Sunday, January 20, 2019

ಹುತ್ರಿದುರ್ಗ ಚಾರಣ

Our Group (Akshata, Me, Suresh, Another trekker who joined on the way, Manjunath, Divya, Raj, Deepika) infront of HutriDurga Fort
ಮನದನ್ನೆಯೊಡನೆ ನವದುರ್ಗಗಳ ಚಾರಣ ಮಾಡಬೇಕೆಂಬ ಕನಸು ಶುರುವಾದದ್ದು ಸಾವನದುರ್ಗದಲ್ಲಿ. ಅದರ ಎರಡನೇ ಅಂಕವಾದ ಹುತ್ರಿದುರ್ಗದ ಚಾರಣ ಇಂದು ನನಸಾಯ್ತು.
ಮನೆಯಿಂದ ೧೯೦ ಕಿ.ಮೀಗಳ ಬೈಕ್ ಟ್ರಿಪ್ಪು ಹಾಸನ ಹೈವೇ ಮೂಲಕ ಹೋಗಿದ್ದಾಗಿದ್ದಾದ್ದರಿಂದ ಆ ಉತ್ತಮ ರಸ್ತೆಯಿಂದ ಉಲ್ಲಾಸಭರಿತವಾಗಿತ್ತು.


ಹೋಗೋದು ಹೇಗೆ ? 
ಬೆಂಗಳೂರಿನಿಂದ ಸುಮಾರು ೬೫ ಕಿ.ಮೀ ದೂರವಿರೋ ಹುತ್ರಿದುರ್ಗಕ್ಕೆ ಹೋಗೋದೂ ಸುಲಭ. ಕೆ.ಎಸ್. ಆರ್. ಟಿ.ಸಿ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಹುತ್ರಿದುರ್ಗ ಊರವರೆಗೆ ಹೋಗುತ್ತೆ. ಊರ ಪೇಟೆಯಲ್ಲೇ ಹುತ್ರಿದುರ್ಗ ಬೆಟ್ಟಕ್ಕೆ ದಾರಿ ಅಂತ ಬೋರ್ಡ್ ಕಾಣುತ್ತೆ. ಆ ಬೋರ್ಡಿನಿಂದ ಸುಮಾರು ೧ ಕಿ.ಮೀ ಮೇಲೆ ನಡೆದರೆ ಹುತ್ರಿದುರ್ಗ ಊರು ಸಿಗುತ್ತದೆ. ಅಲ್ಲಿ ಶಂಕರಲಿಂಗೇಶ್ವರ ದೇವಸ್ಥಾನಕ್ಕೆ ದಾರಿ ಎಂಬ ಬೋರ್ಡ್ ಕಾಣುತ್ತದೆ. ಅಲ್ಲಿ ಎಡಕ್ಕೆ ತಿರುಗಿ ನೂರು ಮೀಟರ್ ಸಾಗೋ ಹೊತ್ತಿಗೆ ದೇಗುಲ ಸಿಗುತ್ತೆ. ಅದರ ಪಕ್ಕದಲ್ಲಿರೋ ದಾರಿಯಲ್ಲಿರೋ ಸಾಗಿದರೆ ಕೋಟೆಯ ಗೋಡೆಗಳು ಮತ್ತು ಒಳಗೆ ಸಾಗೋ ಬಾಗಿಲು ಸಿಗುತ್ತೆ. ಅದರಲ್ಲಿ ಸಾಗಿದರೆ ಹುತ್ರಿದುರ್ಗ ಬೆಟ್ಟದ ಚಾರಣ ಮಾಡಬಹುದು. ಬೈಕಿನಲ್ಲಿ ಹೋಗೋದಾದರೆ ಕುಣಿಗಲ್ಲಿಗೆ ೭ ಕಿ.ಮೀ ದೂರ ಅಂತ ಕಾಣುವ ಬೋರ್ಡಿನ ನಂತರ ಸಿಗೋ ಎಡತಿರುವಿನಲ್ಲಿ ೧೪ ಕಿ.ಮೀ ಸಾಗಿದರೆ ಹುತ್ರಿದುರ್ಗ ತಲುಪಬಹುದು. ಮುಖ್ಯ ರಸ್ತೆಯಲ್ಲೇ ಹುತ್ರಿದುರ್ಗಕ್ಕೆ ದಾರಿ ಎನ್ನುವ ಬೋರ್ಡು ಸಿಗುವ ತನಕ ಸಾಗಿ ಅಲ್ಲಿಂದ ಎಡಕ್ಕೆ ಸಾಗಿ ಮುಂದುವರಿಯಬೇಕು. ಕೆಲಕಡೆ ರಸ್ತೆಯಲ್ಲಿ ಸ್ವಲ್ಪ ಗುಂಡಿ ಬಿದ್ದಿದೆಯಾದರೂ ಬೆಂಗಳೂರಿನಿಂದ ಚಾರಣದವರೆಗಿನ ರಸ್ತೆ ಚೆನ್ನಾಗೇ ಇದೆ. ಹುತ್ರಿದುರ್ಗ ತಲುಪಿದ ನಂತರ ಶಂಕರಲಿಂಗೇಶ್ವರ ದೇಗುಲ ದಾಟಿ ಕೋಟೆಯ ಬಂಡೆಗಳವರೆಗೂ ಬೈಕನ್ನು ಕೊಂಡೊಯ್ಯುವ ದಾರಿಯಿದೆ.


