Sunday, July 27, 2014

ಮಳೆ ಮಾತುಗಳಲ್ಲಿ

ಬೇಸಿಗೆಯ ಬೇಗೆಯಲ್ಲಿ ಬೆಂದ ನಗರದ ಜನಗಳಿಗೀಗ ಮಳೆಯ ತಂಪು. ಭೋರ್ಗರೆವ ಮಳೆಗೆ ಎಂಥಾ ಮಳೆಗಾಲವಪ್ಪಾ ಅನಿಸಿಬಿಡುವಂತ ಮಲೆನಾಡಿಗರಿಗೂ ಈ ಸಲ ತಡವಾದ ಮಳೆ ಕೊಂಚ ತಲೆಬಿಸಿ ತಂದಿದ್ದುಂಟು. ಮೊದಲ ಮಳೆಗೆ ಖುಷಿಯಾಗಿ ನಾಟಿಗೆ ಅಣಿಮಾಡಿದವರು, ಗಾಬರಿಯಾಗಿ ಕೊಳೆ ಔಷಧಿ ಹೊಡೆಸಿದವರು ಮತ್ತೆ ಒಂದು ವಾರವಾದರೂ ಮಳೆಯ ಸುಳಿವಿಲ್ಲದಿದ್ದಾಗ ಗಾಬರಿಯಾಗಿದ್ದು ಸಹಜವೇ. ನಾಟಿಗೆಂದು ಉತ್ತ ನೆಲವೆಲ್ಲಾ ಮತ್ತೆ ಬಿಸಿಲಿಗೆ ಒಣಗೋಕೆ ಶುರುವಾಗಿತ್ತು. ಬಿಸಿಲ ಝಳಕ್ಕೆ ಕೊಳೆಯೌಷಧಿ ಹೊಡೆಸಿಕೊಂಡ ಮರದ ತಲೆಯೆಲ್ಲಾ ಸುಡತೊಡಗಿದ್ವು. ಒಂತರಾ ಬಿಸಿಲಲ್ಲಿ ಬೆಂಕಿ ಹಾಕಿದಂಗೆ ಮರಗಳಿಗೀಗ. ಅಂತೂ ಒಂದು ವಾರ ಕಣ್ಣಾಮುಚ್ಚಾಲೆಯಾಡಿದ ಮಳೆ ಮತ್ತೆ ತನ್ನ ಮುನಿಸು ತೊರೆದು ಸುರಿಯಹತ್ತಿದೆ. ಎಲ್ಲೆಲ್ಲೂ ಹಸಿರ ಹೊದಿಕೆ ಹರಡತೊಡಗಿದೆ. ವರ್ಷವರ್ಷವೂ ತಡವಾಗುತ್ತಿರುವ, ಕೃಷವಾಗುತ್ತಿರುವ ಮಳೆ ಮಳೆಕೊಯ್ಲನ್ನು ಇನ್ನಾದರೂ ಗಂಭೀರವಾಗಿ ತೆಗೆದುಕೊಳ್ಳಿರೆಂದು ಹೇಳೋ ಪ್ರಯತ್ನದಲ್ಲಿದೆಯಾ ? ಗೊತ್ತಿಲ್ಲ. ಪಂಚಭೂತಗಳಲ್ಲೊಂದಾದ ನೀರೇ ನಮ್ಮ ಶರೀರದ ಹಲಭಾಗವೆಂಬುದು ನಮಗೆ ಗೊತ್ತಿದ್ದಿದ್ದೇ. ಆದ್ರೆ ನಮ್ಮ ಜೀವ, ಕಾಯ ಎಲ್ಲಾ ಆದ ಈ ನೀರೇ ಒಂದು ದನಿಯಾಗಿ ನಮ್ಮೆದ್ರು ಬಂದ್ರೆ ಹೇಗಿರುತ್ತೆ ? ಹಾಗೆ ಮಾತಾಡೋ ಪ್ರಯತ್ನದಲ್ಲಿರೋ ನೀರಿನ ಮಾತುಗಳೇ ಇಂದು ನಿಮ್ಮ ಮುಂದೆ.

ನಾನು ನೀರು. ನೀವು ನೀರೆನ್ನಿ. ಪಾನಿ ಅನ್ನಿ, H20 ಅನ್ನಿ. ಅದು ನಾನೇ.ಜಲಲ ಜಲಲ ಜಲ ಧಾರೆಯೆಂಬ ಹಾಡಿನಿಂದ, ಉಪೇಂದ್ರನ ಚಿತ್ರದವರೆಗೆ, ಬೆಂಗಳೂರಿನ ಮೋರಿಯಿಂದ , ಬರಾಕನ ನಗರಿಯ ನಯಾಗರೆಯ ಭೋರ್ಗರೆತವರೆಗೆ ಕಪ್ಪು, ಹಳದಿ, ಬಿಳಿ ಬಣ್ಣಗಳಲ್ಲಿ ಜುಳುಜುಳು ನಿನಾದವ ನಿರ್ಮಿಸುತ್ತಿರುವವನು/ವವಳು  ನಾನೇ, ಸರಸ್ವತೀ ಎಂದು ಹರಿದತ್ತೆಲ್ಲ ನಾಗರೀಕತೆಯ ಕಟ್ಟಿ ಕೊನೆಗೆ ನಿಮ್ಮ ಕಣ್ಣೆದುರೇ ಬತ್ತಿ ಹೋದವಳೂ ನಾನೇ. ಸಿಂಧೂ , ಗಂಗಾ ಎಂದು, ಯಮುನ, ಕಾವೇರಿ ಎಂದೂ ನಿಮ್ಮ ಬದುಕು ಕೊಟ್ಟ ದೇವಿಯಾಗಿ, ಮನೆ ಕೊಚ್ಚಿದ ಮಾರಿಯಾಗಿ ಹಲವು ಕಾಲಕ್ಕೆ ಹಲವು ರೂಪದಲಿ ಕಂಡು ಕಂಗೊಳಿಸಿದವಳು ನಾನೇ. ಭೀಮ, ಕಾಳಿ, ಥೇಮ್ಸು, ಮಿಸಿಸಿಪ್ಪಿ ಹೀಗೆ ಹಲದೇಶಗಳಲ್ಲಿ ಹಲಹೆಸರಿಟ್ಟು ಹರಿದತ್ತೆಲ್ಲಾ ಹೊನ್ನ ಹರಿಸಿದವನು ನಾನೇ. ಉತ್ತರದ ಶೀತಲ ಧೃವದಲ್ಲಿ ಹಿಮವಾಗಿ ನಡುವಲ್ಲಿ ಸಾಗರವಾಗಿ ಅಸಂಖ್ಯ ಜೀವಗಳಿಗೆ ಆಸರೆಯಾಗಿರುವುದು ನಾನೇ. ಇಷ್ಟೆಲ್ಲಾ ಕೂಟ್ಟ ನಾನು ಪೂರೈಸಹೊರಟಿದ್ದು ನಿಮ್ಮ ಆಸೆಗಳನ್ನೇ ಹೊರತು ದುರಾಸೆಗಳನ್ನಲ್ಲ. ಬದುಕಿನ ಅಗತ್ಯಗಳನ್ನೇ ಹೊರತು ಎಲ್ಲರ ಕೊಂದು ತಾನುಳಿವ  ಸ್ವಾರ್ಥದ ಚಿಂತನೆಗಳನ್ನಲ್ಲ. ನಾಗರೀಕತೆಯ ಹೆಸರಲ್ಲಿ ನಾ ಹರಿವ ದಾರಿಯನ್ನೇ ಅಡ್ಡಗಟ್ಟಿ ಅದರಿಂದ ಕಳೆದ ಜೀವಗಳ ರಕ್ತವ ನನ್ನ ಹೆಸರಿಗೆ ಅಂಟಿಸಿದಿರಿ. ನಿಮ್ಮ ರಾಜಕೀಯಗಳ, ಸ್ವಾರ್ಥದ ಹೊಡೆದಾಟಗಳ ರಾಜ್ಯ. ದೇಶಗಳ ನಡುವೆ ತಂದಿಟ್ಟು ಆ ಕಳಂಕವ, ಮಸಿಯ ನನಗೆ ಬಳಿದಿರಿ. ಆದರೂ ಸುಮ್ಮನಿದ್ದ ನನಗಾಗಿ  ಭೂತಾಯಿಯ ಭೋರುವೆಲ್ಲುಗಳಿಂದ ಬಗೆದಿರಿ. ಅಲ್ಲೂ ಕಾಲಕ್ಕೊಂದು ಸವಾಲು ಹಾಕುವ, ಪ್ರಕೃತಿಗೆ ಸೆಡ್ಡು ಹೊಡೆಯೋ ಪ್ರಯತ್ನ ಮಾಡಿದಿರಿ. ಊಹೂಂ ಆದರೂ ಸಮಾಧಾನವಿಲ್ಲ ನಿಮಗೆ. ನೂರಾರು ಜೀವಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ , ಹಲವು ತಲೆಮಾರುಗಳಿಗೆ ನೀರ ನೆಲೆಯಾಗಿದ್ದ ಕೆರೆಗಳಿದ್ದ ವಿಶಾಲ ಜಾಗ ಕಣ್ಣಿಗೆ ಬಿತ್ತು. ಸುಂದರ ಕೆರೆಗಳಿದ್ದ ಜಾಗವೆಲ್ಲಾ ಉಪಯೋಗಕ್ಕಿಲ್ಲದ ಜಾಗವೆನಿಸಿ ಅಲ್ಲೊಂದು ಸ್ಟೇಡಿಯಮ್ಮು, ಅಪಾರ್ಟುಮೆಂಟನೆಬ್ಬಿಸಿಬಿಟ್ರಿ. ಮನೆಯೊಳಗೆ ನೀರು ನುಗ್ಗಿತು, ಬಡಾವಣೆ ಜಲಾವೃತವಾಯ್ತು ಅಂತ ನನಗೆ ಹಿಗ್ಗಾಮುಗ್ಗಾ ಬಯ್ಯುವ ನಿಮಗೆ ಅದು ನನ್ನದೇ ಜಾಗವಾಗಿತ್ತು ಮುಂಚೆ, ನನ್ನದನ್ನು ಅತಿಕ್ರಮಿಸಿದ ಧುರಾಳರು ನೀವೇ ಎಂದು ಒಮ್ಮೆಯಾದರೂ ಅನಿಸಿತ್ತೇ ? ನನ್ನ ಮಕ್ಕಳಲ್ಲವೇ ಎಷ್ಟೆಂದರೂ ಎಂದು ಇಷ್ಟು ದಿನ ಸುಮ್ಮನಿದ್ದುದೇ ತಪ್ಪಾಯ್ತು. ನಿಮ್ಮ ಅಟ್ಟಹಾಸ ಮುಗಿಲು ಮುಟ್ಟುತ್ತಿದೆ. ತಾಯಿಯೆಂದು ನಿಮ್ಮ ಪೂರ್ವಜರು ಪೂಜಿಸುತ್ತಿದ್ದ ಗಂಗೆ ನಿಮ್ಮ ನಿರ್ಲಕ್ಷ್ಯದಿಂದ ತನ್ನನ್ನು ನೋಡಿಕೊಳ್ಳಲೇ ನಾಚಿಕೊಳ್ಳುವಷ್ಟು, ಭಾರತದೇಶದ ಪವಿತ್ರ ನದಿಯಾಗಿದ್ದೆ ತಾನು, ಒಂದಾನೊಂದು ಕಾಲದಲ್ಲಿ ಎನ್ನಲು ನಿರ್ಲಜ್ಜಳಾಗುವಷ್ಟು ಪರಿಸ್ಥಿತಿಗೆ ತಂದಿದ್ದೀರಿ. ಮಲಿನ ನೀರ ಸ್ವಚ್ಛ ಮಾಡೋ ಎಲ್ಲಾ ತಂತ್ರಜ್ನಾನ ಕಂಡುಹಿಡಿದುಕೊಂಡಿದ್ದರೂ ಅದನ್ನು ಉಪಯೋಗಿಸಲಾಗದ ಸೋಂಬೇರಿತನ ನಿಮಗೆ. ಪ್ಲಾಸ್ಟಿಕ್ ಉಪಯೋಗಿಸು, ಎಸಿ ಎಲ್ಲಾದ್ರು ಅದನ್ನ. ಅದಕ್ಕೆಂದೇ ಇಟ್ಟಿರೋ ತೊಟ್ಟಿಯೆಡೆ ಗಮನವಿಲ್ಲ. ಕಸ ಎಸೆಯಲು ಸೂಕ್ತ, ಚೀಪಾದ ಜಾಗ ಯಾವ್ದು ?ನದೀತೀರ !! ಹೇಗಿದ್ರೂ ಹೇಳೋರು ಕೇಳೋರು ಯಾರೂ ಇಲ್ಲವಲ್ಲ ಅಲ್ಲಿ ಎಂಬ ಭಾವದ ಜನ ಬೇರೆ!!  