Wednesday, July 10, 2019

ಕಳೆದು ಹೋದ ಕತೆ

ಮನೆಯ ಹಿತ್ತಲ ಹಳ್ಳದಲ್ಲಿ ನೀರುಕ್ಕಿದೆ ಪ್ರಭು ಅಂತ ಅಮ್ಮ ಹೇಳ್ತಾ ಇದ್ರೆ ಬೆಂಗಳೂರಲ್ಲಿರೋ ಮಗನ ಕಣ್ಣಲ್ಲಿ ಏನೋ ಪುಳಕ. ಪಕ್ಕದ ಮನೆಯವ ಬೋರು ತೆಗೆಸಿದ ದಿನದಿಂದಲೇ ಬತ್ತಿ ಹೋಗಿದ್ದ ಅಕ್ಕಿಹೊಳೆ ಜೋರು ಮಳೆಗಾಲದಲ್ಲೆಲ್ಲಾದರೂ ಒಮ್ಮೊಮ್ಮೆ ತನ್ನ ಇರುವಿಕೆಯನ್ನು ಸಾರುತ್ತಿತ್ತು. ಒಂದಾನೊಂದು ಕಾಲದಲ್ಲಿ ನದಿಯಿತ್ತು ಎಂಬ ಕುರುಹನ್ನೇ ಬಿಡದಂತೆ ನದೀಪಾತ್ರವನ್ನು ಒತ್ತುವರಿ ಮಾಡಿ ಬೆಳೆಸಿದ ಗದ್ದೆಗಳ ಮೇಲೆ ಹರಿದು, ಸ್ವಲ್ಪ ಹೊತ್ತು ನಿಂತಿದ್ದು ನಂತರ ಹರಿಯುವಿಕೆಯನ್ನು ಮುಂದುವರಿಸುತ್ತಿದ್ದಳು ಅಕ್ಕಿಹೊಳೆ. ಮುಂಚೆಯೆಲ್ಲಾ ಮಳೆಗಾಲದ ಹಲವು ದಿನ ದೂರದೂರದ ಗದ್ದೆಗಳ ಮೇಲೂ ಅಕ್ಕಿಹೊಳೆ ನಿಂತಿರುತ್ತಿದ್ದಳಂತೆ. ಆಕೆಯ ರಭಸಕ್ಕೆ ಊರ ಸಂಪರ್ಕಿಸೋ ಸೇತುವೆ ಮುಳುಗಿ , ಗದ್ದೆಯೇರುಗಳೆಲ್ಲಾ ಕೊಚ್ಚಿ ಹೋಗುತ್ತಿದ್ದವಂತೆ. ಅಕ್ಕಿಹೊಳೆ ತುಂಬಿದಳು ಅಂದರೆ ಸಂಪರ್ಕಸೇತುವೇ ಮುಳುಗೋದ್ರಿಂದ ಮಕ್ಕಳಿಗೆಲ್ಲಾ ಖುಷಿಯೋ ಖುಷಿ. ಶಾಲೆಯ ಪಾಠಿ ಚೀಲಗಳನ್ನು ಬದಿಗೆಸೆದು,ಕಂಬಳಿ ಕೊಪ್ಪೆಗಳ ಜಗುಲಿಗಿಟ್ಟು ಇಡೀ ದಿನ ಅಜ್ಜಿ ಜೊತೆ ಆಡುತ್ತಿದ್ದ ಪಗಡೆಯೇನು, ಅಮ್ಮನ ಹಿಂದೆ ಬಿದ್ದು ತಿನ್ನುತ್ತಿದ್ದ ಹಪ್ಪಳ, ಚಿಪ್ಸುಗಳೇನು .. ಆಹಾ ? ಅದೇ ಸ್ವರ್ಗ . ಬಿಟ್ಟರೆ ಹೊರಗೆ ಮಳೆಯಲ್ಲೇ ಆಡಿಬಿಡುತ್ತಿದ್ದರೇನೋ . ಮಳೆ ಸ್ವಲ್ಪ ನಿಂತ ಮೇಲೆ ಮರಗಳಿಂದ ತೊಟ್ಟಿಕ್ಕೋ ಹನಿಗಳ ಜೊತೆ ಆಡೋದೋ ? ಅಪ್ಪನ ಇಂಗುಗುಂಡಿಗಳು ತುಂಬ್ತಾ ಇಲ್ವಾ ನೋಡೋದು ? ಚಿಗುರ್ತಿರೋ ಹುಲ್ಲುಗಳ ನಡುವೆ ರೇಷ್ಮೆ ಹುಳವೇನಾದ್ರೂ ಸಿಗಬಹುದಾ ಎಂಬ ಹಲವು ಆಸೆಗಳ ನಡುವೆ ಬೆಚ್ಚಗೆ ಕಂಬಳಿ ಕೊಪ್ಪೆ ಹೊದೆದು ತುಂಬಿ ಹರಿಯೋ ಅಕ್ಕಿಹೊಳೆಯ ಸೌಂದರ್ಯ ನೋಡೋ ಆಸೆ ಬೇರೆ. ಆದರೇನು ಮಾಡೋದು ? ಅಪ್ಪನ ಕಣ್ಣು ತಪ್ಪಿಸಿ ಹೊರ ಹೊರಟರೂ ಎದುರಿಗೆ ಯಾರಾದ್ರೂ ಸಿಕ್ಕು ಬಯ್ಯಬೇಕೇ ? ಮಾತುಗಳು ಏಟಾಗೋ ಮುಂಚೆ ಒಳಸೇರೋದು ಬುದ್ದಿವಂತಿಕೆ ಅಂತ ಹಿಂದಿನ ಅನುಭವಗಳು ಹೇಳ್ತಿದ್ವು.

ನಿಧಾನವಾಗಿ ಬಾಲ್ಯ ಕರಗಿ ಓದು, ಹೊಟ್ಟೆಪಾಡಿಗಂತ ಮಕ್ಕಳೆಲ್ಲಾ ಪಟ್ಟಣ ಸೇರೋ ಹೊತ್ತಿಗೆ ಅಕ್ಕಿಹೊಳೆಯೂ ಕರಗಿ ಹೋಗಿದ್ದಳು. ಇಂದು ದಿನಗಟ್ಟಲೇ ಗದ್ದೆಗಳ ಮೇಲೆ ತುಂಬಿ ಹರಿಯೋದು, ಸೇತುವೆ ಮುಳುಗೋದು, ಅದಕ್ಕಾಗಿ ಶಾಲೆಗೆ ರಜಾ ಕೊಡೋದು ಎಲ್ಲಾ ನೆನಪು ಪಾತ್ರ. ಎತ್ತಿನ ಹೊಳೆ ಯೋಜನೆ ಎಂದ ಸರ್ಕಾರ, ಶರಾವತಿಯ ಬುಡಕ್ಕೂ ಕೈ ಹಾಕೋಕೆ ಹೋಗಿತ್ತು. ಎಲ್ಲೋ  ಶರಾವತಿಗೆ ಸೇರೋ ಅಕ್ಕಿಹೊಳೆಗೆ ಶರಾವತಿಯೇ ಇಲ್ಲದಿದ್ದರೆ ಏನಾದೀತು ? ಶರಾವತಿಯಂತ ನದಿಗಳಿಂದ ಹಸಿರ ಸಿರಿಗೆ ಮತ್ತು ವಾತಾವರಣಕ್ಕೆ ಸಿಕ್ಕ ನೀರಿನಂಶನಿಂದ ಕೆಲದಿನಗಳಾದರೂ ಜೀವಂತವಿರೋ ಅಕ್ಕಿಹೊಳೆಯಂತ ತೊರೆಗಳ ಕತೆ ಈ ಮಂಗಾಟಗಳಿಂದ ಏನಾಗಬಹುದು ಎಂಬ ಚಿಂತೆ ಪ್ರಭುವಿಗೆ ದಿನೇ ದಿನೇ ಕಾಡುತ್ತಿತ್ತು.  ಹೆಚ್ಚುತ್ತಿರೋ ಭೂತಾಪ ಮತ್ತು ಜನರ ದುರಾಸೆಗಳಿಂದ ವರ್ಷದ ಕೆಲ ದಿನಗಳಲ್ಲಿ ಮಾತ್ರ ಬದುಕಿರೋ ಅಕ್ಕಿಹೊಳೆಯಂತಹ ಜೀವ ತೊರೆಗಳು ಮುಂದೆ ಶಾಶ್ವತವಾಗಿ ಬತ್ತಿ ಹೋಗಬಹುದೇನೋ ಎಂಬ ದಿಗಿಲೂ ಶುರುವಾಯ್ತು.

ಆಫೀಸು, ಟ್ರಾಫಿಕ್ಕು, ಡೆಡ್ಲೈನುಗಳೆಂಬ ಚಿಂತೆಗಳಲ್ಲೇ ರಾತ್ರಿಯಾಗಿ , ಬೆಳಗಾದರೆ ಕ್ಲೈಂಟು, ಬಾಸು ಯಾವ ವಿಷಯಕ್ಕೆ ಬೈತಾರೋ ಎಂಬ ಭಯಗಳಲ್ಲೇ ಬೆಳಗಾಗುತ್ತಿತ್ತು ಪ್ರಭುವಿಗೆ. ಬೆಳಗಾದರೆ ಶುರುವಾಗೋ ಕೆಲಸಗಳ ಲೆಕ್ಕ ವಾರಾಂತ್ಯ ಬಂದರೂ ಚುಕ್ತವಾಗುತ್ತಿರಲಿಲ್ಲ. ಇಂತಹದರಲ್ಲಿ ಬಂದ ಅಮ್ಮನ ಕರೆ ಪ್ರಭುವನ್ನ ಬಡಿದೆಬ್ಬಿಸಿತ್ತು. ಇಲ್ಲಿರೋದು ಸುಮ್ಮನೇ, ಅಲ್ಲಿರೋದು ನಮ್ಮನೆ ಅಂತ ಬಂದ ವಾರಾಂತ್ಯದಲ್ಲಿ ಮನೆಗೆ ಹೋಗೋ ಕನಸು ಕಾಣಹತ್ತಿದ.

ಮನೆಗೆ ಹೋಗೋಕೆ ರೈಲು ಬುಕಿಂಗ್ ಸಿಕ್ಕೋಲ್ಲ. ತತ್ಕಾಲಲ್ಲಿ ಬುಕ್ ಮಾಡ್ಕೋಳ್ಳೋಕೆ ಅದೇ ಸಮಯದಲ್ಲಿ ದಿನಾ ಮೀಟಿಂಗ್ ಇರುತ್ತೆ. ಪ್ರೈವೇಟ್ ಬಸ್ಸಿಗೆ ಹೋಗೋಣ ಅಂದ್ಕೊಂಡ್ರೆ ಅವ್ರು ಹೇಳಿದ ಸಮಯಕ್ಕೆ ಹೊರಡೋಲ್ಲ, ಕಾಯಿಸಿ ಕಾಯಿಸಿ ಜೀವ ತಿಂತಾರೆ. ಸರ್ಕಾರಿ ಬಸ್ಸಿಗೆ ಹೋಗೋಣ ಅಂದ್ಕೊಂಡ್ರೆ ಮೆಜೆಸ್ಟಿಕ್ವರೆಗೆ ಹೋಗೋದೇ ಸಮಸ್ಸೆ. ಬೈಕಲ್ಲಾದರೂ ಹೋಗೋಣ ಅಂದ್ರೆ ಅಷ್ಟು ದೂರ ಯಾರಾದ್ರೂ ಹೋಗ್ತಾರೆ ಅನಿಸುತ್ತೆ. ಸರಿ ರೈಲಿಗೆ ಹೋಗೋಣ ಆರಾಮಾಗಿ ಅಂದರೆ... ಅಂತ ಎಂದೂ ಮುಗಿಯದ ಗೊಂದಲ ವರ್ತುಲಕ್ಕೆ ಬೀಳ್ತಿದ್ದ ಮನಸ್ಸಿಗೆ ಹೆಂಗೋ ಸಮಾಧಾನ ಮಾಡಿ ಸಿಕ್ಕಿದ ಬಸ್ಸಿಗೆ ಹೆಂಗೋ ಹೊರಟರಾಯ್ತು ಅಂತ ಮೆಜೆಸ್ಟಿಕ್ಕಿಗೆ ಹೊರಟಿದ್ದ. ಅಲ್ಲಿಗೆ ಬರೋ ಹೊತ್ತಿಗೆ ಊರ ಕೆಂಪ ಬಸ್ಸೇ ಸಿಗಬೇಕೇ ? ಹೊರಡೋದು ೨೦ ನಿಮಿಷ ಆಗುತ್ತೆ ಅಂದರೂ ಪರವಾಗಿಲ್ಲವೆಂದು ಹತ್ತಿ ಟಿಕೇಟು ಮಾಡಿಸಿದವಗೆ ಸೀಟಲ್ಲಿ ಒರಗಿದ್ದೊಂದೇ ಗೊತ್ತು.

