ಕಾಮನ ಹುಣ್ಣಿಮೆಗೆ ಒಂದು ವಾರ ಮುಂಚೆಯೇ ರಸ್ತೆಯಲ್ಲಿ ಬರೋ ವಾಹನಗಳನ್ನ ಅಡ್ಡ ಹಾಕಿ "ಕಾಮಣ್ಣನ ಸುಂಕ ಕೊಡಲೇ ಬೇಕು, ಭೀಮಣ್ಣ ಬೀಡಿ ಸೇದಲೇ ಬೇಕು" ಅಂತ ಕೂಗೋ ಒಂದೂರ ಮಕ್ಕಳ ಗ್ಯಾಂಗಿನ ನಾಯಕ ನಮ್ಮೀ ಮನೋಜ. ಒಂದಿಷ್ಟು ಜನ ಗಾಡಿ ಅಡ್ಡ ಹಾಕಿದ್ದಕ್ಕೆ ಬೈದ್ರೂ ಇನ್ನೊಂದಿಷ್ಟು ಜನ ಒಂದ್ರುಪಾಯೋ, ಐದ್ರೂಪಾಯೋ ಕೊಡ್ತಿದ್ರಲ್ಲ ಅದೇ ಥ್ರಿಲ್ಲು,ಮುಂದಿನ ಕೂಗಿಗೆ ಸ್ಪೂರ್ತಿ! ಪ್ರತೀ ಊರಲ್ಲೂ ಹಿಂಗೆ ವಾಹನಗಳ ಅಡ್ಡಾಕಿ, ಅಡ್ಡಾಕಿದ ಎಲ್ಲ ಕಡೆ ವಾಹನದವ್ರು ದುಡ್ಕೊಡದಿದ್ರೂ ಇವರ ಕಲೆಕ್ಷನ್ನು ಬೆಳೆಯೋದೊಂದು ವಿಸ್ಮಯ ! ಹುಣ್ಣಿಮೆ ತನಕ ಇದೇ ತರ ಸಂಗ್ರಹವಾಗೋ ದುಡ್ಡನ್ನ ಕೂಡಾಕಿ ಒಂದಿಷ್ಟು ಸಿಹಿ, ಬಣ್ಣ ತರೋರು. ಹಳೇ ಪ್ಯಾಂಟು, ಶರ್ಟುಗಳ ಒಂದು ಕೋಲಿಗೆ ಮನುಷ್ಯನಿಗೆ ತೊಡಿಸಿದಂತೆ ತೊಡಿಸಿ, ಅದಕ್ಕೆ ಹುಲ್ಲು ತೂರಿಸಿ, ಅದ್ರಲ್ಲೊಂದು ಬೆರ್ಚಪ್ಪನ್ನ ಮಾಡಿ,ಮಡಿಕೆಯ ತಲೆ ಮಾಡಿ ಬಿಟ್ರೆ ಅಂದಿನ ರಾತ್ರಿಗೆ ಸುಡೋ ಕಾಮಣ್ಣ ರೆಡಿ ! ಅವನ ಮುಖಕ್ಕೊಂದು ಆಕಾರ ಮಾಡೋದು, ಸುಡೋ ಸಮಯಕ್ಕೆ ಬೇಕಾದ ಪಟಾಕಿ ತರೋದೆಲ್ಲಾ ಸಂಜೆಯ ಇನ್ನಿತರ ಸಂಭ್ರಮಗಳಾಗಿತ್ತು. ರಾತ್ರಿಯಾದ್ಮೇಲೆ ಕಾಮಣ್ಣನ ಸುಡೋದು ನೋಡೋಕೆ ಊರೋರೆಲ್ಲಾ ಸೇರೋರು. ಅಲ್ಲಿ ಕಾಮಣ್ಣಂಗೆ ಬೆಂಕಿ ಕೊಡೋದು ಯಾರಾದ್ರೂ ದೊಡ್ಡೋರಾದ್ರೂ ಈ ಸಲ ಕಾಮಣ್ಣನ ಚೆನ್ನಾಗಿ ಮಾಡಿದೀರಲ್ರೋ ಅಂದ್ರೆ ಮನೋಜ ಮತ್ತು ಗ್ಯಾಂಗಿಗೆ ಪ್ರಸಾದ ಅಂತ ಹಂಚ್ತಿದ್ದ ಸಿಹಿ ಇನ್ನೂ ಸಿಹಿಯಾದಂಗೆ ಅನ್ನಿಸ್ತಿತ್ತು, ಪ್ರಪಂಚವನ್ನೇ ಗೆದ್ದಂಗನಿಸ್ತಿತ್ತು.
