ಪ್ರತೀ ಬಾರಿ ಬರೆಯೋಕೆ ಕೂತಾಗ್ಲೂ ಅನಿಸ್ತಿರುತ್ತೆ. ನಂಗನಿಸೋ ಈ ಹುಚ್ಚು ಆಲೋಚನೆಗಳನ್ನೆಲ್ಲಾ ಬರಹವಾಗಿಸಲೇಬೇಕಾ ಅಂತ. ಯಾಕೆ ಬೇಡ ಅಂತ ಸಮರ್ಥನೆ ಕೊಡ್ತಾ ಕೂರೋ ಸಮಯದಲ್ಲೇ ಅದನ್ನ ಬರಹವಾಗಿಸಬಹುದಲ್ಲಾ ಅನ್ನೋ ಭಾವವೇ ಅನೇಕ ಸಲ ಬರಹವನ್ನು ಪ್ರಾರಂಭಿಸುತ್ತೆ. ಯಾರಿಗೂ ಅನಿಸದ್ದೇ ಇದ್ದಿದ್ದಿದು ಅಂತಲ್ಲ. ಗಾಢ ಸಂಶೋಧನೆಯ ಫಲಶೃತಿ ಅಂತಲೂ ಅಲ್ಲ. ನನಗನಿಸುತ್ತಿರುವ ಸಂದರ್ಭದಲ್ಲೇ ಇನ್ನೂ ಅನೇಕರಿಗೆ, ಓದುತ್ತಿರುವ ನಿಮಗೂ ಹೀಗೇ ಅನಿಸ್ತಿರಬಹುದು. ಆ ಎಲ್ಲಾ ಭಾವಗಳಿಗೊಂದು ಚೌಕಟ್ಟು ಹಾಕಿ ಮುಂದೊಂದು ದಿನ ಹಿಂಗೂ ಅನಿಸಿತ್ತಾ ಅಂತ ಮೆಲುಕು ಹಾಕೋಕಾದ್ರೂ ಒಂದು ವಸ್ತುವಿರುತ್ತೆಂಬ ದುರಾಸೆಯೇ ಬರೆಸಲು ಮುಂದಾಗುತ್ತೆ. ಕೆಲ ವಿಷಯಗಳ ಬಗ್ಗೆ ಗೆಳೆಯರೊಟ್ಟಿಗೆ ದಿನಗಟ್ಟಲೇ ಮಾತಾಡಿರ್ತೇವೆ. ಹಲವಾರು ಭಾಷೆಗಳಲ್ಲಿ ಅದರ ಬಗ್ಗೆ ಹುಡುಕಿದಷ್ಟೂ ಲೇಖನಗಳಿರುತ್ತೆ. ಆದ್ರೆ ನಾವು ಗೆಳೆಯರೊಟ್ಟಿಗೆ ಮಾತಾಡಿದ ನಮ್ಮ ಮಾತೃಭಾಷೆಯಲ್ಲಿ ಅದ್ರ ಬಗ್ಗೆ ಏನೇನೂ ಇರಲ್ಲ. ಶಾಲೆ, ಕಾಲೇಜು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೀಡೆಯನ್ನು ಪ್ರತಿನಿಧಿಸಿದ ಮಹನೀಯರಿರ್ತಾರೆ. ಅವರ ಕಾಲದಲ್ಲಿ ಕನ್ನಡದಲ್ಲಿ ಏನೂ ಇಲ್ಲದ ಕಾರಣ ಇಂಗ್ಲೀಷಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ತಿಳ್ಕೊಂಡಿದ್ದು ಸರಿಯೇ. ಆದ್ರೆ ಈಗ ಮುಂದೆ ಬರುವ ಜನಾಂಗಕ್ಕಾದರೂ ತಾವು ತಿಳಿದಿದ್ದನ್ನು ಮಾತೃಭಾಷೆಯಲ್ಲಿ ತಿಳಿಸೋ ಪ್ರಯತ್ನವನ್ನು ಅವರು ಮಾಡುತ್ತಾರೆಯೇ ? ಅಂತಹವರ ಸಂಖ್ಯೆ ತುಂಬಾ ಕಡಿಮೆ ! ಕೆಲಸ ಮಾಡುವವರು ಬರೆಯೋಲ್ಲ. ಬರೆಯುವವರು ಆ ಕೆಲಸ ಮಾಡಿರೋಲ್ಲ ಅನ್ನೋ ಪರಿಸ್ಥಿತಿ ಬಂದೋಗಿದೆ ತುಂಬಾ ಕಡೆ. ಅಂತರ್ಜಾಲದಲ್ಲಿ ಒಂದಿಷ್ಟು ಜಾಲಾಡಿದ್ರೆ ಸಿಗೋ ಇಂಗ್ಲೀಷಿನ ಮಾಹಿತಿಗಳನ್ನೇ ತಮ್ಮ ಭಾಷೆಗೆ ಭಾಷಾಂತರಿಸಿ ಅದನ್ನೇ ಮಾಹಿತಿ ಅಂತ ಇತರರಿಗೆ ಹಂಚುವ ಕೆಲಸವಾಗ್ತಿದೆಯೇ ಹೊರತು ಆ ಕ್ಷೇತ್ರದ ಪರಿಣಿತರು ಬರೆದಂತಹ ಮಾಹಿತಿ ಸಿಗುವುದು ತುಂಬಾ ಕಡಿಮೆ. ಕನ್ನಡವೂ ಈ ಪರಿಸ್ಥಿತಿಗೆ ಹೊರತಲ್ಲ ಅನ್ನೋದೇ ಸದ್ಯದ ಬೇಸರ. ಮಾಹಿತಿಯ ಭಂಡಾರದ ವಿಸ್ತರಣೆ ನಾಗಾಲೋಟದಲ್ಲಿ ಸಾಗಿದ್ರೆ ಕನ್ನಡದಲ್ಲಿ ಅದ್ರ ಗತಿ ಕಾಲುಮುರಿದ ಆಮೆನ ಮರಳುಗಾಡಲ್ಲಿ ತಂದು ಬಿಟ್ಟು, ಓಡು ಅಂದಂಗಿದೆ !
ಉದಾಹರಣೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ. ಐಟಿಗರು ಅಂದ್ರೆ ಸಮಾಜದ ಯಾವ ಆಗು ಹೋಗುಗಳ ಬಗ್ಗೆಯೂ ತಲೆಕೆಡಿಸಿಕೊಳ್ಳದೇ, ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡಿದರೂ ಲಕ್ಷ ಲಕ್ಷ ಎಣಿಸಿತ್ತಾ ಜುಂ ಅಂತ ಇರೋರು ಅನ್ನೋ ಭಾವ ಹಲವರಲ್ಲಿದೆ. ಇಂಜಿನಿಯರ್ ಆಯ್ತಾ, ಲೈಫ್ ಸೆಟಲ್ ಬಿಡಪ್ಪ ಅಂತ ಮಾತಾಡ್ಕೊಳ್ಳೋ ಕಾಲ ಈಗ ಕಮ್ಮಿ ಆಗ್ತಿದ್ರೂ ಅಂತವರ ಸಂಖ್ಯೆ ಕಮ್ಮಿಯೇನಲ್ಲ. ಪ್ರತಿ ದಿನ ಬೆಳಗಾದ್ರೆ ಕರಾಗ್ರೇ ವಸತೇ ಲಕ್ಷ್ಮಿ ಅನ್ನೋ ಬದಲು ಇವತ್ತು ಎಲ್ಲಿ ಬೆಂಕಿ ಹೊತ್ತಿಕೊಂಡಿದ್ಯಪ್ಪ ಅದನ್ನು ಹೆಂಗೆ ನಂದಿಸೋದು ಅನ್ನೋ ಚಿಂತೆಯಲ್ಲೇ ಏಳುವ ಐಟಿಗನ ಸಂಕಟ ಮೇಲಿನಂತೆ ಕರುಬುವವನಿಗೆ ಕಾಣೋಲ್ಲ. ವಾರಾಂತ್ಯದಲ್ಲಿ ಕೆಲಸವಿರೋಲ್ಲ ಅಂತಿದ್ರೂ ಡೆಡ್ ಲೈನುಗಳ ಹಿಂದೆ ಬಿದ್ದು ವಾರಾಂತ್ಯ, ತಡರಾತ್ರಿಗಳಲ್ಲೆಲ್ಲಾ ಕೆಲಸ ಮಾಡುತ್ತಾ ದಿನಕ್ಕೆ ೧೨-೧೩ ಘಂಟೆ ಕೆಲಸ ಮಾಡಿ ಐದು ದಿನದಲ್ಲೇ ೫೫-೬೦ ಘಂಟೆ ಕೆಲಸ ಮಾಡಿದ್ದು ಗೊತ್ತೇ ಆಗಿರೋಲ್ಲ ! ೧೦-೫ ರಕೆಲಸದಲ್ಲಿ ಶನಿವಾರವೂ ೮ ಘಂಟೆ ಕೆಲಸ ಮಾಡಿದ್ರೂ ಆಗೋದು ನಲವತ್ತೆಂಟೇ ಘಂಟೆ ಅನ್ನೋ ಲೆಕ್ಕಾಚಾರವೂ ಗಮನಕ್ಕೆ ಬಂದಿರೋಲ್ಲ. ಈ ವಿಷಯ ಯಾಕೆ ಬಂತಪ್ಪ ಅಂದ್ರೆ ಐಟಿಗರು ತಮ್ಮ ಬಗ್ಗೆ ಬರ್ಕೊಳ್ಳೋಲ್ಲ. ತಮ್ಮ ಸ್ಥಿತಿ ಹೆಂಗಿದೆ ಅಂತ ಹೊರಜಗತ್ತಿಗೆ ತಿಳಿಸೋಕೆ ಹೆಚ್ಚು ಮುಂದಾಗೊಲ್ಲ ಅಂತ ಅಷ್ಟೆ. ಕಂಪೆನಿಯ ರಹಸ್ಯಗಳನ್ನು ಪರರಿಗೆ ತಿಳಿಸೋಲ್ಲ ಅನ್ನೋ ನಿಯಮವಿದ್ರೂ, ಅಲ್ಲಿ ತಾನು ಏನು ಮಾಡ್ತೀನಿ ಅಂತ ತಿಳಿಸದಿದ್ರೂ ಅಲ್ಲೊಬ್ಬ ಸಾಮಾನ್ಯನಾಗಿ ತಾನು ಹೇಗೆ ಬದುಕುತ್ತಿದ್ದೀನಿ ಅಂತ ತಿಳಿಸುವಂತಿಲ್ಲವೆಂಬ ಯಾವ ನಿಯಮಗಳೂ ಇರೋಲ್ಲ. ಆದ್ರೆ ಬರೆಯುವವರ್ಯಾರು ? ಓದುವವರ್ಯಾರು ? ಸಸ್ಪೆನ್ಸ್ ಥ್ರಿಲ್ಲರ್ರುಗಳು, ವಾಮಾಚಾರ, ಭಾನಾಮತಿ,ವಿಜ್ಞಾನ, ಆಪರೇಷನ್ನುಗಳ ಕತೆಗಳು, ಕಾದಂಬರಿಗಳು ಬಂದಿದ್ರೂ ಐಟಿಯ ಬಗ್ಗೆ ? ಕನ್ನಡದ ಮಟ್ಟಿಗೆ ಹೇಳ್ಬೇಕೂಂದ್ರೆ ಭೂತಗನ್ನಡಿ ಹಾಕಿ ಹುಡುಕಬೇಕಷ್ಟೇ. ಇಡೀ ಊರಿನ ಮಕ್ಕಳೆಲ್ಲಾ ಓಟದ ಸ್ಪರ್ಧೆಗೆ ಅಂತ ಭರಪೂರ ಅಭ್ಯಾಸ ಮಾಡ್ತಾ ಇದ್ದಾಗ , ಅದರ ಸುದ್ದಿಗೇ ಹೋಗದೇ ಆರಾಮಾಗಿ ಹೊದ್ದು ಮಲಗಿದಂತಹ ಪರಿಸ್ಥಿತಿ ಇದು !
ಸಾಹಿತ್ಯದ ಆಸಕ್ತ ದೈಹಿಕ ಚಟುವಟಿಕೆಗಳಿರುವ ಆಟೋಟದಂತಹ ಬೇರೆ ಕ್ಷೇತ್ರಗಳಲ್ಲಿ ಅನಾಸಕ್ತನಾಗಬೇಕೆಂಬ ಅಘೋಷಿತ ನಿಯಮವಿದೆಯಾ ಅನ್ನಿಸಿಬಿಡುತ್ತೆ ಕೆಲ ಸಲ ! ರಾತ್ರಿಯಿಡೀ ನಿದ್ದೆಗೆಟ್ಟು ಕಾದಂಬರಿ ಓದೋ ಸ್ನೇಹಿತರಿಗೆ ಬೆಳಗ್ಗೆ ಆರಕ್ಕೆ ವ್ಯಾಯಾಮಕ್ಕೆ ಹೋಗೋಣ ಬರ್ತೀಯ ಅಂದ್ರೆ ಅವ ನಿಮ್ಮನ್ನು ಪರಲೋಕದಿಂದ ಧರೆಗಿಳಿದ ಜೀವಿಯಂತೆ ನೋಡಿದ್ರೆ ಆಶ್ಚರ್ಯವಿಲ್ಲ ! ಅಲ್ಲ ಗುರು. ಬೆಳಗ್ಗೆ ಬೇಗೆದ್ದು ಜಾಗಿಗಿಂಗೆ ಹೋಗು, ಸಂಜೆ ಅಥವಾ ಬೇರೆ ಸಮಯದಲ್ಲಿ ಪುಸ್ತಕ ಓದಿಕೋ. ದೇಹ ಮತ್ತು ಮನಸ್ಸಿಗೆ ವ್ಯಾಯಾಮ ಕೊಡು ಅಂದ್ರೆ ಊಹೂಂ. ಅದೇ ತರಹ ಜಿಮ್ಮಿನ ಹುಡುಗರೂ ಅಷ್ಟೆ. ಫಿಟ್ನೆಸ್ ಫ್ರೀಕ್ ಅಂತ್ಲೇ ಕರೆಸಿಕೊಳ್ಳೋ ಅವರಿಗೆ ಸಾಹಿತ್ಯದ ಬಗೆಗಿನ ಆಸಕ್ತಿ ಕಮ್ಮಿಯೇ ಎನ್ನುವಂತಿರುತ್ತಾರೆ. ದೇಹದಾರ್ಢ್ಯದ ಬಗ್ಗೆ ಯೂಟ್ಯೂಬಿನ ವೀಡಿಯೋಗಳನ್ನು ಅದೆಷ್ಟು ಸಾರಿ ವೀಕ್ಷಿಸಿದ್ದರೂ, ಗಂಟೆಗಟ್ಟಲೆ ಮಾತಾಡಿದ್ರೂ ಈ ಬಗ್ಗೆ ಹೊಸಬನೊಬ್ಬನಿಗೆ ಸಹಾಯವಾಗುವಂತೆ ಬರೀತೀಯಾ ಅಂದ್ರೆ ದೂರವೋಡ್ತಾರೆ ! ಹಂಗಾಗಿ. ಒಂದೋ ದೇಹದಾರ್ಡ್ಯದ ಕಸರತ್ತು, ಓಟ, ಆಟಗಳಲ್ಲಿ ತೊಡಗಿಸಿಕೊಳ್ಳೋರ್ದೇ ಒಂದು ಗುಂಪು. ಇಲ್ಲಾಂದ್ರೆ ಮನಸ್ಸಿಗೆ ಮುದ ಕೊಡೋ ಸಾಹಿತ್ಯಾಸಕ್ತರದ್ದೇ ಒಂದು ಗುಂಪು. ಇವೆರಡೂ ಗುಂಪಿಗೆ ಸೇರದ ವಾಟ್ಸಾಪು, ಫೇಸ್ಬುಕ್ಕುಗಳಲ್ಲೇ ದಿನಗಳೆವ ಗುಂಪುಗಳೂ ಇವೆ. ಇವೆರಡು ಗುಂಪುಗಳ ನಡುವಿನ ಕೊಂಡಿಯಂತಿರುವ ಒಂದಿಷ್ಟು ಮನಸ್ಸುಗಳೂ ಇವೆ. ಆ ಮನಸ್ಸುಗಳಿಗೇ ಅರ್ಪಣೆ ಈ ಲೇಖನ.
