ಏ ಎಲ್ಲಾದ್ರೂ ಟ್ರಿಪ್ ಹೋಗೋಣ್ವಾ ? ಬೆಂಗ್ಳೂರಿಗೆ ಬಂದು ತುಂಬಾ ದಿನ ಆಯ್ತು ಕಣೋ. ಏನೂ ನೋಡಿಲ್ಲ ಸರಿಯಾಗಿ.
ಹೂಂ. ಸರಿ. ಎಲ್ಲಿಗೆ ?
ಅರೆ, ವಾರ ವಾರ ಕಾಲಿಗೆ ಚಕ್ರ ಕಟ್ಕೊಂಡವ್ನ ತರ ತಿರ್ಗೋದು ನೀನು. ಬೈಕಂತೆ, ಕಾರಂತೆ. ಬಸ್ಸಂತೆ. ಆ ಫೇಸ್ಬುಕ್ಕನ್ನೇ ಮಿನಿ ಹಾರ್ಡುಡಿಸ್ಕು ಮಾಡೋ ಅಷ್ಟು ಫೋಟೋ ತುಂಬ್ಸಿದ್ದೀಯ. ನಂಗೆ ಕೇಳ್ತಿಯಲ್ಲೋ ಎಲ್ಲೋಗದು ಅಂತ. ನೀನು ಹೋಗಿರೋ ಜಾಗಗಳಲ್ಲೇ ಯಾವ್ದಾದ್ರೂ ಹೇಳೋ.
ಊಂ.ನಿಂಗೆ ಎಷ್ಟೊತ್ತಿನ ಪ್ರಯಾಣ ಆಗಿರ್ಬೇಕು ? ಒಂದೆರಡು ಘಂಟೆ ಒಳಗಿಂದ ,ಅಥವಾ ಒಂದಿಡೀ ದಿನದ್ದ ?
ನಾ ಹೇಳಿದ್ದು ಟ್ರಿಪ್ಪು ಅಂತ. ಈ ಬೆಂಗ್ಳೂರಲ್ಲಿ ಒಂದ್ಗಂಟೆ ಒಳಗೆ ಎಲ್ಲಿ ಹೋಗೋಕಾಗತ್ತಪ್ಪ ? ಬಸ್ಟಾಂಡಿಗೆ ಹೋಗೋಕೆ ಒಂದು ಘಂಟೆ ಬೇಕು !! ಯಾವ್ದೋ ಮಾಲಿಗೆ ಕರ್ಕಂಡೋಗೂಂತ ಹೇಳ್ತಿರೋದಲ್ಲ ನಿಂಗೆ. ಟ್ರಿಪ್ಪು ಕಣೋ ಟ್ರಿಪ್ಪು.
ಸುಧಾ ಹಿಂಗೆ ಮಾತಾಡ್ತಾನೆ ಇದ್ರೆ ಶ್ಯಾಮ ಯೋಚನಾ ಲಹರಿಯಲ್ಲಿ ಮುಳುಗಿಹೋಗಿದ್ದ.
ಶ್ಯಾಮ. ಸುಧಾ ಹೈಸ್ಕೂಲಿಂದ ಕ್ಲಾಸ್ ಮೇಟ್ಸು. ಕ್ಲಾಸ್ ಮೇಟ್ಸಂದ ಮಾತ್ರಕ್ಕೆ ಸಖತ್ ಸ್ನೇಹ, ಒಂದೇ ಆಲೋಚನಾ ಲಹರಿ, ಪ್ರೇಮ .. ಮಣ್ಣು ಮಸಿ ಅಂತೆಲ್ಲಾ ಏನಿಲ್ಲ. ಶ್ಯಾಮನದು ಉತ್ತರ ಅಂದ್ರೆ ಸುಧಾಳದು ದಕ್ಷಿಣ ಅನ್ನೋ ಭಾವ.
ಶ್ಯಾಮಂಗೆ ತಾನು ಹುಟ್ಟಿ ಬೆಳೆದು ಕಾರಣಾಂತರಗಳಿಂದ ದೂರಾದ ಹಳ್ಳಿಗೆ, ಅಲ್ಲಿನ ಜೀವನ ಶೈಲಿಯ ಕಡೆಗೆ ಸೆಳೆತವಾದ್ರೆ ಸುಧಾಳದು ಪಕ್ಕಾ ತದ್ವಿರುದ್ದ. ನೀನೇನಾಗ್ತೀಯ ಅಂದವರಿಗೆ ಶ್ಯಾಮ ಸಸ್ಯಶಾಸ್ತ್ರ ವಿಜ್ನಾನಿ ಅಂತಿದ್ರೆ ಸುಧಾ ಸಾಫ್ಟವೇರ್ ಇಂಜಿನಿಯರ್ರು ಅಂತಿದ್ಳು. ತಾನು ಒಂಭತ್ತನೇ ಕ್ಲಾಸಿಗೆ ಎಂಟ್ರಿ ಕೊಟ್ಟ ಆ ಪಟ್ಟಣದ ಶಾಲೆಯ ಹುಡುಗರನ್ನು ಪರಿಚಯ ಮಾಡಿಕೊಳ್ಳೋಕೆ ಸುಮಾರು ಸಮಯ ತಗೊಂಡಿದ್ದ ಶ್ಯಾಮ. ಅಂತದ್ರಲ್ಲಿ ಕ್ಲಾಸ ಟಾಪರ್ರು ಸುದೇಷ್ಣೆ ಅಲಿಯಾಸ್ ಸುಧಾಳನ್ನ ಮಾತಾಡಿಸೋದು!! ಊಹೂಂ.. ಆ ಕಾರಣಕ್ಕೆ ಅವಳನ್ನು