|
Vibhuti falls near Yaana |
ವಿಭೂತಿ ಫಾಲ್ಸು:
ಯಾಣದ ಸಮೀಪವಿರೋ ವಿಭೂತಿ ಫಾಲ್ಸಿನ ಬಗ್ಗೆ ಹಲವಾರು ತಪ್ಪು ಮಾಹಿತಿಗಳು ಹರಿದಾಡುತ್ತಿರುತ್ತೆ. ಅದ್ರಲ್ಲೊಂದು ಯಾಣದಿಂದ ವಿಭೂತಿ ಫಾಲ್ಸಿಗೆ ೭ ಕಿ.ಮೀ ಅನ್ನೋದು. ಆದ್ರೆ ಯಾಣದ ಭೈರವೇಶ್ವರ ಶಿಖರದಿಂದ ತಗೊಂಡ್ರೆ ವಿಭೂತಿ ಫಾಲ್ಸಿಗೆ ಹನ್ನೊಂದು ಹನ್ನೊಂದೂವರೆ ಕಿ.ಮೀ ಆಗುತ್ತೆ. ಅದೆಂಗೆ ಅಂದ್ರೆ ಮೊದಲು ಯಾಣದ ಭೈರವೇಶ್ವರ ಶಿಖರದಿಂದ ಪ್ರವೇಶದ್ವಾರದವರೆಗೆ ಸುಮಾರು ೫೦೦ ಮೀಟರ್ ನಡೆದು ಅಲ್ಲಿಂದ ಗಾಡಿ ಹತ್ತಿ ಮುಖ್ಯ ರಸ್ತೆಗೆ ಬರೋ ಹೊತ್ತಿಗೆ ೩ ಕಿ.ಮೀ ಆಗಿರುತ್ತೆ. ಅಲ್ಲಿಂದ ಮತ್ತೆ ಆರು ಆರೂವರೆ ಕಿ.ಮೀ ಎಡಕ್ಕೆ ಕುಮಟಾ ರಸ್ತೆಯಲ್ಲಿ ಹೋದರೆ ಅಲ್ಲಿನ ಅಚವೆ ಅನ್ನೋ ಊರಲ್ಲೊಂದು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಿಗುತ್ತೆ. ಈ ಐದಾರು ಕಿ.ಮೀ ರಸ್ತೆಯಲ್ಲಿ ಒಂದೇ ಒಂದು ಕಡೆಯೂ ವಿಭೂತಿ ಫಾಲ್ಸಿಗೆ ದಾರಿ ಅನ್ನೋ ಬೋರ್ಡು ಕಾಣೋಲ್ಲ ! ಆದ್ರೆ ಅಲ್ಲಿಗೆ ಬಂದು ಮುಟ್ಟಿದಾಗ ಆಗೋ ಖುಷಿಯೇ ಬೇರೆ. ಯಾಕೆ ಅಂದ್ರಾ ? ಯಾಣ ದಾಟಿದ ನಂತರ ಸಿಗೋ ಘಾಟಿಯಲ್ಲಿ ಎಲ್ಲಿ ಎಡಕ್ಕೆ ದಾರಿಯೊಂದು ಕಂಡ್ರೂ ಇದೇ ವಿಭೂತಿ ಫಾಲ್ಸಿಗೆ ದಾರಿಯೇನೋ ಅಂತನಿಸೋ ಭಾವ ! ಏಳು ಕಿ.ಮೀ ಆಗ್ಲೇ ಆಯ್ತು. ಇನ್ನೂ ಫಾಲ್ಸು ಸಿಕ್ಕಿಲ್ಲ ಅಂತ !
|
Last few Steps for vibhuti falls from entrance |
ಈ ಚೆಕ್ ಪೋಸ್ಟಲ್ಲಿ ನಮ್ಮ ಹೆಸರು, ಎಲ್ಲಿಂದ ಬಂದಿದ್ದೇವೆ, ಮೊಬೈಲು ನಂಬರು, ಗಾಡಿ ನಂಬರು, ಬಂದ ಸಮಯ ಎಲ್ಲಾ ಬರೆದು ಅಲ್ಲಿಂದ ೨ ಕಿ.ಮೀ ಮುಂದಿರೋ ವಿಭೂತಿ ಫಾಲ್ಸಿಗೆ ತೆರಳಬೇಕು. ಹಂಗಾಗಿ ಯಾಣದಿಂದ ಇಲ್ಲಿಗೆ ಸುಮಾರು ೧೧ ಕಿ.ಮೀ ಆಗುತ್ತೆ ಅನ್ನೋದು ಸರಿಯಾದ ಮಾಹಿತಿ. ೭ ಕಿ.ಮೀ ಅನ್ನೋದಾದ್ರೆ ಯಾಣ ಕುಮಟಾ ರಸ್ತೆಯಲ್ಲಿನ ಯಾಣ ಕ್ರಾಸಿಂದ ಅಂತ ಹೇಳ್ಬೇಕು!
|
Vibhuti falls |
ಅಲ್ಲಿಂದ ಮುಂದೆ ಸಾಗಿ ಬಂದ್ರೆ ಫಾಲ್ಸಿನ ಸ್ವಾಗತ ದ್ವಾರ, ಪಾರ್ಕು ಮಾಡಿರೋ ಗಾಡಿಗಳು ಸಿಗುತ್ತೆ. ಅಲ್ಲಿಂದ ಮುಂದೆ ಸಾಗೋ ಹಾದಿಯ ಅಕ್ಕಪಕ್ಕದಲ್ಲಿ ಕೂರೋ ಜಾಗಗಳು, ಫಾಲ್ಸಿಗೆ ಹೋಗೋ ದಾರಿ ಎಲ್ಲಾ ಸಿಗುತ್ತೆ. ಇನ್ನೇನು ರಸ್ತೆಯ ಕೊನೆ ಅನ್ನೋ ಜಾಗದಲ್ಲೊಂದು ವೀಕ್ಷಣಾ ಗೋಪುರದಂತದ್ದೊಂದು ಸಿಗುತ್ತೆ. ಅಲ್ಲಿಂದ ಕೆಳಗೊಂದು , ಮೇಲೊಂದು ರಸ್ತೆ. ಯಾವ ಕಡೆ ಫಾಲ್ಸು ಅನ್ನೋ ಬೋರ್ಡಿಲ್ಲ. ಯಥಾ ಪ್ರಕಾರ ! ಮೇಲಿರದೇ ಫಾಲ್ಸಿರಬೇಕು ಅಂತ ಭಂಡ ಧೈರ್ಯ ಮಾಡಿ ಮೇಲಿರೋ ಹಾದಿಯಲ್ಲಿ ಹೋದರೆ ಮತ್ತೊಂದು ಸ್ವಲ್ಪ ಹಾದಿಯಲ್ಲಿ ಇದೇ ಫಾಲ್ಸಿಗೆ ಹೋಗೋ ಹಾದಿಯೆಂಬ ಭರವಸೆ ಬರತ್ತೆ ! ಗೊತ್ತಿರೋರಿಗೆ ಆಯ್ತು. ಗೊತ್ತಿಲ್ಲದೋರ ನೆರವಿಗಾದ್ರೂ ಒಂದು ಬೋರ್ಡು ಯಾಕೆ ಹಾಕೋಲ್ಲ ನಮ್ಮ ಪ್ರವಾಸೋದ್ಯಮ ಇಲಾಖೆ ಅನ್ನೋದು ಅರ್ಥ ಆಗೋಲ್ಲ. ಲಾಲ್ಗುಳಿ ಹುಡುಕ್ಕೊಂಡು ನಾವು ಒದ್ದಾಡಿದ ಕಥೆ ಹಿಂದಿನ ಲೇಖನದಲ್ಲಿ ಓದಿದ್ರಿ. ಅಷ್ಟೆಲ್ಲಾ ಒದ್ದಾಡ್ಕೊಂಡು ಹೋದ್ರೆ ಆ ಫಾಲ್ಸು ನಿಜಕ್ಕೂ ಚೆನ್ನಾಗಿದೆ. ಮೂರು ಹಂತದಲ್ಲಿ ಧುಮುಕೋ ಫಾಲ್ಸಿನ ಬಳಿ ಬೇಸಿಗೆಯಲ್ಲಿ ಆಟವಾಡಬಹುದಂತೆ.ಮಳೆಗಾಲವಾದ್ರೂ ಸ್ವಲ್ಪ ದೂರದಲ್ಲಿ ಆಟವಾಡಬಹುದು. ಅದು ಧುಮುಕಿದ ನಂತರ ಮತ್ತೊಂದು ಮಿನಿ ಫಾಲ್ಸಾಗತ್ತೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಮರಗಳ ಸಹಾಯದಿಂದ ಕೆಳಗಿಳಿದು ಅದರ ಸೌಂದರ್ಯವನ್ನೂ ಸವಿಯಬಹುದು.
|
Manjuguni |
ಮಂಜುಗುಣಿ:
ವಿಭೂತಿ ಫಾಲ್ಸಿನಿಂದ ನಾವು ಸೀದಾ ಬಂದಿದ್ದು ಅಲ್ಲಿಂದ ಸುಮಾರು ಮೂವತ್ತೈದು ಕಿ.ಮೀ ದೂರ ಇರುವ ಮಂಜುಗುಣಿಯ ವೆಂಕಟೇಶ್ವರ ದೇವಸ್ಥಾನಕ್ಕೆ. ತಿರುಮಲಯೋಗಿಗಳು ಎನ್ನುವವರು ೯ನೇ ಶತಮಾನದಲ್ಲಿ ಪ್ರತಿಷ್ಟಾಪನೆ ಮಾಡಿಸಿದ್ದೆನ್ನಲಾದ ಈ ದೇವಸ್ಥಾನಕ್ಕೆ ಶ್ರೀ ವಾದಿರಾಜರು ಕೊಟ್ಟ ಘಂಟೆ ಮಂಟಪ, ಭೂತ ರಾಜಗಳಿವೆ. ಈ ಊರಲ್ಲಿ ಬೆಳಗ್ಗಿನ ಹೊತ್ತು ತುಂಬಾ ಮಂಜಿರುತ್ತೆ, ದೇವಾಲಯದಲ್ಲೂ ಮಂಜನ್ನು ಕಾಣಬಹುದು ಅನ್ನೋ ಕಾರಣಕ್ಕೆ ಇದಕ್ಕೆ ಮಂಜುಗುಣಿಯೆಂಬ ಹೆಸರೆಂದು ಇಲ್ಲಿನ ಸ್ಥಳೀಯರು ತಿಳಿಸುತ್ತಾರೆ.
|
Manjuguni Venkateshwara temple |
ಯಾಣ/ಕುಮಟಾ ರಸ್ತೆಯ ಕಡೆಯಿಂದ ಬಂದರೆ ದೇವನಹಳ್ಳಿಯ ನಂತರ ಬಲಕ್ಕೆ ತಿರುಗಿ ಮುಂದೆ ಬಂದರೆ ಮಂಜುಗುಣಿ.ಮೊದಲು ಮಂಜುಗುಣಿಯ ಗೋಶಾಲೆ ಸಿಗುತ್ತೆ. ಅಲ್ಲಿಂದ ಹಾಗೇ ಮುಂದೆ ಬಂದರೆ ಸಿಗುವುದೇ ದೇವಸ್ಥಾನ. ಇದಕ್ಕೂ ಸರಿಯಾದ ಬೋರ್ಡುಗಳಿಲ್ಲದೇ ಸ್ಥಳೀಯರ ಮಾರ್ಗದರ್ಶನವೇ ಸಖತ್ ನೆರವಾಗಿತ್ತು.
|
Direct buses from Sirsi to Manjuguni which operate every hour |
ಬೆಳಗ್ಗೆ ಆರರಿಂದ ಮಧ್ಯಾಹ್ನ ಎರಡವರೆಗೆ ತೆಗೆದಿರುವ ಈ ದೇವಸ್ಥಾನ ಮಧ್ಯಾಹ್ನ ೨ರಿಂದ ೪ರವರೆಗೆ ಮುಚ್ಚಿರುತ್ತದೆ. ನಂತರ ೪ಕ್ಕೆ ತೆಗೆಯೋ ದೇಗುಲ ೮ರವರೆಗೆ ತೆಗೆದಿರುತ್ತದೆ. ಈ ದೇಗುಲದಲ್ಲಿ ಮಧ್ಯಾಹ್ನ ಹನ್ನೆರಡೂವರೆಯಿಂದ ಎರಡರವರೆಗೆ ನಿತ್ಯ ಭೋಜನದ ವ್ಯವಸ್ಥೆಯಿರುತ್ತದೆ. ನಾವು ಇಲ್ಲಿಗೆ ಬರೋ ಹೊತ್ತಿಗೆ ಒಂದೂಹದಿನೈದರ ಹೊತ್ತಾಗುತ್ತಾ ಬಂದು ಗಡಿಬಿಡಿಯಲ್ಲಿ ಬಾಗಿಲು ಹಾಕುವ ಸಂದರ್ಭದಲ್ಲಿ ದೇವರ ದರ್ಶನವಾಗಿ, ಊಟವೂ ಮುಗಿಯುತ್ತಾ ಬಂದಿದ್ದರೂ ಅಲ್ಲಿದ್ದ ತಾಯೊಬ್ಬರ ಕರುಣೆಯಿಂದ ಊಟ ಸಿಕ್ಕಿತ್ತು. ಬಾಗಿಲು ಹಾಕಿದ ಭೋಜನಶಾಲೆಯಲ್ಲಿ ಇಬ್ಬರೇ ಕುಳಿತು ಕೊನೆಯ ಪಂಕ್ತಿಯ ಅನ್ನ, ಸಾಂಬಾರ್, ತಂಬುಳಿ, ಪಾಯಸ, ಮಜ್ಜಿಗೆ ಊಟ ಮಾಡ್ತಾ ಇದ್ದರೆ ನಮಗೆ ಅಮೃತವೇ ಸಿಕ್ಕಂತೆ. ದೇಗುಲವೊಂದರಲ್ಲಿ ಅನ್ನಪೂರ್ಣೆಯೇ ಎದುರಾದಂಗೆ. ಶುಕ್ರವಾರ ರಾತ್ರೆ ಯಡಿಯೂರು, ಶನಿವಾರ ರಾತ್ರೆ ಸೋಂದಾ, ಭಾನುವಾರ ಮಧ್ಯಾಹ್ನ ಮಂಜುಗುಣಿ.. ಹೀಗೆ ಬ್ರೇಕಿಲ್ಲದೇ ತಿರುಗುತ್ತಿದ್ದ ನಮ್ಮ ಹೊಟ್ಟೆಗೆ ಹೊತ್ತಲ್ಲದ ಹೊತ್ತಲ್ಲಿ ಹಿಟ್ಟೊದಗಿಸಿದ್ದು ಅನಿರೀಕ್ಷಿತವಾಗಿ ಎದುರಾದ ದೈವತಾಣಗಳೇ ಅಂದ್ರೆ ತಪ್ಪೇನಿಲ್ಲ. ಶನಿವಾರ ಬೆಳಗ್ಗೆ ಅಮೃತಾಪುರದಲ್ಲಿ ಬೆಳಗ್ಗಿನ ತಿಂಡಿಗೆ ತುಂಬಾ ಒತ್ತಾಯವಿದ್ದರೂ ಅದನ್ನು ನಯವಾಗೇ ನಿರಾಕರಿಸಿದ್ದ ನಾವು ಅಂದು ಮಧ್ಯಾಹ್ನದ ಊಟವಿಲ್ಲದೇ ರಾತ್ರಿಯವರೆಗೂ ಒದ್ದಾಡಿದ್ದರ ಬಗ್ಗೆ ಹಿಂದಿನ ಭಾಗದಲ್ಲಿ ಬರೆದಿದ್ದೆ. ಇವೆಲ್ಲಾ ಫ್ಲಾಷ್ ಬ್ಯಾಕುಗಳ ಜೊತೆಗೆ ಅಲ್ಲಿನ ದೇಗುಲದ ಮತ್ತೊಂದು ಪ್ರದಕ್ಷಿಣೆ ಹಾಕಿ, ಅಲ್ಲಿನ ಶಿಲ್ಪಕಲೆಯ ಸೌಂದರ್ಯವನ್ನು ಸವಿಯುತ್ತಾ ಹೊರಬಂದ್ವಿ. ಅಂದ ಹಾಗೆ, ಶಿರಸಿಯಿಂದ ಮಂಜುಗುಣಿಗೆ ನೇರ ಬಸ್ಸುಗಳಿವೆ
ಬೆಣ್ಣೆಹೊಳೆ ಫಾಲ್ಸು:
ಮಂಜುಗುಣಿಯಿಂದ ಹತ್ತೊಂಭತ್ತು ಕಿ.ಮೀ ದೂರದಲ್ಲೇ ಬೆಣ್ಣೆಹೊಳೆ ಜಲಪಾತ ಇದೆ ಅಂತ ಇಲ್ಲಿಗೆ ಬರೋ ಮೊದಲು ಓದಿದ, ಗುರ್ತು ಮಾಡಿಕೊಂಡಿದ್ದ ನೆನಪಿತ್ತು. ಹಂಗೇ ಇಲ್ಲಿ ಕೇಳಿದ್ರೆ ನೀವು ಬಂದ ದಾರಿಯಲ್ಲೇ ವಾಪಾಸ್ ಹೋದ್ರೆ ಮಂಜುಗುಣಿ ಕ್ರಾಸ್ ಸಿಗತ್ತೆ. ಅಲ್ಲಿಂದ ಬಲಕ್ಕೆ ತಿರುಗಿ ಹೋದ್ರೆ ಬೆಣ್ಣೆಹೊಳೆ ಫಾಲ್ಸಿಗೆ ಹೋಗಬಹುದು ಅಂದ್ರು. ಸರಿ ಅಂತ ಅಲ್ಲಿಂದ ೪.೫ ಕಿ.ಮೀ ಹೋಗಿ ಕರಸೆ ಬಳಿ ಮಂಜುಗುಣಿ ಕ್ರಾಸಲ್ಲಿ ಬಲಕ್ಕೆ ತಿರುಗಿ ಉಡುಪಿ ಹೆಬ್ರೆ ರಸ್ತೆಯನ್ನ ಹಿಡಿದು ಅಲ್ಲಿಂದ ಸುಮಾರು ಎಂಟು ಕಿ.ಮೀ ಮುಂದೆ ಬಂದು ಅಲ್ಲಿದ್ದ ಬಂಡಲ ಅನ್ನೋ ಊರಲ್ಲಿನ ಪೈ ಹೋಟೇಲಲ್ಲಿ ಬೆಣ್ಣೆ ಹೊಳೆಗೆ ದಾರಿ ಕೇಳಿದ್ವಿ. ಅವ ಇಲ್ಲಿಂದು ಸುಮಾರು ಎರಡು ಕಿ.ಮೀ ಮುಂದಕ್ಕೆ ಹೋಗಿ ಅಲ್ಲಿ ಸಿಗೋ ಅಲ್ಲಿ ಸಿಗೋ ಕಸಗೆ ಅನ್ನೋ ಊರಿನ ನಂತರ ಎಡಕ್ಕೆ ಸಿಗೋ ಮಣ್ಣಿನ ರಸ್ತೆಯಲ್ಲಿ ತಿರುಗಿ ಐದು ಕಿ.ಮೀ ಹೋದರೆ ಬೆಣ್ಣೆಹೊಳೆ ಪಾಲ್ಸ್ ಸಿಗುತ್ತೆ ಅಂದ್ರು. ಅವ್ರು ಹೇಳಿದ ಹಂಗೆ ಮುಂದೆ ಹೋದ್ರೆ ಕರೆಕ್ಟಾಗಿ ಅವ್ರು ಹೇಳಿದಷ್ಟೇ ದೂರಕ್ಕೆ ಎಡಕ್ಕೆ ಹೋಗೋ ಮಣ್ಣು ರಸ್ತೆಯೊಂದಿತ್ತು. ಆದ್ರೆ ಅದ್ರಲ್ಲೂ ಬೆಣ್ಣೆಹೊಳೆಗೆ ದಾರಿ ಅನ್ನೋ ಬೋರ್ಡಿಲ್ಲ. ಇದ್ದ ಹಳದಿ ಬೋರ್ಡಲ್ಲಿ ಮಸುಕಾದ ಅಕ್ಷರಗಳಲ್ಲಿ ೨೦೧೧ರಲ್ಲಿ ನಡೆದ ಬೆಣ್ಣೆಹೊಳೆ ರಸ್ತೆ ಕಾಮಗಾರಿ ಅನ್ನೋದನ್ನ ಕಷ್ಟಪಟ್ಟು ಓದಬಹುದಿತ್ತು !
|
From here take left for benne hole falls in sirsi hebre road |
ರಸ್ತೆ ಬೇರೆ ಯಾವ್ದೋ ಹಳ್ಳಿಗೆ ಹೋಗೋ ರಸ್ತೆಯಂಗಿದೆ. ಇದು ಹೌದೋ ಅಲ್ವೋ ಅಂತ ಹಿಂದೆ ಸಿಕ್ಕ ಮನೆಯೊಂದರಲ್ಲಿ ಕೇಳ್ಕೊಂಡು ಬರ್ತೀನಂತ ಗಿರಿ ವಾಪಾಸ್ ಹೋದ್ರು. ಗಾಡಿಯಲ್ಲಿ ಕೂತು ಕೂತು ಹಿಂಬದಿಯೆಲ್ಲಾ ನೋವಾಗಿದ್ದ ನಾನು ಅಲ್ಲೇ ಉಳಿದಿದ್ದೆ. ಆ ಮನೆಯವನೋ , ಪುಣ್ಯಾತ್ಮ. ಬೆಣ್ಣೆ ಹೊಳೆ ಯಾವುದಂತ್ಲೇ ಗೊತ್ತಿಲ್ಲ. ನಾನೆಂತೂ ಹೋಗಿಲ್ಲ ಅನ್ನಬೇಕೆ ?
