Sunday, November 13, 2011

ಕಾಸರಗೋಡಿನ ಕೆ.ಪಿ. ಭಟ್ಟರು

೧೯೩೩ ಮಾರ್ಚ್ ೧೯ರಂದು ಕಾಸರಗೋಡಿನ ಬಳಿಯ ಕುಳ್ಳಂಬಟ್ಟು ಕೃಷ್ಣಭಟ್ಟ ಮತ್ತು ಸಾವಿತ್ರಮ್ಮ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದವರು ಪುರುಷೋತ್ತಮ ಭಟ್ಟರು. ಎಸ್.ಎಸ್ಸೆಸ್ಸಲ್ಲಿಯವರೆಗೆ ಸಮೀಪದ ನೀರ್ಚಾಲಿನಲ್ಲಿ ನೀರ್ಚಾಲು ನಾರಾಯಣ(ನೀನಾ) ಮಧ್ಯಸ್ಥರಂತ ಸಹಪಾಠಿಗಳೊಂದಿಗೆ ವಿದ್ಯಾಭ್ಯಾಸ. ಆಗ ಸ್ವಾತಂತ್ರ್ಯ ಚಳುವಳಿಯ ಕಾವು ಎಲ್ಲೆಡೆ ಹಬ್ಬುತ್ತಾ ಇತ್ತು. ಆ ಸಮಯದ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ ತಂದೆ ಜಮೀನನ್ನೆಲ್ಲಾ ದಾನ ಮಾಡಿದರು. ಹಾಗಾಗಿ ಉದ್ಯೋಗವನ್ನರಸಿ ಮನೆಬಿಡಬೇಕಾಯಿತು ಪುರುಷೋತ್ತಮರು

 ಮಲೆನಾಡಿನ, ಕೊಲ್ಲೂರು ಸಮೀಪದ ನಿಟ್ಟೂರಿನ ಬಳಿ ಮಾಸ್ತರಿಕೆ ಕೆಲಸ ಇದೆ ಅಂತ ತಿಳಿಯಿತು. ಸರಿ, ಅಂತ ಹೊರಟೇ ಬಿಟ್ಟರು. ಎಲ್ಲಿಯ ಕಾಸರಗೋಡು, ಎಲ್ಲಿಯ ಮಲೆನಾಡು.. ಕೈಯಲ್ಲಿ ಕಾಸಿಲ್ಲ. ಆದರೂ ಮನಸಲ್ಲಿ ಅಚಲ ಛಲ. ಮಂಗಳೂರಿನವರೆಗೆ ಹೇಗೋ ಟ್ರೈನು ಹತ್ತಿ ಬಂದರು. ಟಿ,ಸಿ ಕೇಳಿದರೆ ಕೈಯಲ್ಲಿ ಕಾಸಿಲ್ಲ. ಇದ್ದೊಂದು ಪೆನ್ನನ್ನೇ ಇತ್ತರು ಅವನಿಗೆ. ಏನನ್ನಿಸಿತೋ ಟಿ.ಸಿ. ಗೆ ಅಲ್ಲಿಯೇ ಇಳಿದು ಬಿಡು ಅಂದ. ಅಲ್ಲಿಂದ ಕುಂದಾಪುರ ಮಾರ್ಗದಲ್ಲಿ ಕಾಲ್ನಡಿಗೆಯಲ್ಲೇ ನಿಟ್ಟೂರಿಗೆ ನಡೆದು ಹೊರಟ್ರು. -೩ ದಿನಗಳ ನಿರಂತರ ನಡೆದಾಟ. ಸಿಕ್ಕಿದ ಶಾಲೆ, ದೇವಸ್ಥಾನದಲ್ಲಿ ನಿದ್ರೆ.ಊಟವಿಲ್ಲ. ಕೊನೆಗೆ ಕುಂದಾಪುರದಲ್ಲಿ ಮನೆಯೊಂದರಲ್ಲಿ ಬಾವಿಯ ನೀರು ಸೇದಿ ಸ್ನಾನ ಮಾಡಿಕೊಳ್ಳಲೇ ಅಂತ ಕೇಳಿದರಂತೆ, ಅಲ್ಲಿ ಆಗ ಅವರ ಜನಿವಾರ ಕಂಡ ಆ ಬ್ರಾಹ್ಮಣದಂಪತಿ, ಒಳಕರೆದು ಊಟ ಹಾಕಿದರಂತೆ. ಅಂತೂ ನಿಟ್ಟೂರಿಗೆ ಬಂದರು. ಆದರೆ ಅಲ್ಲಿ ಕೆಲಸ ಸಿಗಲಿಲ್ಲ. ಆಗಲೇ ಭರ್ತಿ ಆಗಿದೆ ಎಂಬ ಉತ್ತರ!!!
 

ಆದರೆ ಆ ದೇವ ಕೊನೆಗೂ ಅವರ ಮೇಲೆ ಕಣ್ಣು ತೆರೆದಿದ್ದನೇನೋ. ಮುಳುಗಡೆ ಪ್ರದೇಶ ತುಮರಿಯಲ್ಲಿ(ನಿಟ್ಟೂರಿನಿಂದ ಸುಮಾರು ಮೂವತ್ತು ಕಿ.ಮೀ.) ಹಿಂದಿ ಕಲಿಸಲು ಮಾಸ್ತರು ಬೇಕು ಅಂತ ಯಾರೋ ಪುಣ್ಯಾತ್ಮರು ಹೇಳಿದರು. ಸರಿ ಅಂತ ಅಲ್ಲಿಗೆ ಪಯಣ. ಅಲ್ಲಿ ಚದುರಳ್ಳಿ ಎಂಬ ಊರಲ್ಲಿ ಮಾಸ್ತರಾಗಿ ತಮ್ಮ ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ಚದುರಳ್ಳಿಯಲ್ಲಿ ಇವರು ಒಳ್ಳೆ ಪಾಠ ಹೇಳಿಕೊಡುತ್ತಾರೆ ಎನ್ನುವ ಖ್ಯಾತಿಯು ಪಕ್ಕದೂರು ಕಳಸವಳ್ಳಿಗೂ ಹಬ್ಬಿತು. ಅಲ್ಲೂ ಹಿಂದಿ ಮಾಸ್ತರರು ಇರಲಿಲ್ಲ.ಸರಿ, ಪ್ರತಿನಿತ್ಯ ಚದುರಳ್ಳಿ, ಕಳಸವಳ್ಳಿ ಎರಡೂ ಕಡೆಗೂ ಓಡಾಡಿ(ಸುಮಾರು ಐದಾರು ಕಿ,ಮೀ ದೂರ) ಹಿಂದಿ ಕಲಿಸತೊಡಗಿದರು. ನಿಧಾನವಾಗಿ ಸಂಸಾರದ ಭಾರ ಇವರ ಮೇಲೆ ಬೀಳತೊಡಗಿತು. ತಮ್ಮಂದಿರ ವಿದ್ಯಾಭ್ಯಾಸ, ೪ ಜನ ತಂಗಿಯರ ಜವಾಬ್ದಾರಿ, ಅವರ ಮದುವೆ ಹೀಗೆ.. ಹಾಗಾಗಿ ಸ್ಥಿರವಾದ ಉದ್ಯೋಗ ಹುಡುಕಬೇಕಾಯಿತು. ಆ ಹುಡುಕಾಟದಲ್ಲಿ ಶಿವಮೊಗ್ಗ ಹತ್ತಿರದ ನ್ಯಾಮತಿ ಎಂಬಲ್ಲಿಗೆ ಬಂದರು.

