ಇತ್ತೀಚೆಗೆ ನನ್ನ ಗೆಳೆಯರೊಬ್ಬರಿಂದ "Is it you in the Video?" ಅಂತ ಫೇಸ್ಬುಕ್ ಮೆಸೆಂಜರಿನಲ್ಲಿ ಮೆಸೇಜ್ ಬಂದಿತ್ತು. ನಾನ್ಯಾವ ವೀಡೀಯೋನೂ ಹಾಕಿಲ್ಲ ಅನ್ನೋದು ನನಗೆ ಗೊತ್ತಿದ್ದರಿಂದ ಆ ಮೆಸೇಜನ್ನು ತೆರೆಯಲಿಲ್ಲ. ಎರಡ್ಮೂರು ದಿನದ ನಂತರ ಅವರು ಫೋನ್ ಮಾಡಿ ನನ್ನ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ, ಅದರಿಂದ ಯಾವ ಮೆಸೇಜ್ ಬಂದರೂ ಉತ್ತರಿಸಬೇಡಿ ಅಂತಂದ್ರು. ಅವರಿಗೂ ಇದೇ ತರದ ಮೆಸೇಜ್ ಬಂದು ಅದನ್ನ ಓಪನ್ ಮಾಡಿದ್ರಂತೆ. ಅದಾಗಿ ಕೆಲವೇ ದಿನಗಳಲ್ಲಿ ಮತ್ತೆ ಎರಡ್ಮೂರು ಗೆಳೆಯರಿಂದ ಇದೇ ತರದ ಮೆಸೇಜ್! ಕೆಲದಿನಗಳಲ್ಲೇ ಅವರೂ ತಮ್ಮ ಅಕೌಂಟ್ ಹ್ಯಾಕಾಗಿದೆ ಅಂತ ಫೇಸ್ಬುಕ್ಕಲ್ಲೇ ಹಾಕಿದ್ರು. ಇದ್ಯಾಕೆ ಹೀಗಾಗತ್ತೆ ಅಂತೀರಾ ? ನಾವು ಅಂತರ್ಜಾಲದಲ್ಲಿರೋ ಎಲ್ಲದನ್ನೂ ಕಣ್ಣು ಮುಚ್ಚಿಕೊಂಡು ನಂಬೋದು ಅಥವಾ ಕಂಪ್ಯೂಟರ್/ಡಿಜಿಟಲ್ ಅನಕ್ಷರಸ್ಥರಾಗಿರೋದು ! ಏನಿದು ಕಂಪ್ಯೂಟರ್/ಡಿಜಿಟಲ್ ಅನಕ್ಷರತೆ ಅಂತೀರಾ ? ಅಂದ ಹಾಗೆ ಕಂಪ್ಯೂಟರ್ ಅನಕ್ಷರತೆಗೂ ಡಿಜಿಟಲ್ ಅನಕ್ಷರತೆಗೂ ಸುಮಾರು ವ್ಯತ್ಯಾಸಗಳಿವೆ. ಈ ಕಂಪ್ಯೂಟರ್ ಅನಕ್ಷರತೆ ಅಂದರೆ ಏನೆಂಬುದನ್ನು ನೋಡೋಣ
Welcome to Prashantavanam
Friday, December 17, 2021
ಕಂಪ್ಯೂಟರ್ ಸಾಕ್ಷರತಾ ದಿನ
ಇಂದು ಕಂಪ್ಯೂಟರ್ ಅಥವಾ ಗಣಕಯಂತ್ರ ಅನ್ನೋದು ನಮ್ಮೆಲ್ಲರ ದೈನಂದಿನ ಬದುಕಿನ, ಕೆಲಸದ ಭಾಗವೇ ಆಗೋಗಿದೆ. ರೈಲ್ವೇ ಸ್ಟೇಷನ್ನಿನ ಬುಕಿಂಗ್ ಕೌಂಟರಿನಿಂದ , ವರ್ಕ್ ಫ್ರಂ ಹೋಂ ಎಂದು ಮನೆಯಲ್ಲೇ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳ ವರೆಗೆ, ಪತ್ರಿಕೆಗಳ ಡಿಟಿಪಿ ಡಿಸೈನಿಂಗ್ ಕೆಲಸಗಳಿಂದ ಮದುವೆ ಪತ್ರಿಕೆಗಳ ಡಿಸೈನಿಂಗ್ವರೆಗೆ, ಸಮೀಪದ ಸಣ್ಣ ಮಾಲಿನ ಬಿಲ್ಲಿಂಗ್ ಕೌಂಟರಿನಿಂದ, ಕ್ಷಣದಲ್ಲೇ ಕೋಟಿಗಟ್ಟಲೇ ಕೈ ಬದಲಾಗೋ ಶೇರು ಮಾರುಕಟ್ಟೆಯ ವ್ಯವಹಾರಗಳವರೆಗೆ ಕಂಪ್ಯೂಟರ್ಗಳ ಅಗತ್ಯತೆಯಿದೆ. ಇದೆಲ್ಲಾ ದೂರದ ವಿಷಯ ಅಂದ್ರಾ ? ನಮ್ಮ ಮನೆಗೆ ಬಂದು ಕರೆಂಟ್ ಮೀಟರಿನ ಅಂಕಿಗಳನ್ನು ನೋಡಿ ಕೊಡೋ ಬಿಲ್ಲಿನ ಹಿಂದೂ ಕಂಪ್ಯೂಟರ್ ಇದೆ . ಹಾಗಾಗಿ ಈ ಕಂಪ್ಯೂಟರುಗಳ ಬಗ್ಗೆ ನಾವು ಎಷ್ಟು ತಿಳಿದರೂ ಅಷ್ಟು ಒಳ್ಳೆಯದು.