ಮಾತಾಡಿಸೋಕೆ ಶ್ಯಾಮ ಹೆದರುತಿದ್ನೋ ಅಥವಾ ಸದಾ ತನ್ನ ಪಾಡಿಗೆ ತಾನಿರುತಿದ್ದ ಹೊಸ ಹುಡುಗ ಶ್ಯಾಮನನ್ನ ಹೆಚ್ಚು ಮಾತಾಡಿಸೋಕೆ ಸುಧಾಳೇ ಮುಂದಾಗಿರಲಿಲ್ವೋ ಆ ಎಂಭತ್ತು ಜನರ ಕ್ಲಾಸಿನ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಹೊಸ ವಾತಾವರಣ, ಜನಗಳು , ಹೊಸ ಶಿಕ್ಷಣ ಕ್ರಮ ಇವಕ್ಕೆ ಹೊಂದಿಕೊಳ್ಳೋದ್ರಲ್ಲಿ ಶ್ಯಾಮನ ಎರಡು ವರ್ಷಗಳು ಕಳೆದುಹೋಗಿದ್ರೆ, ಆಗಲೇ ಕ್ಲಾಸು ಟಾಪರ್ರಾಗಿರೋ ನಾನು ತಾಲ್ಲೂಕಿಗೆ ಹೆಚ್ಚು ಅಂಕ ತೆಗಿಬೇಕು. ಒಳ್ಳೇ ಪಿ.ಯು ಕಾಲೇಜಲ್ಲಿ ಸೀಟ್ ಸಿಗ್ಬೇಕಂದ್ರೆ ಸಖತ್ತಾಗಿ ಓದ್ಬೇಕು ಅನ್ನೋ ಮಹತ್ವಾಕಾಂಕ್ಷೆಯಲ್ಲಿ ಸುಧಾಳ ದಿನಗಳು ಓಡುತ್ತಿದ್ದವು.
ಎಸ್ಸೆಸ್ಸೆಲ್ಸಿ ಆಯ್ತು. ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದ ಸುಧಾ ಅಲ್ಲಿ ಸೇರಿದ್ಲಂತೆ, ಇಲ್ಲಿ ಸೇರಿದ್ಲಂತೆ ಅನ್ನೋ ಸುದ್ದಿಗಳು ಹಬ್ಬಿದ್ವೇ ಹೊರತು ಅವ್ಳು ಎಲ್ಲಿ ಸೇರಿದ್ಲು ಅನ್ನೋದು ಅವ್ಳ ಹತ್ತಿರದ ಸ್ನೇಹಿತೆಯರಿಗೆ ಮಾತ್ರ ಗೊತ್ತಾಯ್ತು.
ಶ್ಯಾಮನಿಗೆ ನಿರೀಕ್ಷೆಗೆ ತಕ್ಕಷ್ಟು ಅಂಕ ದಕ್ಕಲಿಲ್ಲ. ಯಾಕೋ. ಎಂಭತ್ಮೂರು ಪ್ರತಿಶತ ಅಂಕ ತೆಗೆದಿದ್ದ ಅವನಿಗೆ ಎಲ್ಲರೂ ಖುಷಿ ಪಟ್ಟು ಅಭಿನಂದಿಸಿದ್ರೆ ಅವ ಮಾತ್ರ ಬೇಸರದಲ್ಲಿದ್ದ. ಯಾಕೋ ಕಮ್ಮಿಯಾಯ್ತು ತನ್ನ ಸಾಧನೆ. ಬೇರೆ ಕಡೆ ಇರ್ಲಿ. ಈ ಊರಲ್ಲೇ ತನಗೊಂದು ಸೀಟು ದಕ್ಕೀತೆ ಅನ್ನೋ ಭಯ ಅವನಿಗೆ. ಹೇಗೋ ಅವನಿಗೆ ವಿಜ್ನಾನದ ಸೀಟು ದಕ್ಕಿದಾಗ ಅವನ ಖುಷಿಗೆ ಮೇರೆಯಿರಲಿಲ್ಲ. ರಿಸಲ್ಟ್ ಬಂದ ದಿನ ಹಂಚದ ಸಿಹಿಯನ್ನು ತನಗೆ ಕಾಲೇಜಲ್ಲಿ ಸೀಟು ಸಿಕ್ಕಿದ ದಿನ ಹಂಚಿದ್ದ ! . ಅಂತೂ ಕಾಲೇಜು ಪರ್ವ ಶುರುವಾಯ್ತು.
ದಿನಗಳು ಕಳೆಯುತ್ತಿದ್ದಂಗೆ ಯಾಕೋ ಸಸ್ಯಶಾಸ್ತ್ರದಷ್ಟೇ ಗಣಿತ. ಭೌತಶಾಸ್ತ್ರಗಳು ಇಷ್ಟವಾಗತೊಡಗಿದ್ವು. ಮೊದಲಿದ್ದ ಭಯ ಈಗಿರಲಿಲ್ಲ. ಮನದ ಮೂಲೆಯಲ್ಲಿ ಆಗಾಗ ಕಾಡುತ್ತಿದ್ದ ಪ್ರಶ್ನೆ.