ಚಾರಣದ ದೂರ ಎಷ್ಟು? 
ಹುತ್ರಿದುರ್ಗದ ಚಾರಣ ಹೆಚ್ಚು ದೂರದ್ದೂ, ಹೆಚ್ಚು ಹೊತ್ತಿನದ್ದೂ ಅಲ್ಲ. ಬೆಟ್ಟದ ಮೇಲೆ ಹತ್ತಿ, ಸುತ್ತಲ ಜಾಗಗಳನ್ನೆಲ್ಲಾ ನೋಡಿ ವಾಪಾಸ್ ಬರಲು ಸುಮಾರು 2.6 ಕಿ.ಮೀ ಆಗುತ್ತದೆ ಅಷ್ಟೆ.


ಫುಲ್ ಕನ್ ಫ್ಯೂಷನ್ ಕಣಣ್ಣ  ನಮ್ಮಣ್ಣ: 
ನಿನ್ನೆ ಸಂಜೆ ಹುತ್ರಿದುರ್ಗಕ್ಕೆ ಹೋದರೆ ಹೇಗೆ ಅಂತ ಪ್ಲಾನ್ ಮಾಡಾಯ್ತು. ಮೊನ್ನೆ ಗೆಳೆಯ ವಿನಯ್ ರಾವ್ ಅವರು ಹೋಗಿದ್ದ ಚಿತ್ರಗಳನ್ನು ನೋಡಿ ಮತ್ತು ಅದಕ್ಕಿಂತ ಮುಂಚೆ ಪ್ರವೀಣ್ ಅವ್ರ ತಂಡ ಹೋಗಿ ಬಂದಿದ್ದ ಕಥೆ ಕೇಳಿ ಇಲ್ಲಿಗೆ ಹೋಗಿಬರಬೇಕೆಂಬ ಆಸೆ ಮೊಳೆಯುತ್ತಲೇ ಇತ್ತು. ಇತ್ತೀಚಿಗಿನ ಚಾರಣಗಳ ಖಾಯಂ ಸಾಥಿಯಾಗಿರೋ ಜೀವನಸಾಥಿ ಅಕ್ಷತಾ ಹೇಗಿದ್ರೂ ರೆಡಿಯಾಗಿದ್ಲು. ಮತ್ತಿನ್ಯಾರು ಜೊತೆ ಸಿಗಬೋದು ಅಂತ ನಮ್ ರಾಜಣ್ಣ ಮುಂತಾದವರನ್ನ ಕೇಳಾಯ್ತು.  ಬೇರೆಯವ್ರು ಬೇರೆ ಬೇರೆ ಕಾರಣಗಳಿಂದ ಬರೋಕಾಗದಿದ್ರೂ ರಾಜಣ್ಣ ೩೦ ನಿಮಿಷದಲ್ಲಿ ಹೇಳ್ತೀನಿ ಅಂದ್ರು. ಸ್ವಲ್ಪ ಹೊತ್ತು ಬಿಟ್ಟು ಬರ್ತೀನಿ ಅಂದ್ರು. ಜೊತೆಗೆ ತಮ್ಮ ಗೆಳೆಯರನ್ನೂ ಕರ್ಕೊಂಡು ಬರ್ತೀನಿ ಅಂದ್ರು . ಸರಿ, ಆಗ್ಲಿ ಅಂತ ಗ್ರೂಪೊಂದು ಮಾಡಿ, ಬರೋರ್ನೆಲ್ಲಾ  ಸೇರ್ಸಿ ಅಂತೇಳಿ ಬೇರೆ ಕೆಲಸಗಳಲ್ಲಿ ಮಗ್ನನಾಗಿದ್ದೆ. ಹತ್ತೂಕಾಲಾದ್ರೂ ರಾಜಣ್ಣನ ಸುದ್ದಿಯಿಲ್ಲ. ಬರೋ ಬೇರೆಯವ್ರ ಸದ್ದಿಲ್ಲ ! ಚಳಿಗಾಲ ಅಂತ ಬೆಚ್ಚಗೆ ಹೊದ್ಕೊಂಡು ಮಲ್ಗಿದ್ರಾ ಅಂತ ಸಂದೇಹ ಬಂದು ಫೋನ್ ಮಾಡಿದ್ರೆ , ಬರ್ತೀನಿ ಅಂದಿದಾರೆ ಒಂದಿಬ್ರು, ಕೇಳ್ತೀನಿ ತಡೀರಿ ಅಂದ್ರು. ಹಂಗೇ ಮಂಜುನಾಥ್ ಮತ್ತು ಸುರೇಶ್ ಗೌಡ ಅವರನ್ನು ಸೇರಿಸಿದ್ರು ಬರೋರ ಸಾಲಿಗೆ. ಸರಿ, ಮೂರು ಜನರ ಬದ್ಲಿಗೆ ಐದು ಜನರಾದ್ರೆ ಒಳ್ಳೇದೆ ಅಂತ ಎಲ್ಲರಿಗೂ ನೀರಿನ ಬಾಟ್ಲಿ ತಗಂಡು ಬರ್ರಪ್ಪ ಅಂತೇಳಿ ಮಲ್ಕೊಂಡಾಯ್ತು ಹನ್ನೊಂದರ ಹೊತ್ತಿಗೆ. ಬೆಳಿಗ್ಗೆ ನಾಲ್ಕೂಮುಕ್ಕಾಲಿಗೆ ಎದ್ದು ನೋಡಿದ್ರೆ ಗ್ರೂಪಲ್ಲಿ ಇನ್ನೆರಡು ಹೊಸ ಎಂಟ್ರಿ ! ಅವ್ರನ್ನ ಯಾರು , ಎಲ್ಲಿಂದ ಕರ್ಕೊಂಡು ಬರೋದು ಅನ್ನೋದ್ರ ಬಗ್ಗೆ ಫುಲ್ ರಾಮಾಯಣ ! ಅದ್ರಲ್ಲೊಬ್ಬರಾದ ದಿವ್ಯ ನಮ್ಮನೆ ಹತ್ರನೇ ಇರದು. ಅವ್ರನ್ನ ಬೇರೆ ಜಾಗದಿಂದ ಕರ್ಕೊಂಡು ಬರ್ಬೇಕು ಅಂತ ಮೆಸೇಜು ! ಸರಿ, ಹಿಂದಿನ ದಿನ ಸುದ್ದಿಯಿರದ ಅವ್ರು ರೆಡಿಯಿರ್ತಾರ , ಬರ್ತಾರ ಅಂತ ಅವರಿಗೆ ಮೆಸೇಜಿಸಿದರೆ ಅವ್ರ ಸುದ್ದಿಯಿಲ್ಲ. ನಮ್ಮ ರಾಜಣ್ಣಂಗೆ ಕೇಳಿದ್ರೆ ನೀವೇ ಕರ್ಕೊಂಡು ಬನ್ನಿ, ಇಲ್ಲಾಂದ್ರೆ ಪ್ರವೀಣಂಗೆ ಹೇಳಿದೀನಿ ಅಂದ್ರು. ಪ್ರವೀಣಂಗೆ ಫೋನ್ ಮಾಡಿದ್ರೆ ನೀವು ಕರ್ಕೊಂಡು ಬರೋದಾದ್ರೆ ಕರ್ಕೊಂಡು ಬನ್ನಿ ಅಂದ. ಸರಿ , ಆಯ್ತಪ್ಪ ಅಂತ ನಿಂಗೆ ಯಾವ ಸ್ಟಾಪ್ ಹತ್ರನಮ್ಮ ಅಂದ್ರೆ ದಿವ್ಯ ನಮ್ಮನೆ ಹತ್ರದ ಸ್ಟಾಪೇ ಹೇಳ್ಬೇಕಾ ? ಸರಿ ಅಂತ ನಮ್ಮನೆಯವ್ರು ರೆಡಿಯಾಗಿ ಹೊರಡೋ ಹೊತ್ತಿಗೆ ದಿವ್ಯನ ಫೋನ್ ಹೋಗ್ತಿಲ್ಲ. ಮತ್ತೆ ಸ್ವಲ್ಪ ಹೊತ್ತಿಗೆ ನೋಡಿದ್ರೆ ಪ್ರವೀಣನ ಮಿಸ್ ಕಾಲು ! ಏನಪ್ಪಾ ಅಂತ ಮತ್ತೆ ಫೋನ್ ಮಾಡಿದ್ರೆ ಅವ್ರನ್ನ ಕರ್ಕೊಂಡೋಗಿ ಮತ್ತೊಂದು ಸ್ಟಾಪಿಗೆ ಬಿಟ್ಟಿದೀನಿ ಅನ್ಬೇಕೆ ? ನಂ ರಾಜಣ್ಣ ಎಲ್ರನ್ನ ಎಲ್ರಿಗೂ ಪಿಕ್ ಮಾಡಕ್ಕೆ ಹೇಳಿದ್ರು . ಆದ್ರೆ ಅವ್ರು ಯಾರ್ಯಾರಿಗೆ ಹೇಳಿದಾರೆ ಅಂತ ಮತ್ತೊಬ್ರಿಗೆ ಗೊತ್ತಿರ್ಲಿಲ್ಲ ! ಅಣ್ಣನ ಗೊಂದಲಗಳಿಂದ ಆರಕ್ಕೆ ಹೊರಡಬೇಕಾದ ನಾವು ಆರೂಮುಕ್ಕಾಲಾದ್ರೂ ಒಬ್ಬರೊಬ್ಬರಿಗೆ ಕಾಯ್ತಾ ಮಾರತ್ತಳ್ಳಿಯಲ್ಲೇ ಕೂತಿದ್ವಿ ! ಸರಿ, ಆಯ್ತಪ್ಪ , ನಾವು ಹೊರಟಿದೀವಿ ಬನ್ನಿ ಅಂದ್ರೆ, ಪಾರ್ಲೇಜಿ ಹತ್ರ ಬನ್ನಿ ಬರ್ತೀನಿ ಅಂದ ಅಣ್ಣ ನಮ್ಮನ್ನಲ್ಲಿ ಕಾಯ್ಸಿದ್ದೇ ಕಾಯ್ಸಿದ್ದು ! ಅಣ್ಣನ ಸೂಪರ್ ಕನ್ ಫ್ಯೂಷನ್ನುಗಳಿಂದ ಸುಮ್ಮನೇ ಬೇಗ ಎಬ್ಸಿ , ಜಾಕೇಟುಗಳಿದ್ರೂ ನಡುಗಿಸ್ತಿದ್ದ ಚಳೀಲಿ ಕರ್ಕೊಂಡು ಬಂದು ಕಾಯ್ಸಿದ್ದಕ್ಕೆ  ಮಹಿಳಾಮಣಿಗಳಾದ ದಿವ್ಯ, ಅಕ್ಷತಾ ಮತ್ತು ದೀಪಿಕಾರಿಂದ ನಮಗೆಲ್ಲಾ ಮಂಗಳಾರತಿ ಆಗದೇ ಹೋದದ್ದು ನಮ್ಮ ಪುಣ್ಯ  !

