Our Group on the way to KP Trek |
ನಾವೂ ನಮ್ಮ ಟ್ರೆಕ್ಕಿಂಗು:
ಮದ್ವೆಯಾದ ಮೇಲೆ ಹೊರಟ ಟ್ರಿಪ್ಪುಗಳಲ್ಲಿ ಕೆಲವಾದರೂ ದೇವಸ್ಥಾನದ ಫೋಟೋಗಳಿರ್ತಿದ್ದನ್ನ ನೋಡಿದ ಗೆಳೆಯರು ನಮಗೆ ತೀರ್ಥಯಾತ್ರೆ ಅಂತ ಅಣಕಿಸ್ತಿದ್ರು. ಚಂಪಕಧಾಮ, ಮೇರಿತಿ ಬೆಟ್ಟ, ಸಾವನದುರ್ಗ, ಶಿವಗಂಗೆಗಳಿಗೆ ಟ್ರೆಕ್ಕಿಂಗಿಗೆ ಹೋಗಿದ್ರೂ ಅಲ್ಲಲ್ಲಿ ಕಂಡ ನಂದಿಯೋ, ಧ್ವಜವೋ, ಕಲ್ಲಮಂಟಪವೋ ಕಂಡ ಗೆಳೆಯರು ಅದೂ ತೀರ್ಥಯಾತ್ರೆ ಅಂತ ಅಂದ್ಕೋತಿದ್ರು ! ಯಾರೋ ಏನೋ ಅಂದ್ಕೋತಾರೆ ಅನ್ನೋದಕ್ಕಿಂತಲೂ ನಡೆಯೋಕೆ ಎಂದೂ ಬೇಸರಿಸದ ಅರ್ಧಾಂಗಿಯನ್ನ ಇನ್ನೂ ಉತ್ತಮ ಜಾಗಗಳಿಗೆ ಕರ್ಕೊಂಡು ಹೋಗ್ಬೇಕು, ಸುಮ್ನೆ ಮೂರ್ನಾಲ್ಕು ಕಿ.ಮೀಗಳ ಚಾರಣಕ್ಕೆ ಟ್ರೆಕ್ಕಿಂಗು ಅನ್ನದೇ ಸರಿಯಾದ ಟ್ರೆಕ್ಕಿಂಗುಗಳಿಗೆ ಕರ್ಕೊಂಡೋಗ್ಬೇಕು ಈ ಹೊಸ ವರ್ಷದಲ್ಲಾದರೂ ಅನ್ನೋ ಆಸೆ ಉದಯಿಸ್ತಿತ್ತು. ಅದಕ್ಕೆ ನೆರವಾಗಿದ್ದು ೩ಕೆ ಬಳಗದಿಂದ ಪರಿಚಯವಾದ ಪ್ರಮೋದ್ ಶ್ರೀನಿವಾಸ್. ಬಂಡಾಜೆ, ಅರ್ಬಿ ಜಲಪಾತದ ಚಾರಣಕ್ಕೆ ಬರ್ತೀಯ ಅಂತ ಮೊದಲ ಬಾರಿ ಚಾರಣವೊಂದಕ್ಕೆ ಅವರು ಕರೆದಾಗ ಹೋಗಲಾಗದೇ ಇದ್ರೂ ಈ ಸಲ ಕರೆದಾಗ ಹೆಚ್ಚೇನೂ ಯೋಚಿಸದೇ ಹೂಂ ಅಂದಿದ್ದೆ. ಆಮೇಲೆ ಹೋಗಕ್ಕಾಗತ್ತೆ, ಆಗಲ್ಲ ಅಂತ ಹಲವು ಪರಿಸ್ಥಿತಿಗಳು ನನ್ನ ನಿರ್ಧಾರವನ್ನು ತೂಗುಯ್ಯಾಲೆಯಲ್ಲಿಟ್ರೂ ಅವರು ಕರೆದ ಕುಮಾರ ಪರ್ವತ ಚಾರಣಕ್ಕೆ ಹೋಗಿ ಬರೋಕಾಗಿದ್ದು ನನ್ನ ಪುಣ್ಯ ಅನಿಸುತ್ತೆ.
ಏನಿದು ಕುಮಾರ ಪರ್ವತ, ಎಲ್ಲಿದೆ ಇದು ಅಂದ್ರಾ ?
ದಕ್ಷಿಣ ಕನ್ನಡದ ಸುಳ್ಯದಲ್ಲಿರೋ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಡಗಿನ ಸೋಮವಾರಪೇಟೆಗಳ ನಡುವೆ ಹಾಸಿಹೋಗಿರೋ ಬೆಟ್ಟವೇ ಕುಮಾರ ಪರ್ವತ. ಕರ್ನಾಟಕದಲ್ಲಿನ ಕಷ್ಟದ ಟ್ರೆಕ್ಕಿಂಗುಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಡೋ ಈ ಕುಮಾರ ಪರ್ವತ ಅಥವಾ KP ಯ ಎತ್ತರ, ನಡೆಯಬೇಕಾದ ದೂರಗಳ ಬಗ್ಗೆ ಹಲವು ಊಹಾ ಪೋಹಗಳಿವೆ. ಕೊಡಗಿನ ಸೋಮವಾರಪೇಟೆಯ ಕಡೆಯಿಂದ ಹತ್ತಿ ಪರ್ವತದ ತುದಿ ತಲುಪಿ ಗಿರಿಗದ್ದೆ ಭಟ್ಟರ ಮನೆ ಕಡೆಯಿಂದ ಇಳಿಯೋದು ಒಂದು ಮಾರ್ಗ. ಕುಕ್ಕೆ ಸುಬ್ರಹ್ಮಣ್ಯದಿಂದ ಶುರು ಮಾಡಿ, ಗಿರಿ ಗದ್ದೆ ಭಟ್ಟರ ಮನೆ/ಕ್ಯಾಂಪಿನ ಮೂಲಕ ಸಾಗಿ ಮಂಟಪ, ಶೇಷ ಪರ್ವತಗಳ ಮೂಲಕ ಸಾಗಿ ಬೆಟ್ಟದ ಮೇಲಕ್ಕೆ ಹತ್ತಿ ಅದೇ ದಾರಿಯಲ್ಲಿ ಇಳಿಯೋದು ಮತ್ತೊಂದು ಹಾದಿ. ನಾವು ಐದಾರು ವರ್ಷಗಳ ಹಿಂದೆ ಹೋದಾಗ ಮೊದಲ ಮಾರ್ಗದಲ್ಲಿ ಮಲ್ಲಳ್ಳಿ ಫಾಲ್ಸಿಗೆ ಹೋಗಿ, ಅಲ್ಲಿಂದ ಪುಷ್ಪಗಿರಿ ಮಲ್ಲಿಕಾರ್ಜುನ ದೇವಸ್ಥಾನ, ಚೆಕ್ ಪೋಸ್ಟ್ ದಾಟಿ ಮೇಲೆ ಹತ್ತಿ ಬೆಟ್ಟದ ಮೇಲಿರುವ ಶಾಂತಮಲ್ಲಿಕಾರ್ಜುನ ದೇಗುಲದ ಹತ್ತಿರ (ಈಗಿರೋ ಧ್ವಜ ಸ್ತಂಭ ಆಗಿರಲಿಲ್ಲ) ಟಂಟ್ ಹಾಕಿ ರಾತ್ರಿ ತಂಗಿದ್ವಿ. ಈಗ ಬೆಟ್ಟದ ಮೇಲೆ ಟೆಂಟ್ ಹಾಕಲು ಬಿಡದ ಕಾರಣ ಭಟ್ಟರ ಮನೆ ಬಳಿಯಿರುವ ಅರಣ್ಯ ಇಲಾಖೆಯ ಕಛೇರಿ ಬಳಿ ತಂಗಬೇಕಷ್ಟೆ. ಇಲ್ಲಿಗೆ ಟ್ರೆಕ್ಕಿಂಗಿಗೆ ಮತ್ತು ಕ್ಯಾಂಪಿಂಗಿಗೆ ಬರೋ ಹೆಚ್ಚಿನ ಜನರು ಅರಣ್ಯ ಇಲಾಖೆಯ ಬಳಿಯಿರುವ ಸಣ್ಣ ಕೆರೆಯ ಬಳಿ ಟೆಂಟ್ ಹಾಕಿ ತಮ್ಮ ಬ್ಯಾಗುಗಳನ್ನು ಅಲ್ಲೇ ಇಟ್ಟು ಬೆಟ್ಟ ಹತ್ತುತ್ತಾರೆ. ವಾಪಾಸ್ ಬರುವಾಗ ತಮ್ಮ ಟೆಂಟಲ್ಲಿರೋ ಬ್ಯಾಗುಗಳನ್ನು ತೆಗೆದುಕೊಂಡು ವಾಪಾಸ್ ಹೋಗುತ್ತಾರೆ. ಬೆಳಗ್ಗೆ ಮುಂಚೆ ಶುರು ಮಾರಿ ಬೆಟ್ಟ ಹತ್ತಿ ಅದೇ ದಿನ ಸಂಜೆಯ ಹೊತ್ತಿಗೆ ವಾಪಾಸ್ ಹೋಗುವವರೂ ಉಂಟು. ಕುಕ್ಕೆಯ ಕಡೆಯಿಂದ ಶುರು ಮಾಡೋದಾದರೆ ಸಾಗರ ಮಟ್ಟದಿಂದ ೭೭ ಮೀಟರ್ ಎತ್ತರಕ್ಕೆ ಶುರುವಾಗೋ ನಮ್ಮ ಚಾರಣ ತುದಿ ಮುಟ್ಟುವ ಹೊತ್ತಿಗೆ ೧೭೫೦ ಮೀಟರ್ ಮುಟ್ಟಿರುತ್ತದೆ ! ಸುಮಾರು ಹನ್ನೊಂದು ಕಿ.ಮೀ ಇರುವ ಈ ಹಾದಿಯಲ್ಲಿ ಮೊದಲೈದು ಕಿ.ಮೀ ಸಾಗಿದರೆ ಸಿಗೋದು ಭಟ್ಟರ ಮನೆ. ಅಲ್ಲಿಂದ ಐನೂರು ಮೀಟರಿಗೆ ಫಾರೆಸ್ಟ್ ಚೆಕ್ಪೋಸ್ಟು. ಭಟ್ಟರ ಮನೆಯಿಂದ ಸುಮಾರು ಆರು ಕಿ.ಮೀ ದೂರಕ್ಕೆ ಸಿಗೋದೇ ಬೆಟ್ಟದ ತುದಿಯ ವೀಕ್ಷಣಾ ತಾಣಗಳು. ಸೋಮವಾರ ಪೇಟೆಯ ಕಡೆಯಿಂದ ಹೋಗೋದಾದ್ರೆ ಸುಮಾರು ೮.೫ , ಒಂಭತ್ತು ಕಿ.ಮೀಗಳಿಗೆ ಬೆಟ್ಟದ ತುದಿ ತಲುಪಬಹುದು. ಆದರೆ ಆ ದಾರಿ ಸ್ವಲ್ಪ ಕಡಿದಾಗಿದೆ. ನಾವು ಹಿಂದಿನ ಸಲ ಆ ದಾರಿಯಲ್ಲಿ ಬಂದ ಕಥೆಯನ್ನ ನನ್ನ ಹಳೆಯ ಪೋಸ್ಟಲ್ಲಿ ನೋಡಬಹುದು
ಹೋಗಿದ್ದೇಗೆ?
ಟ್ರಿಪ್ಪಿನ ದಿನ ನಾವು ಮೆಜೆಸ್ಟಿಕ್ಕಿಗೆ ಬಸ್ ಹತ್ತೋಕೆ ಬರೋವರೆಗೂ ಹದಿನಾರು ಜನರ ನಮ್ಮ ಗುಂಪಲ್ಲಿ ನಂಗೆ ಪರಿಚಯವಿದ್ದ ಮೂರನೆಯ ವ್ಯಕ್ತಿ ಅಂದ್ರೆ ಪ್ರಮೋದ್ ಅಷ್ಟೆ. ನಂತರ ಪರಿಚಯದ ವಿನಯ್ ಬೆಳೆಯೂರು ಸಿಕ್ಕಿದ್ರು. ನೀವೇನಾ ಟ್ರಿಪ್ಪಿಗೆ ಬರ್ತೀರೋ ವಿನಯ್ ಅನ್ನೋ ಹೊತ್ತಿಗೆ ಅದು ನಾನಲ್ಲ, ಬೇರೆ ವಿನಯ್ ಅಂತ ಅವರು ವಿನಯ್ ರಾವ್ ಅವರನ್ನು, ಮತ್ತೊಬ್ಬ ವಿನಯ್ ಅನ್ನೂ ಪರಿಚಯಿಸಿದ್ರು. ಅಷ್ಟರಲ್ಲೇ ತೇಜಸ್ವಿ, ಲೋಹಿತ್, ರವಿಶಂಕರ್, ಸುಧೀರ್ ಸಾಗರ್, ಸುಧಾಕ್ಕ ಎಂಟ್ರಿ ಕೊಟ್ರು. ದೆಹಲಿಯ ಆರತಿ ಮತ್ತು ವಿಜಯಲಕ್ಷ್ಮಿ ಅವರನ್ನು ಕಂಡಾಗ ಅಕ್ಷತಾಗೆ ಸ್ವಲ್ಪ ಖುಷಿ ಆಯ್ತು . ನಂತರ ಪರಿಚಯವಾಗಿದ್ದು ಸುಧಾಮ ಮತ್ತು ಮನಮೋಹನ್, ವಿನಯ್. ಸುಮಾರು ಟ್ರೆಕ್ಕುಗಳಿಗೆ ಹೋದ ಪ್ರಮೋದಣ್ಣನ ಗ್ಯಾಂಗಿನ ಕತೆ ಕೇಳ್ತಾ ನಾವು ಒಂಭತ್ತೂಮುಕ್ಕಾಲಿಗೆ ಬರಬೇಕಾದ ನಮ್ಮ ಬಸ್ಸಿಗೆ ಪ್ಲಾಟ್ ಫಾರಂ ೨ ಎ/ ೩ರಲ್ಲಿ ಕಾಯ್ತಾ ಇದ್ವಿ. ಕೂರೋಕೂ ಜಾಗವಿಲ್ಲದ ಬಸ್ಟಾಂಡಲ್ಲಿ ಬಸ್ಸು ಎಷ್ಟೊತ್ತಿಗೆ ಬರತ್ತೆ ಅನ್ನೋ ನಿರೀಕ್ಷೆಯೂ ಇಲ್ಲದೇ ಕಾಯ್ತಾ ಇದ್ರೆ ನಮಗೆ ಪುಕ್ಸಟ್ಟೆ ಮನೋರಂಜನೆ ಒದಗಿಸೋಕೆ ಉತ್ತರದ ಕಾಲೇಜು ಗ್ಯಾಂಗೊಂದು ರೆಡಿಯಾದಂಗಿತ್ತು ! ನಾವು ನಿಂತು ನೋಡುವಾಗಲೇ ಒಬ್ಬಳು ಹುಡುಗಿಯನ್ನ ನಾಲ್ಕೈದು ಜನ ಹುಡುಗ್ರು ಕರ್ಕೊಂಡು ಬಂದು ಕೂರಿಸಿದ್ರು. ಜೊತೆಗೆ ಅಯ್ಯೋ ಅನ್ನೋ ಮತ್ತೊಬ್ಬ ಹುಡುಗಿ. ಏನೋ ಆಗಿರ್ಬೇಕು ಅಂತ ಪಕ್ಕದ ಬೆಂಚ ಮೇಲಿದ್ದ ಜನ ಜಾಗ ಬಿಟ್ರು. ಬಸ್ಟಾಂಡಿಗೆ ಬರುವಾಗ ಎಲ್ಲೋ ಬಿದ್ದಿದ್ಲಂತೆ. ಬಿದ್ದ ರಭಸಕ್ಕೆ ಕಾಲು ಸ್ವಲ್ಪ ತರಚಿತ್ತಷ್ಟೆ. ಆ ತರಚಿಗೆ ಉಪಚರಿಸ್ತಿದ್ದ ಜನರನ್ನ ನೋಡಿ ಏನಪ್ಪಾ ಇದು ಅನ್ನಿಸ್ತು ಒಮ್ಮೆ. ಗಾಯವನ್ನು ಹತ್ತಿಯಿಂದ ಒರೆಸುವವ ಒಬ್ಬ, ಬ್ಯಾಗಲ್ಲಿ ಟಿಂಚರ್ರೋ ಇನ್ನೇನೋ ಇದ್ಯಾ ಅಂತ ಕೇಳ್ತಾ ಹುಡುಕುವವ ಮತ್ತೊಬ್ಬ,ಗಾಯಕ್ಕೆ ಬ್ಯಾಂಡೇಡ್ ಅಂಟಿಸುವವ ಮಗದೊಬ್ಬ, ಏನೂ ಆಗಿಲ್ಲ ಅಂತ ಸಮಾಧಾನ ಮಾಡುವವ ಇನ್ನೊಬ್ಬ. ಇವ್ರಿಷ್ಟು ಜನ ಸಾಲೋಲ್ಲ ಅಂತ ಇವಳ ಜೊತೆಗೆ ಮುಂಚೆ ಇದ್ದು, ಈಗೆಲ್ಲೋ ಮರೆಯಾಗಿದ್ದ ಹುಡುಗಿ ಮತ್ತೊಂದಿಷ್ಟು ಜನರನ್ನ ಕರ್ಕೊಂಡು ಬಂದ್ಳು. ಅವ್ರು ಏನಾಯ್ತು ಅಂತ ಕೇಳೋದ ನೋಡಿದ ಬಸ್ಸು ಕಾಯ್ತಿದ್ದ ಎಲ್ಲರೂ ಇವರನ್ನೇ ನೋಡೋಕೆ ಹತ್ತಿದ್ರು. ಏನು ರಾಜಮರ್ಯಾದೆಯಪ್ಪಾ ಇವ್ಳಿಗೆ , ಇಂಥಾ ಗೆಳೆಯರು ಸಿಕ್ಕೋಕೆ ಪುಣ್ಯ ಮಾಡಿರ್ಬೇಕು ಅಂತ ಒಂದ್ಕಡೆ ಅನ್ನಿಸ್ತಿದ್ರೆ ಆ ಹುಡುಗರು ಆಡೋ ರೀತಿ ನೋಡಿ ನಗು ಬರ್ತಿತ್ತು. ಆದ್ರೆ ಒಂದು ಲೀಟರ್ ನೀರನ್ನ ಬರೀ ಕೈ ತೊಳೆಯೋಕೆ ಅಂತ ಉಪಯೋಗಿಸ್ಕೊಂಡು ಉಳಿದ ನೀರನ್ನು, ಬಾಟಲಿಯನ್ನು ಅಲ್ಲೇ ಇದ್ದ ಡಸ್ಟ್ ಬಿನ್ನಿನ ಬಳಿ ಎಸೆದು ಹೋದ ಅವರ ಧೋರಣೆ ಕಂಡು ಉರಿದೂ ಹೋಯ್ತು ! ಬರಬೇಕಾದ ಬಸ್ಸು ಮತ್ತಷ್ಟು ಸತಾಯಿಸಿ ಒಂದು ತಾಸಿಗಿಂತಲೂ ಹೆಚ್ಚು ಲೇಟಾಗಿ ಬಂದಿದ್ರಿಂದ ನಮ್ಮಗಳ ಪರಸ್ಪರ ಪರಿಚಯಕ್ಕೆ ಅನುಕೂಲವಾಗಿತ್ತು. ಹೊರಟ ಬಸ್ಸಿನಲ್ಲಿ ವಾಣಿ ಮತ್ತು ಲಕ್ಷ್ಮಿಯವರನ್ನು ಹತ್ತಿಸಿಕೊಂಡು ಬೆಂಗಳೂರು ದಾಟೋ ಹೊತ್ತಿಗೆ ರಾತ್ರಿ ಕಳೆದಿತ್ತು.
ಕುಕ್ಕೆಯಲ್ಲೊಂದು ಬೆಳಗು:
View of Adi Kukke Temple from the Lodge |
ಬೆಂಗಳೂರ ಚುಮು ಚುಮು ಬೆಳಗಿಂದ ದೂರ ಸಾಗಿದ್ದ ನಮ್ಮನ್ನ ಸ್ವಾಗತಿಸಿದ್ದು ಕುಕ್ಕೆಯ ಬೆಚ್ಚಗಿನ ಹವೆ. ಬೆಳಗ್ಗೆ ಆರರ ಹೊತ್ತಿಗೆ ಬಸ್ಟಾಂಡು ತಲುಪಿದ್ದ ನಾವು ನಮ್ಮ ಟ್ರೆಕ್ಕಿಂಗು ಬ್ಯಾಗುಗಳ ಹೊತ್ತು ಕುಕ್ಕೆಯ ಟಾರ ಬೀದಿಗಳಲ್ಲಿ ಸಾಗುತ್ತಿದ್ರೆ ನಿದ್ರಾ ದೇವಿ ಕೈ ಬೀಸಿ ಕರೆಯುತ್ತಿದ್ದಳು. ಆಟೋ ಬೇಕಾ ಸಾರ್ ಆಟೋ ಎಂದು ಮೈಮೇಲೆ ಬೀಳುವ ಜನರಿಲ್ಲ, ಟ್ಯಾಕ್ಸಿ ಟ್ಯಾಕ್ಸಿ ಅಂತ ನಮ್ಮ ಬ್ಯಾಗುಗಳ ಸೆಳೆದೊಯ್ಯೋ ಧಾವಂತವಿಲ್ಲ, ಪೂಜೆ ಮಾಡುಸ್ತೀರಾ ಸಾರ್ ಅಂತ ತಲೆತಿನ್ನೋ ಏಜೆಂಟರೂ ಇಲ್ಲವಿಲ್ಲಿ. ಪ್ಲಾಸ್ಟಿಕ್ ಬ್ಯಾಗುಗಳ ಎಲ್ಲೆಂದರಲ್ಲಿ ಕಚ್ಚೆಳೆಯೋ ನಾಯಿಗಳೂ, ಕಸದ ರಾಶಿಯಲ್ಲಿ ಬಿದ್ದೊರಳೋ ಹಂದಿಗಳೂ ಇಲ್ಲದ ಪ್ರಶಾಂತ ಬೆಳಗಲ್ಲಿ ಸೂರ್ಯ ತನ್ನ ಪಾಡಿಗೆ ತಾನುದಯಿಸುತ್ತಿದ್ದರೆ ಸೂರ್ಯನೊಂದಿಗೆ ಸೆಲ್ಪಿ ತೆಗೆದುಕೊಳ್ಳೋ ಉಮೇದಿನಲ್ಲೂ ಜನರಿರಲಿಲ್ಲ. ಸಾವಧಾನದ ಜಗತ್ತಿನಲ್ಲಿ, ಗಡಿಬಿಡಿ, ಗಿಜಿಗಿಜಿಯಿಲ್ಲದ ಬೀದಿಗಳಲ್ಲಿ ಆಗ ತಾನೇ ತೆಗೆಯುತ್ತಿದ್ದ ಪೂಜೆಯ ಸಾಮಾನುಗಳ ಮಾರೋ ಅಂಗಡಿಗಳು, ಸಣ್ಣ ಸಣ್ಣ ಹೋಟೇಲ್ಲುಗಳ ನಡುವೆ ನಮ್ಮ ಪಯಣ ಸಾಗುತ್ತಿದ್ದರೆ ಬೆಳಗಾಗೆದ್ದು ತಣ್ಣೀರಲ್ಲಿ ಸ್ನಾನಗೈದು ನಡುಗುತ್ತಾ ಬರುತ್ತಿದ್ದ ಶಬರಿ ಮಲೆ ಭಕ್ತರು ಎದುರಾದರು. ಆದಿ ಶೇಷ ದೇಗುಲದಲ್ಲಿ ಮುಡಿ ಕೊಡೋಕೆ ಬರೋರು, ಸರ್ಪ ಸಂಸ್ಕಾರ ಮಾಡಿಸೋಕೆ ಬರೋರು , ಕುಕ್ಕೆ ಸುಬ್ರಹ್ಮಣ್ಯನ ಬೆಳಗಿನ ದರ್ಶನಕ್ಕೆ ಹೊರಟೋರೂ ಸಿಕ್ಕಿದ್ರು . ಶಬರಿಮಲೆಯ ಕಪ್ಪು, ಕೇಸರಿ, ನೀಲಿ ಮಡಿಗಳ ನಡುವೆ, ದೇಗುಲಕ್ಕೆ ಬರೋ ಹಲ ಭಕ್ತರ ಬಿಳಿ ಪಂಚೆಗಳ ನಡುವೆ ಜೀನ್ಸು, ಚೆಡ್ಡಿಗಳ ನಮ್ಮ ಪಯಣ ಬರಿಗಾಲು, ಚಪ್ಪಲಿಗಳ ನಡುವಿನ ನಮ್ಮ ಶೂಗಳ ಓಡಾಟ ಹೊಸ ಹಳೆಯ ಆಚಾರಗಳ ಸಂಗಮದಂತೆ ಒಂಥರಾ ವಿಭಿನ್ನವೆನಿಸುತ್ತಿತ್ತು. ಸ್ವಲ್ಪ ದೂರ ಬರೋ ಹೊತ್ತಿಗೆ ಆಚೆಗಿನ ಹಸಿರು ಮಲೆಗಳ ದರ್ಶನವಾಯ್ತು. ಅವುಗಳ ಮೇಲಿನ ಆಗಸಕ್ಕೆಲ್ಲಾ ಕೆಂಪ ಬಣ್ಣವ ಬಳಿದ ಕಲೆಗಾರನ ನೋಡುತ್ತಾ ನಾವು ರೆಡಿಯಾಗಬೇಕಿದ್ದ ಅಭಯ ವಸತಿಗೃಹವನ್ನು ತಲುಪಿದ್ವಿ. ಅಲ್ಲಿ ರೆಡಿಯಾಗಿ ದೇಗುಲದ ಬಳಿಯಿರೋ ಕುಮಾರ ಕೃಪದಲ್ಲಿ ತಿಂಡಿ ತಿಂದ ನಮ್ಮ ತಂಡ ಕುಕ್ಕೆಯತ್ತ ಪಯಣ ಬೆಳೆಸೋ ಹೊತ್ತಿಗೆ ಘಂಟೆ ಒಂಭತ್ತೂವರೆ ದಾಟಿತ್ತು
ಚಾಮುಂಡಿಗೆ ನಮಸ್ಕರಿಸಿ ಗಿರಿಗದ್ದೆಯತ್ತಲ ಪಯಣ :
ಔಷಧೀಯ ಸಸ್ಯ ಸಂರಕ್ಷಣಾ ಪ್ರದೇಶ, ಸುಬ್ರಹ್ಮಣ್ಯ ಎಂಬ ಬೋರ್ಡನ್ನು ದಾಟಿ ಕುಕ್ಕೆ ಪಟ್ಟಣದಿಂದ ಸುಮಾರು ಮುಕ್ಕಾಲು ಕಿ.ಮೀ ಮುಂದೆ ಬರೋ ನಮಗೆ ಸಣ್ಣ ಚಾಮುಂಡಿ ಗುಡಿಯೊಂದು ಸಿಗುತ್ತದೆ. ಅದರ ಪಕ್ಕದಲ್ಲಿರೋ ದಾರಿಯಲ್ಲೇ ಕುಕ್ಕೆಗೆ ಒಳಕ್ಕೆ ಸಾಗಬೇಕು. ಇಲ್ಲಿ ನಮ್ಮನ್ನೆಲ್ಲಾ ಒಟ್ಟುಗೂಡಿಸಿದ ಆಯೋಜಕರಾದ ಸುಧೀರ್ ಸಾಗರ್ ಅವರು ಟ್ರಿಪ್ಪಲ್ಲಿ ಹೇಗಿರಬೇಕು, ಹೇಗಿರಬಾರದು, ಏನೆಲ್ಲಾ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದೆಲ್ಲಾ ವಿವರಿಸಿದ್ರು. ನಂತರ ಒಬ್ಬೊಬ್ಬರಾಗಿ ಕಾಡೊಳಗೆ ಹೊರಟ್ವಿ.
Entering int other Kukke Trek |
ಕಾಡಂದ್ರೆ ಒಂದೆಡೆಯೂ ಸೂರ್ಯರಶ್ಮಿ ಬೀಳಲಾಗದಂತಹ ಗಾಢ ಕಾಡಲ್ಲವದು. ಆದರೂ ಬಿಸಿಲಿಂದ ಮೈಕೈ ಸುಡದಷ್ಟು ಮರಗಳ ಹೊದಿಕೆಯಿರೋ ಪ್ರದೇಶ. ಸುಮಾರು ಮೂರು ತಾಸು ನಡೆದ ಮೇಲೆ ಭಟ್ಟರ ಮನೆ ಸಿಗುತ್ತೆ ಅಂತ ಹೇಳಿದ್ರಿಂದ ಆರಾಮಾಗಿ ನಡೀತ ಇದ್ವಿ.
ಹತ್ತಿದ್ದು, ಹತಿದ್ದು, ಸುಸ್ತಾದಾಗ ಸ್ವಲ್ಪವೇ ನೀರು ಕುಡಿದಿದ್ದು , ಒಂದಿಷ್ಟು ಫೋಟೋ ತೆಗೆದಿದ್ದು ಬಿಟ್ಟರೆ ಮತ್ತೆ ಹತ್ತಿದ್ದೇ ಹತ್ತಿದ್ದು ಇಲ್ಲಿ ! ಮರದ ಪೊಟರೆಗಳು, ಬೀಳಲುಗಳ ವಿಚಿತ್ರ ಆಕಾರಗಳು ಇಷ್ಟು ದೂರದ ಟ್ರೆಕ್ಕಿಂಗಿಗೆ ಮೊದಲ ಬಾರಿ ಬಂದಿದ್ದ ಅಕ್ಷತಾಳ ಮನ ಸೆಳೆಯುತ್ತಿತ್ತು.
