Image Taken from Wikipedia |
ದೃಶ್ಯ ೨: ಹೀರೋಗೆ ಮಧ್ಯರಾತ್ರಿ ಎಚ್ಚರ ಆಗುತ್ತೆ. ಮನೇಲಿರೋ ಹಳೇ ಟೀವಿ ಸಡನ್ನಾಗಿ ಆನ್. ಅದ್ರಲ್ಲಿ ಭಯ ಹುಟ್ಟಿಸುವಂಗೆ ಗೆರೆಗಳು ಬರ್ತಾ ಇದೆ. ಪಕ್ಕಕ್ಕೆ ಕತ್ತು ತಿರುಗಿಸಿದ್ರೆ ಭಯಾನಕವಾಗಿರೋ ಒಬ್ಬ ಹುಡುಗ. ಲೈಟಾಗಿರೊ ತೆಗೆದು ಹಾಕ್ಕೋತಿರೋ ಬಾಗಿಲು ಸಂದಿಯಿಂದ ಬೆಳಕು ಬರ್ತಾ ಇದೆ. ಮತ್ತೆ ಕತ್ತು ತಿರುಗಿಸಿದ್ರೆ ಭೂತ ! ಬಾಗಿಲು ತೆಗೆದು ತಲೆ ಹೊರಹಾಕಿದ್ರೆ ಕಣ್ಣುಕುಕ್ಕುವಂತೆ ಲೈಟ್ ಹಾಕ್ಕೊಂಡು ಗುದ್ದೋಕಂತ್ಲೇ ಬರ್ತಿರೋ ವಾಹನಗಳು. ಹಿಂದೆ ತಿರುಗಿ ನೋಡಿದ್ರೆ ಅಲ್ಲೂ ವಾಹನಗಳು. ರಸ್ತೆ ಮಧ್ಯದಲ್ಲಿ ತಾನು. ಆ ಕಡೆ ದಾಟೋಕೆ ಪ್ರಯತ್ನ ಮಾಡ್ತಿರೋ ಅಪ್ಪ. ತಡಿ ಅಣ್ಣ, ನಾನೂ ಬರ್ತೀನಿ ಅನ್ನೋದ್ರೊಳಗೆ ಧಡಾರೆಂದು ಅಡ್ಡಬಂದ ವಾಹನ . ಪಟ್ಟಂತ ನಾಯಕನಿಗೆ ಎಚ್ಚರವಾಗುತ್ತೆ. ಹಿಂದೆ ನಡೆದಿದ್ದೆಲ್ಲಾ ಕನಸು !
ದೃಶ್ಯ ೩: ಎರಡು ತರದ ನಾಯಿ ಇರುತ್ತೆ. ಒಂದು ಕರಿ ನಾಯಿ. ಇನ್ನೊಂದು ಬಿಳಿ ನಾಯಿ. ದ್ವೇಷ, ಅಸೂಯೆ, ಹಿಂಸೆ.. ಇವೆಲ್ಲಾ ಕರಿನಾಯಿ. ಪ್ರೀತಿ, ಸತ್ಯ ಇವೆಲ್ಲಾ ಬಿಳಿನಾಯಿ. ನಮ್ಮೊಳಗಿರೋ ಈ ಎರಡೂ ನಾಯಿಗಳೂ ಪರಸ್ಪರ ಕಚ್ಚಾಡ್ತಾ ಇರುತ್ವೆ. ಇದ್ರಲ್ಲಿ ಗೆಲ್ಲೋದ್ಯಾರು ? ಈ ಯಾವ ನಾಯಿಗೆ ಜಾಸ್ತಿ ಬಿಸ್ಕೇಟ್ ಹಾಕ್ತೀಯೋ ಅದು !!!
ದೃಶ್ಯ ೪:ಅಪ್ಪ ಮಗ ಕ್ರಿಕೆಟ್ ನೋಡ್ತಿರ್ತಾರೆ. ಲಕ್ಷ್ಮಣ್ ಬಂದಾಗ ಬಂದ ನೋಡು ಕುಟುಕೇಶ ಅಂತ ಅಪ್ಪ ಅಂತಿದ್ರೆ ಥಿಯೇಟರ್ ಫುಲ್ ಶಿಳ್ಳೆ.. ಚಿತ್ರವೊಂದು ಕನೆಕ್ಟ್ ಆಗೋದು ಹಿಂಗೇನಾ ಅನ್ಸಿಬಿಡುತ್ತೆ !