ಪಿಯುಸಿಯ ಮೊದಲನೇ ವರ್ಷ ಮುಗಿದು ರಜಾ ಬಂದಾಗ ಅದೆಂತದೋ ಸಿ.ಇಟಿ ಅಂತ ಪರೀಕ್ಷೆಯಿದೆ ಅಂತ ಗೊತ್ತಾಯ್ತು. ಎಲ್ಲೆಲ್ಲೂ ಅದ್ರ ಟ್ಯೂಷನ್ನಿಗೆ ಹೋಗೋರ ಹಾವಳಿ. ಅದ್ರಲ್ಲಿ ಏನಿರಬಹುದು ಅಂತ ವಿಚಾರಿಸಿದ ಶ್ಯಾಮನಿಗೆ ತಾನೊಮ್ಮೆ ಯಾಕೆ ಪ್ರಯತ್ನಿಸಬಾರ್ದು ಅನಿಸ್ತು. ಯಾವಾಗ ಈ ಓದುವಿಕೆಯಲ್ಲಿ ಮುಳುಗಿಹೋದ್ನೋ , ಅದ್ರಲ್ಲೇ ಹೇಗೆ ಘಂಟೆ, ದಿನ, ವಾರಗಳು ಉರುಳಿದ್ವೋ ಗೊತ್ತೇ ಆಗ್ಲಿಲ್ಲ. ಶ್ಯಾಮನೆಂದ್ರೆ ಲೈಬ್ರರಿ ಅಂತ ಹುಡುಗ್ರೆಲ್ಲಾ ತಮಾಷೆ ಮಾಡೋ ತರ ಆಗೋಗಿದ್ದ. ಪ್ರಯತ್ನದ ಫಲ ಸಿ.ಇ.ಟಿಯಲ್ಲಿ ದಕ್ಕಿತ್ತು. ಪ್ರತಿಷ್ಟಿತ ಇಂಜಿನಿಯರ್ ಕಾಲೇಜೊಂದರಲ್ಲಿ ಸೇರೋ ಸೀಟಿನ ಭಾಗ್ಯ ಸಿಕ್ಕಿತ್ತು. ಇವನ ಪ್ರತಿಭೆ ನೋಡಿ ಸಾಲ ಕೊಟ್ಟು ಸಹಕರಿಸಿದ ಬ್ಯಾಂಕವ್ರು, ನಾವೆಂತೂ ಓದಲಿಲ್ಲ , ನೀನಾದ್ರೂ ಓದಿ ಮುಂದೆ ಹೋಗೆಂದು ಬೆನ್ನು ತಟ್ಟುತ್ತಿದ್ದ ಪೋಷಕರು ನೆನ್ಪಾಗಿದ್ರು, ಕಾಲೇಜಲ್ಲಿ ಗಣಿತ ಅಂದ್ರೆ ಭಯಪಡುತ್ತಿದ್ದ ತನಗೆ ಪ್ರೀತಿಯಿಂದ ಅರ್ಥವಾಗೋ ತರ ಹೇಳಿಕೊಟ್ಟ ಮಿಸ್ಸು .. ಹೀಗೆ ಹಲವರು ಕಣ್ಣ ಮುಂದೆ ಬಂದು ಹೋದ್ರು. ನೋವ ಮರೆಸಿದ್ದ ಕಾಲೇಜು ಪರ್ವ ನಲಿವ ಅಂಚನ್ನು ಬಾಳಿಗೆ ಹಂಚೋಕೆ ತಯಾರಾಗಿತ್ತು.
ಇಂಜಿನಿಯರಿಂಗ್ ಅಂದುಕೊಂಡಷ್ಟು ಸುಲಭವಿರಲಿಲ್ಲ. ದೊಡ್ಡ ಕಾಲೇಜಿನ ನಿರೀಕ್ಷೆಗಳು ದೊಡ್ಡವೇ ಇತ್ತು. ಅಲ್ಲಿ ಬಂದವರೆಲ್ಲಾ ಇವನಂತಹವರೇ ಆಗಿದ್ದರಿಂದ ಪೈಪೋಟಿಯೂ ಹೆಚ್ಚೇ ಇತ್ತು. ಮೊಬೈಲು , ಬೈಕು, ಜೀನ್ಸುಗಳಲ್ಲಿ ಕಂಗೊಳಿಸುತ್ತಿದ್ದ ಆ ಹುಡುಗರ ಮಧ್ಯೆ ಸಾದಾ ಸೀದಾ ಇರುತ್ತಿದ್ದ ಇವನೊಬ್ಬ ಅಬ್ಬೇಪಾರಿ. ತನ್ನ ಪಾಡಿಗೆ ತಾನಿದ್ದುಬಿಡುತ್ತಿದ್ದ ಇವ ಮೊದ ಮೊದಲು ಅಲ್ಲಿ ಕಾಮಿಡಿ ವಸ್ತುವಾಗಿದ್ರೂ ಇವನ ಒಳ್ಳೇ ಗುಣಕ್ಕೆ ಮನಸೋತ ಗೆಳೆಯರ ಗ್ಯಾಂಗೊಂದರಲ್ಲಿ ತಾನೂ ಒಬ್ಬನಾಗಿಬಿಟ್ಟಿದ್ದ.