ಹಿಂಗಿಪ್ಪ ಸಂಭ್ರಮದ ಹುಣ್ಣಿಮೆ ಕಳೆದು ಹೋಳಿ ಬಂದಿತ್ತು. ಬೆಳಗ್ಗೆಯೇ ಎದ್ದು ಬಣ್ಣಗಳ ಪ್ಯಾಕೇಟೆತ್ತಿ ಹೋಳಿಯಾಡಲು ಓಡಿದ್ದ ಮನೋಜ. ತಿಂಡಿ ತಿಂದ್ಕಂಡು ಹೋಗೋ ಅನ್ನೋ ಅಮ್ಮನ ಮಾತನ್ನು ಕೇಳದೇ ಹ್ಯಾಪಿ ಹೋಳಿ ಅಮ್ಮ ಅಂತ ಬಣ್ಣ ಹಚ್ಚಿದ್ದ. ಹೋಳಿಯಾಡೋಕೆ ಹೋದ್ರೆ ಬರೋದು ಮಧ್ಯಾಹ್ನವಾಗುತ್ತೋ. ಏನಾರು ತಿಂದ್ಕೊಂಡೋಗೋ ಅನ್ನೋಕೆ ಬಂದ ಅಪ್ಪನ ಮುಖಕ್ಕೂ ಬಣ್ಣ ಹಚ್ಚಿ ಅವ್ರು ಮುಸಿ ನಗೋ ಹೊತ್ತಿಗೆ ಗೇಟು ದಾಟಿದ್ದ ! ಮನೆಯಿಂದ ಮುಂದೋಡೋ ಹೊತ್ತಿಗೆ ಕಣ್ಣು ಹುಷಾರಿ ಅಂತ ಅಪ್ಪ ಅಂದಂಗಾಯ್ತು. ಆದ್ರೆ ಅಪ್ಪ ಏನು ಹೇಳ್ತಿದಾರೆ ಅಂತ ಕೇಳೋ ವ್ಯವಧಾನವಿಲ್ಲದ ಮನೋಜ ಮುಂದೋಡಾಗಿತ್ತು.
ಗೆಳೆಯರನ್ನೆಲ್ಲಾ ಮನೆಯಿಂದ ಕರೆದು ಬಣ್ಣ ಹಾಕಾಯ್ತು. ಬರೋಲ್ಲ ಅಂದವರನ್ನೂ ಪುಸಲಾಯಿಸಿ ಕರೆದು ಬಣ್ಣ ಹಚ್ಚಾಯ್ತು. ನೀರಿಗಿಳಿದ ಮೇಲೇ ಚಳಿ ಬಿಡೋದು ಅಂದಂಗೆ ಒಂದ್ಸಲ ಬಣ್ಣ ಹಚ್ಚಿಸಿಕೊಂಡೋರು ನಾಚಿಕೆ ಬಿಟ್ಟು, ಖುಷಿ ಪಟ್ಟು ಬೇರೆಯವ್ರಿಗೆ ಬಣ್ಣ ಹಚ್ಚೋಕೆ ಬರೋರು. ಬಣ್ಣ ಖಾಲಿ ಆಗ್ತಾ ಬಂತು ಅನ್ನೋ ಹೊತ್ತಿಗೆ ಯಾರೋ ಹಿರಿಯರು, ಬಣ್ಣ ಖಾಲಿ ಆಯ್ತೇನ್ರೋ ಹುಡುಗ್ರಾ, ತಗಳ್ರಿ ಬಣ್ಣನ ಅಂತೆ ತಮ್ಮ ಮನೇಲಿ ಇವ್ರಿಗೆ ಅಂತನೇ ತಂದಿಟ್ಟಿದ್ದ ಬಣ್ಣ ಕೊಡೋರು. ಪ್ರತೀ ವರ್ಷ ಈ ಹುಡುಗರು ಬಂದು ಹ್ಯಾಪಿ ಹೋಳಿ ಅಣ್ಣಾ/ಮಾವ/ಅಜ್ಜ ಅಂತ ಹಚ್ಚಿ ಹೋಗೋದು ಅವ್ರಿಗೆ ಹೆಂಗಿದ್ರೂ ಪರಿಚಯವಾಗಿತ್ತಲ್ಲ. ಬಣ್ಣವಾಡೋ ಹುಡುಗರು ಇನ್ನೂ ಬರ್ಲಿಲ್ಲ ಅಂದ್ರೇನೆ ಏನೋ ಚಡಪಡಿಕೆ ಕೆಲ ಹಿರೀಕರಿಗೆ. ಬಣ್ಣ ಕೊಡೋ ಹಿರೀಕರೆಲ್ಲಾ ಕಣ್ಣು ಹುಷಾರಿ ಅನ್ನೋರು. ಆದ್ರೆ ಮನೋಜ ಮತ್ತವನ ಪಟಾಲಮ್ಮಿಗೆ ಅದ್ರ ಮೇಲೆ ಗಮನವಿದ್ರೆ ತಾನೇ ?
