Sunday, August 9, 2015

ಬರಹಗಾರರ ಭಾವವೂ, ಭಾಷೆಯ ನೋವೂ

ಪೇಪರ್ರಲ್ಲಿ, ಇಂಟರ್ನೆಟ್ಟಲ್ಲಿ, ಮೊಬೈಲಲ್ಲಿ ಏನೋ ಓದುತ್ತೇವೆ, ಇನ್ನೇನೋ ನೋಡುತ್ತೇವೆ, ಮತ್ತಿನ್ನೇನೋ ಕೇಳುತ್ತೇವೆ, ಸಮಾಜದಲ್ಲಿನ ಆಗುಹೋಗುಗಳಲ್ಲಿ ಒಂದಾಗಿ ಏನೇನೋ ಅನುಭವಿಸುತ್ತಿರುತ್ತೇವೆ. ಈ ಘಟನೆಗಳಗಳಲ್ಲಿ ಯಾವುದೋ ಒಂದು ಇನ್ಯಾವುದೋ ಭಾವವನ್ನು ಸ್ಪುರಿಸಿರುತ್ತದೆ. ಹಿಂದಿನ ಓದಿನಿಂದ ಪ್ರಭಾವಿತರಾಗಿರುವಂತೆಯೇ ಆ ಕ್ಷಣಕ್ಕೆ ಹುಟ್ಟಿದ ಸ್ವಂತದ ಭಾವಕ್ಕೊಂದು ಅಕ್ಷರರೂಪ ಕೊಡಬೇಕೆಂಬ ಹಂಬಲವೂ ಹುಟ್ಟಬಹುದು. ಸರಿ, ಬರೆಯುತ್ತೇನೆ. ಆದರೆ ಬರೆಯುವುದು ಎಲ್ಲಿ ಎಂಬುದು ಆಗ ಮೂಡೋ ಮೊದಲ ಪ್ರಶ್ನೆ. ಶಾಲಾ ಕಾಲೇಜು ದಿನಗಳಲ್ಲಾದರೆ ಪುಸ್ತಕದ ಕೊನೆಯ ಪೇಜಿನಲ್ಲೋ, ಸಿಕ್ಕ ಖಾಲಿ ಹಾಳೆಯಲ್ಲೋ ಬರೆದು ಗೆಳೆಯರಿಗೆ ತೋರಿಸಿ ಅವರು ಬೆನ್ನು ತಟ್ಟಿದರೆ ಅದೇ ದೊಡ್ಡ ಖುಷಿ. ಗಂಭೀರ ವಿಷಯವಾಗಿದ್ದರೆ ಅದರ ಬಗ್ಗೆಯೇ ಇನ್ನೊಂದಿಷ್ಟು ಚಿಂತಿಸಿ ಮುಂದೆಲ್ಲೋ ಬರುವ ಭಾಷಣ ಸ್ಪರ್ಧೆಗೋ, ಪ್ರಬಂಧ ಸ್ಪರ್ಧೆಗೋ ಒಂದು ವಿಚಾರಧಾರೆಯಾಗಿ ಬಳಸಬಹುದು. ಆದರೆ ಆ ಹಂತಗಳ ದಾಟಿ ಬಂದವರ ಮುಂದಿರುವ ಸವಾಲುಗಳೇ ಬೇರೆ. ಅದರ ಬಗ್ಗೆಯೇ ಒಂದು ಸಣ್ಣ ನೋಟ ಇಂದಿನ ಬರಹದಲ್ಲಿ.

ಬರೆಯಬೇಕು ಅನ್ನೋನು ತನ್ನ ಕವನ ಸಂಕಲನವನ್ನೋ , ಕೃತಿಯನ್ನೋ ಹೊರತಂದು ಅದನ್ನು ಸಾಮಾನ್ಯ ಓದುಗರು, ವಿಮರ್ಶಕರು ಓದಿ ಮೆಚ್ಚಿದರೆ ಮಾತ್ರ ಅವನ ಅಭಿಪ್ರಾಯ ಜನಕ್ಕೆ ತಲುಪುತ್ತೆ ಅನ್ನೋ ಕಾಲವಿನ್ನೂ ಉಳಿದಿಲ್ಲ. ತನ್ನ ಬರಹ ಪುಸ್ತಕರೂಪದಲ್ಲಿ ದಾಖಲಾಗಬೇಕು, ಅದರ ಮೂಲಕ ಸಾಹಿತ್ಯದ ಮುಖ್ಯ ವಾಹಿನಿಗೆ ತಾನೂ ಬರಬೇಕು ಅನ್ನೋ ಆಕಾಂಕ್ಷೆಯಿದ್ದರೆ ಈ ಪುಸ್ತಕದ ಪ್ರಯತ್ನ ತಪ್ಪಲ್ಲದಿದ್ದರೂ ತನ್ನ ಸಾಹಿತ್ಯವನ್ನು ಹೊರಜಗತ್ತಿಗೆ ತೆರೆದಿಡಲು ಈಗ ಇನ್ನೂ ಹಲವು ಆಯ್ಕೆಗಳಿವೆ. ಅಂತರ್ಜಾಲ ಜನಜನರ ಮನೆಗೆ, ಮೊಬೈಲಿಗೆ, ಆಫೀಸಿಗೆ ತಲುಪಿರೋದ್ರಿಂದ(ದಟ್ಟಕಾನನಗಳನ್ನು, ಕರೆಂಟೇ ಇಲ್ಲದ, ಇದ್ದರೂ ಇಲ್ಲದಂತಿರೋ ಹಳ್ಳಿಗಳ ಹೊರತುಪಡಿಸಿ) ಅದರ ಮೂಲಕವೇ ತಮ್ಮ ಸಾಹಿತ್ಯವನ್ನು ಜನ ಮನಕ್ಕೆ ತಲುಪಿಸೋ ಪ್ರಯತ್ನಗಳು ನಡೀತಿದೆ.ಮುಂಚೆಯಿದ್ದಂತೆ ಒಂದೋ ಎರಡೋ ಪೇಪರುಗಳಿರದೇ ಹಲವಾರು ಪತ್ರಿಕೆಗಳು ಹುಟ್ಟಿಕೊಂಡಿರುವುದರಿಂದ ಅವುಗಳ ಮೂಲಕವೂ ಬರೆಯುವ ಆಸಕ್ತಿಯಿರುವವನಿಗೆ ವೇದಿಕೆ ತೆರೆದುಕೊಳ್ಳುತ್ತಿದೆ. ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ಬರೆಯೋಕೆ ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಂತರದ ಪ್ರಶ್ನೆ.

೨೦೧೦-೧೧ ರ ಸಮಯ. ಅಂತರ್ಜಾಲದಲ್ಲಿ ಆರ್ಕುಟ್ಟಿನ ಉಚ್ರಾಯ ಕಾಲ ಮುಗಿಯುತ್ತಾ ಬರುತ್ತಿದ್ದ ಸಮಯ. ಆ ಸಮಯದಲ್ಲಿ ಅಂತರ್ಜಾಲದ ಸಾಮಾಜಿಕ ತಾಣಗಳಿಗೆ ಕಾಲಿಡುತ್ತಿದ್ದವರಿಗೆ ಆರ್ಕುಟ್ಟು ಮತ್ತು ಹೊಸದಾಗಿ ಜನಪ್ರಿಯವಾಗುತ್ತಿರುವ ಫೇಸ್ಬುಕ್ಕಿನಲ್ಲಿ ಬರೆಯೋ ಅವಕಾಶಗಳಿತ್ತು. ಅದರಲ್ಲಿನ ಗುಂಪುಗಳಲ್ಲಿ ತಮ್ಮ ಸಾಹಿತ್ಯ ಕಳೆದುಹೋದೀತು. ಅಲ್ಲಿ ಪರಿಚಯವಾದ ಓದುಗರಿಗೆ ತಮ್ಮ ಸಾಹಿತ್ಯ ಶಾಶ್ವತವಾಗಿ ಸಿಗುವಂತಾಗಬೇಕು ಅನ್ನೋ ಆಸೆಯ ಲೇಖಕರಿಗೆ ಬ್ಲಾಗ್ ಸ್ಪಾಟ್, ವರ್ಲ್ ಪ್ರೆಸ್ ಮತ್ತು ಲೈವ್ ಜರ್ನಲ್ ಮೊದಲಾದ ಬ್ಲಾಗುಗಳು ನೆರವಾಗುತ್ತಿದ್ದವು. ಅದೇ ತರಹ ಕನ್ನಡದ ವೆಬಸೈಟುಗಳಾದ ಕೆಂಡಸಂಪಿಗೆ, ಸಂಪದ, ನಿಲುಮೆಗಳಿಗೂ ತಮ್ಮ ಲೇಖನಗಳನ್ನು ಕಳಿಸೋ ಅವಕಾಶವಿತ್ತು. ಇವುಗಳಲ್ಲಿ ಸಂಪದದಲ್ಲಿ ಯಾರ ಒಪ್ಪಿಗೆಯೂ ಇಲ್ಲದೇ ನಮ್ಮ ಖಾತೆಯಿಂದ ನೇರವಾಗಿ ಪೋಸ್ಟ್ ಮಾಡುವ ಅವಕಾಶವಿದ್ದರೂ ದಟ್ಸ್ ಕನ್ನಡ, ಅವಧಿ, ಕೆಂಡಸಂಪಿಗೆ, ನಿಲುಮೆಯಂತಹ ತಾಣಗಳಿಗೆ ಕಳಿಸಿದ ತಮ್ಮ ಲೇಖನಗಳು ಪ್ರಕಟವಾದೀತೇ ? ಒಂದೊಮ್ಮೆ ಪ್ರಕಟವಾದರೆ ಅದೇ ದೊಡ್ಡ ಸಾಧನೆಯೆಂಬ ಹೆಮ್ಮೆಯಿಂದ ಬರಹಗಾರ ಬೀಗೋ ಕಾಲವೊಂದಿತ್ತು. ಒಂದೇ ಒಂದು ಪುಸ್ತಕವನ್ನು ಪ್ರಕಾಶಿಸದಿದ್ದರೂ ಹೀಗೆ ಅಂತರ್ಜಾಲದಲ್ಲಿ ಬರೆಯುತ್ತಲೇ ಯಾರದೋ ಕಣ್ಣಿಗೆ ಬಿದ್ದು ಪತ್ರಿಕೆಗಳಿಗೆ ಲೇಖನಗಳನ್ನು ಕಳುಹಿಸುವ ಮಟ್ಟಿಗೆ ಬೆಳೆದ ಗೆಳೆಯರಿದ್ದಾರೆ ಅಂದರೆ ಅದು ಕಮ್ಮಿ ಸಾಧನೆಯೇನಲ್ಲ. ಪತ್ರಿಕೆಗಳಿಗೆ ಲೇಖನ ಕಳಿಸೋ ಸಾವಿರಾರು ಜನರಲ್ಲಿ ಇವರ ಲೇಖನ ಆಯ್ಕೆಯಾಗುವಷ್ಟರ ಮಟ್ಟಿಗೆ ಇವರ ಬರಹ ಪಕ್ವವಾಗಿದೆ ಅಂದರೆ ಅದರ ಹಿಂದೆ ಯಾರೂ ಓದದ ತಮ್ಮ ಅದೆಷ್ಟೋ ಬರಹಗಳಿಗೆ ಬೇಸರಗೊಂಡು ಬರಹವನ್ನೇ ನಿಲ್ಲಿಸಿದ ನಿರಂತರ ತಾಳ್ಮೆಯಿದೆ. ಸಾಹಿತ್ಯಾಸಕ್ತಿಯಿದೆ. 