ಗಾಂಧಿ ಗಾಂಧಿ ಅಂತ ಕರೀತಿದ್ರೂ ಅವ್ರ ಬರ್ತಡೇ ಪಾರ್ಟಿಗಳಲ್ಲಿ, ಕ್ಲಾಸ್ ಮಾಸ್ ಬಂಕುಗಳಲ್ಲಿ, ಗ್ರೂಪ್ ಟ್ರಿಪ್ಪುಗಳಲ್ಲಿ ಖಾಯಂ ಸದಸ್ಯನಾಗಿದ್ದ ಶ್ಯಾಮ. ಅವರೆಲ್ಲರ ಕ್ಲಾಸ ಅಸೈನ್ ಮೆಂಟುಗಳು ಇವನದೇ ಕಾಪಿ ಅಂತ ಗೊತ್ತಿದ್ರೂ ಲೆಕ್ಚರರುಗಳು ಕ್ಲಾಸಲ್ಲಿ ಏನೂ ಹೇಳುವಂತಿರಲಿಲ್ಲ. ಒಂದಿಬ್ಬರು ಇವನನ್ನ ಸೈಡಿಗೆ ಕರೆದು ಅವರ ಜೊತೆ ಸೇರ್ಬೇಡ. ನೀನು ಹಾಳಾಗೋಗೋಲ್ಲದೇ ನಿನ್ನ ಅಸೈನ್ ಮೆಂಟು ಕಾಪಿ ಮಾಡೋಕೆ ಕೊಟ್ಟು ಅವರನ್ನ ಇನ್ನಷ್ಟು ಸೋಂಬೇರಿ ಮಾಡ್ತಿದೀಯ ಅಂತ ಎಚ್ಚರಿಸಿದ್ರೂ ತಲೆ ಕೆಡಿಸಿಕೊಂಡಿರಲಿಲ್ಲ ಶ್ಯಾಮ. ಅಯ್ಯೋ ಹೋಗ್ಲಿ ಬಿಡಿ ಸರ್. ಮೈನ್ ಎಕ್ಸಾಂ ಟೈಮಿಗೆ ಸರಿ ಹೋಗ್ತಾರೆ. ಪಿ.ಯು. ನಲ್ಲಿ ಒಂದು ದಿನವೂ, ಹೋಗ್ಲಿ ಒಂದು ಘಂಟೆಯೂ ವ್ಯರ್ಥ ಮಾಡದೆ ಓದು, ಓದು ಅಂತ ಇವ್ರ ಪೋಷಕರು ಕಾಟ ಕೊಟ್ಟಿರ್ತಾರೆ. ಆ ಕಾಟದಿಂದ ಈಗ ತಾನೇ ಮುಕ್ತಿ ಸಿಕ್ಕಿದೆ ಇವರಿಗೆ. ಸ್ವಲ್ಪ ದಿನ ಆರಾಮಾಗಿರ್ಲಿ ಬಿಡಿ. ನಿಧಾನ ಸರಿ ಹೋಗ್ತಾರೆ ಅಂತಿದ್ದ.
ಅವರಿಗೆ ಇವನಂತ ಹುಡುಗ್ರನ್ನ ನೋಡೋದು ಹೊಸದೇ ? ಏನಾದ್ರೂ ಹಾಳಾಗಿ ಹೋಗ್ಲಿ ಅಂತ ಸುಮ್ನಾಗಿದ್ರು. ಮೊದಲ ಸೆಮ್ಮಿನ ಪರೀಕ್ಷೆ ಬಂತು. ಒಳ್ಳೊಳ್ಳೆ ರ್ಯಾಂಕಿನ ಹುಡುಗರ ಕಾಲೇಜು ತಾನೇ. ಸಹಜವಾಗೇ ಫೈನಲ್ ಎಕ್ಸಾಮಲ್ಲಿ ಎಲ್ಲರದ್ದೂ ಒಳ್ಳೊಳ್ಳೆ ಮಾರ್ಕುಗಳೆ. ಶ್ಯಾಮನಿದ್ದ ಗ್ಯಾಂಗಿನಲ್ಲಿ ಶ್ಯಾಮನದ್ದೇ ಹೆಚ್ಚಿದ್ದರೂ ಉಳಿದವರದ್ದು ತೀರಾ ಕಮ್ಮಿಯೇನಿರಲಿಲ್ಲ. ಹೆಂಗೆ ಕಾಲಹರಣ ಮಾಡಿದ್ರೂ ಕೊನೆಗೆ ಸರಿಯಾಗಿ ಓದಿದ್ರಾಯ್ತು ಅನ್ನೋ ಭಂಡ ಧೈರ್ಯ ಬಂದ ಕಾರಣವೋ ಏನೋ ಹುಡುಗರ ಟ್ರಿಪ್ಪುಗಳು ಜಾಸ್ತಿ ಆದ್ವು. ಮುಳ್ಳಯ್ಯನ ಗಿರಿ, ಸಕಲೇಶಪುರ, ಶೃಂಗೇರಿ ಅಂತ ಬೈಕ್ ಹತ್ತಿ ಹೊರಟುಬಿಡೋರು. ಶ್ಯಾಮನ ಬಳಿ ಬೈಕ್ ಇರದಿದ್ರೂ ಇವರ ಗ್ರೂಪಿನ ಕಾಯಂ ಸದಸ್ಯನಾದ ಇವನನ್ನು ಬಿಟ್ಟು ಹೋಗೋದು ಹೇಗೆ ? ಈ ಟ್ರಿಪ್ಪುಗಳಲ್ಲೇ ಎರಡನೇ ಸೆಮ್ಮು ಕಳೆದಿತ್ತು.
