Tuesday, November 22, 2011

ಹೊಸಗುಂದ ದೇವಸ್ಥಾನದ ಕಾರ್ತೀಕ

ಹೊಸಗುಂದ ಶ್ರೀ ಉಮಾಮಹೇಶ್ವರ ದೇವರು
ಕಾಲುದೀಪಗಳ ಬೆಳಕಲ್ಲಿ
ಶಿವಮೊಗ್ಗದಿಂದ ಸಾಗರಕ್ಕೆ ಬರುವವರು ಹೊಸಗುಂದ ದೇವಸ್ಥಾನ ಎಂಬ ಫಲಕ ನೋಡಿರಬಹುದು. ಅಲ್ಲಿ ಹಿಂದೆ ಹೊಯ್ಸಳರ ಕಾಲದ ದೇವಸ್ಥಾನಗಳಿತ್ತಂತೆ. ಅದೆಲ್ಲಾ ಮುರಿದು ಬಿದ್ದು ಹರಡಿಹೋಗಿತ್ತು ಇತ್ತೀಚಿನ ವರ್ಷಗಳಲ್ಲಿ. ಕಾಡಲ್ಲಿ ಹರಡಿಹೋಗಿದ್ದ ಅವುಗಳನ್ನೆಲ್ಲಾ ಈಗ ಬಾಲಗ್ರಹ ಅಥವಾ ಬಾಲಾಲಯದಲ್ಲಿ ಸ್ಥಾಪಿಸಿ(ದೇವಾಲಯ ಜೀರ್ಣೋದ್ದಾರವಾಗುವ ತನಕ ಮೂರ್ತಿಯನ್ನಿಡುವ ತಾತ್ಕಾಲಿಕ ಗುಡಿ) ದೇಗುಲಗಳ ಜೀರ್ಣೋದ್ದಾರ ಕೆಲಸ ನಡೆಯುತ್ತಿದೆ. ಅಂದಿನ ಶಿಲ್ಪಕಲೆಯ ಸೊಬಗನ್ನು, ಮೂಲಿಕಾವನ ವನ್ನು ನೋಡಲು, ಎರಡಾಳೆತ್ತರದ ಮಾಸ್ತಿಕಲ್ಲುಗಳನ್ನು, ಕರ್ನಾಟಕದಲ್ಲಿ ಎಲ್ಲೂ ಇಲ್ಲದ "ಲಕ್ಷ್ಮೀ ಗಣೇಶ" ನನ್ನು ನೋಡಲು ಹೊಸಗುಂದಕ್ಕೆ ಭೇಟಿ ನೀಡಬಹುದು. ಅಲ್ಲಿಗೆ ಹೋದ ನನ್ನನುಭವವನ್ನು ಪದರೂಪದಲ್ಲಿಳಿಸುವ ಪ್ರಯತ್ನ ನಡೆಸಿದ್ದೇನೆ. ಓದಿ.

ಶ್ರೀ ವೀರಭದ್ರ ದೇವರು
ಇತಿಹಾಸ:
ಕೇರಳದ ರಾಜನೊಬ್ಬ ಈ ಭಾಗಕ್ಕೆ ಬಂದಾಗ ಆತನಿಗೆ ಲಕ್ಷ್ಮೀ ವಿಗ್ರಹದೊಂದಿಗೆ ಗಣಪತಿಯ ವಿಗ್ರಹ ದೊರಕಿತಂತೆ. ಆದ್ದರಿಂದ ಆ ಗಣಪತಿಗೆ ಲಕ್ಷ್ಮೀ ಗಣಪತಿ ಎಂಬ ಹೆಸರು ಬಂದಿತು, ಈ ತರಹದ ಲಕ್ಷ್ಮೀ ಗಣಪತಿಗಳು ಕೇರಳದಲ್ಲಿದೆ, ಆದರೆ ಕರ್ನಾಟಕದಲ್ಲಿರುವುದು ಇದೊಂದೇ ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ. ಸಾಂತರಸರು ( ಹೊಯ್ಸಳರು ) ತದನಂತರ ಇಲ್ಲಿ ಹಲವು ದೇವಸ್ಥಾನಗಳನ್ನು ಕಟ್ಟಿಸಿದರಂತೆ. ಅದರಲ್ಲಿ ಮುಖ್ಯವಾದುದು ಉಮಾಮಹೇಶ್ವರಿ ದೇವಸ್ಥಾನ. ಅದಲ್ಲದೇ ವೀರಭದ್ರ, ಸುಭ್ರಮಣ್ಯ, ಪ್ರಸನ್ನನಾಥ, ಚೌಡೇಶ್ವರಿ ದೇಗುಲಗಳೂ ಇವೆ.

ಹೋಗುವ ಮಾರ್ಗ:
ಹೊಸಗುಂದ ದೇವಸ್ಥಾನವು ಸಾಗರದಿಂದ ಸುಮಾರು ಹದಿನೇಳು ಕಿ.ಮೀ ದೂರದಲ್ಲಿದೆ. ದೇವಸ್ಥಾನದವರೆಗೂ ಬಸ್ ಹೋಗುವುದಿಲ್ಲ. ಹೊಸಗುಂದ ಕ್ರಾಸಿನಲ್ಲಿ ಇಳಿದರೆ ಸುಮಾರು ಮೂರು ಕಿ.ಮೀ ನಡೆದು ಹೋಗಬೇಕಾಗುತ್ತದೆ.



ಶ್ರೀ ಚೌಡೇಶ್ವರಿ ದೇವಿ
ಹೊಸಗುಂದಕ್ಕೆ ಹೋಗಬೇಕೆಂಬ ಬಹುದಿನಗಳ ಬಯಕೆ ಈಡೇರುತ್ತಲೇ ಇರಲಿಲ್ಲ. ಅಲ್ಲಿ ಇತ್ತೀಚೆಗೆ ಮೂಲಿಕವನ ಅಭಿವೃದ್ಧಿ ನಡೆಯುತ್ತಿರುವುದು, ಅಲ್ಲಿಗೆ ಪರಿಸರ ಸಂರಕ್ಷಣೆಗಾರರಾದ ಅನಂತ ಹೆಗಡೆ ಆಶೀಸರ ಮೊದಲಾದವರು ಬಂದಿದ್ದು, ಮಠದ ಸ್ವಾಮೀಜಿ ಬಂದಿದ್ದು ಹೀಗೆ ಪತ್ರಿಕೆಗಳಲ್ಲಿ ಪ್ರತೀ ಬಾರಿ ಸುದ್ದಿಯಾದಾಗಲೂ ಅಲ್ಲಿಗೆ ಹೋಗುವ ಆಸೆ ಉಮ್ಮಳಿಸುತ್ತಿತ್ತು. ದೂರದಿಂದ ಬಂದಿದ್ದ ನನ್ನಣ್ಣ ಹೊಸಗುಂದದ ಕಾರ್ತೀಕ ದೀಪೋತ್ಸವಕ್ಕೆ ಹೋಗುವ ಮಾತು ಹೇಳಿದಾಗ ವಿಪರೀತ ಖುಷಿಯಾಗಿ ತಕ್ಷಣ ಒಪ್ಪಿದೆ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂದಗಾಯ್ತು :-)



ಅಲ್ಲಿ ತಲುಪುವ ದಾರಿಯಲ್ಲೇ ಅಭಿವೃದ್ದಿ ಪಡಿಸುತ್ತಿರುವ ಕೆರೆಯೊಂದು ಕಾಣಿಸುತ್ತದೆ. ಹಿಂದೊಮ್ಮೆ ಅದೊಂದು ಪುಷ್ಕರಿಣೆ ಇದ್ದಿರಬಹುದೇನೋ. ಆದರೆ ಕಾಲಕ್ರಮೇಣ ಮುಚ್ಚಿ ನೀರಿನ ಹೊಂಡವಿತ್ತಂತೆ. ಆದರೆ ಅದನ್ನೀಗ ವಿಶಾಲವಾಗಿ ತೋಡಿಸಿ, ಸುತ್ತಲೂ ಇಳಿಯಲು ಮೆಟ್ಟಿಲುಗಲನ್ನಿಟ್ಟು ಚೆನ್ನಾಗಿ ಅಭಿವೃದ್ದಿ ಪಡಿಸಲಾಗಿದೆ. ಹಾಗೇ ಮುಂದೆ ಸಾಗಿದ ನಾವು ಬಾಲಾಲಯದಲ್ಲಿಟ್ಟಿದ್ದ ಸಾಲು ದೇವರನ್ನು ನೋಡಿದೆವು. ಕಾರ್ತೀಕದ ತಯಾರಿ ನಡೆಯುತ್ತಿತ್ತು.



