Sunday, March 29, 2020

ನಾನೋದಿದ ಪುಸ್ತಕ "ಚಿತಾದಂತ"

ಪ್ರಪಂಚದ ಗೊಡವೆಯೇ ಬೇಡವೆಂದು ಹೊರಟು ನಿಂತ ಬುದ್ಧ ತನ್ನದೇ ಧರ್ಮವೊಂದನ್ನು ಸ್ಥಾಪಿಸಿ ಅದನ್ನು ಜನರಿಗೆ ಉಪದೇಶಿಸತೊಡಗುತ್ತಾನೆ. ಅವನ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಅವರಿಗಾಗಿ ವಿಹಾರಗಳನ್ನು ಕಟ್ಟಿಸುತ್ತಾ ಸಾಗುತ್ತಾನೆ ! ಆತನ ಅನುಯಾಯಿಗಳು ಈ ಹೊಸ ಧರ್ಮ ಪ್ರಚಾರಕ್ಕೆ ಎಷ್ಟು ಉತ್ಸುಕರಾಗುತ್ತಾರೆಂದರೆ ಒಂದು ಹಂತದಲ್ಲಿ ಭಾರತವನ್ನೂ ದಾಟಿ ಮೇಲಿನ ನೇಪಾಳ ಕೆಳಗಿನ ಶ್ರೀಲಂಕಾಗಳಿಗೆ ಸಾಗುತ್ತಾರೆ. ಭಾರತದಲ್ಲಿ ಬದಲಾಗುತ್ತಿದ್ದ ಹಿಂದೂ ಧರ್ಮದ ಪ್ರಭಾವಕ್ಕೊಳಗಾಗಿ ಬೌದ್ಢ ಧರ್ಮವೂ ಬದಲಾಗುತ್ತಿದ್ದರೂ ಶ್ರೀಲಂಕಾ, ನೇಪಾಳಗಳ ಮುಟ್ಟಿದ ಬೌದ್ಢ ಧರ್ಮ ತನ್ನ ಅಸ್ಮಿತೆಯನ್ನು ಹಾಗೇ ಉಳಿಸಿಕೊಂಡಿರುತ್ತದೆ. ತಮಿಳುನಾಡಿನ ರಾಜರು ಶ್ರೀಲಂಕಾಕ್ಕೆ ಆಗಾಗ ಬೌದ್ಢ ಧರ್ಮ ಪ್ರಚಾರಕ್ಕೆಂದು ಜನರನ್ನು ಕಳುಹಿಸುತ್ತಿರುತ್ತಾರೆ. ಆದರೆ ಅಲ್ಲಿನ ಹಳೆಯ ಬೌದ್ಢ ಧರ್ಮವನ್ನೇ ನಿಜವಾದ್ದು, ಶ್ರೇಷ್ಟವಾದ್ದು ಎಂದು ಭಾವಿಸೋ ಮುನಿಗಳು, ಅವರಿಂದ ಪ್ರಭಾವಿತರಾದ ರಾಜರು ಇದಕ್ಕೆ ಅವಕಾಶ ಕೊಡುತ್ತಿರುವುದಿಲ್ಲ. ಕೊನೆಗೂ ಒಂದು ದಿನ ಭಾರತದಿಂದ ಬಂದ ಹೊಸ ಬೌದ್ಧ ಧರ್ಮದಿಂದ ಪ್ರಭಾವಿತನಾಗಿದ್ದ ಮುನಿಯೊಬ್ಬ ಯುವರಾಜನೊಬ್ಬನ ಗುರುವಾಗಿ ಉಳಿಯೋ ಅವಕಾಶ ಪಡೆಯುತ್ತಾನೆ.  ಅದನ್ನೇ ಮುಂದೆ ದುರುಪಯೋಗ ಪಡಿಸಿಕೊಳ್ಳೋ ಆತ ಅಲ್ಲಿನ ಮೂಲ ಸತ್ವದ ಅನುಯಾಯಿಗಳನ್ನೆಲ್ಲಾ ಕೊಲ್ಲಲು ಆದೇಶಿಸುತ್ತಾನೆ ! ಆಗ ತಮ್ಮ ಮತ್ತು ಮೂಲ ಬೌದ್ಢ ಧರ್ಮದ ಆಶಯಗಳ ಜೀವ ಉಳಿಸಲೆಂದು ಜೀವ ತಾಳಿದ ಗುಂಪೇ "ತೇರವಾದಿಗಳು". ಮೂಲತಃ ಶಾಂತಿವಾದಿಗಳಾಗಿದ್ದ ಅವರು ತಮ್ಮ ಉದ್ದೇಶಗಳ ಸಾಧನೆಗೆ ಹಿಂಸಾ ಮಾರ್ಗವನ್ನು ಹಿಡಿಯುತ್ತಾರೆ.

ಪ್ರಪಂಚವನ್ನೇ ತನ್ನ ಸಾಮಾಜ್ಯವನ್ನಾಗಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಹಾದಿಯಲ್ಲಿ ಸಿಕ್ಕ ರಾಜ್ಯಗಳನ್ನೆಲ್ಲಾ ಗೆಲ್ಲುತ್ತಾ, ಸಿಕ್ಕಸಿಕ್ಕಿದ್ದೆಲ್ಲವನ್ನೂ ಲೂಟಿ ಮಾಡುತ್ತಾ ಸಾಗಿದ ಗ್ರೀಕ್ ರಾಜ ಅಲೆಕ್ಸಾಂಡರ್ ಭಾರತದತ್ತ ಬರುತ್ತಾನೆ. ಪಾಕಿಸ್ತಾನದ ಪೇಶಾವರದ ಬಳಿ ಲೂಟಿಯನ್ನು ಹೊತ್ತೊಯ್ದು ಮುಂದೆ ಸಾಗೋದೇ ಅಸಾಧ್ಯವೆನಿಸಿದಾಗ ಅವುಗಳನ್ನು ಅಲ್ಲೇ ಒಂದೆಡೆ ಸುಟ್ಟಂತೆ ಮಾಡಿ ಅದನ್ನೂ ರಹಸ್ಯವಾಗಿ ಸಂಗ್ರಹಿಸುತ್ತಾನೆ. ಅಲ್ಲಿಂದ ಮುಂದೆಯೂ ಅಪಾರವಾದ ಲೂಟಿ ಸಿಗುತ್ತದೆ. ಆದರೆ ಕೊನೆಗೊಂದು ದಿನ ಸಿಂಧೂ ನದಿಯಾಚೆಗಿರೋ ನಂದರ ಅಪಾರ ಸೇನಾಬಲವನ್ನು ಕಂಡು ದಿಗ್ಭ್ರಮೆಗೊಳಗಾಗುತ್ತಾನೆ. ತಾನು ಅಲ್ಲಿಯವರೆಗೆ ಲೂಟಿ ಹೊಡೆದ ಸಂಪತ್ತನ್ನೆಲ್ಲಾ ತನ್ನೂರಿಗೆ ಸಾಗಿಸಿ ತಾನೂ ವಾಪಾಸ್ಸಾಗಬೇಕು, ಈ ನಂದರ ಕೈಲಿ ಗೆಲ್ಲೋದು ಅಸಂಭವವೆಂದು ತನ್ನ ದಿಗ್ವಿಜಯದ ಕನಸನ್ನು ಕೈಬಿಡುತ್ತಾನೆ. ಆದರೆ ಸಂಪತ್ತನ್ನು ಸಾಗಿಸೋದು ಹೇಗೆ ಎಂದಾಗ ಆತನು ದಾರಿಯಲ್ಲಿ ಕಂಡ ಪ್ರಚಂಡ ಮೇಧಾವಿಗಳಾದ ಬೌದ್ಢ ಭಿಕ್ಷುಗಳು