ಏನಿದು ಕಂಪ್ಯೂಟರ್ ಸಾಕ್ಷರತೆ ?
ಕಂಪ್ಯೂಟರನ್ನು ಮತ್ತು ಸಂಬಂಧಿತ ತಂತ್ರಜ್ಞಾನಗಳ ಬಳಕೆಯಲ್ಲಿ ಪರಿಣತಿ ಹೊಂದುವುದನ್ನೇ ಕಂಪ್ಯೂಟರ್ ಸಾಕ್ಷರತೆ ಎನ್ನುತ್ತಾರೆ. ಇದು ಕಂಪ್ಯೂಟರನ್ನು ಸರಿಯಾಗಿ ಆನ್ , ಆಫ್ ಮಾಡೋದು ಹೇಗೆ ಎಂಬ ಮೂಲಭೂತ ಮಟ್ಟದ ತಿಳುವಳಿಕೆಯಾಗಿರಬಹುದು. ಕಂಪ್ಯೂಟರಿನಲ್ಲಿರುವ ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ನುಡಿ, ಬರಹ ಮುಂತಾದ ತಂತ್ರಾಂಶಗಳ ಬಳಕೆಯ ನಂತರ ಮಟ್ಟವಿರಬಹುದು. ಕಂಪ್ಯೂಟರ್ ನಮಗೆ ಬೇಕಾದ ಕೆಲಸ ಮಾಡುವಂತೆ ಕೋಡ್ ಮಾಡೋದು, ಕಂಪ್ಯೂಟರ್ ಹಾಳಾದಾಗ ಅದನ್ನು ರಿಪೇರಿ ಮಾಡುವುದು ಮುಂತಾದ ಉನ್ನತ ಮಟ್ಟದ ಕೌಶಲ್ಯವೂ ಇರಬಹುದು. ಇವೆಲ್ಲವೂ ಕಂಪ್ಯೂಟರ್ ಸಾಕ್ಷರತೆಯೇ. ಕಂಪ್ಯೂಟರಿಗೆ ಸಂಬಂಧಿಸಿದ ಯಾವುದೋ ಸಮಸ್ಯೆಯಿದೆ ಎಂಬ ಮಾತುಕತೆ ನಡೆಯುತ್ತಿದ್ದಾಗ ನಿಮಗೆ ಅದನ್ನು ಸರಿ ಮಾಡಲು ಬರದಿದ್ದರೂ ಅದೇನು ಎಂದು ಅರ್ಥ ಮಾಡಿಕೊಳ್ಳಲಾದರೂ ಕಂಪ್ಯೂಟರ್ ಸಾಕ್ಷರತೆ ಅಗತ್ಯ. ಉದಾಹರಣೆಗೆ ನೀವು ಸರ್ಕಾರಿ ಕಛೇರಿಗೋ ಬ್ಯಾಂಕಿಗೋ ಹೋದಾಗ ಅಲ್ಲಿ ಸರ್ವರ್ ಡೌನಾಗಿದೆ ಅಂದ್ರೆ ಏನಾಗಿದೆ ಅಂತ ನಿಮಗೆ ಅರ್ಥವಾಗಬೇಕು. ಇಲ್ಲಾಂದ್ರೆ ಈ ದರಿದ್ರ ಬ್ಯಾಂಕು, ಸರ್ಕಾರದವ್ರು ನಮ್ಮನ್ನ ಇಡೀ ದಿನ ಅಲೆಸೂ, ಕೆಲಸ ಮಾಡಿಕೊಡಲಿಲ್ಲ ಅಂತ ಶಾಪ ಹಾಕುತ್ತಾ ಕೂರಬೇಕಾಗುತ್ತೆ.