ನೆಲಮಂಗಲದ ತಟ್ಟೆ ಇಡ್ಲಿ: 
ನೆಲಮಂಗಲ ರಸ್ತೆಯಲ್ಲಿ ಹೋಗೋವಾಗ ಖುಷಿ ಕೊಡೋ ಹಲವು ಸಂಗತಿಗಳಲ್ಲಿ ಸಖತ್ತಾಗಿರೋ ರಸ್ತೆ ಒಂದಾದ್ರೆ ಮತ್ತೊಂದು ಸಂಗತಿ ಅಲ್ಲಿ ಸಿಗೋ ತಟ್ಟೆ ಇಡ್ಲಿ. ಬೆಳಗ್ಗೆ ತಿಂಡಿ ತಿನ್ನದೇ ಹೊರಟಿದ್ದ ನಮಗೆ ನೆಲಮಂಗಲ ಕ್ರಾಸು ದಾಟಿ ಹಾಸನ ಹೈವೇ ಹಿಡಿಯೋ ಹೊತ್ತಿಗೆ ಹೊಟ್ಟೆ ಚುರುಗುಟ್ಟತೊಡಗಿತ್ತು. ಸರಿ, ಅಂತ ಅಲ್ಲೇ ಗಾಡಿ ಸೈಡಿಗಾಕಿ ತಟ್ಟೆ ಇಡ್ಲಿ, ಮೆಂತೆ ಬಾತುಗಳನ್ನ ಚೆನ್ನಾಗಿ ಬಾರ್ಸಿದ್ದಾಯ್ತು. ಬಿಸಿ ಬಿಸಿ ಚಾಯೂ ಒಳಗಿಳಿದ ಮೇಲೆ ದೇಹ ಸ್ವಲ್ಪ ಬೆಚ್ಚಗಾಯ್ತು. ಹಾಸನದ ಹಾದೀಲಿ ಗಾಡಿಗಳನ್ನ ಮುಂದುವರೆಸಾಯ್ತು.

confusion Continues..
ಕುಣಿಗಲ್ ಹಾದಿಯಲ್ಲಿ ಎಡಕ್ಕೆ ಸಾಗಿದ ನಾವು ಹುತ್ರಿದುರ್ಗದವರೆಗೂ ಸರಿಯಾಗೇ ಸಾಗಿದ್ವಿ. ಆಮೇಲೆ ನಾವು ಮುಂದೆ ಹೋಗ್ತೀವಿ ಅಂತ ಮುಂದೆ ಹೋದ ರಾಜಣ್ಣ ಹುತ್ರಿದುರ್ಗ ಬೆಟ್ಟಕ್ಕೆ ದಾರಿ ಅಂತ ಇರೋ ಬೋರ್ಡನ್ನೂ ದಾಟಿ ಮುಂದೆ ಹೋಗಿದ್ರು.
Two boards which should not be missed if you want to go to Hutridurga for trekking 

ಫೋನ್ ಮಾಡಿದ್ರೆ ತೆಗಿಯಂಗಿಲ್ಲ ! ಸರಿಯಾಯ್ತು ಅಂತ ಮಂಜುನಾಥ್ ಮುಂದೆ ಹೋಗಿ ರಾಜಣ್ಣ ಮತ್ತು ಅವರ ಜೊತೆಗೆ ಮುಂದೆ ಹೋಗಿದ್ದ ಗ್ಯಾಂಗನ್ನು ವಾಪಸ್ ಕರ್ಕಂಡು ಬಂದ್ರು ! ದಿವ್ಯನ ಅದ್ಭುತ ಡ್ರೈವಿಂಗಿನ ಪ್ರದರ್ಶನದ ನಂತರ ನಾವೆಲ್ಲಾ ಸೇಫಾಗಿ ಹುತ್ರಿದುರ್ಗ ಹಳ್ಳಿಗೆ ಭೇಟಿ ಕೊಟ್ವಿ !
Our Group starting towards Trek 