ಅದೆಷ್ಟು ಹೊತ್ತು ಹಾಗೇ ಮಲಗಿದ್ದನೋ ಗೊತ್ತಿಲ್ಲ. ಯಾಕೋ ಕಾಲು, ಮೈಯೆಲ್ಲಾ ಒದ್ದೆಯಾದಂತೆನಿಸಿ ಕಣ್ಣು ಬಿಟ್ಟರೆ ಎಲ್ಲೋ ಗಟ್ಟಿ ವಸ್ತುವೊಂದರ ಮೇಲೆ ಮಲಗಿದ್ದ ಪ್ರಭು! ಕೈಕಾಲುಗಳಿಗೆ ತಾಕುತ್ತಾ ಹರಿಯುತ್ತಿದೆ ನೀರು !  ಹಿಂದಿನ ರಾತ್ರಿ ಬಸ್ಸು ಹತ್ತಿದ್ದೆನಲ್ಲಾ , ಈಗ ಇಲ್ಲಿಗೆ ಹೇಗೆ ಬಂದೆ ಅಂತ ಒಮ್ಮೆ ಯೋಚಿಸಿದನಾದರೂ ಏನೂ ನೆನಪಾಗುತ್ತಿಲ್ಲ. ತಾನು ಎಲ್ಲಿದ್ದೇನೆ,ಎಂತ ಕತೆ ಎಂದು ನೋಡೋಣವೆಂದರೆ ಸುತ್ತಲು ಕತ್ತಲಷ್ಟೆ. ಅತ್ತಲಿತ್ತ , ಎಲ್ಲೆಡೆಗೂ ನೀರೇ ನೀರು. ಮೇಲ್ಗಡೆ ಕಣ್ಣು ಹಾಯಿಸಿದರೆ ಸಗಣಿ ಹಾಕಿ ಸಾರಿಸಿದ ಕರಿಯಂಗಳದ ಮೇಲೆ ರಂಗೋಲಿಗೆ ಚುಕ್ಕಿಯಿಟ್ಟಂತೆ ತಾರೆಗಳು.ಮಧ್ಯದಲ್ಲೆಲ್ಲೋ ರಂಗೋಲಿ ಬಟ್ಟಲಿಟ್ಟಂತೆ ಚಂದ್ರ. ಆಗಾಗ ವಟರುಗುಟ್ಟೋ ಕಪ್ಪೆ ಮತ್ತು ಜೀಂಕರಿಸೋ ಜೀರುಂಡೆಗಳ ಸದ್ದು, ಹರಿಯೋ ನೀರಿನ ಸದ್ದು ಬಿಟ್ಟರೆ ಬೇರೇನೋ ಕೇಳದ ನೀರವ ರಾತ್ರಿ. ಅತ್ತ ಇತ್ತ ದಿಟ್ಟಿಸುತ್ತಿದ್ದ ಪ್ರಭುವಿಗೆ ಆ ಇರುಳ ಚಂದ್ರನ ಬೆಳಕಲ್ಲಿ ತಾನು ಮಲಗಿರೋದು ನೀರ ಮಧ್ಯದ ಬಂಡೆಯ ಮೇಲೆ ಅಂತ ತಿಳಿಯಹತ್ತಿತು. ಆದರೆ ಅಲ್ಲಿಂದ ದಡಕ್ಕೆ ಹೋಗೋಣ ಎಂದರೆ  ರಾತ್ರಿಯ ಮಂಜಲ್ಲಿ, ಮಸುಕು ಬೆಳಕಲ್ಲಿ ಹತ್ತಿರದಲ್ಲೇನೂ ದಡ ಕಾಣಿಸುತ್ತಿಲ್ಲ. ಕೈಕಾಲುಗಳನ್ನ ನೀರಿಂದ ಸ್ವಲ್ಪ ಕೆಳಗೆ ಹಾಕಿ ನೋಡಿದರೂ ಯಾವ ನೆಲವೂ ಸಿಗುತ್ತಿಲ್ಲ ! ಅಲ್ಪ ಸ್ವಲ್ಪ ಈಜು ಬಂದರೂ ಎತ್ತಲಂತ ಈಜೋದು ಗೊತ್ತು ಗುರಿಯಿಲ್ಲದೇ ? ಕೈಕಾಲುಗಳಷ್ಟೇ ಅಲ್ಲ, ತಲೆ, ಮೈಯೂ ಒದ್ದೆಯಾಗಿದೆ ಅಂತ ಗೊತ್ತಾದರೂ ಏನೂ ಮಾಡಲಾಗದ ಪರಿಸ್ಥಿತಿ. ಒಂದೆಡೆ ಮಂಜ ತಂಪು. ಮತ್ತೊಂದೆಡೆ ಹರಿವ ನೀರು ನೆನೆಸಿದ ತಂಪು. ಎರಡೂ ಸಾಲದೆಂಬಂತೆ ಇನ್ನಷ್ಟು ಚಳಿ ಹುಟ್ಟಿಸುವಂತಿರುವ ಬಂಡೆ ಬೇರೆ ! ಆದರೆ ಆ ಬಂಡೆ ಬಿಟ್ಟಿಳಿದರೂ ಎಲ್ಲಿಳಿಯೋದು ? ಹೋದರೂ ಎಲ್ಲಿಗೆ ಹೋಗೋದು ? ಬೆಳಕಾಗೋವರೆಗೆ ಕಾಯೋಣವೆಂದರೂ ಇನ್ನೆಷ್ಟು ಹೊತ್ತು ಕಾಯೋದು ? ಒಮ್ಮೆ ಟೈಟಾನಿಕ್ ಸಿನಿಮಾ ನೆನಪಿಗೆ ಬಂತು ಪ್ರಭುಗೆ. ಹಿಮಬಂಡೆಗೆ ಡಿಕ್ಕಿ ಹೊಡೆದ ಹಡಗಿನಲ್ಲಿ ನಾಯಕ ನಾಯಕಿಗೋಸ್ಕರ ಚಳಿಯ ನೀರಿನಲ್ಲೇ ರಾತ್ರಿಯವರೆಗೂ ಕಳೆಯುತ್ತಾ ಸಾಯೋದು ನೆನಸಿ ತನಗೂ ಅದೇ ಕತೆ ಬರುತ್ತಾ ಅಂತನಿಸ್ತು. ಆ ಆಲೋಚನೆಯೇ ಗಾಬರಿ ಹುಟ್ಟಿಸಿದ್ರೂ ಮರು ಕ್ಷಣದಲ್ಲೇ ನನಗೆಲ್ಲಿಯ ಹುಡುಗಿ, ನಾ ನೀರ ಕೆಳಗೆಲ್ಲಿದ್ದೇನೆ? ಇರೋದು ಬಂಡೆಯ ಮೇಲಲ್ವಾ ? ಬೆಳಗೊರಿಗೆ ಕಾದರೆ ನನ್ನ ಕೈಕಾಲು ಮರಗಟ್ಟಿದ್ರೂ ಸಾವೇನೂ ಬರೋಲ್ಲ ಅನ್ನೋ ಭರವಸೆ ಮೂಡಿತು !  ಆದ್ರೂ ಕೈಕಾಲು ಮರಗಟ್ಟೋದು ಅಂದ್ರೆ .. ? ಮೇರು ಅನ್ನೋ ಡಾಕ್ಯುಮೆಂಟರಿ ಚಿತ್ರ ನೋಡುತ್ತಾ ಅದರಲ್ಲಿ ಹಿಮಾಲಯದ ಮೇರು ಅನ್ನೋ ದುರ್ಗಮ ಪರ್ವತ ಏರೋಕೆ ಹೋಗಿ ಹಿಮಪಾತಕ್ಕೆ ಸಿಲುಕಿ ಕೈಕಾಳು ಮರಗಟ್ಟೋ ಸ್ಥಿತಿಯಲ್ಲಿ ಸ್ನೇಹಿತರು ಸಿಕ್ಕಿ ಹಾಕಿಕೊಳ್ಳೋದು, ನಂತರ ದೈವ ದಯದಿಂದ ಬೇರೊಂದು ಚಾರಣಿಗರ ಸಹಾಯದಿಂದ ಅವರು ಬದುಕಿ ಬರೋದು ನೆನಪಾಗುತ್ತೆ ! ತನಗೂ ಅಂತಹ ಸ್ಥಿತಿ .. ? ಛೆ. ಛೆ. ಹಾಗೇನೂ ಆಗಲಾರದು ಎಂಬ ಸಮಾಧಾನ ಮರುಕ್ಷಣ.. ತುಸು ಹೊತ್ತಿಗೆ ಅಲ್ಲಿ ಹಾರಿಹೋಗೋ ಬಾವಲಿಗಳ ಹಿಂಡು ಕಂಡು ಮತ್ತೇನೋ ಆಲೋಚನೆ.. ಅಲ್ಲಿದ್ದ ಪರಿಸ್ಥಿತಿಗಳಿಗಿಂತ ತನ್ನ ಆಲೋಚನಾಲಹರಿಯೇ ತನ್ನ ಜಾಸ್ತಿ ಕಾಡುತ್ತಾ ಇದೆಯಾ ಅನ್ನೋ ಅನುಮಾನ ಶುರುವಾಯ್ತು ಪ್ರಭುವಿಗೆ.