ಮಳೆ ಬಂದಾಗ, ದಿನದ ನಿಮ್ಮ ಸೋಂಬೇರಿತನದ ಫಲಗಳೆಲ್ಲಾ ಕೊನೆಗೆ ಸೇರೋದು ನನ್ನ ಮಡಿಲೇ . ನಲ್ಲಿಯಲ್ಲಿ ನೀರು ಹರಿದು ಹೋಗುತ್ತಿದ್ದರೆ ಅದರತ್ತ ಗಮನವಿಲ್ಲ. ನಿಮ್ಮ ರಕ್ತ ಹಾಗೇ ಹರಿದುಹೋಗುತ್ತಿದ್ರೆ ಹಾಗೇ ಸುಮ್ಮನಿರುತ್ತಿದ್ರಾ ? ಯಾರೋ ನಿಮ್ಮ ಮೇಲೇ ಕಸ ತಂದು ಎಸೆಯುತ್ತಿದ್ರೆ ಸುಮ್ಮನಿರುತ್ತಿದ್ರಾ ? ಇಲ್ಲವಲ್ಲ. ಅಷ್ಟೆಲ್ಲಾ ತಲೆ ಯಾಕೆ ಕೆಡಿಸ್ಕೋಬೇಕು ? ನೀನು ಬಿಟ್ಟಿ ನೀರು ತಾನೇ ಅಂದ್ರಾ ? ಹೂಂ. ನಿಮ್ಮ ದೇಹದ ಬಹುಭಾಗ ತುಂಬಿರೋ ನಿಮ್ಮ ತಾಯಿ ನೀರು ನಿಮಗೆ ಬಿಟ್ಟಿ.  ನಿಮ್ಮ ಬೇಕಾಬಿಟ್ಟಿ ತಪ್ಪುಗಳನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿದ ನಾನು ನಿಮಗೆ ಬಿಟ್ಟಿ. ನನ್ನ ಮಹಿಮೆ ಗೊತ್ತಿಲ್ಲವಲ್ಲ ನಿಮಗೆ. ಸರಿ, ನಾನು ನಿಮ್ಮ ವಿರುದ್ದ ಮುಷ್ಕರ ಹೂಡುತ್ತಿದ್ದೇನೆ. ನನ್ನ ಇಹದರಿವು , ಮಹತ್ವ ಗೊತ್ತಾಗೋವರೆಗೆ ಹರಿವ ನಿಲ್ಲಿಸುತ್ತೇನೆ.

ವರ್ಷ ವರ್ಷವೂ ಮಳೆ ಬರುತ್ತಿದ್ದ ಸಮಯವಾದರೂ ಮಳೆಯ ಸುಳಿವಿಲ್ಲ. ಬಾವಿಗಳೆಲ್ಲಾ ಬತ್ತಿ, ಕೆರೆಯ ತಳದ ನೀರೇ ಗತಿ. ಟ್ಯಾಂಕರುಗಳಲ್ಲಿ ಮೊದಮೊದಲು ನೀರು ಹೊಡೆದ್ರೂ ಕೊನೆಗೆ ಟ್ಯಾಂಕರುಗಳಿಗೇ ನೀರಿಗೆ ಬರದ ಪರಿಸ್ಥಿತಿ. ಕೊರೆದ ಬೋರುಗಳಲ್ಲಿ ಸಾವಿರ ಅಡಿ ಮುಟ್ಟಿದ್ರೂ ನೀರಿಲ್ಲ. ಇರೋ ಬೋರುಗಳಲ್ಲೂ ನೀರು ಕಮ್ಮಿಯಾಗುತ್ತಿರೋ ಆತಂಕ. ಬೋರ ನಂಬಿ ಭತ್ತ ರಾಗಿ ಗದ್ದೆಗಳನ್ನೆಲ್ಲಾ ಅಡಿಕೆ ತೋಟ ಮಾಡಿದವರು, ಬೋರ ನಂಬೇ ವರ್ಷವಿಡೀ ಕೃಷಿ ಮಾಡೋ ಕನಸ ಕಟ್ಟಿದವರ ಕನಸುಗಳೆಲ್ಲಾ ಕಣ್ಣೆದುರೇ ಕಮರಿಹೋಗುತ್ತಿದೆ. ಬಿರುಬಿಸಲಿಗೆ ಸುಟ್ಟು ಹೋಗುತ್ತಿದೆ. ಹೊಸ ಮನೆ ಕಟ್ಟಬೇಕಾದ್ರೆ ಮಳೆಕೊಯ್ಲಿನ ತಂತ್ರಜ್ನಾನ ಅಳವಡಿಸಿಕೊಳ್ಳಿ ಅಂತ ಸರ್ಕಾರ ಬೊಬ್ಬೆ ಹೊಡೆದ್ರೂ ಕಿವಿಗೆ ಹಾಕಿಕೊಳ್ಳದ ಜನ , ದುಡ್ಡಿದ್ರೆ ಏನು ಬೇಕಾದ್ರೂ ಸಿಗತ್ತೆ ಅಂತದ್ರಲ್ಲಿ ಈ ನೀರೇನು ಮಹಾ ಅಂದ ಜನರ ಮನೆಯಲ್ಲೆಲ್ಲಾ ಈಗ ನೀರಿಗಾಗಿ ಹಾಹಾಕಾರ. ದಿನಕ್ಕೆರೆಡು ಬಾರಿ ಬರುತ್ತಿದ್ದ ಪುರಸಭೆ, ನಗರಸಭೆ ನೀರು ಈಗ ಎರಡು ದಿನಕ್ಕೊಮ್ಮೆ. ಲಕ್ಷ ಲಕ್ಷ ಖರ್ಚು ಮಾಡಿಸಿ ಮನೆಯೆದುರು ತೋಡಿಸಿದ ಬೋರಲ್ಲಿ ಬಂದಿದ್ದು ಅರ್ಧ ಇಂಚು ನೀರಷ್ಟೇ. ನೀರೇ ಇಲ್ಲದ ಅನಿವಾರ್ಯತೆಗಿರಲಿ ಎಂದುಕೊಂಡಿರೋ ಅದನ್ನು ಬಳಸೋ ಮನಸ್ಸು ಬರ್ತಾ ಇಲ್ಲ ಈಗಲೇ. ಅಷ್ಟಕ್ಕೂ ತುಂಗೆಯ, ಕಾವೇರಿಯ ನೀರು ಕುಡಿದ ಜನಕ್ಕೆ ಈ ಬೋರ ಸವಳು ನೀರು ಇದೂ ಒಂದು ನೀರೇ ಅನಿಸಿದ್ದು ಸುಳ್ಳಲ್ಲ. ಕುಡಿಯೋ ನೀರಿಗೇ ಹಾಹಾಕಾರವೆದ್ದಿರುವಾಗ ಇನ್ನು ಗಾರ್ಡನ್ನು ಅಂತ ಮಾಡಿಕೊಂಡಿರುವುದಕ್ಕೆ ಸುರಿಯೋದೇನು ? ಕಣ್ಣೆದುರೇ ನೆಟ್ಟ ಗುಲಾಬಿ, ಲಿಲಿ, ಕಲ್ತುಂಬೆ ಗಿಡಗಳು ಒಣಗಿ ಸಾಯ್ತಾ ಇದ್ರೂ ಏನೂ ಮಾಡಲಾಗದ ಅಸಹಾಯಕತೆ. ಅವಾಗನಿಸಿದ ಮಾತು ಛೇ. ಹಿಂದಿನ ಸಲ ನೀರಿಂಗಿಸಿ ಅನ್ನೋ ಮಾತು ಕೇಳಿಬಿಡಬೇಕಿತ್ತು. ಗಾರ್ಡನ್ನಿನಲ್ಲೊಂದಿಷ್ಟು ಇಂಗು ಗುಂಡಿ ತೋಡಿಬಿಡಬೇಕಿತ್ತು. ಟಾರಸಿ ನೀರು ಸುಮ್ಮನೇ ಹರಿದುಹೋಗೋಕೆ ಬಿಡದೇ ಮಳೆಕೊಯ್ಲು ಮಾಡಿದ್ರೆ ಈ ಹೊತ್ತಿಗೆ ಹಿತ್ತಲೂ ತಂಪಿರುತ್ತಿತ್ತು. ನಮ್ಮ ನಿತ್ಯ ಬಳಕೆಯ ನೀರಿನ ಹಾಹಾಕಾರವೂ ತಪ್ಪುತ್ತಿತ್ತು ಅಂತ. ಬೀದಿಯ ನಲ್ಲಿ ಒಡೆದು ಒಂದು ವಾರವಾದ್ರೂ ಅದನ್ನು ಸರಿಮಾಡೋಕೆ ಕಂಪ್ಲೇಂಟು ಮಾಡದೇ ಇದ್ದಿದ್ದು ಎಷ್ಟು ದೊಡ್ಡ ತಪ್ಪಾಯ್ತು ಅಂತ ಅರ್ಥ ಆಗ್ತಾ ಇತ್ತು.