ಕಂಪ್ಯೂಟರ್ ಸಾಕ್ಷರತೆಗೊಂದು ದಿನ:
ಡಿಸೆಂಬರ್ ೨ನೇ ತಾರೀಖಿನಂದು ಕಂಪ್ಯೂಟರ್ ಸಾಕ್ಷರತಾ ದಿನ ಎಂಬ ದಿನ ಹೆಚ್ಚಿನ ಸಂಭ್ರಮವಿಲ್ಲದೇ, ಸುದ್ದಿಯಿಲ್ಲದೇ ಆಚರಿಸಲ್ಪಟ್ಟಿತ್ತು !
ಕಂಪ್ಯೂಟರ್ ಸಾಕ್ಷರತೆಗೂ ಒಂದು ದಿನ ಎಂದು ಬಂದಿದ್ದು ಹೇಗೆ ?
Computer Literacy(ಕಂಪ್ಯೂಟರ್ ಸಾಕ್ಷರತೆ) ಎಂಬ ಪದವನ್ನು ಆಡ್ರ್ಯೂ ಮೊಲ್ನಾರ್ ಎಂಬ ಅಮೇರಿಕಾದ ಗಣಕಶಾಸ್ತ್ರಜ್ಞ 1978ರಲ್ಲಿ ಹುಟ್ಟುಹಾಕಿದರು. ಅವರು ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಪರಿಷತ್ತಿನ ನಿರ್ದೇಶಕರಾಗಿದ್ದರು. ತದನಂತರದ ಹಲವು ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ಮತ್ತು ಪಠ್ಯಗಳಲ್ಲಿ ಈ ಪದ ಬಳಕೆಯಾಗುತ್ತಾ ಹೋಯಿತು. ಭಾರತದಲ್ಲಿ ೧೯೫೫ರಲ್ಲೇ ಕೊಲ್ಕತ್ತಾದ ರಾಷ್ಟ್ರೀಯ ಅಂಕಿಅಂಶ ಸಂಸ್ಥೆಯಲ್ಲಿ ಮೊದಲ ಕಂಪ್ಯೂಟರ್ ಬಂದಿದ್ದರೂ ಅದು ಜನಸಾಮಾನ್ಯರ ಅಥವಾ ಸಣ್ಣ ಸಣ್ಣ ಕಂಪೆನಿಗಳ ಮಟ್ಟಿಗೆ ಬಳಕೆಯಲ್ಲಿರಲಿಲ್ಲ. ೨೦೦೦ರ ಸುಮಾರಿಗೂ ಜನ ಸಾಮಾನ್ಯರಲ್ಲಿ ಕಂಪ್ಯೂಟರ್ ಬಳಕೆಯ ಬಗ್ಗೆಯಿದ್ದ ಮಾಹಿತಿ ಮತ್ತು ಜ್ಞಾನ ಕಮ್ಮಿಯೇ. ಹಾಗಾಗಿ ೨೦೦೧ರಲ್ಲಿ ಕಂಪ್ಯೂಟರ್ ಶಿಕ್ಷಣ ಕೊಡುವ NIIT ಸಂಸ್ಥೆ ಕಂಪ್ಯೂಟರ್ ಸಾಕ್ಷರತಾ ದಿನವನ್ನು ಪ್ರತೀವರ್ಷ ಡಿಸೆಂಬರ್ ೨ರಂದು ಆಚರಿಸಲು ಪ್ರಾರಂಭಿಸಿತು.
ಈಗಲೂ ನಮಗೆ ಕಂಪ್ಯೂಟರ್ ಸಾಕ್ಷರತೆಯ ಅವಶ್ಯಕತೆ ಇದೆಯೇ ?
ಅನೇಕ ವರದಿಗಳ ಪ್ರಕಾರ ಭಾರತದಲ್ಲಿನ ಕಂಪ್ಯೂಟರ್ ಸಾಕ್ಷರತೆಯ ಪ್ರಮಾಣ ಶೇ ೩೮ಕ್ಕಿಂತ ಕೆಳಗಿದೆ. ಲಕ್ಷದ್ವೀಪ, ಚಂಡೀಗಡ, ಗೋವಾ ರಾಜ್ಯಗಳಲ್ಲಿ ಮಾತ್ರ ಈ ಮಟ್ಟ ಸಮಾಧಾನಕರವಾಗಿದೆ. ಶೇಕಡಾ ನೂರರಷ್ಟು ಸಾಕ್ಷರತೆಯಿರುವ ಕೇರಳ ರಾಜ್ಯವನ್ನೂ ಸೇರಿಸಿ ಭಾರತದ ಬೇರೆಲ್ಲಾ ರಾಜ್ಯಗಳೂ ಈ ವಿಷಯದಲ್ಲಿ ಸಾಕಷ್ಟು ಹಿಂದುಳಿದಿವೆ ಎಂದು ವರದಿಗಳು ತಿಳಿಸುತ್ತವೆ.