ದೊಡ್ಡ ದೊಡ್ಡ ರಂಗೋಲಿಗಳು. ಅದರ ಮೇಲಿಟ್ಟಿದ್ದ ಹಣತೆಗಳನ್ನು ಹಚ್ಚುವ ಕೆಲಸ ಶುರುವಾಯಿತು. ಎತ್ತರದ ಕಾಲುದೀಪಗಳು, ಹಣತೆಗಳ ಬೆಳಕಿನಲ್ಲಿ ಇಡೀ ವಾತಾವರಣವೇ ಬಂಗಾರದ ಬಣ್ಣದಲ್ಲಿ ಹೊಳೆಯುತ್ತಿತ್ತು. ಆ ಬೆಳಕಲ್ಲಿ ದೇವರನ್ನು ನೋಡಿದಾನುಭವ ವರ್ಣಿಸಲಸದಳ. ಉಮಾಮಹೇಶ್ವರನೂ ಅವನೆದುರಿಗಿದ್ದ ನಂದಿಯೂ ಬಂಗಾರದ ಹಾಳೆಯಲ್ಲೇ ಮಾಡಿಹುದೇನೋ ಎಂಬಂತೆ ಹೊಳೆಯುತ್ತಿದ್ದವು, ಈ ಹಣತೆಗಳ ಹೊಂಬೆಳಕಿಗೆ. ಆಮೇಲೇ ದೇವಸ್ಥಾನದ ಸುತ್ತಲೂ, ಪಕ್ಕಲಿದ್ದ ತುಳಸಿ ಕಟ್ಟೆ, ಸಪ್ತ ಮಾತೃಕೆಯರ ಕಟ್ಟೆ, ಹತ್ತಿರದ ಗೋಡೆಗಳು.. ಹೀಗೆ ಎಲ್ಲೆಲ್ಲೂ ದೀಪಗಳನ್ನಿಟ್ಟು ಹಚ್ಚಲಾಯಿತು. ಎಲ್ಲಿ ನೋಡಿದರೂ ದೀಪಗಳ ಜಗಮಗ





ದೀಪಗಳ ಬೆಳಕಲ್ಲದೇ ಅಲ್ಲಿ ಇನ್ನೊಂದು ವಿಶೇಷ. ಪಶುವೈದ್ಯಕೀಯ ಶಾಸ್ತ್ರವನ್ನೋದಿದ ನನ್ನಣ್ಣ ನಂತರ ಔಷಧಿ ಶಾಸ್ತ್ರದಲ್ಲಿ ಪಿಎಚ್ಡಿ ಪಡೆದು ಸದ್ಯ ಅಮೇರಿಕಾದ ಸಿಯಾಟಿಲ್ನಲ್ಲಿದ್ದಾನೆ. ಆತ ಉತ್ತಮ ಕೊಳಲು ವಾದಕ !!ಅಂದು ಆತನಿಗೆ ಶ್ರೀ ಗಣಪತಿಯ ಸಮ್ಮುಖದಲ್ಲಿ ವೇಣುವಾದನದ ಯೋಗ ಸಿಕ್ಕಿದ್ದು ಆತನಿಗಷ್ಟೇ ಅಲ್ಲದೆ ನಮಗೂ ಅತೀವ ಸಂತಸ ತಂದಿತು. ವಾಸಂತಿ, ರಾಗಮಾಲಿಕ ಹೀಗೆ ನಾಲ್ಕೈದು ರಾಗಗಳನ್ನು ನುಡಿಸಿದ. ಅದಕ್ಕೆ ಅವಕಾಶ ಕಲ್ಪಿಸಿ ಅಲ್ಲಿ ವೇಣು ವಾದನದ ಮಾಧುರ್ಯವೂ ತುಂಬಲು ಕಾರಣರಾದ ಅಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಎಮ್ಮೆನ್ ಶಾಸ್ತ್ರಿಗಳಿಗೆ , ಚಿನ್ಮಯ ಅವರಿಗೆ ಋಣಿ ನಾನು.




