ಬಾಣಂತಿಯ ಆರೈಕೆ ಅಂದರೆ ನೆನಪಾಗೋದು ಅಂಟಿನುಂಡೆ. ಸೊಂಟ ಗಟ್ಟಿಯಾಗ್ಬೇಕು ಅಂದ್ರೆ ಅಂಟಿನುಂಡೆ ತಿನ್ಬೇಕು ಅಂತ ನಮ್ಮ ಕಡೆ ಮಾತೇ ಇದೆ. ಸೊಂಟಕ್ಕೆ ಬಲ ಬರುತ್ತೆ ಅಂತ ಕೊಡೋ ಈ ಉಂಡೆಯನ್ನು ಬೇರೆಯವರೂ ತಿನ್ನಬಹುದು. ಈ ಅಂಟಿನುಂಡೆಯನ್ನು ಬೇರೆ ಬೇರೆ ಕಡೆ ಬೇರೆ ಬೇರೆ ಸಾಮಗ್ರಿಗಳಿಂದ ಮಾಡುತ್ತಾರೆ. ಎಲ್ಲೆಡೆಯೂ ಅಂಟು, ಬೆಲ್ಲ, ಕರ್ಜೂರ/ಉತ್ತುತ್ತೆ, ಬಾದಾಮಿ ಮುಂತಾದ ಪದಾರ್ಥಗಳು ಸಾಮಾನ್ಯವಾದರೂ ಧಾರವಾಡದ ಕಡೆ ಅಳವಿ ಬೀಜ, ಕೇರು ಬೀಜ ಮುಂತಾದವನ್ನು ಬಳಸುತ್ತಾರೆ. ಮಲೆನಾಡಿನ ಕಡೆ ವಾಯುವಡಂಗ, ಬಾಲಮೆಣಸು , ತಳಾಸ್ ಪತ್ರೆ ಮುಂತಾದವನ್ನು ಬಳಸಿದರೆ ಮಂಗಳೂರ ಕಡೆ ಬೆಳ್ತಗೆ ಅಕ್ಕಿ, ತಾಳೆ ಬೆಲ್ಲ, ಅರಿಶಿಣ ಮುಂತಾದ ವಸ್ತುಗಳನ್ನು ಬಳಸುತ್ತಾರೆ. ಬೇರೆ ಬೇರೆ ವಿಧಾನಗಳ ಬಗ್ಗೆ ಕೇಳಿ, ಓದಿದ ಮೇಲೆ ನಮ್ಮನೇಲೆ ಮಲೆನಾಡ ರೀತಿಯಲ್ಲಿ ಮತ್ತು ಮಲೆನಾಡು, ಧಾರವಾಡಗಳ ಅಂಶಗಳನ್ನು ಸೇರಿಸಿ ಅಂಟಿನುಂಡೆ ಮಾಡಿದ್ವಿ. ಎರಡು ಸಲವೂ ಚೆನ್ನಾಗಿತ್ತು ಮತ್ತು ಹೆಂಗೆ ಮಾಡಿದಿರಿ ಅಂಟಿನುಂಡೆ ? ಉಂಡೆ ಕಲ್ಲಾಗಲಿಲ್ಲವಾ ಅಂತ ಕೇಳುತ್ತಿದ್ದ ಗೆಳೆಯರ ಅನುಕೂಲಕ್ಕಾಗಿ ಅಂಟಿನುಂಡೆ ವಿಧಾನವನ್ನು ಕೆಳಗೆ ಕೊಡುತ್ತಿದ್ದೇನೆ. ಇಲ್ಲಿ ಕೊಟ್ಟಿರೋ ವಿಧಾನದಲ್ಲಿ, ಹೇಳಿದಷ್ಟು ಪದಾರ್ಥಗಳನ್ನು ಬಳಸಿ ಮಾಡಿದರೆ ಸುಮಾರು ನಲವತ್ತು ಉಂಡೆಗಳನ್ನು ಮಾಡಬಹುದು.
ಬೇಕಾಗೋ ಸಾಮಗ್ರಿಗಳು:
ಬೆಲ್ಲ: ೨೦೦ ಗ್ರಾಂ ಅಥವಾ ಒಂದು ಕಪ್ ಅಥವಾ ಮೂರು ಉಂಡೆ
ಕರ್ಜೂರ: ನೂರು ಗ್ರಾಂ ಅಥವಾ ಒಂದು ಕಪ್
ಕೆಲವು ಕಡೆ ಕೆಮ್ಮು ಬರುತ್ತೆ ಅಂತ ಬಾಣಂತಿಯರಿಗೆ ಕೊಬ್ಬರಿ, ಕಾಯಿ ಕೊಡೋಲ್ಲ. ಹಾಗಾಗಿ ನಾವು ಕೊಬ್ಬರಿ ಹಾಕಿಲ್ಲ. ಕೊಬ್ಬರಿ ಬಳಸೋದಾದರೆ
ತುರಿದ ಕೊಬ್ಬರಿ: ನೂರು ಗ್ರಾಂ ಅಥವಾ ಒಂದು ಕಪ್.
ಕರ್ಜೂರ ಮತ್ತು ಕೊಬ್ಬರಿ ಸೇರಿದರೆ ಎಷ್ಟಾಗುತ್ತೋ ಅಷ್ಟು ಅಳತೆಯ ಉಂಡೆ ಬೆಲ್ಲ ಬೇಕು.
ಕೊಬ್ಬರಿ ಹಾಕದಿದ್ದರೆ ಕರ್ಜೂರದ ಎರಡರಷ್ಟು ಉಂಡೆ ಬೆಲ್ಲ ಬೇಕು. ಕೆಲವರು ಕೆಳಗೆ ಹಾಕಿದ ಅಷ್ಟೂ ಡ್ರೈ ಫ್ರೂಟ್ಸ್ ಸೇರಿದರೆ ಎಷ್ಟಾಗುತ್ತೋ ಅಷ್ಟು ಬೆಲ್ಲ ಹಾಕುತ್ತಾರೆ. ಆದರೆ ಅದರಿಂದ ಉಂಡೆ ಸಿಕ್ಕಾಪಟ್ಟೆ ಸಿಹಿಯಾಗುತ್ತೆ ಮತ್ತು ಕಲ್ಲಾಗುತ್ತೆ. ಮೇಲಿನ ಅಳತೆಯಲ್ಲಿ ಮಾಡಿದರೆ ಬಾಯಿ ಕಟ್ಟುವಷ್ಟು ಸಿಹಿಯೂ ಆಗೋಲ್ಲ, ಕಲ್ಲೂ ಆಗೋಲ್ಲ. ಅರ್ಧ ಕೇಜಿ ಉಂಡೆ ಬೆಲ್ಲ ತಗೊಂಡರೆ ಸುಮಾರು ಆರರಿಂದ ಏಳು ಉಂಡೆ ಬರುತ್ತೆ. ಅದರಲ್ಲಿ ನಲವತ್ತು ಉಂಡೆಯ ಅಳತೆಗೆ ಮೂರು ಉಂಡೆ ಬೆಲ್ಲ ಸಾಕಾಗುತ್ತೆ.
ಬಾದಾಮಿ: ೧/೨ ಕಪ್
ಪಿಸ್ತಾ: ೧/೨ ಕಪ್
ಒಣ ದ್ರಾಕ್ಶಿ: ೧/೨ ಕಪ್
ಕೆಲವು ಕಡೆ ಗೋಡಂಬಿಯನ್ನೂ ೧/೨ ಕಪ್ ಹಾಕುತ್ತಾರೆ. ಆದರೆ ಗೋಡಂಬಿಯಲ್ಲಿ ಸ್ವಲ್ಪ ಕೊಬ್ಬಿನಂಶ ಇರುವುದರಿಂದ ನಮ್ಮಲ್ಲಿ ಹಾಕಿಲ್ಲ.
ವಾಲ್ನಟ್: ೧/೨ ಕಪ್
ಅಳಿವೆ ಬೀಜ: ೧/೨ ಕಪ್ --> (ಕೆಳಗಿನ ಚಿತ್ರ ನೋಡಿ)
ಮೇಲಿನ ಡ್ರೈ ಫ್ರೂಟ್ಸುಗಳನ್ನೆಲ್ಲಾ ನೂರು ಗ್ರಾಂ ತಂದಿಟ್ಟುಕೊಂಡರೆ ಎರಡು ಸಲಕ್ಕೆ ಸರಿಯಾಗುತ್ತೆ. ಸ್ವಲ್ಪ ಸಣ್ಣ ಗಾತ್ರದ ಉಂಡೆ ಮಾಡೋದಾದರೆ ಅಥವಾ ಗೋಡಂಬಿ ಹಾಕಿದರೆ ಅರ್ಧ ಕಪ್ಗಿಂತ ಸ್ವಲ್ಪ ಕಡಿಮೆ ಹಾಕಬಹುದು ಮತ್ತು ಎರಡು ಸಲ ಮಾಡಿ ಸ್ವಸ್ವಲ್ಪ ಉಳಿಯಬಹುದು.
ಗಸಗಸೆ: ೧/೪ ಕಪ್.
ಅಂಟು: ನಾಲ್ಕು ಟೇಬಲ್ ಸ್ಪೂನ್
ಅಜ್ವೈನ್ ಅಥವಾ ಓಮಿನಕಾಳು: ೧/೪ ಟೇಬಲ್ ಸ್ಪೂನ್
ಏಲಕ್ಕಿ: ೪
ಲವಂಗ: ೪
ಮೋಡಿಕಡ್ಡಿ,ಬಾಲಮೆಣಸು,ತಳಾಸ್ ಪತ್ರೆ,ವಾಯುವಡಂಗ,ಹಿಪ್ಲಿ, ಹಿಪ್ಲಿ ಮುಡಿ -ಪುಡಿ ಮಾಡಿದಾಗ ಎಲ್ಲಾ ಸೇರಿ ಒಂದು ಟೇಬಲ್ ಸ್ಪೂನ್ ಆಗುವಷ್ಟು.
(ಈ ಎಲ್ಲಾ ಸಾಮಗ್ರಿಗಳನ್ನು ಏಲಕ್ಕಿಯಿಂದ ಶುರುವಾಗಿ ಮೇಲೆ ಹೇಳಿದ ಕ್ರಮದಲ್ಲೇ ಪ್ರದಕ್ಷಿಣಾಕಾರವಾಗಿ ಕೆಳಗಿನ ಚಿತ್ರದಲ್ಲಿ ಇಡಲಾಗಿದೆ. ಮಧ್ಯದಲ್ಲಿರೋದು ಗಸಗಸೆ ಮತ್ತೆ ಜಾಯಿಕಾಯಿ)
ಜಾಯಿಕಾಯಿ: ಒಂದು ಜಾಯಿಕಾಯಿಯ ಕಾಲು ಹೋಳು
ತುಪ್ಪ: ಸುಮಾರು ೨೦೦ ಗ್ರಾಂ ಅಥವಾ ಹತ್ತು ಟೇಬಲ್ ಸ್ಪೂನ್
ದಪ್ಪ ತಳದ ಬೇಗ ತಳ ಹತ್ತದಂತಹ ಬಾಣಲಿ-೧
ದೊಡ್ಡ ಪಾತ್ರೆ -೧
ಹುರಿಯೋ ಕೈ-೧
ಟೇಬಲ್ ಸ್ಪೂನ್: ಎರಡು.
ಸಣ್ಣ ನೀರಿನ ಬೌಲ್ - ೧
ಮಾಡೋಕೆ ಬೇಕಾಗೋ ಸಮಯ: ಸುಮಾರು ಮೂರೂವರೆ ಘಂಟೆ
ಡ್ರೈ ಫ್ರೂಟ್ಸ್ಗಳನ್ನ ಸಣ್ಣದಾಗಿ ಚಾಕುವಿನಲ್ಲಿ ಅಥವಾ ಅಡಿಕೆ ಕತ್ತರಿಯಲ್ಲಿ ತುಂಡು ಮಾಡಬೇಕು. ಇದೇ ಸ್ವಲ್ಪ ಕಷ್ಟದ ಮತ್ತು ಸಮಯ ಬೇಕಾಗೋ ಕೆಲಸ. ಹೇಗಿದ್ರೂ ಉಂಡೆ ಮಾಡೋದಲ್ವಾ ಮಿಕ್ಸಿಯಲ್ಲಿ ಹಾಕಿದ್ರೆ ಆಗದಾ ಅಂತ ನೀವು ಕೇಳಬಹುದು. ಆದರೆ ಮಿಕ್ಸಿಯಲ್ಲಿ ಹಾಕಿದ್ರೆ ಕೆಲವೊಂದು ಕಾಲ್ಕಾಲು ಚೂರಾಗಿ ಕೆಲಸ ಸುಲಭವಾಗುತ್ತೆ. ಆದರೆ ಕೆಲವೊಂದು ಫುಲ್ ಪುಡಿಯಾಗಿ ಹುರಿಯೋ ಹೊತ್ತಿಗೆ ಹತ್ತೋಕೆ ಶುರುವಾಗುತ್ತೆ. ಹಾಗಾಗಿ ಸ್ವಲ್ಪ ಸಮಯ ತಗೊಂಡು ಚಾಕು ಅಥವಾ ಅಡಿಕೆ ಕತ್ತರಿಯಲ್ಲಿ ತುಂಡು ಮಾಡೋದೇ ಉತ್ತಮ ಅಂತ ನಮ್ಮನಿಸಿಕೆ. ಇದನ್ನು ತುಂಡು ಮಾಡೋಕೆ ಇಬ್ಬರು ಅಥವಾ ಮೂವರು ಸೇರಿಕೊಂಡರೆ ಸುಮಾರು ಮುಕ್ಕಾಲರಿಂದ ಒಂದು ಘಂಟೆಯಲ್ಲಿ ಮುಗಿಸಬಹುದು. ಅದಾದ ಮೇಲೆ ಸಾಮಾನುಗಳನ್ನು ಹುರಿಯೋದು, ಉಂಡೆ ಕಟ್ಟೋದು ಅಂತ ಸುಮಾರು ಎರಡೂವರೆ ಘಂಟೆ ಬೇಕು.
ಮಾಡೋ ವಿಧಾನ:
ದಪ್ಪ ತಳದ ಪಾತ್ರೆಯಲ್ಲಿ ಒಂದು ಸ್ಪೂನ್ ತುಪ್ಪ ಹಾಕಿ ತುಂಡು ಮಾಡಿದ ಬಾದಾಮಿಯನ್ನು ಕೆಲ ನಿಮಿಷಗಳವರೆಗೆ ಸಣ್ಣ-ಮಧ್ಯಮ ಉರಿಯಲ್ಲಿ ಹುರಿಯಿರಿ. ಬಾದಾಮಿಯನ್ನು ತುಂಡು ಮಾಡಿದಾಗ ಮಧ್ಯದ ಬಿಳಿ ಭಾಗ ಕಾಣುತ್ತಿರುತ್ತೆ. ಅದು ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಬೇಕು. ಹುರಿದ ಬಾದಾಮಿಯನ್ನು ಪಕ್ಕದಲ್ಲಿದ್ದ ಸಣ್ಣ ಪಾತ್ರೆಗೆ ಹಾಕಿ. ಮತ್ತೆ ಒಂದು ಚಮಚ ತುಪ್ಪವನ್ನು ದಪ್ಪ ತಳದ ಪಾತ್ರೆಗೆ ಹಾಕಿ ತುಂಡು ಮಾಡಿದ ಪಿಸ್ತಾವನ್ನೂ ಹೀಗೇ ಅದರ ಹಸಿರು ಬಣ್ಣ ಸ್ವಲ್ಪ ಬದಲಾಗೋವರೆಗೆ ಹುರಿಯಿರಿ. ಇದನ್ನೂ ಪಕ್ಕದಲ್ಲಿದ್ದ ದೊಡ್ಡ ಪಾತ್ರೆಗೆ ಹಾಕಿ. ನಂತರ ಮತ್ತೆ ಒಂದು ಚಮಚ ತುಪ್ಪ ಹಾಕಿ ತುಂಡು ಮಾಡಿದ ವಾಲ್ನಟ್ಟನ್ನು ಹುರಿಯಿರಿ. ವಾಲ್ನಟ್ಟು ಹುರಿಯುವಾಗ ಇನ್ನೊಂದಿಷ್ಟು ಸಣ್ಣ ಚೂರುಗಳಾಗುತ್ತೆ. ಹೀಗಾದರೆ ತೊಂದರೆಯೇನಿಲ್ಲ. ಹುರಿದಾದ ನಂತರ ಅದನ್ನೂ ಪಕ್ಕದಲ್ಲಿದ್ದ ದೊಡ್ಡ ಪಾತ್ರೆಗೆ ಹಾಕಿ. ಗೋಡಂಬಿ ಹಾಕೋದಿದ್ದರೆ ಅದನ್ನೂ ಇದೇ ರೀತಿ ಹುರಿಯಿರಿ.ಒಣ ದ್ರಾಕ್ಷಿಯ ಕತೆ:
ನಂತರ ಒಂದು ಚಮಚ ತುಪ್ಪ ಹಾಕಿ ದ್ರಾಕ್ಶಿಯನ್ನು ಹುರಿಯಿರಿ. ದ್ರಾಕ್ಷಿ ಕೆಲ ಸಮಯದ ನಂತರ ತುಪ್ಪ ಕುಡಿದು ದುಂಡಗೆ ಉಬ್ಬತೊಡಗೊತ್ತೆ. ಎಲ್ಲಾ ದ್ರಾಕ್ಷಿಗಳು ಹಾಗೇ ಉಬ್ಬುವಂತೆ ಚೆನ್ನಾಗಿ ತೊಳಸೋ ಕೈಯಲ್ಲಿ ತೊಳಸಿ ಸ್ವಲ್ಪ ಹಾಗೇ ಹುರಿಯಿರಿ. ದ್ರಾಕ್ಷಿ ಸ್ವಲ್ಪ ಕೆಂಬಣ್ಣಕ್ಕೆ ತಿರುಗಿದ ನಂತರ ಅದನ್ನು ಹುರಿದ ಡ್ರೈ ಫ್ರ್ರೂಟ್ಸ್ ಹಾಕಿದ್ದ ಪಕ್ಕದ ದೊಡ್ಡ ಪಾತ್ರೆಗೆ ಹಾಕಿ. ಬಾಣಲಿಯಿಂದ ತೆಗೆದ ತಕ್ಷಣವೇ ದ್ರಾಕ್ಶಿಗಳು ಗಾಳಿ ತೆಗೆದ ಬಲೂನಿನಂತೆ ಮತ್ತೆ ಚಟ್ಟುತ್ತೆ. ಹೀಗಾಗೋದೂ ಸಾಮಾನ್ಯವೇ. ತಲೆಕೆಡಿಸಿಕೊಳ್ಳಬೇಡಿ
ಅಳಿವೆ ಬೀಜ:
ಧಾರವಾಡದ ಕಡೆ ಈ ಅಳಿವೆ ಬೀಜವನ್ನು ಅಂಟಿನುಂಡೆಗೆ ಹಾಕುತ್ತಾರೆ. ಮಲೆನಾಡಿನ ಕಡೆ ಸಿಗೋ ರೇಣುಕೆ ಬೀಜ ಎಂಬೋ ಕಪ್ಪು ಬೀಜವನ್ನು ನೀರಲ್ಲಿ ನೆನಸಿದಾಗ ಉಬ್ಬುವಂತೆಯೇ ಉಬ್ಬುತ್ತೆ ಇದು. ಕೆಂಪಗಿರೋ ಈ ಬೀಜ ಬೆನ್ನಿಗೆ ಬಲ ತರುತ್ತಂತೆ. ತಂಪೂ ಕೂಡ. ಅಂಟಿನುಂಡೆ ತಿಂದರೆ ಹೀಟಾಗುತ್ತೆ ಅನ್ನೋರು ಇದನ್ನು ಅಂಟಿನುಂಡೆಯ ತಯಾರಿಯಲ್ಲಿ ಬಳಸಿದರೆ ಅದು ಸಮಧಾತುವಾಗುತ್ತೆ.ಪಾಕ ಬರಿಸಿದ ಬೆಲ್ಲ, ಡ್ರೈ ಫ್ರೂಟ್ಸ್, ಹಿಪ್ಲಿ ಮುಂತಾದ ಸಾಮಗ್ರಿಗಳಿಂದಾಗೋ ಉಷ್ಣವನ್ನು ಇದು ತಡೆಯುತ್ತೆ. ಈ ಅಳವಿ ಬೀಜವನ್ನೂ ಒಂದು ಚಮಚ ತುಪ್ಪದಲ್ಲಿ ಹುರಿದು ಪಕ್ಕದ ಪಾತ್ರೆಗೆ ಹಾಕಿ.
ಕರ್ಜೂರ:
ಕರ್ಜೂರ ಸ್ವಲ್ಪ ಜಾಸ್ತಿ ಇರೋದರಿಂದ ಇದನ್ನು ಹುರಿಯೋಕೆ ಎರಡು ಟೇಬಲ್ ಸ್ಪೂನ್ ತುಪ್ಪ ಬೇಕು. ಇದು ಒಂತರ ಪುಡಿ ಪುಡಿಯ ರೀತಿ ಉದುರೋದರಿಂದ ಎಲ್ಲಾ ಡ್ರೈ ಫ್ರೂಟ್ಸುಗಳನ್ನು ಹುರಿದಾದ ಮೇಲೆ ಇದನ್ನು ಹುರಿದು ಪಕ್ಕದ ಪಾತ್ರೆಗೆ ಹಾಕಿ.