ಆಂಟಿ ಅಟ್ಯಾಕ್ !
ಹುತ್ರಿದುರ್ಗದ ಊರ ಬಾಗಿಲಿನಲ್ಲಿರುವ ಪ್ರವೇಶ ದ್ವಾರವನ್ನು ದಾಟಿ ಮುಂದೆ ಬರುತ್ತಿದ್ದಂತೇ ಮುಂದೆ ಹೋಗುತ್ತಿದ್ದ ರಾಜಣ್ಣ ಮತ್ತು ಮಂಜುನಾಥ್ ಅವರಿದ್ದ ಬೈಕನ್ನು ಊರ ಹೆಂಗಸೊಬ್ರು ಅಡ್ಡ ಹಾಕಿದ್ರು ! ಅಷ್ಟರಲ್ಲೇ ಬಂದ ಸುರೇಶ್ ಅವರ ಬೈಕನ್ನೂ , ಪಕ್ಕದ ಬೈಕವರನ್ನೂ ಬಿಡಲಿಲ್ಲ. ಏನು ಅರ್ಜೆಂಟಲ್ಲಿದೀರಾ ? ಅಡ್ಡ ಹಾಕಿದ್ರೂ ಹಾಗೇ ಹೋಗ್ತಿದೀರಾ ಮರ್ಯಾದೆ ಇಲ್ವಾ ಅಂತ ದನಿ ಏರಿಸೋಕೆ ಶುರು ಮಾಡಿದ್ರು. ಹಿಂದಿದ್ದ ನಮಗೆ ಏನಾಗ್ತಿದೆ ಇಲ್ಲಿ ಅಂತ ಅರ್ಥ ಆಗ್ಲಿಲ್ಲ. ಕೊನೆಗೆ ನೋಡಿದ್ರೆ ಅವರು ಊರಲ್ಲಿ ಜೀರ್ಣೋದ್ದಾರ ಆಗ್ತಿರೋ ಶಂಕರಲಿಂಗೇಶ್ವರ ದೇಗುಲಕ್ಕೆ ಚಂದಾ ಕೇಳೋಕೆ ಬಂದಿದ್ದು ಅಂತ ಅವರ ಮೊಮ್ಮಗ ಚಂದಾ ಪುಸ್ತಕ ತಗೊಂಡು ಬಂದ ಮೇಲೇ ಗೊತ್ತಾಗಿದ್ದು. ರಾಜಣ್ಣ ನೂರು ರೂ ಕೊಟ್ರೂ ಎಲ್ಲಾ ಬೈಕೋರೂ ನೂರು ರೂ ಕೊಡಿ ಅಂತ ಕುತ್ಕೊಂಡ್ರು ಅವ್ರು ! ನಾವೆಲ್ಲಾ ಒಂದೇ ಗುಂಪು ಅಂತ ಅವರಿಗೆ ಮನವರಿಕೆ ಮಾಡ್ಕೊಟ್ಟು ರಾಜಣ್ಣ ಅವರೇ ಹೇಳುವಂತೆ "ಆಂಟಿ ಆಟ್ಯಾಕ್" ನಿಂದ ಎಸ್ಕೇಪಾಗೋ ಹೊತ್ತಿಗೆ ಸಾಕಾಯ್ತು !