ಗಂಟೆ ಮೂರಾಗ್ತಾ ಬಂದಿತ್ತು. ಇದಾದ ಮೇಲೆ ಅವತ್ತಿನ ಪಾಲಿಗೆ ನೋಡೋಕಿದ್ದಿದ್ದು ಉಂಚಳ್ಳಿ ಫಾಲ್ಸೊಂದೆ. ಹಂಗಾಗಿ ಏನಾದ್ರಾಗ್ಲಿ ನೋಡೇ ಬಿಡೋಣ ಅಂತ ಆ ರಸ್ತೇಲಿ ಹೊರಟ್ವಿ. ಮುಂದೆ ಬರೋರಿಗೆ ಅನುಕೂಲವಾಗಲಿ ಅಂತ ಆ ರಸ್ತೆಯ ಸ್ವರೂಪ ಮತ್ತು ಮೂರು ಕಿ.ಮೀ ಆದ ಮೇಲೆ ಸಿಗೋ ಏಕೈಕ ಬೋರ್‍ಡನ್ನ ಮುಂದೆ ಬರುವವರ ಅನುಕೂಲಕ್ಕಾಗಿ ಹಾಕ್ತಿದ್ದೀನಿ.
|
Roads of Bennehole |
|
only landmark in 5 km road. Need to take right from here |
ಬೆಣ್ಣೆಹೊಳೆಯ ಮಣ್ಣು ರಸ್ತೇಲಿ ಮೂರು ಕಿ.ಮೀ ಬಂದ ಮೇಲೆ ಈ ಬೋರ್ಡ್ ಸಿಕ್ತು ಅಂದ್ರೆ ನೀವು ಸರಿಯಾದ ರಸ್ತೇಲಿದ್ದೀರಿ ಅಂತ. ಅಲ್ಲಿಂದ ಬಲಕ್ಕೆ ತಿರುಗಬೇಕು. ಈ ರಸ್ತೆಯಲ್ಲಿ ಜೀಪಲ್ಲಿ ಬರೋರಿಗೆ ಅಷ್ಟು ತ್ರಾಸಾಗದೇ ಇರಬಹುದು. ಆದರೆ ಬೈಕಿಗರ ತಾಳ್ಮೆಯ ಮತ್ತು ಸತ್ವಪರೀಕ್ಷೆಯ ದಾರಿಯಿದು. ಗಿರಿಯ ೩೫೦ ಸಿ.ಸಿಯ ಬೈಕು ಮತ್ತವರ ಓಡಿಸೋ ಶ್ರದ್ದೆಗೂ ಪರೀಕ್ಷೆಯಾಗಿದ್ದ ಈ ರಸ್ತೆಯಲ್ಲಿ ಯಾವುದೇ ಕ್ಷಣದಲ್ಲಾದ್ರೂ ಬೈಕು ಬೀಳೋಕೆ ರೆಡಿಯಾದ್ರೆ ಕಾಲು ಕೊಡೋಕೆ ರೆಡಿಯಿರು ಅಂದಿದ್ರು ಗಿರಿ. ಆದ್ರೆ ಅಂತಾದ್ದೇನೂ ಆಗಲಿಲ್ಲ.
|
Last point on the way to Bennehole falls from where road ends and we need walk for almost 800 meters |
|
Video of Bennehole falls |
|
Way back from Bennehole |
ಉಂಚಳ್ಳಿ ಜಲಪಾತ:
ಬೆಣ್ಣೆಹೊಳೆಯಿಂದ ಉಂಚಳ್ಳಿಗೆ ಸುಮಾರು ೨೩ ಕಿ.ಮೀ. ಉಂಚಳ್ಳಿಗೆ ಹೋಗೋಕೆ ಇಲ್ಲಿಂದಲೇ ಯಾವುದಾದ್ರೂ ದಾರಿಯಿದ್ಯಾ ಅಂತ ಕೇಳಿದ ನಮಗೆ ಮತ್ತೆ ಗೈಡಾದ ಅವರು ಶಿರಸಿಯವರೆಗೆ ವಾಪಾಸ್ ಹೋಗೋದು ಬೇಡ. ಬಂಡಲದಿಂದ ಬಲಕ್ಕೆ ತಗೊಂಡು ೯ ಕಿ.ಮೀ ಹೋದ್ರೆ ಕಂಚೀಕೈ ಅಂತ ಸಿಗುತ್ತೆ. ಅಲ್ಲಿಂದ ಮತ್ತೆ ಬಲಕ್ಕೆ ತಗೊಂಡು ೧೦ ಕಿ.ಮೀ ಹೋದ್ರೆ ಹೆಗ್ಗರಣೆ ಸಿಗುತ್ತೆ. ಹೆಗ್ಗರಡೆಯಿಂದ ನಾಲ್ಕು ಕಿ.ಮೀ ಅಂದರೆ ಇಲ್ಲಿಂದ ೨೪ ಕಿ.ಮೀಗೆ ಉಂಚಳ್ಳಿ ಸಿಗುತ್ತೆ ಅಂದ್ರು. ಉಂಚಳ್ಳಿಗೆ ಶಿರಸಿಯಿಂದ ೪೧ ಕಿ.ಮೀ ಬಂಡಲದಿಂದ ಶಿರಸಿಗೆ ೨೩ ಕಿ.ಮೀ. ಅಂದ್ರೆ ನಮ್ಗೆ ರಘು ಅಣ್ಣ ಉಳ್ಸಿದ ದೂರ ಮತ್ತೆ ಸಮಯ ಲೆಕ್ಕ ಹಾಕಿ !!