ಯಾವುದೋ ಚಾರಣಕ್ಕೆ ಬಂದ ಸಂದರ್ಭದಲ್ಲಾದರೆ ಈ ತರಹ ಸಿಕ್ಕ ಜಾಗವನ್ನ ಆಸ್ವಾದಿಸುತ್ತಾ ರಾತ್ರಿಯೆಲ್ಲಾ ಅಲ್ಲಿಯೇ ಕಳೆದು ಬಿಡುತ್ತಿದ್ದನೇನೋ  ಪ್ರಭು. ಆದರೆ ಈಗ ತಾನೆಲ್ಲಿದ್ದೇನೆ , ಹೇಗೆ ಬಂದೆ ಎಂಬುದೇನೂ ಅರಿಯದ ಗೊಂದಲದಲ್ಲಿ ಅವ್ಯಕ್ತ ಭಯ ಕಾಡೋಕೆ ಶುರುವಾಗಿತ್ತು ಪ್ರಭುವಿಗೆ. ಮೊದಲು ಚೆಂದವೆನಿಸಿದ್ದ ಶಶಿಯ ಬಳಗವೇ ಈಗ ಬೇಸರವೆನಿಸಿತ್ತು. ಈ ತಾರೆಯೇಕೆ ಇಷ್ಟು ಮಿನುಗುತ್ತೆ ? ಈ ಚಂದ್ರನೇಕೆ ಮೋಡದ ಮರೆಗೆ ಹೋಗಿ ನನಗೆ ಮಲಗೋಕೆ ಬಿಡೋಲ್ಲ. ಇನ್ನೇನು ನಿದ್ರೆ ಹತ್ತಿತು ಅನ್ನೋ ಹೊತ್ತಿಗೆ ಈ ಉಲ್ಕೆಯೇಕೆ ಮೈಮೇಲೇ ಬೀಳುವಂತೆ ಬಂದು ಬೀಳುತ್ತೆ ? ಈ ಬಾವಲಿ ಹಿಂಡು ಈಗಲೇ ಹಾರಬೇಕಾ ಅನಿಸತೊಡಗಿತ್ತು. ಆದರೆ ಈ ಪ್ರಶ್ನೋತ್ತರಗಳ ನಡುವೆ ತನ್ನೂರ ಅಕ್ಕಿಹೊಳೆ ನೆನಪಾಗಿ ಕೊಂಚ ಹಿತವೆನಿಸತೊಡಗಿತು. ಅಕ್ಕಿಹೊಳೆಯಲ್ಲಿ ನೀರಿಳಿಯುತ್ತಿದ್ದ ಬೇಸಿಗೆಯಲ್ಲಿ ಅದರಲ್ಲಿ ಈಜುತ್ತಿದ್ದುದು , ನೀರು ಕಮ್ಮಿ ಅಂದುಕೊಂಡು ಕಾಲಿಟ್ಟಲ್ಲಿ ಕಾಲು ಹುಗಿದು ಮುಳುಗೋಗಾಕಿ ಈಜಿದ್ದು, ನೀರು ಹೆಚ್ಚಿರಬಹುದು ಅಂತ ಈಜೋಕೆ ಹೋಗಿ ಕೈಯನ್ನು ಬಂಡೆಗೆ ಹೊಡೆಸಿಕೊಂಡಿದ್ದು ನೆನಪಾಗಿ ನಗು ಬರುತ್ತಿತ್ತು. ಅಕ್ಕಿಹೊಳೆಯಲ್ಲಿ ಈಗ ಸ್ವಚ್ಛ ಬಿಳಿ ನೀರಿರಬಹುದೇ ಅಥವಾ ಮೊದಲ ಮಳೆಯ ಕೆಂಪಿರಬಹುದೇ ಅನ್ನೋ ಕುತೂಹಲ. ಅದನ್ನೆಲ್ಲಾ ಕೇಳಲೇ ಇಲ್ಲವಲ್ಲ ಅಮ್ಮನ ಹತ್ತಿರ ಛೇ ಅನ್ನಿಸ್ತು! ನಗರದಲ್ಲಿ ಪ್ರತಿಭಟನೆ ಮಾಡಿದ್ರಂತೆ, ಶಿವಮೊಗ್ಗ ಬಂದಂತೆ ನಾಳೆ ಶರಾವತಿಯ ಪ್ರತಿಭಟನೆಗೆ ಅಂತ ನೆನಪಿಗೆ ಬಂತು. ಇಲ್ಲೆಲ್ಲೋ ನೀರ ಮಧ್ಯ ಮಲಗಿಕೊಂಡ್ರೂ ಅಕ್ಕಿಹೊಳೆ ನೆನಪಾಗ್ತಿದೆಯಲ್ಲೋ ನಿನಗೆ ಹುಚ್ಚಪ್ಪಾ ಅಂತ ಒಂದು ಮನಸ್ಸು ಲೇವಡಿಯಾಡಿದ್ರೂ ಸದ್ಯದ ಪರಿಸ್ಥಿತಿಯ ತೊಂದರೆಗಳ ಬಗೆಗಿನ ಯೋಚನೆಗಳಿಗಿಂತ ಅಕ್ಕಿಹೊಳೆಯ ನೆನಪುಗಳೇ ಮಧುರ ಅನ್ನಿಸಿ ಮನಸ್ಸನ್ನು ಮತ್ತೆ ಅತ್ತಲೇ ಹೊರಳಿಸಿದ ಪ್ರಭು. ಮತ್ತೆ ನಿದ್ದೆ ಹತ್ತಿತು ಅಂತ ಕಾಣಿಸುತ್ತೆ.

ಅದೆಷ್ಟೋ ಹೊತ್ತಾದ ನಂತರ ಎಲ್ಲೋ ಸ್ವಲ್ಪ ಬೆಳಕು ಕಂಡಂತೆ ಆಯ್ತು. ಅಂತೂ ಬೆಳಕಾಯ್ತಾ ಅಂತ ಕಣ್ಣು ಬಿಡೋ ಪ್ರಯತ್ನದಲ್ಲಿರುವಾಗ ಅಂಬಿಗನೊಬ್ಬ ತನ್ನ ತೆಪ್ಪದಲ್ಲಿ ನಿಂತು ತನ್ನತ್ತ ಕೈ ಮಾಡಿ ತನಗೆ ಏನೋ ಹೇಳುತ್ತಿರುವಂತೆ ಭಾಸವಾಯ್ತು. ಕ್ರಮೇಣ ಆ ಅಂಬಿಗನ ಆಕೃತಿ ಹತ್ತಿರವಾಗ್ತಾ ಬಂದ್ರೂ ಆತ ಏನು ಹೇಳ್ತಿದ್ದಾನೆ ಅನ್ನೋದು ಸ್ವಷ್ಟವಾಗ್ತಿರಲಿಲ್ಲ. ಅಂತೂ ನನ್ನ ಸಹಾಯಕ್ಕೆ ಬಂದ್ರಾ ಥ್ಯಾಂಕ್ಸ್ ಅಂತ ತಾನೇ ಮೊದಲು ಮಾತಿಗೆ ಶುರು ಮಾಡಿದ ಪ್ರಭು, ಥ್ಯಾಂಕ್ಸಾ ಅಂದ ಅಂಬಿಗ. ಏನಪ್ಪಾ ಅಂತ ಮತ್ತೆ ಕಣ್ಣು ಮಿಟಿಕಿಸೋವಷ್ಟರಲ್ಲಿ  ಥ್ಯಾಂಕ್ಸ್ ಏನು ಸಾರ್ ? ಇದೇ ಕೊನೆ ಸ್ಟಾಪು ಏಳಿ. ಬಸ್ಸಲ್ಲಿರೋರೆಲ್ಲಾ ಇಳ್ದಾಯ್ತು. ನಿಮ್ಮನ್ನಿಳಿಸಿ , ಬಸ್ಸನ್ನ ಡಿಪೋಗೆ ಹಾಕಿ ನಾವೂ ಮಲ್ಕೋಬೇಕು , ಏಳೇಳಿ ಬೇಗ ಅಂದ ಎದುರಿದ್ದವ. ಡಿಪೋನ ಅನ್ನೋ ಹೊತ್ತಿಗೆ ಕಣ್ಣ ಮುಂದಿದ್ದ ಅಂಬಿಗನ ಚಿತ್ರಣ ಬದಲಾಗುತ್ತಾ ಆತ ಖಾಕಿ ಬಣ್ಣ ಧರಿಸಿದ್ದ ಹಿಂದಿನ ರಾತ್ರಿ ಟಿಕೇಟ್ ಕೊಟ್ಟ ಕಂಡೆಕ್ಟರ್ ಆಗಬೇಕೇ ? ! ಎಲ್ಲಿ ಅಂಬಿಗ, ಎಲ್ಲಿ ಕಂಡೆಕ್ಟರ್ ಅಂತ ಅಂದ್ಕೊಳ್ಳೋ ಹೊತ್ತಿಗೆ, ಸಾರ್, ಏಳಿ ಬೇಗ ಅಂತ ಕೈಹಿಡಿದು ಎಬ್ಬಿಸೋಕೆ ಬಂದನವ. ಬಂದವನೇ ಒದ್ದೆಯಾಗಿದ್ದ ಸೀಟು, ಸ್ವಲ್ಪ ಒದ್ದೆಯಾಗಿದ್ದ ಬಲತೋಳು ನೋಡಿ, ಸಾರ್ ನಿಮಗೆ ಇನ್ನೂ ನಿದ್ದೆಗಣ್ಣು ಅನಿಸುತ್ತೆ. ನಿದ್ದೆ ಭರದಲ್ಲಿ  ನಿನ್ನೆಯ ಮಳೆಗೆ ಕಿಟಕಿ ಸ್ವಲ್ಪ ತೆರೆದು ಒಳಗೆ ನೀರು ನುಗ್ಗಿದ್ದೂ ಗೊತ್ತಿಲ್ಲ, ನಿಮ್ಮ ಮೈ ತೋಳು ಒದ್ದೆಯಾಗಿದ್ದೂ ಗೊತ್ತಿಲ್ಲ. ಒಳ್ಳೆ ನಿದ್ದೆ ನಿಮ್ಮದು ಅಂತಿದ್ರೆ ಡ್ರೈವರು ಹಿಂದೆ ತಿರುಗಿ ಹೆ ಹೆ ಹೆ ಅಂತಿದ್ದ. ಹೌದಾ ಅಂತ ಸುತ್ತ ತಿರುಗಿದ್ರೆ ಪಕ್ಕದಲ್ಲಿದ್ದ ನೀರೂ ಇಲ್ಲ, ಕೆಳಗೆ ಬಂಡೆಯೂ ಇಲ್ಲ. ತಾನಿದ್ದಿದ್ದು ಬಸ್ಸ ಸೀಟ ಮೇಲೇ ಅಂತ ಪ್ರಭುವಿಗೆ ಅರಿವಾಗ್ತಿತ್ತು. ಮೇಲೆ ನೋಡಿದ್ರೆ ಆಕಾಶದ ಬದಲು ಬಸ್ಸ ಟಾಪು ! ಹಂಗಾದ್ರೆ ಇಷ್ಟರವರೆಗೆ ತನಗಾದದ್ದು  ? !! ಮೇಲೆ ಕಣ್ಣು ಹಾಯಿಸುವ ಹೊತ್ತಿಗೆ ಕೈಗೆ ಸಿಕ್ಕ ತನ್ನ ಬ್ಯಾಗು ತೆಗೆದುಕೊಂಡು ಕೆಳಗಿಳಿದ ಪ್ರಭು. ಕೆಂಪಿ ಬಸ್ಸು ಮಂಜ ಸೀಳುತ್ತಾ ಮುನ್ನಡೆದರೂ ಬೆಳಕಾಗದ ಪ್ರಭುವಿನ ಮನಸ್ಸಿನಲ್ಲಿ ಪ್ರಶ್ನೋತ್ತರಗಳ ದೊಂಬರಾಟ ಮುಂದುವರೆದಿತ್ತು ! 
x

No comments:

Post a Comment