಬೇಕು ಅಂತ ಈ ಸಲ ಚಿತ್ರವೊಂದನ್ನು ಸುಮಾರು ದಿನ ಮುಂಚೆಯೇ ಅಂತರ್ಜಾಲದಲ್ಲಿ ಬುಕ್ ಮಾಡಿದ್ದೆ. ಆದರೆ ಚಿತ್ರದ ದಿನ ಹತ್ತಿರ ಬಂದಂತೆ ಅದರ ಪ್ರದರ್ಶನಕ್ಕೆ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆಯಂತೆ ಅನ್ನೋ ಸುದ್ದಿಯಿಂದ ಸ್ವಲ್ಪ ಬೇಸರವಾಗಿತ್ತು. ನಿನ್ನೆ ಬೆಳಗ್ಗೆ ಆ ಚಿತ್ರಕ್ಕೆ ಹೋದ ಗೆಳೆಯರು ಅದರ ಬಗ್ಗೆ ಬರೆದಾಗಲೇ ಸ್ವಲ್ಪ ಸಮಾಧಾನವಾಗಿತ್ತು.ಆದರೂ ಆಮೇಲೇನಾದ್ರೂ ಆದ್ರೆ ಅನ್ನೋ ಪುಕುಪುಕು. ಏನಾದ್ರೂ ಆಗಲಿ ಅಂತ ಮೊದಲ ದಿನ ನೋಡದ ದಾಖಲೆ ಮುರಿಯೋಕೆ ಚಿತ್ರಮಂದಿರಕ್ಕೆ ಹೋಗಿದ್ದೆ. ನೋಡಿದ ಚಿತ್ರವೂ ಸುಮಾರು ದಾಖಲೆಗಳ ಮುರಿಯೋ ನಿರೀಕ್ಷೆ ಹುಟ್ಟಿಸಿದ್ದು ಸುಳ್ಳಲ್ಲ.
ಕಳೆದ ಕೆಲವು ವರ್ಷಗಳ ಹಿಂದೆ ಮೊಬೈಲುಗಳಲ್ಲಿ ಬಂದ ಸ್ಲೋ ಮೋಷನ್ ಫೋಟೋ ಅನ್ನೋ ಮೋಡ್ ಸಖತ್ ಖುಷಿ ಕೊಟ್ಟಿತ್ತು. ಜಲಪಾತವೊಂದರ ಕೆಳಗೆ ನಿಂತು ತೆಗೆದಾಗ ಅದರ ಪ್ರತಿ ಹನಿಯೂ ನಿಧಾನವಾಗಿ ಬೀಳುವಂತೆ ತೆಗೆಯೋದು, ನೀರಿಗೆ ಕಲ್ಲೆಸೆದಾಗ ಅದರಲ್ಲಿ ಮೂಡೋ ತರಂಗಗಳ ತೆಗೆಯೋದು, ಮರಳ ಮೇಲೆ ಬೈಕ ಚಕ್ರಗಳನ್ನು ಸಡನ್ನಾಗಿ ತಿರುಗಿಸಿದಾಗ ಹಾರೋ ಮರಳ ಪ್ರತೀ ಕಣಗಳ ಚಲನೆಯನ್ನು ತೆಗೆಯೋದು ಅದ್ಭುತ ಅನಿಸುತ್ತಿತ್ತು. ಆದರೆ ಈ ತರಹದ್ದೇ ಅದ್ಭುತ ಅನುಭವಗಳ ಚಲನಚಿತ್ರವೊಂದು ಕಟ್ಟಿಕೊಟ್ಟರೆ ? ಇಂಗ್ಲೀಷಿನ ಫ್ಲ್ಯಾಷ್ ಅನ್ನೋ ಧಾರಾವಾಹಿಯನ್ನೋ ಅಥವಾ ಜಸ್ಟೀಸ್ ಲೀಗ್ ಅನ್ನೋ ಚಲನಚಿತ್ರವನ್ನೋ ನೋಡಿದ್ದಿದ್ರೆ ಅದರಲ್ಲಿ ಸಖತ್ ವೇಗವಾಗಿ ಓಡೋದನ್ನ ಸ್ಲೋ ಮೋಷನ್ನಲ್ಲಿ ತೋರಿಸಿದ್ರೆ ಹೇಗಿರುತ್ತೆ ಅನ್ನೋದನ್ನ ಕಟ್ಟಿ ಕೊಡೋ ಪ್ರಯತ್ನವಿದೆ. ಬಾಹುಬಲಿಯಂತ ಚಿತ್ರಗಳಲ್ಲಿ ಕೂಡ ಈ ತರದ ಪ್ರಯತ್ನಗಳ ಮಾಡಿದ್ದರೂ ಕೂಡ ಅದು ವಿಎಫೆಕ್ಸ್ ಎಫೆಕ್ಟುಗಳು ಅಂತ ಆರಾಮಾಗಿ ಗೊತ್ತಾಗಿಬಿಡುತ್ತೆ. ಅತ್ಯಂತ ಸಹಜವಾಗಿ ಕಾಣುವಂತಹ ನಾಯಕ ನೆಲಕ್ಕೆ ತುಳಿದಾಗ ಏಳೋ ಧೂಳ ಕಣಗಳು, ನೀರಿನಿಂದ ಎದ್ದಾಗ ಚಿಮ್ಮೋ ನೀರ ರಾಶಿ, ರಾಕಿ ಗರುಡನನ್ನು ಕೊಲ್ಲೋಕೆ ಅಂತ ನೀರಿನಿಂದ ತೆಗೆಯೋ ಆಯುಧದ ಸಂಚಾರ ... ಉಫ್ ಹೇಳಹೋದ್ರೆ ಚಿತ್ರದ ತುಂಬೆಲ್ಲಾ ರಾರಾಜಿಸೋ ಸ್ಲೋ ಮೋಷನ್ ದೃಶ್ಯಗಳೇ ನೋಡಿಸಿಕೊಂಡು ಹೋಗುತ್ತೆ ನಿನ್ನೆ ತೆರೆಕಂಡ ಕೆ.ಜಿ.ಎಫ್ ಸಿನೆಮಾವನ್ನು.
೧೯೫೫, ೭೦ರ ದಶಕ, ೮೧ರ ದೃಶ್ಯಗಳನ್ನ ತೆಗೆಯುವಾಗ ತುಂಬಾ ಜಾಗರೂಕತೆಯಿಂದ ತೆಗೆದಿದ್ದಾರೆ ಅಂತ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಓದಿದ್ದೆ. ದೃಶ್ಯವೊಂದರಲ್ಲಿ ಬರೋ ಬೆಂಕಿಪೊಟ್ಟಣ ಕೂಡ ಆ ಕಾಲದ್ದೇ ಬೇಕು ಅಂತ ಗಮನವಹಿಸಿದ್ರು ಅಂತಲೂ ಓದಿದ್ದೆ. ಆಗಿನ ಕಾಲದಲ್ಲಿರುತ್ತಿದ್ದಂತಹ ಪ್ಯಾಂಟುಗಳು, ನಾಯಕಿ ಹಣೆಗೆ ಹಾಕಿಕೊಳ್ಳೋ ಪಟ್ಟಿ, ಆಗಿನ ಕಾಲದಲ್ಲಿರುವಂತಹ ಕ್ಯಾಬರೆಗಳು ಚಿತ್ರ ನಿರ್ಮಾಣದಲ್ಲಿನ ಶ್ರದ್ಧೆಯನ್ನು ತೋರಿಸುತ್ತೆ. ಆದರೆ ಇಷ್ಟೆಲ್ಲಾ ಗಮನವಹಿಸಿದ್ರೂ ಇಷ್ಟು ಸಣ್ಣ
ವಿಷಯ ಹೆಂಗೆ ಮಿಸ್ಸಾಯ್ತು ಅಂತಲೂ ಕೆಲವು ಕಡೆ ಅನಿಸುತ್ತೆ. ಉದಾಹರಣೆಗೆ: ಕೋಲಾರದ ಒಂದು ಗಣಿ. ಅಲ್ಲಿರೋ ಜನರ ಮೈಯೆಲ್ಲಾ ಧೂಳೇ ಧೂಳಾಗಿದೆ. ಎಲ್ಲಿ ನೋಡಿದ್ರೂ ಧೂಳು ಹಾರ್ತಾ ಇದೆ. ಅವರನ್ನು ಕಾಯೋಕೆ ಅಂತ ಕ್ರೂರವಾಗಿ ಕಾಣಿಸೋ ಕಾವಲುಗಾರರಿದ್ದಾರೆ. ಅವರಲ್ಲಿ ಕೆಲವರು ಧೂಳ ಮಧ್ಯೆ ಅಂಗಿ ಬಿಚ್ಚಿಕೊಂಡೂ ಇದ್ದಾರೆ.ಆದರೆ ಈ ಕಾವಲುಗಾರರ ಮೈಮೇಲೆ ಒಂಚೂರೂ ಧೂಳಿಲ್ಲ !