ಕೋಟೆ ದ್ವಾರಗಳೂ ಮತ್ತು ಹತ್ತೋ ಮೆಟ್ಟಿಲುಗಳು: 
ಕೋಟೆಗೆ ಒಟ್ಟು ಆರು ಬಾಗಿಲುಗಳೂ ಮತ್ತು ಊರ ಶುರುವಿನಲ್ಲಿರುವ ಬಾಗಿಲೂ ಸೇರಿ ಹುತ್ರಿದುರ್ಗಕ್ಕೆ ಏಳು ಬಾಗಿಲುಗಳಿವೆ. ಒಳಗೆ ಇನ್ನೂ ಕೆಲವು ದ್ವಾರಗಳ ರೀತಿ ಕಲ್ಲು ಜೋಡಿಸಲಾಗಿದೆ. ಆದರೆ ಆ ದ್ವಾರಗಳು ಎಲ್ಲೋ ಮೂಲೆಯಲ್ಲಿದ್ದು ಅವುಗಳ ಮೂಲಕ ಎಲ್ಲೂ ಹೋಗೋ ದಾರಿ ಕಾಣುತ್ತಿರಲಿಲ್ಲ. ಕೋಟೆ ಹತ್ತೋದು ಹೇಗಪ್ಪಾ ಅಂತ ಅಂದುಕೊಳ್ಳೋರಿಗೆ ಇಲ್ಲಿ ಯಾವ ಕಷ್ಟವೂ ಇಲ್ಲ. ಯಾಕೆಂದರೆ ಇಲ್ಲಿ ಹತ್ತೋ ದಾರಿಯಲ್ಲಿನ ಎಲ್ಲಾ ಬಂಡೆಗಳಿಗೂ ಮೆಟ್ಟಿಲುಗಳನ್ನು ಕೆತ್ತಲಾಗಿದೆ. ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿಗೆ ಹೋಗ್ತಿರೋ ತನಕ ಮತ್ತು ಮುಂದೆ ಮೆಟ್ಟಿಲುಗಳು ಕಾಣ್ತಿರೋ ತನಕವೂ ನಾವು ಸರಿ ದಾರಿಯಲ್ಲಿದ್ದೀವಿ ಅಂತಲೇ ಅರ್ಥ. ಬೆಟ್ಟದ ಮೇಲ್ಗಡೆ ಸ್ವಲ್ಪ ಹುಲ್ಲುಗಾವಲು ಸಿಕ್ಕಿದ್ರೂ ಇಲ್ಲಿಗೆ ಆಗಾಗ ಜನ ಬರೋದ್ರಿಂದ ಹುಲ್ಲಿನ ಮಧ್ಯೆ ದಾರಿಯಾಗಿದೆ .

First entrance to the Fort 
Our Group at the Entrance 

 ಮೂರನೇ ಬಾಗಿಲೂ ಮತ್ತು ಮೂರು ಮೀನುಗಳು: 
ಕೋಟೆಯ ಮೇಲೆ ಹಲವು ರೀತಿಯ ಗೂಢಾರ್ಥಗಳಿರೋ ಚಿತ್ತಾರಗಳಿರುತ್ತೆ ಅಂತ ಕೇಳಿದ್ದೆ. ಉದಾಹರಣೆಗೆ ಕೋಟೆಯ ಶುರುವಿನಲ್ಲಿ ನಾಗರಹಾವಿದ್ದರೆ ಅದು ಎಷ್ಟು ಸುತ್ತು ಸುತ್ತಿದೆ ಅನ್ನೋದರ ಮೇಲೆ ಕೋಟೆ ಎಷ್ಟು ಸುತ್ತಿದೆ ಅಂತ ಹೇಳಬಹುದಂತೆ. ಅದೇ ತರಹ ಇಲ್ಲಿರೋ ಮೂರನೇ ಬಾಗಿಲಿನ ಮೇಲೆ ಮೂರು ಮೀನುಗಳಿವೆ !
We at the 3rd Entrance
 ಬೆಟ್ಟದ ಆಂಜನೇಯ: 
ಬೆಟ್ಟವನ್ನು ಹತ್ತೋ ಹೊತ್ತಿಗೆ ಸಣ್ಣ ಆಂಜನೇಯನ ಗುಡಿ ಸಿಗುತ್ತದೆ.  ಕೈಮುಗಿಯುವವರೆಲ್ಲಾ ಶೂ ಬಿಚ್ಚಿ ಜೈ ಹನುಮಾನ್ ಅಂದ್ರೆ ಕೈಮುಗಿಯಲಿಷ್ಟವಿಲ್ಲದವರು ಅಲ್ಲಿನ ಆಳೆತ್ತರದ ಹುಲ್ಲ ಮಧ್ಯ ಫೋಟೋ ಶೂಟ್ ನಡೆಸ್ತಾ ಇದ್ರು. ನಂತರ ಮುಂದುವರದ್ರೆ ಕೆಂಪೇಗೌಡರ ಕಾಲದ ಕೋಟೆಯ ಗುರುತುಗಳು, ಬುರುಜುಗಳು ಕಾಣುತ್ತದೆ.