ಹಿಂಗೇ ಬಣ್ಣವಾಡುತ್ತಾ ಹೊತ್ತು ಹೋಗಿದ್ದೇ ತಿಳೀಲಿಲ್ಲ. ಮಧ್ಯಾಹ್ನವಾಗುತ್ತಾ ಬಂದಿತ್ತು. ಹೊಟ್ಟೆ ಬೇರೆ ಹಸಿಯುತ್ತಿತ್ತು. ಆಟವಾಡ್ತಾ ಆಡ್ತಾ ಮನೆಯಿಂದ ಸುಮಾರು ದೂರ ಬಂದಾಗಿದೆ. ಇನ್ನು ಮನೆಗೆ ವಾಪಾಸು ಹೋಗೋ ಬದ್ಲು ಇಲ್ಲೇ ನಡೀತಿರೋ ಜವರಯ್ಯನ ಜಾತ್ರೆಗೆ ಹೋಗಿ ಏನಾದ್ರೂ ತಿಂದ್ಕೊಂಡು ಆಮೇಲೆ ಮನೆಗೆ ಹೋಗೋಣ್ವಾ ಅಂದ ಮನೋಜ. ಹಿಂದಿನ ದಿನ ಕಾಮಣ್ಣನ ಕಲೆಕ್ಷನ್ನಲ್ಲಿ ಸ್ವಲ್ಪ ದುಡ್ಡನ್ನ ಜಾತ್ರೆಗೆ ಅಂತ್ಲೇ ಉಳಿಸಿ ಇವತ್ತು ತಂದ ಮನೋಜನ ಬುದ್ದಿವಂತಿಕೆಗೆ ಮೆಚ್ಚುತ್ತಾ ಎಲ್ರೂ ಜಾತ್ರೆಯತ್ತ ಹೆಜ್ಜೆ ಹಾಕಿದ್ರು. ಅಲ್ಲೂ ಬಣ್ಣಗಳದ್ದೇ ಜಾತ್ರೆಯವತ್ತ್ಯು. ಜಾತ್ರೆಯ ದಾರಿಯಲ್ಲಿ ಯಾರೋ ಬಣ್ಣಗಳ ಪ್ಯಾಕೆಟ್ಟನ್ನ ಬೀಳಿಸಿಕೊಂಡಿದ್ರು ಅನ್ಸುತ್ತೆ. ಜಾತ್ರೆಗೆ ತಿನ್ನೋಕೆ ಅಂತ ಬಂದಿದ್ರೂ ಬಣ್ಣಗಳ ನೋಡಿದ ಮೇಲೆ ಹುಡುಗರಿಗೆ ಬಂದ ಕೆಲಸವೇ ಮರ್ತೋಯ್ತು. ಬಣ್ಣವಾಡೋ ಹುಚ್ಚಲ್ಲಿ ಅಲ್ಲಿ ಸಿಕ್ಕಿದ ದನ, ನಾಯಿ, ಮಂಗಗಳ ಮೇಲೂ ಬಣ್ಣವೆರಚೋಕೆ ಶುರು ಮಾಡಿದ್ರು. ಆ ಗಲಾಟೇಲಿ ಸುಮಾರಷ್ಟು ಪ್ರಾಣಿಗಳ ಕಣ್ಣು, ಮೂಗುಗಳಲ್ಲೆಲ್ಲಾ ಬಣ್ಣ ಹೋಗಿ ಅವು ಒದ್ದಾಡೋಕೆ ಶುರು ಮಾಡಿದ್ರೆ ಈ ಹುಡುಗರಿಗೆ ಏನೋ ಒಂತರ ಖುಷಿ ! ಈ ಖುಷಿಯ ಮಧ್ಯೆಯೇ ಏ ಮನೋಜ, ಹುಷಾರು ಅಂತ ಯಾರೋ ಕೂಗಿದಂಗಾತ್ಯು. ಏನು