Huliyoorina sarahaddu |
ತೇಜಸ್ವಿಯವರ ಬರಹಗಳು ಕಾಡೋದು ಅವರ ಬರಹಗಳಲ್ಲಿ ಮೇಳವಿಸಿರೋ ಮಲೆನಾಡ ಚಿತ್ರಣದಿಂದಿರಬಹುದೇನೋ. ಬೆಂಗಳೂರಿನಲ್ಲಿ ಕೆಲವು ಘಂಟೆಗಳ ಕಾಲ ಮಳೆಯಾದರೇ ರಸ್ತೆಗಳೆಲ್ಲಾ ಉಕ್ಕಿ ಹರಿದು ಮಿನಿ ಪ್ರವಾಹದ ಪರಿಸ್ಥಿತಿ. ಅಂತಹ ಸ್ಥಿತಿಯಿಂದ ಬಂದವರಿಗೆ ಮಳೆಕಾಡಲ್ಲಿ ಎರಡ್ಮೂರು ದಿನ ಬಿಡದೇ ಮಳೆ ಹೊಡೆಯುತ್ತೆ ಎಂಬುದನ್ನು ಊಹಿಸಲೂ ಸಾಧ್ಯವಾಗದೇನೋ. ಹೊಟ್ಟೆಪಾಡಿಗಾಗಿ ಅಂತದ್ದೇ ಬೆಂದಕಾಳೂರಲ್ಲಿದ್ದ ಜನರೀಗ ಕರೋನಾಕ್ಕೆ ಹೆದರಿ ಮತ್ತೆ ಊರುಗಳತ್ತ ಸಾಗಿದ್ದಾರಾ ಅನಿಸುವ ಹೊತ್ತಿಗೆ ಮಲೆನಾಡಲ್ಲಿ ಮಳೆಯ ಆರ್ಭಟ ಶುರು. ಮಳೆಗಾಲವಾದರೂ ಶುರುವಾಗದ ಮಳೆ, ತುಂಬದ ಬಾವಿಗಳೆಲ್ಲಾ ತುಳುಕಾಡುವಷ್ಟು ಮಳೆ ಮೂರ್ನಾಲ್ಕು ದಿನಗಳಿಂದ ಹೊಡೀತಾ ಇತ್ತು. ಭಾರೀ ಮಳೆಯ ನಂತರ ಸ್ವಲ್ಪ ಜುಮುರು, ಅದರ ನಂತರ ಇಬ್ಬನಿಯಂತೆ ಮಳೆ. ಮತ್ತೆ ಇದರದೇ ಆವರ್ತನವಿತ್ತೇ ಹೊರತು ಬಿಸಿಲಿರಲಿಲ್ಲ! ಮೋಡಗಳ ಮರೆಯಲ್ಲೇ ಲಾಕಾಗಿದ್ದ ಸೂರ್ಯನ ದರ್ಶನವಿಲ್ಲದೇ, ಬಟ್ಟೆಗಳೊಣಗದೇ ದಿನ ಮೂರಾಗಿತ್ತು.ಇಂತದೇ ಮಳೆಕಾಡ ನಮ್ಮೂರ ಸಮೀಪದ ಊರು ಚಂದ್ರಗುತ್ತಿ. ಅದು ತೇಜಸ್ವಿಯವರ ನಿಗೂಢ ಮನುಷ್ಯರು ಕಾದಂಬರಿಯ ಎಳೆ ಶುರುವೂ ಹೌದು.
ಚಂದ್ರಗುತ್ತಿಯ ಸಮೀಪದ ನುಗುಬೀಡುವಿನಿಂದ ದುಗ್ಗು ಮಾರ್ಗವಾಗಿ ನವಿಲುಗುಂದಕ್ಕೆ ಹೊರಟಿರೋ ೭೦ರ ದಶಕದ ಕಾರೊಡೆಯ ಜಗನ್ನಾಥ. ಅವನ ಜೊತೆಗೂಡೂ ರೆವಿನ್ಯೂ ಇನ್ಸಪೆಕ್ಟರ್ ರಂಗಪ್ಪನಿಗೆ ಪರಿಚಯವಾಗೋದು ಸಿಐಡಿ ಗೋಪಾಲಯ್ಯ. ಅನುಭವಗಳ ಅರಸಿ ಹೊರಡೋ ಇವರಿಗೆ ಸಿಗೋ ಕ್ರಾಂಪ, ಮರಸರ, ಉಕ್ಕಿ ಹರಿಯ ಎಣ್ಣೆಹೊಳೆ, ಉರುಳೋ ಗಿರಿ , ಏಲಕ್ಕಿ ತೋಟ, ಶಾರಿ ಹೀಗೆ ಒಬ್ಬೊಬ್ಬರದ್ದೂ ಒಂದೊಂದು ಕಥೆ, ವಿಚಿತ್ರ ವ್ಯಥೆ . ಪ್ರತೀ ಪಾತ್ರದ ಮಾತು ಕೇಳ್ತಿದ್ದರೆ ಆ ಪಾತ್ರವೇ ನಾವೇನೋ ಎನ್ನುವಂತಹ ಚಿತ್ರಣ. ಕೊಪ್ಪ, ಜಯಪುರ ಸಮೀಪದ ಕಾಫಿ ತೋಟಗಳಲ್ಲಿ ಅಲೆದಿದ್ದರೆ, ಮೇರಿತಿ ಬೆಟ್ಟದಂತಹ ಸ್ಥಳಗಳಿಗೆ ಕಿಲೋಮೀಟರುಗಟ್ಟಲೇ ಎಸ್ಟೇಟುಗಳ ಮಧ್ಯೆ ಸಾಗಿದ್ದರೆ ಇಲ್ಲಿ ಬರೋ ಹಾದಿಯ, ಸಿಕ್ಕಿ ಹಾಕಿಕೊಳ್ಳೋ ಪರಿಸ್ಥಿತಿಗಳ, ಏಲಕ್ಕಿ ತೋಟಗಳ ಕಲ್ಪನೆ ದಕ್ಕಬಹುದೇನೋ. ಇದೇ ಹಾದಿಯ ಕೊನೆ ಎನ್ನುವಂತ ಸ್ಥಳದತ್ತ ಸಾಗುತ್ತಿದ್ದೀರಿ ಎಂದುಕೊಳ್ಳಿ. ನೀವು ಒಂದು ಸ್ಥಳವನ್ನು ದಾಟಿದ ನಂತರ ಮರಳಿ ಬರಲಾರದಂತೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಅಲ್ಲಿ ಉಳಿಯಲು ಆಗುತ್ತಿಲ್ಲ. ಹಿಂಬರಲು ಆಗುತ್ತಿಲ್ಲ. ಹೇಗಾದರೂ ಮುಂದೆ ಸಾಗೋಣವೆಂದು ಅದೆಷ್ಟೋ ದಿನಗಳ ಪ್ರಯತ್ನದ ನಂತರ ಹೊರಟರೆ ಅತ್ತಲಿಂದಲೂ ಇತ್ತ ಬರುತ್ತಿರೋ ಜನ ! ಒಂದೆಡೆ ಪ್ರಪಾತ, ಇನ್ನೊಂದೆಡೆ ನುಂಗಲು ಬರುತ್ತಿರುವ ಹೆಬ್ಬಾವು, ಇವೆರಡರ ನಡುವೆ ಸಿಲುಕಿದಂತಹ ಪರಿಸ್ಥಿತಿ. ಗೊತ್ತು ಗುರಿಯಿಲ್ಲದ ಊರಲ್ಲಿ ನಂಬೋದ್ಯಾರನ್ನ, ಬಿಡೋದ್ಯಾರನ್ನ ? ಎದುರಿಗಿದ್ದವ ಹೇಳಿದ್ದರಲ್ಲಿ ಸತ್ಯವೆಷ್ಟು, ಸುಳ್ಳೆಷ್ಟು ? ಕೊನೆಗಾಣದ ಹಾದಿಯಲ್ಲಿ ಗೊತ್ತಿಲ್ಲದ ಜೀವದೊಂದಿಗೆ ಸಾಗಿದರೆ ಜೀವ ಉಳಿಯುತ್ತಾ ಎಂಬ ಅಸಂಖ್ಯ ಪ್ರಶ್ನೆಗಳನ್ನು, ಕುತೂಹಲವನ್ನು ಆಗಾಗ ಕೆರಳಿಸೋ ಈ ಕಾದಂಬರಿ, ಕೌತುಕ, ಭಯದ ನಡುವೆಯೇ ಒಂದು ಕಾಲದ ಮಳೆಕಾಡ ಚಿತ್ರಣವನ್ನು ಕಟ್ಟಿಕೊಡುತ್ತದೆ. ಎಕ್ಸ್ ಪ್ಲೋರಿಂಗ್ ದ ವೈಲ್ಡ್, ಶರಾವತಿ ಎಕ್ಸ್ ಪ್ಲೋರೆಷನ್ ಅಂತೆಲ್ಲಾ ಹೆಸರಿಟ್ಟು ಕಾಡು ಕಡಿದು ಹೋಂ ಸ್ಟೇ ಮಾಡಿದೋರು, ಕಾಡಲ್ಲಿ ನಾವು ಮಾಡಿದ್ದ ಕೇಳೋರು ಯಾರೂ ಇಲ್ಲ ಎಂದು ಬಾಟಲಿ ಒಡೆಯೋರು, ಕಸ ಹರಡೋರು, ಕಾಡ ಮಧ್ಯ ಟೆಂಟ್ ಹಾಕಿ, ಜಲಪಾತಗಳಲ್ಲಿ ಮಿಂದೇಳೋ ದಿನಗಳನ್ನೇ ಪ್ರಕೃತಿಯೊಡನೆಯ ಜೀವನ ಎನ್ನುವವರು ನಿಜವಾದ ಅರಣ್ಯವಾಸ ಎಷ್ಟು ರೋಚಕ ಮತ್ತು ಭಯಾನಕ ಎಂಬ ಕಲ್ಪನೆಯಾದರೂ ಹೊಂದಲು ಓದಬೇಕಾದ ಪುಸ್ತಕವಿದು.