 ಅಲ್ಲಿ ಮತ್ತೆ ಒಂದು ವರ್ಷ ಹಂಗಾಮಿ ಮಾಸ್ತರರಾಗಿ ಕೆಲಸ. ಅಲ್ಲಿಂದ ಶಿವಮೊಗ್ಗದ ದೇಶೀ ವಿದ್ಯಾಶಾಲೆಗೆ ಕೆಲಸಕ್ಕೆ ಸೇರಿ ಶಿವಮೊಗ್ಗದಲ್ಲಿ ನೆಲೆನಿಂತರು.ತಂದೆ ತಾಯಿ, ತಂಗಿಯಂದ್ರಿನ್ನು ಇಲ್ಲಿಗೆ ಕರೆಯಿಸಿಕೊಂಡರು.ಶರಾವತಿ ಹಿನ್ನೀರು ಪ್ರದೇಶದಲ್ಲಿ ತಾವು ಕೆಲವೇ ವರ್ಷ ಕೆಲಸ ಮಾಡಿದರೂ ಇಲ್ಲಿಗೆ ಬಂದ ತಕ್ಷಣ ಅಲ್ಲಿನವರನ್ನು ಮರೆಯಲಿಲ್ಲ. ಆಗ ಆ ಭಾಗದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ತುಂಬಾ ಕಷ್ಟವಾಗಿತ್ತು. ಮನೆಯಲ್ಲಿ ಬಡತನ. ಮೂರೊತ್ತಿನ ಊಟ ಹೊಂದಿಸುವುದೇ ಕಷ್ಟವಾಗೋ ಅಂತ ಪರಿಸ್ಥಿತಿ. ಅಂತಹದರಲ್ಲಿ ಮಗನೋ, ಮಗಳನ್ನೋ ದುಡಿಸುವುದರ ಬದಲು ಹೊರಗೆಲ್ಲೋ ಬಿಟ್ಟು ಓದಿಸುವುದು, ಅವರ ಅಲ್ಲಿನ ಹಾಸ್ಟೆಲ್ಲು, ಊಟ, ಓಡಾಟ, ಬಟ್ಟೆ ಬರೆ, ಪುಸ್ತಕ, ಕಾಲೇಜಿನ ಫೀಸು ಇತ್ಯಾದಿ ಕಟ್ಟುವುದು ಕನಸಿನ ಮಾತೇ ಆಗಿತ್ತು. ಅಂತಹ ಸಂದರ್ಭದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ನೆರವಿಗೆ ಬಂದವರು ಪುರುಷೋತ್ತಮ ಭಟ್ಟರು. ಅನೇಕರಿಗೆ ಮನೆಯಲ್ಲೇ ಆಶ್ರಯ ಇತ್ತರು. ತಮ್ಮ ಪರಿಚಯದವ್ರ ಮೂಲಕ ಅನೇಕರಿಗೆ ವಾರಾನ್ನದ ಅವಕಾಶ ಮಾಡಿಕೊಟ್ಟರು, ಕೆಲವರಿಗೆ ಶಿವಮೊಗ್ಗೆಯ ಬ್ರಾಹ್ಮಣ ವಸತಿ ನಿಲಯದಲ್ಲಿ ಅವಕಾಶ ಮಾಡಿಕೊಟ್ಟರು.ಉಚಿತವಾಗಿ ತಮ್ಮ ವಿದ್ಯೆಯನ್ನೂ ಧಾರೆಯೆರೆದು, ಕೆಲವೊಮ್ಮೆ ಅವರ ಫೀಸನ್ನೂ ತಾವೇ ತುಂಬಿ ಅವರ ವಿದ್ಯಾಭ್ಯಾಸಕ್ಕೆ ಬೇಕಾದಂತಹ ಎಲ್ಲಾ ಅನುಕೂಲತೆಗಳನ್ನೂ ಮಾಡಿಕೊಟ್ಟರು. ಇಂದು ಅವರ ಮನೆಯಲ್ಲಿ ಓದಿದಂತಹವರು ಸಾಫ್ಟವೇರ್ ಇಂಜಿನಿಯರ್ ಗಳು , ಚಾರ್ಟೆಡ್ ಅಕೌಂಟೆಂಟಗಳು, ಬ್ಯಾಂಕ್ ಮ್ಯಾನೇಜರ್ಗಳು, ಪೋಸ್ಟ್ ಆಫೀಸು ಹೀಗೆ ಹಲವು ಇಲಾಖೆಗಳಲ್ಲಿ ಉನ್ನತ ಉದ್ಯೋಗಳಲ್ಲಿದ್ದಾರೆ.