Full Grasses in few places and a path beneath it

A group selfie during the Trek  

Stairs showing the way and making the path easier 

ಬೆಟ್ಟದ ಮಧ್ಯದ ಶಿವ ದೇಗುಲ: 
ಇನ್ನೊಂದು ಸ್ವಲ್ಪ ಬೆಟ್ಟ ಹತ್ತೋ ಹೊತ್ತಿಗೆ ಬೆಟ್ಟದ ಮಧ್ಯದಲ್ಲೊಂದು  ಮೇಲೆ ಹತ್ತೋ ಮೆಟ್ಟಿಲುಗಳೂ, ಆ ಮೆಟ್ಟಿಲ ಬುಡದಲ್ಲಿ ನಂದಿ ಮಂಟಪವೂ ಕಾಣುತ್ತೆ. ಆ ನಂದಿಗೆ ನಮಸ್ಕರಿಸಿ ಮೇಲೆ ಹತ್ತಿದರೆ ಅಲ್ಲೊಂದು ದೇಗುಲ ಕಾಣುತ್ತೆ. ಕೆಂಪೇಗೌಡರ ಕಾಲದಲ್ಲಿ ಕಟ್ಟಿದ ಆ ದೇಗುಲ ಪಾಳುಬಿದ್ದಿದ್ದರೂ ಅಲ್ಲಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಇದಕ್ಕೆ ಸೋಮವಾರ ಮತ್ತು ಶುಕ್ರವಾರಗಳಂದು ಪೂಜೆ ಸಲ್ಲಿಸಲಾಗುತ್ತದಂತೆ. ಅದರ ಎದುರಿಗೆ ಇರೋ ಹೊಂಡದಲ್ಲಿ ವರ್ಷಪೂರ್ತಿ ನೀರಿರುತ್ತೆ ಎಂದು ಇಲ್ಲಿನ ಜನ ಹೇಳುತ್ತಾರೆ. ಮಳೆಗಾಲದಲ್ಲಿ ಬಂದು ಸಂಗ್ರಹವಾಗೋ ನೀರು ಇಲ್ಲಿಂದ ಉಕ್ಕಿ ಹರಿದು ಕೆಳಗಿರೋ ಹಲವು ಹಳ್ಳಗಳಲ್ಲಿ ಸಂಗ್ರಹವಾಗುತ್ತೆ. ಈಗ ಮೇಲಿನ ನೈಸರ್ಗಿಕ ಪುಷ್ಕರಣಿಯಲ್ಲಿ ಮಾತ್ರ ಸ್ವಚ್ಛ ನೀರಿದ್ದರೂ ಕೆಳಗಿನ ಸಣ್ಣವುಗಳಲ್ಲಿ ನೀರು ಬತ್ತಿ ಹೋಗಿದೆ. ಕೆಲವುದರಲ್ಲಿ ನೀರಿದ್ದರೂ ಇಲ್ಲಿಗೆ ಬರೋ ಬೇಜವಾಬ್ದಾರಿ ಜನರು ಎಸೆದ ಪ್ಲಾಸ್ಟಿಕ್ ಬಾಟಲಿಗಳಿಂದ ಅವು ಕುಡಿಯಲಯೋಗ್ಯವಾಗಿವೆ !

Nandi at the Top of the Hill

Shiva Temple and the small pond infront of it . A portion of the pond goes beneath the rocks touching the base of temple ! 
A Nandi inside the temple 

One more pic near the Mantapa of the temple 
 ಬೆಟ್ಟದ ಮೇಲಣ ಪಾಳು ಮಂಟಪಗಳು: 
ದೇಗುಲದ ಸುತ್ತ ಬಂದರೆ ಅದರ ಆಚೆಯ ಬಂಡೆಯ ಮೇಲೆ ಹತ್ತೋಕೆ ಮೆಟ್ಟಿಲುಗಳನ್ನು ಕೆತ್ತಿರೋದು ಕಾಣಿಸುತ್ತೆ.
Observer Carefully at the Right corner to see the steps going to the other side of the Rock
ಮಂದಿರದ ಪಕ್ಕದಲ್ಲೇ ಸಾಗೋ ಹಾದಿಯಲ್ಲಿ ಸಾಗಿದರೆ ಸುಮಾರಷ್ಟು ಪಾಳು ಬಿದ್ದ ಮಂಟಪಗಳು, ಬುರುಜುಗಳು , ಕೋಟೆಯ ಕಾವಲುಗಾರರು  ಪಿರಂಗಿಯಿಡಬಹುದಾದ ಜಾಗಗಳು ಕಾಣುತ್ತದೆ.
One of the fallen mantapas 
Few more remains of a building 
ಅದರಲ್ಲಿ ಕೆಲವು ಹುಲ್ಲು ಮುಚ್ಚಿಕೊಂಡಿದ್ದರೂ ಪರಸ್ಪರ ಸಂಪರ್ಕಿಸಲ್ಪಡುವ ಕಲ್ಲ ಮೆಟ್ಟಿಲುಗಳಿಂದಲೋ, ಹುಲ್ಲ ಮಧ್ಯದ ಹಾದಿಯಿಂದಲೋ ಕೂಡಿದೆ. ಜನಕ್ಕೆ ಗೊಂದಲವುಂಟಾಗದಿರಲೆಂದು ಎಷ್ಟು ಚೆನ್ನಾಗಿ ಮೆಟ್ಟಿಲು ಕೆತ್ತಿದ್ದಾರೆಂದರೆ ಕೆಲವು ಕಡೆ ಮೂರೇ ಮೆಟ್ಟಿಲು, ಕೆಲವು ಕಡೆ ನಾಲ್ಕೈದು, ಕೆಲವು ಕಡೆ ಸಾಲು ಸಾಲು ಮೆಟ್ಟಿಲು.. ಹೀಗೆ ಮೆಟ್ಟಿಲುಗಳ ಹಾದಿ ಹಿಡಿದು ಹೊರಟರೆ ಎಲ್ಲೂ ಕಳೆದು ಹೋಗದಂತೆ ತುಂಬಾ ಚೆನ್ನಾಗಿ ಕೋಟೆ ಕಟ್ಟಿದ್ದಾರೆ ಇಲ್ಲಿ. ನಾನು ಇತ್ತೀಚೆಗೆ ಕಂಡ ಕೋಟೆಗಳಲ್ಲೇ ಅತ್ಯಂತ ಹೆಚ್ಚು ವ್ಯವಸ್ಥಿತವಾಗಿ ಯೋಜಿಸಿ ಕಟ್ಟಿದ ಕೋಟೆ ಇದಂದ್ರೆ ತಪ್ಪಾಗಲಾರದೇನೋ.

