ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿರೋರಿಗೆ ಕೆಳದಿಯ ಬಗ್ಗೆ ಗೊತ್ತೇ ಇರುತ್ತದೆ. ಹೊಸಬರಿಗೆ ಹೇಳಬೇಕೆಂದರೆ, ನೀವು ಜಗತ್ಪ್ರಸಿದ್ಧ ಜೋಗ ಜಲಪಾತದ ಹೆಸರನ್ನು ಕೇಳಿಯೇ ಕೇಳಿರುತ್ತೀರಿ. ಅದಕ್ಕೆ ಹೋಗಬೇಕಾದರೆ ಸಾಮಾನ್ಯವಾಗಿ ಸಾಗರಕ್ಕೆ ಬಂದೇ ಹೋಗುತ್ತಾರೆ. ಸಾಗರದಿಂದ ಎಂಟು ಕಿ.ಲೋ ಮೀಟರು ದೂರವಿರುವ ಊರು ಕೆಳದಿ. ಇಲ್ಲಿಯ ಪಾಳೇಗಾರ ಶಿವಪ್ಪನಾಯಕ, ರಾಣಿ ಚೆನ್ನಮ್ಮ... ಈ ಹೆಸರುಗಳನ್ನು ಎಲ್ಲೋ ಕೇಳಿದ/ಓದಿದ ನೆನಪಾಗುತ್ತಿದೆಯೇ? ಹಾ ಅದೇ ಕೆಳದಿ. ಅದರ ಹತ್ತಿರವೇ ನಮ್ಮೂರು.
ಪ್ರತೀವರ್ಷವೂ ಕನ್ನಡ ರಾಜ್ಯೋತ್ಸವ ಬಂತೆಂದರೆ ನಮಗೆಲ್ಲಾ ಹಬ್ಬದ ವಾತಾವರಣ.ಹಂಪಿಯಿಂದ ಕೆಳದಿಗೆ ಬರುತ್ತಿದ್ದ ವಿದ್ಯಾರಣ್ಯ ಜ್ಯೋತಿಯದು ಕೆಳದಿಯಿಂದ ಸಾಗರದವರೆಗೆ ಮೆರವಣಿಗೆ..ಆ ಸಂದರ್ಭವೆಂದರೆ ನಮಗೆಲ್ಲಾ ಸಂಭ್ರಮವೋ ಸಂಭ್ರಮ.ಪ್ರತೀ ಮನೆಯೆದುರ ರಸ್ತೆಯನ್ನೂ ತೊಳೆದು ಎಳೆದ ದೊಡ್ಡದೊಡ್ಡ ರಂಗೋಲಿಗಳು,"ವಿದ್ಯಾರಣ್ಯ ಜ್ಯೋತಿಗೆ ಸ್ವಾಗತ", "ರಾಜ್ಯೋತ್ಸವದ ಶುಭಾಶಯಗಳು" ಇತ್ಯಾದಿ ಬರಹಗಳೇನು, ಪ್ರತೀ ಹಳ್ಳಿಯ ಬಾಗಿಲುಗಳಲ್ಲಿ, ಹೆಚ್ಚೆಚ್ಚು ಮನೆಗಳಿದ್ದ ಕಡೆ ಹೀಗೆ ಸಾಲು ತೋರಣಗಳೇನು, ಪೇಟೆ ಹತ್ತಿರ ಸಾಗುತ್ತಿದ್ದಂತೆ ಸಾಲು ಸಾಲು ವಿದ್ಯುತ್ ದೀಪಗಳೇನು..ಅಬ್ಬಾ!! ಜ್ಯೋತಿಯೊಂದಿಗೆ ಎಂಟು ಕಿಲೋಮೀಟರಿಗಿಂತಲೂ ದೂರ ಸಾಗುವುದೆಂದರೆ ಒಂದು ಅವಿಸ್ಮರಣೀಯ ಅನುಭವ.. ವಿದ್ಯಾರಣ್ಯರು ಹಕ್ಕ-ಬುಕ್ಕರ ಗುರುಗಳಲ್ಲವೇ, ಆ ವಿಜಯನಗರ ಸಾಮ್ರಾಜ್ಯಕ್ಕೂ ಕೆಳದಿಗೂ, ಅವರ ಹೆಸರಿನ ಜ್ಯೋತಿಗೂ , ನಾನು ಹೇಳಹೊರಟಿರುವ ಮೆರವಣಿಗೆಗೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ಅಂತ ಸಂದೇಹ ಶುರು ಆಯ್ತಾ? ತಡೀರಿ ಒಂದೊಂದಾಗಿ ಹೇಳುತ್ತಾ ಹೋಗ್ತೇನೆ. ಮುಂದೆ ಓದಿ.