ಮೂರನೇ ಸೆಮ್ಮು. ಅಂದ್ರೆ ಅವರು ತಗೊಂಡ ಬ್ರಾಂಚಿಗೆ ಪ್ರವೇಶ. ಇಂಜಿನಿಯರಿಂಗಿನ ಬಿಸಿ ತಟ್ಟತೊಡಗಿತ್ತು ಆಗ. ಟ್ರಿಪ್ಪುಗಳು ಕಮ್ಮಿಯಾಗಿದ್ರೂ ನಿಂತೇನು ಹೋಗಿರಲಿಲ್ಲ. ಹುಡುಗರಿಗೆ ಸ್ವಲ್ಪ ಪ್ರಬುದ್ದತೆ, ವಿಷಯಗಳಲ್ಲಿ ಆಸಕ್ತಿ ಶುರುವಾಗಿತ್ತಾ ಗೊತ್ತಿಲ್ಲ. ಆಗಷ್ಟೇ ಪರಿಚಯವಾಗಿದ್ದ ಫೇಸ್ಬುಕ್ಕಲ್ಲಿ ಮೊಬೈಲಿಗಿಂತ ಹೆಚ್ಚು ಚಾಟಿಂಗ್ ಶುರುವಾಗಿತ್ತಾ ? ಗೊತ್ತಿಲ್ಲ. ಕಾಲೇಜು ಕಳೆದ ನಂತರ ಮಾತಾಡೋಕೂ ಸಿಗದಂತೆ ಮರೆಯಾಗ್ತಿದ್ದ ಗೆಳೆಯರೆಲ್ಲಾ ಮಧ್ಯರಾತ್ರಿಯವರೆಗೂ ಫೇಸ್ಬುಕ್ಕಲ್ಲಿ ಸಿಗ್ತಿದ್ರು !. ಆಗ ಕಣ್ಣಿಗೆ ಬಿದ್ದವಳೇ ಸುಧಾ. ಒಂದಿನ ಸಡನ್ನಾಗಿ ಸು.ಧಾ ಸುಧೇಷ್ಣೆ ಅನ್ನೋ ಹೆಸರಲ್ಲಿ ಕೋರಿಕೆ ಬಂದಾಗ ಯಾರಿದು ಅಂತ ಕುತೂಹಲಗೊಂಡಿದ್ದ ಶ್ಯಾಮನಿಗೆ ಹೈಸ್ಕೂಲ ದಿನಗಳು ನೆನಪಾಗಿದ್ವು. ಆಗ ಹಾಯ್, ಹಲೋ ಬಿಟ್ರೆ ಹೆಚ್ಚೇನೂ ಮಾತನಾಡದ ಇವಳು ಈಗೇಕೆ ಕೋರಿಕೆ ಕಳ್ಸಿದ್ಲಪ್ಪ ಅಂತ ಒಮ್ಮೆ ಗಾಬರಿಗೊಂಡಿದ್ದ ಶ್ಯಾಮ. ಶ್ಯಾಮನ ಮನಸ್ಸಲ್ಲಿ ತಾನಿನ್ನೂ ಸಾಮಾನ್ಯ ವಿದ್ಯಾರ್ಥಿ ಮತ್ತು ಸುಧಾ ಯಾರೊಂದಿಗೂ ಮಾತನಾಡದ ಟಾಪರ್ರು ! ಕೋರಿಕೆ ಸ್ವೀಕರಿಸೋಕೆ ಹೆದರಿ ಹಂಗೇ ಬಿಟ್ಟಿದ್ದ.
ಒಂದು ವಾರದ ನಂತರ ಹೇಯ್ ಶ್ಯಾಮ. ಹೇಗಿದ್ದೀಯ. ನೀನು ನಮ್ಮ ಹೈಸ್ಕೂಲವನು ತಾನೇ ? ಯಾಕ್ರಿ ಒಂದು ವಾರದಿಂದ ನನ್ನ ರಿಕ್ವೆಸ್ಟ್ ಸ್ವೀಕರಿಸಿಲ್ಲ ಅಂತ ಮೆಸೇಜ್ ಕಳಿಸಿದ್ಲು ಫೇಸ್ಬುಕ್ಕಲ್ಲಿ.ರಿಕ್ವೆಸ್ಟನ್ನ ಸ್ವೀಕರಿಸಿ ಹೆ. ಹೆ. ಇಲ್ಲ . ಹಾಗೇನಿಲ್ಲ. ಈ ಕಡೆ ಬರದೆ ಸುಮಾರು ದಿನ ಆಯ್ತು ಅಂತ ಪೆದ್ದು ಉತ್ರ ಕೊಟ್ಟಿದ್ದ. ಅದು ಸುಳ್ಳಂತ ಇಬ್ರಿಗೂ ಗೊತ್ತಿತ್ತು.
ಸುಧಾ ಪುಣೆಯಲ್ಲಿ ಯಾವುದೋ ಅವರೂಪದ ವಿಷಯದಲ್ಲಿ ಡಿಗ್ರಿ ಮಾಡ್ತ ಇರೋದು, ತುಂಬಾ ದಿನಗಳಿಂದ ತನ್ನ ಕ್ಲಾಸುಮೇಟುಗಳನ್ನ ಫೇಸ್ಬುಕ್ಕಲ್ಲಿ ಹುಡುಕಿದ್ದು. ಅದರಲ್ಲಿ ಶ್ಯಾಮನ್ನ ಬಿಟ್ಟು ಉಳಿದವರೆಲ್ಲಾ ಕಂಡಿದ್ದು. ಶ್ಯಾಮ ಮಾತ್ರ ಇತ್ತೀಚೆಗಷ್ಟೇ ಕಂಡಿದ್ದು.. ಹೀಗೆ ಹಲವಷ್ಟು ವಿಷಯಗಳು ಪರಿಚಯವಾದ ದಿನದ ನಂತರದ ಹಲ ಸಂಜೆಗಳಲ್ಲಿ ಗೊತ್ತಾದ್ವು. ಹಚ್ಚ ಹಸಿರ ಕಾನನ, ಮೈತುಂಬಿ ಹರಿತಿರೋ ನದಿ, ಸ್ವಚ್ಛ ಜಲರಾಶಿಯ ನಡುವೆ ಮನೆ ಮಾಡಿಕೊಂಡು ಇದ್ದು ಬಿಡಬೇಕು ಅನ್ನೋ ಆಸೆ. ಇಲ್ಲ ಅಂದ್ರೆ ಅಂತ ಜಾಗಗಳಿಗೆ ಆಗಾಗ ಟ್ರಿಪ್ಪಾದ್ರೂ ಹೋಗಿ ಬರ್ತಿರ್ಬೇಕು ಅನ್ನೋ ಆಸೆ ಅಂತ ಒಮ್ಮೆ ಸುಧಾ ಹೇಳ್ತಾ ಇದ್ರೆ ಶ್ಯಾಮ ಆಶ್ಚರ್ಯದಿಂದ ಕೇಳ್ತಾ ಇದ್ದ. ಹೈಸ್ಕೂಲಲ್ಲಿ ಕನ್ನಡದಲ್ಲಿ ಮಾತಾಡಿಸಿದ್ರೂ ಇಂಗ್ಲೀಷಲ್ಲೇ ಉತ್ರ ಕೊಡುತ್ತಿದ್ದ, ಸಾಫ್ಟವೇರು, ಫಾರಿನ್ನು ಅನ್ನುತ್ತಿದ್ದ ಸುಧಾ ಇವಳೇನಾ ಅನಿಸಿಬಿಡ್ತು ಇವನಿಗೆ.