At one the view points 

A path to Descend 

A Group pic :-) 

one more group pic of the Guys . Don't ask me on where Rajanna is looking at ! 


ಕೋಟೆಯಂದ್ರೆ ಬರೀ ಕಲ್ಲಲ್ಲವಿಲ್ಲಿ: 
ಸಾಮಾನ್ಯವಾಗಿ ಕೋಟೆಯಂದ್ರೆ ಬರೀ ಕಲ್ಲು, ಹತ್ತು ಹತ್ತು ಹತ್ತೋದೇ ಆಗುತ್ತೆ ಅನ್ನೋದು ಸಾಮಾನ್ಯ ಭಾವನೆ. ಆದರೆ ಇಲ್ಲಿ ಹಾಗಲ್ಲ. ಒಂದೆಡೆ ಕೋಟೆಯ ಮೇಲೆ ಹತ್ತಿದ್ರೆ ಶಿವಾಲಯವಾದ ನಂತರ ಕೋಟೆಯಿಂದ ಕೆಳಗಿಳಿದು ಮತ್ತೆ ಹತ್ತೋಕೆ ಶುರು ಮಾಡ್ತೀವಿ ಇಲ್ಲಿ ! ಬೆಟ್ಟದ ಮೇಲಿಂದ ಜಾರಿ ಬೀಳದೆ ಹೇಗೆ ಪರಸ್ಪರ ಅಂಟಿಕೊಂಡಿವೆಯೋ ಎಂದು ಅಚ್ಚರಿ ಹುಟ್ಟಿಸುವ ಹಲವು ಬಂಡೆಗಳಿವೆಯಿಲ್ಲಿ. ಅಪರೂಪವೆನಿಸೋ ಪಾಪಾಸ್ ಕಳ್ಳಿಯ ಹೂವು, ಮುತ್ತುಗದ ಹೂ ಮೊದಲಾದ ಹೂಗಳು, ಕಾಮನ್ ಫೋರ್ ರಿಂಗ್, ಕಾಮನ್ ಕ್ರೋ, ಕಾಮನ್ ಟೈಗರ್ ಮುಂತಾದ ಚಿಟ್ಟೆಗಳೂ ಕಾಣಸಿಕ್ಕವು.
Cactus Flower
ಅಲ್ಲಲ್ಲಿ ಮರಗಳ ನೆರಳು, ಕೋಟೆ ಬಾಗಿಲ ನೆರಳು ಇರೋದರಿಂದ ಇಲ್ಲಿ ಬಿಸಿಲ ಕಾಟವೂ ಅಷ್ಟಿಲ್ಲ. ಹತ್ತೋದೂ ಹೆಚ್ಚಿಲ್ಲದ ಕಾರಣ ಸುತ್ತಲ ಪ್ರಕೃತಿಯ ಸೌಂದರ್ಯ ಸವಿಯುತ್ತಾ, ಫೋಟೋ ತೆಗೆಯುತ್ತಾ ಕೋಟೆಯನ್ನು ಏರಬಹುದಿಲ್ಲಿ. ಹತ್ತಿಳಿಯೋದು, ಅಲ್ಲಿದ್ದಿದ್ದು ಎಲ್ಲಾ ಸೇರಿ ಸುಮಾರು ಮೂರೂವರೆ ಘಂಟೆಗಳ ಕಾಲ ನಾವಿದ್ದವಿಲ್ಲಿ. ಕೆಲವರು ರಾತ್ರೆಯೇ ಬಂದು ಸೂರ್ಯೋದಯವ ಸವಿದು ಬೆಳಗ್ಗೆ ಮುಂಚೆ ತೆರಳೋದೂ ಇದೆ.  ಸಂಜೆಗೆ ಮನೆಗೆ ಮರಳಿದ ನನ್ನ ನೆನಪುಗಳು ಮಾಸುವ ಮುನ್ನ ಪದಗಳಾಗಿ ನಿಮ್ಮ ಮುಂದೆ ಅರಳೋ ಪ್ರಯತ್ನದಲ್ಲಿವೆ. ಮತ್ತೊಂದು ಚಾರಣದ್ದೋ ಪ್ರವಾಸದ್ದೋ ನೆನಪುಗಳೊಂದಿಗೆ ಮತ್ತೆ ಭೇಟಿಯಾಗೋಣ ಎಂಬ ನಿರೀಕ್ಷೆಯಲ್ಲಿ ಸದ್ಯಕ್ಕೊಂದು ವಿರಾಮ.




Our Group completing the Trek 

No comments:

Post a Comment