ಕಲಾತ್ಮಕ ಸಿನಿಮಾಟೋಗ್ರಾಫರ್ ಒಬ್ಬರಿಗೆ ಆಕ್ಟನ್ ಚಿತ್ರವನ್ನು ಚಿತ್ರಿಸೋಕೆ ಕೊಟ್ಟರೆ ಹೇಗಿರುತ್ತೋ ಹಾಗಿದೆ ಕೆ.ಜಿ.ಎಫ್. ನಾಯಕ ಗರುಡನ ಜನರೊಂದಿಗೆ ಹೋರಾಡುತ್ತಿರ್ತಾನೆ. ಆಗ ಹಿಮ್ಮೇಳದಲ್ಲಿ ಸೂರ್ಯಾಸ್ತದ ದೃಶ್ಯ ! ಕತ್ತಲ ಗುಹೆಗಳಲ್ಲಿ ಪಂಜು, ಕಾದ ರಾಡುಗಳಿಂದ ನಡೆಯುವ ಹೊಡೆದಾಟದಲ್ಲಿ ನಂದಿಹೋಗೋ ಬೆಳಕುಗಳ ನಡುವಿನ ಸ್ಲೋಮೋಷನ್ ಚಿತ್ರಣ, ಗಣಿಗಳಲ್ಲಿನ ಬೈಕ್ ರೇಸು , ಮಾರಿಕಾಂಬಾ ಜಾತ್ರೆಯಲ್ಲಿನ ದೀಪಗಳ ಚಿತ್ರಣ, ದೀಪ, ಪಂಜು ಹೊತ್ತು ನಡೆಯುತ್ತಿರೋ ಜನರನ್ನು ಮೇಲಿಂದ ತೆಗೆವ ಬಂಗಾರದ ಎಳೆಯಂತಹ ಚಿತ್ರಣ ಇವೆಲ್ಲಾ ನೋಡಿಸಿಕೊಂಡು ಹೋಗುತ್ತೆ. ಚಿತ್ರದ ಕ್ಲೈಮಾಕ್ಸಿನಲ್ಲಿ ಬರೋ ಮಾರಿ ಜಾತ್ರೆಯ ಚಿತ್ರಣ ಅನೇಕ ರೀತಿಯಲ್ಲಿ ಮುಖ್ಯವೆನಿಸೋದ್ರಿಂದ ಅದನ್ನು ಸಾಕಷ್ಟು ಅದ್ಧೂರಿಯಾಗೇ ತೋರಿಸಲಾಗಿದೆ.
ಯಾರೋ ಹತ್ತು ಜನನ್ನು ಹೊಡೆದು ಡಾನ್ ಆನ್ನಿಸ್ಕೊಂಡಂಗಲ್ಲ ಅನ್ನೋ ಟಾಂಟಿಗೆ, ನಾನು ಯಾರೋ ಹತ್ತು ಜನನ್ನ ಹೊಡೆದಿದ್ದಲ್ಲ ಕಣೋ, ಹೊಡೆದ ಹತ್ತು ಜನಾನೂ ಡಾನ್ಗಳೇ ಅನ್ನೋ ಉತ್ತರ; ನಿನ್ನ ಹಿಂದೆ ಸಾವಿರ ಜನ ಇದ್ದಾರೆ ಅಂತ ನಿನಗೆ ಧೈರ್ಯ ಇದ್ದರೆ ಒಂದು ಯುದ್ಢ ಗೆಲ್ಲಬಹುದು. ಆದರೆ ನೀ ಮುಂದೆ ಇದೀಯ ಅಂತ ಸಾವಿರ ಜನಕ್ಕೆ ನಿನ್ನ ಹಿಂದೆ ನಿಲ್ಲೋಕೆ ಧೈರ್ಯ ಬಂದರೆ ಪ್ರಪಂಚಾನೇ ಗೆಲ್ಲಬಹುದು ಎನ್ನೋ ಡೈಲಾಗುಗಳು, ಅಲ್ಲಲ್ಲಿ ಒಳಸುಳಿವ ಭಾವನೆಗಳು, ಆಗಾಗ ಬರೋ ಹಾಡ ಎಳೆಗಳೂ ಭರ್ಜರಿಯಾಗೇ ಇದೆ. ಕಾಫಿ ತರೋನ ಕಾಮಿಡಿ ಮಧ್ಯ ಮಧ್ಯ ಸ್ವಲ್ಪ ಬಿಡುವು ಕೊಟ್ರೂ ಚಿತ್ರದ ರೌದ್ರ ರಸಾನುಭವಕ್ಕೆ ಎಲ್ಲೂ ಅಡ್ಡಿಯಾಗೋಲ್ಲ.
ಇವೆಲ್ಲಾ ಬೇಡಪ್ಪ, ಸುಮ್ಮನೇ ಟೈಂಪಾಸಿಗೆ ಹೋಗ್ತೀನಿ ಚಿತ್ರ ನೋಡೋಕೆ. ಹೋಗ್ಬೋದಾ ಅಂದ್ರೆ ಧಾರಾಳವಾಗಿ ! ಫೈಟಿಂಗ್ ಅಂದ ಮಾತ್ರಕ್ಕೆ ವಿಕೃತ ಹಿಂಸೆಯನ್ನೋ, ಲಾಜಿಕ್ಕಿಲ್ಲದ ತೆಲುಗು ಚಿತ್ರಗಳಲ್ಲಿರುವಂತಹ ನಾಯಕ ಒದ್ದರೆ ಜೀಪು ತಿರುಗಿ ನಿಲ್ಲುವಂತಹ ಅಸಂಬದ್ಧಗಳನ್ನೋ ತೋರಿಸಬೇಕು ಅನ್ನೋ ಅನೇಕ ಕನ್ನಡ ನಿರ್ದೇಶಕರ ಭ್ರಮೆಗೆ ಇವರು ಒಳಗಾಗದೇ ಇರೋದು ಕನ್ನಡಿಗರ ಪುಣ್ಯ ಎಂದುಕೊಳ್ಳಬೇಕೇನೋ. ಉದಾಹರಣೆಗೆ ಸುತ್ತಿಗೆ ತೆಗೆದು ಹೊಡೆಯೋ ದೃಶ್ಯವೊಂದು ಬರುತ್ತೆ. ಆದರೆ ಆ ಸುತ್ತಿಗೆ ಎತ್ತಿದ್ದು ಬರುತ್ತೆಯೇ ಹೊರತು ಅದು ತಲೆಗೆ ಬಿದ್ದ ದೃಶ್ಯ ಬರೋಲ್ಲ ! ಹಾಗಾಗಿ ಕುಟುಂಬದವರೊಂದಿಗೂ ಆರಾಮಾಗಿ ನೋಡಬಹುದಾದ ಚಿತ್ರ ಇದು ಅನ್ನಬಹುದೇನೋ. ಯಶ್, ತಮನ್ನಾ, ಶ್ರೀನಿಧಿ ಶೆಟ್ಟಿ, ಅನಂತನಾಗ್, ಮಾಳವಿಕಾ ಅವಿನಾಶ್ ಮುಂತಾದ ತಾರಾಗಣವಿರುವ ಇದರಲ್ಲಿ ನಾಯಕನ ಹೀರೋಯಿಸಂ ತೋರಿಸೋಕೆ ಅಂತ ಅನೇಕ ಕಡೆಗಳಲ್ಲಿ ಎಲ್ಲಾ ಚಿತ್ರಗಳಲ್ಲಿ ಇರುವಂತಹ ಪ್ರಯತ್ನಗಳಿದ್ದರೂ ಚಿತ್ರಕಥೆಯ ಓಘದಿಂದ ಮತ್ತು ಛಾಯಾಗ್ರಾಹಣದ ವೈಭವದಿಂದ ಚಿತ್ರ ಎಲ್ಲೂ ಬೋರ್ ಹೊಡೆಸದೇ ನೋಡಿಸಿಕೊಂಡು ಹೋಗುತ್ತೆ.
ಸರಿಯಾದ ಸಿದ್ಧತೆ ಮಾಡಿಕೊಂಡರೆ ಅಭಾಸವಿಲ್ಲದ ಚಿತ್ರ ಮಾಡಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ.. ಗಲ್ಲಾ ಪೆಟ್ಟಿಗೆ ಗಳಿಕೆ ಏನೇ ಇರಲಿ.. ಕ್ರೇಜ್ ಹುಟ್ಟಿಸಿದ ಒಂದು ಚಿತ್ರ. ನಿರೀಕ್ಷೆಯನ್ನು ಮುಟ್ಟಿ ನಿಲ್ಲುವುದು ಒಂದು ಸಾಧನೆಯೇ ಸರಿ ಅನ್ನೊದು ನನ್ನ ಅಭಿಪ್ರಾಯ. ಚಿತ್ರದ ಆಯಾಮಗಳನ್ನು ಚೆನ್ನಾಗಿ ವಿವರಿಸಿದ್ದೀರಾ
ReplyDeletemy take on this movie
ReplyDeletehttps://moved-movies.blogspot.com/2018/12/2018.html
Super Srikanth anna. Yash n neil virtually sikkid kushi aytu nim post nodi. Nange rathavara movie ge heege ticket sigde hodaaginda online book madod abyasa madkondideeni
ReplyDelete