Friday, March 23, 2018

ಮೀನುಗಳ ಲೋಕದಲ್ಲಿನ ಸಾಮನ್ ವಲಸೆ

ಮೀನಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ? ಕೆರೆಕೊಳ್ಳಗಳಲ್ಲಿ ಮೀನಿಗೆ ಗಾಳ ಹಾಕಿ ಕೂರುವವರಿಂದ ಹಿಡಿದು,
ಮನೆಯಲ್ಲೇ ಅಕ್ವೇರಿಯಂ ಇಟ್ಟು ಬಣ್ಣಬಣ್ಣದ ಮೀನುಗಳ ಓಡಾಟ ನೋಡಿ ಆಸ್ವಾದಿಸುವವರವರೆಗೆ, ಚಿಬ್ಬಲಗೆರೆ,
ಶೃಂಗೇರಿಗಳಂತಹ ಸ್ಥಳಗಳಲ್ಲಿ ಮೀನಿಗೆ ಮಂಡಕ್ಕಿ ಹಾಕಿ ಅವು ತಿನ್ನುವುದನ್ನ ನೋಡಿ ಸಂಭ್ರಮಿಸುವವರಿಂದ ದಿನಾ
ಬರುವ ಬಾಂಗಡೆ, ತಾರಲೆ ಮೀನಿನ ಗಾಡಿಗೆ ಕಾಯುವವರವರೆಗೆ, ಮೀನುಗಾರಿಕೆಯನ್ನೇ ಜೀವನವಾಗಿಸಿಕೊಂಡವರಿಂದ
,ಗಲಾಟೆ ವಾಸನೆಗಳಿಗೆ ಮತ್ತೊಂದು ಹೆಸರೆನ್ನುವಂತೆ ಮೀನು ಮಾರ್ಕೇಟನ್ನು ನೋಡುವವರವರೆಗೆ, ತೋಟ ಗದ್ದೆಗಳ
ತೋಡು ಕಾಲುವೆಗಳಲ್ಲಿ , ಬಾವಿಗಳಲ್ಲಿ ಹಲವಾರು ತರದ ಮೀನು ಬಿಟ್ಟು ಅವು ಸತ್ತಾಗ ಬೇಸರಿಸುವವರಿಂದ,
ಮೀನ ಖಾದ್ಯಕ್ಕೆ ಬಾಯಿ ಚಪ್ಪರಿಸುವವರವರೆಗೆ ಎಲ್ಲೆಡೆ ಮೀನ ಸಾರ್ಮಾಜ್ಯ.


ಮೀನಲ್ಲೆಷ್ಟು ವಿಧ ? 
ಮೀನುಗಳಲ್ಲಿ ೩೩,೬೦೦ ಕ್ಕೂ ಹೆಚ್ಚು ಸ್ಪೀಸೀಸ್ಗಳಿವೆ ಎನ್ನುತ್ತದೆ ಒಂದು ಮಾಹಿತಿ ! ಈ ಪ್ರಬೇಧಗಳು, ಕುಟುಂಬಗಳು
ಯಾವ್ಯಾವುದು ಅನ್ನುವ ಲೆಕ್ಕವನ್ನು ಮೀನು ಶಾಸ್ತ್ರಜ್ಞರಲ್ಲದ ನಾವು ಹಾಕದಿದ್ದರೂ ಅವುಗಳಲ್ಲಿ ಸಿಹಿನೀರಿನ
ಮೀನುಗಳು ಮತ್ತು ಸಮುದ್ರದ ಮೀನುಗಳ ಪ್ರಬೇಧಗಳು ಬೇರೆ ಬೇರೆಯೆಂಬ ವ್ಯತ್ಯಾಸವೆಂತೂ ನಮಗೆಲ್ಲಾ ತಿಳಿದೇ
ಇರುತ್ತದೆ. ಆ ತರಹದ ಬೇಧವೇಕೆ ? ಸಮುದ್ರದ ಮೀನುಗಳೆಲ್ಲಾ ಸಿಹಿನೀರಿನಲ್ಲೋ, ಸಿಹಿ ನೀರಿನ ಮೀನುಗಳೆಲ್ಲಾ
ಸಮುದ್ರದ ನೀರಿನಲ್ಲೋ ಬದುಕಲಾರವೇ ಅಂತ ನೀವು ಕೇಳಬಹುದು ? ಎಲ್ಲಾ ಪ್ರಬೇಧಗಳೂ ಹಾಗೆ ಬದುಕಲಾರವು.
ಒಂದೊಮ್ಮೆ ನೀವು ಒಂದೆಡೆಯ ಮೀನನ್ನು ಹಿಡಿದು ಮತ್ತೊಂದೆಡೆ ಸಡನ್ನಾಗಿ ಸಾಗಿಸಿದರೆ ಅವು ನೀರಿಗೆ
ಹೊಂದಿಕೊಳ್ಳಲಾಗದೆ ಸತ್ತೇ ಹೋಗುತ್ತವೆ ! 