ಓಟ ಅಂದರೆ ಶಾಲಾ ದಿನಗಳ ೧೦೦, ೨೦೦, ೪೦೦ ಮೀಟರ್ ಓಟಗಳೇ ನೆನಪಾದರೆ ಅಚ್ಚರಿಯಿಲ್ಲ. ನರ್ಸರಿ, ಒಂದನೇ ಕ್ಲಾಸು ..ಹಿಂಗೆಲ್ಲಾ ಸಣ್ಣ ವಯಸ್ಸಿನಲ್ಲಿದ್ದಾಗ ಎಲ್ಲರೂ ಈ ತರಹದ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಆಗೆಲ್ಲಾ ಮೊದಲನೇ ಬರ್ಬೇಕು ಅನ್ನೋಕಿಂತ , ಭಾಗವಹಿಸಬೇಕು ಅನ್ನೋ ಖುಷಿಯೇ ಓಟದ ಲೈನಿಗೆ ತಂದಿರುತ್ತೆ. ಆದ್ರೆ ಬೆಳೆಯುತ್ತಾ ಬಂದಂಗೆ ಹೆಂಗಿದ್ರೂ ಅವನು/ಅವಳೇ ಮೊದಲು ಬರೋದು, ನಾನ್ಯಾಕೆ ಸುಮ್ನೆ ಓಡ್ಬೇಕು ಅನ್ನೋ ಭಾವ ಬಂದು ಓಟಗಾರರ ಸಂಖ್ಯೆಯನ್ನು ಗಣನೀಯವಾಗಿ ಕೊಂದು ಹಾಕುತ್ತೆ ! ನಾಲ್ಕನೇ ಕ್ಲಾಸಲ್ಲೋ, ಐದನೇ ಕ್ಲಾಸಲ್ಲೋ ಓಡೋಕೆ ಹೋಗಿ ತೊಡೆಯ ಮಾಂಸಖಂಡಗಳೆಲ್ಲಾ ಸೆಳೆದಂತಾಗಿದ್ದು ಒಬ್ಬನನ್ನು ಜೀವಮಾನದಲ್ಲಿ ಮತ್ತೆಂದೂ ಓಡಲಾರೆನೆಂಬ ಭಯ ಹುಟ್ಟುಹಾಕಿಬಿಡಬಹುದು. ಓಡುವಾಗ ಬಿದ್ದು ಕಾಲು ಮುರಿದುಕೊಂಡ ಸಂದರ್ಭದಲ್ಲಿಯೋ, ಮೂಗು ಒಡೆದುಕೊಂಡ ಸಂದರ್ಭದಲ್ಲಿಯೋ ಮನೆಯಲ್ಲಿ ಆದ ಮಂಗಳಾರತಿ ಇನ್ನೆಂದೂ ಓಡಬಾರದೆಂಬ ನಿರ್ಧಾರ ಹುಟ್ಟಿಸಿರಬಹುದು. ಆದ್ರೆ ಮೊದಲನೆ, ಎರಡನೆ ಎಂಬ ಸ್ಪರ್ಧೆಗಿಂತಲೂ ಹೆಚ್ಚಾಗಿ ನಮ್ಮೊಂದಿಗೆ ನಾವೇ ಸ್ಪರ್ಧೆಗಿಳಿಯುವಂತಿದ್ರೆ ? ಸ್ಪರ್ಧೆಯೆಂಬುದು ಎಂದೋ ಒಂದಿನದ ಸಂಭ್ರಮವಾಗಿರದೇ ದಿನನಿತ್ಯದ ಖುಷಿಯಾಗಿದ್ರೆ ? ಮಕ್ಕಳು,ಮಹಿಳೆಯರು, ಮುದುಕರು, ಯುವಕರೆನ್ನದೇ, ನಗರ ನಗರವೇ ಓಡ್ತಾ ಇರುವಾಗ ನಾನೂ ಅವರೊಂದಿಗೆ ಹೆಜ್ಜೆ ಹಾಕ್ತೀನೆಂಬುದೇ ಒಂದು ಸಂಭ್ರಮವೇ ಮೇಲಿನೆಲ್ಲಾ ಭೀತಿಗಳನ್ನು ತೊಡೆದುಹಾಕಬಹುದು. ಓಡಲಾಗದಿದ್ರೆ ನಡೆದಾದ್ರೂ ಮುಗಿಸುತ್ತೇನೆ. ಈ ಬಾರಿ ಆಗದಿದ್ರೆ ಮುಂದಿನ ಬಾರಿ. ಅದಾಗದಿದ್ರೆ ಅದರ ಮುಂದಿನ ಬಾರಿ ಅಂತ ಓಟಕ್ಕೆ ಮುಂದಾಗೋ ಪರಿಯಿದ್ಯೆಲ್ಲಾ ಅದೇ ನಮ್ಮೊಳಗಿನ ಅಳುಕಿನೊಂದಿಗಿನ ನಮ್ಮ ನಿತ್ಯಯುದ್ದದ ಮೊದಲ ಚರಣ. ಇಲ್ಲಿ ಗೆಲುವು ಎಂದೋ ಒಂದಿನ ಬರುವುದಲ್ಲ. ಪ್ರತಿ ದಿನವೂ ಗೆಲುವೇ.
