ತಬಲದಲಿ ಪಾಂಡಿತ್ಯ,
ನಾರಿ ನಾಚಿಸೊ ಕಂಠ
ಗಗನಕ್ಕೆ ಗುರಿ ಇಟ್ಟ ಆ ಚೆಲುವನು
ಒಮ್ಮೆಯೇ ಮರೆಯಾಗಿ ಎಲ್ಲೋದನು?|೧|
ಇರುವ ಸುದ್ದಿಯು ಬಂತು ಜೈನ ನಾಡಿಂದ
ಒಡನಾಡಿದಾ ಗೆಳೆಯ ಎತ್ತರಕೆ ಬೆಳೆದ
ಕಾಲ ಚಕ್ರವು ಉರುಳೆ ಮತ್ತೆ ಮರಳಿ
ಶುಭಕಾರ್ಯದಲಿ ಕಂಡು ಮತ್ತೆ ಮರೆಯಾದ|೨|
ಕಳೆದಿರುವ ಅವನನ್ನು ಹುಡುಕಿತೇ ಹೊತ್ತಿಗೆ?
ಅವ ಕಂಡ ಕನಸೆಲ್ಲಾ ನನಸಾಗೋ ಹೊತ್ತಿಗೆ
ಚಿತ್ರವೊಂದರ ದೃಶ್ಯ ನಿಜವಾಗಿ ಜೀವನದಿ
ಬಸ್ಸ ಚಕ್ರವು ಕಾಲ ಮೇಲೆ ಹರಿದೋಯ್ತು
ರಸ್ತೆಯಲಿ ಹೊಂಡವೋ ನುಣುಪಲ್ಲೊ ಆ ಕಾಲು?
ಎಲೆಯಂತ ನಮ್ಮ ಹಾರಿಸೋ ಕಾಲ ಗಾಳಿಗೆ
ಸಿಕ್ಕನೆಂಬೋ ಹೊತ್ತಿಗೇ ಮತ್ತೆ ಮರೆಯಾದ|೩|
ಕಳ್ಳನಲ್ಲವೊ ಆತ, ಪೋಲಿಸು ಮೊದಲಲ್ಲ
ಗೆಳೆಯನ ನ್ಯಾಯಕೆ ಕಟಕಟೆಯ ಏರಾತ
ಜೀವನದಿ ಎಷ್ಟೊಂದು ಏರಿಳತ ಕಂಡೂ
ಮನದ ಸ್ಥಿತ ಭಾವವನು, ನೋವಿನಲು ನಗುವನ್ನು
ಬಿಟ್ಟು ಕೊಡದೇ ನಡೆದ, ಸರಿಯಾಯ್ತು ಕಾಲು
ಏರಿಳಿತ ಮರೆತಿರುವ ಗೆಲುವೆ ಹೃದಯದ ಬಡಿತ
ಎಂದು ಗುರಿ ಕಡೆ ನಡೆದ ಅಂಥ ಸಾಧಕರಿಗೆ
ಮೆಚ್ಚುಗೆಗೂ ಮರೆಯಾಗಿ ಸೋಲನ್ನೆ ಹೊದ್ದುಂಡೂ
ಮುಂದೆ ತಣ್ಣಗೆ ಸಾಗೋ ಮೌನಿ ಸಾಧಕರಿಗೆ
ಮತ್ತೊಮ್ಮೆ ನಮನವೋ ನನ್ನ ಕಡೆಯಿಂದ|೪|
4V3E6ADGKJEA
good effert..
ReplyDeleteThank You :-)
ReplyDelete