ರಘು ಅಣ್ಣ ಒಬ್ರೆ ಅಂತಲ್ಲ. ಇಲ್ಲಿ ದಾರಿ ಹೇಳಿದ ಪ್ರತಿಯೊಬ್ಬರೂ ಕರಾರುವಾಕ್ ದಾರಿ ಹೇಳಿದವರೆ. ಮೂರು ಕಿ.ಮೀ ಅಂದ್ರೆ ಅದು ಮೂರೇ !. ಇಲ್ಲಿನ ಬೋರ್ಡುಗಲ್ಲುಗಳೇ ದಾರಿ ತಪ್ಪಿಸುವಂತೆ, ದಾರಿಯೇ ತೋರಿಸದಂತಿರೋ ಬೇಸರವನ್ನು ಇವರು ಕಳೆದಿದ್ದರಲ್ಲಿ ೧% ಸಂಶಯವೂ ಇಲ್ಲ. ಅವರು ಹೇಳಿದಂತೆ ಬಂಡಲ-->ಕಂಚೀಕಲ್-->ನೀಲ್ಕುಂದ(ದಿಂದ ಎಡಕ್ಕೆ ೫ ಕಿ.ಮೀ)--> ಹೆಗ್ಗರಣೆ ತಲುಪಿದ್ವಿ.ಕಂಚಿಕೈ ಕ್ರಾಸಲ್ಲಿ ಒಂದು ಬೋರ್ಡು ಬಿದ್ದಿತ್ತು. ಅಲ್ಲಿಂದ ಬಲಕ್ಕೋ ಎಡಕ್ಕೋ ಗೊತ್ತಾಗ್ಲಿಲ್ಲ. ಆ ಬಿದ್ದಿದ್ದ ಬೋರ್ಡ್ ನೋಡಿದ್ರೆ ಅದ್ರಲ್ಲಿ ಬಂಡಲಕ್ಕೆ ೯.೫ ಕಿ.ಮೀ ಅಂತ ಬರೆದಿತ್ತು. ಇಲ್ಲಿಂದ ಬಲಕ್ಕೆ ಅಂತ ಅವ್ರು ಹೇಳಿದ್ದಕ್ಕೂ ನಾವು ಇಲ್ಲಿಗೇ ಬಂದು ತಲುಪಿದ್ದಕ್ಕೂ ಸರಿಯಾಗಿತ್ತೆಂದರೆ ಅವ್ರ ಮಾರ್ಗದರ್ಶನಕ್ಕೆ ಎಷ್ಟು ಧನ್ಯವಾದ ಹೇಳ್ಬೇಕು ಲೆಕ್ಕ ಹಾಕಿ. ಹಂಗೇ ಬಲಕ್ಕೆ ತಗೊಂಡು ಮುಂದೆ ಹೋದ ನಾವು ದಾರಿಯಲ್ಲಿ ಸಿಕ್ಕ ಮತ್ತೊಬ್ಬರ ಹತ್ತಿರ ದಾರಿ ಕೇಳ್ಕೊಂಡು ಅದನ್ನ ಖಚಿತಪಡಿಸಿಕೊಂಡಿವಿ ಅನ್ನೋದು ಬೇರೆ ಮಾತು ಬಿಡಿ.
|
Kanchikai Cross, Observe the board which is fallen which mentions 9.5 km to Bandala |
ಸರ್ಕಾರಿ ಬಸ್ಸುಗಳು ಹೆಗ್ಗರಣೆ ಊರಿನವರೆಗೆ ಬರುತ್ತೆ. ಅಲ್ಲಿಂದ ೨ ಕಿ.ಮೀ ಮುಂದೆ ಬಂದ್ರೆ ಅರಣ್ಯ ಇಲಾಖೆಯ ಚೆಕ್ ಪೋಸ್ಟು. ಅಲ್ಲಿ ಸಂಜೆ ಆರರವೊಳಗೆ ವಾಪಾಸ್ ಬರ್ಬೇಕು ಅಂತ ಹೇಳಿ ನಮ್ಮ ಹೆಸರು, ಮೊಬೈಲು, ಬಂದ ಊರು, ಗಾಡಿ ನಂಬರ್ ಎಲ್ಲಾ ತಗೊಂಡು ಒಳಗೆ ಬಿಡ್ತಾರೆ. ಕರ್ನಾಟಕದ ತಾಣಗಳಲ್ಲೂ ಈ ಕೇರಳದ ಶಿಸ್ತಿನ ಸಂಸ್ಕೃತಿ ಬರ್ತಾ ಇರೋದು ಆ ತಾಣಗಳ ಸಂರಕ್ಷಣೆಯ ದೃಷ್ಠಿಯಿಂದ ತುಂಬಾ ಒಳ್ಳೇದು. ಆ ನಿಟ್ಟಲ್ಲಿ ನಮ್ಮ ಪ್ರವಾಸೋದ್ಯಮದ ಬಗ್ಗೆ ಖುಷಿಯಾಯ್ತು.