ಅವಳ ಸ್ವಚ್ಛ ಕನ್ನಡದ ಮುಂದೆ ತನ್ನ ಕಲಬೆರಕೆ ಕನ್ನಡ ಬಿದ್ದು ಬಿದ್ದು ನಕ್ಕಂಗಾಯ್ತು ಶ್ಯಾಮನಿಗೆ. ಅಷ್ಟಕ್ಕೂ ಯಾವುವಾದ್ರೂ ವಸ್ತುವಿನ ಬೆಲೆ ತಿಳ್ಕೋಬೇಕು ಅಂದ್ರೆ ಅದ್ರಿಂದ ದೂರಾಗ್ಬೇಕು ಅನ್ನೋ ಮಾತು ಅವಳ ವಿಷಯದಲ್ಲಿ ನಿಜವಾಗಿತ್ತಾ ? ಗೊತ್ತಿಲ್ಲ. ಒಟ್ನಲ್ಲಿ ಇವರಿಬ್ಬರ ಆಲೋಚನೆಗಳು ಒಂದೇ ದಿಕ್ಕಿನಲ್ಲಿ ಹರಿಯೋದು ನೋಡಿ ಇಬ್ಬರೂ ಸುಮಾರು ಸಲ ಖುಷಿಯಾಗ್ತಿದ್ರು.ಯಾವಾಗ್ಲೂ ಟ್ರಿಪ್ಪು ಹಾಕೋ ನಿಮ್ಮನ್ನ ಕಂಡ್ರೆ ಹೊಟ್ಟೆ ಕಿಚ್ಚಾಗುತ್ತೆ ಕಣೋ ನಂಗೆ ಅಂದಿದ್ಲು ಒಮ್ಮೆ ಸುಧಾ.
ನೀ ಅಲ್ಲಿ ಕೂತ್ಕೊಂಡು ಬಾಯಿ ಬಡ್ಕೊಂಡ್ರೆ ಏನಾಗುತ್ತೆ ? ಇಲ್ಲಿ ಬಾ . ನಿನ್ನೂ ಕರ್ಕೊಂಡು ಹೋಗ್ತೀವಿ ಅಂದಿದ್ದ ಶ್ಯಾಮನೂ ಫುಲ್ ಜೋಷಲ್ಲಿ. ಆದ್ರೆ ಅವಳು ಇವನ ಮಾತನ್ನು ಅಷ್ಟು ಸೀರಿಯಸ್ಸಾಗಿ ತಗೊಂಡು ಬೆಂಗಳೂರಿಗೆ ಬಂದೇ ಬಿಡೋ ಪ್ಲಾನು ಹಾಕ್ತಾಳೆ ಅಂತ ಅಂದ್ಕೊಂಡಿರಲಿಲ್ಲ. ಇನ್ನೆರಡು ವಾರದಲ್ಲಿ ಅವಳು ಬರೋಳಿದ್ಲು. ಅವಳಿಗಾಗಿ ಒಂದು ಸಖತ್ತಾದ ಜಾಗ ಹುಡ್ಕೋ ಹೊಣೆಗಾರಿಕೆ ಇವನದ್ದಾಗಿತ್ತು.
ಅಷ್ಟಕ್ಕೂ ಬರ್ತಿರೋದು ಅವಳೊಬ್ಳೆ. ಒಬ್ನೆ ಹೆಂಗೆ ಕರ್ಕೊಂಡೋಗೋದು ? ನನ್ನತ್ರ ಬೈಕಿಲ್ಲ. ಏನಿಲ್ಲ. ಮೊದಲ ಬಾರಿ ಇಲ್ಲಿಗೆ ಬರ್ತೀನಿ ಅಂತಿರೋಳು ಬರೀ ಪ್ರಾಕ್ಟಿಕಲ್ ಜೋಕ್ ಮಾಡ್ತಿದಾಳಾ ? ಅಥವಾ ನಿಜವಾಗೂ ಬರ್ತಾಳಾ ? ಬಂದೇ ಬಿಟ್ರೆ ಅವಳನ್ನ ಒಬ್ಬಳೇ ಟ್ರಿಪ್ಪಿಗೆ ಎಲ್ಲಿಗೆ ಕರ್ಕೊಂಡು ಹೋಗೋದು. ಗ್ರೂಪಲ್ಲಿ ಹೋಗೋಗು ಚೆನ್ನಾಗಿರತ್ತೆ. ಆದ್ರೆ ಬರೋ ಅವಳಿಗೆ ನಿನ್ನ ಜೊತೆಗೆ ಇನ್ಯಾರಾದ್ರೂ ಹುಡುಗೀರನ್ನ ಕರ್ಕೊಂಡು ಬಾ ಅಂತ ಹೇಳ್ಲಾ ? ಟ್ರಿಪ್ಪು ಅಂತ ನಮ್ಮ ಗ್ಯಾಂಗಿನಲ್ಲಿ ಒಂದಿಷ್ಟು ಹುಡುಗೀರನ್ನ ಕರ್ಕೊಂಡು ಹೋಗಿದ್ದಿದ್ರೂ ಆ ಹುಡುಗೀರು ಈ ಹುಡುಗಿ ಯಾರು ಅಂದ್ರೆ ಏನನ್ನೋದು ? ಅಷ್ಟಕ್ಕೂ ಅವರ ಜೊತೆ ಇವಳು ಹೊಂದ್ಕೋತಾಳೋ ಇಲ್ವೋ ? ಹಿಂದಿನ ಟ್ರಿಪ್ಪಿನಲ್ಲಿ ಯಾವ ಹುಡುಗೀರೂ ಬರದೆ ಬರೀ ಹುಡುಗ್ರೇ ಹೋಗಿದ್ವಿ. ಈ ಸಲದ ಟ್ರಿಪ್ಪಲ್ಲಿ ಹುಡುಗೀರನ್ನ ಕರ್ಕೊಂಡೋಗೋನ್ವಾ ಅಂತ ಹುಡುಗ್ರಿಗೆ ಹೇಗೆ ಹೇಳ್ಲಿ, ಇವಳಿಗೆ ಕಂಪೆನಿಯಾಗ್ಲಿ ಅಂತ ಹುಡುಗೀರಿಗೆ ಹೋಗಿ ಹೇಗೆ ಕೇಳ್ಲಿ ಅನ್ನೋ ಹಲವು ಪ್ರಶ್ನೆಗಳು ಪ್ರತೀ ಸಂಜೆ ಸುಧಾ ಪಿಂಗ್ ಮಾಡಿದಾಗ್ಲೂ ಕಾಡ್ತಿದ್ವು. ಭಯಕ್ಕೆ ಉಪ್ಪು , ಖಾರ ಹಚ್ಚುವಂತೆ ಬೆಂಗಳೂರ ಸ್ಕೂಲೊಂದರಲ್ಲಿ ಹಂಗಾಯ್ತಂತೆ, ಕ್ಯಾಬ್ ಡ್ರೈವರ್ರು ಸಿಕ್ಕಿ ಬಿದ್ದನಂತೆ. ಏಟಿಎಮ್ಮಿನಲ್ಲಿ ಹಾಗಾಯ್ತಂತೆ ಅನ್ನೋ ಸುದ್ದಿಗಳೇ ತಿಂಗಳಲ್ಲಿ ಹರಡಿಹೋಗಿ ಯಾರೋ ತಲೆಕೆಟ್ಟವರ ಕೃತ್ಯಗಳಿಗೆ ಎಲ್ಲರೂ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಪರಿಸ್ಥಿತಿ ಸರಿಯಿಲ್ಲ. ಇನ್ಯಾವಾಗಾದ್ರೂ ಹೋಗೋಣ ಎಂದರೂ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಸುಧಾ. ಒಂದಿನ ಎಂತೂ ಶ್ಯಾಮ ಅದ್ಯಾವ ಮೂಡಿನಲ್ಲಿದ್ನೋ ಗೊತ್ತಿಲ್ಲ. ದಿನಾ ಬರೀ ರಕ್ತಪಿಪಾಸು, ಧನಪಿಪಾಸುಗಳ ಸುದ್ದಿ ಓದಿ ಓದಿ ಸಾಕಾಗಿಹೋಗಿದೆ ನಂಗೆಂತೂ. ನಿನಗೂ ಹಾಗೇ ಅಂದ್ಕೊಂಡಿರ್ತೀನಿ. ಅಂತಾದ್ರಲ್ಲಿ. ಎಷ್ಟೊ ವರ್ಷಗಳಿಂದ ಮುಖ ಕಾಣದ, ಹೈಸ್ಕೂಲಲ್ಲಿ ಕಂಡ ಹಾಗೇ ಇನ್ನೂ ಇದ್ದೀನಿ ಅಂದುಕೊಂಡು ಅದ್ಯಾವ ಧೈರ್ಯದ ಮೇಲೆ ಬೆಂಗಳೂರಿಗೆ ನನ್ನ ಭೇಟಿ ಮಾಡೋಕೆ ಬರ್ತಾ ಇದ್ದೀಯ ನೀನು ? ಅದೂ ಒಬ್ಬಳೇ ? ಭಯ ಆಗೋಲ್ವ ಅಂದಿದ್ದ. ಅರ್ಧ ಘಂಟೆಯಾದ್ರೂ ಅವಳಿಂದ ಉತ್ತರ ಬರದಿದ್ದಾಗ ಬೇಸತ್ತು ಲಾಗೌಟ್ ಮಾಡಿದ್ದ. ಮತ್ತೊಂದು ದಿನ ಆ ಕಡೆ ತಲೇನೆ ಹಾಕಿರಲಿಲ್ಲ.
