Tuesday, May 4, 2021

ಸೊಳ್ಳೆ ಪುರಾಣ

ಬಾಲ್ಯದ ಕೆಲವು ದಿನಗಳಲ್ಲಿ ಸಂಜೆಯಾಯ್ತು ಅಂದ್ರೆ ಗುಯ್  ಅಂತ ಮನೆಗೊಂದಿಷ್ಟು ನೆಂಟರ ಎಂಟ್ರಿ. ಬಂದಿದ್ದು ನೆಂಟರಾದ್ರೂ ಕಜ್ಜಾಯ ಸಿಗ್ತಿದ್ದಿದ್ದು ನಮಗೆ ! ಕಿಟಕಿ ಹಾಕು ಅಂದ್ರು ಹಾಕಿಲ್ಲ, ಈಗ ನೋಡು ಸೊಳ್ಳೆ ಬಂತು ಅಂತ ಶುರುವಾಗೋ ಬೈಗುಳಗಳಿಗೆ ಆ ಸೊಳ್ಳೆಗಳನ್ನು ಹುಡುಕಿ ಕೊಲ್ಲೋವರೆಗೆ ಮಂಗಳವಿಲ್ಲ. ಸೊಳ್ಳೆಗಳು ಅಮ್ಮನ ಬೈಗುಳಕ್ಕೆ ಹೆದರಿ ನಮ್ಮ ಕೈಗೆ ಸಿಗ್ತಿದ್ವಾ ಅಥವಾ ನಾವೇ ಸೊಳ್ಳೆಗಳಿಗಿಂತ ಪ್ರಚಂಡ ಹಾರಾಟ ನಡಿಸ್ತಿದ್ವಾ ಗೊತ್ತಿಲ್ಲ. ಕೆಲ ನಿಮಿಷಗಳಲ್ಲೇ ಸೊಳ್ಳೆಗಳ ಗುಯ್ಗಾಟಕ್ಕೂ ಮನೆಯ ಬೈದಾಟಕ್ಕೂ ಕೊನೆ ಕಾಣುತ್ತಿತ್ತು. ನಮ್ಮ ಕೊಟ್ಟಿಗೆಗಳಲ್ಲಿ ನೊರಜು ಮತ್ತೆ ಸೊಳ್ಳೆ ಕಾಟ ಜಾಸ್ತಿ ಆಯ್ತು ಅಂದ್ರೆ ಸಂಜೆ ಹೊತ್ತಿಗೆ ಲೋಬಾನ ಅಥವಾ ಹೊಗೆ ಹಾಕ್ತಿದ್ರು. ಸೊಳ್ಳೆ ಕಾಯಿಲ್ ಹಾಕಿದ್ರೆ ಎತ್ತಿಗೆ ಕಾಲು ನೋವು ಅಂತ ಹೊಗೆಯಿಂದ್ಲೇ ಸೊಳ್ಳೆಗಳಿಗೆ ಹೊಗೆ ಹಾಕ್ತಿದ್ರು ! 