ಸಿಹಿನೀರಿನ ಮೀನುಗಳು ಸಮುದ್ರದಲ್ಲೋ ಉಪ್ಪುನೀರಿನವು ಸಿಹಿನೀರಲ್ಲೋ ಬದುಕೋದು ಯಾಕೆ ಸಾಧ್ಯವಿಲ್ಲ ? 
ನ್ಯಾಷನಲ್ ಬಯಾಲಾಜಿಕಲ್ ಇನ್ಪಾರ್ಮೇಷನ್ ಇನ್ಫ್ರಾಸ್ಟ್ರಕ್ಚರ್(NBII) ಪ್ರಕಾರ ಕಟ್ಲಿ, ಮಹಸೀರ್, ಗೋಲ್ಡ್ ಫಿಶ್
ಮುಂತಾದ ಮೀನುಗಳು ಸಿನಿನೀರಿನಲ್ಲಿ ಮಾತ್ರ ಬದುಕೋಕೆ ಸಾಧ್ಯ. ಟುನಾಗಳಂತಹ ಮೀನುಗಳು ಸಮುದ್ರದ
ನೀರಿನಲ್ಲಿ ಮಾತ್ರ ಬದುಕೋಕೆ ಸಾಧ್ಯ. ಸಿಹಿನೀರಿನ ಮೀನುಗಳ ಸುತ್ತಣದ ನೀರಿನಲ್ಲಿನ ಉಪ್ಪಿನಂಶ ೦.೦೫
ಪ್ರತಿಶತಕ್ಕಿಂತಲೂ ಹೆಚ್ಚಾದರೂ ಆಸ್ಮೋಸಿಸ್ ನಿಂದಾಗಿ ಮೀನುಗಳು ಸತ್ತು ಹೋಗುತ್ತವೆ !


ಯೂಹ್ಯಾರಿನ್ ಮೀನುಗಳು:
ಹಾಗಂತ ಯಾವ ಮೀನುಗಳೂ ಎರಡೂ ನೀರಲ್ಲಿ ಬದುಕೋದು ಸಾಧ್ಯವಿಲ್ಲ ಅಂತಲ್ಲ. ಆ ತರಹ ಬದುಕೋ ಕೆಲವು
ಮೀನುಗಳೂ ಇವೆ. ಅವುಗಳಿಗೆ ಯೂಹ್ಯಾರಿನ್ ಮೀನುಗಳು ಅಂತ ಕರೆಯುತ್ತಾರೆ. ಆದರೆ ಅವು ತಮ್ಮ ಜೀವನದ
ಕೆಲವು ಭಾಗವನ್ನು ಸಿಹಿನೀರಿನಲ್ಲೂ, ಉಳಿದ ಭಾಗವನ್ನು ಸಮುದ್ರದಲ್ಲೂ ಅಥವಾ ಮೊದಲ ಭಾಗವನ್ನು
ಸಮುದ್ರದಲ್ಲೂ, ಕೊನೆಯ ಭಾಗವನ್ನು ಸಿಹಿನೀರಲ್ಲೂ ಕಳೆಯುತ್ತವೆ. ಅದೇಗೆ ಅಂದಿರಾ ? ಯೂಹ್ಯಾರಿನ್
ಮೀನುಗಳಲ್ಲಿ ಅನಾಡ್ರೊಮಸ್ ಮತ್ತು ಕೆಟಾಡ್ರೊಮಸ್ ಎಂದು ಎರಡು ವಿಧಗಳಿವೆ. ಅನಾಡ್ರೋಮಸ್
ಮೀನುಗಳು ಸಿಹಿನೀರಿನಲ್ಲಿಿಟ್ಟ ಮೊಟ್ಟೆಗಳೊಡೆದು ಅವು ನೀರಿನೊಂದಿಗೆ ಹರಿದು ಸಮುದ್ರ ಸೇರುತ್ತವೆ.
ಸಮುದ್ರದ ನೀರಿನಲ್ಲಿ ತಮ್ಮ ಬಹುಪಾಲು ಜೀವನವನ್ನು ಕಳೆಯುವ ಇವು ಮೊಟ್ಟೆಯಿಡಲು ಮೇಲ್ಗಣ ನದೀ
ತಟಕ್ಕೆ ಬರುತ್ತವೆ. ನೀರಿನ ಪ್ರವಾಹಕ್ಕೆ ವಿರುದ್ಧವಾಗಿ ಮೇಲೆ ಈಜಿ ಬರುವ ಚಲನೆಯನ್ನು ಹೊಂದುವ
ಸಾಮನ್(salmon) ಮುಂತಾದ ಮೀನುಗಳಿಗೆ ಅನಾಡ್ರೊಮಸ್(upriver motion) ಎಂಬ ಸಾರ್ಥಕ ನಾಮ.
ಸಾಮನ್ ಮೀನುಗಳಲ್ಲಿ ಹೆಚ್ಚಿನ ಮೀನುಗಳು ಮೊಟ್ಟೆಯಿಟ್ಟ ಕೆಲವೇ ಸಮಯದಲ್ಲಿ ಸಾಯುತ್ತವೆ. 