ಮಾರನೇ ದಿನ ಲಾಗಿನ್ ಆದ್ರೆ ಇಪ್ಪತ್ಮೂರು ಮೆಸೇಜುಗಳು. ಅದರಲ್ಲಿ ಇಪ್ಪತ್ತೆರಡು ಆಕೆಯವೇ . ಕರೆಂಟ್ ಹೋಗಿತ್ತು ಸಾರಿ ಅನ್ನೋದ್ರಿಂದ ಶುರುವಾಗಿ ಕೊನೆಗೆ ದೊಡ್ಡ ಕತೆಯನ್ನೇ ಬರೆದುಬಿಟ್ಟಿದ್ಲು. ನನಗೆ ಕೃಷ್ಣನಂತಹ ಅಣ್ಣ, ಭೀಮನಂತಹ ಪತಿ ಸಿಕ್ಕೋ ಭರವಸೆ ಇರೋದ್ರಿಂದ ಜೀವನದಲ್ಲಿ ಯಾವ ದುಷ್ಯಾಸನ , ಕೀಚಕರು ಏನೂ ಮಾಡೋಕಾಗೋಲ್ಲವೆಂಬ ನಂಬಿಕೆಯಿದೆ ಅಂತ ಒಂದು ಮುಗುಳುನಗೆಯೊಂದಿಗೆ ಮಾತು ಮುಗಿಸಿದ್ಲು. ಅಂದು ರಾತ್ರೆ ಮತ್ತೆ ಪಿಂಗ್ ಮಾಡಿದ ಇವನಿಗೆ ಎಂದಿನಂತೆ ಹರಟೆಗೆ ಸಿಕ್ಕಿರಲಿಲ್ಲ ಅವಳು. ಮುಂದಿನ ವಾರ ಹೋಗೇನಕಲ್ಲಿಗೆ ಹೋಗೋಣ್ವಾ ಅಂದಿದ್ದ ಇವ ಆ ರಾತ್ರಿಯ ಟೀವಿ ನೋಡಿರ್ಲಿಲ್ಲ. ಯಾವುದೋ ಅನಿವಾರ್ಯ ಕಾರಣದಿಂದ ಎಲ್ಲೋ ಹೋಗಬೇಕಾದ ಅವಳು ಇವನಿಗೆ ಪಿಂಗೂ ಮಾಡಿರಲಿಲ್ಲ. ದಿನಾ ಸಂಜೆ ಅವಳ ಪ್ರತಿಕ್ರಿಯೆ ಏನೆಂದು ನೋಡೋಕೋಸ್ಕರವೇ ಫೇಸ್ಬುಕ್ಕಿಗೆ ಹೋಗ್ತಿದ್ದ ಇವನಿಗೆ ಟ್ರಿಪ್ಪಿನ ಹಿಂದಿನ ರಾತ್ರಿಯಾದ್ರೂ ಉತ್ತರ ಬಂದಿರಲಿಲ್ಲ. ಅವಳೇ ಬರದೇ ಇನ್ನೇನು ಟ್ರಿಪ್ಪು ಅಂತ ಹೊಗೇನಕಲ್ಲ ಟ್ರಿಪ್ಪಿಗೆ ನಾನು ಬರೋಲ್ಲ. ನೀವು ಹೋಗೋದಾದ್ರೆ ಹೋಗಿ ಬನ್ನಿ ಅಂದಿದ್ದ ಟ್ರಿಪ್ಪ ಹಿಂದಿನ ಸಂಜೆ. ಎಂದೂ ಹೀಗನ್ನದ ಇವ ಇವತ್ಯಾಕೆ ಹೀಗಂತಿದಾನೆ ಅಂತ ಅವರ್ಯಾರಿಗೂ ಗೊತ್ತಾಗಲಿಲ್ಲ. ಎಷ್ಟು ಕೇಳಿದ್ರೂ ಇವನೂ ಕಾರಣ ಬಾಯ್ಬಿಡಲೊಲ್ಲ. ಇವನನ್ನ ಬಿಟ್ಟು ಹೋಗೋಕೆ ಯಾರಿಗೂ ಮನಸ್ಸಾಗದೇ ಟ್ರಿಪ್ಪನ್ನೇ ಕ್ಯಾನ್ಸಲ್ ಮಾಡಿದ್ರು ಕೊನೆಗೆ.
ಮಾರನೇ ದಿನ ಬೆಳಬೆಳಗ್ಗೆ ಗೆಳೆಯನೊಬ್ಬ ಫೋನ್ ಮಾಡಿ ಟೀವಿ ಹಾಕು ಅಂದ. ಅವನ ದನಿಯಲ್ಲಿದ್ದ ಗಾಬರಿ ನೊಡಿ ಏನಾಯ್ತಪ್ಪ ಅಂತ ಟೀವಿ ಹಾಕಿದ ಶ್ಯಾಮನಿಗೆ ಹೃದಯ ಬಾಯಿಗೆ ಬಂದ ಭಾವ. ಹೊಗೇನಕಲ್ಲಲ್ಲಿ ಸಿಕ್ಕಾಪಟ್ಟೆ ಮಳೆ. ಬೋಟಿಂಗಿಗೆ ಹೋಗಿ ಕೊಚ್ಚಿಹೋದ ಎರಡು ತಂಡಗಳಿಗಾಗಿ ಹುಡುಕಲು ನೀರು ಇಳಿಯೋವರೆಗೆ ಕಾಯುವಿಕೆ, ಇನ್ನೊಂದು ತಿಂಗಳು ಅಲ್ಲಿ ಯಾರನ್ನೂ ಬಿಡೋದಿಲ್ಲ, ಚಾರಣಿಗರಿಗೆ ಅತ್ತ ಸುಳಿಯದಂತೆ ಪೋಲೀಸರ ಎಚ್ಚರಿಕೆ ಅಂತ ಪುಂಖಾನುಪುಂಖವಾಗಿ ಸುದ್ದಿಗಳು ಬರುತ್ತಿತ್ತು ಟೀವಿಯಲ್ಲಿ. ಇತ್ತ ಇಷ್ಟೊತ್ತಿಗೆ ಶವವಾಗಿ ತೇಲಬೇಕಿದ್ದ ತಮ್ಮ ಜೀವವುಳಿಸಿದ ಕಾಣದ ದೇವರಿಗೆ, ಪರೋಕ್ಷವಾಗಿ ಜೀವವುಳಿಸಿ ಪ್ರತ್ಯಕ್ಷ ದೇವರೇ ಆಗೋದ ಸುದೇಷ್ಣೆಗೆ ನಮಸ್ಕರಿಸುತ್ತಿದ್ದ ಶ್ಯಾಮ ಫೇಸ್ಬುಕ್ಕಲ್ಲಿ ಮತ್ಯಾವಾಗ ಸಿಗ್ತಾಳೋ ಅವಳು. ಮಾತಾಡಬೇಕು, ಜೀವವುಳಿಸಿದ್ದಕ್ಕೆ ಥ್ಯಾಂಕ್ಸ್ ಹೇಳಬೇಕು ಅಂತ ಚಡಪಡಿಸುತ್ತಿದ್ದ.