ಇತಿಹಾಸ
ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಕೆಳದಿಯ ಸಾಮಾನ್ಯ ರೈತನೊಬ್ಬನಾದ ಭದ್ರಗೌಡನೆಂಬುವನಿಗೆ ನಿಕ್ಷೇಪ ದೊರೆತು ಅದರಿಂದ ಅವನು ಪಾಳೆಯವನ್ನು ಕಟ್ಟಿಕೊಂಡನಂತೆ. ಅವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಅವನಿಗೆ ಎಂಟು ಮಾಗಣಿಗಳ ನಾಯಕತ್ವವನ್ನು ಕೊಟ್ಟನೆಂದು ಇತಿಹಾಸವಿದೆ .ಕಾಲ ಕಳೆದಂತೆ ಸಂಸ್ಥಾನ ಬೆಳೆಯಿತು. ಕೆಳದಿ, ಇಕ್ಕೇರಿ, ಗೌರಿ ಬಿದನೂರು ಹೀಗೆ ಕೋಟೆ ಕೊತ್ತಲಗಳನ್ನು, ದೇವಾಲಯಗಳನ್ನು ಕಟ್ಟಿದರು. ಶಿವಪ್ಪನಾಯಕ, ಚೆನ್ನಮ್ಮ ರಾಣಿಯಂತಹವರು ಬಂದು ಹೋದರು. ಕೆಳದಿಯ ವೀರಭದ್ರ ದೇವಸ್ಥಾನದ ಪ್ರಧಾನ ಬಾಗಿಲ ಬಳಿ ಶ್ರೀಕೃಷ್ಣನ ಸಣ್ಣ ವಿಗ್ರಹವಿದೆ. ಇದು ಅಂದಿನಾ ಘಟನೆಯ ಸವಿನೆನಪಿಗಾಗಿ ಎಂದು ಅನೇಕರು ಹೇಳುತ್ತಾರೆ.
೧೯೫೬ ರಲ್ಲಿ ಕರ್ನಾಟಕ ಏಕೀಕರಣವಾಯಿತು. ರಾಜ್ಯೋತ್ಸವ ಆಚರಣೆಗಳು ಪ್ರಾರಂಭವಾದವು. ೭೦ರ ದಶಕದ ಕೊನೆಭಾಗದಲ್ಲಿ ರಾಜ್ಯೋತ್ಸವ ಆಚರಣೆಯ ಭಾಗವಾಗಿ ಇತಿಹಾಸ ಪ್ರಸಿದ್ದ ಸ್ಥಳಗಳಿಂದ ಜ್ಯೋತಿಯೊಂದನ್ನು ತಂದು ಮೆರವಣಿಗೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತಂತೆ. ಅದಾಗಿ ಕೆಲಸಮಯದಲ್ಲಿ ಅಂದರೆ ಈಗ್ಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದಿಂದ ಕೆಳದಿಯಿಂದ ಜ್ಯೋತಿಯ ಮೆರವಣಿಗೆ ನಡೆಸುವ ಸಂಪ್ರದಾಯ ಶುರುವಾಗಿದೆ ಅಂತ ಅಲ್ಲಿನ ಹಿರಿಯರು ಹೇಳುತ್ತಾರೆ. ಮೊದಲಿಗೆ ನವೆಂಬರ್ ಒಂದರ ಹಿಂದಿನ ರಾತ್ರಿ ಹಂಪಿಯಿಂದಲೇ ವಿದ್ಯಾರಣ್ಯ ಜ್ಯೋತಿ ಕೆಳದಿಗೆ ಬರುತ್ತಿತ್ತಂತೆ. ಜೀಪಲ್ಲಿ ಹಿಂದಿನ ದಿನ ಮಧ್ಯರಾತ್ರಿಯ ಹೊತ್ತಿಗೆ ಕೆಳದಿಗೆ ಬರುತ್ತಿತ್ತು ಆ ಜ್ಯೋತಿ. ಮಧ್ಯರಾತ್ರಿ ಎಷ್ಟೊತ್ತಾದರೂ ಕೆಳದಿಗೆ ಬಂದೇ ತಲುಪುತ್ತಿದ್ದ ಜ್ಯೋತಿ ಹೊತ್ತು ತಂದವರು ಕೆಳದಿ ದೇಗುಲದ ಪ್ರಾಂಗಣದಲ್ಲೇ ಮಲಗಿರುತ್ತಿದ್ದರಂತೆ. ನಂತರ ಬೆಳಗ್ಗೆ ಆರೂ ಮುಕ್ಕಾಲರ ಹೊತ್ತಿಗಾಗಲೇ ಅದಕ್ಕೆ ಪೂಜೆಯಾಗಿ ಕೆಳದಿ ರಾಮೇಶ್ವರ ದೇವಸ್ಥಾನದಿಂದ ಸಾಗರದ ಕಡೆಗೆ ಹೊರಡುತ್ತಿತ್ತು.
ನಾವು ಕಂಡ ನೆನಪುಗಳು
ಬೆಳಗ್ಗೆ ಹೊರಡುತ್ತಿದ್ದ ಜ್ಯೋತಿಯ ಮೆರವಣಿಗೆ ಸ್ವಾಗತಿಸಲು ನಾವೆಲ್ಲಾ ಏಳು ಘಂಟೆ ಹೊತ್ತಿಗೇ ಸ್ನಾನವೆಲ್ಲಾ ಮುಗಿಸಿ ಹೊಸ ಬಟ್ಟೆಯಿದ್ದರೆ ಅದನ್ನೇ ತೊಟ್ಟು ಮನೆಯೆದುರಿಗಿನ ರಸ್ತೆಯಲ್ಲಿ ಕಾಯುತ್ತಾ ನಿಂತಿರುತ್ತಿದ್ದೆವು. ದೊಡ್ಡವರೆಲ್ಲಾ ತೋರಣ ಕಟ್ಟುವುದರಲ್ಲೋ , ಹೆಂಗಸರು ರಂಗೋಲಿಯೆಳೆಯುವುದರಲ್ಲೋ , ನಗುನಗುತ್ತಾ ತೊಡಗಿಕೊಂಡಿರುತ್ತಿದ್ದರು. ನಾವು ಹುಡುಗರಿಗೇನು ಕೆಲಸ? ಅಲ್ಲಿಂದಿಲ್ಲಿಗೆ ಓಡುವುದು, ಕೇಕೆ. ಇದೇ.. ಜ್ಯೋತಿ ಬರುತ್ತೆ ಸ್ವಲ್ಪ ಸುಮ್ಮನಿರಿ ಅಂತ ದೊಡ್ಡವರೂ ಗದರುತ್ತಿರಲಿಲ್ಲ. ಅವರೂ ನಮ್ಮ ಸಂತೋಷದಲ್ಲಿ ಶಾಮೀಲು.. ಕೆಲ ಸಲ ಚಾಕ್ಪೀಸುಗಳನ್ನು ನೆನೆಸಿ ರಾಜ್ಯೋತ್ಸವ ಜ್ಯೋತಿಯ ಚಿತ್ರವನ್ನೋ , ರಾಜ್ಯೋತ್ಸವ ಜ್ಯೋತಿಗೆ ಸ್ವಾಗತ ಅಂತಲೋ , ರಾಜ್ಯೋತ್ಸವದ ಶುಭಾಶಯ ಅಂತಲೂ ಬರೆದಿದ್ದುಂಟು ನಾವು ಹುಡುಗರೆಲ್ಲಾ ಸೇರಿ. ಮನೆಯೆದುರಿನ ಹೂವಿನೆಸೆಳುಗಳನ್ನು ತಂದು ಅದರಲ್ಲಿ ಸಿಂಗರಿಸಿದ್ದೂ ಉಂಟು. ಹುಡುಗಿಯರು ರಂಗೋಲಿ ಪುಡಿ ತಂದು ತುಂಬುತ್ತಿದ್ದರು. ಜ್ಯೋತಿ ಹಿಂದೆ ಬಂದ ಊರಿಗಿಂತಲೂ , ಮತ್ತೆ ಮುಂದೆ ಸಾಗೋ ಊರಿಗಿಂತಲೂ ನಮ್ಮೂರ ಸ್ವಾಗತ ಚೆನ್ನಾಗಿರಬೇಕು ಅಂತ ನಮ್ಮೆಲ್ಲರ ಆಸೆ ..