ಈಗ ಬಿಡಿ, ಕತೆನೇ ಉಲ್ಟಾ ಹೊಡೆದಿದೆ. ಈಗಿನ ಸೊಳ್ಳೆಗಳೇ ನಮ್ಮನೆಯಲ್ಲಿ ನಮಗಿಂತಾ ಜಾಸ್ತಿ ಇರ್ತವೆ ! ಒಂದು ತಗೊಂಡ್ರೆ ಒಂದು ಫ್ರೀ ಅನ್ನೋ ಜಾಹೀರಾತುಗಳಂತೆ ಒಂದು ಬಂದ ಕೂಡ್ಲೆ ಸುಮಾರಷ್ಟು ಎಂಟ್ರಿ ಕೊಡ್ತವೆ. ಮುಂಚೆಯೆಲ್ಲಾ ಕೈಯಲ್ಲೇ ಸಿಗ್ತಿದ್ದವು ಈಗ ಸೊಳ್ಳೆ ಬ್ಯಾಟ ಕಂಡರೆ  ಮನೆಯ ಎಲ್ಲಾ ಮೂಲೆ ತೋರುಸ್ತವೆ ! ಸೊಳ್ಳೆ ಬ್ಯಾಟ ಹಿಡಿದು ಓಡಿದಷ್ಟು ಶಟಲ್ ಬ್ಯಾಟ್ ಹಿಡಿದಾದ್ರೂ ಓಡಿದ್ರೆ ಚಾಂಪಿಯನ್ ಆಗ್ತಿದ್ನೇನೋ ಅನಿಸಿಬಿಡುತ್ತೆ . ಆಫೀಸಿನ ಕೆಲಸ ಮಾಡುವಾಗ ಲ್ಯಾಪ್ಟಾಪು ಪರದೆಯ ಮೇಲೇ ಬಂದು ಕೂರುತ್ವೆ.ಕಾಲಲ್ಲಿರುವಾಗ ಇಯರ್ ಫೋನ್ ಪಕ್ಕನೇ ಬಂದು ಕಚ್ಚುತ್ವೆ. ಕೆಳಗಿಟ್ಟ ಪಾದವನ್ನು ಹುಡುಕುತ್ವೆ. ಆಫೀಸು ಲ್ಯಾಪ್ಟಾಪು, ಇಯರ್ ಫೋನು ಮತ್ತು ಮೀಟಿಂಗ್. ಹೆಂಗಿದ್ರೂ ಹೊಡೆಯಂಗಿಲ್ಲ, ಅಟ್ಟಾಡಿಸಿಕೊಂಡು ಬರಂಗಿಲ್ಲ ಅಂತ ಗೊತ್ತಾಗೇ ಕಿರಿಕಿರಿ ಮಾಡುವಷ್ಟು ಚಾಲೂ ಇವು . ಕೆಲಸ ಮಾಡೋವಾಗ ಬಿಡಿ, ಟಾಯ್ಲೇಟಿಗೆ ಹೋದ್ರೂ ಬಿಡಲ್ಲ ಅಂತಾವೆ.  ಮನೆ ನಿಮ್ಮದು , ಪಾರ್ಟಿ ನಮ್ಮದು ಅಂತಾವಲ್ಲ ಇವು , ಎಷ್ಟು ಧೈರ್ಯ ಇರಬಹುದು ? ಮನೆಯ ಕಿಟಕಿಗಳಿಗೆಲ್ಲಾ ಮೆಷ್ ಹಾಕ್ಸಿ, ಸೊಳ್ಳೆ ಪರದೆಯಲ್ಲೇ ಮಲಗಿ ಅಲ್ಲೇ ಎದ್ದು, ಅಲ್ಲೇ ವರ್ಕ್ ಫ್ರಂ ಹೋಂ ಮಾಡಿಬಿಡಾನಾ ಅಂತ ಅಂದ್ಕೊಂಡ್ರು ಆ ಸೊಳ್ಳೆ ಪರದೆಯ ಹೊರಗಿನಿಂದನೇ ಕಚ್ಚೋಕೆಂತ ಹೊಂಚು ಹಾಕಿ ಕಾಯ್ತಾ ಕೂರೋ, ನಿದ್ದೆಗಣ್ಣಲ್ಲಿ ಸೊಳ್ಳೆ ಪರದೆ ಅಂಚಿಗೆ ಬರೋ ಕೈಯೋ ಕಾಲಿನ ಸ್ಪರ್ಷ ಸುಖಕ್ಕೆ ರಾತ್ರಿಯಿಡೀ ನಿದ್ದೆಗೆಡ್ತಾವಲ್ಲ ಇವು, ಇವುಗಳ ಚಾಲಾಕಿತನಕ್ಕೆ ಭೇಷ್ ಅನ್ಸಿಬಿಡುತ್ತೆ.   