ಎರಡೂವರೆ ಘಂಟೆ ಆಚೀಚೆ ಕದಲದಂತೆ ಹಿಡಿದಿಟ್ಟ ಚಿತ್ರದ ಕೆಲ ಸ್ಯಾಂಪಲ್ಲುಗಳಷ್ಟೇ ಇದು. ಕೆಲಕಡೆ ಹಾರರ್ ಮೂವಿಯಂತೆ, ಕೆಲವೆಡೆ ಸಸ್ಪೆನ್ಸ್ ಥ್ರಿಲ್ಲರ್ರಿನಂತೆ, ಐಟಿ ಉದ್ಯೋಗಿಯೊಬ್ಬನ ತೊಳಲಾಟಗಳಂತೆ, ಅಪ್ಪ-ಮಗನ ಭಾವಗಳ ಬಿಂಬದಂತೆ, ಅಪ್ಪನ ಪ್ರೀತಿಯ ಮಗನೂ ಪುನರಾವರ್ತಿಸುವಂತೆ,ಕೊಲೆಯ ಹುಡುಕಾಟದಂತೆ, .. ಹಿಂಗೆ ಹುಡುಕಿದಷ್ಟೂ ಆಯಾಮ ಚಿತ್ರಕ್ಕೆ.
ಯಾವ ಚಿತ್ರದ ಬಗ್ಗೆ ಹೇಳ್ತಿದೀನಿ ಅಂತ ಈಗಾಗ್ಲೇ ಗೊತ್ತಾಗಿರ್ಬೇಕಲ್ಲ. ಅದೇ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು.
ಚಿತ್ರ ಶುರುವಾಗ್ತಿದ್ದಂಗೆ ಎರಡು ಆಯಾಮಗಳಲ್ಲಿ ಕತೆ ಸಾಗೋಕೆ ಶುರುವಾಗುತ್ತೆ. ಕಾರಲ್ಲಿ ಹೋಗ್ತಿರೋ ಕತೆ ನೋಡೋದಾ ರಕ್ಷಿತ್ ಶೆಟ್ಟಿ-ಅನಂತ್ ನಾಗ್ ಜುಗಲ್ಬಂದಿ ನೋಡೋದಾ ಅನ್ನೋ ಗೊಂದಲದಲ್ಲಿರುವಾಗ್ಲೇ ಒಂದೊಂದು ಟ್ಯೂನುಗಳು ಶುರುವಾಗುತ್ತೆ. ಸನ್ನಿವೇಶಕ್ಕೆ, ಭಾವಕ್ಕೆ ತಕ್ಕಂತಾ ಹಾಡುಗಳು. ಹಾಡಲ್ಲಿ ಹೀರೋ ಹೀರೋಯಿನ್ನು ಮರ ಸುತ್ತುತಾ ಇದ್ರೆ ಹಾಡಲ್ಲೇನಿದೆ ಅಂತ ಅರ್ಥ ಮಾಡ್ಕೊಳ್ಳೋ ಪ್ರಯತ್ನ ಮಾಡ್ಬೋದು. ಆದ್ರೆ ಹಾಡಿನ ಸಾಹಿತ್ಯ ಅರ್ಥಮಾಡ್ಕೊಳ್ಳೋದಾ, ಚಿತ್ರದ ಸಬ್ ಟೈಟಲ್ ಓದೋದಾ ? ಅಥವಾ ಜೊತೆ ಜೊತೆಗೇ ಓಡ್ತಿರೋ ಕತೆ ಕಡೆ ಗಮನ ಕೊಡೋದಾ ಅನ್ನೋ ಗೊಂದಲದಲ್ಲಿ ನಾವೇ ಕಳೆದುಹೋದ ಭಾವ. ಗುಲಾಬ್ ಜಾಮೂನ್, ಜಹಾಂಗೀರ್, ಚಂಪಾಕಲಿ ಒಟ್ಟೊಟ್ಟಿಗೇ ಕೊಟ್ಟು ಎಲ್ಲಾ ತಿನ್ನು ಅಂದಂಗಿದು !