 ಪಾಠ ಹೇಳುತ್ತಲ್ಲೇ ಬಿ.ಎ ಬಿ.ಎಡ್ ಮಾಡಿದ್ದ ಇವರು ಹಲವಾರು ವರ್ಷಗಳ ಕಾಲ NCC ಯಲ್ಲಿ ಕಮಾಂಡಿಂಗ್ ಆಫಿಸರ್ ಆಗಿದ್ದರು. ಇವರ ವಿದ್ಯಾರ್ಹತೆಗೆ, ಪಾಂಡಿತ್ಯಕ್ಕೆ ಗೌರವಿಸುತ್ತಿದ್ದ ಸಹ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಇವರು ಕೆ.ಪಿ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು.ಸಂಸ್ಕೃತ, ಹಿಂದಿ ಪಂಡಿತರೆಂದೂ ಇವರನ್ನು ಗೌರವಿಸುತಿದ್ದರು. MA ವಿದ್ಯಾರ್ಥಿಗಳೂ ಇವರ ಬಳಿ ಕನ್ನಡ, ಹಿಂದಿ ಪಾಠಕ್ಕೆ ಬರುತ್ತಿದ್ದುದು ಇವರ ಪಾಂಡಿತ್ಯಕ್ಕೆ ಸಾಕ್ಷಿ. SSLC ಇಂದ ಹಿಡಿದು , ಹಲವು ಬೇರೆ ಬೇರೆ ಸ್ಥರದ ವಿದ್ಯಾರ್ಥಿಗಳು ಇವರ ಮನೆಗೆ ಪಾಠಕ್ಕೆಂದು ಬರುತ್ತಿದ್ದರು. ಯಾರು ಕೇಳಿದರೂ ಇಲ್ಲಾ ಅನ್ನದೇ, ನಯಾ ಪೈಸೆ ತೆಗೆದುಕೊಳ್ಳದೆ ಅಕ್ಷರಶ ಉಚಿತವಾಗಿ ವಿದ್ಯೆಯನ್ನು ದಾನ ಮಾಡುತ್ತಿದ್ದರು ಕೆ.ಪಿ. ಸರ್

 ದೇಶೀಯ ವೀದ್ಯಾಶಾಲೆಯಲ್ಲಿ ಮಾಸ್ತರರಿಂದ ಪ್ರಾಂಶುಪಾಲರಾದರು. ಶಿವಮೊಗ್ಗದಲ್ಲಿ ಪದವೀಧರರ ಸಹಕಾರ ಸಂಘ ಸ್ಥಾಪಿಸಬೇಕೆಂಬ ಚರ್ಚೆ ನಡೆಯುತ್ತಿತ್ತು ಆಗ. ಅದರ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದರು. ಸಣ್ಣದಾದ ಬಾಡಿಗೆ ರೂಮಿನಲ್ಲಿ ಪ್ರಾರಂಭವಾದ ಆ ಸಂಘ ಈಗ ಮೂರು ಮಹಡಿಗಳ ಸ್ವಂತದ ಬೃಹತ್ ಕಟ್ಟಡ ಹೊಂದುವಷ್ಟರ ಮಟ್ಟಿಗೆ ಬೆಳೆದಿದೆ. ಶಿವಮೊಗ್ಗದ ಪಾಲಿಗೆ Graduate Co-operative Society ಹೆಸರು ಕೇಳಿರದ ಪದವೀಧರರೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಹಾಗೆಯೇ ಶಿವಮೊಗ್ಗದ ಹವ್ಯಕ ಸಂಘ ಸಂಸ್ಥಾಪಕರಲ್ಲಿ, ಸಿರಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸಂಸ್ಥಾಪಕರಲ್ಲಿ ಒಬ್ಬರು.