ನಗರ ನಗರವೇ ಓಡೋ ಓಟ ಅಂತ ಹೇಳೋ ಹೊತ್ತಿಗೆ ನಾನು ಯಾವುದರ ಬಗ್ಗೆ ಹೇಳುತ್ತಿದ್ದೀನಿ ಅಂತ ಗೊತ್ತಾಗಿರಬೇಕಲ್ಲ. ಹೂಂ. ಅದೇ ಮ್ಯಾರಥಾನ್ಗಳ ಬಗ್ಗೆ. ಹೊರದೇಶಗಳಲ್ಲಿ ಪ್ರಖ್ಯಾತವಾಗಿದ್ದ ಈ ಮ್ಯಾರಥಾನ್ ಇತ್ತೀಚೆಗೆ ಭಾರತದಲ್ಲಿ, ಅಷ್ಟೇ ಏಕೆ ನಮ್ಮ ಬೆಂಗಳೂರಲ್ಲೂ ತುಂಬಾ ಪ್ರಸಿದ್ದಿ ಪಡೆಯುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ವರ್ಷಕ್ಕೊಂದು ಮ್ಯಾರಥಾನ್ ನಡೆಯೋದು ಹೆಚ್ಚು ಎಂಬ ಪರಿಸ್ಥಿತಿಯಿದ್ದ ಬೆಂಗಳೂರಲ್ಲಿ ಈ ವರ್ಷದಲ್ಲಾಗಲೇ ಐದಾರು ಮ್ಯಾರಥಾನ್ಗಳು ನಡೆದಾಗಿದೆ ! ಐದು ಕಿ.ಮೀ ಓಟ. ೧೦, ೨೦, ವಯಸ್ಕರ ಓಟ, ವಿಕಲಚೇತನರ ಓಟ ಅಂತೆಲ್ಲಾ ಹಲವು ವಿಭಾಗಗಳಲ್ಲಿ ನಡೆಯೋ ಸ್ಪರ್ಧೆಯಲ್ಲಿ ಭಾಗವಹಿಸೋದೇ ಒಂದು ಖುಷಿ. ಯಾರೋ ನೈಜಿರಿಯಾದವ್ರೋ, ಇಥಿಯೋಪಿಯಾದವ್ರೋ, ರಾಷ್ಟ್ರಮಟ್ಟದಲ್ಲಿ ಈಗಾಗಲೇ ಹೆಸರು ಮಾಡಿದವ್ರು ಇಲ್ಲೂ ಬಂದು ಗೆಲ್ತಾರೆ. ನಾನ್ಯಾಕೆ ಓಡಬೇಕು ಅಂತ ಇಲ್ಲಿ ಭಾಗವಹಿಸೋ ಯಾರೂ ಯೋಚಿಸೋಲ್ಲ. ಎಲ್ಲರ ಗುರಿ ಒಂದೇ. ತಮ್ಮ ಹಿಂದಿನ ಸಮಯವನ್ನು ಉತ್ತಮಪಡಿಸಿಕೊಳ್ಳೋದು. ಆರೋಗ್ಯವನ್ನು ಉತ್ತಮಪಡಿಸಿಕೊಳ್ಳೋದು. ಒಂದಿನ ಐದೋ, ಹತ್ತು ಕಿ.ಮಿ ಓಡಿದ್ರೆ ಆರೋಗ್ಯ ಹೆಂಗಪ್ಪಾ ಉತ್ತಮವಾಗುತ್ತೆ ಅಂದ್ರಾ ? ಅಲ್ಲೇ ಇರೋದು ವಿಷಯ. ಇಲ್ಲಿ ಓಟವೆನ್ನೋದು ಒಂದಿನದ ಕತೆಯಲ್ಲ. ಎಕ್ಸಾಮಿನ ಹಿಂದಿನ ದಿನದ ನೈಟೌಟಿನಂತೆ ಹಿಂದಿನ ದಿನದ್ದೂ ಅಲ್ಲ. ಅದರ ಹಿಂದಿನ ಅದೆಷ್ಟೋ ಹಿಂದಿನ ದಿನಗಳ, ವಾರಗಳ ಶ್ರಮದ ಕತೆ.