ಹೌದು. ನೀರೆಂಬುದು ಬರೀ ಪಂಚಭೂತಗಳಲ್ಲೊಂದಲ್ಲ. ಬಿಸ್ಲೇರಿ ಬಾಟ್ಲುಗಳಲ್ಲಿ, ಪುರಸಭೆ ನಲ್ಲಿಗಳಲ್ಲಿ, ಮನೆಯ ಟ್ಯಾಂಕುಗಳಲ್ಲಿ ಬಂಧಿಯಾಗಿ ಬೇಕೆಂದಾಗ ಸಿಗುವ ಸ್ವತ್ತಲ್ಲ. ನಿತ್ಯ ಆವಿಯಾಗಿ ಗಗನ ಸೇರಿದರೂ ಮತ್ತೆ ಧರೆಗಿಳಿಯಲೇಬೇಕಾದ ಮಳೆಯಲ್ಲ. ಮಳೆಯಾಗಿ ಧರೆಗಿಳಿಯೋದು ಅವಳ ಧರ್ಮ. ಆದ್ರೆ ಅವಳನ್ನು ಓಡಿ ಸಮುದ್ರ ಸೇರದಂತೆ ತಡೆದು, ಸಮಾಧಾನ ಹೇಳಿ ಸಾಧ್ಯವಾದಷ್ಟು  ಕಾಲ ನಮ್ಮ ಬಳಿ ಇಟ್ಟುಕೊಳ್ಳೋದು ನಮ್ಮ ಅನಿವಾರ್ಯ ಕರ್ಮ. ಅದಕ್ಕಿರೋ ಕ್ರಮವೇ ಮಳೆಕೊಯ್ಲು. ಮಳೆಕೊಯ್ಲು ಅಂದಾಕ್ಷಣ ಭೈರಪ್ಪನವರ ಪುಸ್ತಕ, ಎಂ. ಎಸ್ ಶಿರಟ್ಟಿ,ಸಿ.ಬಿ. ಮೇಟಿಯವರ ಪುಸ್ತಕಗಳ ಬಗ್ಗೆ ನೆನಪಾಯ್ತೇ ? ನಾ ಹೇಳಹೊರಟಿರೋದು ಅದರ ಬಗ್ಗೆಯಲ್ಲ. ಓಡೋ ನೀರ ನಡೆಯುವಂತೆ ಮಾಡಿ, ನಡೆಯೋ ನೀರನ್ನ ತೆವಳುವಂತೆ ಮಾಡಿ, ತೆವಳೋ ನೀರನ್ನ ನಿಮ್ಮಲ್ಲೇ ಉಳಿಸಿ, ಇಂಗಿಸಿಕೊಳ್ಳಿ ಅನ್ನೋ ಮಾತುಗಳ ಬಗ್ಗೆ.  ಟಾರಸಿ , ಹಂಚಿನ ಮನೆಗಳ ಮೇಲೆ ಹರಿಯೋ ಮಳೆನೀರನ್ನ ಸಂಗ್ರಹಿಸೋಕೆ ಒಂದು ಪೈಪು ಜೋಡಿಸಿ ಆ ಪೈಪಿನ ಮೂಲಕ ಸಂಗ್ರಹವಾಗೋ ನೀರನ್ನ ಒಂದು ಶೋಧಕದ ಮೂಲಕ ಒಂದು ಟ್ಯಾಂಕಿಗೆ ಹರಿಸೋದು, ಆ ಟ್ಯಾಂಕಿಯಲ್ಲಿ ಕೆಲ ಹಂತದ ಸಂಸ್ಕರಣೆ ಮೂಲಕ ಆ ನೀರನ್ನ ವರ್ಷವಿಡೀ ಕೆಡದಂತೆ ಉಳಿಸಿಕೊಳ್ಳೋ ಮಳೆನೀರು ಸಂಗ್ರಹಣೆ ಕ್ರಮಗಳ ಬಗ್ಗೆ ನೀವು ಓದೇ ಓದಿರುತ್ತಿರ. ಮಾರುಕಟ್ಟೆಗೆ ಬರುತ್ತಿರೋ ಹೊಸ ಹೊಸ ತಂತ್ರಗಳ ಬಗ್ಗೆ ಓದೇ ಓದಿರುತ್ತಿರ. ವರ್ಷವಿಡೀ ಅಲ್ಲದಿದ್ರೂ ಕೆಲವು ತಿಂಗಳು , ಹೋಗ್ಲಿ ಮಳೆಗಾಲ ಮುಗಿದ ಮೇಲಿನ ಒಂದು ತಿಂಗಳು, ಅದೂ ಹೋಗ್ಲಿ ಮಳೆಗಾಲವಿದ್ದ ಸಮಯದಲ್ಲಾದ್ರೂ ಈ ತಂತ್ರಜ್ನಾನ ಬಳಸಿ ಮಳೆನೀರ ಸಮರ್ಪಕ ಬಳಕೆ ಬಗ್ಗೆ ಯಾಕೆ ಗಮನಹರಿಸ್ಬಾರ್ದು ? ರಾಜಸ್ಥಾನದ ಮರುಭೂಮಿಯಂತಾ ಜಾಗಗಳಲ್ಲಿ ಟಂಕಾಗಳು ಅಂತ ರಚಿಸಿ ವರ್ಷವಿಡೀ ಮಳೆನೀರು ಬಳಸೋ ದೇಸೀ ತಂತ್ರಜ್ನಾನ ರೂಪಿಸಿಕೊಂಡಿರುವಾಗ ನಾವ್ಯಾಕೆ ಇನ್ನೂ ಹಿಂದಿದ್ದೇವೆ ಈ ವಿಷಯದಲ್ಲಿ ? ಇಲ್ಲೂ ಬರಗಾಲ ಬಂದ ಮೇಲೇ ಅಂತಹ ತಿಳುವಳಿಕೆ ಮೂಡಬೇಕಾ ?