 ನಿವೃತ್ತಿಯಾದ ಮೇಲೆ ಆದಿಚುಂಚನಗಿರಿಯ ಶಿವಮೊಗ್ಗ ಶಾಖೆಯ ಪ್ರಸನ್ನನಾಥ ಸ್ವಾಮೀಜಿಗಳ ಆಹ್ವಾನದ ಮೇರೆಗೆ ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯಲ್ಲಿಯೂ ಸಂಸ್ಕೃತ, ಹಿಂದಿ, ಕನ್ನಡ ಮೂರೂ ಭಾಷೆಗಳ ಮಾಸ್ತರರಾಗಿ ಕೆಲವರ್ಷ ಸೇವೆ ಸಲ್ಲಿಸಿದರು.ಗುರುಗಳಿಗೆ ಸಂಸ್ಕೃತದ ಸಂಬಂಧದ ವಿಷಯಗಳಲ್ಲಿಯೂ ನೆರವಾಗುತ್ತಿದ್ದರು. ಕೊನೆಗೆ ತಮ್ಮ ಮಕ್ಕಳೆಲ್ಲ ಬೆಳೆದು ದೊಡ್ಡವರಾದ ಮೇಲೆ ಅದರಿಂದ ನಿವೃತ್ತಿಯಾದರು.ಎಂದೂ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಂದ ದೂರ ಉಳಿಯಬಯಸುವ ಅವರು ಯಾವ ಪುರಸ್ಕಾರಕ್ಕೂ ಅರ್ಜಿ ಹಾಕಲಿಲ್ಲ. ಹಾಕೆಂಬ ಸ್ನೇಹಿತರ ಒತ್ತಾಯಕ್ಕೂ ಮಣಿಯಲಿಲ್ಲ. ಅಂತಹದರಲ್ಲೂ ಆವರಿಗೆ ಕನ್ನಡ ಸಂಘದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಂತವು ಹುಡುಕಿಕೊಂಡು ಬಂದಿವೆ. ತಮ್ಮಲ್ಲಿ ಕಲಿತ ವಿದ್ಯಾರ್ಥಿಗಳು ಇಂದಿಗೂ ತಮ್ಮನ್ನು ನೆನೆಸಿಕೊಳ್ಳುವುದು, ಪೇಟೆಯಲ್ಲಿ ಸಿಕ್ಕಾಗಲೆಲ್ಲಾ ನಮಸ್ಕರಿಸುವುದು, ಕೆಲವರು ಪ್ರತೀ ವಿಜಯದಶಮಿಗೆ ಮನೆಗೆ ಬಂದು ಬನ್ನಿ ಕೊಟ್ಟು ನಮಸ್ಕಾರ ಮಾಡಿ ಹೋಗೋದು.. ಇದಕ್ಕಿಂತಾ ಬೇರೆ ಸನ್ಮಾನ ಬೇಕಾ?


