ನವಮಾಸದ ಐದನೆ ದಿನ ಸಂಭ್ರಮ
ಪೊರೆದ ಗುರುವ ನೆನೆವ ನಲಿವೆ ಅನುಪಮ
ಅವರ ಬಗೆಯೆ ನುಡಿಯು, ಚಿತ್ರ
ಬೋರ್ಡ ಮೇಲೆ ಗೋಡೆ ಮೇಲೆ
ನಗುನಗುತಾ ಒಳಬರಲು ಅವರ ಕರೆಯಲು
ಇಷ್ಟ ದಿನದ ಕಾಟಕೊಮ್ಮೆ ಕ್ಷಮೆಯ ಕೇಳಲು|೧|
ವಂದಿಸುವೆವು ಗುರುವರ್ಯ,ಸ್ವೀಕರಿಸೋ ಆಸನ
ಶಿಷ್ಯವೃಂದ ನೀಡುತಿರುವ ಅಲ್ಪ ಕಾಣಿಕೆ
ಖಾದ್ಯ, ಪೇಯ ಇಷ್ಟೆ ಗುರುವೆ ಕೊಡುವೆವಿಂದಿಗೆ
ಅಡ್ಡ ದಾರಿ ಮೆಟ್ಟಿ ಗುರುವೆ ಬೆನ್ನ ತಟ್ಟಿ ಗೆಲುವಿನಲ್ಲಿ
ನಮ್ಮ ಪೊರೆದ ಗುರುವೆ ಮತ್ತೆ ಕ್ಷಮಿಸೋ ತಪ್ಪನು
ನಿನ್ನ ಮಾತು ಕೇಳದಿದ್ದ, ಬಯ್ಯುವಂತೆ ಮಾಡುತಿದ್ದ
ಶಾಪ ಹಾಕುವಂತೆ ನಡೆದ ನಮ್ಮ ನಡೆಯನು
ಸರಿದಾರಿಗೆ ತಂದ ತಂದೆ ನುಡಿಯೊ ಹಿತವನು|೨|
ಗುರುವಿಗೆಂದು ಕ್ಷಣದಿ ಭಾವ
ನಮನ ಪೋಣಿಸಿಟ್ಟು ಗೆಳತಿ
ಅದನು ನಿನಗೆ ಹೇಳಲಾರೆನೆಂದು ನಾಚಿಸಿ
ಗೆಳೆಯನೊಬ್ಬ ಮುಂದೆ ಬಂದು ಅದನೆ ವಾಚಿಸಿ
ವಾಣಿ ಕೃಪೆಯ ಪಡೆದನಲ್ಲೋ ಅವನಿಗರಿಯದೆ
ಎಂದು ಬರೆಯದಾತ ಬರೆದ ಹಿಂದೆ ನೋಡದೆ
ನಿನ್ನ ಮಹಿಮೆ ಹೊಗಳಲೆನಗೆ ಪದವೆ ಸಾಲದೆ|೩|
ಇಷ್ಟು ಒಳ್ಳೆಯವರ ನಾವು
ಎಂದೇ ಆಶ್ಚರ್ಯ ನಮಗೆ
ಗುರುಗಳೇ, ಅಂದಿನ ನಿಮ್ಮ ಮಾತ ಕೇಳಿ
ನಿಮ್ಮ ಗುಣವ ಅರಿತೆವಂದೆ
ಕಣ್ಣ ಪೊರೆಯು ಹರಿಯಿತಂದೆ
ಕ್ಷಮಿಸಿ ನನ್ನ ಅಂದೆಯಲ್ಲೋ ಒದ್ದೆಯಾಯಿತು
ಕಣ್ಣಾಲೆಯು, ಕರವಸ್ತ್ರವು ಮುದ್ದೆಯಾಯಿತು
ಬರದ ನೀರು ಭಾವದಂತೆ ಉಕ್ಕಿಹೋಯಿತು|೪|
ಮರೆಯಲಾರೆ ಗುರುವೆ ನಿನ್ನ
ಎದುರಿಗಿರದೆ ಹೋದರೂ
ಮಿಂಚಿಸಾದ್ರೂ ತಲುಪಿಸುವೆನು
ಫಲಭೂಮಿಗೆ ಹಾರೈಕೆ
ಮಳೆರೂಪದಿ ಜೀವಕೆ|೫|
No comments:
Post a Comment