ಅಂತೂ ಜ್ಯೋತಿ ಬರೋದು.. ಕೆಳದಿಯ ಕಡೆಯಿಂದ ಬರೋ ಪ್ರತೀ ಬೈಕು, ಬಸ್ಸಿಗೂ ನಮ್ಮದು ಒಂದೇ ಪ್ರಶ್ನೆ. ಜ್ಯೋತಿ ಎಲ್ಲಿದೆ ಈಗ ಅಂತ.. ಅವರು ಹೇಳಿದ ಉತ್ತರದ ಮೇಲೆ ಇನ್ನು ಹತ್ತು ನಿಮಿಷಕ್ಕೆ ಇಲ್ಲಿಗೆ ಬರುತ್ತೆ ಅಂತಲೋ, ಅರ್ಧ ಘಂಟೆ ಆಗುತ್ತೆ ಅಂತಲೋ ನಮ್ಮದೇ ಒಂದು ನಿರ್ಧಾರ. ಆಗೆಲ್ಲಾ ಈಗಿನಂತೆ ಮೊಬೈಲು, ಮೆಸ್ಸೇಜುಗಳಿರ್ಲಿಲ್ಲ ನೋಡಿ.. ಜ್ಯೋತಿ ಬಂದ ತಕ್ಷಣ ಜೈಕಾರಗಳ ಕೂಗು ಮುಗಿಲು ಮುಟ್ಟೋದು. ಚಿಳ್ಳೆ-ಪಿಳ್ಳೆ, ಮುದುಕ-ಮುದುಕಿ ಎಲ್ಲಾ ಜೈ ಅನ್ನೋದೆ. ಬಚ್ಚ ಬಾಯಿ ಅಜ್ಜಿಯಂದ್ರೂ ನಮ್ಮ ಸಂಭ್ರಮ ನೋಡೋಕೆ ಮನೆಯಿಂದ ಹೊರಬಂದು ನಿಲ್ಲೋರು. ಜೈ ಅನ್ನೋಕೆ ಆಗದಿದ್ರೂ ನಾವು ಜೈ ಅಂದಾಗ ಕೈ ಎತ್ತೋರು, ಖುಷಿ ಇಂದ. ಚಪ್ಪಾಳೆ ತಟ್ಟೀ ಖುಷಿ ಪಡೋರು. ಯಾವುದಾದ್ರೂ ಜಾಗದಲ್ಲಿ ನೆಲ ಒದ್ದೆ ಆಗಿದೆ, ರಂಗೋಲಿ ಇದೆ ಅಂದ್ರೆ ಅಲ್ಲಿ ಜ್ಯೋತಿನ ನಿಲ್ಲಿಸಬೇಕು ಅಂತಲೇ ಅಲಿಖಿತ ನಿಯಮ. ಲೇಟಾಗತ್ತೆ ನಿಮ್ಮನೆ ಮುಂದೆ ನಿಲ್ಸಕಾಗಲ್ಲ ಅಂತೆಲ್ಲಾ ಜಬರ್ದಸ್ತು ಮಾಡಂಗೆ ಇಲ್ಲ. ಎಷ್ಟಕ್ಕೂ ಅದು ನಮ್ಮೂರ ಜ್ಯೋತಿ ಅಲ್ವಾ?