ಅಂದು ಅವರಿಂದ ಪಾಠ ಕಲಿತವರು ಇಂದು ರಾಜಕಾರಣಿಗಳು, ಶಿವಮೊಗ್ಗದ ವಿವಿಧ ಅಂಗಡಿಗಳಲ್ಲಿ, ಉದ್ದಿಮೆಗಳಲ್ಲೂ ಇದ್ದಾರೆ. ಹಾಗಾಗಿ ಇಂದು ಅವರೊಂದಿಗೆ ಎಲ್ಲೇ ಹೋದರೂ ಕನಿಷ್ಟ ಒಬ್ಬನಾದರೂ ಅವರ ಹಳೆಯ ವಿದ್ಯಾರ್ಥಿ ಸಿಗುತ್ತಾನೆ.ಕೆ.ಪಿ. ಮೇಷ್ಟ್ರ‍ೇ ಅಂತ ಫ್ಲಾಷ್ ಬ್ಯಾಕ್ ನೆನಪಿಸಿಕೊಳ್ಳುತ್ತಾರೆ. ಈಗಲೂ ಸಂಸ್ಕೃತದಿಂದ ಅನುವಾದಿಸಿದ ಪುಸ್ತಕಗಳನ್ನು ಪರಾಮರ್ಶೆಗೆ ತರುವ ಹಿರಿಯರು, ಸಂಸ್ಕೃತ ಭಾಷಣ, ಸಂದೇಹಗಳಿಗೆ ಎಡತಾಕುವ ಹುಡುಗರು ಅಪರೂಪಕ್ಕೊಮ್ಮೆಯಾದರೂ ಭೇಟಿಯಾಗುತ್ತಾರೆ. ಯಾರೇ ಬಂದರೂ ನಗುನಗುತ್ತಾ ಸ್ವಾಗತಿಸುವರು ಕೆ,ಪಿಯವರ ಧರ್ಮ ಪತ್ನಿ ಶ್ರೀಮತಿ ಗೌರಮ್ಮ. ಈ ದಂಪತಿಗಳಿಗೆ ಒಬ್ಬ ಮಗಳು, ಇಬ್ಬರು ಗಂಡು ಮಕ್ಕಳು. ಎಲ್ಲರಿಗೂ ಮದುವೆಯಾಗಿ, ಮಕ್ಕಳು. ಕಿರಿಯ ಮಗ ಈಗ ಭೂಸೇನೆಯಲ್ಲಿ ಕರ್ನಲ್, ಕಮಾಂಡಿಗ್ ಆಫೀಸರ್ . ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ, ಗುಜರಾತ್ , ರಾಜಸ್ಥಾನ ಗಡಿಯಲ್ಲಿ ಮಗ ಅಲ್ಲಿದ್ದಾಗ, ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಆಯ್ಕೆಯಾಗಿ ದಕ್ಷಿಣ ಆಫ್ರಿಕಾದ ಗೋಮಾದಂತಹ ಕಗ್ಗಾಡಿನಲ್ಲಿ ಒಂದೂವರೆ ವರ್ಷ ಕಳೆದಾಗಲೂ ಎದೆಗುಂದದೇ ಎಲ್ಲರನ್ನೂ ಸಮಾಧಾನಿಸುತ್ತಿದ್ದರು. ಪರರ ಕಷ್ಟಕ್ಕೆ ಯಾವಾಗಲೂ ದನಿಯಾಗುತ್ತಿದ್ದ ಅಜ್ಜ ತಮ್ಮ ಕಷ್ಟವನ್ನು ಯಾರೊಂದಿಗೂ, ಅಜ್ಜಿಯೊಂದಿಗೂ ತೋರ್ಪಡಿಸಿದವರಲ್ಲ.. ಅಷ್ಟೊಂದು ಸಹಿಷ್ಣೆತೆಯ, ವಿದ್ಯಾಮಯಿ, ಶಾಂತಮೂರ್ತಿ, ಕಿಂಚಿತ್ತೂ ಅಹಂಕಾರವಿಲ್ಲದ, ಸರಳ ಸಜ್ಜನ ಕೆ.ಪುರುಷೋತ್ತಮ ಭಟ್ಟರ ಬಗ್ಗೆ ಬರೆಯುತ್ತಿರುವುದು ನನಗಿಂದು ಹೆಮ್ಮೆಯಾಗುತ್ತಿದೆ. ಅವರು ಪತ್ನಿ ಸಮೇತರಾಗಿ ಹೀಗೆಯೇ ನೂರ್ಕಾಲ ಬಾಳಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ವಿರಮಿಸುತ್ತಿರುವ ಪ್ರೀತಿಯ ಮೊಮ್ಮಗ..