ನೆನಪಾಗುತ್ತಾರೆ. ಅವರಲ್ಲೊಬ್ಬನೇ ಅಶ್ವಘೋಷ. ಆತ ಅರ್ಧ ಸಂಪತ್ತನ್ನಷ್ಟೇ ನೀನು ಕೊಂಡೊಯ್ಯು. ಉಳಿದದ್ದನ್ನು ಇಲ್ಲೇ ರಹಸ್ಯವಾಗಿಡು. ನಂತರ ಅದನ್ನು ತೆಗೆದುಕೊಂಡು ಹೋಗಬಹುದು ಎಂದು ರಹಸ್ಯವಾಗಿಡಲು ಯೋಜನೆಯನ್ನು ತಯಾರಿಸಿ ಕೊಡುತ್ತಾನೆ. ಈ ಯೋಜನೆ ತಿಳಿದ ಅಶ್ವಘೋಷನನ್ನು ಇಲ್ಲೇ ಬಿಟ್ಟರೆ ಕಷ್ಟ. ಅವನನ್ನೂ ತನ್ನೊಡನೆ ಕೊಂಡೊಯ್ದು ಸಾಯಿಸಬೇಕು ಎಂದು ಅಲೆಕ್ಸಾಂಡರ್ ಆಲೋಚಿಸಿರುತ್ತಾನೆ. ಅದನ್ನು ತಿಳಿಯದಷ್ಟು ದಡ್ಡನೇ ಅಶ್ವಘೋಷ ? ತಾನು ನನ್ನ ಹಲ್ಲುಗಳಲ್ಲೇ ನಿಧಿಯ ರಹಸ್ಯವಡಗಿದೆ ಎಂಬ ರಹಸ್ಯ ಮಾಹಿತಿಯನ್ನು ಸಾಮಾನ್ಯ ಪತ್ರವೊಂದರೊಳಗೆ ಅಡಕವಾಗಿಟ್ಟು ತನ್ನ ನಿಷ್ಟ ಅಮಾತ್ಯರಾಕ್ಷಸನಿಗೆ ಕಳುಹಿಸುತ್ತಾನೆ. ಅಮಾತ್ಯ ಪತ್ರದ ರಹಸ್ಯವನ್ನು ಕೊನೆಗೂ ಬೇಢಿಸುವಷ್ಟರಲ್ಲಿ ಅಶ್ವಘೋಷ ಚಿತೆಗೆ ಹಾರಿ ಸತ್ತು ಹೋದ. ಇದು ಅವನ ಚಿತಾಭಸ್ಮ. ತಮಗೆ ತಲುಪಿಸಲೆಂದೇ ನೀಡಿದ್ದಾರೆ ಎಂದು ಅಲೆಕ್ಶಾಂಡರಿನ ಸೈನಿಕರು ಒಂದು ಭಸ್ಮದ ಭರಣಿಯನ್ನು ಕೊಡುತ್ತಾರೆ. ಅದರ ಕೆಳಗೆ ಆಧಾರವಾಗಿರುವಂತೆ ಮೂರು ಹಲ್ಲುಗಳನ್ನು ಅಂಟಿಸಲಾಗಿರುತ್ತದೆ !!!

ಇನ್ನು ಬುದ್ಢ ಸತ್ತಾಗ ಅವನ ಸಂಸ್ಕಾರಕ್ಕೆ ಹೋದವನೊಬ್ಬ ನಾಲ್ಕು ಹಲ್ಲುಗಳನ್ನು ತಂದಿರುತ್ತಾನೆ. ಅದು ರಾಜರಿಂದ ರಾಜರ ಕೈ ಬದಲಾಗುತ್ತಿರುತ್ತೆ. ಆ ಹಲ್ಲುಗಳನ್ನು ಇಟ್ಟುಕೊಂಡವರನ್ನು ಯಾರೂ ಸೋಲಿಸೋದು ಸಾಧ್ಯವಿಲ್ಲವೆಂಬ ದಂತಕತೆಯಿರುತ್ತೆ. ಕೈಯಿಂದ ಕೈ ಬದಲಾಗುವಾಗ ಆ ಹಲ್ಲು ಎಲ್ಲಿ ಹೋಯ್ತು ಎನ್ನೋದರ ಬಗ್ಗೆ ಎಲ್ಲೆಡೆ ಊಹಾ ಪೋಹಗಳೆದ್ದಿರುತ್ತೆ. ಶ್ರೀಲಂಕಾ, ನೇಪಾಳ, ಚೀನಾ, ಇಂಡೋನೇಷ್ಯಾದವರು ಬುದ್ಧನ ಅಸಲಿ ಹಲ್ಲು ತಮ್ಮ ಬಳಿಯೇ ಇದೆ ಎಂದೆನ್ನುತ್ತಾ ಇರುತ್ತಾರೆ !

ವಿಭಜನೆಯಾಗದ ಭಾರತದ ಕಾಲಕ್ಕೆ ಸೇರಿದ ಪಂಜಾಬಿ ಪ್ರಾಚ್ಯ ವಸ್ತು ಶಾಸ್ತ್ರಜ್ಞನೊಬ್ಬ ಹೀಗೇ ಬೌದ್ಢ ಧರ್ಮದ ಪಳೆಯುಳಿಕೆಗಳ ಬಗ್ಗೆ ಹುಡುಕುತ್ತಾ ಅಲೆಕ್ಸಾಂಡರಿನ ನಿಧಿಯನ್ನು ತಡಕುತ್ತಾನೆ ! ಹಾಗೇ ಇತಿಹಾಸದ ಕೊಂಡಿಗಳ ಬಿಡಿಸುತ್ತಾ , ಅಶ್ವಘೋಷ, ಅಮಾತ್ಯ, ಅದೇ ಕಾಲದಲ್ಲಿದ್ದ ಚಾಣಾಕ್ಯರ ಚಾಣಾಕ್ಷತನಗಳ ಅರಿಯುತ್ತಾನೆ.   ತನ್ನ ಸಂಶೋಧನೆಗಳನ್ನೆಲ್ಲಾ ಒಂದು ಡೈರಿಯಲ್ಲಿ ಬರೆದು ತನ್ನ ಕುಟುಂಬಸ್ಥರಿಗೆಂದು ಭದ್ರವಾಗಿಡುತ್ತಾನೆ !

ಹೆಚ್ಚುತ್ತಿರೋ ಬೌದ್ಢ ಧರ್ಮದ ಪ್ರಭಾವವನ್ನು ಸಹಿಸದ ಒಂದಿಷ್ಟು ಶಕ್ತಿಗಳು ಈ ಹಲ್ಲನ್ನು ಹುಡುಕಿ ಅದನ್ನು ನಾಶ ಮಾಡಬೇಕು ಎಂದು ಒಂದೆಡೆ. ಅಲೆಕ್ಸಾಂಡರಿನ ಸೇನೆಯೊಂದಿಗೇ ಬಂದು ಪಾಕಿಸ್ತಾನದ ಪೇಶಾವರದ ಬಳಿಯುಳಿದ ಕಲಾಶರು ತಮ್ಮ ಹಳೆಯ ನಿಧಿ ತಮಗೇ ಸೇರಬೇಕು ಎಂದು ಮತ್ತೊಂಡೆಡೆ. ಆ ಬುದ್ಧನ ಹಲ್ಲಿಗಿರೋ ಕೋಟ್ಯಾಂತರ ಬೆಲೆಗೆ ಹೇಗಾದರೂ ಮಾಡಿ ಅದನ್ನು ಲಪಟಾಯಿಸಬೇಕು ಎಂಬ ಭೂಗತ ಜಗತ್ತು ಇನ್ನೊಂದೆಡೆ. ಅಶ್ವಘೋಷನ ಹಲ್ಲುಗಳನ್ನು ಸಂಪಾದಿಸಿ ಅದರ ಮೂಲಕ ಪುರಾತನ ನಿಧಿಯ ರಹಸ್ಯಗಳನ್ನು ತಿಳಿದು ಅದನ್ನು ದೋಚಬೇಕು ಎಂಬ ಪಾಕಿಸ್ತಾನದ ಉಗ್ರಗಾಮಿಗಳ ಗ್ಯಾಂಗು ಮತ್ತೊಂದೆಡೆ ! ಇವೆಲ್ಲದರ ನಡುವೆ ತಮ್ಮ ರಹಸ್ಯಗಳನ್ನು ರಹಸ್ಯವಾಗೇ ಇಡಬೇಕು ಎಂಬ ಉದ್ದೇಶದ ತೇರವಾದಿಗಳು ಮತ್ತು ಇತಿಹಾಸದ ಬಗೆಗಿನ ಅದಮ್ಯ ಕುತೂಹಲದಿಂದ ಅದನ್ನು ಕೆದಕುತ್ತಾ ಮೇಲಿನೆಲ್ಲಾ ಗುಂಪುಗಳ ಕಣ್ಣಿಗೆ ಬೀಳೋ ಇತಿಹಾಸ ತಜ್ಞರು. ಇವರೆಲ್ಲರ ನಡುವಿನ ಸಮರ ಹೇಗೆ ಸಾಗುತ್ತೆ , ರಾಜ ಅಶೋಕನಿಂದ ಸಾಗಿ ಚಾಚಾ ನೆಹರೂವರೆಗೆ ಸಾಗೋ ಹಲವು ಶತಮಾನಗಳ ಹಲವು ಮಜಲಿನ ಕಾದಂಬರಿಯೇ ಚಿತಾದಂತ! ೫೬ಕ್ಕೂ ಹೆಚ್ಚು ಐತಿಹಾಸಿಕ ಗ್ರಂಧಗಳ ಉಲ್ಲೇಖಗಳು, ಚಿತ್ರಗಳು ಲೇಖಕರ ಅಪಾರವಾದ ಪೂರ್ವ ತಯಾರಿಯನ್ನು ಸೂಚಿಸುತ್ತೆ. ಇತಿಹಾಸ, ಕಲ್ಪನೆಗಳ ಉತ್ತಮ ಮಿಶ್ರಣದಲ್ಲಿ ಕೊನೆಗೆ ಯಾರು ಗೆದ್ದರು ಯಾರು ಸೋತರು ಅನ್ನೋದಕ್ಕಿಂತಲೂ ಮುಂದೇನಾಗುತ್ತೆ ಅನ್ನೋ ಕುತೂಹಲವೇ ಕೊನೆಯವರೆಗೂ ಗೆಲ್ಲುತ್ತೆ. ಎಲ್ಲಾ ಕತೆಯನ್ನು ನಾನೇ ಹೇಳಿಬಿಟ್ಟೆ. ಪುಸ್ತಕದಲ್ಲಿ ಇನ್ನೇನುಳೀತು ಅಂದ್ರಾ ? ನಾ ಹೇಳಿದ್ದು ಪುಸ್ತಕದಲ್ಲಿರೋ ಅಂಶಗಳಲ್ಲಿ ಒಂದಂಶವೂ ಅಲ್ಲ. ಅಭಿಪ್ರಾಯವೇ ಹೀಗಿದೆ ಅಂದ್ರೆ ಪುಸ್ತಕ ಹೇಗಿದೆ ಅಂದ್ರಾ ? ಓದಿ ನೋಡಿ, ನಿಮಗೇ ಗೊತ್ತಾಗುತ್ತೆ. ಪುಸ್ತಕ ಓದುವ ಸಂಸ್ಕೃತಿಗೆ ಶುಭವಾಗಲಿ :-)

No comments:

Post a Comment