ಇಲ್ಲಿಯವರೆಗೆ ಬಂದ ವಿಮರ್ಶೆಗಳಲ್ಲೆಲ್ಲಾ ಅನಂತನಾಗರ ಅಭಿನಯದ ಬಗ್ಗೆ ಸಾಕಷ್ಟು ಪ್ರಶಂಸೆ ಕೇಳಿಬಂದಿದೆ. ಅದ್ನ ಓದಿ, ಓದಿ ನಂಗೆ ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಪೋಷಕ ಪಾತ್ರದ ತರ ಬಂದೋಗ್ತಾರಾ ಅನ್ನಿಸಿಬಿಟ್ಟಿತ್ತು ! ಆದ್ರೆ ಹಂಗೇನಿಲ್ಲ. ಜೀವನದಲ್ಲಿ ಏನೋ ಸಾಧಿಸಬೇಕು ಅನ್ನೋ ಹಟದಲ್ಲಿ, ಅಪ್ಪನಿಗೆ, ಪ್ರಪಂಚಕ್ಕೆ, ತನಗೇ ಸುಳ್ಳು ಹೇಳಿಕೊಳ್ಳುತ್ತಾ ಬದುಕೋ ಅತ್ತಲೋ ಇತ್ತಲೋ ಎಂಬ ತೊಳಲಾಟದ ಪಾತ್ರದಲ್ಲಿ ರಕ್ಷಿತ್ ಚೆನ್ನಾಗೇ ನಟಿಸಿದ್ದಾರೆ. ಅನಂತನಾಗ್ ನಟಿಸಿಲ್ಲ ಅಂತಲ್ಲ. ಅವರು ಚಿತ್ರದಲ್ಲಿ ಎಷ್ಟು ಆವರಿಸಿಕೊಂಡಿದಾರೆ ಅಂದ್ರೆ ಅದು ನಟನೆಯಲ್ಲ, ನಮ್ಮ ನಿಮ್ಮ ಪಕ್ಕದಲ್ಲೆಲ್ಲೋ ಇರೋ ವೆಂಕೋಬರಾವ್ ಅನಿಸಿಬಿಡುತ್ತೆ. ನಿಜಜೀವನದ ಘಟನೆಗಳನ್ನೇ ಯಾರೋ ಕ್ಯಾಮರಾ ಇಟ್ಟು ಶೂಟ್ ಮಾಡಿದ್ದಾರಾ ಅಂತ್ಲೂ ಅನಿಸಿಬಿಡುತ್ತೆ. ರಕ್ಷಿತ್ ಶೆಟ್ಟಿ ಹೇರ್ ಸ್ಟೈಲ್ ಎರಡು ಕಡೆ ಮಾತ್ರ ಬದಲಾದ್ರೆ ಅನಂತ್ ನಾಗರ ಹೇರ್ ಸ್ಟೈಲು ಅನೇಕ ಸಾರಿ ಬದಲಾಗುತ್ತೆ !
ಹಂಗಂತಾ ಚಿತ್ರದಲ್ಲಿ ಇನ್ಯಾರೂ ಇಲ್ಲವೇ ಇಲ್ಲ ಅಂತಿಲ್ಲ. ಕ್ಯೂಟಾಗಿರೋ ಡಾಕ್ಟರ್ ಸಹನಾ ಆಗಿ ಶ್ರುತಿ ಹರಿಹರನ್, ಅಚ್ಯುತ್ ಕುಮಾರ್,ಚಿತ್ರದಲ್ಲಿನ ಅವರ ಕುಟುಂಬ, ದತ್ತಣ್ಣ ,ವಿಲನ್ ಆದ್ರೂ ಇಷ್ಟ ಆಗೋ ವಸಿಷ್ಟ, ಪುಷ್ಪನ್ ಲವ್ ಸ್ಟೋರಿ ಹಿಂಗೆ ಬಂದರೆಲ್ಲಾ ಇಷ್ಟ ಆಗ್ತಾರೆ.