ಹೀಗೆ ನಿಲ್ಸಿದ ಕಡೆ ಎಲ್ಲಾ ಸುತ್ತಮುತ್ತಲ ಮನೆಯೋರು ಬಂದು ಕಾಯಿ ಒಡೆಯೋರು. ಜ್ಯೋತಿಗೆ ಎಣ್ಣೆ, ಕರ್ಪೂರ, ಊದಿನ ಕಡ್ಡಿ, ಬತ್ತಿ ಹಾಕೋರು. ಜ್ಯೋತಿ ಹಿಡಿದುಕೊಂಡೋರ ಪಾದಕ್ಕೆ ನೀರು ಹಾಕೋದೂ ಇತ್ತು ಕೆಲೋ ಕಡೆ. ಜ್ಯೋತಿ ಜೊತೆಗಿದ್ದೋರೊಗೆ ಕುಡಿಯೋಕೆ ನೀರು ಬೇಕಾ ಕೇಳಿ ಕೊಡ್ತಿದ್ರು ಪ್ರತೀ ಊರಲ್ಲೂ. ಕೆಲೋ ಕಡೆ ಶರಬತ್ತು :-) ನಮ್ಮೂರಲ್ಲಿ ಜ್ಯೋತಿಗೆ ಪೂಜೆ ಆದ ಮೇಲೆ ನಾವೂ ಜ್ಯೋತಿ ಜೊತೆ ಮುಂದೆ ಹೋಗ್ತಿದ್ವಿ. ಹೀಗೆ ಪ್ರತೀ ಊರಲ್ಲೂ ಜನ ಸ್ವಲ್ಪ ದೂರದವರೆಗಾದ್ರೂ ಜ್ಯೋತಿ ಜೊತೆಗೆ ಹೋಗೋರು. ನಮ್ಮಂಥ ಕೆಲ ಹುಡುಗರು, ಸ್ವಲ್ಪ ಯುವಕರು ಸಾಗರದವರೆಗೆ ಹೋದದ್ದೂ ಇದೆ. ಅಂದಂಗೆ ಹೇಳಕ್ಕೆ ಮರೆತೆ. ಮೊದಲೆಲ್ಲಾ ಟ್ರಾಕ್ಟರಲ್ಲಿ ಜ್ಯೋತಿ ಬರುತ್ತಿತ್ತಂತೆ. ಅದರ ಹಿಂದೆ ತಾಯಿ ಭುವನೇಶ್ವರಿಯ ಚಿತ್ರ, ಮುಂದೆ ವಿದ್ಯಾರಣ್ಯರ ದೊಡ್ಡ ಭಾವಚಿತ್ರ.ಎದುರಿಗೆ ಜ್ಯೋತಿ ಹಿಡಿದ ಜನರು. ಈಗ ತೆರೆದ ಜೀಪಲ್ಲಿ ಆ ಮೆರವಣಿಗೆ ನಡೆಯುತ್ತಿದೆ. ಆ ಭಾವಚಿತ್ರ, ಜ್ಯೋತಿ ಎಲ್ಲಾ ಹಾಗೇ ಇದೆ.