ನೂರಕ್ಕೊಬ್ಬರು ಹೀಗೆ ಪತ್ರಿಕೆಗಳಿಗೆ ಬರೆಯೋಕೆ ಆಯ್ಕೆಯಾಗಬಹುದು. ಉಳಿದ ತೊಂಬತ್ತೊಂಬತ್ತು ಜನ ಕಳಿಸಿದ ಎಲ್ಲಾ ಲೇಖನಗಳೂ ಪತ್ರಿಕೆಗಳಿಂದ ತಿರಸ್ಕೃತರಾಗಬಹುದು. ಆಗ ಆ ತೊಂಬತ್ತೊಂಭತ್ತರಲ್ಲಿ ಕೆಲವರಿಗಾದರೂ ಮೂಡೋ ಪ್ರಶ್ನೆಯೊಂದಿದೆ. ನಾನು ಪೇಪರಿಗೆ ಅಂತ ಯಾಕೆ ಬರೀಬೇಕು ? ಅಥವಾ ಬರೆದಿದ್ದನ್ನ ಪೇಪರಿಗೆ ಯಾಕೆ ಕಳಿಸಬೇಕು ? ಸುಮ್ಮನೇ ನನ್ನ ಪಾಡಿಗೆ ಬರೆದುಕೊಂಡು ಸುಮ್ಮನಿರಬಾರದಾ ಅಂತ ! ಹಂಗೆ ತಮ್ಮ ಪಾಡಿಗೆ ಬರೆದುಕೊಳ್ಳಬೇಕು ಅಂದ್ರೆ ಪೇಪರಿನಲ್ಲಿ ಪ್ರಕಟವಾಗಬಹುದಾದ ವಿಷಯಗಳ ಬಗ್ಗೆ ಮಾತ್ರ ಬೆರೆಯಬೇಕೆಂತೇನಿಲ್ಲವಲ್ಲ. ಅನಿಸಿದ ಭಾವಗಳ ಬಗ್ಗೆ ಗೀಚಿಕೊಳ್ಳಬಹುದು.ಆ ಗೀಚಿಕೊಳ್ಳುವಿಕೆಗೆ ಒಂದಿಷ್ಟು ನೋಡುವ ಕಣ್ಣುಗಳು ಸಿಕ್ಕರೆ ಅದೇ ದೊಡ್ಡ ಖುಷಿಯೆಂಬ ಭಾವ ಮೂಡಬಹುದು. ಸರಿ, ಹಂಗಾದ್ರೆ ಅಂತರ್ಜಾಲದಲ್ಲೇ ಬರೆಯೋಣ. ಅನಿಸಿದ ಭಾವಗಳ ಬಗ್ಗೆಯೇ ಬರೆಯೋಣ. ಆದ್ರೆ ಭಾಷೆ ? ಯಾವ ಭಾಷೆಯಲ್ಲಿ ಬರೆಯಬೇಕು ಅನ್ನೋದೋ ಒಂದು ಸಂದಿಗ್ದವೇ ಅನಿಸಬಹುದು. ಆದ್ರೆ ಒಂದಲ್ಲೊಂದು ಸಮಯದಲ್ಲಿ ಯಾವ ಭಾಷೆಯಲ್ಲಿ ಬರೆಯೋಣ ಇದನ್ನ ಅನ್ನೋ ಸಂದೇಹ ಕೆಲವರಿಗಾದ್ರೂ ಕಾಡೇ ಕಾಡಿರುತ್ತೆ.

ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಊರ, ಕೇರಿಯ, ರಾಜ್ಯದ ಜನ ಮಾತ್ರ ನಮ್ಮ ಗೆಳೆಯರಾಗಿರೋಲ್ಲ. ಹೊರಗಿನೋರೂ ನಮ್ಮ ಗೆಳೆಯರಾಗಿರಬಹುದು. ಅಥವಾ ನಮ್ಮ ಗೆಳೆಯರ ಗೆಳೆಯರಾಗಿರಬಹುದು. ಫೇಸ್ಬುಕ್ಕಿನ ಉದಾಹರಣೆಯನ್ನೇ ತೆಗೆದುಕೊಂಡ್ರೆ ಕನ್ನಡದ ಲೇಖಕನೊಬ್ಬ ಶುರು ಮಾಡಿದ ಪೇಜು, ಅವ ಕನ್ನಡದಲ್ಲಿ ಬರೆದ ಲೇಖನದಲ್ಲಿ ವಿಷಯ ಅವನ ಕನ್ನಡೇತರ ಗೆಳೆಯರಿಗೆ ತಲುಪದಿರಬಹುದು. ಹಾಗಾಗಿ ತನ್ನ ಭಾವಗಳು ಹೆಚ್ಚೆಚ್ಚು ಜನರಿಗೆ ತಲುಪಲೆಂಬ ಆಸೆಯಿಂದ ಆತ ಇಂಗ್ಲೀಷಲ್ಲಿ ಬರೆಯೋಕೆ ಶುರು ಮಾಡಿದರೆ ಅಚ್ಚರಿಯಿಲ್ಲ. ನೀ ಬರೆದ ಬರಹಗಳು ಏನಂತಲೇ ಅರ್ಥವಾಗೋಲ್ಲ ಕಣೋ. ಕನ್ನಡದಲ್ಲೇ ಬರಿ, ಇಂಗ್ಲೀಷಲ್ಲೂ ಬರಿ ಅಂತ ಅನೇಕ ಜನರಿಂದ ಕೇಳಿ ಕೇಳಿ ಎರಡೆರಡರಲ್ಲಿ ಬರೆಯೋ ತೊಂದರೆ ಯಾಕೆ ಅಂತ ಆತ ಇಂಗ್ಲೀಷಲ್ಲೇ ಬರೆಯೋಕೆ ಶುರುಮಾಡಲೂ ಬಹುದು. ಈಗಾಗಲೇ ಬೇರೆ ಭಾಷೆಗಳ, ಬೇರೆಡೆಯ ಜನರೊಂದಿಗೆ ಅವರ ಭಾಷೆಯಲ್ಲೇ ಮಾತಾಡೋ, ಕನ್ನಡಕ್ಕೆ ಅದೆಷ್ಟೋ ಭಾಷೆಗಳ ಪದಗಳನ್ನು ತಂದು ತುರುಕಿ ಉಸಿರುಗಟ್ಟಿಸುತ್ತಿರುವವರ ನಡುವೆ ಕನ್ನಡಾಂಬೆ ತನ್ನ ಕಂದ ಇಂಗ್ಲೀಷಿನಲ್ಲಿ ಬರೆಯೋದ ವಿರೋಧಿಸಿಯಾಳೇ ? ಅಥವಾ ದಿನೇ ದಿನೇ ಜಗತ್ತಿಗೆ ತೆರೆದುಕೊಳ್ಳುತ್ತಿರುವ ಅದೆಷ್ಟೋ ಕನ್ನಡ ಲೇಖಕರ ನಡುವೆ ಒಂದಿಷ್ಟು ಜನ ಕಮ್ಮಿಯಾದರೆ ಬೇಜಾರಿಲ್ಲವೆಂದು ಸುಮ್ಮನಾದಾಳೇ ? ಇಂಗ್ಲೀಷಲ್ಲಿ ಎಲ್ಲರೂ ಬರೀತಾರೆ ? ನಮ್ಮ ಭಾಷೆಯಲ್ಲಿ ಬರೆಯೋಕೆ ನಾವಿಲ್ಲದೇ ಯಾರೆಂಬ ಭಾವ ತನ್ನ ಮಕ್ಕಳಲ್ಲೇ ಮೂಡಲೆಂಬ ಆಸೆಯಿಂದ ಕಾಯುತ್ತಿದ್ದಾಳೇ ? ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲದಿದ್ದರೂ ಇದೇ ತರದ ಸಂದಿಗ್ದವನ್ನು ಎದುರಿಸಿದ ರಾಷ್ಟ್ರಕವಿ ಕುವೆಂಪುರವರ ಜೀವನದ ಒಂದು ಘಟನೆ ನೆನಪಿಗೆ ಬರುತ್ತೆ.