ಏಳೆಂಟು ಎಕರೆಯ ಒಂದು ದೊಡ್ಡ ಬೋಳು ಗುಡ್ಡ. ಆ ಜಮೀನು ತಗೊಂಡವನಿಗೆ ತಕ್ಷಣಕ್ಕೆ ಅಲ್ಲಿ ಏನು ಹಾಕ್ಬೇಕು ಅಂತ ಗೊತ್ತಾಗಲಿಲ್ಲ. ಅಷ್ಟರಲ್ಲೇ ಮಳೆಗಾಲ ಹತ್ತಿರ  ಬರ್ತಾ ಇತ್ತು. ಗುಡ್ಡದ ತುಂಬಾ ಸಾಲಾಗಿ ಮೂರು ಸಾಲು ಅಗಳ ತೋಡಿ ಇಟ್ಟ. ನೋಡಿದ ಊರ ಜನ ಇವನಿಗೆ ಹುಚ್ಚಾ ಅಂದುಕೊಂಡ್ರು. ದುಡ್ಡು ಹೆಚ್ಚಾಗಿರ್ಬೇಕು ಅಂದುಕೊಂಡ್ರು. ಆದ್ರೆ ಅದರ ಹಿಂದಿದ್ದುದು ಗುಡ್ಡದ ಮೇಲೆ ಬೀಳ್ತಿದ್ದ ಅಗಾಧ ಜಲರಾಶಿಯನ್ನ ಅಲ್ಲೇ ಇಂಗಿಸೋ ಕನಸು. ಆ ಅಗಳಗಳಲ್ಲಿ ಇಡೀ ಮಳೆಗಾಲದ ನೀರು ನಿಂತು ಇಂಗಿದ ಪರಿಣಾಮ ಒಂದು ಮಳೆಗಾಲ ಮುಗಿಯೋದರೊಳಗೆ ಗುಡ್ಡದ ಚಿತ್ರಣವೇ ಬಯಲಾಗಿದೆ. ಸುಮ್ಮನೇ ಹರಿದುಹೋಗುತ್ತಿದ್ದ ನೀರು ಹೊಸ ಚಹರೆಯನ್ನೇ ಸೃಷ್ಟಿಸಿದೆ. ಒಂದು ಕಾಲದಲ್ಲಿ ನೀರ ತವರೆನಿಸಿದ್ದ ಹಳ್ಳಿಗಳಲ್ಲೂ ಕ್ರಮೇಣ ಬರದ ತಾಪ ತಟ್ಟಿ ಮಳೆಕೊಯ್ಲ ಅಗತ್ಯತೆ ಮನಗಾಣುತ್ತಿದ್ದಾರೆ ಅವರೀಗ.ಹರಿದುಹೋಗೋ ನೀರನ್ನ ಹಳೆಯ ಹುತ್ತಗಳಿಗೆ, ತೆಂಗಿನ ಮರಗಳ ಬುಡಗಳಿಗೆ, ಹಳೆಯ ಬೋರುವೆಲ್ಲುಗಳಿಗೆ ಬಿಡುವ ಹಲವು ಕ್ರಮಗಳು ಹಳ್ಳಿಗಳ ಕಡೆ ತೀರಾ ಸಾಮಾನ್ಯವೆಂಬಂತೆ  ಕಂಡುಬರುತ್ತಿವೆ ಈಗ. ಉದಕ, ಇಂಗು ಗುಂಡಿ, ಇಂಗು ಬದು ಹೀಗೆ ಹಲವು ಅಂತರ್ಜಲ ಮರುಪೂರಣ ಕ್ರಮಗಳು ಪ್ರತೀ ಮಳೆಗಾಲದಲ್ಲೂ ಹೊಸ ರೂಪ ಪಡೆಯುತ್ತಾ, ಸುಧಾರಣೆಗೊಳ್ಳುತ್ತಾ ಸಾಗುತ್ತಿವೆ. ಆದರೆ ಇವೆಲ್ಲಾ ಆಗುತ್ತಿರೋದು ಸಿಕ್ಕಾಪಟ್ಟೆ ಓದಿದ, ಸುಧಾರಣೆ , ಉದ್ದಾರ, ಸರ್ಕಾರ ಅಂತೆಲ್ಲಾ ಮಾತನಾಡೋ ಬುದ್ದಿಜೀವಿಗಳ ಮನೆಗಳಲ್ಲೆಲ್ಲಾ. ಒಂದಿಂಚು ಮಳೆನೀರನ್ನೂ ಭೂಮಿಗೆ ಇಂಗಗೊಂಡದ ಕಾಂಕ್ರೀಟು ಕಾಡು ಸೃಷ್ಟಿಸೋ ನಗರಿಗರ ಗಾರ್ಡನ್ನು, ಪಾರ್ಕುಗಳಲ್ಲಲ್ಲ . ಇವಾಗುತ್ತಿರುವುದು ಓದಿಲ್ಲದವರು, ಮೂಡನಂಬಿಕೆ, ಅಜ್ನಾನದ ಗೂಡು ಎಂದು ಬಿರುದುಪಡೆದುಕೊಂಡಿರೋ ಹಳ್ಳಿಗರ ಸಾಮಾನ್ಯ ಮನೆಗಳಲ್ಲಿ. ಕಾಲೇಜು, ಯೂನಿವರ್ಸಿಟಿಗಳ ಮೆಟ್ಟಿಲನ್ನು ಈ ಹಳ್ಳಿಗರು ಹತ್ತಿರದೇ ಇರಬಹುದು. ಆದರೆ ಪ್ರಕೃತಿಯ ಪಾಠವನ್ನು, ಆಕೆಯ ಮಾತುಗಳನ್ನು ಹತ್ತಿರದಿಂದ ಕೇಳಿಸಿಕೊಂಡವರಿವರು. ಆ ಮಾತುಗಳಲ್ಲಿನ ಮಳೆಕೊಯ್ಲನ್ನು ಕಾರ್ಯರೂಪಕ್ಕಿಳಿಸಿದವರಿವರು. ಅದರ ಫಲವೇ ನಮ್ಮನೆ ಬಾವಿಯಲ್ಲಿ ಕೈಲೇ ನೀರು ಸಿಗ್ತಾ ಇದೆ ಅಂತ ಪ್ರತೀ ವರ್ಶ ಸಂಭ್ರಮ ಪಡೋರು, ಬೇಸಿಗೆಯಲ್ಲೂ ಬೋರು ಕೊರೆಸದೇ  ತೋಟದ ಒರತೇ ಹೊಂಡದ ನೀರನ್ನೇ ನೆಚ್ಚಿಕೊಳ್ಳುವವರಿವರು. ಇವರ ಜೀವನವನ್ನೇ ಜಗವೆಲ್ಲಾ ಅನುಕರಿಸಲಿ ಎಂದಲ್ಲ. ಆದರೆ ಇರೋ ನೀರು ಹೇಗೆ ಬಳಸಬೇಕು ? ಅಂತರ್ಜಲ ಮರುಪೂರಣ, ಮಳೆಕೊಯ್ಲಂತ ಇವರ ಮನದ ನೀರ ಕಾಳಜಿಗಳು ಎಲ್ಲರಲ್ಲೂ ಅನುರಣಿಸಲೆಂಬ ಆಶಯವಷ್ಟೇ.

1 comment:

  1. ಮೊನ್ನೆ ನಮ್ಮ ಅತ್ತೆ ಮನೆ ಹೊಸದುರ್ಗದ ಕಡೆ ಹೋಗಿದ್ದಾಗ, ಸದಾ ನೀರಿನ ಬರಗಾಲವನ್ನು ಎದುರಿಸುವ ಆ ಪ್ರದೇಶದಲ್ಲಿ ಪೂರಾ ದಾಳಿಂಬೇ ಗಿಡ ಹಾಕಿದ್ದರು. ಅವರೆಲ್ಲ ಹನಿ ನೀರಾವರಿ ಅಳವಡಿಸಿಕೊಂಡದ್ದು ಖುಷಿಯಾಯಿತು.
    ಟಂಕಾ ಸಹ ಒಳ್ಳೆಯ ವಿಧಾನ. ಅಂತರ್ಜಲ ಮರುಪೂರಣ, ಮಳೆಕೊಯ್ಲು ಸಹ ಉತ್ತಮ ಅಂಶಗಳೇ.

    ReplyDelete