ನಮ್ಮ ಹಳ್ಳಿ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಹುಲ್ಲತ್ತಿ ಅಂತ ಸಿಗುತ್ತಿತ್ತು. ಅಲ್ಲಿಂದ ಆಮೇಲೆ ಪೇಟೆಯ ವಾತಾವರಣ ಶುರು ಆಗುತ್ತಿತ್ತು. ಅಲ್ಲೆಲ್ಲಾ ಬಣ್ಣದಿಂದ ಬರೆದಿರೋರು. ಆಮೇಲೆ ಶ್ರೀಗಂಧದ ಸಂಕೀರ್ಣ ಅಥವಾ ಕಾಂಪ್ಲೆಕ್ಸು ಅಂತ ಸಿಗುತ್ತಿತ್ತು. ಅಲ್ಲಿಂದ ಸಾಗರಕ್ಕೆ ಸುಮಾರು ಮೂರೂವರೆ ಕಿ.ಮೀ.ಯ ಲೆಕ್ಕಾಚಾರ.ಅಲ್ಲೊಂದು ಕನ್ನಡ ಧ್ವಜಾರೋಹಣ ಆಗುತ್ತಿತ್ತು. ಅಲ್ಲಿಂದ ಶಾಲೆ ಹುಡುಗರು ಮೆರವಣಿಗೆಯ ಮುಂಬಾಗಕ್ಕೆ ಸೇರಿಕೊಳ್ಳುತ್ತಿದ್ದರು.ಮುಂದೆ ಅವರ ಪೆರೇಡ್, ಹಿಂದೆ ಜ್ಯೋತಿ. ಮೊದಲು ಸಣ್ಣವರನ್ನೆಲ್ಲಾ ಆ ಪೆರೇಡ್ಗೆ ಕರೆಯುತ್ತಿರಲಿಲ್ಲ. ಆಮೇಲೆ ಆ ಕಾಂಪ್ಲೆಕ್ಸ್ ಶಾಲೆಯಲ್ಲೇ ಓದಿದ ನಾನೂ ಆ ಮೆರವಣಿಗೆಯ ಜೊತೆ ಸೇರಿಕೊಳ್ಳಬೇಕಾಯಿತು. ಅದರಲ್ಲಿ ಆ ತ್ರಿಕೋನಾಕೃತಿಯ ವಾದ್ಯ ಬಡಿಯೋದು, ಡ್ರಮ್, ದೊಡ್ಡ ಡ್ರಮ್ಮು, ಪೀಪಿ ಊದೋದು.. ಅಬ್ಬಾ ಬಹಳ ಒಳ್ಳೆಯ ಅನುಭವ. ಆ ದಿನಕ್ಕೇ ಅಂತಲೇ ರೆಡಿಯಾದ ಶೂಗಳು, ಬಿಳಿ ಬಟ್ಟೆ, ಕೈಗೊಂದು ಬ್ಯಾಂಡು ಇವೆಲ್ಲಾ ಮತ್ತೊಂದು ಸ್ವಾತಂತ್ರ್ಯ ದಿನದಷ್ಟೇ ಖುಶಿ ಕೊಡುತ್ತಿತ್ತು ನಮಗೆ. ಈಗಿನ ಹುಡುಗರಿಗೆ ಅದೆಲ್ಲಾ ದಿನನಿತ್ಯದ ಸಮವಸ್ತ್ರ ಬಿಡಿ. ಆದರೆ ನಮಗೆಲ್ಲಾ ಶೂಗಳು ಅಂದ್ರೆ ಪೆರೇಡ್ಗೆ ಮಾತ್ರ ಅದು ಅನ್ನೋ ಅಂತ ಪರಿಸ್ಥಿತಿ. ಆರ್ಥಿಕ ಸ್ಥಿತಿಯೂ ಹಾಗೇ ಇತ್ತು ಬಿಡಿ...
ಅಲ್ಲಿಂದ ಮುಂದೂ ಹೀಗೆ ಮಾರು ಮಾರಿಗೆ ಜ್ಯೋತಿಯ ನಿಲುಗಡೆ. ಹಾಗೇ ಸಾಗುತ್ತಿದ್ದಾಗ ಅಲ್ಲಿ ರಾಣಿ ಚೆನ್ನಮ್ಮ ವೃತ್ತ ಅಂತ ಸಿಗುತ್ತಿತ್ತು. ಅಲ್ಲಿ ಸಾಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳೂ ಬಂದು