ನಮ್ಮ ಜೊತೆಗೇ ಇದ್ದ ವಿನಯ್, ಲೋಹಿತ್, ಸುಧಾಕ್ಕ ಮುಂದೆ ಸಾಗಿದ್ರೆ ನಿಧಾನವಾಗಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ನಾವುಗಳು ಸ್ವಲ್ಪ ಹಿಂದೆ ಬಿದ್ವಿ. ಹಾಗೇ ಮುಂದೆ ಬರುತ್ತಿದ್ದ ಹಾಗೆ ಒಂದು ದೊಡ್ಡ ಬಂಡೆಯೊಂದು ಕಾಣಿಸ್ತು. ಅಲ್ಲೊಂದಿಷ್ಟು ಜನ ವಿಶ್ರಾಂತಿ ತೆಗೆದುಕೊಳ್ತಿದ್ರು. ಹಾಗೇ ಮುಂದೆ ಸಾಗಿದ್ವಿ. ಒಂದಿಷ್ಟು ಕಡೆ ಸ್ವಲ್ಪ ಚಿಟ್ಟೆಗಳು ಕಂಡ್ರೂ ಫೋಟೋ ತೆಗೆಯೋಕೆ ಸಿಗದ ಅವುಗಳ ಕಂಡು , ದೂರದಲ್ಲೆಲ್ಲೋ ಕೂತಿರುವವ ಕಂಡು ನನ್ನ ಡಿಎಸೆಲ್ಲಾರ್ ತಂದಿದ್ರೆ ಚೆನ್ನಾಗಿರ್ತಿತ್ತಲ್ವಾ ಅನಿಸ್ತು ಒಮ್ಮೆ. ಆದ್ರೆ ಈಗಿರೋ ವಜೆಯ ಜೊತೆ ಅದು ಬೇರೆ ! ತರ್ದಿದ್ದಿದ್ದು ಒಳ್ಳೇದೇ ಆಯ್ತು ಅಂತ ಸಮಾಧಾನವೂ ಆಯ್ತು. ನನ್ನ ಬಟ್ಟೆಗಳ ಜೊತೆಗೆ, ಅಕ್ಷತಾನ ಸ್ಲೀಪಿಂಗ್ ಬ್ಯಾಗು, ಮಾರನೇ ದಿನ ತಿನ್ನೋಕೆ ಬೇಕಾಗುತ್ತೆ ಅಂತ ತಂದ ಚುಡುವ, ಮಾರನೇ ದಿನಕ್ಕೆ ಅಂತ ಗ್ರೂಪವ್ರು ಕೊಟ್ಟ ಹಣ್ಣು, ಬಿಸ್ಕತ್ತುಗಳ ಎರಡು ಪೊಟ್ಟಣಗಳು ಸೇರಿ ಬ್ಯಾಗ ಭಾರವೇ ಇತ್ತು. ಮಧ್ಯ ಎಲ್ಲೋ ನೀರು ಸಿಗುತ್ತೆ ಅಂತ ಸುಧೀರಣ್ಣ ಹೇಳಿದ ನೆನಪಿತ್ತಾದ್ರೂ ಆ ನೀರು ಎಲ್ಲೂ ಸಿಗಲಿಲ್ಲ. ಆದ್ರೆ ಚೂರು ಚೂರೇ ನೀರು ಕುಡಿದಿದ್ದ ಕಾರಣ ನಮಗೆ ಅದರ ಅಗತ್ಯವೂ ಕಾಣಲಿಲ್ಲ. ಸುಮಾರು ನಾಲ್ಕು ಕಿ.ಮೀ ಸಾಗಿದ ಮೇಲೆ ಕಾಡಿಂದ ಹೊರಬಂದು ಒಂದು ಹುಲ್ಲುಗಾವಲನ್ನು ಹೊಕ್ಕಿದ್ವಿ. ಅಷ್ಟರಲ್ಲೇ ಭಟ್ಟರ ಮನೆಗೆ ಹಾಲು ತಂದು ಕೊಡುವ ಹುಡುಗನೊಬ್ಬ ಸಿಕ್ಕಿದ. ಇನ್ನೊಂದು ಸ್ವಲ್ಪ ದೂರದಲ್ಲಿ ಭಟ್ಟರ ಮನೆ ಅಂತ ಅವ ಹೇಳೋ ಹೊತ್ತಿಗೆ ಸೂರ್ಯ ಸುಡೋಕೆ ಶುರುವಾಗಿದ್ದ.
ಬೆಳಗ್ಗೆ ಟಾರ ದಾರಿಯಲ್ಲಿ ನಡೆದಿದ್ದು ಬಿಟ್ಟರೆ ನಂತರ ಸಿಕ್ಕ ದಾರಿಯಲ್ಲೆಲ್ಲಾ ಹತ್ತುತ್ತಲೇ ಸಾಗಿದ್ದ ಮನೆಯವಳಿಗೆ ಇನ್ನೊಂದು ಸ್ವಲ್ಪ ದಾರಿ ಆದ್ಮೇಲೆ ಚಪ್ಪಟೆ ಹಾದಿ ಸಿಗುತ್ತೆ ಅಂತ ಸಮಾಧಾನ ಮಾಡುತ್ಲೇ ಸಾಗಿದ್ದೆ. ಎಷ್ಟೇ ಫ್ಲಾಟ್ ಅಂದ್ರೂ ಏರೇ ಇರುತ್ತಿದ್ದ ಹಾದಿಯಲ್ಲಿ ಬರುತ್ತಿದ್ದ ನಮಗೆ ಈ ಹುಲ್ಲುಗಾವಲು ಸಿಕ್ಕಾಗ ಸ್ವಲ್ಪ ಸಮಾಧಾನವಾಯ್ತು.
ಎದುರಿಗೆ ಬೆಟ್ಟಗಳು ಕಾಣೋಕೆ ಶುರುವಾದಾಗ ನಮ್ಮ ಗಮ್ಯವ ಕಂಡು ಅವಳಿಗೂ ಮತ್ತೆ ಉತ್ಸಾಹ ಬಂತು. ಬೆಟ್ಟಗಳು ಗುಂಡುಗುಂಡಗೆ ಕಂಡ್ರು ಏರೋ ಹಾದಿ ಮಾತ್ರ ಕಠಿಣ ಅಂತ ಒದ್ದಾಡುತ್ತಿದ್ದ, ಸುಧಾರಿಸಿಕೊಳ್ಳುತ್ತಿದ್ದ ಬೇರೆ ಗ್ರೂಪವ್ರನ್ನ ನೋಡಿ ನಾವೇ ಪರ್ವಾಗಿಲ್ಲ ಅಂತ ಖುಷಿಯೂ ಆಗುತ್ತಿತ್ತು. ದಾರಿಯಲ್ಲಿ ಸಿಕ್ಕ ಕಾಡ ಕೆಂಪೆಲೆಗಳು, ಬಣ್ಣ ಬಣ್ಣದ ಬಳ್ಳಿಗಳು, ಹಸಿರ ಹುಲ್ಲ ಹಾಸು ಒಂದೇ ಬಣ್ಣದ ಕಡುಗಪ್ಪು ಕಾಡಲ್ಲಿ ನಡೆದು ಬೇಸರಿಸಿದ್ದ ನಮಗೆ ಉಲ್ಲಾಸವೀಯುವಂತಿತ್ತು.