Edit: 22nd October 2023: Ajja is no more. ನಮ್ಮೆಲ್ಲರ ಪ್ರೀತಿಯ ಅಜ್ಜ ಇಂದು ನಮ್ಮನ್ನಗಲಿದ್ದಾರೆ. 😢😢

5 comments:

  1. ಚೆನ್ನಾಗಿದೆ ಲೇಖನ. ಜೊತೆಗೆ ನಮ್ಮ ಹಾರೈಕೆಗಳನ್ನೂ ಸೇರಿಸಿ ... :)

    ReplyDelete
  2. ಧನ್ಯವಾದಗಳು ಕಿರಣಣ್ಣ :-)

    ReplyDelete
  3. ದೇವಾಲಯಕ್ಕೆ ಹೋಗುವ ಮುನ್ನ ಒಂದು ಗರುಡ ಕಂಭ ಇರುತ್ತದೆ. ದೇವರು ಈ ಕಂಬಕ್ಕಿಂತ ಎತ್ತರದಲ್ಲಿದ್ದಾನೆ ಎಂದು ಅಂದುಕೊಳ್ಳುವಾಗಲೇ ಒಳಗೆ ಹೋದಾಗ ದೇವರ ಮೂರ್ತಿ ಕಿರಿದಾಗಿರುತ್ತದೆ. ಕಷ್ಟಗಳು ಹಾಗೆಯೇ ನೋಡಲು ಎತ್ತರ ಉದ್ದ ದಪ್ಪ ಇರುತ್ತದೆ ಆದ್ರೆ ಕಣ್ಣಿಗೆ ಕಾಣದ ಶಕ್ತಿಯಲ್ಲಿ ನಂಬಿಕೆ ಇತ್ತು ನಡೆದರೆ ಬದುಕಿನ ಧಾಟಿಯೇ ಬದಲಾಗುತ್ತದೆ. ಅಂದು ಒಂದು ಸಣ್ಣ ಶ್ರಮ (ಹಲವಾರು ಕಿ. ಮಿ. ನೆಡೆದು ಸಂಸಾರದ ನೊಗವನ್ನು ಹೊತ್ತ ಹಿರಿಯ ಚೇತನ) ಇಂದು ಸಹಸ್ರಾರು ಕುಟುಂಬಗಳಿಗೆ ದೀಪವಾಗಿರುವುದು ಸಾಧನೆಯೇ ಸರಿ. ತುಂಬಾ ಅಪರೂಪದ ಲೇಖನ. ಹಿರಿಯರನ್ನು ನೆನೆಯುವುದು ಅವರ ಹಾದಿಯಲ್ಲಿ ನಡೆಯಲು ಪ್ರಯತ್ನಿಸುವುದು ಇವೆ ನಾವು ಅವರಿಗೆ ಸಲ್ಲಿಸುವ ಕಿರುಕಾಣಿಕೆ. ಇಷ್ಟವಾಯಿತು ಲೇಖನ!

    ReplyDelete
    Replies
    1. ಹೌದು ಶ್ರೀಕಾಂತ್ ಜೀ.
      ಸಣ್ಣದನ್ನೇ ದೊಡ್ಡ ಸಾಧನೆಯೆಂದು ಬೀಗುವ ನಮ್ಮಗಳ ನಡುವೆ ಇಂತ ಹಿರಿಯರು ಆದರ್ಶಪ್ರಾಯರಾಗಿ ಮೂಲೆಯಲ್ಲೆಲ್ಲೋ ನಸುನಗುತ್ತಾ ಕುಳಿತಿರುತ್ತಾರೆ. ಬ್ಲಾಗ್ ಗೆ ಬಂದು ಓದಿ ಪ್ರತಿಕ್ರಿಯಿಸುತ್ತಿರುವುದಕ್ಕೆ , ಮೆಚ್ಚುಗೆಗಳಿಗೆ ತುಂಬಾ ತುಂಬಾ ಧನ್ಯವಾದಗಳು ಶ್ರೀಕಾಂತ್ ಜೀ :-)

      Delete
  4. ಹೌದು ಅವರುದೇವತಾ ಮನುಷ್ಯರು ನಾನೂ SSLCಯಲ್ಲಿ 3ತಿಂಗಳು ತಮ್ಮ ಮನೆಯಲ್ಲಿದ್ದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ

    ReplyDelete