೧೯೨೨. ಹೈಸ್ಕೂಲು ದಿನಗಳಲ್ಲಿನ ಕುವೆಂಪುರವರಿಗೆ ಇಂಗ್ಲೀಷಿನ ಸಾಹಿತ್ಯದ ಬಗ್ಗೆ, ರಚನೆಗಳ ಬಗ್ಗೆ ಅತೀವ ಆಸಕ್ತಿ. ತಾವೇ ಬರೆಯಲೂ ತೊಡಗಿ ೧೬ ಪುಟಗಳ beginner's muse  ಅನ್ನೋ ಕವನ ಸಂಕಲನವನ್ನೂ ಹೊರತರುತ್ತಾರೆ. ಅದಾಗಿ ಎರಡು ವರ್ಷಗಳ ನಂತರ ಇವರು ಓದುತ್ತಿದ್ದ ಊರಿಗೆ ಐರಿಷ್ ಕವಿ ಜೇಮ್ಸ್ ಕಸಿನ್ ಅವರು ಬಂದ ವಿಷಯ ಇವರ ಮಹಾರಾಜ ಕಾಲೇಜಿನ ಇತಿಹಾಸದ ಅಧ್ಯಾಪಕರಾದ ಎಂ.ಹೆಚ್ ಕೃಷ್ಣ ಅಯ್ಯಂಗಾರ್ ಮತ್ತು ಕಾಲೇಜಿನ ಪ್ರಾಂಶುಪಾಲರಿಂದ ತಿಳಿಯುತ್ತದೆ. ತಮ್ಮ ರಚನೆಯನ್ನು ಜೇಮ್ಸ್ ಕಸಿನ್ ಅವರಿಗೆ ತೋರಿಸಬೇಕು ಮತ್ತು ಅವರಿಂದ ಪ್ರಸಂಸೆಯ ನುಡಿಗಳನ್ನು ಪಡೆಯಬೇಕು ಅನ್ನೋ ಆಸೆಯಿಂದ ಮಾರನೇ ದಿನ ಕುವೆಂಪು ಜೇಮ್ಸ್ ಕಸಿನ್ ಅವರಿದ್ದ ಅತಿಥಿ ಗೃಹಕ್ಕೆ ತೆರಳುತ್ತಾರೆ. ಅಲ್ಲಿ ಖಾದಿ ತೊಟ್ಟ ಕುವೆಂಪುರವರು ತೋರಿಸಿದ ಇಂಗ್ಲೀಷ್ ರಚನೆಯನ್ನು ನೋಡಿ ಇದೇನಿದು ಅನ್ನುತ್ತಾರೆ ಕಸಿನ್. ಮುಂದುವರಿದು ನೀನು ತೊಟ್ಟ ದಿರಿಸು ಸ್ವದೇಶಿ,ನೀನು ಬರೆದದ್ದಲ್ಲ. ನಿನ್ನ ತಾಯ್ನುಡಿ ಕನ್ನಡದಲ್ಲೇನಾದ್ರೂ ಬರೆದಿದ್ದೀಯ ಎಂದು ಕೇಳುತ್ತಾರೆ. ಅದಕ್ಕೆ ಕುವೆಂಪು ಇಂಗ್ಲೀಷಿನ ಸಾಹಿತ್ಯಕ್ಕಿರುವಷ್ಟು ಗುಣಮಟ್ಟ ಕನ್ನಡಕ್ಕಿಲ್ಲ, ಇಲ್ಲಿನ ಶೈಲಿಯೆಲ್ಲಾ ಅತೀ ಹಳೆಯದು ಎಂದುತ್ತರಿಸಿದರೆ ಮುಂದುವರಿವ ಕಸಿನ್ ಯಾವುದೇ ಭಾಷೆ ಅದರಷ್ಟಕ್ಕದೇ ಶ್ರೀಮಂತವಾಗುವುದಿಲ್ಲ. ಅದನ್ನು ಬಳಸುವವರಿಂದ ಶ್ರೀಮಂತವಾಗುತ್ತದೆ ಎನ್ನುತ್ತಾ ನೋಬೆಲ್ ಪ್ರಶಸ್ತಿಯನ್ನೇ ಪಡೆದ ರವೀಂದ್ರನಾಥ್ ಟಾಗೋರರ ಉದಾಹರಣೆಯನ್ನು ಕೊಡುತ್ತಾರೆ.  