ಹಾಗೇ ಮುಂದೆ ಸಾಗುತ್ತಿದ್ದಾಗ ಕುಮಾರ ಪರ್ವತ ೭ ಕಿ.ಮೀ ಎಂಬ ಅರಣ್ಯ ಇಲಾಖೆಯ ಬೋರ್ಡೂ ಮತ್ತು ಗಡಿಕಲ್ಲುಗಳೂ ಸಿಕ್ಕಿದವು.
ಅಲ್ಲೊಂದಿಷ್ಟು ಸುಧಾರಿಸಿಕೊಂಡು ಭಟ್ಟರ ಮನೆಯತ್ತ ಸಾಗಿದೆವು.ಹಾಗೇ ಸಾಗಿದ ನಾವು ೧೨:೧೦ರ ಹೊತ್ತಿಗೆ ಗಿರಿಗದ್ದೆ ಭಟ್ಟರ ಮನೆ ತಲುಪಿದ್ವಿ.
ಗಿರಿಗದ್ದೆ ಕ್ಯಾಂಪು ಮತ್ತು ಮಹಾಲಿಂಗೇಶ್ವರ ಭಟ್ಟರ ಮನೆ:
ಕುಮಾರ ಪರ್ವತಕ್ಕೆ ಸಾಗೋ ಹಾದಿಯಲ್ಲಿ ಸಡನ್ನಾಗಿ ಒಂದೆಡೆ ಅಡಿಕೆ ತೋಟವೊಂದು ಕಾಣುತ್ತೆ. ಅಲ್ಲಿ ಕಾಡ ಮಧ್ಯೆದಲ್ಲಿ ಇರೋ ಮಣ್ಣಿನ ಮನೆಯೇ ಮಹಾಲಿಂಗೇಶ್ವರ ಭಟ್ಟರ ಮನೆ. ೧೯೭೦ರ ಸುಮಾರಿಗೆ ಇಲ್ಲಿಗೆ ಬಂದ ಭಟ್ಟರ ಜೊತೆ ಈಗ ಅವರ ತಮ್ಮಂದಿರಾದ ಗಣೇಶ್ ಭಟ್ ಮತ್ತು ವಿಷ್ಣು ಭಟ್ ಅವರು ವಾಸವಿದ್ದಾರೆ. ಬೆಟ್ಟಕ್ಕೆ ಬರೋ ಚಾರಣಿಗರಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯೂಟಗಳ ಒದಗಿಸೋ ಭಟ್ಟರ ಮನೆಯೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ನಾವು ತಲುಪೋ ಹೊತ್ತಿಗೆ ಮಧ್ಯಾಹ್ನದೂಟದ ಮಜ್ಜಿಗೆ, ಅನ್ನ, ಸಾಂಬಾರು, ಚಿತ್ರಾನ್ನಗಳು ರೆಡಿಯಾಗಿದ್ದವು ! ಐದು ಕಿಲೋ ಬೆಟ್ಟದ ಮೇಲಿರುವ ಇಲ್ಲಿಗೆ ಬೇಕಾದ ಎಲ್ಲಾ ಸಾಮಾನುಗಳನ್ನೂ ಕೆಳಗಿನ ಸುಬ್ರಹ್ಮಣ್ಯದಿಂದ ತಲೆಯ ಮೇಲೆ ಹೊತ್ತೇ ಸಾಗಿಸಬೇಕಾದಾದರೂ ಇಲ್ಲಿನ ಊಟವೊಂದಕ್ಕೆ ೧೨೦ ರೂ, ಟೆಂಟಲ್ಲಿ ಒಬ್ಬರಿಗೆ ೨೦೦ ರೂ ಚಾರ್ಜು ಮಾಡೋದು ವಿಶೇಷವೆನಿಸುತ್ತೆ. ವಾರಾಂತ್ಯದ ಸಮಯದಲ್ಲೆಂತೂ ಇಲ್ಲಿ ಜನಜಾತ್ರೆ ! ಮೊದಲೇ ಸಾಗಿದ್ದ ಲೋಹಿತ್, ವಿನಯ್, ಸುಧಾಕ್ಕ ಎಲ್ಲೂ ಕಾಣದಿದ್ದ ಕಾರಣ ನಾನು, ಅಕ್ಷತಾ ಕೈಕಾಲು ತೊಳೆದು, ಮನೆಯೊಳಗಿನ ಚಾರ್ಚರ್ ಬಳಿ ಮೊಬೈಲ್ ಚಾರ್ಜಿಗೆ ಹಾಕಿ ಕಾಯುತ್ತಾ ಕೂತ್ವಿ.
We Infront of the Girigadde Bhattara Mane |
ಕಾಯೋದ್ರಲ್ಲಿರೋ ಕಷ್ಟ:
ಹನ್ನೆರಡೂವರೆಯಾದ್ರೂ ಅವರ ಸುಳಿವಿಲ್ಲದೇ ಹೋಗಿದ್ರಿಂದ ಅವ್ರು ಎಲ್ಲೋದ್ರಪ ಅಂತ ಒಮ್ಮೆ. ನಾವೇ ದಾರಿ ತಪ್ಪಸ್ಕೊಂಡಿದೀವೇನೋ ಅನ್ನೋಕೆ ಭಟ್ಟರ ಮನೆಗೆ ಸರಿಯಾಗೇ ತಲುಪಿದ್ದೀವಿ. ಬೇರೆ ಭಟ್ಟರ ಮನೆಗೆ ಹೋಗಿದೀವೇನೋ ಅನ್ನೋಕೆ ಇಲ್ಲಿರೋದು ಒಂದೇ ಮನೆ ! ಕೆಳಗೆಲ್ಲಾದ್ರೂ ಇರಬಹುದೇನೋ ಅಂತ ಕೆಳಗೆ ಹೋಗಿ ನೋಡಿದ್ರೆ ಅವ್ರೆಲ್ಲಾ ಮನೆಯ ಕೆಳಗಿರೋ ಮರದ ನೆರಳಲ್ಲಿ ಕೂತಿದ್ರು. ವಿನಯ್ ಹನ್ನೊಂದು ಮುಕ್ಕಾಲಿಗೇ ಬಂದಿದ್ರಂತೆ. ಉಳಿದವ್ರೂ ಹನ್ನೆರಡರ ಸುಮಾರಿಗೆ ಬಂದ್ವಿ ಅಂದ್ರು. ಉಳಿದವ್ರೆಲ್ಲಾ ಬರ್ಲಿ, ಊಟ ಮಾಡೋಣ ಅಂದ್ರು ಅವ್ರು. ಸರಿ, ಅಂತ ವಾಪಾಸ್ ಬಂದೆ. ಮತ್ತೆ ಕಾಲು ಘಂಟೆಗೆ ಹೊಟ್ಟೆ ತಾಳ ಹಾಕತೊಡಗಿತ್ತು. ವಾಪಾಸ್ ಹೋದೆ , ಊಟ ಮಾಡೋಣ್ವಾ ಅಂತ ಕೇಳೋಕೆ. ಅಷ್ಟೊತ್ತಿಗೆ ವಾಣಿಶ್ರೀ, ಲಕ್ಶ್ಮೀ, ಆರ್ತಿ, ವಿಜಯಲಕ್ಶ್ಮೀ ಅವರೂ ಬಂದಾಗಿತ್ತು. ಆದ್ರೆ ಅವ್ರಿಗೂ ಉಳಿದವರು ಬರೋವರೆಗೆ ಕಾಯೋಣ ಅಂತ. ಸರಿ ಅಂತ ಮತ್ತೆ ಕಾದ್ವಿ. ಎಲ್ಲ ಬಂದು ಊಟ ಮಾಡ್ಕೊಂಡು ಹೋಗ್ತಾ ಇದ್ರು. ಅಲ್ಲಿನ ಸಾಂಬಾರಿನ ಘಮ ನಮ್ಮ ಹೊಟ್ಟೆಯನ್ನು ಕೆಣಕ್ತಾ ಇತ್ತು ! ಒಂದಾಯ್ತು, ಒಂದೂಕಾಲಾಯ್ತು. ಯಾರ ಸುಳಿವೂ ಇಲ್ಲ. ಸಖತ್ ಹಸಿವಾಗ್ತಿದ್ದ ನಮಗೆ ಅಲ್ಲಿದ್ದ ಹದ ಮಜ್ಜಿಗೆಯನ್ನ ಕಂಡು ತಡ್ಯೋಕಾಗ್ಲಿಲ್ಲ. ಸರಿ ಅಂತ ಒಂದು ನಾಲ್ಕು ಲೋಟ ಮಜ್ಜಿಗೆ ಇಳ್ಸಿದ ಮೇಲೆ ಸ್ವಲ್ಪ ಸಮಾಧಾನವಾಯ್ತು. ಇನ್ನು ಉಳಿದವ್ರು ಎಷ್ಟೊತ್ತಿಗಾದ್ರೂ ಬರ್ಲಿ, ಕಾಯೋಣ ಅಂತ ಮತ್ತೆ ಕಾಯೋಕೆ ಶುರು ಮಾಡಿದ್ವಿ