ಅಂಟು:
ಒಂದು ಚಮಚ ತುಪ್ಪ ಹಾಕಿ ಅದಕ್ಕೆ ಎರಡು ಸ್ಪೂನ್ ಅಂಟನ್ನು ಹಾಕಿ ಹುರಿಯಿರಿ. ಕಾಳು ಕಾಳಾಗಿರೋ ಕೆಂಪು/ಕಂದು ಬಣ್ಣದಲ್ಲಿರೋ ಈ ಅಂಟು ನಂತರ ಸಂಡಿಗೆಯಂತೆ ಬಿಳಿಯಾಗಿ ಅರಳುತ್ತೆ. ಅರಳಿದ ಈ ಅಂಟನ್ನು ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿ ಮತ್ತೊಂದು ಸ್ಪೂನ್ ತುಪ್ಪ ಹಾಕಿ ಉಳಿದೆರಡು ಸ್ಪೂನ್ ಅಂಟನ್ನು ಹಾಕಿ ಅದನ್ನೂ ಹೀಗೇ ಹುರಿಯಿರಿ. ಎಲ್ಲಾ ಅಂಟನ್ನು ಒಟ್ಟಿಗೆ ಹಾಕಿದರೆ ಅಂಟು ಚೆನ್ನಾಗಿ ಅರಳೋದಿಲ್ಲ.
ಓಮಿನಕಾಳು:
ಉತ್ತರ ಭಾರತದ ಕಡೆ ಈ ಓಮಿನಕಾಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಂಟಿನುಂಡೆಗೆ ಬಳಸುತ್ತಾರೆ. ಅಲ್ಲಿ ಹುರಿದ ಗೋಧಿ ಹಿಟ್ಟು ಮತ್ತು ಚಿರೋಟಿ ರವೆಯನ್ನೂ ಬಳಸುತ್ತಾರೆ. ಬಾಣಂತಿಯ ಹೊಟ್ಟೆಯ ಶುದ್ಧೀಕರಣಕ್ಕೆ ಮತ್ತು ನಂತರದ ಋತುಚಕ್ರಗಳಲ್ಲಿ ಯಾವ ತೊಂದರೆಯೂ ಆಗದಿದರಲಿ ಎಂದು ಇದನ್ನು ಕೊಡುತ್ತಾರಂತೆ. ಆದರೆ ಇದನ್ನು ಹೆಚ್ಚು ತಿಂದರೆ ಮಲಬದ್ಧತೆಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿರೋದರಿಂದ ಇದನ್ನು ಕಾಲು ಟೇಬಲ್ ಸ್ಪೂನಿನಷ್ಟೇ ಬಳಸಲಾಗಿದೆ.
ಉಳಿದ ಪದಾರ್ಧಗಳು:
ತೆಗೆದುಕೊಂಡಿದ್ದ ಹಿಪ್ಲಿ , ಜಾಯಿಕಾಯಿಯ ಚೂರು, ಮೋದಿಕಡ್ಡಿ, ಹಿಪ್ಲಿ ಮುಡಿ, ವಾಯುವಡಂಗ, ತಳಾಸ್ ಪತ್ರೆಗಳನ್ನು ಒಂದು ಚಮಚ ತುಪ್ಪದಲ್ಲಿ ಹೀಗೇ ಕೆಲ ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಅದನ್ನು ತೆಗೆದು ಅರಳಿದ ಅಂಟು ಇಟ್ಟಿದ್ದ ಮಿಕ್ಸಿ ಜಾರಿಗೆ ಹಾಕಿ. ಜಾಯಿಕಾಯಿಯ ಬಳಕೆಯಿಂದ ತಾಯಿಗೆ ಮತ್ತು ತಾಯಿಯ ಹಾಲು ಕುಡಿಯೋ ಪಾಪುವಿಗೆ ಚೆನ್ನಾಗಿ ನಿದ್ದೆ ಬರುತ್ತೆ ಎಂದು ಅದನ್ನು ಇಲ್ಲಿ ಬಳಸಲಾಗಿದೆ. ಆದರೆ ಇದರ ಹೆಚ್ಚಿನ ಬಳಕೆಯಿಂದ ಅಮಲೇರುವುದರಿಂದ ಸ್ವಲ್ಪವೇ ಹಾಕಬೇಕು.
ಗಸಗಸೆ:
ಕೊನೆಯಲ್ಲಿ ಗಸಗಸೆಯನ್ನು ತುಪ್ಪ ಹಾಕದೇ ಕೆಲ ನಿಮಿಷ ಹುರಿಯಿರಿ. ಇದರ ಹಸುಕಲು ಅಥವಾ ಹಸಿ ವಾಸನೆ ಹೋಗೋವರೆಗೆ ಹುರಿದರೆ ಸಾಕು. ಗಸಗಸೆಯನ್ನು ಪಕ್ಕದಲ್ಲಿದ್ದ ಪಾತ್ರೆಗೂ ಹಾಕಬಹುದು ಅಥವಾ ಮಿಕ್ಸಿ ಮಾಡಲು ತೆಗೆದಿಟ್ಟಿದ್ದ ಅಂಟು ಮತ್ತುಳಿದ ಪದಾರ್ಥಗಳ ಜಾರಿಗೂ ಹಾಕಬಹುದು. ಮಿಕ್ಸಿಯಲ್ಲಿ ಗಸಗಸೆ ಮತ್ತೆ ತುಂಡಾಗದಿದ್ದರೂ ಈ ಮಿಶ್ರಣದ ಜೊತೆಗೆ ಚೆನ್ನಾಗಿ ಬೆರೆಯುತ್ತೆ.
