Wednesday, December 14, 2016

ನೂರ್ನಳ್ಳೀಲಿ ಅವ-೫

(ಹಿಂದಿನ ಭಾಗ: ನೂರ್ನಳ್ಳಿಲಿ ಅವ -೪)
ಮೊನ್ನೆ ಬಸ್ಸಲ್ಲೊಬ್ಬ ಅಪರಿಚಿತ ಸಿಕ್ಕು ತನ್ನ ಹೆಸರಿಡಿದು ಕರೆದಾಗಿಂದ, ಅದ್ರಲ್ಲೂ ತನ್ನ ತಾಯಿ ತಿಮ್ಮವ್ವನ ಬಗ್ಗೆ ಕೇಳಿದಾಗಿನಿಂದ್ಲೂ ಡ್ರೈವರ್ ಬಸಣ್ಣನ  ಮನಸ್ಸಲ್ಲಿ ಏನೋ ಒಂತರ ಕಸಿವಿಸಿ. ಅವ ಯಾರು ? ಎಲ್ಲಿಂದ ಬಂದ ? ಇಷ್ಟು ದಿನ ಬರದೇ ಇದ್ದೋನು ಈಗ್ಲೇ ಯಾಕೆ ಬಂದ ? ಮೊನ್ನೆ ರಾತ್ರಿಯಿಂದ ಅಂಗಡಿ ಜಾಫರ್ ಸಾಹೇಬ್ರು ಕಾಣೆಯಾಗಿದ್ದಕ್ಕೂ, ನಿನ್ನೆ ಸಂಜೆಯಿಂದ ದೇವಸ್ಥಾನದ ಭಟ್ರು ಕಾಣೆಯಾಗಿದ್ದಾರೆ ಅಂತ ಊರಲ್ಲೆಲ್ಲಾ ಹೇಳ್ತಾ ಇರೋದಕ್ಕೂ ಇವನಿಗೂ ಏನಾದ್ರೂ ಸಂಬಂಧ ಇದೆಯಾ ? ಇಲ್ಲವಾ ? ಏನೂ ಗೊತ್ತಾಗ್ತಿಲ್ವಪ್ಪಾ ಅಂದ್ಕೊಳ್ಳೋ ಹೊತ್ತಿಗೇ ಭಾರೀ ಸದ್ದು. ಎದುರಿಂದ ಅವ ಓಡಿ ಬಂದಂತೆ, ನನ್ನ ಬದಿಗೆ ತಳ್ಳುತ್ತಿರುವಂತೆ..ಅದು ಅವನೇನಾ ? ..ಹೌದೇ ಹೌದು..ಆದರೆ ಯಾರೋ ಜಗ್ಗಿ ಕೆಳಕ್ಕೆಳೆದಂತೆ ತಲೆ ಭಾರವಾಗುತ್ತಿದೆ..ಕಣ್ಣೆದುರ ದೃಶ್ಯಗಳೆಲ್ಲಾ ಒಂದು ಅಗೋಚರ ಶೂನ್ಯದೊಳಗೆ  ಮರೆಯಾಗುತ್ತಿವೆ.