ಭರ್ಜರಿ ಭೊಜನ:
ಘಂಟೆ ಎರಡಾಯ್ತು. ಯಾರ ಸುಳಿವೂ ಇಲ್ಲ ! ನಮ್ಮ ಹಾಗೇ ಹೊಟ್ಟೆ ಹಸಿವು ತಾಳಲಾರದ ಉಳಿದವ್ರೂ ಈಗ ಭಟ್ಟರ ಮನೆಯತ್ರ ಬಂದ್ರು. ನಾವು ಊಟ ಮಾಡೋಣ. ಅವ್ರು ನಿಧಾನ ಬರ್ಲಿ ಅಂತ ತೀರ್ಮಾನವಾಯ್ತು. ಸರಿ ಅಂತ ಊಟ ಮಾಡೋಕೆ ಶುರು ಮಾಡೋ ಹೊತ್ತಿಗೆ ಒಬ್ಬೊಬ್ಬರಾಗಿ ಉಳಿದವ್ರು ಬರೋಕೆ ಶುರು ಮಾಡಿದ್ರು. ನಾವು ಮಿಸ್ ಮಾಡ್ಕೊಂಡಿದ್ದ ನೀರ ತಾಣದ ಬಳಿ ಒಂದಿಷ್ಟು ಹೊತ್ತು ಕಳೆದ ಅವರು ಬರೋ ಹೊತ್ತಿಗೆ ಇಷ್ಟೊತ್ತಾಗಿತ್ತು ! ಹೋದ ಜಾಗದ ಬಗ್ಗೆ ಬೇಸರವಿಲ್ಲ, ವಾಪಾಸ್ ಹೋಗ್ತಾ ನೋಡಿದ್ರಾಯ್ತು ಅಂತ ಸಮಾಧಾನ ಮಾಡ್ಕೊಂಡ ನಾವು ಊಟವಾದ ನಂತರ ಅಲ್ಲೇ ಜಾಗ ಮಾಡಿಕೊಟ್ಟ ಭಟ್ಟರಿಗೆ ಧನ್ಯವಾದ ಹೇಳುತ್ತಾ ನಮ್ಮ ಬ್ಯಾಗುಗಳನ್ನೆಲ್ಲಾ ಅಲ್ಲೇ ಇಟ್ಟು ಸ್ವಲ್ಪ ವಿಶ್ರಾಂತಿಗೆ ಅಂತ ಮಲಗಿದ್ವಿ. ನಿದ್ದೆ ಬರ್ತಿಲ್ಲ ಅಂತ ಅಂದ್ಕೊಂಡ್ರೂ ಯಾವ ಮಾಯದಲ್ಲಿ ನಿದ್ರಾದೇವಿ ನಮ್ಮನ್ನ ಆವರಿಸಿದ್ಲೋ ಗೊತ್ತಿಲ್ಲ. ಸುತ್ತಲೂ ಕತ್ತಲಾಗುತ್ತಿತ್ತು. ಗಡಿಯಾರ ನೋಡಿದ್ರೆ ನಾಲ್ಕೂಮುಕ್ಕಾಲು !
ಒಂದಿಷ್ಟು ಕನ್ ಫ್ಯೂಷನ್ನು:
ಮಲಗೆದ್ದ ಮೇಲೆ ನೋಡಿದ್ರೆ ನಮ್ಮ ಎದುರಿಗೆ ಮಲಗಿದ್ದ ಪ್ರಮೋದಣ್ಣ ಇಲ್ಲ ! ಬದಲಿಗೆ ವಿನಯ್ ಮಲ್ಗಿದಾರೆ ! ಐದರ ಸುಮಾರಿಗೆ ಹೊರಗೆ ಸೂರ್ಯಾಸ್ತ ನೋಡೋಣ ಅಂತ ಹೇಳಿದವ್ರು ನಮ್ಮನ್ನ ಬಿಟ್ಟು ಹೋಗ್ಬಿಟ್ಟಿದ್ದಾರಾ ಅಂತ ಸಂದೇಹ ಶುರುವಾಯ್ತು. ಅವಾಗ ಯಾರೋ ಬಂದಿದ್ರು. ಪ್ರಮೋದಣ್ಣನ್ನ ಎಬ್ಸಿ ಕರ್ಕೊಂಡೋದ್ರು ಅಂತ ಒಬ್ರು , ಮೇಲೆ ಸೂರ್ಯಾಸ್ತ ನೋಡೋ ಪಾಯಿಂಟ್ ಒಂದಿದೆ. ಆದ್ರೆ ಅಲ್ಲಿಂದ ಎಲ್ಲೋಗಿದ್ದಾರೆ ಗೊತ್ತಿಲ್ಲ ಅಂತ ಮತ್ತೊಬ್ರೂ ಹೇಳೋಕೆ ಶುರು ಮಾಡಿದ್ರು ! ಏನಾದ್ರಾಗ್ಲಿ, ನಮ್ಮ ಪಾಡಿಗೆ ನಾವು ನೋಡೋಣ ಸೂರ್ಯಾಸ್ತ ಅಂತ ಮಾತುಕತೆ ನಡೀತಿದ್ದಾಗ ಎಚ್ಚರವಾದ ಉಳಿದವ್ರೂ ರೆಡಿಯಾಗಿ ಸೂರ್ಯಾಸ್ತ ನೋಡೋಕೆ ಹೊರಟು ನಿಂತ್ರು ! ಕಣ್ಣುಜ್ಜಿಕೊಳ್ತಿದ್ದವರು ರೆಡಿಯಾಗಿ ಹೊರಟು, ಭಟ್ಟರ ಮನೆ ದಾಟಿ ಸೂರ್ಯಾಸ್ತದ ಪಾಯಿಂಟ್ ತಲುಪಿದ್ರೂ ಉಳಿದವರ ಸುಳಿವಿಲ್ಲ ! ಎಲ್ಲೋದ್ರಪ್ಪ ಇವ್ರು ನಮ್ಮನ್ನ ಬಿಟ್ಟು ಅಂತ ಬೇಸರ. ಇನ್ನೂ ಐದೂಕಾಲಾಗಿದ್ದರಿಂದ ಅಲ್ಲಿನ ಸುತ್ತಮುತ್ತಲ ಹೂಗಳು, ಹಾಳಾದ ಟೆಲಿಫೋನ್ ಟವರ್ ಮುಂತಾದ ಜಾಗಗಳಲ್ಲೆಲ್ಲಾ ಫೋಟೋ ಶೂಟ್ ಮಾಡೋ ಹೊತ್ತಿಗೆ ಎದುರಿಗಿನ ಬೆಟ್ಟದ ಮೇಲೊಂದು ಕಲ್ಲುಗಳ ರಾಶಿಯಿಟ್ಟಿರೋದು, ಅಲ್ಲೊಂದಿಷ್ಟು ಜನ ನಿಂತಿರೋದು ಕಾಣಿಸ್ತು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಭಟ್ಟರ ಮನೆಯವ್ರನ್ನ ಕೇಳಿದ್ರೆ ಸೂರ್ಯಾಸ್ತದ ಪಾಯಿಂಟ್ ಇದೇ. ಅಲ್ಲಿಂದ ಸುಬ್ರಹ್ಮಣ್ಯ ಕಾಣ್ಸುತ್ತೆ ಅಷ್ಟೆ ಅಂದ್ರು . ಬೆಂಚುಗಳ ಮೇಲೆ ಕೂತು ಇಲ್ಲಿ ಸೂರ್ಯಾಸ್ತ ನೋಡೋದಕ್ಕಿಂತ ಎದುರಿಗಿನ ಬೆಟ್ಟದ ಮೇಲಣ ಸೂರ್ಯಾಸ್ತ ಇನ್ನೂ ಚೆನ್ನಾಗಿರ್ಬೋದಾ ಅನ್ನಿಸ್ತು. ಎದ್ರಿಗೆ ಕಾಣಿಸ್ತಿರೋರು ನಮ್ಮವ್ರಾ ಅಂತಲೂ ಅನ್ನಿಸ್ತು. ಅತ್ತಲೇ ಸಾಗಿದ್ವಿ. ಯಾರಿಗೆ ಫೋನ್ ಮಾಡಿದ್ರೂ ಅವ್ರ ಫೋನ್ ಸ್ವಿಚ್ಛಾಫ್ ಬರ್ತಿದ್ರಿಂದ ಕಾಯೋದೋ, ಗೆಸ್ ಮಾಡೋದು ಬಿಟ್ಟು ಬೇರೆ ದಾರಿಯಿರಲಿಲ್ಲ !