ಮಿಕ್ಸಿ:
ಮಿಕ್ಸಿಯಲ್ಲಿ ಹಾಕಿದ ಮಿಶ್ರಣ ಚೆನ್ನಾಗಿ ನುಣ್ಣಗಾಗುವಂತೆ ಮಿಕ್ಸಿ ಮಾಡಬೇಕು. ಹುರಿದ ಅಂಟನ್ನು ಕೈಯಲ್ಲಿ ನುರಿದರೇ ಪುಡಿಯಾಗುತ್ತೆ. ಉಳಿದ ಪದಾರ್ಥಗಳನ್ನೂ ಕುಟ್ಟಾಣಿಯಲ್ಲಿ ಜಜ್ಜಿ ಪುಡಿ ಮಾಡಬಹುದು. ಆದರೆ ಬೇಗ ನುಣುಪಾಗಿ ಪುಡಿ ಆಗಬೇಕೆಂದರೆ ಮಿಕ್ಸಿ ಮಾಡಬಹುದು. ಈ ಪುಡಿಯನ್ನು ಉಳಿದ ಹುರಿದ ಸಾಮಗ್ರಿಗಳನ್ನು ಹಾಕಿದ್ದ ದೊಡ್ಡ ಪಾತ್ರೆಗೆ ಹಾಕಿ. ಮಿಕ್ಸಿಯಲ್ಲಿ ಮಿಕ್ಕಿದ ಪುಡಿಯನ್ನು ಒಂದು ಚಮಚದಲ್ಲಿ ಬಿಡಿಸಿ ಹಾಕಬಹುದು. ಮಿಕ್ಸಿಯಲ್ಲಿ ಉಳಿದ ಪುಡಿಯನ್ನು ತೊಳಸಿ ಉಂಡೆಯ ಸಾಮಗ್ರಿಗೆ ಹಾಕುತ್ತೀನಿ ಎಂದು ನೀರು ಮಾತ್ರ ಹಾಕಲೇಬೇಡಿ.
ಬೆಲ್ಲದ ಪಾಕ:
ಅಂಟಿನುಂಡೆ ತಯಾರಿಯ ಕೊನೆಯ ಮತ್ತು ಮುಖ್ಯ ಭಾಗ ಬೆಲ್ಲದ ಪಾಕದ ತಯಾರಿ. ಬೆಲ್ಲದ ಉಂಡೆಗಳನ್ನು ಸ್ವಲ್ಪ ಜಜ್ಜಿ ದಪ್ಪ ತಳದ ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ. ಒಂದೆರಡು ಚಮಚ ತುಪ್ಪವನ್ನೂ ಹಾಕಿ ಕಾಯಿಸಿ. ಬೆಲ್ಲದುಂಡೆ ಆ ಶಾಖಕ್ಕೆ ಕರಗೋಕೆ ಶುರುವಾಗುತ್ತೆ. ಜಜ್ಜದಿದ್ದರೆ ಕರಗೋಕೆ ಸ್ವಲ್ಪ ಸಮಯ ಹೆಚ್ಚು ಬೇಕಾಗುತ್ತೆ ಮತ್ತು ಆಗಾಗ ತೊಳಸುತ್ತಾ ಇರಬೇಕು. ಬೇಕಾಗುತ್ತೆ ಅಂತ ದೊಡ್ಡ ಉರಿಯಲ್ಲಿ ಇಡೋದಕ್ಕಿಂದ ಸಣ್ಣ /ಮಧ್ಯಮ ಉರಿಯಲ್ಲಿ ಪಾಕ ಮಾಡೋದೇ ಉತ್ತಮ ಎನ್ನೋದು ನಮ್ಮ ಅನಿಸಿಕೆ. ಕರಗಿದ ಬೆಲ್ಲವನ್ನು ಆಗಾಗ ತೊಳಸುತ್ತಿರಬೇಕು. ಇದು ಸ್ವಲ್ಪ ಹೊತ್ತಲ್ಲೇ ನೊರೆ ಬರೋಕೆ ಶುರುವಾಗುತ್ತೆ. ಪಾತ್ರೆಯಿಂದ ಹೊರಗೆ ಉಕ್ಕುತ್ತೆ ಅನಿಸಿದರೆ ಉರಿಯನ್ನು ಸ್ವಲ್ಪ ಸಣ್ಣ ಮಾಡಿ. ಸುಮಾರು ಅರ್ಧ ಘಂಟೆಗೆ ಬೆಲ್ಲದ ಪಾಕ ರೆಡಿಯಾಗುತ್ತೆ. ಪಾಕ ನೀರಾದ್ರೆ ಉಂಡೆಗಳು ಗಟ್ಟಿಯಾಗೋಲ್ಲ. ಏರುಪಾಕವಾದ್ರೆ( ಪಾಕ ಹೆಚ್ಚಾದ್ರೆ) ಉಂಡೆಗಳು ಕಲ್ಲಾಗುತ್ತೆ. ಹಾಗಾಗಿ ಪಾಕ ಸರಿಯಾಯ್ತಾ ಇಲ್ಲವೋ ಅಂತ ಆಗಾಗ ನೋಡುತ್ತಿರಬೇಕು.