***

ಹಿಂದಿನೆರೆಡು ದಿನಗಳಿಂದ ಊರವರು ಹೇಳೋ ಹೊಸ ಹೊಸ ಕತೆಗಳನ್ನ ಕೇಳಿ ಹೈರಾಣಾಗಿದ್ದ ತಿಮ್ಮವ್ವನಿಗೆ ಯಾವುದನ್ನು ನಂಬಬೇಕೋ ಯಾವುದನ್ನು ಬಿಡಬೇಕೋ ಗೊತ್ತಾಗುತ್ತಿರಲಿಲ್ಲ. ಹೊಳೆ ಹತ್ರ ಹುಲಿ ಇದೆ ಅಂದ್ರೂ ಹೆದರ್ತಿರಲಿಲ್ಲವೇನೋ ಅವಳು. ಆದರೆ ಆ ಹೊಸಬನೇನಾದ್ರೂ ಹೊಳೆ ಹತ್ರ ಎದುರಾಗಿ ಬಿಟ್ರೆ ಏನು ಮಾಡ್ತೀಯ ತಿಮ್ಮವ್ವ. ಒಬ್ಬೊಬ್ಳೆ ಬಟ್ಟೆ ತೊಳ್ಯೋಕೆ ಹೋಗ್ಬೇಡ ಅಂತಿದ್ದವರ ಮಾತುಗಳು ಅವಳಿಗೆ ಒಂಚೂರು ಹೆದರಿಕೆ ಹುಟ್ಟಿಸಿದ್ದವು.ಆದ್ರೆ ಮದುವೆಯಾಗಿ ಬಂದಾಗಿಂದನೂ ಜೀವನದ ಅರ್ಧವನ್ನೇ ಕಳೆದ ಹಳ್ಳಿಯಿದು. ಇಲ್ಲೇ ನನ್ನ ಸಾವು ಬರೆದಿದ್ರೆ ಯಾರೇನು ಮಾಡೋಕಾಗಲ್ಲ ಬಿಡಿ ಅಂದ್ಕೋತಾ ತನಗೆ ತಾನೇ ಧೈರ್ಯ ತಂದ್ಕೋತಾ ಬಾವಿಹೊಳೆಯತ್ತ ಹೊರಟಿದ್ದಳು ತಿಮ್ಮವ್ವ.ಯಾರೋ ಏನೋ ಹೇಳಿದ್ದರೆ ಏನೂ ಅನ್ನಿಸುತ್ತಿರಲಿಲ್ಲವೇನೋ. ಸ್ವಂತ ಮಗ, ಪಕ್ಕದ ಮನೆ ಮರಿಯಣ್ಣಂದಿರು ಹೇಳಿದ ಮಾತು ಸ್ವಲ್ಪ ಆಶ್ಚರ್ಯವನ್ನೂ ಗಾಬರಿಯನ್ನೂ ಹುಟ್ಟಿಸಿತ್ತು. ಅದ್ಯಾರೋ ಹೊಸಬನಂತೆ. ಅವನನ್ನು ಊರಲ್ಲಿ ನೋಡೇ ಇಲ್ಲವಂತೆ. ಆದರೂ ಅವನಿಗೆ ಮರಿಯಣ್ಣ ಗೊತ್ತು,ನನ್ಮಗ ಬಸಣ್ಣ ಗೊತ್ತು, ಚಂದ್ರೇ ಮೇಷ್ಟ್ರೂ ಗೊತ್ತು. ಇಷ್ಟೆಲ್ಲಾ ಪರಿಚಯ ಇರೋನು ಯಾರಿರಬಹುದು ಅಂತ ಯೋಚ್ನೆ ಮಾಡ್ತಿರಬೇಕಾದ್ರೆ ಅವನಿಗೆ ಪೂಜಾರಿಗಳು, ಅಂಗಡಿ ಜಾಫರ್ ಗೊತ್ತಿದ್ರೂ ಇರ್ಬೋದೇನೋ ಅನಿಸ್ತು. ಆದ್ರೆ ಗೊತ್ತಿದ್ದ ಮಾತ್ರಕ್ಕೆ ಊರವರೆಲ್ಲಾ ಹೇಳ್ತಿರೋ ತರ ಅವ ಅವರಿಗೆ ಕೆಡುಕು ಬಯಸ್ತಾನೆ ಅಂತ ಯಾಕೆ ಅಂದ್ಕೋಬೇಕು ? ಕೆಡುಕು ಅಂದ ತಕ್ಷಣ ನೆನಪಾಯ್ತು. ಊರಿಗೆ ಯಾರ್ಯಾರೋ ಬರ್ತಿದ್ದಾರೆ ಈಗ. ಮೊನ್ನೆಯಷ್ಟೇ ಲಾರಿ ಮೇಲೆ ಅದೆಂತದೋ ಯಂತ್ರಾನ ಊರ ಹಿಂದಿನ ಗುಡ್ಡದತ್ತ ತಗೊಂಡು ಹೋಗೋದ್ನ ನೋಡಿದ್ದೆ.ಮಗನ ಬಸ್ಸಿಗೂ ಅಡ್ಡ ಬಂದ ಯಾರೋ ಲಾರಿ ಡ್ರೈವರನಿಗೂ ಮಗಂಗೂ ಮಾತಿಗೆ ಮಾತು ಬೆಳೆದಿತ್ತಂತೆ. ಆತ ನೂರ್ನಳ್ಳಿಯವನಲ್ವಾ ? ನೊಡ್ಕೋತೀನಿ ಅಂತ ಬೇರೆ ಅಂದಿದ್ನಂತೆ . ನಾ ನೋಡಿದ ಲಾರಿಯವನಾ ಮಗನಿಗೆ ಸಿಕ್ಕ ಲಾರಿಯವನು ? ಮಗನತ್ರ ಗುಡ್ಡದ ವಿಷ್ಯ ಮಾತಾಡ್ಬೇಕು ಅಂತ ಅದೆಷ್ಟು ಸಲ ಅಂದ್ಕೊಂಡ್ರೂ ಮರ್ತೇ ಹೋಗತ್ತೆ. ಅದಕ್ಕೂ ಈ ಹೊಸ ಮನುಷ್ಯಂಗೂ ಏನಾದ್ರೂ ಸಂಬಂಧ ಇದ್ಯಾ ? ಅವ ಭೇಟಿ ಮಾಡಿದವರೆಲ್ಲಾ ಮಾಯ ಆಗ್ತಾ ಇದ್ದಾರೆ ಅಂದ್ರೆ ನನ್ನ ಮಗನಿಗೂ ಏನಾದ್ರೂ ಅಪಾಯ... ಛೇ ಛೇ. ಹಂಗೆಲ್ಲಾ ಏನೂ ಆಗೋಲ್ವೇನೋ. ವಯಸ್ಸಾದ ಮನಸ್ಸು ಯಾವಾಗ್ಲೂ ಬೇಡದ್ದೇ ಯೋಚಿಸ್ತಿರತ್ತೆ. ಏನೇ ಆಗ್ಲಿ ನನ್ನ ಮಗನಿಗೆ ಇದ್ರ ಬಗ್ಗೆ ಆದಷ್ಟು ಬಗ್ಗೆ ಎಚ್ಚರಿಸಬೇಕು ಅಂತ ತಂದ ಬಟ್ಟೆಗಳನ್ನೆಲ್ಲ ಗಡಿಬಿಡೀಲಿ ತೊಳೆದು ಮನೆಯತ್ತ ದಾಪುಗಾಲಿಕ್ಕಿದಳು.
***

ನೀರ್ನಳ್ಳಿ, ನೂರ್ನಳ್ಳಿಗಳ ಮಧ್ಯೆ ಹರಿಯೋ ಬಾವಿಹೊಳೆ ಎರಡೂ ಹಳ್ಳಿಗಳ ಜೀವನಾಡಿ. ನೂರ್ನಳ್ಳಿಯ ಹಸಿರಸಿರಿಗೆ ಮುಕುಟಪ್ರಾಯವಾಗಿದ್ದ ನೂರ್ಮನೆಗುಡ್ಡದ ನಂಬೋಶಿಖರವೇ ಬಾವಿಹೊಳೆಯ ಉಗಮಸ್ಥಾನ. ಪರಶಿವನ ಜಟೆಗಳಿಂದ ಧುಮುಕೋ ಗಂಗೆ ಭುವಿಗೆ ಹರಿದು ಸಗರರಿಗೆ ಮೋಕ್ಷವಿತ್ತಂತೆ ನಂಬೋಶಿಖರದಿಂದ ನೂರ್ನಳ್ಳಿ, ನೀರ್ನಳ್ಳಿಗಳಂತಹ ನೂರಾರು ಹಳ್ಳಿಗಳ ಉದ್ದಾರಕ್ಕಾಗೇ ಬಾವಿಹೊಳೆಯಾಗಿ ದೇವಿಯೊಬ್ಬಳು ಅವತರಿಸಿದ್ದಾಳೆ ಎಂಬುದು ಇಲ್ಲಿನ ಜನರ ನಂಬಿಕೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರೆಯಿರಬಹುದು, ಉಕ್ಕಿ ಹರಿದಾಗ ಪಡೆಯೋ ಬಾಗಿನಗಳಿರಬಹುದು. ಮದುವೆ ಮುಂಜಿಗಳ ಸಂತಸದಿಂದ ಸತ್ತವರ ತರ್ಪಣದವರೆಗೆ ಎಲ್ಲರಿಗೂ ಬೇಕಾಗೋ ಬಾವಿಹೊಳೆಯಿಲ್ಲದ ಬದುಕಿಲ್ಲವಿಲ್ಲಿ. ಹೊಳೆ ಹರಿದ ಕಣಿವೆಗಳಾಚೆಯೇ ಬೆಳೆದ ಅಡಿಕೆ ತೋಟಗಳಾಗಿರಬಹುದು, ನದಿಯನ್ನೇ ನಂಬಿರೋ ಭತ್ತ, ಕಬ್ಬುಗಳಾಗಿರಬಹುದು. ಬೇಸಿಗೆಯಲ್ಲೂ ಬತ್ತದ ಬಾವಿಹೊಳೆಯ ನಂಬಿ ಬದುಕು ಕಟ್ಟಿಕೊಂಡ ಜೀವಗಳೆಷ್ಟೋ.ಅಕಸ್ಮಾತ್ ಆಗಿ ಬಾವಿಹೊಳೆಗೇನಾದರೂ ಆಗಿ ಅದು ಬತ್ತಿತೆಂದರೆ ? .. ಶಾಂತಂ ಪಾಪಂ.. ಊರವರು ಕನಸಿನಲ್ಲೂ ಆಲೋಚಿಸೋಕಾಗದ ಘಟನೆಯದು. ಅಕಸ್ಮಾತ್ ಹಾಗೇನಾದ್ರೂ ಆಯ್ತು ಅಂದ್ರೆ ಏನ್ಮಾಡೋದು ಅನ್ನೋ ಆಲೋಚನೆ ಊರೊಳಿಗನವರಿಗೆ ಬಾರದಿದ್ದರೂ ನದಿಯ ದಂಡೆಯಲ್ಲೇ ಕೂತು ಆಲೋಚಿಸುತ್ತಿದ್ದ ಅವನ ಮುಖಭಾವದಲ್ಲಿ ವ್ಯಕ್ತವಾಗುತ್ತಿತ್ತು. ದೇವಸ್ಥಾನದ ಅಭಿಶೇಷಕ್ಕೆ, ಪಂಚಾಯ್ತಿ ಅನುದಾನಕ್ಕೆ ಅಂತ ಊರಲ್ಲೊಂದೆರೆಡು ಬಾವಿಗಳಿದ್ದರೂ ಊರ ಜೀವನಾಡಿ ಬಾವಿಹೊಳೆಯೇ. ಅಂತಿಪ್ಪ ಬಾವಿಹೊಳೆ ಬತ್ತಿದರೆ ಬಿದ್ದು ಸಾಯೋಕೆ ಅಂದರೂ ಊರಲ್ಯಾವುದೂ ಕೆರೆಯಿಲ್ಲ. ಬಾವಿಗೂ ಪಕ್ಕದೂರಿಗೆ ಹೋಗಬೇಕಾಗುತ್ತೆ ಅನ್ನೋ ಆಲೋಚನೆ ಸುಳಿದು ಅವನ ಮುಖದ ಚಿಂತೆಯಲ್ಲೂ ಒಮ್ಮೆ ನಗುವರಳಿತು. ಭೂಗರ್ಭವಗೆಯೋ ಜೇಸಿಬಿ, ಲಾರಿಗಳು ಪಟ್ಟಣದ ಎಂತೆಂತಾ ಕೆರೆಗಳನ್ನೇ ಬಸ್ಟಾಂಡೋ, ಕ್ರೀಡಾಂಗಣವನ್ನೋ ಆಗಿಸಿರುವಾಗ ಈ ಊರ ಬಾವಿಹೊಳೆಯೋ, ನಂಬೋಶಿಖರವೋ ಯಾವ ಲೆಕ್ಕ. ಏನೋ ಒಂದಿಷ್ಟು ಅದಿರು ಸಿಗುತ್ತೆ ಅಂದ್ರೆ ಸಿಕ್ಕವರಿಗೆಲ್ಲಾ ಒಂದಿಷ್ಟು ಗಿರ್ಮಿಟ್ ತಿನ್ಸಿ ಪರ್ಮಿಟ್ ಗಿಟ್ಸಿ ಹಸಿರಕಾಡನ್ನ ಬರಗಾಡನ್ನಾಗಿ ಮಾಡೋದು ದೊಡ್ಡ ವಿಷ್ಯವಲ್ಲ ಕೆಲೋರಿಗೆ. ಅಂತವರ ಕಣ್ಣು ನೂರ್ನಳ್ಳಿಯ ಮೇಲೆ ಬಿದ್ದಿದ್ದು ಎಲ್ಲೋ ಇದ್ದ ಇವನನ್ನ ಇತ್ತ ಹೊರಳಿಸಿತ್ತು. ಆಲೋಚನಾ ಲಹರಿಯಲ್ಲಿ ಇವ ಕಳೆದುಹೋಗಿದ್ದಾಗಲೇ ಪಡುವಣದತ್ತ ಹೊರಡುತ್ತಿದ್ದ ರವಿಯಿಂದ ಆಗಸವೆಲ್ಲಾ ಕೆಂಪಾಗುತ್ತಿದ್ದಂತೆ ಬಾವಿಹೊಳೆಯ ಬಣ್ಣವೂ ಬದಲಾಗುತ್ತಿತ್ತು. ಕೊನೆಗೂ ಎದ್ದು ತನ್ನ ಮುಂದಿನ ಕಾರ್ಯಗಳ ಬಗ್ಗೆ ಆಲೋಚಿಸುತ್ತಾ ಹೊರಟಿದ್ದವನಿಗೆ ಬಸಣ್ಣ ಅನಿರೀಕ್ಷಿತವಾಗಿ ಎದುರಾಗಿದ್ದ.
***

ಊರದೇವಸ್ಥಾನದ ಎದುರಿನ ಅರಳಿ ಕಟ್ಟೆಗೆ ಎಷ್ಟೋ ದಿನಗಳಾದ ಮೇಲೆ ಇವತ್ತು ಕಳೆ ಬಂದಿತ್ತು. ಊರ ಪಂಚರಾದ ಗೌಡ್ರು, ಚಂದ್ರೇ ಮೇಷ್ಟು ಡ್ರೈವರ್ ಬಸಣ್ಣನ ಬರುವಿಕೆಯನ್ನ ಕಾಯ್ತಾ ಅತ್ತಿಂದಿತ್ತ ತಿರುಗ್ತಾ ಇದ್ರೆ ಎದುರಿಗೆ ಕೂತಿದ್ದ ಎಲ್ಲಾ ಜನಗಳ ನೋಟ ಇವರ ಮೇಲಿತ್ತು. ಪಂಚರಲ್ಲಿ ಇಬ್ಬರಾದ ಅಂಗಡಿ ಜಾಫರ್ ಸಾಹೇಬ್ರು, ದೇವಸ್ಥಾನದ ಪೂಜಾರಿಗಳು ಕಾಣೆಯಾಗಿದ್ರು. ಊರಿನ ಪ್ರಮುಖರೆಲ್ಲಾ ಕಾಣೆಯಾಗ್ತಿದ್ದಾರೆ ಅನ್ನೋ ಸುದ್ದಿ ಬರ್ತಿರುವಾಗ ಈಗ ಬಸಣ್ಣನೂ ಮಾಯವಾಗಿದ್ದಾನೆ. ಅವ್ನಿಗೆ ಏನಾಯ್ತೋ ಏನೋ ? ಮುಂದಿನ ಸರದಿ ನಮ್ಮದೇ ಮೇಷ್ಟೇ ಅಂತ ಗೌಡ್ರು ಗಾಬರಿಯಿಂದ ಹೇಳ್ತಾ ಇದ್ರೆ ಅವರನ್ನು ಸಮಾಧಾನಿಸೋ ಸರದಿ ವಯೋವೃದ್ಧರಾದ ಚಂದ್ರೇ ಮೇಷ್ಟ್ರದ್ದು. ಹಂಗೆಲ್ಲ ಏನಿಲ್ಲ ಗೌಡ್ರೆ. ಬಂದಿರೋನು ಯಾರೋ ಏನೋ ಗೊತ್ತಿಲ್ಲ. ಜಾಫರ್ ಸಾಹೇಬ್ರು, ಅರ್ಚಕರು ಬೇರೆ ಬೇರೆ ಕೆಲಸಗಳಿಗಾಗಿ ಎಲ್ಲೋ ಹೋಗಿರಬಹುದು. ಇವತ್ತು ನಾಳೆ ಹಂಗೆ ಬರ್ಬೋದು. ಆ ವಿಷ್ಯ ಚರ್ಚಿಸೋಕೆ ಅಂತಲೇ ಇವತ್ತು ಸಭೆ ಸೇರಿದ್ದೀವಲ್ಲ.  ಮಾತಾಡಿದ್ರಾಯ್ತು ಬಿಡಿ. ಗಾಬರಿಯಾಗ್ಬೇಡಿ ಅಂದ್ರು . ಆದ್ರೆ ಈ ಬಸಣ್ಣ .. ಅಂತಿರುವಾಗ , ಬಸಣ್ಣ ಯಾವತ್ತೂ ಸಭೆಗೆ ಲೇಟಾಗಿ ಬಂದವನಲ್ಲ. ಇವತ್ತು ಯಾಕಿನ್ನೂ ಬಂದಿಲ್ಲ ಅಂತ ಅವನ ಮನೆಗೆ ಒಬ್ಬನ್ನ ಕಳಿಸಿದೀವಲ್ಲ. ಅವ್ನೂ ಬರೋ ಹೊತ್ತಾಯ್ತಲ್ಲ. ತಡೀರಿ ಅನ್ನೋ ಹೊತ್ತಿಗೆ ಒಬ್ಬ ಓಡೋಡ್ತಾ ಬಂದ.. ಬಸಣ್ಣ ಮನೇಲಿಲ್ಲ ಅಂತ ಏದುಸಿರು ಬಿಡ್ತಾ ಹೇಳ್ತಿರುವಾಗ ತಿಮ್ಮವ್ವ ? ಅಂದ್ರು ಗುಂಪಲ್ಲಿದ್ದ ಕೆಲೋ ಹೆಂಗಸ್ರು ಗಾಬರಿಯಿಂದ. ತಡೀರಿ ಹೇಳ್ತೀನಿ ಅನ್ನುವಂತೆ ಸಂಜ್ಞೆ ಮಾಡುತ್ತಾ ಅವಳೂ ಇಲ್ಲ ಮನೇಲಿ. ಮನೆಗೆ ಬೀಗ ಹಾಕಿದೆ ಅಂತ ಅವ ಹೇಳ್ತಿರುವಂತೆ ಅಲ್ಲಿದ್ದೋರ ಕಣ್ಣು ಬಾಯಿಗಳೆಲ್ಲಾ ಅಚ್ಚರಿ, ಗಾಬರಿಗಳಿಂದ ತೆರೆದುಕೊಂಡವು. ಎಲ್ಲಿಂದ್ಲೋ ಬಂದವನೊಬ್ಬ ನಮ್ಮೂರಲ್ಲಿರೋರ್ನೆಲ್ಲಾ ನುಂಗಕ್ಕತ್ಯಾನ್ರೋ ಅಂದ ಒಬ್ಬ. ಇಷ್ಟು ದಿನ ಊರ ಪಂಚರನ್ನ ನುಂಗ್ತಿದ್ದ. ಇವತ್ತು ತಿಮ್ಮವ್ವನ್ನೂ ನುಂಗಿದಾನೆ. ಏನ್ಮಾಡಿದ್ಲವ್ವ ತಿಮ್ಮವ್ವ. ಯಾರಿಗೂ ಒಂದ್ಮಾತು