At the Backdrop of KP near Sunset View point |
ಸುಂದರ ಸೂರ್ಯಾಸ್ತ:
ಬಾಂದ್ ಕಲ್ಲು ಅಥವಾ ಗಡಿಕಲ್ಲು ಅಂತ ಕರೆಯೋ ಕಲ್ಲಿತ್ತು ಇಲ್ಲಿ. ಊರುಗಳ, ತಾಲ್ಲೂಕುಗಳ, ಜಿಲ್ಲೆಗಳ ಗಡಿಯನ್ನು ಗುರುತಿಸೋಕೆ ನೆರವಾಗೋ ಈ ಕಲ್ಲುಗಳು ಇಲ್ಲಿ ಸೂರ್ಯಾಸ್ತದ ಜಾಗವನ್ನೂ ತೋರಿಸುತ್ತಿದ್ದವು ! ಪ್ರಿಯಕರನ ಕಾಯಿಸಿ ಕಾಯಿಸಿ ಕೊನೆಗೂ ಬೇಸತ್ತು ಎದುರಾಗೋ ಪ್ರಿಯೆಯಂತೆ ಸುಮಾರು ಹೊತ್ತಿಂದ ನಮ್ಮನ್ನು ಕಾಯಿಸುತ್ತಿದ್ದ ಸೂರ್ಯ ಕೊನೆಗೂ ಮುಳುಗತೊಡಗಿದ. ಬೆಟ್ಟ ಹತ್ತಿ ಬಂದ ನಮಗೆ ಭಟ್ಟರ ಮನೆಯಲ್ಲಿ ಸ್ವಲ್ಪ ದಣಿವಾರಿದ್ದರೂ ಜಗವೆಲ್ಲಾ ಸುತ್ತಿದ್ದ ದಿನಕರನಿಗೆ ದಿನದ ಜಂಜಡಗಳಿಂದ ಸುಸ್ತಾಗಿತ್ತೇನೋ. ಒಂದಿಷ್ಟು ಫೋಟೋಗಳಿಗೆ ಪೋಸ್ ಕೊಟ್ಟ ಆತ ಕೊನೆಗೆ ಮನೆಗೆ ಹೊರಡೋ ಗಡಿಬಿಡಿಯಲ್ಲಿದ್ದಂತೆ ಕಂಡಿತು. ಕೆಲವೇ ನಿಮಿಷಗಳ ಹಿಂದೆ ಮೇಲಿದ್ದ ಸೂರ್ಯ ನೋಡನೋಡುತ್ತಿದ್ದಂತೆಯೇ ಬೆಟ್ಟಗಳ ಮರೆಯಲ್ಲಿ ಅಡಗತೊಡಗಿದ. ಫೋಟೋಗಳ ಮರೆತು , ಕಣ್ಣುಗಳಲ್ಲೇ ಸೂರ್ಯನ ಸೊಬಗನ್ನು ಸವಿಯೋಣ ಎಂದೆನಿಸಿ ಕಣ್ಣ ಮುಚ್ಚಿದರೆ ಮೊಗ, ಮನದಲ್ಲೆಲ್ಲಾ ಸೂರ್ಯನ ಬಂಗಾರದ ಬಣ್ಣವೇ ತುಂಬಿಕೊಂಡ ಭಾವ. ಸೂರ್ಯರಶ್ಮಿಯ ಕೊನೆಯ ಕಿರಣುಗಳು ಮೈಸೋಕುವ, ನಿಧಾನಕ್ಕೆ ಶುರುವಾಗೋ ಚಳಿ ನಮ್ಮನ್ನು ಸುತ್ತಿಕೊಳ್ಳುವ ಕ್ಷಣದ ಆಹ್ಲಾದಕತೆಯೇ ಅದ್ಭುತ. ಎದುರಿಗೆ ಕಾಣುತ್ತಿದ್ದ ಶೇಷ ಪರ್ವತ, ಬೆಳಗ್ಗೆ ನಮ್ಮನ್ನು ಸ್ವಾಗತಿಸಿದ್ದ ಸುಬ್ರಹ್ಮಣ್ಯಗಳ ನಡುವೆ ಅರ್ಧ ದಾರಿ ಕ್ರಮಿಸಿ ನಿಂತಿದ್ದ ನಮ್ಮ ಮನಸ್ಸು ಮುಂಬರುವ ಸವಾಲುಗಳಿಗೆ, ಖುಷಿಗಳಿಗೆ ಸಿದ್ಧವಾಗುತ್ತಿರುವಾಗಲೇ ಹೊತ್ತು ಕಂದಿತ್ತು. ಫೋನಿಗೆ ಸಿಕ್ಕವರು ಎದುರಿನ ಸನ್ ಸೆಟ್ ಪಾಯಿಂಟ್ ಬಳಿ ಇದ್ದಾರೆ ಎಂದು ಗೊತ್ತಾದ ಖುಷಿಯಲ್ಲಿ ಭಟ್ಟರ ಮನೆಯತ್ತ ಹೆಜ್ಜೆ ಹಾಕಿದೆವು .
((ಮುಂದುವರೆಯಲಿದೆ...)
Awesome blog... 😊
ReplyDeleteಧನ್ಯವಾದಗಳು :-)
DeleteAwesome 😊
ReplyDeleteThanks a lot
Deleteಚಾರಣ ಕಥನ ತುಂಬಾ ಚೆನ್ನಾಗಿದೆ.
ReplyDeleteಧನ್ಯವಾದಗಳು :-)
Delete