ಎಲ್ಲೆಡೆ ಜಗಮಗಿಸುತ್ತಿದ್ದ ಬೆಳಕಿನ ನಡುವೆ ದೇವರಿಗೆ ಮಹಾಮಂಗಳಾರತಿ. ಎಷ್ಟು ಜನ ಸೇರಿದ್ದರೆಂದರೆ ನಮಗೆ ದೇವರೆದುರು ನಿಲ್ಲಲೇ ಆಗಲಿಲ್ಲ. ಈ ಕಡೆ ಮೂಲೆ, ಆ ಕಡೆ ಮೂಲೆಯಲ್ಲಿ ನೆರೆದಿದ್ದ ಜನರಂತೆಯೇ ನಾವೂ ಒಂದು ಮೂಲೆ ಸೇರಿ ಕಣ್ಣು ಮುಚ್ಚಿ ಪ್ರಾರ್ಥಿಸತೊಡಗಿದೆವು.ದೇವಕಾರ್ಯ, ತೀರ್ಥ ಪಡೆದ ಮೇಲೆ ಮತ್ತೊಂದು ಅಚ್ಚರಿ. ನನ್ನಣ್ಣನಿಗೆ ಅಲ್ಲಿನವರ ಸನ್ಮಾನ :-) . ಸಾಗರ ತಾಲೂಕಿನ ತಹಶೀಲ್ದಾರರಾದ ಶ್ರೀ ಯೋಗೀಶ್ ರವರಿಂದ ಸನ್ಮಾನ. ಅದರ ಫೋಟೋ ಕ್ಲಿಕ್ಕಿಸುವುದು, ಅನಿರೀಕ್ಷಿತವಾಗಿ ಆ ಸಂದರ್ಭದಲ್ಲಿ ಭಾಗಿಯಾಗಿದ್ದು ನನಗೂ ಖುಷಿ ನೀಡಿತು :-)




ನಂತರ ಪ್ರಸಾದ ವಿತರಣೆ ಎದುರಿಗಿದ್ದ ಭೋಜನಶಾಲೆಯಲ್ಲಿ ನಡೆಯುತ್ತಿತ್ತು. ಅದಕ್ಕೆ ಹತ್ತುವ ದಾರಿಯಲ್ಲೇ ನಮ್ಮ ಕಣ್ಣು ಸೆಳೆದಿದ್ದು ಮೂರು ಬೃಹತ್ ಶಿಲಾಶಾಸನಗಳು. ಸುಮಾರು ಹತ್ತಡಿಯಷ್ಟು ಎತ್ತರವಿರಬಹುದೇನೋ. ಅಥವಾ ಅದಕ್ಕಿಂತ ಹೆಚ್ಚೇ ಇರಬಹುದೇನೋ. ಅಷ್ಟು ದೊಡ್ಡ ಶಿಲಾಶಾಸನವನ್ನಾಗಲೀ, ಮಾಸ್ತಿ ಕಲ್ಲನಾಗಲಿ ನಾನು ಈ ಮುಂಚೆ ಎಲ್ಲೂ ನೋಡಿದ್ದಿಲ್ಲ.








ಅಲ್ಲಿ ನೋಡಿದ ನಂತರ ನಾವು ಉಮಾಮಹೇಶ್ವರ ದೇವರ ಮೂಲ ದೇಗುಲದತ್ತ ಸಾಗಿದೆವು.
ದೀಪಗಳ ಬೆಳಕಿನಲ್ಲಿ ಅದನ್ನು ನೋಡುವುದೇ ನಮ್ಮ ಕಣ್ಣುಗಳಿಗೊಂದು ಹಬ್ಬವಾಗಿತ್ತು. ಎಂದೂ ಸಂಜೆಯ ದೀಪದ ಹೊಂಬಳಕಲ್ಲಿ ಪುರಾತನ ದೇವಾಲಯವನ್ನು ನೋಡಿದವನಲ್ಲ ನಾನು. ಕರೆಂಟು ದೀಪದಲ್ಲಿ ನೋಡುವುದಕ್ಕೂ ಹಣತೆಯ ಬೆಳಕಿನಲ್ಲಿ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸವಲ್ಲವೇ. ಈ ಸವಿಯನ್ನು ಸವಿಯಲು ಒಬ್ಬ ವಿದೇಶಿ ಮಹಿಳೆಯೂ ಅಂದು ಅಲ್ಲಿಗೆ ಬಂದಿದ್ದರು !!

ಉರುಳಿಬಿದ್ದಿದ್ದ ಕಲ್ಲುಗಳನ್ನೆಲ್ಲಾ ಅದರ ನಕ್ಷೆಯಲ್ಲಿದ್ದಂತೆಯೇ ಗುರುತು ಮಾಡಿ(ಪ್ರತಿಯೊಂದಕ್ಕೂ ಒಂದೊಂದು ಸಂಖ್ಯೆ ಕೊಟ್ಟು) ಈಗ ಮತ್ತೆ ಮುಂಚಿನಂತೆಯೇ ಜೋಡಿಸಿ ನಿಲ್ಲಿಸಲಾಗಿದೆ. ದೀಪದ ಬೆಳಕಿನಲ್ಲಿಯೇ ಅಷ್ಟು ಸೊಗಸಾಗಿ ಕಂಡ ಆ ಪುರಾತನ ದೇಗುಲ ಇನ್ನು ಹಗಲು ಹೊತ್ತಿನಲ್ಲಿ ಎಷ್ಟು ಸುಂದರವಾಗಿ ಕಾಣಬಹುದೆಂದು ಯೋಚಿಸಿ. ಅಲ್ಲೇ ಹತ್ತಿರದಲ್ಲೇ ಚೂಡೇಶ್ವರಿ ದೇವತೆಯನ್ನು ಪ್ರತಿಷ್ಟಾಪಿಸುವ ಗುಡಿಯನ್ನು ನೋಡಿದೆವು.





ಶ್ರೀ ಲಕ್ಷ್ಮೀ ಗಣಪತಿ

 ಇನ್ನುಳಿದವು ಅಲ್ಲೇ ಸ್ವಲ್ಪ ದೂರವಂತೆ. ಅಲ್ಲೇ ಮಾರ್ಗಸೂಚಿಯನ್ನೂ, ಉದ್ದೇಶಿತ ಕಟ್ಟಡಗಳ ಛಾಯ ಚಿತ್ರವನ್ನೂ ಹಾಕಿದ್ದಾರೆ. ನೀವು ಮುಂದಿನ ಬಾರಿ ಹೋಗುವ ವೇಳೆಗೆ ಅವುಗಳಲ್ಲಿ ಹಲವು ಪೂರ್ಣಗೊಂಡಿರಬಹುದು. ಹಿಂದಿನ ಬಾರಿ ಸೌಂದರ್ಯವಿದ್ದೂ ಹಾಳಾಗುತ್ತಿರುವ ದೇಗುಲವೊಂದರ ಬಗ್ಗೆ ಬರೆದಿದ್ದೆ. ಈ ಬಾರಿ ಅದೇ ಹೊಯ್ಸಳರ ಕಾಲದ ದೇಗುಲ ಜೀರ್ಣೋದ್ದಾರವಾಗುತ್ತಿರುವುದನ್ನು ಕಂಡು ಬರೆಯಲು ಅತೀವ ಸಂತೋಷವಾಗುತ್ತಿದೆ.

ಅಂದ ಹಾಗೆ ಅಲ್ಲಿನ ಪೂಜಾ ಸಮಯಗಳು ಬೆಳಿಗ್ಗೆ ೬:೩೦-೮:೩೦ , ಮಧ್ಯಾಹ್ನ ೧೧:೩೦-೧, ಸಂಜೆ ೫-೭. ನಿಮ್ಮದೇ ವಾಹನದ ಸೌಕರ್ಯವಿದ್ದರೆ ಉತ್ತಮ. ಮೂಲಿಕಾವನದಲ್ಲಿನ ಪ್ರತೀ ಸಸ್ಯದ ಕನ್ನಡ ಮತ್ತದರ ಸಸ್ಯಶಾಸ್ತ್ರೀಯ ಹೆಸರುಗಳನ್ನೂ ನೋಡಿ ಆನಂದಿಸಬಹುದು.

1 comment:

  1. My Mobile Number 9480129458 ... when you free Please Call me ... I am From Thirthahalli ....

    ReplyDelete