ಕೆಟಾಡ್ರೊಮಸ್ ಮೀನುಗಳು: 
ಉತ್ತರ ಅಮೇರಿಕಾ ಮತ್ತು ಯುರೋಪಲ್ಲಿ ಸಿಗುವ ಈಲ್ ಎಂಬ ಮೀನುಗಳು ತಮ್ಮ ಜೀವಿತದ ಬಹುಭಾಗವನ್ನು
ಸಿಹಿನೀರಿನ ಪ್ರದೇಶಗಳಲ್ಲೇ ಕಳೆದು ಮೊಟ್ಟೆಯಿಡಲು ಮಾತ್ರ ಸಮುದ್ರಕ್ಕೆ ಬರುತ್ತವೆ. ಅನಾಡ್ರೊಮಸ್ಗಳಿಗಿಂತ
ವಿರುದ್ಧದ ಚಲನೆ ಇವುಗಳದ್ದು.

ಸಾಮನ್ ಮುಂತಾದ ಮೀನುಗಳು ಎರಡೂ ತರದ ನೀರಿನಲ್ಲಿ ಬದುಕೋಕೆ ಸಾಧ್ಯವಾಗೋದು ಹೇಗೆ ? 
ಸಾಮನ್ಗಳನ್ನೇ ಆಗಲಿ ಅಥವಾ ಇನ್ಯಾವುದನ್ನೇ ಆಗಲಿ ಒಂದು ನೀರಿಂದ ಹಿಡಿದು ಮತ್ತೊಂದು ತರದ ನೀರಲ್ಲಿ
ಹಾಕಿದರೆ ಅವೂ ಸಾಯುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವ ಅವುಗಳ ಚಲನೆ ನಿಧಾನದ್ದು. ಆ
ಸಮಯದಲ್ಲಿ ಅವು ಬದಲಾದ ನೀರಿನ ಗುಣಕ್ಕೆ ಹೊಂದಿಕೊಳ್ಳುವಂತೆ ತಮ್ಮ ದೇಹದಲ್ಲಿ ಹಲವಾರು
ಬದಲಾವಣೆಗಳನ್ನು ಮಾಡಿಕೊಳ್ಳುತ್ತವೆ. ಘಟ್ಟದ ಕೆಳಗಿನ ಜನ ಮೇಲ್ಭಾಗಕ್ಕೆ, ದಕ್ಷಿಣ ಭಾರತದವರು
ಹಿಮ ಪ್ರದೇಶಗಳಿಗೆ ಚಾರಣಕ್ಕೆ ಹೋದಾಗ ತಮ್ಮ ದೇಹವನ್ನು ಹೊಂದಿಸುಕೊಳ್ಳುವುದನ್ನು ಕರೆಯುವಂತೆ
ಮೀನುಗಳು ತಮ್ಮ ದೇಹವನ್ನು ಪರಿವರ್ತನೆ ಮಾಡುವುದನ್ನೂ ಅಕ್ಲಮಟೈಸೇಷನ್ ಎಂತಲೂ ಮೀನುಗಳ
ಲೋಕದಲ್ಲಿ "ಸ್ಮೋಲ್ಟಿಫಿಕೇಶನ್" ಎಂತಲೂ ಕರೆಯುತ್ತಾರೆ.