ಚಿತ್ರ ಅಂದ್ರೆ ಒಂದೆರಡು ಫೈಟು, ಮಸಾಲೆ ಸಾಂಗು, ಡಬಲ್ ಮೀನಿಂಗ್ ಡೈಲಾಗುಗಳು, ಅನಾವಶ್ಯಕವಾಗಿ ಹೀರೋ ಕೈಯಲ್ಲಿ ಹೊಡೆತ ತಿನ್ನುತ್ತಾ, ಪೆದ್ದುಪೆದ್ದಾಗಿ ಆಡೋದನ್ನೇ ಹಾಸ್ಯ ಅಂದ್ಕೊಂಡಿರೋ ಹಾಸ್ಯನಟರು ಇಷ್ಟೇನಾ ಅನ್ನಿಸಿಬಿಟ್ಟಿತ್ತು ಇತ್ತೀಚಿಗಿನ ಚಿತ್ರಗಳಲ್ಲಿ. ಆದ್ರೆ ಇತ್ತೀಚೆಗೆ ಭಿನ್ನರೀತಿಯ ಕತೆ ಹೊಂದಿರೋ ಚಿತ್ರಗಳು ಹೊರಬಂದು ಅವು ಹಿಟ್ಟೂ ಆಗ್ತಿರೋದು ಖುಷಿ ಕೊಡ್ತಿದೆ. ಮಧ್ಯ ಮಧ್ಯ ಬರೋ ಹುಡ್ಕೋದು ಬದಲು ಕುಡ್ಕೋದು ಅನ್ನೋ ಪ್ರಯೋಗಗಳು, ರಜಾಕು, ರಜಾಕು ಮುಂತಾದ ಸನ್ನಿವೇಶಗಳು ಯಾವ ಕಾಮಿಡಿಯನ್ನಿಲ್ಲದೇ ಇದ್ರೂ ನಗು ತರಿಸುತ್ತೆ. ಎಲ್ಲೂ ಅನಾವಶ್ಯಕ ಅನಿಸದಂತೆ ಈ ತರದ ಸನ್ನಿವೇಶಗಳನ್ನೂ ಇಟ್ಟು ಪ್ರೇಕ್ಷಕರಿಗೆ ಚಿತ್ರದ ಏಕತಾನತೆ ಬೋರ್ ಹಿಡಿಸದಂತೆ ಮಾಡಿರೋ ನಿರ್ದೇಶಕರ ಜಾಣ್ಮೆ ಮೆಚ್ಚುವಂತದ್ದೇ. ಅಲ್ಜೀಮರ್ಸ್ ಕಾಯಿಲೆ ಬಗೆಗೆ ಹಿಂದಿಯಲ್ಲೊಂದು ಚಿತ್ರ ಬಂದಿತ್ತು. ಬ್ಲಾಕ್ ಅಂತ. ಅದಕ್ಕೆ ಹೋಲಿಸಿ ಈ ಸಿನಿಮಾದಲಿನ ಒಂದಿಷ್ಟು ತಾಂತ್ರಿಕ, ವೈದ್ಯಕೀಯ ದೋಷಗಳನ್ನು ಪಟ್ಟಿ ಮಾಡ್ಬೋದಾದ್ರೂ ಅಂತದ್ಯಾವುದೂ ಎರಡೂವರೆ ಘಂಟೆಗಳ ನಂತರ ನೆನಪಿರೋಲ್ಲ. ನೆನಪಿರೋದು ಒಂದೊಳ್ಳೆ ಕತೆಗೆ ಇನ್ನೂ ಒಳ್ಳೆ ನಿರೂಪಣೆಯಷ್ಟೇ. ಇನ್ನೂ ನೋಡಿಲ್ಲದೇ ಇದ್ರೆ, ಆರಾಮಾಗಿ ಹೋಗಿ ಕುಟುಂಬಸಮೇತ ನೋಡ್ಕೊಂಡು ಬರಬಹುದಾದಂತ ಸಿನಿಮಾ..ಅಥವಾ ಹಾಡಿಗೊಂದ್ಸಲ, ಅಭಿನಯಕ್ಕೊಂದ್ಸಲ ಅಂತ ಮತ್ತೆ ಮತ್ತೆ ಹೋಗ್ಬರ್ಬೋದು !
ಚುಟುಕಾದ ವಿವರಣೆ, ವಿಶ್ಲೇಷಣೆ ಮತ್ತು ನವಿರಾದ ಬರಹ
ReplyDeleteಹೇಳಿಯೂ ಹೇಳದ, ತಿಳಿಸಿಯೂ ತಿಳಿಸದ ರೀತಿಯಲ್ಲಿ ಬರೆದಿರುವ ಈ ಬರಹ ಇಷ್ಟವಾಗುತ್ತದೆ
ಸುಂದರವಾದ ಚಿತ್ರದ ಬಗ್ಗೆ ಅಷ್ಟೇ ಆಪ್ತತೆ ತೋರುವ ಬರಹ
ಸೂಪರ್ ಪ್ರಶಸ್ತಿ
ಧನ್ಯವಾದಗಳು ಶ್ರೀಕಾಂತಣ್ಣ
Delete