ಈ ಕೊರೋನಾ ಅನ್ನುವಂತದ್ದು ಇದೆಯಲ್ಲಾ, ಅದು ಈ ಸೊಳ್ಳೆಗಳಿಂದನೇ ಹರಡೋದು, ಅದಕ್ಕೆ ಭಾರತದ ಎಲ್ಲರೂ ದಿನಕ್ಕೆ ಹತ್ತು ಸೊಳ್ಳೆಗಳನ್ನು ಹಿಡಿದು ಕೊಂದ್ರೆ ಒಂದು ತಿಂಗಳಲ್ಲಿ ಭಾರತದಿಂದ ಕೊರೋನಾ ನಿರ್ಮೂಲನೆಯಾಗುತ್ತೆ ಅಂತ ಯಾವ ಪುಣ್ಯಾತ್ಮನೂ ವಾಟ್ಸಾಪ್ ಸಂದೇಶ ಮಾಡಲಿಲ್ಲ. ಅದನ್ನು ಯಾರೂ ಹಂಚಲಿಲ್ಲವಾದ್ದರಿಂದ ಸೊಳ್ಳೆಗಳ ಸಂಖ್ಯೆ ಕೊರೋನಾ ಮುಂಚೆ ಹೇಗಿತ್ತೋ ಈಗಲೂ ಹಾಗೇ ಇದೆ ಅನಿಸುತ್ತೆ . ಸೊಳ್ಳೆಗಳ ಕೊಲ್ಲೋಕೆ ಅಂತಲೇ ತರತರದ ಪರಿಮಳದ ಲಿಕ್ವಿಡುಗಳು ಬಂದ್ರೂ ಅವು ಸೊಳ್ಳೆಗಳನ್ನು ನಿಜವಾಗ್ಲೂ ಕೊಲ್ಲುತ್ತೋ ಅಥವಾ ಸ್ವಲ್ಪ ಹೊತ್ತಿನ ಮಟ್ಟಿಗೆ ಪ್ರಜ್ಞೆ ತಪ್ಪಿಸುತ್ತಾ ಅನ್ನೋ ಸಂದೇಹ ನನ್ನಂತೆ ನಿಮಗೂ ಕಾಡ್ತಿರಬಹುದು. ಟೀವಿಯಲ್ಲಿ ಹಾರಾರಿ ಸೊಳ್ಳೆ ಹಿಡಿಯೋ ಕಾಯಿಲ್ಲುಗಳ ಜಾಹೀರಾತು ನೋಡಿ ಮರುಳಾದ ನಾನೂ ಒಂದು ಸೊಳ್ಳೆ ಲಿಕ್ವಿಡ್ ತಂದಿದ್ದೆ.  ಸೊಳ್ಳೆ ಕಾಯಿಲ್ ಹಾಕಿ , ಅದ್ರಲ್ಲಿ ನಾರ್ಮಲ್ ಮೋಡು, ಅಡ್ವಾನ್ಸು ಮೋಡು ಅಂತ ತಿರುಗ್ಸಿದ್ದು, ಲಿಕ್ವಿಡನ್ನ ವಾರಗಳಲ್ಲೇ ಖಾಲಿ ಮಾಡಿದ್ದೊಂದೇ ಬಂತು. ರಾತ್ರೆ ಕೆಳಗೆ ಬಿದ್ದ ಸೊಳ್ಳೆಗಳು ಬೆಳಗಾಗೋ ವರೆಗೆ ಕೆಳಗಿರ್ತಿರ್ಲಿಲ್ಲ. ಮಾರನೇ ದಿನ ಬಂದು ಕಚ್ಚೋದು ತಪ್ತಿರ್ಲಿಲ್ಲ !

ದೇಹಕ್ಕೆ ವ್ಯಾಯಾಮನೂ ಆಯ್ತು, ಸೊಳ್ಳೆ ಕಾಯಿಲ್, ಲಿಕ್ವಿಡುಗಳಲ್ಲಿನ ರಾಸಾಯನಿಕಗಳನ್ನು ಕುಡಿಯದಂತೆನೂ ಆಯ್ತು ಅಂತ ಸೊಳ್ಳೆ ಬ್ಯಾಟಿಗೆ ಮೊರೆ ಹೋಗಾಗಿದೆ. ಹಾಗಾಗಿ ದಿನ ಬೆಳಗಾದ ತಕ್ಷಣ ಯಾವ ಕರ್ಟನ್ನಿನ ಹಿಂದೆಷ್ಟಿದೆ, ದೇವರ ಮನೆಯ ಮೂಲೆಯಲ್ಲೆಷ್ಟಿದೆ, ಮಂಚದ ಕೆಳಗೆಷ್ಟಿದೆ ಅಂತ ಹುಡುಕುಡುಕಿ ಕೊಲ್ಲೋ ಕೆಲಸ ದಿನವೂ. ಸಿಕ್ಕಿದಲ್ಲಿ ರಕ್ತ ಹೀರೋ ಈ ಸೊಳ್ಳೆಗಳನ್ನು ಕೊಲ್ಲೋದು ಒಂದು ಖುಷಿ ಅಂತೇನಾದ್ರೂ ಅಪ್ಪಿ ತಪ್ಪಿಯೂ ಹೇಳಂಗಿಲ್ಲ. ಈ ಸೊಳ್ಳೆ ದಯಾ ಸಂಘದವರು ಬಂದು ಅದಕ್ಕೊಂದು ಕೇಸ್ ಜಡಿಯಬಹುದು. ಆಮೇಲೆ ಅದರ ವಿರುದ್ದ ಹೋರಾಡುತ್ತಾ ಎಲ್ಲೆಲ್ಲೋ ಸೊಳ್ಳೆ ಕಚ್ಚಿಸಿಕೊಳ್ಳುತ್ತಾ ಕೂರಬೇಕಾಗಬಹುದು ! 