ಸಾಮನ್ಗಳ ಜೀವನಚಕ್ರ ಎಂತದು ? 
ಸಾಮನ್ಗಳು ಒಂದೆಡೆಯಿಂದ ಇನ್ನೊಂದೆಡೆ ಬರುತ್ತೆ ಅಂತಲೂ, ಅವು ಸ್ಮೋಲ್ಟಿಫಿಕೇಷನ್ನಿಗೆ ಒಳಗಾಗುತ್ತೆ
ಅಂತಲೂ ಓದಿದ್ವಿ. ಆದರೆ ಅವೆಲ್ಲಾ ಆಗೋದು ಹೇಗೆ ಅಂದಿರಾ ? ಅದನ್ನೇ ನೋಡೋಣವೀಗ. 
ಭಾಗ ೧. ಸಾಮನ್ , ಸ್ಟೀಲ್ ಹೆಡ್ ಮುಂತಾದ ಮೀನುಗಳು ತಮ್ಮ ಜೀವಿತದ ಸುಮಾರು ಐದು ವರ್ಷಗಳ
ಕಾಲವನ್ನು ತಂಪಾದ ಪೆಸಿಫಿಕ್ ಸಮುದ್ರ ಪ್ರದೇಶಗಳಲ್ಲಿ ಕಳೆಯುತ್ತವೆ.
ಭಾಗ ೨: ಚೆನ್ನಾಗಿ ಬೆಳೆದ ಸಾಮನ್ಗಳು ಸಮುದ್ರವನ್ನು ಬಿಟ್ಟು ಮೊಟ್ಟೆಯಿಡುವ ಜಾಗಗಳನ್ನು
ಹುಡುಕಿ ತಮ್ಮ ಮೂಲಸ್ಥಾನಕ್ಕೆ ತೆರಳುತ್ತವೆ. ನದಿಗಳಿಂದ ಸಮುದ್ರಕ್ಕೆ ಬಂದು ಸೇರುವ ನೀರಿನ ವಾಸನೆ ಅವುಗಳಿಗೆ
ತಮ್ಮ ಮೂಲಸ್ಥಾನಕ್ಕೆ ತೆರಳೋಕೆ ನೆರವಾಗುತ್ತೆ ಅನ್ನೋದು ಓದೋಕೆ ಎಷ್ಟು ಆಶ್ಚರ್ಯಜನಕವೆನಿಸಿದರೂ
ಸಂಶೋಧನೆಗಳಿಂದ ಸಾಬೀತಾದ ಸತ್ಯವದು !
ಭಾಗ ೩: ತಮ್ಮ ಮೂಲಸ್ಥಾನ ತಲುಪಿದ ಮೇಲೆ ಹೆಣ್ಣು ಮೀನುಗಳ ನೆಲದಲ್ಲಿ ಗುಂಡಿಗಳನ್ನು ತೋಡುತ್ತವೆ.
"ರೆಡ್ಡ್" ಎಂದು ಕರೆಯುವ ಇಂತಹ ಗುಂಡಿಗಳ ಬಳಿ ಈ ಮೀನುಗಳ ಮಿಲನ. ನಂತರ ಬೇರೆ ಹೆಣ್ಣು ಮೀನುಗಳನ್ನು
ಹುಡುಕಿ ಗಂಡು ಮೀನುಗಳು ಮುಂದುವರೆದರೂ ಹೆಣ್ಣು ಮೀನು ತನ್ನ ರೆಡ್ಡ್ ಗಳನ್ನು ನೋಡಿಕೊಳ್ಳಲು ಅಲ್ಲೇ
 ಉಳಿದುಬಿಡುತ್ತವೆ.  
ಭಾಗ ೪: ಮೊಟ್ಟೆಯಿಟ್ಟ ನಂತರ ಹೆಚ್ಚಿನ ಸಾಮನ್ ಮೀನುಗಳು ಅಲ್ಲೇ ಸಾಯುತ್ತವೆ. ಬಲಿತ ಮೊಟ್ಟೆಗಳು ಅವುಗಳ
ಜೀವನ ಕ್ರಮವನ್ನು ಮುಂದುವರೆಸುತ್ತವೆ. ಆದರೆ ಸ್ಟೀಲ್ ಹೆಡ್ ಜಾತಿಯ ಮೀನುಗಳಲ್ಲಿ ಇದು ಸ್ವಲ್ಪ ಭಿನ್ನ.
ಮೊಟ್ಟೆಯಿಟ್ಟ ಸ್ಟೀಲ್ ಹೆಡ್ಗಳು ಸಮುದ್ರಕ್ಕೆ ವಾಪಾಸ್ಸಾಗುತ್ತವೆ. ಸಮುದ್ರದಿಂದ ಮತ್ತೊಮ್ಮೆ ವಾಪಾಸ್ಸಾಗಿ
ಮೊಟ್ಟೆಯಿಟ್ಟ ಬಳಿಕ ಅವು ಸಾಯುತ್ತವೆ. 
ಹೆಣ್ಣು ಸಾಮನ್ಗಳು ಮೊಟ್ಟೆಯಿಡುತ್ತವೆ ಅಂತ ಓದಿದೆವಲ್ಲ. ಆ ಎಲ್ಲಾ ಮೊಟ್ಟೆಗಳೂ ಗಂಡೋ, ಹೆಣ್ಣು
ಸಾಮನ್ಗಳಾಗಿ ಸಮುದ್ರ ಸೇರಿ ಇಲ್ಲಿಗೆ ಮತ್ತೆ ವಾಪಾಸ್ಸಾಗುವುದಿಲ್ಲ . ಸಾವಿರ ಮೊಟ್ಟೆಗಳಲ್ಲಿ ಒಂದು ಮಾತ್ರ
ವಂಶಾಭಿವೃದ್ಧಿ ಮಾಡುವ ಗಂಡು ಸಾಮನ್ನಾಗಿ ಇಲ್ಲಿಗೆ ವಾಪಾಸ್ಸಗುತ್ತದೆ! 
ಭಾಗ ೫: ಬಲಿತ ಮೊಟ್ಟೆಗಳನ್ನು ಯೋಕ್ ಸಾಕ್ ಫ್ರೈಗಳೆಂದು ಕರೆಯುತ್ತಾರೆ. ಅವುಗಳ ಸುತ್ತಣ ಯೋಕ್
ಸಾಕೆಂಬ ಲೊಳೆಯಂತಹ ಪದಾರ್ಥವನ್ನು ಹೀರಿಕೊಂಡು ಅವು ಸ್ವಲ್ಪ ದೊಡ್ಡವಾಗುವವರೆಗೆ ಈ ಸಣ್ಣ
ಮೀನುಗಳು ತಮ್ಮ ಗುಂಡಿಗಳ ಒಳಗೇ ಇರುತ್ತವೆ. ನಿಧಾನಕ್ಕೆ ಹೊರಬಂದ ಅವು ಸಮುದ್ರಕ್ಕೆ ಈಜುವಷ್ಟು
ದೊಡ್ಡವಾಗುವವರೆಗೆ ನದಿಯಲ್ಲೇ ಆಹಾರ ಪಡೆಯುತ್ತಾ ಇರುತ್ತವೆ. 
ಭಾಗ ೬: ಬೆಳೆದ ಮೀನುಗಳನ್ನು ಸ್ಮೋಲ್ಟ್ಗಳೆಂದು ಕರೆಯಲಾಗುತ್ತೆ. ಈ ಸ್ಮೋಲ್ಟ್ಗಳು ರಾತ್ರಿಯ ವೇಳೆ ನದಿಯ
ರಭಸವನ್ನುಪಯೋಗಿಸಿ ಸಮುದ್ರದ ಕಡೆಗೆ ಈಜುತ್ತವೆ. ಈ ಸಮಯದಲ್ಲಿ ಅವುಗಳ ದೇಹದಲ್ಲಿ ಸಮುದ್ರದ
ವಾತಾವರಣಕ್ಕೆ ಅವುಗಳನ್ನು ಹೊಂದಿಸುವ ಸ್ಮೋಲ್ಟಿಫಿಕೇಷನ್ ಪ್ರಕ್ರಿಯೆ ನಡೆಯುತ್ತದೆ. 
ಸುಮುದ್ರ ಸೇರಿದ ನಂತರ ಅವುಗಳ ಜೀವನ ಚಕ್ರ ಭಾಗ ಒಂದರಿಂದ ಮುಂದುವರಿಯುತ್ತದೆ  