ಸೇರುತ್ತಿದ್ದರು. ಡೊಳ್ಳು ಕುಣಿತದ ತಂಡದವರು, ಆನೆಗಳು , ಎಲ್ಲೆಡೆ ಬಣ್ಣದ ಕಾಗದ, ಲೈಟು ಸರಗಳು.. ಹೀಗೆ ಕಣ್ಣಿಗೆ, ಕಿವಿಗೆ ಹಬ್ಬ ಅಲ್ಲಿ. ಸಾಗರದ ಸೇವಾಸಾಗರ, ಪ್ರಗತಿ,ವನಶ್ರೀ, ಸಿದ್ದೇಶ್ವರ, ಕಾನ್ವೆಂಟ್ ಹೀಗೆ ಹಲವು ದೊಡ್ಡ ಶಾಲೆಗಳದ್ದು ಒಂದೊಂದು ಲಾರಿಯೇ ಇರುತ್ತಿತ್ತು. ಏನು ಅಂದಿರಾ? ಸ್ಥಬ್ದ ಚಿತ್ರಗಳು.. ರಾಣಿ ಚೆನ್ನಮ್ಮ, ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ ಹೀಗೆ ಹಲವು ವೇಷ ಹಾಕಿದ ಹುಡುಗ ಹುಡುಗಿಯರು ಲಾರಿಯ ಮೇಲಿರುತ್ತಿದ್ದರು. ಸೈಡಿಗೆ ಇದು ಇಂಥ ಶಾಲೆ ಎಂಬಂಥ ಬ್ಯಾನರು. ಇಲ್ಲಿ ಇನ್ನೂ ಹಲವಾರು ಶಾಲೆಯ ಹುಡುಗರು ಮೆರವಣಿಗೆಗೆ ಸೇರುತ್ತಿದ್ದ ಕಾರಣ ನಮ್ಮ ಕಾಂಪ್ಲೆಕ್ಸ ಶಾಲೆಯವರಿಗೆ ಇಲ್ಲಿಯವರೆಗೆ ಮಾತ್ರ ಮೆರವಣಿಗೆ ಜೊತೆ ಹೋಗೋ ಅವಕಾಶ. ಮುಂದೂ ಹೋಗಬಹುದಿತ್ತು. ಆದರೆ ಅದಾಗಲೇ ಸುಮಾರು ೨ ಕಿಮೀನಷ್ಟು ನಡೆದು, ಮನೆಯಿಂದ ಬೆಳಗ್ಗೆನೇ ಬಂದ ಹುಡುಗರು ಮುಂದೆ ಹೋಗುತ್ತಿರಲಿಲ್ಲ.
ರಾಣಿ ಚೆನ್ನಮ್ಮ ವೃತ್ತದಲ್ಲಿ ಧ್ವಜಾರೋಹಣ. ಅಲ್ಲಿ ಕನ್ನಡ ಗೀತೆಯ ಗಾಯನ, ಭಾಷಣಗಳು ಇರುತ್ತಿದ್ದವು. ಅಲ್ಲಿ ಗೆಳೆಯರ ಬಲಗದವರು, ಆಟೋ ಚಾಲಕರು ಎಲ್ಲಾ ಸೇರಿ ನೆರೆದಿದ್ದ ಎಲ್ಲರಿಗೂ ಸಿಹಿ, ಜ್ಯೂಸ್ ಹಂಚುತ್ತಿದ್ದರು. ಅಲ್ಲಿಂದ ಮುಂದೂ ಪ್ರಮುಖ ಬೀದಿಗಳಲ್ಲಿ ಸಾಗಿ ಹತ್ತು, ಹತ್ತೂವರೆ ಹೊತ್ತಿಗೆ ಸಾಗರ ಪುರಸಭೆಯನ್ನು ಮುಟ್ಟುತ್ತಿತ್ತು ಜ್ಯೋತಿ. ಅಲ್ಲೂ ಮತ್ತೆ ಕಾರ್ಯಕ್ರಮಗಳು. ಸಂಜೆ ರಾಣಿ ಚೆನ್ನಮ್ಮ ವೃತ್ತದಲ್ಲಿ ರಸಮಂಜರಿ, ಇನ್ನಿತರ ಮನರಂಜನಾ ಕಾರ್ಯಕ್ರಮಗಳು ಇರುತ್ತಿತ್ತು.. ಪುರಸಭೆಯಲ್ಲೂ ಅಂದು ಸಂಜೆ ಹಲಕಾರ್ಯಕ್ರಮಗಳು..