ಪಾಕ ಸರಿಯಾಯ್ತಾ ಅಂತ ನೋಡೋದು ಹೇಗೆ? :
ಸ್ಟೋವ್ ಪಕ್ಕದಲ್ಲೇ ಒಂದು ಸಣ್ಣ ಬೌಲಿನಲ್ಲಿ ನೀರನ್ನು ಇಟ್ಟುಕೊಳ್ಳಿ. ಪಾಕವನ್ನು ಸೌಟಿನಲ್ಲಿ ತೆಗೆದು ಒಂದು ಹನಿಯನ್ನು ಈ ನೀರಿಗೆ ಹಾಕಿ. ನೀರಲ್ಲಿ ಆ ಪಾಕ ಕರಗಿಹೋದರೆ ಅದು ಇನ್ನೂ ಆಗಿಲ್ಲ ಅಂತ. ನಿಧಾನವಾಗಿ ಅದು ನೀರಲ್ಲಿ ಕರಗೋದು ನಿಲ್ಲಿಸುತ್ತೆ. ಆಗ ಆ ನೀರಿನಲ್ಲಿನ ಹನಿಯನ್ನು ಕೈಯಲ್ಲಿ ತೆಗೆದುಕೊಂಡು ಎರಡೂ ಬೆರಳುಗಳಲ್ಲಿ ಹಿಡಿದು ಸ್ವಲ್ಪ ಎಳೆಯಿರಿ. ಅದು ಬೆರಳುಗಳ ನಡುವೆ ಎಳೆ ಎಳೆಯಾಗಿ ಬರ್ತಿದೆ ಅಂದರೆ ಪಾಕ ಸರಿಯಾಗಿದೆ ಎಂದರ್ಥ. ತಕ್ಷಣ ಸ್ಟೌ ಆಫ್ ಮಾಡಿ ಆ ಪಾಕವನ್ನು ಪಕ್ಕದಲ್ಲಿದ್ದ ಪಾತ್ರೆಗೆ ಸುರಿಯಿರಿ. ನೀವು ಅಡಿಗೆ ಪ್ರವೀಣರಾಗಿದ್ದರೆ ತೊಳಸೋ ಸೌಟಿನಲ್ಲಿ ಪಾಕವನ್ನು ತೊಳೆಸೋ ಪಾತ್ರೆಗೆ ಹಾಕುವಾಗಲೇ ಅದು ಎಳೆ ಎಳೆಯಾಗಿರೋದನ್ನು ನೋಡಿ ಪಾಕ ಆಗಿದೆಯಾ ಇಲ್ಲವಾ ಎಂದು ಗೊತ್ತಾಗುತ್ತೆ. ಹೊಸಬರಿಗೆ ಈ ನೀರಿನ ಬೌಲಿನ ವಿಧಾನ ಸಹಕಾರಿ.
ಕೊಟ್ಟಕೊನೆಗೆ:
ದೊಡ್ಡ ಪಾತ್ರೆಗೆ ಬೆಲ್ಲದ ಪಾಕವನ್ನು ಹಾಕಿದ ನಂತರ ಅದನ್ನು ಬೇಗ ಬೇಗ ತೊಳೆಸೋ ಹಿಡಿಯಲ್ಲಿ ಚೆನ್ನಾಗಿ ತೊಳೆಸಬೇಕು. ಕಾದ ಪಾಕ ಬೇಗ ಗಟ್ಟಿಯಾಗೋದರಿಂದ ಸ್ವಲ್ಪ ತೊಳೆಸಿದರೆ ಸಾಕು. ಆ ಮಿಶ್ರಣ ಕೆಲ ಕ್ಷಣಗಳಲ್ಲೇ ಸ್ವಲ್ಪ ಗಟ್ಟಿಯಾಗತ್ತೆ. ತುಂಬಾ ತೊಳೆಸಿದರೆ ಉಂಡೆ ಉದುರುದುರಾಗಿ ಉಂಡೆ ಕಟ್ಟೋಕೆ ಬರೋಲ್ಲ. ಹಾಗಾಗಿ ಸ್ವಲ್ಪ ತೊಳೆಸಿದರೆ ಸಾಕು. ಮಿಶ್ರಣ ಬಿಸಿಯಾಗಿದ್ದಾಗಲೇ ಉಂಡೆ ಕಟ್ಟೋಕೆ ಪ್ರಾರಂಭಿಸಬೇಕು. ತಣಿದ ಮೇಲೆ ಉಂಡೆ ಕಟ್ಟೋದು ಕನಸಿನ ಮಾತು !