ಬಯ್ಯೋಳಲ್ಲ ಅವಳು. ಅಂತಾ ತಿಮ್ಮವ್ವನ್ನ .. ಅಂತ ಒಬ್ಬರು ಕಣ್ಣಂಚಲ್ಲಿ ಜಾರುತ್ತಿದ್ದ ಕಣ್ಣೀರೊರೆಸಿಕೊಳ್ಳುತ್ತಾ ಹೇಳೋ ಹೊತ್ತಿಗೆ ಗುಂಪಲ್ಲಿದ್ದವರಿಂದ ತಲೆಗೊಂದು ಮಾತುಗಳು ಕೇಳಿಬರತೊಡಗಿದವು. ಗೊತ್ತಿಲ್ಲದೇ ಇರೋನ್ಯಾರೋ ಇದ್ನೆಲ್ಲಾ ಮಾಡ್ತಿದ್ದಾನೆ ಅಂತ ಹೆಂಗೆಳ್ತೀರ ? ಏನಾದ್ರೂ ಮಾಡೋದೆ ಆಗಿದ್ರೆ ಅವ್ರ ಮನೆಗೆ ಬೀಗ ಹಾಕಿಸಿ ಅವ್ರನ್ನ ನಾಪತ್ತೆ ಮಾಡಿಸ್ತಿದ್ನ . ಬೇರೇನೋ ಇದೆ ವಿಷ್ಯ ಇಲ್ಲಿ ಅಂದ ಒಬ್ಬ. ಪಂಚರು ನಮಗೆ ಗೊತ್ತಿಲ್ಲದಂಗೆ ಏನೋ ಮಾಡ್ತಿರಬೇಕು. ಅದಕ್ಕೇ ಅವರೆಲ್ಲಾ ಮಾಯವಾಗ್ತಿದ್ದಾರೆ ಅಂದ ಇನ್ನೊಬ್ಬ.ಅದಕ್ಕೆ ಉತ್ತರ ಕೊಡೋಕೆ ಅಂತ ಮಗದೊಬ್ಬ ಎದ್ದ. ಬಂದವನ ಪರ ವಿರೋಧಗಳಿಗೆ, ತಟಸ್ಥವಾಗಿ ಅಂತ ಗುಂಪೊಳಗೇ ಮತ್ತೊಂದಿಷ್ಟು ಗುಂಪುಗಳು ಶುರುವಾಗಿ ಗುಂಪುಗಲಾಟೆಗಳು ನಡೆಯೋ ಪರಿಸ್ಥಿತಿ ಬಂದಾಗ ಅವ್ರನ್ನೆಲ್ಲಾ ಸುಮ್ಮನಾಗಿಸೋಕೆ ಗೌಡ್ರಿಗೆ ಮತ್ತು ಮೇಷ್ಟ್ರಿಗೆ ಸಾಕಾಗಿ ಹೋಯ್ತು. ಮೇಷ್ಟ್ರು ಮಾತಾಡೋಕೆ ಶುರು ಮಾಡಿದ್ರು. ನೋಡ್ರಪ್ಪಾ . ಹಿಂಗೆಲ್ಲಾ ಗಲಾಟೆ ಮಾಡಿ ಪ್ರಯೋಜನ ಇಲ್ಲ. ಈಗ ಊರಿಗೆ ಹೊಸದಾಗಿ ಬಂದವನೇ ಈಗ ಊರಲ್ಲಿರೋರು ಒಬ್ಬಬ್ಬರಾಗಿ ಕಾಣೆಯಾಗೋಕೆ ಕಾರಣ ಅನ್ನೋದು ನಿಮ್ಮಲ್ಲಿ ಕೆಲವರ ಗುಮಾನಿ ತಾನೆ ಅಂದ್ರು ? ಕೆಲವರು ಹೂಂ ಅಂದ್ರು ಕೆಲವರು ಇಲ್ಲಾ ಅಂದ್ರು. ಇನ್ನುಳಿದವರು ಮೇಷ್ಟ್ರು ಮುಂದೆ ಏನು ಹೇಳಬಹುದು ಅಂತ ತೆಪ್ಪಗೆ ಕೇಳ್ತಾ ಇದ್ರು. ಬಂದವ ಯಾರು , ಏನು , ಎತ್ತ ಅನ್ನೋದ್ರ ಬಗ್ಗೆ ನಾನೂ ಬೆಳಗ್ಗಿಂದ ಮಾಹಿತಿ ಸಂಗ್ರಹಿಸೋಕೆ ಪ್ರಯತ್ನ ಮಾಡ್ತಾ ಇದ್ದೀನಿ. ಅವ ಕೊಲೆಗಾರನೇ ಆಗಿದ್ರೆ ಆತ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಬಲಿ ತೆಗೆದುಕೊಳ್ಳೋಕೆ ಮೊದಲು ಊರವರೇ ಒಟ್ಟಾಗಿ ಆತ ಎಲ್ಲಿರುತ್ತಾನೆ, ಏನು ಮಾಡುತ್ತಾನೆ, ಆತ ಊರಿಗೆ ಬಂದ ಉದ್ದೇಶವೇನು ಎಂಬುದನ್ನ ಪತ್ತೆ ಹಚ್ಚಬೇಕು.  ಆತ ಒಳ್ಳೆ ಉದ್ದೇಶಕ್ಕಾಗಿ ಬಂದಿದ್ರೂ ಆತ ಈಗ ಎಲ್ಲಿದ್ದಾನೆ ಅನ್ನೋದು ಕಂಡು ಹಿಡಿದು ಆತನನ್ನ ಊರೆದುರು ಮಾತಿಗೆ ಕರೆಯೋ ತನಕ ಆತನ ಉದ್ದೇಶ ಗೊತ್ತಾಗೊಲ್ಲ. ಹಾಗಾಗಿ ಅವನನ್ನು ಹುಡುಕೋದೇ ನಮ್ಮ ಮುಂದಿನ ಗುರಿ ಸರೀನಾ ಎಂದ್ರು ? ಸಭೆ ಒಕ್ಕೊರಲಿನಿಂದ ಮೇಷ್ಟ್ರ ಮಾತಿಗೆ ಒಪ್ಪಿಗೆ ಸೂಚಿಸಿತು..ಮೇಷ್ಟ್ರು ಮಾತು ಮುಂದುವರಿಸಿದ್ರು..


***
ಅಂತೂ ಬಸಣ್ಣನಿಗೆ ಎಚ್ಚರಾದಾಗ ತಲೆಯೆಲ್ಲಾ ಭಾರವಾದ ಅನುಭವ. ಕಷ್ಟಪಟ್ಟು ಕಣ್ಣು ತೆರೆದ್ರೆ ಎದುರಿಗೆ ತಾಯಿ ತಿಮ್ಮವ್ವ ಅಳುತ್ತಾ ಕುಳಿತಿರೋ ತರ. ತಲೆ ಮುಟ್ಟಿ ನೋಡಿಕೊಂಡ್ರೆ ಏನೋ ಬ್ಯಾಂಡೇಜು ಸುತ್ತಿರುವಂತಿದೆ. ಅರೇ ನಾನೆಲ್ಲಿದ್ದೀನಿ ಅಂತ ಸುತ್ತಮುತ್ತ ನೋಡ್ತಾ ಏಳೋಕೆ ಪ್ರಯತ್ನ ಮಾಡ್ತಿರುವಾಗ "ಏ ಬಸ್ಭಾಯಿ ಕೋ ಹೋಷ್ ಆಗಯ" ಅನ್ನೋ ಧ್ವನಿ ಕೇಳಿಸ್ತು. ಇದು ಜಾಫರ್ ಸಾಹೇಬ್ರ ದ್ವನಿಯಲ್ವಾ ಅಂತ ತಿರುಗೋ ಹೊತ್ತಿಗೆ "ಏ ಬಸಣ್ಣ. ಹಾಗೇ ಮಲ್ಕೊ ಸ್ವಲ್ಪ ಹೊತ್ತು. ಏಳೋ ಪ್ರಯತ್ನವೆಲ್ಲಾ ಮಾಡ್ಬೇಡ" ಅಂತ ಹೇಳ್ತಾ ಊರ ಪೂಜಾರಿಗಳು ಎದ್ರಿಗೇ ಬಂದ್ರು
(ಮುಂದುವರೆಯುತ್ತದೆ)