ಅಲ್ಲಿಂದ ಉಂಚಳ್ಳಿ ಜಲಪಾತಕ್ಕೆ ೨ ಕಿ.ಮೀ. ಕೆಪ್ಪ ಜೋಗ ಅಂತ ಸ್ಥಳೀಯರ ಬಾಯಲ್ಲಿದ್ದ ಈ
ಜಲಪಾತವನ್ನ ಬ್ರಿಟಿಷ್ ಅಧಿಕಾರಿ ಲುಂಸಿಂಗ್ಟನ್ ಅನ್ನುವವನು ಕಾಡ ಮಧ್ಯೆ
ಕಂಡುಹಿಡಿದದ್ದಕ್ಕಾಗಿ ಅವನ ಹೆಸರೇ ಇಡೋ ಪ್ರಯತ್ನವೂ ನಡೆದಿತ್ತು. ಆದ್ರೆ ಶಿವರಾಜ್
ಕುಮಾರರ "ನಮ್ಮೂರ ಮಂದಾರ ಹೂವೇ" ಚಿತ್ರದಲ್ಲಿ ಉಂಚಳ್ಳಿ ಫಾಲ್ಸ್ ಅಂತ ಬಂದಾದ ಮೇಲೆ ಹಾಗೇ
ಪ್ರಸಿದ್ದವಾಗಿಬಿಟ್ಟಿದೆ ಇದು.ಶಿರಸಿಗೆ ಹೋಗೋರೆಲ್ಲಾ ಉಂಚಳ್ಳಿ ಉಂಚಳ್ಳಿ ಅನ್ನೋ
ಮಟ್ಟಿಗೆ ಪ್ರಸಿದ್ದವಾಗಿಬಿಟ್ಟಿದೆಯಿದು. ಇದು ಅದ್ಯಾಕೆ ಅಷ್ಟು ಪ್ರಸಿದ್ದ ಅಂತ ಅದ್ರ
ಬುಡಕ್ಕೆ ಹೋದಾಗ್ಲೇ ಗೊತ್ತಾಗಿದ್ದು.
|
Unchalli Falls |
|
Unchalli falls in motion |
|
Me, Giri infront of Unchalli falls |
ಉಂಚಳ್ಳಿಯಿಂದ ಸಿದ್ದಾಪುರಕ್ಕೆ:
ಉಂಚಳ್ಳಿಯ ಫಾಲ್ಸು ಅಷ್ಟು ಅದ್ಭುತವಾಗಿದ್ರೂ ಆ ತಾಣವನ್ನು ನಿರ್ವಹಿಸುತ್ತಿರೋ ಬಗ್ಗೆ ಬೇಸರವಾಗುತ್ತೆ. ಅಲ್ಲಿರೋ ಒಂದೇ ಒಂದು ಶೌಚಗೃಹವೂ ನಿರ್ವಹಣೆಯಿಲ್ಲದೇ ಪಾಳು ಬಿದ್ದಿದೆ :-( ಘಂಟೆ ಐದೂಮುಕ್ಕಾಲಾಗ್ತಾ ಬಂದಿದ್ರಿಂದ , ರಾತ್ರೆಯಾಗೋದ್ರೊಳಗೆ ಸಾಗರ ಸೇರ್ಕೊಳ್ಳಬೇಕಾಗೂ ಇದ್ದಿದ್ರಿಂದ ಇಲ್ಲಿಂದ ಸಿದ್ದಾಪುರಕ್ಕೆ ಹೋಗೋ ನೇರವಾದ ದಾರಿಯೇನಾದ್ರೂ ಇದೆಯಾ ಅಂತ ಅಲ್ಲಿದ್ದವರಿಗೆ ಕೇಳಿದ್ವಿ. ಅವ್ರು ಹೇಳಿದ ದಾರಿಯ ಪ್ರಕಾರ ಬಂದಿದ್ದಕ್ಕೆ ಶಿರಸಿಗೆ ೪೧ ಕಿ.ಮೀ ಹೋಗಿ ಅಲ್ಲಿಂದ ಸಿದ್ದಾಪುರಕ್ಕೆ ಮತ್ತೆ ೨೫ ಕಿ.ಮೀ ಹೋಗೋದು ಉಳೀತು. ಉಂಚಳ್ಳಿಯಿಂದ ಬರೋ ರಸ್ತೆಯಲ್ಲಿದ್ದ ಬ್ರಿಡ್ಜೊಂದು ಬಿದ್ದು ಹೋಗಿ ೩೦ ಕಿ.ಮೀಯ ದಾರಿ ಮಿಸ್ಸಾಗಿ ಹೆರೂರ ಮೇಲೆ ಬರೋ ಹಾಗಾಯ್ತು.
ಈ ಚಿತ್ರದಲ್ಲಿರೋ ಗೋಳಿಮಕ್ಕಿಯ ಬಳಿಯಿರೋ ಆಂಜನೇಯನ ಪಕ್ಕದಲ್ಲಿ ಸೀದಾ ಹೋದ್ರೆ ಸಿಗೋದು ಗೋಳಿಮಕ್ಕಿ ಊರು.ಎಡಕ್ಕೆ ಹೋದ್ರೆ ಹೆರೂರು. ನಮಗೆ ಉಂಚಳ್ಳಿಯವರೊಬ್ಬರು ಗೋಳಿಮಕ್ಕಿ, ಕಾನುಸೂರ ಮೇಲೆ ಸಿದ್ದಾಪುರ ಹೋಗಬಹುದು ಅಂದಿದ್ರು. ಗೋಳಿಮಕ್ಕಿ ಎಲ್ಲಿ ಅಂತ ಗೊತ್ತಿಲ್ಲದ ನಾವು ಈ ಬೋರ್ಡಿಗೆ ಮುಂಚೆ ಕೇಳಿದಾಗ ದಾರಿ ತೋರಿಸಿದವರೊಬ್ಬರು ಸೀದಾ ಹೋಗೋಕೆ ಹೇಳಿದ್ರು.