ತನ್ನದಲ್ಲದ ಭಾಷೆಯಲ್ಲಿ ತನ್ನ ಭಾವಗಳ ಕೂರಿಸೋಕೆ ಮಾಡಿದ ಪ್ರಯತ್ನ ಎಷ್ಟು ಹಾಸ್ಯಾಸ್ಪದ ಎಂಬುದು ಆ ಭಾಷೆಯ ಓದುಗರಿಗಲ್ಲದೇ ಬರೆಯೋ ನಿನಗೆ ಎಂದೂ ತಿಳಿಯೋಕೆ ಸಾಧ್ಯವಿಲ್ಲ, ನಿನ್ನ ಮಾತೃಭಾಷೆಯಲ್ಲೇ ಬರಿ ಎಂದು ಬುದ್ದಿವಾದ ಹೇಳುತ್ತಾರೆ. ಅಂದು ಜೇಮ್ಸ್ ಕಸಿನ್ನರ ಭೇಟಿಯಾಗದಿದ್ದರೆ ಕನ್ನಡಕ್ಕೆ ಕಿಂದರಿಜೋಗಿ, ರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ಜಲಗಾರ ಮುಂತಾದ ನೂರಾರು ಕೃತಿಗಳು, ಜ್ಞಾನಪೀಠ, ರಾಷ್ಟ್ರಕವಿಯಂತಹ ಅದೆಷ್ಟೋ ಮಹೋನ್ನತ ಬಿರುದುಗಳು ಮಾತ್ರವೇ ಮಿಸ್ ಆಗುತ್ತಿರಲಿಲ್ಲ. ಅವರಿಂದಲೇ ಪ್ರಭಾವಿತರಾದ ಅದೆಷ್ಟೋ ಲೇಖಕರನ್ನೂ ಕಳೆದುಕೊಳ್ಳೋ ಅಪಾಯವಿಲ್ಲ. ಕುವೆಂಪುರವರಿಗೆ ಕಸಿನ್ಸ್ ಅವರು ಸಿಕ್ಕಂತೆ ನಮಗೆಲ್ಲರಿಗೂ ನಮ್ಮ ಸಂದಿಗ್ದವನ್ನು ನಿವಾರಿಸೋ ಮಹಾನುಭಾವರು ಸಿಕ್ಕಲಿಕ್ಕಿಲ್ಲ. ೧೯೨೪ರ ಕಾಲಕ್ಕೂ ಈಗಿನ ಕಾಲಕ್ಕೂ ಅದೆಷ್ಟೋ ವ್ಯತ್ಯಾಸಗಳಿರಬಹುದು. ಆದರೆ ಕೆಲವು ಅಂಶಗಳಂತೂ ನಿತ್ಯನೂತನವಾಗುತ್ತಲೇ ಸಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. 
ಆಧಾರ: 
೧. http://kuvempu.com/en/lnt8.html

ಸೂಚನೆ: ಈ ಲೇಖನ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