Wednesday, November 2, 2011

ಇರಗಿಯ ಕಾರ್ತೀಕ

ಇರಗಿಯ ಚಿಕ್ಕಪ್ಪನ ಊರಲ್ಲಿ ಪ್ರತೀವರ್ಷವೂ ಕಾರ್ತೀಕ
ಮಾಸದಿ ನಡೆಯೋ ಶತರುದ್ರಕ್ಕೆ ತಪ್ಪದೆ ಸೇರೋ ಮನೆಮಕ್ಕ
ಹರಿಹರೇಶ್ವರನ ಸಮ್ಮುಖದಲ್ಲೊಂದು ನಂದಿ ಅದರಿಂದೆ ಕೆರೆ
ಅದರಾಚೆ ನಾಗ,ಕ್ಷೇತ್ರಪಾಲ, ಭೂತಗಳು ಸ್ಥಾನ ಕಾಯುತ್ತ|1|

ಅಲ್ಪವರಿತವ ತಿಳಿದಿರಲಿಲ್ಲ ಆ ರುದ್ರನ ಸಂಯೋಗ
ಬರದಿದ್ದೊಬ್ಬ ಭಟ್ಟರ ಜಾಗದಿ ನೋಡಲದವನೇ ಪ್ರಯೋಗ
ಯೋಗವೆನ್ನಲೋ ಪುಣ್ಯವೆನ್ನಲೋ ಕೈಹಿಡಿದದ್ದು ಪುಸ್ತಕ
 ಸೇವೆಯಿದು ಮೂರ್ಖ ಪಾಪವಲ್ಲ ಎಂದಧೈರ್ಯ ದಬ್ಬಿತು ಮಸ್ತಕ|2|



ಚೆಂದಗೊಂಡಿತು ಶತರುದ್ರ, ನೆರೆದ ಭಕ್ತರ ಘೋಷದಲಿ
ಆರತಿ, ಜಾಗಟೆ, ಶಂಖಗಳು,ಜೊತೆಗೆ ಇಂಪಾದ ಕಂಠಗಳು
ತುಂಬುತ ಎಲ್ಲೆಡೆ ದೈವ ಭಕ್ತಿಯ ದೇವಗೆ ಶರಣವ ಸಾರಿದವು
ಕಷ್ಟಗಳೆಲ್ಲವ ಕಳೆಯೋ ಸ್ವಾಮಿ,ಕಾಯೋ ನಮ್ಮೆಂದು ಬೇಡಿದವು|3|

ಅಂದು ರಾತ್ರಿಯಿತ್ತು ರಂಗಪೂಜೆ ಪಾಲಿಸುವಂತಹ ಪೂಜ್ಯನಿಗೆ
ಮುಖವಾಡದಿಂದ ಶೋಭಿತ ದೈವ,ಅಭಿಶೇಕಪ್ರಿಯ ಶಂಭುವಿಗೆ
ಸುತ್ತ ಬೆಳಗಿತಿವೆ ಹತ್ತಾರು ಹಣತೆ, ರಾತ್ರಿಯ ಕತ್ತಲ ಕತ್ತರಿಸೆ
ಅಂಧಕಾರದಲಿ ಮುಳುಗಿಹ ನಮಗೆ ನಿನ್ನಾವದನವ ತೋರಿಸೆ
ಹರಸೆಮ್ಮನಿಂದು, ನಿನ್ನ ಕರುಣಾಬಿಂದು ಕೃಪೆತೋರೊ ಸಿಂಧು
ಮತ್ತೊಮ್ಮೆ ನಮಿಸುವೆ ಶಂಭೋ, ಧರ್ಮದಲೆ ನಡೆಸೆನ್ನ ಎಂದು|4|

No comments:

Post a Comment