ಇಲ್ಲಿ ಸಿದ್ದಾಪುರದ ಬೋರ್ಡು ನೋಡಿ ನಾವು ಬಲಕ್ಕೆ ತಿರುಗಿ ಗೋಳಿಮಕ್ಕಿಗೆ ಹೋಗಿದ್ವಿ. ಅಲ್ಲಿಂದ ನಮಗೆ ಮತ್ತೆ ಎಡಕ್ಕೆ ತಿರುಗೋಕೆ ಹೇಳಿದ್ರು.ಅಲ್ಲಿಂದ ಸ್ವಲ್ಪ ಮುಂದೆ ಬಂದ್ರೆ ಮತ್ತೆ ಉಂಚಳ್ಳಿ ೧೧ ಕಿ.ಮೀ ಅನ್ನೋ ಬೋರ್ಡು.
|
We came from Unchalli falls via golimakki. There is one more way at our right which shows direction to Unchalli again ! |
ನಮಗೆ ದಾರಿ ಹೇಳಿದವರು ಮತ್ತೊಂದು ರಸ್ತೆಯಿಂದ ಆ ಕತ್ರಿಗೆ ಬಂದು ಸೇರಿದ್ರು. ಯಾವ ರಸ್ತೆಯಿಂದ ಬಂದ್ರಿ ಅಂತ ನಮ್ಮನ್ನ ನೋಡಿ ನಗುತ್ತಿದ್ದ ಅವರು ಕಾನಸೂರಿನ ರಸ್ತೆ ತೋರಿಸುತ್ತಾ ಮುಂದೆ ಸಾಗಿದ್ರು. ಉಂಚಳ್ಳಿಯಲ್ಲಿ ಹೇಳಿದವ್ರು, ಗೋಳಿಮಕ್ಕಿಯ ಊರೊಳಗೆ ಹೋಗೋದ ತಪ್ಪಿಸಿ ಶಾರ್ಟುಕಟ್ಟು ಹೇಳಿದವರು, ಗೋಳಿಮಕ್ಕಿಯ ಊರವರು ಹೇಳಿದ ದಾರಿ ಎಲ್ಲವೂ ಸರಿಯೇ ಆಗಿತ್ತು !! ಆದ್ರೆ ಬ್ರಿಡ್ಜ್ ಮುರಿದೋಗಿದ್ದು ಗೊತ್ತಿಲ್ಲದೇ ಅಲ್ಲಲ್ಲಿ ಸಿಗುತ್ತಿದ್ದ ಬೋರ್ಡುಗಳ ನೋಡಿ ನಾವೇ ಗೊಂದಲಕ್ಕೆ ಬಿದ್ದಿದ್ವಿ. ಬ್ರಿಡ್ಜ್ ಬಿದ್ದು ಆ ರಸ್ತೆಯಿಲ್ಲ ಅಂದ್ರೆ ಆ ಬೋರ್ಡನ್ನು ಯಾಕೆ ತೆಗೆಯೋಲ್ಲ ಅಥವಾ ಬಿದ್ದು ಒಂದೂವರೆ ವರ್ಷವಾದ್ರೂ ಯಾಕೆ ಸರಿ ಮಾಡಲ್ಲ ಅನ್ನೋದು ಅರ್ಥವಾಗ್ಲಿಲ್ಲ. ಕಾನುಸೂರಿಗೆ ತಲುಪಿದ ನಾವು ಅಲ್ಲಿಂದ ಸಿದ್ದಾಪುರ ತಲುಪೋ ಹೊತ್ತಿಗೆ ಗಿರಿಗೆ ಹೊಟ್ಟೆಗೇನಾದ್ರೂ ಹಾಕ್ಲೇ ಬೇಕು ಅಂತ. ಕಾನಸೂರಿನ ಅಯ್ಯಂಗಾರ್ ಬೇಕರಿಯಲ್ಲೂ ಗಿರಿಗೆ ವೆಜ್ ಪಫ ಸಿಕ್ಕಿರಲಿಲ್ಲ. ಆ ಬೇಕರಿಯಲ್ಲಿ ಸಿಗದ ಟೀಗೋಸ್ಕರ ಇನ್ನೊಂದು ಹೋಟೇಲಿಗೆ ಹೋಗೋದ್ಯಾಕೆ, ಸಿದ್ದಾಪುರದಲ್ಲಿ ಸಿಗುತ್ತೆ ಬನ್ನಿ ಅಂತ ಮುಂದೆ ಕರ್ಕೊಂಡು ಬಂದಿದ್ದೆ. ಅಂತೂ ಸಿದ್ದಾಪುರದಲ್ಲೊಂದು ಸಾಗರ, ಶಿರಸಿ, ಸಿದ್ದಾಪುರ ಶೈಲಿಯ ಮಸಾಲೆಪೂರಿ ಹಾಕ್ಕೊಂಡು ಸಾಗರದ ನಮ್ಮನೆ ತಲುಪಿದ್ವಿ ಅನ್ನುವಲ್ಲಿಗೆ ನಮ್ಮ ಮೂರು ದಿನಗಳ ಬೈಕ್ ಪಯಣಕ್ಕೊಂದು ಬ್ರೇಕ್ ಬಿದ್ದಿತ್ತು. ಮಾರನೇ ದಿನದ ಗಣಪತಿ ಹಬ್ಬ,ಹಬ್ಬದ ತಿಂಡಿಗಳು, ವರದಹಳ್ಳಿಯ ಶ್ರೀಧರಾಶ್ರಮ, ಧರ್ಮಧ್ವಜ, ಅಮ್ಮನವರ ದೇವಸ್ಥಾನ, ಬೃಂದಾವನಗಳು ನಮ್ಮ ಹಾದಿ ಕಾಯುತ್ತಿತ್ತು.