ಮೀನುಗಳು ಸಮುದ್ರ ಸೇರೋದೇನೋ ಸರಿ ಆದರೆ ಡ್ಯಾಮುಗಳು ಮುಂತಾದ ಪ್ರದೇಶಗಳಿದ್ದಲ್ಲಿ ಅವುಗಳ
ಮೇಲ್ಗಣ ಚಲನೆ ಹೇಗೆ ? 
ಮನುಷ್ಯ ಪ್ರಕೃತಿಗೆ ವಿರುದ್ದವಾಗಿ ನಡೆಯೋದರಿಂದ ಎಷ್ಟೆಲ್ಲಾ ಜೀವಜಂತುಗಳಿಗೆ ತೊಂದರೆ ಎನ್ನುವುದಕ್ಕೆ
ಸಾಮನ್ ವಲಸೆಗೆ ಆಗುತ್ತಿದ್ದ ತಡೆಯೂ ಒಂದು ಉದಾಹರಣೆಯಾಗಿ ನಿಂತಿತು. ಈ ಸಮಸ್ಯೆಗೆ ಪರಿಹಾರವಾಗಿ
ಜೀವಶಾಸ್ತ್ರಜ್ಞರು ಕಂಡುಹಿಡಿದಿದ್ದೇ ಫಿಶ್ ಲ್ಯಾಡರ್ಗಳು.