ಪ್ರತೀ ದಿನ ಬೆಳಗೆದ್ದೋ, ಸಂಜೆಯ ಕೆಲಸದ ನಂತರವೋ ಎದ್ದು ಓಡೋಕೆ ಅಂತ್ಲೇ ಹೋಗೋ ಎಷ್ಟೋ ಜನ ನಗರಗಳಲ್ಲಿ ಕಾಣ್ತಿರ್ತಾರೆ. ಇವ್ರೆಲ್ಲಾ ವೃತ್ತಿಪರರು ಅಂತಲ್ಲ. ೧ ಕಿ.ಮೀ ಓಡೋಕೆ ಆರರಿಂದ ಏಳು ನಿಮಿಷ ತಗೊಳ್ಳೋರು, ಸ್ಪರ್ಧೆಯ ದಿನದಂದು ೧೦ ಕಿ.ಮೀ ಓಡೋಕೆ ಒಂದೂವರೆ ಘಂಟೆ, ಎರಡು ಘಂಟೆ ತಗೊಂಡೋರೂ ಇರ್ತಾರೆ. ೧೦ ಕಿ.ಮೀ ನ ನಲವತ್ತು ನಿಮಿಷದಲ್ಲಿ ಮುಗ್ಸೋರೂ ಇರ್ತಾರೆ. ನಲವತ್ತು ನಿಮಿಷದಲ್ಲಿ ಮುಗ್ಸೋನಿಗೂ ೨೭-೨೮ ನಿಮಿಷದಲ್ಲಿ ಮುಗ್ಸೋ ಆಫ್ರಿಕಾ ಓಟಗಾರರೆದ್ರು ತಾನು ಗೆಲ್ಲೋದು ವಿಪರೀತ ಕಷ್ಟ ಅಂತ ಗೊತ್ತಿದ್ರೂ ಆತ ಅಭ್ಯಾಸ ಬಿಡಲ್ಲ. ದಿನದಿನಕ್ಕೂ ತನ್ನ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳೋದು, ಅದಾಗದಿದ್ದರೆ ಅಷ್ಟನ್ನಾದ್ರೂ ಕಾಯ್ದುಕೊಳ್ಳೋಕಾದ್ರೂ ಪ್ರಯತ್ನಿಸ್ಬೇಕು ಅನ್ನೋದೇ ಅವನ ಗುರಿ. ಮೂರು ಕಿ.ಮೀ ಓಡೋಕೆ ೧೭ ನಿಮಿಷ ತಗೋತಿದ್ದವ ಅದೆಷ್ಟೋ ದಿನಗಳ ನಂತರ ೧೬ ನಿಮಿಷ ನಲವತ್ತು ಸೆಕೆಂಡಿಗೆ ಓಡುವಷ್ಟು ಅಭಿವೃದ್ಧಿ ಹೊಂದಿದ ಅಂದ್ರೆ ಅದಕ್ಕಿಂತ ಹೆಚ್ಚು ಖುಷಿ ಅವನಿಗಿಲ್ಲ. ನಿನ್ನೆ ೫ ನಿಮಿಷ ೧೬ ಸೆಕೆಂಡುಗಳಲ್ಲಿ ಒಂದು ಕಿ.ಮೀ ಓಡಿದವನಿಗೆ ಇಂದು ೫ ನಿಮಿಷ ೧೫ ಸೆಕೆಂಡಲ್ಲಿ ಮುಗಿಸೋಕೆ ಸಾಧ್ಯವಾದರೂ ಅದು ದೊಡ್ಡ ಯಶಸ್ಸೇ . ಆ ಖುಷಿ ಯಾವ ಟ್ರೋಫಿ ಗೆದ್ದದ್ದಕ್ಕಿಂತ ಕಮ್ಮಿಯಿಲ್ಲ ! ಹತ್ತು ಕಿ.ಮೀ ಓಡುವ ದಿನಕ್ಕಾಗಿ ದಿನಾ ಹತ್ತು ಕಿ.ಮೀ ಓಡಿ ಅಭ್ಯಾಸ ಮಾಡದಿದ್ದರೂ ನಾಲ್ಕೋ, ಐದೋ, ಆರೋ ಕಿ.ಮೀ ಓಡಿ ತಮ್ಮ ದೈಹಿಕ ಸಾಮರ್ಧ್ಯವನ್ನು ವೃದ್ಧಿಸೋಕೆ ಆತ ಮಾಡೋ ಪ್ರಯತ್ನವೇ ಆತನ/ಆಕೆಯ ನಿಜವಾದ ಯಶಸ್ಸು. ನೂರು ಮೀಟರ್ರೂ ಓಡೋಕಾಗದೇ ಇದ್ದ ಹುಡುಗ ನಿರಂತರ ೧ ಕಿ.