ಪ್ರತೀ ವರ್ಷವೂ ನವೆಂಬರ್ ಒಂದು ಬಂದಾಗ ಈ ಎಲ್ಲಾ ನೆನಪುಗಳು ಹಸಿರಾಗುತ್ತವೆ. ಮನೆಗೆ ಬರಲು, ಇದರಲ್ಲಿ ಮತ್ತೆ ಪಾಲ್ಗೊಳ್ಳಲು ಮನ ಹವಣಿಸುತ್ತದೆ. ಹಂಪಿಯಿಂದ ಜ್ಯೋತಿ ತರುತ್ತಿದ್ದ ಆಚರಣೆ ಕೆಲ ವರ್ಷಗಳಲ್ಲಿ ನಿಂತಿತಂತೆ. ಅದನ್ನೀಗ ಕೆಳದಿಯಿಂದಲೇ ನೇರವಾಗಿ ತರುತ್ತಿದ್ದಾರೆ.( ಆದರೆ ನಾವು ಸಣ್ಣವರಿದ್ದಾಗ ಅದು ಹಂಪಿಯಿಂದಲೇ ಬರುತ್ತಿದೆ ಅಂತ ನಂಬಿದ್ದೆವು) . ಉಳಿದೆಲ್ಲಾ ಸಂಭ್ರಮಗಳು ಹಾಗೇ ಇದೆ. ಈ ವರ್ಷ ಕೆಳದಿಯಿಂದ ಚಂದ್ರಗುತ್ತಿಗೂ ಒಂದು ಜ್ಯೋತಿ ತೆಗೆದುಕೊಂಡು ಹೋಗಿದ್ದಾರಂತೆ. ಅಲ್ಲಿಂದ ಸೊರಬದವರೆಗೆ ಸಾಗರದ ರೀತಿಯಲ್ಲೇ ಮೆರವಣಿಗೆ ಮಾಡೋ ಉದ್ದೇಶವಂತೆ.
ನಮ್ಮೂರಿನ ಈ ರೀತಿ ಆಚರಣೆಯಲ್ಲಿ ಭಾಗವಹಿಸಿದ್ದೆ ಅನ್ನೋದೆ ನನಗೊಂದು ಹೆಮ್ಮೆ. ಇಲ್ಲಿಯವರೆಗೆ ತಾಳ್ಮೆಯಿಂದ ಓದಿದ ತಮಗೆಲ್ಲರಿಗೂ ಮತ್ತೊಮ್ಮೆ ವಂದಿಸುತ್ತಾ ವಿರಮಿಸುತ್ತಿದ್ದೇನೆ.
ಸಹಾಯ: ನನ್ನಮ್ಮ ಶ್ರೀಮತಿ ಸವಿತಾ ಪ್ರಭಾಕರ್ ಮತ್ತು ಕೆಳದಿಯ ಅರ್ಚಕರಾದ ಶ್ರೀ ರಾಮಭಟ್ಟರು
ಉತ್ತಮ ಮಾಹಿತಿಗೆ ಧನ್ಯವಾದಗಳು..
ReplyDeleteಪ್ರತಿಕ್ರಿಯೆಗೆ ಧನ್ಯವಾದ ಆದಿತ್ಯ :-)
ReplyDeletenice info...
ReplyDeleteThanks ಮನಮುಕ್ತಾ :-)
ReplyDeleteಕೆಳದಿಗೆ ಬಂದು ಅಲ್ಲಿನ ರಾಜ್ಯೋತ್ಸವ ಸವಿಯದ ನನ್ನ ಬಗ್ಗೆ ಬೇಸರವಾಗುತ್ತಿದೆ. ಮುಂದಿನ ವರ್ಷ ನಾನು ಹಾಜರು.
ReplyDeleteನನ್ನ ಬ್ಲಾಗಿಗೂ ನಿಮಗೆ ಆತ್ಮೀಯ ಸ್ವಾಗತ.
www.badari-poems.blogspot.com
ಧನ್ಯವಾದಗಳು ಬದರಿಯವರೆ. ಹಿಂದಿನ ದಿನವೇ ಬನ್ನಿ :-) ನಿಮ್ಮ ಬ್ಲಾಗಿನ follower ಪಟ್ಟಿಯಲ್ಲಿ ನಾನೂ ಇದ್ದೇನೆ ನೋಡಿ :-).. ನಿಮ್ಮೆಲ್ಲಾ ಕಥೆ, ಕವನಗಳನ್ನು ನಾನು Dashboard ನಲ್ಲೇ ಓದುವುದು :-)
ReplyDelete