ಈ ಮನುಷ್ಯರ ರಕ್ತ ಕುಡಿಕುಡಿದು ಈ ಸೊಳ್ಳೆಗಳು ಮನುಷ್ಯರಂತೆಯೇ ಚುರುಕಾಗಿ ಬಿಟ್ಟಿದಾವಾ ಅನ್ನೋ ಮಾತು ನನ್ನ ಅರ್ಧಾಂಗಿದು. ಅರ್ಧಾಂಗಿ ಅಂದ ಮೇಲೆ ಆ ಮಾತು ತಳ್ಳಿ ಹಾಕುಕ್ಕಾಗುತ್ಯೆ ? ನಾ ಸೊಳ್ಳೆ ಬ್ಯಾಟು ಹಿಡಿದು ಹೋದ್ರೆ ಅಜ್ಜಿ ಬ್ಯಾಗು, ಅತ್ತೆ ಕೋಟಲ್ಲೆಲ್ಲಾ ಅವಿತು ಕಣ್ಣಾ ಮುಚ್ಚಾಲೆಯಾಡೋ ಸೊಳ್ಳೆಗಳು ಮನದಾಕೆ ಬಂದಾಗ ಅದೇಗೆ ಆಚೆ ಬರುತ್ತೆ ಅನ್ನೋದೊಂದು ವಿಸ್ಮಯ. ಅವಳು ಸೊಳ್ಳೆ ಹೊಡಿತಿದಾಳೋ ಸರ ಪಟಾಕಿ ಹಚ್ತಿದಾಳೋ ಅನ್ನುವಷ್ಟು ಶಬ್ದ. ಸೊಳ್ಳೆಗಳಿಗೂ ಗೊತ್ತಾಗಿರ್ಬೇಕು, ಇವರೇ ಹೋಂ ಮಿನಿಸ್ಟರ್ ಅಂತ !   

ಇನ್ನೇನು ಮಳೆಗಾಲ ಬರ್ದಿದ್ರೂ ಮಳೆ ಬರೋಕೆ ಶುರುವಾಗಿದೆ. ನೀವು ಖಾಲಿ ಸೈಟಲ್ಲಿ ಬಿಸಾಕಿರೋ ತೆಂಗಿನ ಚಿಪ್ಪು, ಟೈರು, ಬಾಟಲ್ಲಿಗಳಲ್ಲಿ ನೀರು ನಿಂತು ಸೊಳ್ಳೆಗಳಿಗೆ ಮನೆ ಕಟ್ಟೋ ಮುಹೂರ್ತ ಸಿಕ್ಕಾಗಿದೆ. ನಮ್ಮನೆಗೆಂತೂ ಮೆಷ್ಷಿದೆ, ಗಾಳಿ ಈಕಡೆ ಬೀಸಲ್ಲ. ಸೊಳ್ಳೆ ಆ ಕಡೆ ಹೋಗಿ ಆಚೆ ಮನೆಯವ್ರಿಗೆ ಕಚ್ಲಿ ಅಂತ ಕೂರಂಗಿಲ್ಲ. ಮನೆ ಕಟ್ಟೋಕೆ ನೆರವಾದ ನಿಮ್ಮ ಉಪಕಾರ ಸ್ಮರಣೆ ಆ ಸೊಳ್ಳೆಗಳಿಗಿರೋಲ್ವಾ ? ಖಂಡಿತಾ ನಿಮ್ಮನೆಗೂ ಅವು ಬರ್ತವೆ. ಹೇಗಿದ್ರೂ ಇವು ಫೋನ್ಮಾಡಿ, ಬೆಲ್ಮಾಡಿ ಬರೋ ನೆಂಟ್ರಲ್ಲ. ಬಂದ್ಮೇಲೆ ನಿಮ್ಮ ರಕ್ತ ಹೀರದೆ ಸುಮ್ಮನೂ ಕೂರಲ್ಲ. ಹಾಗಾಗಿ ಮನೆ ಸುತ್ತ ಆದಷ್ಟು ಚೊಕ್ಕವಿಡಿ, ಚೊಕ್ಕವಿಡುವಷ್ಟು ನೆರೆಯವರನ್ನೂ ಪ್ರೋತ್ಸಾಹಿಸಿ ಅನ್ನುತ್ತಾ ಸದ್ಯಕ್ಕೊಂದು ವಿರಾಮ. ಇದನ್ನು ಬರೆಯೋಕೂ ಬಿಡದೇ ಒಂದೇ ಸಮ ಕಚ್ಚೋಕೆ ಬರ್ತಿರೋ ಸೊಳ್ಳೆಗಳನ್ನು ಸ್ವಲ್ಪ ವಿಚಾರಿಸ್ಕೊಂಡು ಬರ್ತೀನಿ

1 comment:

  1. ನಿಜ.. ಎಲ್ಲಾ ಕಡೆಯೂ ಸೊಳ್ಳೆಗಳ ಕಾಟ ದಿನದಿನಕ್ಕೆ ಹೆಚ್ಚುತ್ತಿದೆ.
    ಸೊಳ್ಳೆಗಳ ಬಗ್ಗೆ ಒಂದು ಚೆಂದದ ಬರಹ

    ReplyDelete