ಹುಲ್ಲು ಬೆಳೆದಿದೆಯಲ್ಲೋ ಹೊಸ್ತಿಲ್ಲಲ್ಲಿ
ದೇವರೊಳದಲು ಬಲೆಯ ಕಟ್ಟಿಹ ಜೇಡ
ಲಡ್ಡಾಗಿ ಗೆದ್ದಲಿಂ ಹೆಬ್ಬಾಗಿಲು
ಒಡತಿಯಿಲ್ಲದ ಮನೆಗೆ ಎಲ್ಲಿ ಗೆಲುವು?|೧|
ದೀಪ ಹಚ್ಚುವರಿಲ್ಲ ಸಂಜೆಯಾಗಿದೆಯಲ್ಲ
ವರಲಕ್ಷ್ಮಿ ಹೊರಗಾಕಿ ಮನೆಗೆ ಬೀಗ
ಪೇಟೆಯಳೆಯುತಿಹ ಮಗ, ಬಾರಲ್ಲಿ ಅಪ್ಪ
ಊಳಿಡುತ್ತಿದೆಯಲ್ಲ ಬಡಕು ನಾಯಿ
ಹೇ ಜೀವ ಇಲ್ಯಾಕೆ ಬೇಗ ಸಾಯಿ|೨|
ಖೈದಾಯ್ತು ಕೊಟ್ಟಿಗೆಯು ಕಷ್ಟವೋ ಚಾಕರಿ
ಬೇಡ ಬಾಸಿನ ಹಂಗು, ಬಿಡಲೇ ನೌಕರಿ
ಸಹಧರ್ಮಚಾರಿಣಿಯೆ ಸತ್ತಳಲ್ಲ
ಮಾತು ಕೇಳದ ಮಗನದಡ್ಡ ದಂಧೆಯೆ ಬರಿ
ಬಾರಲ್ಲೂ ಬದುಕಿಲ್ಲ ಉಳಿದಲ್ಲಿ ಸುಖವಿಲ್ಲ
ಈ ಜೇವ ಇನ್ಯಾಕೆ ಬೇಗ ಸಾಯಿ|೩|
ಇದ್ದೊಬ್ಬ ಅಮ್ಮನಿಗೆ ದುಡ್ಡು ಬಿಚ್ಚದ ಅಪ್ಪ
ಆಕೆ ನರಳುತ್ತಿರೆ ಆಫಿಸಲಿದ್ದ, ಲಂಚ ಹೊಡೆದಿದ್ದ
ಬಡಜನರ ಬಿಡಲಿಲ್ಲ ನಂ ಬಾಳು ರೋದನೆ
ಮನಸುಗಳಿಗವಕಾಶವಿಲ್ಲದಾ ಮನೆಯಲ್ಲಿ
ಬಾಳೋ ಬದಲು ಜೀವ ಬೇಗ ಸಾಯಿ|೪|
ದುರ್ಲಭದ ನರಜನ್ಮ ಪಡೆದಿರುವ ಪಾಪಿಗಳು
ನಿನ್ನೆ ಶಪಿಸುವರಲ್ಲೋ ಕ್ಷಮಿಸೊ ದೇವ
ಸೌಕರ್ಯ ಹೆಚ್ಚಾಗಿ ಮನೆಗೆ ಮಾರಿಗಳಾದ
ಅರಿವಿಲ್ಲದಾತ್ಮಗಳ ಗೋಳು ನೋಡ
ಹೋಗುವಂತೆನಬೇಡ ಅಂತ ಮನೆಗಳಿಗಿನ್ನು
ಕಷ್ಟದಲೂ ಕೈ ಹಿಡಿವ ದಯೆಯ ದೈವ|೫|
No comments:
Post a Comment