ಒಂದೆರಡು ಸ್ಪೂನ್ ತುಪ್ಪವನ್ನು ಹಾಕಿಕೊಂಡು ಅದನ್ನು ಮುಟ್ಟುತ್ತಾ ಉಂಡೆ ಕಟ್ಟಿದರೆ ಅಷ್ಟು ಕೈ ಸುಡೋಲ್ಲ. ಒಂದೆರಡು ಉಂಡೆ ಕಟ್ಟೋ ತನಕ ಕೈ ಸುಟ್ಟಂತನಿಸುತ್ತೆ. ನಂತರ ಏನೂ ಅನಿಸೋಲ್ಲ. ಎರಡು ಜನರಿದ್ದರೆ ಸ್ವಲ್ಪ ಬೇಗ ಉಂಡೆ ಕಟ್ಟಬಹುದು. ಮಧ್ಯ ಮಧ್ಯ ತೊಳೆಸೋ ಹುಡಿಯಿಂದ ಪಾತ್ರೆಯ ಕೆಳಗೆ ಹಿಡಿದಿರೋ ಮಿಶ್ರಣವನ್ನು ತೆಗೆಯುತ್ತಾ ಉಂಡೆ ಕಟ್ಟಬೇಕು. ಇದರಿಂದ ಪಾತ್ರೆಯ ಕೆಳಗೆ ಉಂಡೆ ಕಟ್ಟೋಕೇ ಬರದಂತೆ ಮಿಶ್ರಣ ಉಳಿಯೋದನ್ನು ತಪ್ಪಿಸಬಹುದು. ಮೊದಲ ಅಳಿವೆ ಬೀಜ, ಹಿಪ್ಲಿ ಮುಡಿ, ಜಾಯಿಕಾಯಿ ಹಾಕದೇ ಸ್ವಲ್ಪವೇ ಗಸಗಸೆ ಹಾಕಿ ಮಾಡಿದಾಗ ನಲವತ್ತೆರಡು ಉಂಡೆಗಳಾಗಿತ್ತು. ಎರಡನೆಯ ಸಲ ಮಾಡಿದಾಗ ಸ್ವಲ್ಪ ದೊಡ್ಡ ಗಾತ್ರದ ಉಂಡೆ ಕಟ್ಟಿದ್ದರಿಂದ ಇವಿಷ್ಟೂ ಹಾಕಿದರೂ ಮೂವತ್ತೇಳು ಉಂಡೆಗಳಾಯ್ತು. ಎರಡೂ ಸಲದ್ದೂ ರುಚಿಕರವಾಗಿದ್ದರೂ ಹಾಕಿದ ವಸ್ತುಗಳು ಕೊಂಚ ಬೇರೆಯಾಗಿದ್ದರಿಂದ ಕೊಂಚ ಬೇರೆಯ ಬಣ್ಣ ಪಡೆದವು ಅಷ್ಟೆ. ಉಂಡೆಯಾದ ಮೇಲೆ ದೇವರ ನೈವೀದ್ಯಕ್ಕಿಡೋರು ಇಟ್ಟು ಮುಂದಿನ ನೈವೀದ್ಯಕ್ಕೆ ರೆಡಿಯಾಗಬಹುದು
ಅಡಿಗೆ ಮನೆ ಶುಚಿತ್ವ:
ಅಂಟಿನುಂಡೆಯ ತಯಾರಿಯ ಹೊತ್ತಿಗೆ ಸ್ಟೌವಿನ ಮೇಲಷ್ಟೇ ಅಲ್ಲದೇ ಅದರ ಪಕ್ಕ, ಕೆಳಗೂ ಒಂದಿಷ್ಟು ಸಿಡಿದಿರುತ್ತೆ. ಹಾಕಾಗಿ ಅದನ್ನು ಸೋಪಾಯಿಲ್ ಅಥವಾ ಹ್ಯಾಂಡ್ ವಾಷ್ ಹಾಕಿ ಒರಸಿ ನಂತರ ನೀರಲ್ಲಿ ತೊಳೆಯಬಹುದು/ಒರೆಸಬಹುದು. ಸಾಮಗ್ರಿಗಳನ್ನು ತುಂಡರಿಸಿ ಇಟ್ಟುಕೊಂಡಿದ್ದ ಪಾತ್ರೆಗಳನ್ನು ತೊಳಿಯೋದು ಸುಲಭವಾದರೂ ಅಂಡಿನುಂಡೆ ಮಾಡಿದ ಪಾತ್ರೆ ಮತ್ತು ಹುರಿದ ಪಾತ್ರೆಗಳು ಜಿಡ್ಡು ಜಿಡ್ಡಾಗಿ ತೊಳೆಯೋಕೆ ಸ್ವಲ್ಪ ಕಷ್ಟವಾಗಬಹುದು. ಇವನ್ನು ಸ್ವಲ್ಪ ಹೊತ್ತು ನೆನೆಸಿಟ್ಟು ಸುಧಾರಿಸಿಕೊಳ್ಳಿ. ಅಂಟಿನುಂಡೆ ಮಾಡೋಕೇ ಸುಮಾರು ಮೂರೂವರೆ ಘಂಟೆ ಆಗೋದರಿಂದ ಸ್ವಲ್ಪ ಸುಧಾರಿಸಿಕೊಂಡು, ಮಧ್ಯಾಹ್ನದ/ರಾತ್ರಿಯ ಊಟದ ಸಮಯವಾಗಿದ್ದರೆ ಅದನ್ನು ಮುಗಿಸಿ ಈ ಪಾತ್ರೆ ತೊಳೆಯೋಕೆ ಮುಂದಾಗಿ.
ಮೇಲಿನ ವಿಧಾನದಲ್ಲಿ ಅಂಟಿನುಂಡೆ ತಯಾರಿಸೋಕೆ ನೀವು ಪ್ರಯತ್ನಿಸಿದ್ರೆ ಅಥವಾ ಈ ಲೇಖನ ನಿಮಗೆ ಉಪಯೋಗವಾದ್ರೆ ನಮಗೆ ಅದೇ ಖುಷಿ. ಮುಂದಿನ ಪ್ರಯತ್ನದೊಂದಿಗೆ ಮತ್ತೆ ಭೇಟಿಯಾಗೋಣ