ಮೀ ಓಡುವಂತಾಗಿ, ನಂತರ ಅದು ಎರಡಾಗಿ, ಮೂರಾಗಿ , ಐದಾಗಿ ಹತ್ತಾಯಿತೆಂದರೆ ಅದು ಮೇಲಿನ ಅಭ್ಯಾಸದ ಫಲವೇ. ಓಡೋ ಪ್ರಯತ್ನದ ಕೆಲ ಹೆಜ್ಜೆಗಳಲ್ಲೇ ಅಸ್ತಮಾದಿಂದ ಉಸಿರುಗಟ್ಟುತ್ತಿದ್ದವ ಈಗ ನಿರಂತರವಾಗಿ ಕಿಲೋಮೀಟರ್ಗಳಷ್ಟು ಓಡಬಲ್ಲನೆಂದರೆ ಅದರ ಹಿಂದೆ ಯಾವುದೇ ಜಾದುವಿಲ್ಲ. ಯಾವುದೋ ಓಟಕ್ಕೆ ಭಾಗವಹಿಸುವ ತಯಾರಿಯ ಫಲಶೃತಿಯಷ್ಟೆ ಇದು . ಪ್ರತಿ ದಿನದ ಓಟದ ಸಂದರ್ಭದಲ್ಲಿ ಹರಿದ ಬೆವರ ಧಾರೆ, ಮೊದಲ ಕೆಲ ದಿನಗಳು ಹಿಡಿದುಕೊಂಡ ಕಾಲುಗಳು, ಕಾಡಿದ ಬೆನ್ನುನೋವು, ಹಾಸಿಗೆ ಸಿಕ್ಕಿದರೆ ಸಾಕೆನ್ನುವಷ್ಟು ಆವರಿಸಿಕೊಂಡು ಸುಸ್ತು..ಇವೆಲ್ಲಾ ಕೊನೆ ದಿನದ ಓಟವೊಂದರ ಹಿಂದೆ ಮರೆಯಾಗೋಲ್ಲ. ಜಡ್ಡುಹಿಡಿದ ಸೋಂಬೇರಿ ದೇಹದ ಜಡ್ಡು ಬಿಡಿಸಿ ನಿಧಾನವಾಗಿ ಒಳ್ಳೆಯದನ್ನೇ ಮಾಡೋ ಕಹಿಬೇವಿನ ಕಷಾಯದಂತೆ ಇವು.ಮುಂಚೆಯೇ ಅಂದಂತೆ ಇದು ಯಾರದೋ ವಿರುದ್ದದ ಗೆಲುವಲ್ಲ. ನಮಗೆ ಸಾಧ್ಯವಾಗೋಲ್ಲ ಅಂತ ನಾವೇ ಹಾಕಿಕೊಂಡ ಎಲ್ಲೆಗಳನ್ನ ಮೀರೋ ಪುಟ್ಟ ಪ್ರಯತ್ನವಷ್ಟೆ. ಅಂದ ಹಾಗೆ ಇದೇ ಜುಲೈ ೧೦ನೇ ತಾರೀಖಿನಂದು ಬೆಂಗಳೂರಿನಲ್ಲಿ ೫ ಮತ್ತು ೧೦ ಕಿ.ಮೀ ಓಟದ ಸ್ಪರ್ಧೆ ಬರುತ್ತಿದೆ. ಆ ಬಗ್ಗೆ ಕನ್ನಡದಲ್ಲಿ ಏನೇನೂ ಮಾಹಿತಿಯಿಲ್ಲ. ಓಟ ಏಕೆ ಬೇಕೆಂಬ, ಬೇಕು ಬೇಡಗಳ ಬಗ್ಗೆ ಕನ್ನಡದಲ್ಲೇ ಏಕೆ ಬರೆಯಬೇಕೆಂಬ ಆಲೋಚನೆಗಳ ಕೂಸೇ ಈ ಲೇಖನ. ಓಟವೆಂದ್ರೆ ಇಷ್ಟೇ ಅಲ್ಲ. ಬರೆದಷ್ಟೂ ಇರುವ ಆ ಕ್ಷೇತ್ರದ ಬಗ್ಗೆಯೂ ಒಂದಿಷ್ಟು ಕಾದಂಬರಿಗಳಾಗಬಹುದು. ಈ ಬಗ್ಗೆ ಈಗಾಗಲೇ ಬರೆಯುತ್ತಿರುವ ಅದೆಷ್ಟೋ ಘಟಾನುಗಟಿಗಳ ಮಧ್ಯೆ ಹಿಂದೆಲ್ಲೋ ಅಂಬೆಗಾಲಿಡುತ್ತಿರುವ ಕೂಸು ನಾನೆಂಬ ಅರಿವಿದ್ದರೂ ಪ್ರಯತ್ನವನ್ನೇ ಮಾಡದೇ , ನನ್ನಿಂದಾಗದೆಂಬುದಕ್ಕಿಂತ ಸೋಲಿಗಿಂತ ಪ್ರಯತ್ನಿಸುವ ಹಾದಿಯೇ ಗೆಲುವೆಂಬ ಖುಷಿಯಲ್ಲಿ ಸದ್ಯಕ್ಕೊಂದು ವಿರಾಮ.
No comments:
Post a Comment