Monday, September 16, 2019

ಪ್ರೀತಿಯೆಂಬ ಹಾಯಿದೋಣಿ

ಬೆಳದಿಂಗಳ ಇರುಳಿನಲ್ಲಿ ಶಶಿಗೆದುರಿರೋ ಮೋಡದಂತೆ
ಸುಖನಿದ್ರೆಯ ರಾತ್ರಿಯಲ್ಲಿ ಬೆವರಿಳಿಸೋ ಕನಸಿನಂತೆ
ನನ್ನೊಲುಮೆಯ ಬಾಳಿನಲ್ಲಿ ಬೇಸರಿಸೋ ಕ್ಷಣಗಳಂತೆ
ಸುಖವೆಂಬೋ ದಿಂಬಿನಲ್ಲಿ ಚುಚ್ಚೋ ನಾರು ನಿನ್ನೆಯಂತೆ
ಒಲುಮೆಯಿರುವ ಬದುಕಿನಲ್ಲಿ ಹುಳಿ ಹಿಂಡೋ ಅಹಮಿನಂತೆ
ನಮ್ಮ ನಗುವ ಇಂದಿನಲ್ಲಿ ಅಳುವಿರದಿರಲೆನ್ನೆ ಪ್ರಿಯೆ
ನಂಬುಗೆಯೇ ಜೀವನವು ಎನುತ ಬಾಳಲೆನ್ನ ಪ್ರಿಯೆ|೧

ಬಾಳ ದೋಣಿ ದಡವ ಬಿಟ್ಟು ಹಾದಿ ಹುಡುಕಿ ಸಾಗಲು
ಅನುದಿನವೂ ಹಲವು ಕಷ್ಟದಲೆಗಳಿದರ ನೂಕಲು
ಪ್ರೀತಿಯೊಲುಮೆ ಹರಿಗೋಲಲೆ ದೋಣಿ ಮುಂದೆ ಸಾಗಿದೆ
ಸಿಟ್ಟ ಸಿಡುಕು, ದುಡುಕ ಒಡಕು ಮೂಡದಂತೆ ಕಾದಿದೆ.
ಅನುಮಾನದ ಸಣ್ಣ ರಂಧ್ರ ಸಾಕು ದೋಣಿ ಮುಳುಗಲು
ನಂಬಿಕೆಗಳ ಗೋಂದೆ ಸಾಕು ದೋಣಿ ಭದ್ರ ಪಡಿಸಲು.
ನೀ ಜೊತೆಗಿರೆ ಭಯವು ಏಕೆ ಎದುರು ಬರುವ ಬಂಡೆಗೆ
ಪ್ರೀತಿ ಚಿಲುಮೆ ಜಿನುಗುತಿರಲು ಕಾಡೋ ಅಹಮ ಬೆಂಕಿಗೆ|೨

ಎಷ್ಟು ಬೇಡವೆಂದರೂನೂ ಕಾಣೋ ಚೌತಿ ಚಂದಿರ
ಮನದೆನ್ನೆಯ ಮೊಗಕೆ ನಾಚಿ ಮೋಡ ಹುಡುಕಿ ಅಡಗಿದೆ.
ಎದುರಾಗೋ ಕಠಿಣ ಹಾದಿ ಸುಲಭವೆನಿಸಿ ಬಾಳಲಿ
ಬಾಳಬೆಳಕು ಜೊತೆಯಾಗಲು ಕಾರಿರುಳೂ ಕಳೆದಿದೆ.
ಹರಿವ ನದಿಯ ಕಾಲದಾಟ ದಾಟಿ ಮುಂದೆ ಸಾಗುತ
ಸಿಡಿಲು, ಗುಡುಗು , ಮಳೆ ಕಾಟವ ಸಹಿಸಿ ಇಂದು ಕಳೆಯುತ
ಸಾಗುತಿಹುದು ಬಾಳ ದೋಣಿ ಕನಸ ಕಡಲನರೆಸುತ
ಬದುಕೆಂಬೋ ಪಯಣದಲ್ಲಿ ಹೊಸತು ಹೊಸತ ಅರಸುತ|೩