ಅಂತ ತಿರುಗೋ ಹೊತ್ತಿಗೆ ಮಂಗವೊಂದು ಮನೋಜನ ಮೇಲೆ ನೆಗೆಯುತ್ತಿತ್ತು. ನನ್ನ ಕಣ್ಣಿಗೆ ಬಣ್ಣ ಹಾಕಿದೆಯಲ್ಲಾ, ನೀನೂ ಅನುಭವಿಸು ಅಂತ ಮಂಗವೊಂದು ಬಯ್ಯುತ್ತಾ ಇವನಿಗೆ ಹೊಡೆಯೋಕೆ ಬಂದಾಗಾಯ್ತು. ಅದ್ರ ನೆಗೆತದಿಂದ ತಪ್ಪಿಸಿಕೊಳ್ಳೋಕೆ ಅಂತ ಹಿಂದೆ ಬಗ್ಗಿದ್ದೊಂದೇ ಗೊತ್ತು. ಆಯ ತಪ್ಪಿ, ಹಿಂದೆ ಬಿದ್ದಂತೆ, ತಲೆ ಯಾವುದಕ್ಕೋ ಹೊಡೆದಂತೆ !
ಮನೋಜ ಕಣ್ಣು ಬಿಟ್ಟು ನೋಡಿದರೆ ಬಣ್ಣದ ಬಟ್ಟೆಗಳಲ್ಲಿ ಓಡಾಡೋ ಜನರ ಜಾತ್ರೆಯಲ್ಲಿದ್ದಾನೆ. ಆದರೆ ಅವನ ಸಾಥಿಗಳ್ಯಾರೂ ಕಾಣ್ತಿಲ್ಲ ! ಹಸಿಯುತ್ತಿರೋ ಹೊಟ್ಟೆಗೆ ಏನಾದ್ರೂ ತಿನ್ನೋಣ ಅಂತ ನೋಡಿದ್ರೆ ಚೆಡ್ಡಿಯಲ್ಲಿ ದುಡ್ಡಿಲ್ಲ. ಅರೇ, ಚೆಡ್ಡಿಯೇ ಇಲ್ಲ! ಮೈತುಂಬಾ ಕೂದಲು. ಹಿಂದೊಂದು ಬಾಲ, ಕೈ ಕಾಲು ಮೇಲೆಲ್ಲಾ ರೋಮ , ಮಂಗನಂತೆ. ಕಣ್ಣೇನೋ ಉರಿಯುತ್ತಿದೆಯಲ್ಲಾ ಅಂತ ನೊಡಿದ್ರೆ ಮುಖದ ಮೇಲೆ ಯಾರೋ ಸೋಕಿರೋ ಬಣ್ಣ! ಬಣ್ಣವಾಡ್ತಿದ್ದ ತನಗೇನಾಯ್ತು ? ಮನೋಜ ಮಂಗನೇಗಾದೆ? ಮನೆಗೆ ಹೋಗೋದೇಗೆ? ಮೊದಲಿನಂತೆ ಆಗೋದೇಗೆ ಅನ್ನೋ ಹಲವು ಚಿಂತೆಗಳಲ್ಲಿ ಮುಳುಗಿರೋ ಮನೋಜನಿಂದು ದುಃಖಾಕ್ರಾಂತನಾಗಿದ್ದಾನೆ, ಹಸಿದು ಬಳಲಿದ್ದಾನೆ. ಜಾತ್ರೆಲಿ ಸಿಗೋ ಯಾರಾದ್ರೂ ತನಗೆ ಸಹಾಯ ಮಾಡ್ಬೋದೇನೋ ಎನ್ನೋ ನಿರೀಕ್ಷೆಯಲ್ಲಿ ಎಲ್ಲರ ಮುಖಗಳನ್ನು ನೋಡ್ತಾ ಇದ್ದಾನೆ.