ಟ್ರಿಪ್ಪೊಂದರಲ್ಲಿ ಕಂಡ ಸುಮ್ನೇ ಇಷ್ಟವಾಗಿದ್ದ ಹುಡುಗಿ ಆಫೀಸ್ ಬಸ್ಸಲ್ಲಿ ಸಡನ್ನಾಗಿ ಪ್ರತ್ಯಕ್ಷಳಾಗಿದ್ದಷ್ಟೇ ಅಲ್ದೇ ಪಕ್ಕದ ಸೀಟಲ್ಲಿ ಬಂದು ಕೂತ್ರೆ ? ಗುಂಡಣ್ಣನ ಎಂದಿನ ನಗು ಮಾಯವಾಗಿತ್ತು ! ಮನದಲ್ಲೊಂದು ಮೊಹಬ್ಬತ್ತ ಸೌಧಕ್ಕೆ ಅಡಿಪಾಯ ಬಿದ್ದಿತ್ತು.
ತಿಂಡಿನಾದ್ರೂ ಮಿಸ್ ಮಾಡ್ಕೊಳ್ತಿದ್ದ ಗುಂಡಣ್ಣ ಅವ್ಳು ಬರೋ ಬಸ್ಸನ್ನ ಮಾತ್ರ ಮಿಸ್ ಮಾಡ್ಕೊಳ್ತಿರಲಿಲ್ಲ. ಮುಂಚೆನೇ ಹತ್ತಿದ್ದ ಅವಳೂ ಪಕ್ಕದಲ್ಲಿ ಯಾರನ್ನೂ ಕೂರಗೊಡದೆ ಗುಂಡಣ್ಣನ ಬರುವಿಕೆಯನ್ನೇ ಕಾಯುವಂತಿರುತ್ತಿದ್ದಳು. ಏನೋ ಹೇಳ್ಬೇಕು ಅಂತ ಅವನು. ಇವ ಹೇಳಲಿ ಅಂತ ಅವಳು . ನಾಳೆ ಫೆಬ್ರವರಿ ಹದಿನಾಲ್ಕು ಅನ್ನೋ ಹೊತ್ತಿಗೆ ಗುಂಡಣ್ಣನ ಟೀಂ ಚೇಂಜಾಗೋ ಸಮಯ ಬಂದಿತ್ತು. ಮಾರನೇ ದಿನದಿಂದ್ಲೇ ಬೇರೆ ಬಿಲ್ಡಿಂಗಲ್ಲಿ ಕೆಲ್ಸ. ಇವತ್ತು ಏನಾದ್ರೂ ಮಾಡಿ ಅವ್ಳತ್ರ ಮಾತಾಡ್ಲೇ ಬೇಕು ಅಂದ್ಕೊಂಡ್ರೂ, ಏನು ಮಾತಾಡೋದು ಅಂತ ಯೋಚ್ನೆ ಮಾಡ್ತಾ ಬರೋ ಹೊತ್ತಿಗೆ ಬಸ್ ಬಂದಾಗಿತ್ತು. ಅವ್ಳೇನೋ ಬಸ್ಸಲ್ಲಿದ್ಲು. ಆದ್ರೆ ಕೈಯಲ್ಲಿದ್ದ ಮೊಬೈಲಲ್ಲಿ ಯಾರ ಜೊತೆಗೋ ಮಾತು.ಅವ್ಳ ಮಾತು ಮುಗಿಯೋ ಹೊತ್ತಿಗೆ ಆಫೀಸ್ ಬಂದಿತ್ತು. ಗುಂಡಣ್ಣ ಏನೋ ಹೇಳೋಕೆ ಪರದಾಡ್ತಿದ್ದನ್ನ ನೋಡಿದ್ದ ಅವಳು ಅದೇನಿರಬಹುದೆಂದು ಊಹಿಸಿದ್ರೂ ಏನು ಅಂತ ಅನೇಕ ಸಾರಿ ಸಂಜ್ಝೆ ಮಾಡಿದ್ಲು. ಅವ ಹೇಳೋಕೆ ಪ್ರಯತ್ನ ಮಾಡಿದಾಗೆಲ್ಲಾ ಧೈರ್ಯ ಸಾಕಾಗ್ತಿರಲಿಲ್ಲ. ಈ ಸರ್ಕಸ್ಸಲ್ಲಿದ್ದಾಗ ಆಫೀಸ್ ಬಂದಿತ್ತು. ಕೊನೆಗೂ ಧೈರ್ಯ ಮಾಡಿ ನಿಮ್ಮ ನಂಬರ್ ಕೊಡ್ತೀರಾ ಅಂದ. ಹೂಂ. ಸೇವ್ ಮಾಡ್ಕೊಳ್ಳಿ ಅಂತಂದ್ರೆ ಮೊಬೈಲಿಗೆ ಕಿಸೆಗೆ ಕೈ ಹಾಕಿದ್ರೆ ಮೊಬೈಲಿಲ್ಲ. ಅವ್ಳತ್ರ ಅಂದ್ಕೊಂಡಿದ್ದು ಹೇಳೇ ಬಿಡೋ ಉಮ್ಮೇದಿನ ಗಡಿಬಿಡಿಯಲ್ಲಿ ಮೊಬೈಲು ಮನೇಲೇ ಮರೆತು ಬಿಟ್ಟಿದ್ದ. ಇವ ತಡಕಾಡುತ್ತಿದ್ದನ್ನ ನೋಡಿದ ಅವಳು ಹೋಗ್ಲಿ ನಾನೇ ಮಿಸ್ ಕಾಲ್ ಕೊಡ್ತೀನಿ ಬಿಡಿ. ಹೇಳಿ ನಿಂ ನಂಬರ್ರು ಅಂತ ಬಸ್ಸಿಳಿದು ಮುಂದೆ ಹೊರಟ್ಳು. ಅವ್ಳು ಅದ್ನ ಟೈಪ್ ಮಾಡಿ ಇನ್ನೇನು ಕಾಲ್ ಒತ್ಬೇಕು. ಅಷ್ಟರಲ್ಲಿ ಅವ್ಳ ಮೊಬೈಲು ಸ್ವಿಚ್ಛಾಫ್ ! ದರಿದ್ರ ಬ್ಯಾಟ್ರಿ ಆಗ್ಲೇ ಡೌನಾಗ್ಬೇಕೆ ? ಅದ್ಯಾವ್ದೋ ಎಸ್ಕಲೇಷನ್ ಆಗಿದ್ಯಂತೆ ಕಣೆ ಅಂತ ಒಡ್ತಿದ್ದ ಪಕ್ಕದ ಸಹೋದ್ಯೋಗಿ ಜೊತೆಗೆ ಇವ್ಳೂ ಓಡ್ಬೇಕಾಗಿ ಬಂದಿತ್ತು. ಗುಂಡಣ್ಣನ ಆಸೆಗಳು ಜಸ್ಟ್ ಮಿಸ್ಸಾಗಿತ್ತು !
ಮನೇಲಿ ಮರ್ತು ಬಂದಿದ್ದ ತನ್ನ ಮೊಬೈಲಿಗೆ ಬಯ್ಯಲಾ, ಬ್ಯಾಟ್ರಿ ಡೌನಾದ ಅವ್ಳ ಮೊಬೈಲಿಗೆ ಬಯ್ಯಲಾ ಅನ್ನೋ ಆಲೋಚನೆಯಲ್ಲೇ ತಿಂಗಳೊಂದು ಕಳೆದೋಗಿತ್ತು ! ಮಿಸ್ಸಾದವ್ಳಿಗೆ ತಲೆ ಕೆಡಿಸಿಕೊಳ್ಳೋದು ಬೇಡ ಅಂತ್ಕೊಳ್ಳೋ ಸಂದರ್ಭದಲ್ಲೇ ಫೇಸ್ಬುಕ್ಕಿನ ಫ್ರೆಂಡ್ ಸಜೆಷನ್ನಲ್ಲಿ ಅವ್ಳ ಹೆಸ್ರು ಬಂದಿತ್ತು !! ಇನ್ನೇನು Add Friend ಕೊಡ್ಬೇಕು. ಅಷ್ಟರಲ್ಲಿ ನೆಟ್ ಢಮಾರ್ ! ಹೊತ್ತಲ್ಲದ ಹೊತ್ತಲ್ಲಿ ಕರೆಂಟ್ ತೆಗ್ಯೊ ಕೆಇಬಿಯವ್ರಿಂದ ಮತ್ತೊಂದು ಜಸ್ಟ್ ಮಿಸ್ಸು !
ಕರೆಂಟ್ ಬಂದ ಮೇಲೆ ಹುಡ್ಕೇ ಹುಡ್ಕಿದ. ಸಿಗ್ಲಿಲ್ಲ ಅವ್ಳು. ಅವ್ಳ ಫೋಟೋ ಕಂಡ ಖುಷಿಯಲ್ಲಿ ಫೇಸ್ಬುಕಲ್ಲಿ ಅವ್ಳ ಮೊದಲ ಹೆಸ್ರು, ಕೊನೆ ಹೆಸ್ರು ಏನಿದೆ ಅಂತ ನೋಡ್ಕೊಳ್ಳೋದೇ ಮರೆತಿದ್ದ. ಅದ್ಕೆ ಬಯ್ಕೊಳ್ಳೋದ್ರಲ್ಲಿ ಮತ್ತೆ ಹದಿನೈದು ದಿನ ಕಳೆದೋಗಿತ್ತು ! ಅವಳ ಹೆಸರ ಅಂದಾಜಿನ ಮೇಲೆ ಆಫೀಸಿನ ಐಡಿಗಳಲ್ಲಿ ಹುಡುಕುತ್ತಾ ಕೊನೆಗೂ ಅವಳಿರಬಹುದೆಂಬ ಐಡಿ ಹುಡುಕಿದ್ದ. ಇದ್ರಲ್ಲಾದ್ರೂ ಹುಡ್ಕೋಣ ಅಂತ ಪಿಂಗ್ ಮಾಡಿದ.
ಇವ: ಹಾಯ್
ಅವಳು: ಹಾಯ್
ಇವ: ನೀವು ರೂಟ್ ನಂ ೧೪೦ರ ಇವರಲ್ವಾ ?
ಅವಳು:ಹೌದು. ನೀವು ?
ಇವ: ನಾನು ಇವ. ಟ್ರಿಪ್ಪಲ್ಲಿ ಸಿಕ್ಕವ. .. ಬರ್ದೇ ಬರದ. ಇನ್ನೇನು ಎಂಟರ್ ಒತ್ಬೇಕು ಅನ್ನೋ ಅಷ್ಟು ಹೊತ್ತಿಗೆ ಲ್ಯಾಪ್ತಾಪ್ ರೀಬೂಟ್ !!! ನಿಮ್ಮ ಲ್ಯಾಪ್ಟಾಪ್ ೧೫ ನಿಮಿಷದಲ್ಲಿ ರೀಬೂಟ್ ಆಗತ್ತೆ ಅಂತ ಬಂದ ಸಂದೇಶದಲ್ಲಿನ ನಿಮಿಷಗಳು ಕಡಿಮೆ ಆಗ್ತಿದ್ದನ್ನ ಗಮನಿಸೇ ಇರ್ಲಿಲ್ಲ. ಐಡಿ ಸಿಕ್ಕಿದ್ದೇನೋ ಹೌದು. ಆದ್ರೆ ಸೇವ್ ಮಾಡ್ಕೊಂಡಿಲ್ವೆ ? ತಾನ್ಯಾರು ಅಂತ ಹೇಳಿದ್ರೆ ಆ ಕಡೆ ಅವ್ರಾದ್ರೂ ಸೇವ್ ಮಾಡ್ಕೊಳ್ತಿದ್ರೇನೋ ? ಆದ್ರೆ ಅದೂ ಜಸ್ಟ್ ಮಿಸ್ ! ರಿಬೂಟಾದ ಲ್ಯಾಪ್ಟಾಪ್ ಆನೇ ಆಗ್ಬಾರ್ದೇ ? ತಾಂತ್ರಿಕ ದೋಷವಿದೆ , ಐಟಿಯವ್ರನ್ನ ಸಂಪರ್ಕಿಸಿ ಅಂತ ಸಂದೇಶ ಕೊಡ್ತಾ ಇದ್ರೆ ಮತ್ತೊಂದು ಜಸ್ಟ್ ಮಿಸ್ಸಿಂದ ಬೇಸತ್ತ ಗುಂಡಣ್ಣ ಆ ಲ್ಯಾಪ್ಟಾಪನ್ನ ಮರೆತು ಹೋದ ಮೊಬೈಲ ಸಮೇತ ನೆಲಕ್ಕೆ ಕುಕ್ಕುವಷ್ಟು ಸಿಟ್ಟಾಗಿದ್ದ !
ಇನ್ನೂ ಒಂದಿಷ್ಟು ದಿನ ಹೋಯ್ತು.ಅವಳಿದ್ದ ಬಿಲ್ಡಿಂಗಿಗೇ ತನ್ನ ಪ್ರಾಜೆಕ್ಟ್ ಬದಲಾದಾಗ ಗುಂಡಣ್ಣನ ಖುಷಿಗೆ ಸಾಟಿಯಿಲ್ಲ. ಬ್ಯಾಟ್ರಿ ಫುಲ್ಲಾಗಿರೋ ಮೊಬೈಲು, ಲ್ಯಾಪ್ಟಾಪೊಂದಿಗೆ, ಅವಳು ಬರೋ ಸಮಯದ ಬಸ್ಸಿಗೆ ಸರಿಯಾಗಿ. ಮತ್ತೊಂದಿಷ್ಟು ಜಸ್ಟ್ ಮಿಸ್ಸುಗಳಿಗೆ ರೆಡಿಯಾಗಿ :-)
No comments:
Post a Comment