ನಾವು ಕಂಪ್ಯೂಟರ್ ಸಾಕ್ಷರರಾಗೋದು ಹೇಗೆ ?
ಕಂಪ್ಯೂಟರ್ ಸಾಕ್ಷರರಾಗಲು ಯಾವುದೋ ಕಂಪ್ಯೂಟರ್ ಸೆಂಟರಿಗೆ ಹೋಗಿ ದುಡ್ಡು ಕೊಟ್ಟು ಕೋರ್ಸಿಗೆ ಸೇರಬೇಕೆಂದಿಲ್ಲ. ಇಂತಿಷ್ಟು ವಯಸ್ಸಾದ ಮೇಲೆ ಇದನ್ನು ಕಲಿಯೋದು ಅಸಾಧ್ಯವೆಂದೂ ಇಲ್ಲ. ಎಲ್ಲರ ಬಳಿ ಮೊಬೈಲ್ ಇದ್ದೇ ಇದೆ. ಮೊಬೈಲಿನಲ್ಲಿ ಯೂಟ್ಯೂಬು, ಫೇಸ್ಬುಕ್ಕುಗಳನ್ನು ಬಳಸೋದೂ ಗೊತ್ತಿದೆ. ಇವುಗಳಲ್ಲಿ ಕಂಪ್ಯೂಟರಿನ ಬಗ್ಗೆ, ಇದರಲ್ಲಿನ ತಂತ್ರಾಂಶಗಳ ಬಗ್ಗೆ ಸರಳಾತಿ ಸರಳವಾಗಿ ತಿಳಿಸೋ ಹಲವು ಚಾನಲ್ಲುಗಳಿವೆ.
ಮೊಬೈಲಿಲ್ಲದಿದ್ದರೆ ಹೇಗೆ ಕಲಿಯೋದು ?
ಈಗಿನ ಶಾಲಾ ಕಾಲೇಜುಗಳ ಪಠ್ಯದಲ್ಲಿ ಕಂಪ್ಯೂಟರ್ನ ಬಗ್ಗೆ ಸರಳವಾಗಿ ಕಲಿಸಲಾಗುತ್ತಿದೆ. ನಿಮ್ಮ ಮಕ್ಕಳು ಅಥವಾ ನೆರೆಹೊರೆಯ ಮಕ್ಕಳು ಈ ಬಗ್ಗೆ ಓದುತ್ತಿದ್ದರೆ ಅವರ ಪುಸ್ತಕ ತೆಗೆದುಕೊಂಡು ಓದಿ ನೋಡಿ. ಈ ಪುಸ್ತಕಗಳಲ್ಲಿ ಅತ್ಯಂತ ಸರಳವಾಗಿ , ಮಕ್ಕಳಿಗೂ ಅರ್ಥವಾಗುವಂತೆ ಕಂಪ್ಯೂಟರಿನ ಬಗ್ಗೆ, ಅದರಲ್ಲಿನ ತಂತ್ರಾಂಶಗಳ ಬಗ್ಗೆ ಕೊಟ್ಟಿರುತ್ತಾರೆ. ಅದು ಅರ್ಥವಾಗದಿದ್ದರೆ ಅವರಿಗೇ ಕೇಳಿ. ಅವರೇ ಅದನ್ನು ಪಠ್ಯದಲ್ಲಿರೋದಕ್ಕಿಂತ ಸರಳವಾಗಿ ಹೇಳಿಕೊಟ್ಟಾರು. ಯಾಕೆಂದರೆ ತಂತ್ರಜ್ಞಾನ ಅನ್ನೋದು ವಯಸ್ಕರಿಗಿಂತ ಮಕ್ಕಳನ್ನ ಬೇಗ ಆಕರ್ಷಿಸುತ್ತೆ. ಮಕ್ಕಳ ಬಳಿ ಕಲಿಯೋದ್ರಲ್ಲಿ ತಪ್ಪೇನಿದೆ ? ಹಾಗಾಗಿ ಈ ನಿಟ್ಟಿನಲ್ಲಿ ಮುನ್ನಡಿಯಿಡೋಣ ಮತ್ತು ನಾವೆಲ್ಲರೂ ಕಂಪ್ಯೂಟರ್ ಸಾಕ್ಷರರಾಗೋಣ.
Subscribe to:
Post Comments (Atom)
No comments:
Post a Comment