ಮೀನೇಣಿಗಳು/ಫಿಶ್ ಲ್ಯಾಡರ್ಗಳು:
ಅಮೇರಿಕಾದ ಸಿಯಾಟಲ್ಲಿನಲ್ಲಿರುವ ಬಲ್ಲಾರ್ಡ್ ಲಾಕ್ಸ್ ಮುಂತಾದ ಪ್ರದೇಶಗಳಲ್ಲಿರುವ ಮೀನು ಏಣಿಗಳ
ಮೂಲಕ ಮೀನುಗಳು ಆಣೆಕಟ್ಟುಗಳೇ ಮುಂತಾದ ಮಾನವ ನಿರ್ಮಿತ ಅಡೆತಡೆಗಳನ್ನು ದಾಟಿ ತಮ್ಮ
ಪಯಣವನ್ನು ಮುಂದುವರೆಸೋದು ಸಾಧ್ಯವಾಗುತ್ತೆ.
ಮೀನು ಹೇಗೆ ಏಣಿ ಹತ್ತುತ್ತೆ ಅಂತೀರಾ ? ಏಣಿಯೆಂದರೆ ಸಾಮಾನ್ಯ ಏಣಿಯಲ್ಲವಿದು.
ಇಲ್ಲಿ ಹಂತ ಹಂತವಾಗಿ ಕಲ್ಲುಗಳನ್ನು ಪೋಣಿಸಲಾಗಿರುತ್ತೆ. ಮೀನುಗಳು ನೀರಿನಲ್ಲಿ ಈಜುತ್ತೀಜುತ್ತಾ
ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಬರುತ್ತೆ. ಹೀಗೇ ನಿಧಾನವಾಗಿ ಹಂತಗಳನ್ನು ದಾಟುವ ಇವು
ಡ್ಯಾಮಿನ ಎತ್ತರವನ್ನು ದಾಟಿ ತಮ್ಮ ಪಯಣವನ್ನು ಮುಂದುವರೆಸುತ್ತೆ ! 

ಮೀನುಗಳ ಲೋಕದಲ್ಲಿ ಇಷ್ಟೆಲ್ಲಾ ವಿಸ್ಮಯಗಳಿವೆಯಾ ಅಂದ್ರಾ ? ಮೀನುಗಳ ಲೋಕದಲ್ಲೇನು ನಮ್ಮ
ಸುತ್ತಮುತ್ತಲೇ ಅದೆಷ್ಟೋ ವಿಸ್ಮಯಗಳು ಅಡಗಿರುತ್ತೆ.ಅದನ್ನೆಲ್ಲಾ ಗಮನಿಸೋಕೆ, ಅಧ್ಯಯಿಸೋಕೆ ಕಣ್ಣುಗಳು,
ಮನಸ್ಸು ಮತ್ತು ಸಮಯ ನಮಗಿರಬೇಕಷ್ಟೆ. ಇನ್ನೊಂದಿಷ್ಟು ಆಸಕ್ತಿಕರ ಮಾಹಿತಿಯೊಂದಿಗೆ ಮತ್ತೊಮ್ಮೆ
ಭೇಟಿಯಾಗೋಣ . ಅಲ್ಲಿಯವರೆಗೆ ವಿರಾಮ

ಈ ಲೇಖನ ಈ ವಾರದ "ಸಂಪದ ಸಾಲು" ಪತ್ರಿಕೆಯಲ್ಲಿ ಪ್ರಕಟವಾಗಿದೆ